top of page

ದೇವರ್ಷಿ ನಾರದರು (ಭಾಗ 2)

Updated: Oct 23

ನಾರದರು ನಾರದಿಯಾದ ಕಥೆ

ದೇವರ್ಷಿ ನಾರದರು ಹೆಣ್ಣಾಗಿ ಬದಲಾಗಿ 'ನಾರದಿ'ಯಾಗಿ ಬದುಕಿದ ಕಥೆ ಕೂಡ ಸ್ವಾರಸ್ಯಕರವಾಗಿದೆ. ಒಮ್ಮೆ ನಾರದರು ಶ್ವೇತದ್ವೀಪವನ್ನು ನೋಡಲು ಹೋದರು. ಅಲ್ಲಿ ಮನ್ಮಥನಿಗೂ ಮಿಗಿಲಾದ ನವ ಸೌಂದರ್ಯದಿಂದ ಕೂಡಿದ ಹಲವು ಮಂದಿ ತರುಣರನ್ನು ನೋಡಿದರು. ಆಶ್ಚರ್ಯ ಚಕಿತರಾದ ನಾರದರು ಇವರ ಮಾಯಾ ಸ್ವರೂಪವೇನೆಂದು ವಿವರಿಸಬೇಕೆಂದು ವಿಷ್ಣುವಿನಲ್ಲಿ ಬೇಡಿದರು. ಹರಿಯು ನಾರದರನ್ನು ಗರುಡನ ಮೇಲೆ ಕುಳ್ಳಿರಿಸಿ ಕರೆತಂದು ಕನ್ಯಾಕುಬ್ಜದಲ್ಲಿ ಇಳಿಸಿ ಅಲ್ಲಿರುವ ತಿಳಿನೀರ ಕೊಳದಲ್ಲಿ ಸ್ನಾನಮಾಡೆಂದು ಹೇಳಿ ತಾನು ದಡದ ಮೇಲೆಯೇ ನಿಂತ. ಆ ಕೊಳದಲ್ಲಿ ಸ್ನಾನಮಾಡಿದ ನಾರದರು ಸುಂದರ ತರುಣಿಯಾಗಿಬಿಟ್ಟರು. ವಿಷ್ಣುವು ನಾರದರ ವೀಣಾಕಮಂಡಲಗಳನ್ನು ತೆಗೆದುಕೊಂಡು ಹೊರಟು ಹೋದ. ಅಷ್ಟರಲ್ಲಿ ಕನ್ಯಾಕುಬ್ಜದ ರಾಜನಾದ ಲಾಲಧ್ವಜನ ಕಣ್ಣಿಗೆ ಬಿದ್ದ ನಾರದಿಯು ಅನಾಥೆಯೆಂದು ತಿಳಿದು ಕರೆದೊಯ್ದು ಮದುವೆಯಾದ. ಬಳಿಕ ಅವರಿಗೆ ವೀರವರ್ಮ, ಸುಧನ್ವರೆಂಬ ೨೦ ಮಂದಿ ಮಕ್ಕಳು ಜನಿಸಿದರು. ಹೀಗೆ ನಾರದಿಯಾಗಿ ಬದಲಾದ ನಾರದರು ಪುತ್ರ ಪೌತ್ರಾದಿ ಕುಟುಂಬವನ್ನು ಹೊಂದಿ ಸಂಸಾರಸ್ಥರಾಗಿ ಜೀವಿಸುತ್ತಿದ್ದರು. ಇಂತಿರಲು ವೈರಿಗಳು ಲಾಲಧ್ವಜನ ಮೇಲೆ ದಂಡೆತ್ತಿ ಬಂದಾಗ ನಡೆದ ಯುದ್ಧದಲ್ಲಿ ಪುತ್ರ, ಪರಿವಾರದೊಂದಿಗೆ ಮರಣ ಹೊಂದಿದರು. ಆ ವಾರ್ತೆಯನ್ನು ಕೇಳಿದ ನಾರದಿಯು ರಣರಂಗಕ್ಕೆ ಹೋಗಿ ಗೋಳಾಡುತ್ತಿರುವಾಗ ವಿಷ್ಣುವು ಮುದಿಬ್ರಾಹ್ಮಣರ ವೇಷದಿಂದ ಅಲ್ಲಿಗೆ ಆಗಮಿಸಿದರು. ನಾರದಿಯನ್ನು ಸಂತೈಸಿ ಮಡಿದ ಪತಿ ಪುತ್ರರಿಗೆ ಅವಳ ಕೈಯಿಂದ ತಿಲೋದಕವನ್ನು ಕೊಡಿಸಿ ಪುಣ್ಯತೀರ್ಥಗಳಲ್ಲಿ ಸ್ನಾನಮಾಡಲು ತಿಳಿಸಿದರು. ನಾರದಿಯು ಅಂತಯೇ ಮಾಡಿದಾಗ ತನ್ನ ಸ್ತ್ರೀ ರೂಪವನ್ನು ತೊರೆದು ಮರಳಿ ನಾರದರಾಗಿ ಬದಲಾದರು!



ಪುಣ್ಯಗಳಿಸಬೇಕೆಂಬ ಆಲೋಚನೆ

ಇಂತಹ ಸದಾ ಸಂಚಾರಿ ಆದ ನಾರದರಿಗೆ ಒಮ್ಮೆ ಇನ್ನೂ ಹೆಚ್ಚಿನ ಪುಣ್ಯಗಳಿಸಬೇಕೆಂಬ ಆಲೋಚನೆ ಬಂತು. ಸದಾ ನಾರಾಯಣ ಜಪ ಮಾಡುತ್ತಾ ಸಕಲ ಲೋಕಕ್ಕೂ ಹರಿನಾಮವನ್ನು ಪಸರಿಸುವ ಮೂಲಕ ಪುಣ್ಯವನ್ನೇ ಗಳಿಸುತ್ತಿದ್ದ ನಾರದರಿಗೆ ಹೆಚ್ಚಿನ ಪುಣ್ಯ ಕಾರ್ಯದ ಬಯಕೆ!! ಹಿಂದೊಮ್ಮೆ ದೇವರ್ಷಿ ನಾರದರಿಗೂ ಕಾತ್ಯಾಯನ ಮಹರ್ಷಿಗೂ ನಡುವೆ ವರ್ಣಾಶ್ರಮ ಧರ್ಮಗಳ ಕುರಿತು ಸಂವಾದ ನಡೆಯುತ್ತಿತ್ತು. ಅದರ ಮಧ್ಯೆ ದಾನದ ಮಹತ್ವದ ಕುರಿತು ವರ್ಣನೆಗಳು ಬಂದವು. ಇದನ್ನು ಕೇಳಿದ ನಾರದರಿಗೆ ತಾನು ದಾನದ ಮೂಲಕ ಹೆಚ್ಚಿನ ಪುಣ್ಯಗಳಿಸುವ ಬಯಕೆ ಹುಟ್ಟಿತು. ದಾನಗೈಯ್ಯಲು ದ್ರವ್ಯ ಬೇಕಲ್ಲವೇ! ಯಾರಲ್ಲೂ ಯಾಚನೆ ಮಾಡದೇ ಅವಶ್ಯಕ ದ್ರವ್ಯಗಳನ್ನು ಸಂಪಾದಿಸಲು ನಾರದರು ತೀರ್ಮಾನಿಸಿದರು. ಮಹೀ ಸಾಗರ ಸಂಗಮ ಕ್ಷೇತ್ರದಲ್ಲಿರುವ ಭೃಗು ಮಹರ್ಷಿಯ ಆಶ್ರಮವನ್ನು ಸೇರಿ, ಆ ಪ್ರದೇಶದ ಮಹತ್ವವನ್ನು ತಿಳಿದರು. ಅದರ ಬಳಿಯಲ್ಲಿಯೇ ಅಗ್ರಹಾರವನ್ನು ಕಟ್ಟಿಸಿ ಕೊಡಬೇಕೆಂದು ಬಯಸಿದ ನಾರದರು ಸೌರಾಷ್ಟ್ರ ದೇಶದ ಅರಸನಾದ ಧರ್ಮವರ್ಮ ರಾಜನಲ್ಲಿಗೆ ಬ್ರಾಹ್ಮಣ ವೇಷದಿಂದ ತೆರಳಿದರು. ಆ ರಾಜ ಈಗಾಗಲೇ ದಾನ ವಿಷಯವಾದ ಸಮಸ್ಯಾತ್ಮಕ ಶ್ಲೋಕಗಳಿಗೆ ವಿವರಣೆಯನ್ನು ತಿಳಿಯಲು ಕೋಟಿಗಟ್ಟಲೆ ಬ್ರಾಹ್ಮಣರನ್ನು ಪ್ರಶ್ನಿಸಿದರೂ ಉತ್ತರ ದೊರೆಯದೆ ಯೋಚಿಸುತ್ತಿದ್ದ. ಆಗ ನಾರದರೂ ಅಲ್ಲಿಗೆ ಹೋಗಿ ಆ ಶ್ಲೋಕಗಳ ಅರ್ಥವನ್ನು ವಿವರಿಸಿದಾಗ ಧರ್ಮವರ್ಮನು ಸಂತುಷ್ಟನಾದನು. ನಾರದರಿಗೆ ಅಪಾರವಾದ ದ್ರವ್ಯವನ್ನೂ, ಕ್ರೋಶ ವಿಸ್ತಾರವಾದ ಭೂಮಿಯನ್ನೂ ನೀಡಿದನು. ಅವುಗಳನ್ನು ರಾಜನಲ್ಲಿಯೇ ನ್ಯಾಸವಾಗಿಟ್ಟ ನಾರದರು ದಾನರ್ಹವಾದ ಬ್ರಾಹ್ಮಣರನ್ನು ಹುಡುಕುತ್ತಾ ಮಾನಸ ಸರೋವರದ ಉತ್ತರಕ್ಕೆ ಇರುವ ಕಲಾಪ ಗ್ರಾಮಕ್ಕೆ ಬಂದು, ಅವರ ಯೋಗ್ಯತೆಯನ್ನು ಅರಿಯುವ ಸಲುವಾಗಿ ಪ್ರಶ್ನಿಸಲಾಗಿ ಎಂಟು ವರ್ಷದ ಬಾಲಕನಿಂದ ಸಮರ್ಪಕ ಉತ್ತರ ದೊರೆಯಿತು. ಅಲ್ಲಿಂದ ೨೬ ಸಾವಿರ ಬ್ರಾಹ್ಮಣರನ್ನು ಕರೆತಂದು ಪಾದಪ್ರಕ್ಷಾಲನೆ ಮಾಡಿ ದಾನ ನೀಡಲು ಸಿದ್ಧರಾದರು . ಆಗ ಅಲ್ಲಿಗೆ ಆಗಮಿಸಿದ ಕಪಿಲ ಮಹರ್ಷಿಗಳು ತಾನು ಮಾಡಬೇಕೆಂದಿರುವ ದಾನ ನೀಡಲು ಅವರಲ್ಲಿ ಎಂಟು ಸಾವಿರ ಬ್ರಾಹ್ಮಣರನ್ನು ಕರೆದೊಯ್ದರು. ಉಳಿದ ಬ್ರಾಹ್ಮಣರಿಗೆ ನಾರದರು ದೇವಶಿಲ್ಪಿ ವಿಶ್ವಕರ್ಮನಿಂದ 'ಮಹಿನಗರ'ವೆಂಬ ಸಕಲ ಸಂಪದ್ಭರಿತ ಪಟ್ಟಣವನ್ನು ನಿರ್ಮಿಸಿ ಧನ, ಧಾನ್ಯ, ಬೆಳ್ಳಿ, ಬಂಗಾರ, ಸಹಿತವಾಗಿ ದಾನ ರೂಪದಲ್ಲಿ ನೀಡಿ ತಮ್ಮ ಸಂಕಲ್ಪವನ್ನು ಈಡೇರಿಸಿಕೊಂಡರು.


ನಾರದರ ಪ್ರಸಿದ್ಧ ಸಂವಾದಗಳು

ನಾರದ ಮಹರ್ಷಿಗಳ ಜ್ಞಾನ, ಧರ್ಮ, ಚಿಂತನೆಯ ಆಳ ಅನೇಕ ಸಂದರ್ಭಗಳಲ್ಲಿ ಕಂಡು ಬರುತ್ತದೆ. ಸಮಂಗ ಮುನಿಯೊಂದಿಗೆ ಸುಖದುಃಖಾದಿಗಳಿಂದ ನಿವೃತ್ತಿ ಮಾರ್ಗದ ಕುರಿತು ಸಂವಾದ, ಗಾಲವ ಮುನಿಯೊಂದಿಗೆ ಮುಕ್ತಿ ಮಾರ್ಗದ ಕುರಿತು, ಶುಕ ಮುನಿಗೆ ಮೋಕ್ಷ ಸಾಧನೆಯ ಉಪದೇಶ, ಸನತ್ಕುಮಾರ ಮಹರ್ಷಿಯೊಂದಿಗೆ ಭೂತ ಸೃಷ್ಟಿಯ ಕುರಿತಾಗಿ, ಮಾರ್ಕಂಡೇಯರೊಂದಿಗೆ ಸ್ತ್ರೀಯರ ಪಾತಿವ್ರತ್ಯ ಹಾಗೂ ಯುಗಧರ್ಮಗಳ ಬಗ್ಗೆ, ಸ್ತ್ರೀಯರ ಸ್ವಭಾವದ ಕುರಿತು ಪಂಚಚೂಡೆಯೆಂಬ ಆಪ್ಸರ ಸ್ತ್ರೀಯೊಂದಿಗೆ, ಪುಂಡರೀಕನೊಂದಿಗೆ ನಾರಾಯಣನೇ ಸರ್ವೋತ್ತಮ ಎಂಬ ಕುರಿತು, ದೇವತ ಮುನಿಯೊಂದಿಗೆ ಸೃಷ್ಟಿ ವಿಚಾರವಾಗಿ, ವ್ಯಾಸರಿಗೆ ಹರಿಕೀರ್ತನೆಯೇ ಶ್ರೇಷ್ಠವೆಂದು ಹೀಗೆ ಮಹಾ ಜ್ಞಾನಿಗಳು, ತಪಸ್ವಿಗಳೂ ಆದವರ ಜೊತೆಯಲ್ಲಿ ಸಂವಾದಗಳನ್ನು ನಡೆಸಿ ಲೋಕಕ್ಕೆ ಜ್ಞಾನ ಮಾರ್ಗವನ್ನು ಪ್ರಚುರಪಡಿಸಿದವರು ನಾರದರು. ಹಾಗೆಯೇ ಲೋಕಕಂಟಕರಾಗಿ ಮೆರೆಯುತ್ತಿದ್ದ ದಾನವರನ್ನು ಯುದ್ಧಕ್ಕೆ ಎತ್ತಿ ಕಟ್ಟಿ ಅವರ ನಾಶಕ್ಕೆ ಕಾರಣರಾಗಿ ಜಗತ್ತಿನಲ್ಲಿ ಸುಭಿಕ್ಷೆ ನೆಲೆಸುವಲ್ಲಿ ನಾರದರ ಪಾತ್ರ ಸಾಕಷ್ಟು ಬಾರಿ ಕಂಡು ಬರುತ್ತದೆ. ತ್ರಿಪುರಾಸುರರ ಸಂಹಾರ, ಮಧುಕೈಠಭರ ವಧೆ, ಹಿರಣ್ಯ ಕಶಪು ಹೀಗೆ ಬಹಳಷ್ಟು ದಾನವರ ಸಂಹಾರದಲ್ಲಿ ನಾರದರ ಸೊಗಸಾದ ಮಾತುಗಾರಿಕೆ ಪ್ರಯೋಜನಕಾರಿಯಾಗಿದೆ. ಅಲ್ಲದೆ ರಾಮಾಯಣದಲ್ಲಿ ಕೆಲವು ಸಂದರ್ಭಗಳಲ್ಲಿ ದೇವರ್ಷಿಗಳ ಉಪಸ್ಥಿತಿ ಕಾಣುತ್ತದೆ.


ರಾಮಾಯಣ - ಮಹಾಭಾರತದಲ್ಲಿ ನಾರದರು

ಶ್ರೀರಾಮನ ಆಡಳಿತದಲ್ಲಿ ಬ್ರಾಹ್ಮಣನ ಮಗನೊಬ್ಬ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಾನೆ. ಅವನ ಶವವನ್ನು ಎತ್ತಿಕೊಂಡು ಅರಮನೆಯ ಮುಂದೆ ಹಾಕಿ ರಾಮನನ್ನು ಕುರಿತು ಆ ಬ್ರಾಹ್ಮಣನು ದೂರುತ್ತಾನೆ. ಅಂತ ಸಂದರ್ಭದಲ್ಲಿ ನಾರದರು ಅಲ್ಲಿ ಬಂದು ರಾಮನಿಗೆ ಯುಗಧರ್ಮದ ಕುರಿತು ತಿಳಿಹೇಳುತ್ತಾರೆ.


ಮಹಾಭಾರತದಲ್ಲಂತೂ ನಾರದರ ಪಾತ್ರ ಅನೇಕ ಕಡೆ ಹಾಸುಹೊಕ್ಕಾಗಿದೆ. ಮನುಷ್ಯತ್ವದ ಗುಣಧರ್ಮಗಳ ಕುರಿತು ಶ್ರೀಕೃಷ್ಣನೊಂದಿಗೆ ಸಂವಾದ ಎಲ್ಲರಿಗೂ ಅರಿತುಕೊಳ್ಳಬೇಕಾದ ವಿಷಯಗಳನ್ನು ಹೊಂದಿದೆ. ಕೃಷ್ಣನ ಮಹಿಮೆಯನ್ನು ತಿಳಿಯಲು ನಾರದರು ದ್ವಾರಕೆಯ ಪ್ರತಿ ಮನೆಯನ್ನೂ ಹೊಕ್ಕುತ್ತಾರೆ. ಎಲ್ಲ ಮನೆಯಲ್ಲೂ ಕೃಷ್ಣನು ಬೇರೆ ಬೇರೆ ಅರಸಿಯರೊಂದಿಗೆ ಸಂಸಾರ ಸಾಗಿಸುತ್ತಾ, ನಾರದರಿಗೆ ದರ್ಶನವನ್ನು ಕೊಡುತ್ತಾನೆ. ಅಚ್ಚರಿಯಿಂದ ನೋಡಿದ ನಾರದರು ಶ್ರೀಕೃಷ್ಣನು ಎಂತಹ ಸರ್ವಾಂತರ್ಯಾಮಿ ಎಂಬ ಮಹಿಮೆಯನ್ನು ತಿಳಿದು ಕೊಂಡಾಡುತ್ತಾರೆ. ಧರ್ಮವೇ ಮೂರ್ತಿವೆತ್ತಂತಿದ್ದ ಯುಧಿಷ್ಠಿರನಿಗೆ ಸಾಕಷ್ಟು ಬಾರಿ ಧರ್ಮಮಾರ್ಗದ ಕುರಿತು ಉಪದೇಶ ಮಾಡುವಲ್ಲಿ ನಾರದರ ಉಪಸ್ಥಿತಿಯನ್ನು ಸಾಕಷ್ಟು ಬಾರಿ ಕಾಣುತ್ತೇವೆ. ಯುಧಿಷ್ಠಿರನಿಗೆ ದಿತಿ ವಂಶದ ವರ್ಣನೆಯನ್ನೂ, ವರ್ಣಾಶ್ರಮ ಧರ್ಮವನ್ನೂ, ಮೋಕ್ಷಲಕ್ಷಣಗಳನ್ನೂ ವಿವರಿಸುತ್ತಾನೆ. ಪಾಂಡವರು ದ್ರೌಪದಿ ಸ್ವಯಂವರದ ನಂತರ ವಾರಣಾವತದಲ್ಲಿ ವಾಸಿಸುತ್ತಿರುವಾಗ ಅಲ್ಲಿ ನಾರದರ ಆಗಮನವಾಗುತ್ತದೆ. ಪಾಂಡವರಿಗೆ ಸುಂದೋಪಸುಂದರ ಕತೆಯನ್ನು ಹೇಳಿ ಸ್ತ್ರೀಯೊಬ್ಬಳಿಂದ ಕಲಹ ಹೇಗೆ ಎದುರಾಗಬಹುದೆಂಬ ಬಗ್ಗೆ ತಿಳಿ ಹೇಳುತ್ತಾರೆ. ಹಾಗೆಯೇ ದ್ರೌಪದಿಯನ್ನು ಐವರು ಪಾಂಡವರು ವರಿಸಿದ್ದರಿಂದ, ಪ್ರತಿಯೊಬ್ಬರೂ ಒಂದು ವರ್ಷದ ಕಾಲ ಅವಳೊಡನೆ ಸಂಸಾರ ನಡೆಸಬೇಕೆಂದೂ, ಇದಕ್ಕೆ ತಪ್ಪಿದಂತಹವರು ಹನ್ನೆರಡು ವರ್ಷದ ತೀರ್ಥಾಟನೆಯನ್ನು ಮಾಡಬೇಕೆಂದೂ ನಿಯಮವನ್ನು ವಿಧಿಸಿದವರು ನಾರದರೇ. ಇದರ ಪರಿಣಾಮ ಅರ್ಜುನನು ಒಂದು ವರ್ಷ ತೀರ್ಥಾಟನೆಗೈಯಬೇಕಾಗಿ ಬಂದ ಕಥೆಯಂತೂ ನಮಗೆಲ್ಲ ತಿಳಿದಿರುವಂತದ್ದೇ. ಆಮೇಲೆ ಪಾಂಡವರು ಇಂದ್ರಪ್ರಸ್ಥದಲ್ಲಿ ರಾಜ್ಯವಾಳುವಾಗ, ಅಲ್ಲಿಗೆ ಬಂದು, ಅವರ ಮಯನಿರ್ಮಿತ ಭವ್ಯಸಭೆಯನ್ನು ಗಮನಿಸಿ, ಅಷ್ಟದಿಕ್ಪಾಲಕರ ಸಭೆಯನ್ನು ವರ್ಣಿಸಿದರು. ಅಲ್ಲದೆ ಸ್ವರ್ಗದಲ್ಲಿ ಪಾಂಡುರಾಜನ ಸ್ಥಿತಿಯನ್ನು ವರ್ಣಿಸಿ ರಾಜಸೂಯ ಯಾಗವನ್ನು ಮಾಡಲು ತಿಳಿಸಿ, ಅದರ ಫಲವನ್ನು ಪಾಂಡುರಾಜನಿಗೆ ಉಣಬಡಿಸಿ, ಅವನಿಗೆ ಸದ್ಗತಿಯನ್ನು ದೊರಕಿಸಿಕೊಡಲು ಪ್ರೇರೇಪಿಸಿದರು . ಪಾಂಡವರು ಜೂಜಿನಲ್ಲಿ ರಾಜ್ಯವನ್ನು ಕಳೆದುಕೊಂಡು ಕಾಮ್ಯಕವನದಲ್ಲಿ ವಾಸಿಸುತ್ತಿರುವಾಗ, ಶ್ರೀಕೃಷ್ಣ ಸತ್ಯಭಾಮೆಯರೊಂದಿಗೆ ಅಲ್ಲಿಗೆ ಬಂದಿರುವಾಗ, ನಾರದರು ಮಾರ್ಕಂಡೇಯರೊಂದಿಗೆ ಆಗಮಿಸಿ ಯುಧಿಷ್ಠಿರನನ್ನು ಸಂತೈಸುತ್ತಾರೆ. ಮಹಾಭಾರತ ಸಂಗ್ರಾಮದ ನಂತರ ಯುಧಿಷ್ಠಿರನು ತನ್ನ ಜ್ಞಾತಿಬಾಂಧವರಿಗೆ ಉತ್ತರಕ್ರಿಯೆಯನ್ನು ಮಾಡುವಾಗ, ಕರ್ಣನ ಜನ್ಮವೃತ್ತಾಂತವನ್ನು ಅವನಿಗೆ ತಿಳಿಸಿ, ಕರ್ಣನಿಗೂ ಅಂತ್ಯಕ್ರಿಯೆ ನೆರವೇರಿಸಲು ಕಾರಣರಾದರು. ದೃತರಾಷ್ಟ್ರ ಆಶ್ರಮದಲ್ಲಿ ವಾಸಿಸುತ್ತಿರುವಾಗ ಅವನಿಗೆ ಮುಂದಣ ಫಲವನ್ನು ತಿಳಿಸಿ ಮೋಕ್ಷಮಾರ್ಗವನ್ನು ಬೋಧಿಸಿದರು ಹಾಗೆಯೇ ಲೋಕದಾದ್ಯಂತ ಸಂಚರಿಸಿ ಮಹಾಭಾರತ ಕತೆಯನ್ನು ಎಲ್ಲಾ ಕಡೆ ಪ್ರಚಾರ ಮಾಡಿ, ಅದರ ತಿರುಳನ್ನು ಎಲ್ಲರಿಗೂ ಉಣಬಡಿಸಿದರು.


ಇನ್ನು ನಾರದರ ಪಾತ್ರವೂ ಯಕ್ಷಗಾನದ ಪ್ರಸಂಗಗಳಲ್ಲಿ ಬಹುತೇಕ ಎಲ್ಲಾ ಕಡೆ ಸಂದರ್ಭಕ್ಕೆ ಉಚಿತವಾಗಿ ಬಂದು ಹೋಗುತ್ತದೆ. ನುರಿತ ಮಾತುಗಾರನಾಗಿ, ತಂತ್ರಗಾರನಾಗಿ, ಹರಿಭಕ್ತನಾಗಿ ಹಾಗೆಯೇ ಕೆಲವು ಕಡೆ ಹಾಸ್ಯಭರಿತವಾಗಿಯೂ ಅವರನ್ನು ಚಿತ್ರಿಸಲಾಗಿದೆ. ಯಾವುದೇ ಒಂದು ಯುದ್ಧವನ್ನು ಗಂಟಿಕ್ಕುವಲ್ಲಿಯೂ, ಯುದ್ಧದ ಕೊನೆಯಲ್ಲಿ ಈರ್ವರಿಗೂ ಸಂಧಾನವೇರ್ಪಡಿಸುವಲ್ಲಿಯೂ, ನಾರದರನ್ನು ಬಳಸಿಕೊಳ್ಳಲಾಗಿದೆ. ಅನೇಕ ಕತೆಗಳಲ್ಲಿ ಭಕ್ತಿ ಮಾರ್ಗವನ್ನು ಬೋಧಿಸುವಲ್ಲಿ ಕೂಡ ನಾರದರ ಪ್ರವೇಶವಾಗುತ್ತದೆ. ಗಯಚರಿತ್ರೆಯಲ್ಲಿ ಕೃಷ್ಣ ಅರ್ಜುನರ ನಡುವೆಯೇ ವೈರತ್ವ ತಂದಿಕ್ಕಿದ್ದು ಒಂದು ಉದಾಹರಣೆಯಷ್ಟೆ! ಭಕ್ತಪ್ರಹ್ಲಾದ, ಮಾರುತಿ ಪ್ರತಾಪ, ದಕ್ಷಯಜ್ಞ, ಕಂಸ ದಿಗ್ವಿಜಯ, ಭೀಷ್ಮ ವಿಜಯ, ಜಾಂಬವತಿ ಕಲ್ಯಾಣ, ಕೃಷ್ಣ ಜನ್ಮ, ಶ್ರೀಮತಿ ಪರಿಣಯ ಹೀಗೆ ಹೆಸರಿಸುತ್ತ ಹೋದರೆ, ಬಹುತೇಕ ಪ್ರಸಂಗಗಳಲ್ಲಿ ಒಂದಿಲ್ಲೊಂದು ಕಡೆ ನಾರದರ ಪಾತ್ರ ಬಂದೇ ಬರುತ್ತದೆ. ಪಾತ್ರವನ್ನು ನಿರ್ವಹಿಸುವ ಕಲಾವಿದನ ಸಾಮರ್ಥ್ಯಕ್ಕೆ ಅನುಗುಣವಾಗಿ ಆ ಪಾತ್ರವನ್ನು ಬಳಸಿಕೊಳ್ಳುತ್ತಾರೆ.


ಇಂತಹ ನಾರದರ ಕುರಿತಾಗಿ ಒಂದು ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸುವುದು ಅಸಾಧ್ಯವಾದ ಮಾತು!! ಅವರ ವ್ಯಕ್ತಿತ್ವದ ಕುರಿತಾದ ಒಂದು ಪಕ್ಷಿ ನೋಟವನ್ನು ಮಾಡಬಹುದಷ್ಟೇ! ವೇದಗಳು, ಪುರಾಣಗಳು ಪ್ರತಿಯೊಂದೂ ಗ್ರಂಥಗಳಲ್ಲೂ ಕೂಡ ನಾರದರ ಕುರಿತು ಸಾಕಷ್ಟು ವಿಸ್ತರವಾಗಿಯೇ ವಿವರಣೆಗಳು ಬಂದಿವೆ. ಇನ್ನೂ ಹೆಚ್ಚಿನದಾಗಿ, ಸಂಪೂರ್ಣವಾಗಿ ದೇವರ್ಷಿ ನಾರದರನ್ನು ವರ್ಣಿಸಬೇಕೆಂದರೆ ಅದು ಆ ಶ್ರೀಮನ್ನಾರಾಯಣನನಿಂದಲೇ ಸಾಧ್ಯವಾಗಬಹುದು!

Comments


bottom of page