ವಾಲ್ಮೀಕಿ
- Ravishankara Hegde Dodnalli

- Jul 12
- 2 min read
ರಾಮಾಯಣದ ಕವಿಯಾದ ವಾಲ್ಮೀಕಿಯನ್ನು ಆದಿಕವಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವಾಲ್ಮೀಕಿಯ ಹಿನ್ನೆಲೆಯನ್ನು ಗಮನಿಸಿದಾಗ ರತ್ನಾಕರನೆಂಬ ಬೇಡನಿದ್ದನೆಂದೂ ಅವನಿಗೆ ನಾರದರ ಆಶೀರ್ವಾದದಿಂದ ಅನುಗ್ರಹವಾಗಿ ವಾಲ್ಮೀಕಿಯಾದನೆಂದು ಪ್ರಸಿದ್ಧಿಯಲ್ಲಿರುವ ಕಥೆ. ಇನ್ನು ಕೆಲವು ವಿದ್ವಾಂಸರು ವಾಲ್ಮೀಕಿ ಋಷಿ ಪರಂಪರೆಯಲ್ಲಿಯೇ ಬಂದವನೆಂಬ ವಾದವನ್ನೂ ಮುಂದಿಡುತ್ತಾರೆ. ಆದರೆ ಇಲ್ಲಿ ವಾಲ್ಮೀಕಿಯ ಹಿನ್ನೆಲೆ ಅಪ್ರಸ್ತುತ. ರಾಮಾಯಣವೆಂಬ ಮಹಾಕಾವ್ಯ ಸಾಗರವನ್ನು ನಮಗೆ ನೀಡಿ ವಾಲ್ಮೀಕಿಗಳು ಪೂಜ್ಯರು ಮತ್ತು ವಂದನಾರ್ಹರು.

ಇಲ್ಲಿ ವಾಲ್ಮೀಕಿಯನ್ನು ಕವಿಯಾಗಿ ನೋಡುವ ನೋಟವೊಂದಾದರೆ ರಾಮಾಯಣದ ಪಾತ್ರವಾಗಿಯೇ ನೋಡುವ ನೋಟ ಇನ್ನೊಂದು. ನಿತ್ಯಾಹ್ನಿಕವನ್ನು ಪೂರೈಸಲು ತಮಸಾನದಿಯ ತೀರಕ್ಕೆ ಹೋದ ವಾಲ್ಮೀಕಿಗಳಿಗೆ ಕ್ರೌಂಚ ಪಕ್ಷಿಯ ಮಿಲನ ಗೋಚರವಾಯಿತು. ಆನಂದದಲ್ಲಿದ್ದ ಕ್ರೌಂಚಗಳಲ್ಲಿ, ಒಂದು ಕ್ರೌಂಚ ಬೇಟೆಗಾರನ ಬಾಣಕ್ಕೆ ಪ್ರಾಣ ಬಿಟ್ಟಿತು. ಅದನ್ನು ಕಂಡ ವಾಲ್ಮೀಕಿ ಮಹರ್ಷಿಗಳಿಗೆ ದುಃಖವಾಗಿ, ಅವರ ಬಾಯಿಯಿಂದ ಹೊರಟ ಶಾಪದ ವಾಕ್ಯಗಳು ಪ್ರಪಂಚದ ಎಲ್ಲ ಪದ್ಯಗಳಿಗೆ ಆರಂಭವಾಯಿತು. ಈ ಘಟನೆಯಲ್ಲಿ ಗಮನಿಸಬೇಕಾದ ಅಂಶಗಳು ಹಲವು ಇವೆ. ಒಬ್ಬ ಯೋಗಿಯ ಸಿಟ್ಟು, ಅವನ ದುಃಖ, ಮಹಾಕಾವ್ಯದ ಉಗಮಕ್ಕೆ ಕಾರಣವಾಯಿತು. ಆದ್ದರಿಂದ ಯೋಗಿಗಳ ಪ್ರತಿಯೊಂದು ಭಾವನೆಯೂ ಪ್ರಪಂಚದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಈ ಕಥೆ ರಾಮಾಯಣವನ್ನೇ ಸೂಕ್ಷ್ಮವಾಗಿ ಹೇಳುತ್ತದೆ. ಕ್ರೌಂಚ ಪಕ್ಷಿಗಳೇ ರಾಮ ಸೀತೆಯರಾಗಿ, ಆ ವ್ಯಾಧನೇ ರಾವಣನಾಗಿ, ರಾವಣ ಸೀತೆಯನ್ನು ಅಪಹರಿಸಿ ಕೊನೆಯಲ್ಲಿ ಅವನೇ ಪ್ರಾಣ ಬಿಡುತ್ತಾನೆ.
ಹೀಗೆ ಆ ಬೇಟೆಗಾರನಿಗೆ ಶಾಪ ನೀಡಿ, ಆಶ್ರಮಕ್ಕೆ ಹಿಂದಿರುಗಿ ಬಂದ ವಾಲ್ಮೀಕಿಗಳ ಮನಸ್ಸು ಸರಿಯಾಗಲೇ ಇಲ್ಲ. ಆಗ ನಾರದರು ಇವರ ಆಶ್ರಮಕ್ಕೆ ಬರುತ್ತಾರೆ. ನಾರದರಲ್ಲಿ ವಾಲ್ಮೀಕಿಗಳು 'ಪ್ರಸಕ್ತ ಕಾಲಘಟ್ಟದಲ್ಲಿ ಒಬ್ಬ ಪರಾಕ್ರಮಿಯೂ, ಧರ್ಮಜ್ಞನೂ ಆದ ವ್ಯಕ್ತಿ ಯಾರಿದ್ದಾನೆ?' ಎಂದು ಕೇಳುತ್ತಾರೆ. ಅದಕ್ಕೆ ನಾರದರು ನೂರು ಶ್ಲೋಕಗಳಲ್ಲಿ ಇಡೀ ರಾಮಾಯಣದ ಕಥೆಯನ್ನು ಹೇಳುತ್ತಾರೆ. ಅನಂತರ ಬ್ರಹ್ಮ ಪ್ರತ್ಯಕ್ಷನಾಗಿ, 'ಮುಂದೆ ಇಡೀ ರಾಮಾಯಣ ಸವಿವರವಾಗಿ ವಾಲ್ಮೀಕಿಯಿಂದ ರಚನೆಯಾಗಬೇಕು' ಎಂದು ಆದೇಶಿಸುತ್ತಾನೆ. ಮತ್ತು ಸಂಪೂರ್ಣ ರಾಮಾಯಣ ವಾಲ್ಮೀಕಿಗಳ ದಿವ್ಯ ದೃಷ್ಟಿಗೆ ಗೋಚರವಾಗುವಂತೆ ಆಶೀರ್ವದಿಸುತ್ತಾನೆ. ತದನಂತರ ವಾಲ್ಮೀಕಿ ಮಹರ್ಷಿಗಳು ಸಂಪೂರ್ಣ ರಾಮಾಯಣವನ್ನು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿಂದ ರಚಿಸುತ್ತಾರೆ.
ರಾಮಾಯಣದ ಕೊನೆಯ ಭಾಗದಲ್ಲಿ ಸೀತೆಯನ್ನು ಜನಾಪವಾದದ ಕಾರಣದಿಂದ ರಾಮ ಪರಿತ್ಯಾಗ ಮಾಡಿದಾಗ, ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿಯೇ ಸೀತೆ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವರಿಗೆ ವಿದ್ಯೆ ಹಾಗೂ ಸಂಸ್ಕಾರವನ್ನು ವಾಲ್ಮೀಕಿಗಳೇ ಬೋಧಿಸುತ್ತಾರೆ. ಒಬ್ಬ ಸಂವೇದನಾಶೀಲ ವ್ಯಕ್ತಿಯಾಗಿ ರಾಮಾಯಣದ ಸೂತ್ರಧಾರನಾಗಿ ವಾಲ್ಮೀಕಿ ಕಾಣುತ್ತಾರೆಯೇ ವಿನಃ ರಾಮಾಯಣದ ವಿಶಿಷ್ಟ ಪಾತ್ರವಾಗಿ ಕಾಣುವುದಿಲ್ಲ. ತಮ್ಮ ಕವಿತಾ ಸಾಮರ್ಥದಿಂದ ಅಜರಾಮರವಾದ ಒಂದು ಮಹಾಕಾವ್ಯವನ್ನು ಪ್ರಪಂಚಕ್ಕೆ ನೀಡಿದ ಕೀರ್ತಿ ವಾಲ್ಮೀಕಿಗಳದ್ದು. ಅವರಿಂದ ರಚಿತವಾದ ರಾಮಾಯಣದ ಸಂದರ್ಭಗಳನ್ನು ಗಮನಿಸಿದಾಗ ಅತ್ಯಂತ ಸೂಕ್ಷ್ಮ ಸಾಂಸಾರಿಕ ವಿಷಯಗಳನ್ನು, ಗಂಭೀರವಾದ ರಾಜಕೀಯ ರಹಸ್ಯಗಳನ್ನೂ, ದೃಢವಾದ ಧರ್ಮಶಾಸನಗಳನ್ನೂ, ಸ್ವಾಭಾವಿಕವಾದ ಪ್ರಾಕೃತಿಕ ಸೌಂದರ್ಯವನ್ನೂ ಹಾಗೂ ನವರಸಗಳ ಎಲ್ಲ ವಿಧವಾದ ಭಾವಗಳನ್ನೂ ಅತ್ಯಂತ ಸ್ಫುಟವಾಗಿ ಹಾಗೂ ಸಹಜವಾಗಿ ರಾಮಾಯಣದಲ್ಲಿ ಚಿತ್ರಿಸಿರುವುದು ಕಂಡು ಬರುತ್ತದೆ. ಇದು ಕೇವಲ ಅಧ್ಯಯನದಿಂದ ಮಾತ್ರ ಸಾಧ್ಯವಾಗುವಂಥದ್ದಲ್ಲ. ಇದು ನಿರಂತರವಾದ ಚಿಕಿತ್ಸಕ ದೃಷ್ಟಿ ಹಾಗೂ ಅಪಾರವಾದ ಅನುಭವದಿಂದ ಬರುವಂಥದ್ದು. ಆದ್ದರಿಂದ ವಾಲ್ಮೀಕಿಗಳು ಜ್ಞಾನಿಗಳೂ, ಅನುಭವಿಗಳೂ, ತಪಸ್ವಿಗಳೂ, ಹಾಗೂ ಚಿಕಿತ್ಸಕ ಬುದ್ಧಿ ಉಳ್ಳವರೂ ಆಗಿದ್ದರು ಎಂದು ಹೇಳಬಹುದು.
ಇದು ಆದಿ ಕವಿ ವಾಲ್ಮೀಕಿಯ ಪಾತ್ರ ಚಿತ್ರಣ.








Comments