ಬ್ರಹ್ಮರ್ಷಿ ವಿಶ್ವಾಮಿತ್ರರ ಕಥೆ - 2
- Asha Satish

- Jun 30
- 4 min read
🌟 ಕ್ಷಾತ್ರದಿಂದ ಬ್ರಹ್ಮರ್ಷಿಯಾಗುವ ದಿವ್ಯಯಾನ
ಲೋಕಸಂಚಾರಕ್ಕೆಂದು ಹೊರಟ ಕೌಶಿಕ ಮಹಾರಾಜ ಕಾಡಿನ ಮಧ್ಯದಲ್ಲಿ ಇದ್ದಂತಹ ವಸಿಷ್ಠರ ಆಶ್ರಮವನ್ನು ಪ್ರವೇಶಿಸಿ, ಸುರಧೇನುವಿನ ಅನುಗ್ರಹದಿಂದ ವಸಿಷ್ಠರು ನೀಡಿದ ಸತ್ಕಾರವನ್ನು ಸ್ವೀಕರಿಸಿದ ಮೇಲೆ, ದುರಾಸೆಯಿಂದ ಕಾಮಧೇನುವನ್ನು ಬಲಾತ್ಕಾರದಿಂದ ಕೊಂಡೊಯ್ಯಲು ಪ್ರಯತ್ನಿಸುತ್ತಾನೆ. ಅದು ಸಾಧ್ಯವಾಗದೆ ಹೋದಾಗ, ವಸಿಷ್ಠರನ್ನು ಸೋಲಿಸಲು ತಪಸ್ಸನ್ನು ಆಚರಿಸಿ, ಧನುರ್ವೇದವನ್ನು ವರವಾಗಿ ಪಡೆದು, ಶ್ರೇಷ್ಠ ಶಸ್ತ್ರಾಸ್ತ್ರಗಳಿಂದ ಆಕ್ರಮಣ ಮಾಡುತ್ತಾನೆ. ಆದರೆ ವಸಿಷ್ಠರು ತಮ್ಮ ಬ್ರಹ್ಮದಂಡವನ್ನು ಪ್ರಯೋಗಿಸಿ ಎಲ್ಲವನ್ನೂ ನಿವಾರಿಸಿಬಿಡುತ್ತಾರೆ. ಇದರಿಂದ ಬ್ರಹ್ಮಜ್ಞಾನವೇ ಸದಾ ಸರ್ವಶ್ರೇಷ್ಠವಾದುದು ಎಂಬುದನ್ನು ಅರಿತು, ಬ್ರಾಹ್ಮಜ್ಞಾನವನ್ನು ಪಡೆದುಕೊಂಡು ವಸಿಷ್ಠರ ಮೇಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಪುನಃ ತಪಸ್ಸಿಗೆ ತೊಡಗುತ್ತಾರೆ.
🌟ತ್ರಿಶಂಕು ಸ್ವರ್ಗ – ಬ್ರಹ್ಮತೇಜದಿಂದ ನಿರ್ಮಿತ ಮತ್ತೊಂದು ಲೋಕ
ಹಾಗೆ ತಪಸ್ಸನ್ನು ಆಚರಿಸುತ್ತಾ ಇರುವ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯುತ್ತದೆ. ಇಕ್ಷ್ವಾಕು ವಂಶದಲ್ಲಿ ಸತ್ಯವೃಥ ಎನ್ನುವಂತಹ ಒಬ್ಬ ರಾಜ ಆಳ್ವಿಕೆಯನ್ನು ನಡೆಸುತ್ತಾ ಇದ್ದ. ಮೂರು ವಿಧದ ಅಪರಾಧಗಳ ಶಂಕೆ ಅವನ ಮೇಲೆ ಬಂದಿದ್ದರಿಂದ ಅವನನ್ನು ತ್ರಿಶಂಕು ಅಂತ ಕೂಡ ಕರೆಯುತ್ತಿದ್ದರು. ಈ ತ್ರಿಶಂಕು ಮಹಾರಾಜನಿಗೆ ಸಶರೀರವಾಗಿ ಸ್ವರ್ಗವನ್ನು ಸೇರಬೇಕು ಎನ್ನುವಂತಹ ಆಸೆ ಬರುತ್ತದೆ. ಅದಕ್ಕಾಗಿ ಆತ ತನ್ನ ಕುಲಗುರುಗಳಾದಂತಹ ವಸಿಷ್ಠರನ್ನು ಭೇಟಿಯಾಗಿ, ತನ್ನ ಮನದ ಆಸೆಯನ್ನು ತಿಳಿಸುತ್ತಾನೆ, ಮತ್ತು ವಿಶ್ವಜಿತ್ ಯಾಗವನ್ನು ಮಾಡಿಸಿ ತನ್ನನ್ನು ಸಶರೀರವಾಗಿ ಸ್ವರ್ಗಕ್ಕೆ ಕಳುಹಿಸಿ ಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ವಶಿಷ್ಠರು ಅದನ್ನು ಒಪ್ಪುವುದಿಲ್ಲ! 'ಈ ಹಿಂದೆಯೂ ಅನೇಕರು ಆ ಪ್ರಯತ್ನವನ್ನು ಮಾಡಿದ್ದಾರೆ, ಬಲಿಚಕ್ರವರ್ತಿಯಂತಹವನಿಂದಲೇ ಅದು ಸಾಧ್ಯವಾಗಲಿಲ್ಲ ಅಂದಾಗ, ನಿನ್ನಂತವನಿಂದ ಅದು ಸಾಧ್ಯವೇ ಇಲ್ಲ ಅಂತಹ ಯೋಚನೆಯನ್ನು ಕೈಬಿಡು' ಎಂದು ಸತ್ಯವೃಥನಲ್ಲಿ ಹೇಳುತ್ತಾರೆ. ಇದರಿಂದ ಬೇಸರಗೊಂಡ ಮಹಾರಾಜ ಛಲ ಬಿಡದೆ ತಪಸ್ಸಿನಲ್ಲಿ ನಿರತರಾಗಿದ್ದ ವಸಿಷ್ಠರ ಪುತ್ರರನ್ನು ಭೇಟಿಯಾಗುತ್ತಾನೆ. ಅವರ ಬಳಿ ತನ್ನ ಸಶರೀರವಾಗಿ ಸ್ವರ್ಗ ಸೇರುವ ಬಯಕೆಯನ್ನು ತಿಳಿಸಿ ವಿಶ್ವಜಿತ್ ಯಾಗವನ್ನು ಮಾಡಿಸುವಂತೆ ಪ್ರಾರ್ಥಿಸುತ್ತಾನೆ. ತಮ್ಮ ತಂದೆ ಒಪ್ಪದೇ ತಾವು ಈ ಕಾರ್ಯವನ್ನು ಮಾಡುವುದಿಲ್ಲ ಎಂದು ವಶಿಷ್ಠ ಪುತ್ರರು ಮಹಾರಾಜನ ಮಾತನ್ನು ಒಪ್ಪುವುದಿಲ್ಲ. ಇದರಿಂದ ತ್ರಿಶಂಕು ಮಹಾರಾಜ ಕ್ರೋಧಗೊಂಡು ವಸಿಷ್ಠರು ಹಾಗೂ ಅವರ ಪುತ್ರರನ್ನು ನಿಂದಿಸುತ್ತಾನೆ. ಚಾಂಡಾಲನಾಗಿ ಹೋಗು ಎಂದು ತ್ರಿಶಂಕುವನ್ನು ಶಪಿಸುತ್ತಾರೆ. ಮರುಕ್ಷಣವೇ ತ್ರಿಶಂಕುವಿನ ದೇಹ ಕುರೂಪಗೊಂಡು, ಮೈಯ ತುಂಬೆಲ್ಲ ಹುಣ್ಣು ಗಾಯಗಳಿಂದ ವಾಸನೆ ಬರಲಾರಂಭಿಸುತ್ತದೆ. ತನ್ನ ಸ್ಥಿತಿಗೆ ಕಾರಣರಾದ ವಸಿಷ್ಠ ಪುತ್ರರನ್ನು ಬೈದುಕೊಳ್ಳುತ್ತಾ, ತನ್ನ ಹಗೆ ತೀರಿಸಿಕೊಳ್ಳಲು ಮತ್ತು ತನ್ನನ್ನು ನೇರವಾಗಿ ಸ್ವರ್ಗಕ್ಕೆ ಕಳುಹಿಸಬಲ್ಲ ವ್ಯಕ್ತಿಯ ಹುಡುಕಾಟಕ್ಕೆ ತೊಡಗುತ್ತಾನೆ.
ಅದೇ ಸಮಯಕ್ಕೆ ಕಾಮಧೇನುವಿನ ಮೇಲಿನ ಆಸೆಯಿಂದ ಆರಂಭಗೊಂಡ ವಶಿಷ್ಠರ ಮೇಲಿನ ವಿರೋಧ ತೀವ್ರ ಹಗೆಯಾಗಿ ಸೇಡು ತೀರಿಸಿಕೊಳ್ಳಲೆ೦ದೇ ಘೋರ ತಪಸ್ಸನ್ನು ಆಚರಿಸುತ್ತಿರುವ ಕೌಶಿಕ ಮಹಾರಾಜನನ್ನು ಹುಡುಕಿಕೊಂಡು ಅವನಿದ್ದಲ್ಲಿಗೇ ಸಾಗುತ್ತಾನೆ. ತಪಸ್ಸಿನಲ್ಲಿ ತೊಡಗಿದಂತಹ ಕೌಶಿಕ ಮಹಾರಾಜನ ಎದುರು ನಿಂತು, ತನಗೆ ದಾರಿ ತೋರಿಸುವಂತೆ ದೈನ್ಯದಿಂದ ಬೇಡಿಕೊಳ್ಳುತ್ತಾನೆ. ಆತ ಹೇಳಿದಂತಹ ವಿಚಾರಗಳನ್ನು ಕೇಳಿ, 'ತಾನು ಈ ಕೆಲಸವನ್ನು ಪೂರೈಸಿ ಕೊಡುತ್ತೇನೆ' ಎಂಬುದಾಗಿ ಭರವಸೆ ನೀಡುತ್ತಾನೆ. ಅದರಂತೆ ಶ್ರೇಷ್ಠ ಮನಿಗಳನ್ನು ಬ್ರಾಹ್ಮಣರನ್ನು ಕರೆಯಿಸಿ ಯಾಗವನ್ನು ಆರಂಭಿಸುತ್ತಾರೆ. ಆ ಯಾಗ ಸಂಪನ್ನವಾಗಬೇಕಾದರೆ ದೇವತೆಗಳು ಬಂದು ಹವಿಸ್ಸನ್ನು ಪಡೆಯಬೇಕು. ಆದರೆ ಎಷ್ಟೇ ಪ್ರಾರ್ಥಿಸಿದರೂ ದೇವತೆಗಳು ತಮ್ಮ ಪಾಲಿನ ಹವಿಸ್ಸನ್ನು ಪಡೆಯಲು ಬರುವುದೇ ಇಲ್ಲ! ಆಗ ಕ್ರೋಧಗೊಂಡ ಕೌಶಿಕ ಮುನಿಗಳು ತಮ್ಮ ತಪಃಶಕ್ತಿಯಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಲು ಆರಂಭಿಸಿದ ಕೂಡಲೇ, ದೇವತೆಗಳೆಲ್ಲ ಒಮ್ಮೆ ಆಶ್ಚರ್ಯ ಚಕಿತರಾಗಿ ಗುರುವಿನಿಂದ ಶಾಪ ಪಡೆದ ಇವನಿಗೆ ಸ್ವರ್ಗದಲ್ಲಿ ಸ್ಥಳ ನೀಡಬಾರದು ಎಂದು, ಅವನು ಇಲ್ಲಿಗೆ ಬರುವುದನ್ನು ತಡೆಯಬೇಕೆಂದು ದೇವರಾಜ ಇಂದ್ರನಲ್ಲಿ ಪ್ರಾರ್ಥಿಸುತ್ತಾರೆ. ಕೂಡಲೇ ಇಂದ್ರ ಸ್ವರ್ಗದ ಬಾಗಿಲಿಗೆ ಬಂದ ತ್ರಿಶಂಕುವನ್ನು 'ಪಾಪ ಕೃತ್ಯಗಳನ್ನು ಎಸಗಿದವರಿಗೆ ಸ್ವರ್ಗದಲ್ಲಿ ಸ್ಥಳವಿಲ್ಲ...! ನಡೆಯಾಚೆ!' ಎಂದು ಅವಮಾನಿಸಿ ಹೊರನೂಕುತ್ತಾನೆ. 'ಗುರುದೇವ ಕಾಪಾಡಿ.. ಕಾಪಾಡಿ' ಎಂದು ಹೇಳುತ್ತಾ ತ್ರಿಶಂಕು ತಲೆಕೆಳಗಾಗಿ ಭೂಮಿಯತ್ತ ಬೀಳಲಾರಂಭಿಸುತ್ತಾನೆ. ಅದನ್ನು ನೋಡಿದ ಕೌಶಿಕರು, ತಮ್ಮ ತಪ:ಶಕ್ತಿಯ ಮೂಲಕ ತ್ರಿಶಂಕುವನ್ನು ಅಲ್ಲಿಯೇ ನಿಲ್ಲಿಸುತ್ತಾರೆ. ಹಾಗೆ ತಲೆಕೆಳಗಾಗಿ ನೇತಾಡುತ್ತಿರುವ ತ್ರಿಶಂಕುವಿಗೆ, ಅವನಿರುವ ಸ್ಥಳದಲ್ಲಿಯೇ ಸ್ವರ್ಗವನ್ನು ನಿರ್ಮಿಸಿಕೊಡಲು ತೀರ್ಮಾನಿಸುತ್ತಾರೆ. ಇದರಿಂದ ದೇವತೆಗಳೆಲ್ಲ ಹೆದರಿ, 'ಹಾಗೆ ಮಾಡುವುದರಿಂದ ಲೋಕಕ್ಕೆ ಒಳಿತಾಗುವುದಿಲ್ಲ, ಆದ್ದರಿಂದ ಈ ತೀರ್ಮಾನವನ್ನು ಕೈಬಿಡಿ' ಎಂದು ಪ್ರಾರ್ಥಿಸುತ್ತಾರೆ. ಅವರ ಮಾತನ್ನು ಕೇಳಿ ಕೌಶಿಕ ಮುನಿಗಳು ತಾವು ಈಗಾಗಲೇ ತ್ರಿಶಂಕುವಿಗೆ ಸಶರೀರವಾಗಿ ಸ್ವರ್ಗಕ್ಕೆ ಕಳುಹಿಸುವೆನೆಂಬ ಪ್ರತಿಜ್ಞೆ ಗೈದಿದ್ದರಿಂದ ಆ ಮಾತಿಗೆ ತಪ್ಪಲಾಗುವುದಿಲ್ಲ, ತ್ರಿಶಂಕು ಇರುವಲ್ಲಿಯೇ ಪ್ರತಿ ಸ್ವರ್ಗದ ನಿರ್ಮಾಣ ಆಗಿಯೇ ಆಗುವುದು, ನೀವೆಲ್ಲ ಇದನ್ನು ಸಹಮತದಿಂದ ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ. ಅದಕ್ಕೆ ದೇವತೆಗಳು ಒಪ್ಪಿ ತ್ರಿಶಂಕುವಿಗಾಗಿ ಸ್ವರ್ಗದ ನಿರ್ಮಾಣವಾಗುತ್ತದೆ. ಈ ರೀತಿಯಾಗಿ ಕೌಶಿಕ ಇಲ್ಲಿಯವರೆಗೆ ಗಳಿಸಿದ ಎಲ್ಲ ತಪ:ಶಕ್ತಿಯನ್ನು ತ್ರಿಶಂಕುವಿಗೆ ಸ್ವರ್ಗ ನಿರ್ಮಾಣ ಮಾಡಿಕೊಡುವಲ್ಲಿ ಕಳೆದುಕೊಳ್ಳುತ್ತಾರೆ.
🌟ಮೇನಕೆ ಮತ್ತು ರಂಭೆ – ಕಾಮಕ್ರೋಧಗಳ ಪರೀಕ್ಷೆ

ಕೌಶಿಕ ಮುನಿಯ ಬ್ರಹ್ಮರ್ಷಿಯಾಗುವ ಕನಸು ಇನ್ನೂ ಹಾಗೆ ಇದ್ದದ್ದರಿಂದ ಪುನಃ ತಪಸ್ಸಿಗೆ ತೊಡುತ್ತಾರೆ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನ ನಂತರ ಮೇನಕೆ ಎಂಬಂತಹ ಗಂಧರ್ವ ಸ್ತ್ರೀಯಲ್ಲಿ ಅನುರಕ್ತರಾಗಿ, ಆ ಸ್ತ್ರೀಯೊಡನೆ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಸ್ತ್ರೀಯ ವ್ಯಾಮೋಹಕ್ಕೆ ಸಿಲುಕಿ ಬ್ರಹ್ಮ ಜ್ಞಾನವನ್ನು ಹೊಂದುವ ತಮ್ಮ ಗುರಿಯನ್ನೇ ಮರೆತುಬಿಡುತ್ತಾರೆ. ಸ್ತ್ರೀ ಸಂಗದಿಂದ ತಾವು ಗಳಿಸಿದ್ದ ಅಪಾರವಾದ ತಪ:ಶಕ್ತಿಯನ್ನು ಮತ್ತೆ ಕಳೆದುಕೊಳ್ಳುತ್ತಾರೆ. ಹತ್ತುವರ್ಷಗಳ ನಂತರ ಕೌಶಿಕರಿಗೆ ತಮ್ಮ ತಪ್ಪು ಅರಿವಾಗುತ್ತದೆ. ಮೇನಕೆಯನ್ನು ತ್ಯಜಿಸಿ ಮತ್ತೆ ತಪಸ್ಸಿಗೆ ತೊಡಗುತ್ತಾರೆ.
ಅವರ ದೀರ್ಘವಾದ ಉಗ್ರ ತಪಸ್ಸಿಗೆ ಮೆಚ್ಚಿ ಬ್ರಹ್ಮ ದೇವರು ಮಹರ್ಷಿ ಪದವಿಯನ್ನು ಅನುಗ್ರಹಿಸುತ್ತಾರೆ. ಆದರೆ ಅದಕ್ಕೆ ತೃಪ್ತಿಯಾಗದ ಕೌಶಿಕ ಮುನಿಗಳು, ತಪಸ್ಸನ್ನು ಮತ್ತೆ ಮುಂದುವರೆಸುತ್ತಾರೆ. ಅನ್ನ, ಆಹಾರ, ನಿದ್ರೆಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಕೇವಲ ಶ್ವಾಸೋಚ್ಛಾಸ ಒಂದನ್ನೇ ಆಶ್ರಯಿಸಿ ಅತ್ಯಂತ ಕಠಿಣವಾದ ತಪಸ್ಸಿಗೆ ತೊಡಗುತ್ತಾರೆ. ಬೇಸಿಗೆಯ ಸುಡುಬಿಸಿಲು, ಮಳೆಗಾಲದ ವರ್ಷಧಾರೆ, ಚಳಿಗಾಲದ ಕೊರೆಯುವ ಚಳಿ ಇವು ಯಾವುದೂ ಕೂಡ ಕೌಶಿಕರ ತಪಸ್ಸಿಗೆ ಭಂಗ ತರಲಿಲ್ಲ. ಕೇವಲ ಗಾಳಿಯನ್ನು ಸೇವಿಸಿ, ಸಾವಿರಾರು ವರ್ಷಗಳ ತಪಸ್ಸನ್ನು ಮುಂದುವರಿಸುತ್ತಿದ್ದರು. ಕೌಶಿಕರ ಈ ಘೋರ ತಪಸ್ಸಿನಿಂದ ಹೆದರಿದ ದೇವತೆಗಳು, ಪುನಃ ರಂಭೆ ಎಂಬ ಸುರಾಂಗನೆಯನ್ನು ಕಳುಹಿಸಿ ಕೌಶಿಕರ ತಪೋಭಂಗ ಮಾಡಲು ನಿಶ್ಚಯಿಸುತ್ತಾರೆ. ದೇವತೆಗಳ ಆದೇಶದಂತೆ ಮಹರ್ಷಿ ಕೌಶಿಕರ ಎದುರು ಬಂದು ನಿಂತ ರಂಭೆ, ನಾನಾ ವಿಧದ ಭಾವ-ಭಂಗಿಗಳಿಂದ ಕೌಶಿಕರನ್ನು ಮೋಹ ಗೊಳಿಸಲು ಪ್ರಯತ್ನಿಸುತ್ತಾಳೆ. ಆದರೆ ಈ ಬಾರಿ ಕೌಶಿಕರು ಮೋಹ ಪರವಶರಾಗುವುದಿಲ್ಲ. ಇದು ದೇವತೆಗಳ ಕುತಂತ್ರವೆಂದು ಅರಿತ ಕೌಶಿಕರು 'ನನ್ನ ತಪಸ್ಸನ್ನು ಕೆಡಿಸಿದ ನೀನು ಹತ್ತು ಸಾವಿರ ವರ್ಷಗಳ ಕಾಲ ಕಲ್ಲಾಗಿ ಹೋಗು' ಎಂದು ಶಾಪ ನೀಡುತ್ತಾರೆ. 'ಹತ್ತುಸಾವಿರ ವರ್ಷಗಳ ಶಾಪದ ಅವಧಿ ಮುಗಿದಾಗ ಒಬ್ಬ ತೇಜಸ್ವಿ ಮತ್ತು ತಪೋಬಲ ಸಂಪನ್ನನಾದ ಬ್ರಾಹ್ಮಣನು ನಿನ್ನನ್ನು ಶಾಪದಿಂದ ವಿಮುಕ್ತಗೊಳಿಸುತ್ತಾನೆ' ಎಂದು ಹೇಳುತ್ತಾರೆ.
🌟ಬ್ರಹ್ಮರ್ಷಿ ಪದವಿ – ವಿಶ್ವಾಮಿತ್ರನ ಅಂತಿಮ ಜಯ
ಇದಾದ ಬಳಿಕ ಕೌಶಿಕ ಮುನಿಗಳು ತಮ್ಮ ಕ್ರೋಧವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಬೇಸರಗೊಂಡು, 'ಈ ಕ್ಷಣದಿಂದ ಯಾವುದೇ ಸಂದರ್ಭದಲ್ಲಿ ಮನಸ್ಸಿನ ಸಂಯಮವನ್ನು ಕಳೆದುಕೊಳ್ಳಬಾರದು, ಇಂದ್ರಿಯಗಳನ್ನು ಜಯಿಸಿ ಶರೀರವನ್ನು ಮೋಹ ಮುಕ್ತವಾಗಿಸಬೇಕು. ಅದಕ್ಕಾಗಿ ಈ ಕ್ಷಣದಿಂದಲೇ ಶ್ವಾಸವನ್ನು ತೆಗೆದುಕೊಳ್ಳುವುದಿಲ್ಲ' ಎಂದು ಪ್ರತಿಜ್ಞೆಗೈದು ಪುನಃ ಒಂದು ಸಾವಿರ ವರ್ಷಗಳ ಕಠಿಣಾತಿಕಠಿಣ ತಪಸ್ಸನ್ನು ಆಚರಿಸುತ್ತಾರೆ. ಆ ಅವಧಿಯಲ್ಲಿ ಅನೇಕ ವಿಧದ ವಿಘ್ನಗಳು ಬಂದರೂ ಯಾವುದರಿಂದಲೂ ಅವರ ತಪಸ್ಸು ಭಂಗಗೊಳ್ಳಲಿಲ್ಲ. ಕಟ್ಟಿಗೆಯ ತುಂಡಿನಂತೆ ನಿಶ್ಚೇಷ್ಟರಾಗಿ, ಸಾವಿರ ವರ್ಷಗಳ ತಪಸ್ಸಿನ ವ್ರತವನ್ನು ಸಮಾಪ್ತಿಗೊಳಿಸಿ, ಅನ್ನವನ್ನು ಸ್ವೀಕರಿಸುವುದಕ್ಕೆ ಉದ್ಯುಕ್ತರಾಗುತ್ತಾರೆ. ಅದೇ ಸಮಯಕ್ಕೆ ದೇವರಾಜನಾದ ಇಂದ್ರನು ಬ್ರಾಹ್ಮಣ ವೇಷದಿಂದ ಬಂದು ಅನ್ನವನ್ನು ಬೇಡುತ್ತಾನೆ. ಆಗ ಕೌಶಿಕರು ಮರು ಮಾತನಾಡದೆ, ತಮ್ಮ ಭೋಜನವನ್ನು ಬ್ರಾಹ್ಮಣ ವೇಷದಿಂದ ಬಂದ ಇಂದ್ರನಿಗೆ ದಾನವಾಗಿ ನೀಡಿ, ತಾವು ಊಟ ಮಾಡದೆ ಹಾಗೆಯೇ ಉಳಿದುಬಿಡುತ್ತಾರೆ. ಪುನ: ಮೊದಲಿನಂತೆ ಶ್ವಾಸ ರಹಿತ ತಪಸ್ಸನ್ನು ಮುಂದುವರಿಸುತ್ತಾರೆ. ಈ ಕಠಿಣ ವೃತದ ಪ್ರಭಾವದಿಂದ ಅವರ ಮಸ್ತಕದಿಂದ ಹೊಗೆ ಬರಲಾರಂಭಿಸಿ ಮೂರೂ ಲೋಕಗಳನ್ನು ಆವರಿಸುತ್ತದೆ. ಸಕಲ ಜೀವರಾಶಿಗಳು ಭೀತಿಯಿಂದ ಕಂಗಾಲಾಗುತ್ತವೆ. ಸಮುದ್ರಗಳು ಕ್ಷುದ್ರವಾಗುತ್ತವೆ. ಪ್ರಚಂಡ ಮಾರುತಗಳು ಸೂರ್ಯನ ಕಿರಣಗಳು ಮಂಕಾಗುತ್ತವೆ. ಈ ಉಗ್ರ ತೀಕ್ಷ್ಣ ಪ್ರಭೆಯನ್ನು ನೋಡಿ, ಇದು ಹೀಗೆ ಮುಂದುವರಿದರೆ ಸಮಸ್ತ ಸೃಷ್ಟಿಯೇ ಉರಿದು ಭಸ್ಮವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡ ದೇವತೆಗಳು, ಬ್ರಹ್ಮ ದೇವರಲ್ಲಿ 'ಕೌಶಿಕರ ಅಭಿಲಾಷೆಯನ್ನು ಪೂರ್ತಿಗೊಳಿಸುವುದಕ್ಕೆ ಇದು ಸಕಾಲ, ಕೌಶಿಕರು ಕಾಮ ಕ್ರೋಧಗಳನ್ನು ಇಂದ್ರಿಯಗಳನ್ನು ನಿಗ್ರಹಿಸಿ ಈಗ ಜಿತೇಂದ್ರಿಯರೆನಿಸಿಕೊಂಡಿದ್ದಾರೆ. ಬ್ರಹ್ಮರ್ಷಿ ಪದವಿಗೆ ಅವರು ಈಗ ಯೋಗ್ಯರಾಗಿದ್ದಾರೆ, ಆದ್ದರಿಂದ ಅವರಿಗೆ ಬ್ರಹ್ಮರ್ಷಿ ಪದವಿಯನ್ನು ಅನುಗ್ರಹಿಸಿ' ಅಂತ ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮ ದೇವರು ಕೌಶಿಕರಿಗೆ ದೀರ್ಘಾಯಸ್ಸು ಮತ್ತು ಬ್ರಹ್ಮರ್ಷಿ ಪದವಿಯನ್ನು ಅನುಗ್ರಹಿಸುತ್ತಾರೆ.
ಆಗ ಕೌಶಿಕರು ಜ್ಞಾನಿಗಳಲ್ಲಿ ಶ್ರೇಷ್ಠರಾದಂತಹ ವಸಿಷ್ಠರು ಬಂದು, ತನ್ನನ್ನು ಬ್ರಹ್ಮರ್ಷಿ ಎಂದು ಒಪ್ಪಿಕೊಳ್ಳುವವರೆಗೂ ತಪಸ್ಸನ್ನು ಮುಂದುವರಿಸುವುದಾಗಿ ಹೇಳುತ್ತಾರೆ. ಆಗ ದೇವತೆಗಳೆಲ್ಲ ಈ ವಿಚಾರವನ್ನು ವಸಿಷ್ಠರಿಗೆ ಅರುಹಿ ಪ್ರಾರ್ಥಿಸುತ್ತಾರೆ. ವಸಿಷ್ಠರು ಪ್ರಸನ್ನಗೊಂಡು ಕೌಶಿಕರನ್ನು ಬ್ರಹ್ಮರ್ಷಿ ಅಂತ ಒಪ್ಪಿಕೊಳ್ಳುತ್ತಾರೆ. ಇಬ್ಬರ ಮಧ್ಯೆ ಉತ್ತಮ ಮಿತ್ರತ್ವ ಸ್ಥಾಪನೆಗೊಂಡು ಲೋಕಪ್ರಿಯರಾಗುತ್ತಾರೆ. ಈ ರೀತಿಯಾಗಿ ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದರೂ, ತಪಸ್ಸಿನಿಂದ ತಮ್ಮ ಕ್ಷಾತ್ರ ಗುಣಗಳನ್ನು ದಹಿಸಿ, ಬ್ರಹ್ಮ ಜ್ಞಾನವನ್ನು ಪಡೆದು "ಬ್ರಹ್ಮರ್ಷಿ ವಿಶ್ವಾಮಿತ್ರ " ಎಂದು ಪ್ರಸಿದ್ಧಿ ಆಗುತ್ತಾರೆ.








Comments