top of page

ಸುಕೃಷ ಮಹರ್ಷಿಯ ಶಾಪ: ಸತ್ವ ಪರೀಕ್ಷೆ

ಸುಕೃಷರಿಗೆ ನಾಲ್ವರು ಮಕ್ಕಳು. ಅವರು ವಿನಯ-ಆಚಾರ-ಭಕ್ತಿ ಹಾಗೂ ನಮ್ರತೆಯಿಂದ ಕೂಡಿದವರಾಗಿ, ತಂದೆಯ ಸೇವೆಯಲ್ಲಿಯೇ ಇದ್ದರು. ಇಂದ್ರಿಯನಿಗ್ರಹಿಗಳಾಗಿ ಕಠಿಣ ತಪಶ್ಚರ್ಯೆಯಲ್ಲಿ ತೊಡಗಿದ ಸುಕೃಷರ ಅಭಿಲಾಷೆಯಂತೆ ಅಗತ್ಯ ವಸ್ತುಗಳನ್ನು, ಸಮಿತ್ತು,‌ ಪುಷ್ಪ, ಕಂದ ಮೂಲಾದಿ ಭೋಜನ ಸಾಮಗ್ರಿಗಳನ್ನೂ ತಂದುಕೊಡುತ್ತಿದ್ದರು.

ಹೀಗಿರುವಾಗ ಒಮ್ಮೆ ದೊಡ್ಡದಾದ ಜೀರ್ಣವಾದ ದೇಹವುಳ್ಳ ಪಕ್ಷಿಯು ಅಲ್ಲಿಗೆ ಬಂದಿತು. ಅದರ ರೆಕ್ಕೆಗಳೆಲ್ಲ ಕಿತ್ತು ಹೋಗಿದ್ದಿತು. ನೇತ್ರಗಳು ತಾಮ್ರವರ್ಣವಾಗಿದ್ದಿತು. ಮುಪ್ಪಿನಿಂದ ದೇಹವು ಶಿಥಿಲವಾಗಿತ್ತು. ಹೀಗೆ ಬಂದ ಪಕ್ಷಿಯು ಸುಕೃಷರನ್ನು ಕುರಿತು, "ಎಲೈ ವಿಪ್ರಶ್ರೇಷ್ಠನೇ! ನಾನು ಬಹು ಹಸಿವೆಯಿಂದ ಬಳಲಿದ್ದೇನೆ. ನನ್ನನ್ನು ನೀನೇ ರಕ್ಷಿಸಬೇಕು. ಭೋಜನದ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ. ವಿಂಧ್ಯಪರ್ವತದ ಶಿಖರದಲ್ಲಿ ವಾಸಿಸುತ್ತಿದ್ದ ನಾನು, ಯಾವುದೋ ಒಂದು ಪ್ರಬಲವಾದ ಪಕ್ಷಿಯ ರೆಕ್ಕೆಗಳಿಂದ ಎದ್ದ ಅತಿವೇಗವಾದ ಗಾಳಿಯಿಂದ ಗಿರಿಶಿಖರದಿಂದ ಕೆಳಗೆ ಬಿದ್ದೆನು. ಹಾಗೆ ಬಿದ್ದ ನಾನು ಮೂರ್ಛೆಯನ್ನು ಹೊಂದಿ, ಏಳು ದಿನ ಅಲ್ಲಿಯೇ ಬಿದ್ದಿದ್ದು ಎಂಟನೆಯ ದಿನ ಹೇಗೋ ಪ್ರಜ್ಞೆಯನ್ನು ಪಡೆದೆನು. ಹಸಿವನ್ನು ತಾಳಲಾರದೇ ನನ್ನನ್ನು ದುಃಖಿತನಾಗಿದ್ದೇನೆ. ನನ್ನ ಪ್ರಾಣವನ್ನು ಉಳಿಸಲು ಸಾಕಾಗುವಷ್ಟು ಆಹಾರವನ್ನು ನೀಡಿರಿ!" ಎಂದು ಪ್ರಾರ್ಥಿಸಿತು.


ಇದನ್ನು ಕೇಳಿದ ಸುಕೃಷ ಮಹರ್ಷಿಯು ಆ ಪಕ್ಷಿಗೆ, "ಖಗನೇ! ನಿನಗೆ ಪ್ರಿಯವಾದ ಆಹಾರ ಯಾವುದು ಹೇಳು! ಅದನ್ನೇ ನಾನು ನಿನಗಾಗಿ ನೀಡುತ್ತೇನೆ" ಎಂದು ಹೇಳಿದರು. ಅದಕ್ಕೆ ಆ ಪಕ್ಷಿಯು ನುಡಿಯಿತು, "ನರಮಾಂಸೇನ ತೃಪ್ತಿರ್ಭವತಿ ಮೇ ಪರಾ! ಎಲ್ಲಾ ಆಹಾರಕ್ಕಿಂತಲೂ ನರಮಾಂಸಾಹಾರದಿಂದ ನನಗೆ ಅತ್ಯುತ್ತಮ ತೃಪ್ತಿಯುಂಟಾಗುವುದು!"


ಇದನ್ನು ನೋಡಿದರೆ ಆ ಪಕ್ಷಿಯು ಸಾಮಾನ್ಯ ಪಕ್ಷಿಯಾಗಿರಲಿಕ್ಕಿಲ್ಲ. ಯಾವುದೋ ಉದ್ದೇಶ ಹೊತ್ತು ಬಂದ, ಪಕ್ಷಿ ವೇಷ ಧರಿಸಿದ ಯಾರೋ ಇದ್ದಿರಬೇಕು.


ಈ ಮಾತನ್ನು ಕೇಳಿ ಮಹರ್ಷಿಯು, "ಖಗನೇ! ನೀನು ಕೌಮಾರಾವಸ್ಥೆಯನ್ನು ಮುಗಿಸಿ ಯೌವನಾವಸ್ಥೆಯನ್ನೂ ಕಳೆದಿರುವೆ. ಈಗಾಗಲೇ ಮುಪ್ಪು ನಿನ್ನನ್ನು ಆವರಿಸಿದೆ. ಈ ವೃದ್ಧಾಪ್ಯದಲ್ಲೂ ಸಹ ನೀನು ನರಭಕ್ಷಕನಾಗಿರಲು ಕಾರಣವೇನು?! ಸಮಸ್ತ ಜೀವಿಗಳಿಗೆ ವೃದ್ಧಾಪ್ಯದಲ್ಲಿ ಆಶೆಯು ಸಂಪೂರ್ಣವಾಗಿ ಅಡಗಿಹೋಗುವುದು. ನೀನು ಮಾತ್ರ ಕ್ರೂರಸ್ವಭಾವವುಳ್ಳವನಾಗಿ ಏಕೆ ಇದ್ದೀಯೆ? ಕ್ರೂರ ಸ್ವಭಾವದ ಪ್ರಾಣಿಗಳಿಗೆ ಎಂದಿಗೂ ಶಾಂತಿಯು ಉಂಟಾಗುವುದೆಂದು ಅನಿಸುತ್ತದೆ." ಎಂದು ಕೇಳಿದವರೇ ಮರುಕ್ಷಣದಲ್ಲಿಯೇ ಹೀಗೆ ಯೋಚಿಸಿದರು~ "



'ಅಥವಾ ಇದೆಲ್ಲ ನನಗೇಕೆ? ಈಗ ಮಾತಾಡಿ ಏನೂ ಪ್ರಯೋಜನವಿಲ್ಲ. ಒಪ್ಪಿಕೊಂಡದ್ದನ್ನು ಕೋಡಲೇಬೇಕು.' ಹೀಗೆ ಯೋಚಿಸಿದ ಅವರು ತಮ್ಮ ನಾಲ್ವರು ಮಕ್ಕಳನ್ನು ಕುರಿತು ಹೇಳಿದರು, "ಮಕ್ಕಳೇ! ಜನಕನನ್ನು ಸರ್ವೋತ್ತಮ ಗುರುವೆಂದು ಹೇಳುತ್ತಾರೆ. ನನ್ನಲ್ಲಿ ನಿಮಗೆ ಪೂಜ್ಯಭಾವವಿದ್ದರೆ, ಈ ಮುಂದೆ ಹೇಳುವ ನನ್ನ ಮಾತನ್ನು ನಡೆಸಿರಿ." ಎಂದರು.


ಅದಕ್ಕೆ ಆ ನಾಲ್ವರು ಮಕ್ಕಳು ಅದಕ್ಕೆ ಹಾಗೆಯೇ ಆಗಲಿ ಎಂದರು. ಆಗ ಮುನಿವರ್ಯರು, "ಈ ಪಕ್ಷಿಯು ಹಸಿವು ಬಾಯಾರಿಕೆಯಿಂದ ನನ್ನನ್ನು ಶರಣು ಹೊಂದಿದೆ. ನಿಮ್ಮ ಮಾಂಸವನ್ನು ಕೊಟ್ಟು ಕ್ಷಣಕಾಲ ಈ ಪಕ್ಷಿಯನ್ನು ತೃಪ್ತಿಪಡಿಸಿರಿ. ಮಾಂಸಭಕ್ಷಣದ ನಂತರ ನೀರಡಿಕೆಯನ್ನು ನೀಗಿಸಲು ರಕ್ತವನ್ನೂ ನೀಡಿರಿ. ಇದು ನನ್ನ ಬಯಕೆಯಾಗಿದೆ" ಎಂದರು.


ಇದನ್ನು ಕೇಳಿದ ಆ ನಾಲ್ವರು ಮಕ್ಕಳು ಬಹಳ ದುಃಖಿತರಾಗಿ ಭಯದಿಂದ ನಡುಗಲಾರಂಭಿಸಿದರು. ಉತ್ತರವಾಗಿ, "ಅಯ್ಯೋ! ಇದು ನಮಗೆ ಕಷ್ಟಸಾಧ್ಯವಾದ ಕೆಲಸವಾಗಿದೆ. ಬೇರೊಂದು ಪ್ರಾಣಿಯನ್ನು ಉಳಿಸುವ ಸಲುವಾಗಿ ಯಾವ ಪ್ರಾಜ್ಞನು ತಾನೇ ತನ್ನ ಶರೀರವನ್ನು ಕಳೆದುಕೊಳ್ಳಲು ಮುಂದಾಗುತ್ತಾನೆ? ನಾವು ನಿನಗೆ ಆತ್ಮಭೂತರೇ ಹೌದು. ಆದರೆ ಪಿತೃಋಣದಿಂದ ಮುಕ್ತನಾಗುವುದಕ್ಕೆ ದೇಹವನ್ನೇ ನಾಶ ಮಾಡಿಕೊಳ್ಳಬೇಕಾಗಿಲ್ಲ. ಈ ಆಚರಣೆಯು ಹಿಂದೆಂದೂ ಆಚರಿಸಲ್ಪಡಲೂ ಇಲ್ಲ. ಜೀವಂತವಿದ್ದರೆ ಎಂತಹ ಪುಣ್ಯವನ್ನಾದರೂ ಆರ್ಜಿಸಬಹುದು. ಆದರೆ ಮರಣ ಹೊಂದಿದವನ ಶರೀರ ನಾಶವಾಗುತ್ತಿದ್ದಂತೆ ಅವನ ಧರ್ಮಾಚರಣೆಗಳೂ ಸಮಾಪ್ತವಾಗುತ್ತದೆ. ಆದ್ದರಿಂದ ಧರ್ಮಾಚರಣೆಗಾಗಿ ಶರೀರವನ್ನು ಉಳಿಸಿಕೊಳ್ಳಲೇಬೇಕು. ಹಾಗಾಗಿ ನಾವು ಈ ಕಾರ್ಯವನ್ನು ಮಾಡುವುದಕ್ಕೆ ಸಿದ್ಧರಿಲ್ಲ" ಎಂದು ಆಡಿಬಿಟ್ಟರು.


ಈ ಮಾತಿನಿಂದ ಕುಪಿತಗೊಂಡ ಮುನಿಗಳು, "ಯಾವ ಕಾರಣದಿಂದ ನಾನು ಪ್ರತಿಜ್ಞೆ ಮಾಡಿ ಒಪ್ಪಿಕೊಂಡ ಮಾತನ್ನು ನೀವು ನಡೆಸಿಕೊಡಲಿಲ್ಲವೋ ಅದಕ್ಕಾಗಿ ನನ್ನ ಶಾಪಾಗ್ನಿಯಿಂದ ದಗ್ಧರಾಗಿ ನೀವು ಮೂಕಪ್ರಾಣಿ ಜನ್ಮವನ್ನು ಹೊಂದುವಿರಿ." ಎಂದು ಶಪಿಸಿಯೇಬಿಟ್ಟರು.


ಹೀಗೆ ಆ ನಾಲ್ವರು ಮಕ್ಕಳು ಪಕ್ಷಿಗಳಾಗಿ ಜನಿಸಿದರು.


ಆಮೇಲೆ ಸುಕೃಷರು ತಮ್ಮ ಆತ್ಮಕ್ಕೆ ತಾವೇ ಅಂತ್ಯೇಷ್ಟಿಯೇ ಮುಂತಾದ ಶಾಸ್ತ್ರೀಯ ಔರ್ಧ್ವದೈಹಿಕ ಸಂಸ್ಕಾರಗಳನ್ನು ವಿಧಿಪೂರ್ವಕವಾಗಿ ಮುಗಿಸಿಕೊಂಡು, ಆಗಮಿಸಿದ್ದ ಪಕ್ಷಿಯನ್ನು ಕುರಿತು ಹೇಳಿದರು, "ನೀನು ನನ್ನನು ನೆಮ್ಮದಿಯಿಂದ ಭಕ್ಷಿಸು. ನಿನ್ನ ಆಹಾರವಾಗಿ ನಾನು ನಿನಗೆ ದೇಹವನ್ನು ಅರ್ಪಿಸುತ್ತಿದ್ದೇನೆ. ಸತ್ಯವಚನವನ್ನು ಪಾಲಿಸುವುದೇ ಬ್ರಾಹ್ಮಣನಲ್ಲಿರುವ ಬ್ರಾಹ್ಮಣತ್ವ ಎಂದು ಪ್ರಾಜ್ಞರು ಆಡಿದ್ದಾರೆ. ಹಾಗಾಗಿ ನನ್ನನ್ನು ಭಕ್ಷಿಸು"


ಈ‌ ಮಾತನ್ನು ಕೇಳಿದ ಪಕ್ಷಿಯು, "ವಿಪ್ರೋತ್ತಮನೇ! ಕೂಡಲೇ ಯೋಗಕ್ರಿಯೆಯಿಂದ ಸಮಾಧಿರೂಪವನ್ನು ಧರಿಸು. ನಾನು ಜೀವಂತವಿರುವ ಪ್ರಾಣಿಯನ್ನು ಯಾವಾಗಲೂ ತಿನ್ನುವುದಿಲ್ಲ" ಎಂದು ಹೇಳಿತು. ತಕ್ಷಣವೇ ಮುನಿಯು ಸಮಾಧಿಯನ್ನು ಹೊಂದಲನುವಾದರು. ಇದನ್ನು ನೋಡಿದ ಪಕ್ಷಿಯು ತನ್ನ ನಿಜರೂಪವನ್ನು ಧರಿಸಿತು.


ಈ ಪಕ್ಷಿರೂಪದಲ್ಲಿದ್ದವನು "ದೇವೇಂದ್ರ". ಸುಕೃಷರ ನಾಲ್ಕು ಮಕ್ಕಳು, ಶಮೀಕರ ಆಶ್ರಮದಲ್ಲಿರುವ ಪಕ್ಷಿಗಳಾಗಿ ಜನ್ಮ ತಳೆಯುವುದಕ್ಕೆ ಕಾರಣ.. ಪಕ್ಷಿರೂಪ ಧರಿಸಿ ಬಂದಿದ್ದ "ದೇವೇಂದ್ರ".


ಇಂದ್ರನು ಮುನಿವರ್ಯನ ಕುರಿತು, " ತತ್ತ್ವಜ್ಞನೇ! ಎಚ್ಚರ ಹೊಂದು. ನಾನು ನಿನ್ನನ್ನು ಪರೀಕ್ಷಿಸಲು ಬಂದು ಈ ಅಪರಾಧವನ್ನೆಸಗಿದ್ದೇನೆ. ನನ್ನ ಈ ಅಪರಾಧವನ್ನು ಕ್ಷಮಿಸು. ನಿನ್ನ ಇಷ್ಟಾರ್ಥವೇನೆಂದು ಹೇಳು. ಇಂದಿನಿಂದ ನಿನಗೆ ಇಂದ್ರವಿದ್ಯಾಸಿದ್ಧಿಯು ಪ್ರಾಪ್ತವುಗುವುದು. ನಿನ್ನ ತಪಸ್ಸಿಗೆ, ಧರ್ಮಾನುಷ್ಟಾನಕ್ಕೆ ಯಾವುದೇ ವಿಘ್ನವಾಗುವುದಿಲ್ಲ." ಎಂದನು. ಹೀಗೆ ಹೇಳಿ ಇಂದ್ರನು ಹೊರಟು ಹೋದನು.


ಆಗ ನಾಲ್ವರು ಮಕ್ಕಳು ನತಮಸ್ತಕರಾಗಿ ಸುಕೃಷ ಮಹರ್ಷಿಯ ಎದುರು ನಿಂತು ಪ್ರಾರ್ಥಿಸಿದರು. ಶಾಪವಿಮೋಚನೆಗಾಗಿ ಕೇಳಿಕೊಂಡರು. ಆದರೆ ಕೊಟ್ಟ ಶಾಪವನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಮಹರ್ಷಿಗಳು ಮಕ್ಕಳಿಗೆ 'ಪಕ್ಷಿಗಳಾದರೂ ಉತ್ತಮ ಜ್ಞಾನವುಂಟಾಗಲಿ' ಎಂದು ಅನುಗ್ರಹಿಸಿದರು.



ಹೀಗೆ ಶಪಿಸ್ಪಟ್ಟು ಜನಿಸಿದ ಪಕ್ಷಿಗಳೇ... ರಣಾಂಗಣದಲ್ಲಿ ಶಮೀಕ ಮಹರ್ಷಿಗಳಿಗೆ ಸಿಕ್ಕಿದ ಶಿಶುಪಕ್ಷಿಗಳು. ಅವುಗಳು ಶಮೀಕ ಮಹರ್ಷಿಯ ಅನುಮತಿಯನ್ನು ಪಡೆದು ವೃಕ್ಷದಿಂದ ವೃಕ್ಷಕ್ಕೆ ಹಾರುತ್ತಾ, ಸ್ವಚ್ಛಂದವಾಗಿ ವಿಹರಿಸುತ್ತಾ, ಪವಿತ್ರವಾದ ತೀರ್ಥೋದಕವುಳ್ಳ ವಿಂಧ್ಯಗಿರಿಶಿಖರದಲ್ಲಿರುವ ಗಹನವಾದ ಅರಣ್ಯದಲ್ಲಿ ಜಿತೇಂದ್ರಿಯಗಳಾಗಿ ವಾಸಿಸಿದವು.

Comments


bottom of page