top of page

ಪುರೂರವ ಮತ್ತು ಊರ್ವಶಿ

ಜಗತ್ಪಾಲಕನಾದ ಮಹಾವಿಷ್ಣುವಿನ ನಾಭೀಕಮಲದಿಂದ ಚತುರ್ಮುಖ ಬ್ರಹ್ಮ ಆವಿರ್ಭವಿಸುತ್ತಾನೆ. ಬ್ರಹ್ಮನ ಮಗ ಅತ್ರಿ. ತೇಜೋಮಯನಾದ ಅತ್ರಿ ಮಹರ್ಷಿಯ ಕಣ್ಣುಗಳಿಂದ ಚಂದ್ರ ಜನಿಸುತ್ತಾನೆ. ಆ ಚಂದ್ರನ ಹೆಸರಿನಿಂದಲೇ ಗುರುತಿಸಲ್ಪಟ್ಟ "ಚಂದ್ರವಂಶ"ದ ರಾಜ ಪುರೂರವ ನ ಬಗ್ಗೆ ತಿಳಿದುಕೊಳ್ಳೋಣ. ಚಂದ್ರ ಹಾಗೂ ತಾರೆಯರ ಸಂಯೋಗದಿಂದ ಜನಿಸಿದವನು ಬುಧ. ಬುಧ ಹಾಗೂ ಇಳೆಯ ಗರ್ಭದಿಂದ ಸಂಜನಿಸಿದವನು ಅತ್ಯಂತ ಸುಂದರನೂ ಪರಾಕ್ರಾಮಿಯೂ ಎನಿಸಲ್ಪಟ್ಟ ಪುರೂರವ.

ಒಂದು ದಿನ ದೇವೇಂದ್ರನ ಸಭೆಯಲ್ಲಿ ದೇವ ಋಷಿಗಳಾದ ನಾರದರು ಪುರೂರವನ ರೂಪ, ಗುಣ,ಉದಾರತೆ, ಶೀಲ ಸ್ವಭಾವ ಮತ್ತು ಪರಾಕ್ರಮಗಳ ಕುರಿತು ಗುಣಗಾನ ಮಾಡುತ್ತಾರೆ. ಅದನ್ನು ಕೇಳಿಸಿಕೊಂಡ ಸುರಾಂಗನೆ ಊರ್ವಶಿಯ ಮನದಲ್ಲಿ ಪುರೂರವನ ಕುರಿತಾಗಿ ಮೋಹ ಉಂಟಾಗುತ್ತದೆ. ಮೋಹ ಪರವಶಳಾದ ಊರ್ವಶಿಯು ಅವನನ್ನು ಪಡೆಯಬೇಕು ಎಂಬ ಸಂಕಲ್ಪದಿಂದ ಭೂಲೋಕಕ್ಕೆ ಬಂದು ಪುರೂರವನನ್ನು ಕಾಣುತ್ತಾಳೆ. ಪುರೂರವನು ಕೂಡ ಊರ್ವಶಿಯಲ್ಲಿ ಅನುರಕ್ತನಾಗಿ, ಅವಳನ್ನು ಒಲಿಸಿಕೊಳ್ಳಲು ವಿಧ-ವಿಧವಾದ ಪ್ರೀತಿಯ ಮಾತುಗಳಿಂದ ಹೊಗಳಿ ಅವಳನ್ನು ಮೆಚ್ಚಿಸುತ್ತಾನೆ. ಆ ಸಮಯದಲ್ಲಿ ಊರ್ವಶಿಯು ಒಂದು ನಿಬಂಧನೆಯನ್ನು ವಿಧಿಸುತ್ತಾಳೆ! "ನಾನು ನಿನ್ನಲ್ಲಿ ಎರಡು ಮೇಕೆಗಳನ್ನು ಅಡವಾಗಿ ಇಡುತ್ತೇನೆ ನೀನು ಅವುಗಳನ್ನು ಸದಾ ರಕ್ಷಿಸಬೇಕು, ಯಾವುದೇ ಕಾರಣಕ್ಕೂ ಮೇಕೆಗಳಿಗೆ ಯಾವ ಹಾನಿಯೂ ಆಗ ಕೂಡದು. ಮತ್ತು ತಮ್ಮಿಬ್ಬರ ಏಕಾಂತದ ಸಮಯವನ್ನು ಹೊರತುಪಡಿಸಿ, ನಿನ್ನನ್ನು ಯಾವುದೇ ಕಾರಣಕ್ಕೂ ವಿವಸ್ತ್ರನಾಗಿ ನೋಡುವ ಅವಕಾಶ ಬರಕೂಡದು! ಈ ನಿಬಂಧನೆಗೆ ನೀನು ಒಪ್ಪಿದರೆ ನಾನು ನಿನ್ನ ಜೊತೆಯಲ್ಲಿ ಇರುವುದಕ್ಕೆ ಸಿದ್ಧ" ಎಂದು ಹೇಳುತ್ತಾಳೆ. ಊರ್ವಶಿಯ ರೂಪ ಲಾವಣ್ಯಕ್ಕೆ ಮನಸೋತ ಪುರೂರವನು ಊರ್ವಶಿಯ ನಿಬಂಧನೆಗೆ ಒಪ್ಪಿ, ಅವಳನ್ನು ಸ್ವೀಕರಿಸುತ್ತಾನೆ. ತಾನಾಗಿ ಬಂದಿರುವ ದೇವಾಂಗನೆಯನ್ನು ಪಡೆದುದ್ದಕ್ಕಾಗಿ ಅತ್ಯಂತ ಸಂತೋಷ ಮತ್ತು ಹೆಮ್ಮೆಪಡುತ್ತಾನೆ. ಅವಳ ಜೊತೆಗೂಡಿ ದೇವತೆಗಳ ವಿಹಾರ ಸ್ಥಳಗಳಾದ ಚೈತ್ರರಥ ನಂದನವನ ಮೊದಲಾದ ಉಪವನಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ವಿಹರಿಸುತ್ತಾ ಹಲವು ವರ್ಷಗಳು ಕಳೆಯುತ್ತಾನೆ.

ಅತ್ತ ಸ್ವರ್ಗದಲ್ಲಿ ಊರ್ವಶಿಯು ಕಾಣದೆ ಹೋದಾಗ, 'ಅವಳು ಎಲ್ಲೇ ಇದ್ದರೂ ಈ ಕೂಡಲೇ ಕರೆ ತನ್ನಿರಿ ಅವಳಿಲ್ಲದೆ ಸ್ವರ್ಗವು ಶೋಭಿಸುವುದಿಲ್ಲ' ಎಂದು ದೇವೇಂದ್ರನು ಆಜ್ಞಾಪಿಸುತ್ತಾನೆ. ಆ ಆಜ್ಞೆಗೆ ಅನುಸಾರವಾಗಿ ಗಂಧರ್ವರು ಮಧ್ಯರಾತ್ರಿಯ ಸಮಯದಲ್ಲಿ ಬಂದು ಊರ್ವಶಿಯು ಪುರೂರವನಲ್ಲಿ ಅಡವಾಗಿ ಇಟ್ಟಿದ್ದ ಮೇಕೆಗಳನ್ನು ಕದ್ದುಕೊಂಡು ಹೋಗುತ್ತಾರೆ. ಭೀತಿಗೊಂಡು ಕೂಗಿದ ಮೇಕೆಗಳ ಧ್ವನಿಯಿಂದ ಎಚ್ಚರಗೊಂಡ ಊರ್ವಶಿಯು, ಗಂಧರ್ವರು ಅವನ್ನು ಕದ್ದುಕೊಂಡು ಹೋಗುವುದನ್ನು ನೋಡುತ್ತಾಳೆ. ಮೇಕೆಯನ್ನು ರಕ್ಷಿಸಲಾಗದ ಹೇಡಿಯನ್ನು ತಾನು ಪತಿಯಾಗಿ ಹೊಂದಿದೆನಲ್ಲ ಎಂದು ಮರುಗುತ್ತಾಳೆ. ತನ್ನ ಚುಚ್ಚು ಮಾತುಗಳಿಂದ ಪುರೂರವನನ್ನು ಘಾಸಿಗೊಳಿಸುತ್ತಾಳೆ. ಇದರಿಂದ ಕೋಪಗೊಂಡ ಪುರೂರವನು ತಾನು ವಿವಸ್ತ್ರನಾಗಿರುವುದನ್ನು ಲಕ್ಷಿಸದೆ ಕೈಯಲ್ಲಿ ಆಯುಧಗಳನ್ನು ಎತ್ತಿಕೊಂಡು ಮೇಕೆಯನ್ನು ಕದ್ದೊಯ್ಯುತ್ತಿರುವ ಗಂಧರ್ವರತ್ತ ಓಡುತ್ತಾನೆ. ರಾಜನನ್ನು ನೋಡಿ ಗಂಧರ್ವರು ಮೇಕೆಗಳನ್ನು ಅಲ್ಲಿಯೇ ಬಿಟ್ಟು ಪಲಾಯನಗೈಯ್ಯುತ್ತಾರೆ. ರಾಜನು ಮೇಕೆಗಳೊಂದಿಗೆ ಊರ್ವಶಿಯತ್ತ ಬರುತ್ತಾನೆ. ಆ ಸಮಯದಲ್ಲಿ ಊರ್ವಶಿಯು ವಿವಸ್ತ್ರನಾಗಿರುವ ಪುರೂರವನನ್ನು ನೋಡಿಬಿಡುತ್ತಾಳೆ. ತನ್ನ ನಿಬಂಧನೆ ಮುರಿದುದ್ದಕ್ಕಾಗಿ ಆ ಕ್ಷಣವೇ ಪುರೂರವನನ್ನು ಬಿಟ್ಟು ತೆರಳುತ್ತಾಳೆ.

ಊರ್ವಶಿಯಲ್ಲಿ ತನ್ನ ಮನಸ್ಸನ್ನು ನೆಟ್ಟಿದ್ದ ಪುರೂರವನು ಊರ್ವಶಿಯ ಅಗಲುವಿಕೆಯಿಂದ ಅತ್ಯಂತ ದುಃಖ ಹೊಂದುತ್ತಾನೆ. ಅವಳಿಗಾಗಿ ಪರಿತಪಿಸುತ್ತಾ ಶೋಕ ವಿಹ್ವಲನಾಗಿ ಹುಚ್ಚನಂತೆ ಅಲೆದಾಡತೊಡಗುತ್ತಾನೆ. ಹಾಗೆ ಅಲೆಯುತ್ತಿರುವಾಗ ಒಂದು ದಿನ ಕುರುಕ್ಷೇತ್ರದ ಸರಸ್ವತಿ ನದಿ ತೀರದಲ್ಲಿ ಸಖಿಯರೊಂದಿಗೆ ವಿಹರಿಸುತ್ತಿದ್ದ ಊರ್ವಶಿಯನ್ನು ನೋಡುತ್ತಾನೆ. ಊರ್ವಶಿಯ ಕುರಿತು ಪ್ರೀತಿಯ ಮಾತುಗಳನ್ನಾಡಿ ಪುನಃ ತನ್ನ ಜೊತೆಗೆ ಬರುವಂತೆ ಯಾಚಿಸುತ್ತಾನೆ. ಅವಳ ಸಾಂಗತ್ಯಕ್ಕಾಗಿ ಅವಳನ್ನು ಕಾಡಿ ಬೇಡುತ್ತಾನೆ. ಅವನ ಬೇಡಿಕೆಗೆ ಮಣಿದ ಊರ್ವಶಿ, "ಮಹಾರಾಜ ನೀನು ವರ್ಷಕ್ಕೊಮ್ಮೆ ಒಂದು ರಾತ್ರಿ ಮಾತ್ರ ನನ್ನೊಡನೆ ಇರಬಹುದು" ಎಂದು ವರುಷಕ್ಕೊಮ್ಮೆ ಅವನೊಡನೆ ಇರಲು ಒಪ್ಪುತ್ತಾಳೆ. ಇದರ ಫಲವಾಗಿ ಊರ್ವಶಿಯು ಗರ್ಭವತಿಯಾಗುತ್ತಾಳೆ. ಅದನ್ನು ತಿಳಿದು ಪುರೂರವನು ಸಂತುಷ್ಟನಾಗಿ ತನ್ನ ರಾಜಧಾನಿಗೆ ಮರಳುತ್ತಾನೆ. ಒಂದು ವರ್ಷ ಕಳೆದ ಮೇಲೆ ಪುನಃ ಅವಳು ಹೇಳಿದ ಸ್ಥಳಕ್ಕೆ ಹೋಗುತ್ತಾನೆ. ಊರ್ವಶಿಯು ಒಬ್ಬ ಪುತ್ರನೊಂದಿಗೆ ರಾಜನನ್ನು ಕಾಣಲು ಬರುತ್ತಾಳೆ. ಒಂದು ರಾತ್ರಿ ಪುರೂರವ ಹಾಗೂ ಊರ್ವಶಿ ಜೊತೆಯಾಗಿದ್ದು ಮರುದಿನ ಬೆಳಗ್ಗೆ ಅಗಲಬೇಕಾದ ಸಮಯ ಬಂದಾಗ ಮಹಾರಾಜನು ದುಃಖದಿಂದ ಯಾತನೆ ಹೊಂದುತ್ತಾನೆ. ಆಗ ಊರ್ವಶಿಯು ಮಹಾರಾಜ ನೀನು ಗಂಧರ್ವರನ್ನು ಕುರಿತು ಪ್ರಾರ್ಥಿಸು ಅವರು ಒಪ್ಪಿದರೆ, ನನ್ನನ್ನು ನಿನ್ನೊಂದಿಗೆ ಕಳುಹಿಸಿಕೊಡಬಹುದು ಎಂದು ಹೇಳುತ್ತಾಳೆ. ಅವಳ ಮಾತಿನಂತೆ ಪುರೂರವನು ಗಂಧರ್ವರನ್ನು ಕುರಿತು ಪ್ರಾರ್ಥಿಸುತ್ತಾನೆ. ಅವನ ಪ್ರಾರ್ಥನೆಗೆ ಸಂತೃಪ್ತರಾದ ಗಂಧರ್ವರು ಅವನಿಗೆ ಒಂದು ಅಗ್ನಿಸ್ಥಾಲಿಯನ್ನು ಅನುಗ್ರಹಿಸುತ್ತಾರೆ. ಊರ್ವಶಿಯ ಮೋಹದಿಂದ ರಾಜ ಪುರೂರವನು ಆ ಅಗ್ನಿಸ್ಥಾಲಿಯನ್ನೇ ಊರ್ವಶಿಯೆಂದು ಭಾವಿಸಿ, ಅದನ್ನೇ ತಬ್ಬಿಕೊಂಡು ವನದಲ್ಲಿ ಅಲೆಯುತ್ತಿರುತ್ತಾನೆ. ಮುಂದೊಮ್ಮೆ ಅದು ಅಗ್ನಿಸ್ಥಾಲಿ ಎಂಬುದು ಅರಿವಿಗೆ ಬಂದಾಗ ಅದನ್ನು ಕಾಡಿನಲ್ಲಿ ಬಿಟ್ಟು ತನ್ನ ಅರಮನೆಗೆ ಮರಳುತ್ತಾನೆ. ಪ್ರತಿಕ್ಷಣವೂ ಊರ್ವಶಿಯನ್ನೇ ಧ್ಯಾನಿಸುತ್ತಾ ಕಾಲಕಳೆಯ ತೊಡಗುತ್ತಾನೆ.

ಹೀಗಿರುವಾಗಲೇ ಕೃತಯುಗವು ಕಳೆದು ತ್ರೇತಾಯುಗವು ಪ್ರಾರಂಭವಾಗುತ್ತದೆ. ಆಗ ಪುರೂರವನ ಹೃದಯದಲ್ಲಿ ಮೂರು ವೇದಗಳು ಪ್ರಕಟಗೊಳ್ಳುತ್ತದೆ. ಮೂರು ವೇದಗಳನ್ನು ಹೃದಯದಲ್ಲಿ ಕಂಡುಕೊಂಡ ರಾಜನು ಅಗ್ನಿಸ್ಥಾಲಿಯನ್ನು ಬಿಟ್ಟ ಅರಣ್ಯಕ್ಕೆ ಪುನಃ ಧಾವಿಸುತ್ತಾನೆ. ಅಲ್ಲಿ ಬನ್ನಿ ಮರದ ಗರ್ಭದಲ್ಲಿ ಒಂದು ಅರಳಿ ಮರವು ಹುಟ್ಟಿಕೊಂಡಿತ್ತು, ಅದನ್ನು ಕಂಡು ರಾಜನು ಅವುಗಳಿಂದ ಅಗ್ನಿಯನ್ನು ಪಡೆಯುವ ಎರಡು ಅರಳಿಗಳನ್ನು ಸಿದ್ಧಪಡಿಸುತ್ತಾನೆ. ಊರ್ವಶಿಯ ಮೇಲಿನ ಮೋಹವು ಈಗಲೂ ಇದ್ದುದರಿಂದ ಕೆಳಗಿನ ಅರಣಿಯನ್ನು ಊರ್ವಶಿಯನ್ನಾಗಿಯೂ, ಮೇಲಿನ ಅರಣಿಯನ್ನು ಪುರೂರವನನ್ನಾಗಿಯೂ, ಮಧ್ಯೆ ಕಡೆಯುವ ಮರವನ್ನು ಪುತ್ರರೂಪದಿಂದ ಭಾವಿಸಿಕೊಂಡು ಅಗ್ನಿಯನ್ನು ಪ್ರಜ್ವಲಿಸುವ ಮಂತ್ರಗಳಿಂದ ಅವುಗಳನ್ನು ಕಡೆಯುತ್ತಾನೆ. ಹೀಗೆ ಮಂಥನ ಮಾಡುವಾಗ ಜಾತವೇದಸನೆಂಬ ಅಗ್ನಿಯು ಉದ್ಭವಿಸುತ್ತಾನೆ. ಪುರೂರವನು ಆ ಅಗ್ನಿಯನ್ನು ಮೂರು ವಿಭಾಗಗಳನ್ನಾಗಿ ಮಾಡಿ ಪುತ್ರರೂಪದಿಂದ ಸ್ವೀಕರಿಸುತ್ತಾನೆ. ಆ ಅಗ್ನಿಗಳ ಮೂಲಕ ಶ್ರೀಹರಿಯನ್ನು ಆರಾಧಿಸಿ ಊರ್ವಶಿಯನ್ನು ಹೊಂದುವ ಬಯಕೆಯಿಂದ ಗಂಧರ್ವ ಲೋಕವನ್ನು ಹೊಂದುತ್ತಾನೆ.

2 Comments


👌

Like
Replying to

🙌

Like
bottom of page