top of page

ಕೈಕೇಯಿ

Updated: Jul 7

ರಾಮಾಯಣದಲ್ಲಿ ಎಲ್ಲರ ಸಿಟ್ಟಿಗೆ ಕಾರಣವಾದ ಪಾತ್ರ ಈ ಕೈಕೇಯಿ. ಕೇಕಯ ದೇಶದ ರಾಜ ಅಶ್ವಪತಿಯ ಮಗಳಾಗಿ ಭರತನ ಮಾತೆಯಾಗಿ ಲೋಕದಲ್ಲಿ ಕಾಣಿಸಿಕೊಂಡವಳು. ದಶರಥನ ಮುದ್ದಿನ ಮಡದಿ ಈಕೆ. ರಾಮಾಯಣದ ಪ್ರಮುಖ ಘಟ್ಟಗಳಲ್ಲಿ ಶ್ರೀರಾಮ ವನಗಮನವೂ ಒಂದು. ಶ್ರೀ ರಾಮ ವನವಾಸಕ್ಕೆ ಹೋಗಲು ಪ್ರೇರಣೆಯೇ ಕೈಕೇಯಿಯಲ್ಲವೇ..?

ಹೌದು ರಾಮಾಯಣದಲ್ಲಿ ತಾಮಸ ಗುಣಯುತಳಾಗಿ ಕಾಣಿಸಿಕೊಳ್ಳುವ ಪಾತ್ರ ಕೈಕೇಯಿ. ಕೌಸಲ್ಯೆ ಮತ್ತು ಸುಮೆತ್ರೆಯರಲ್ಲಿ ಸಂತಾನ ಪ್ರಾಪ್ತಿಯಾಗದಿರುವಾಗ ರಾಜಾ ದಶರಥನು ಈ ಕೈಕೇಯಿಯನ್ನು ವಿವಾಹವಾಗುತ್ತಾನೆ. ಕೈಕೇಯಿಯ ವಿವಾಹದ ಅನಂತರ ಅಯೋಧ್ಯೆಗೆ ಬರುವಾಗ ಅವಳ ಜೊತೆಗೆ ಬಂದ ದಾಸಿ ಮಂಥರಾ.

ree

ಈ ಮಂಥರೆಯ ವಿಷಯದಲ್ಲಿಯೂ ಹಲವಾರು ಕಥೆಗಳು ಪ್ರಸಿದ್ಧವಾಗಿವೆ. ಅವುಗಳಲ್ಲಿ ಕೈಕೇಯಿಯ ತಂದೆಯಾದ ಅಶ್ವಪತಿ ಮಹಾರಾಜನಿಗೆ ಇವಳು ಕಾಡಿನಲ್ಲಿ ಸಿಕ್ಕವಳು ಎಂಬ ಉಲ್ಲಖವೇ ಪ್ರಸಿದ್ಧವಾದುದು.


ಕೈಕೇಯಿಯ ಮೂಲ ಗುಣವೇ ಕ್ರೂರ. ಮಂಥರೆಯ ದುರ್ಬೋಧನೆಯೇ ಕೈಕೇಯಿಯ ಮನಸ್ಸು ಬದಲಾಗುವುದಕ್ಕೆ ಕಾರಣವಾಯಿತು ಎಂಬುದು ಮೇಲ್ನೋಟಕ್ಕೆ ಕಾಣುವ ವಿಷಯ. ಆದರೆ ವಾಲ್ಮೀಕಿ ರಾಮಾಯಣವನ್ನು ಆಳವಾಗಿ ಗಮನಿಸಿದಾಗ 'ಕೈಕೇಯಿಗೆ ಈ ಗುಣ ಅನುವಂಶೀಯವಾಗಿಯೇ ಬಂದಿದೆ' ಎಂಬುದು ತಿಳಿದು ಬರುತ್ತದೆ. ರಾಮನಿಗೆ ಪಟ್ಟಾಭಿಷೇಕ ನಿಶ್ಚಯವಾದ ವಿಷಯವನ್ನು ತಿಳಿದ ಮಂಥರೆ ಅದನ್ನು ಕೈಕೇಯಿಯಲ್ಲಿ ತಿಳಿಸುತ್ತಾಳೆ. ಆಗ ಅವಳ ಮಾತನ್ನು ಕೇಳಿ ತನ್ನ ಮಗನಾದ ಭರತ ಅರಸನಾಗಬೇಕು ಹಾಗೂ ರಾಮ ಕಾಡಿಗೆ ಹೋಗಬೇಕು ಎಂಬ ಎರಡು ವರವನ್ನು ಕೇಳುತ್ತಾಳೆ. ಇದು ನಮಗೆಲ್ಲರಿಗೂ ತಿಳಿದ ವಿಷಯ. ಈ ಸಂದರ್ಭದಲ್ಲಿ ಸುಮಂತ್ರನು ಅತ್ಯಂತ ಕಠೊರವಾದ ಮಾತುಗಳಿಂದ ಕೈಕೇಯಿಯನ್ನು ನಿಂದಿಸುತ್ತಾನೆ. ಆ ಸಂದರ್ಭದಲ್ಲಿ ಒಂದು ಘಟನೆಯನ್ನು ನೆನಪಿಸುತ್ತಾನೆ.


ಕೈಕೇಯಿಯ ತಂದೆಯಾದ ಅಶ್ವಪತಿ ಮಹಾರಾಜನಿಗೆ ಪ್ರಾಣಿ ಪಕ್ಷಿಗಳ ಮಾತನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿತ್ತು… ಅದೊಂದು ದಿನ ರಾತ್ರಿ ಮಲಗಿದ ಸಮಯದಲ್ಲಿ ಕಿಟಕಿಯ ಸಮೀಪ ಬಂದು ಸಂಭಾಷಣೆ ಮಾಡುತ್ತಿದ್ದ,  ರಡು ಹಕ್ಕಿಗಳ ಧ್ವನಿಯನ್ನು ಕೇಳಿ, ಅಶ್ವಪತಿ ಮಹಾರಾಜನು ಜೋರಾಗಿ ನಕ್ಕನು. ಅದನ್ನು ಗಮನಿಸಿದ ಅವನ ಪತ್ನಿ ನಗುವಿನ ಕಾರಣವನ್ನು ಕೇಳುತ್ತಾಳೆ. ಅದಕ್ಕೆ ಅವನು "ಕಾರಣ ಹೇಳಿದರೆ ಪ್ರಾಣ ಹೋಗತ್ತದೆ" ಎಂದು ಹೇಳುತ್ತಾನೆ. ಆಗ "ಪ್ರಾಣ ಹೋದರೂ ಚಿಂತೆ ಇಲ್ಲ ನನಗೆ ಕಾರಣ ಏನು ಎಂದು ತಿಳಿಹು" ಎಂದು ಅಶ್ವಪತಿ ಮಹಾರಾಜನ ಪತ್ನಿ ಹೇಳುತ್ತಾಳೆ. ಈ ಘಟನೆಯನ್ನು ನೆನಪಿಸಿ ಸುಮಂತ್ರನು ಕೈಕೇಯಿಯಲ್ಲಿ ನೀನು ನಿನ್ನ ತಾಯಿಯ ಗುಣವನ್ನೇ ಹೊತ್ತು ತಂದಿರುವೆ ಎಂದು ಹೇಳುತ್ತಾನೆ. ಇಲ್ಲಿ ವಾಲ್ಮೀಕಿಗಳು ಅದ್ಭುತವಾದ ಶ್ಲೋಕವನ್ನು ನೀಡಿದ್ದಾರೆ.

ಆಮ್ರಂ ಛತ್ವಾ ಕುಠಾರೇಣ ನಿಂಬಂ ಪರಿಚರೇತ್ತು ಯಃ|

ಯಶ್ಚೈನಂ ಪಯಸಾ ಸಿಚೇತ್ ನೈವಾಸ್ಯಮಧೂರೋ ಭವೇತ್||

"ಮಾವಿನ ಮರವನ್ನು ಕಡಿದು. ಬೇವಿನ ಮರಕ್ಕೆ ಹಾಲೆರೆದು ಪೋಷಣೆ ಮಾಡಿದರೆ, ಅದರಿಂದ ಬೇವಿನ ಮರದ ಎಲೆಗಳು ಸಿಹಿಯಾಗಲು ಸಾಧ್ಯವೇ?"

ಈ ಮಾತು ಕೈಕೇಯ ಗುಣ ಪರಂಪರಾಗತವಾದುದು. ಮತ್ತು ಅನುವಂಶೀಯ ಗುಣಗಳು ಪ್ರತಿಯೊಬ್ಬನ ಜೀವನದಲ್ಲಿಯೂ ಇರುತ್ತದೆ ಎಂಬುದನ್ನು ತೊರಿಸುತ್ತದೆ.


ತನ್ನ ಹಟವನ್ನು ಬಿಡದೇ ತಾನು ಸಾಧಿಸಿದೆ ಎಂದು ಕೈಕೇಯಿ ಸಂತೋಷಪಟ್ಟರೂ ಸಹ ಆಕೆಯನ್ನು ಇಡೀ ಅಯೋಧ್ಯೆ ನಿಂದಿಸಿತು. ಎಲ್ಲರ ದೃಷ್ಟಿಯಲ್ಲಿ ಆಕೆ ದುಷ್ಟಳಾದಳು.

ಇದು ಕೈಕೇಯಿಯ ಗುಣಧರ್ಮ.

Comments


bottom of page