ಪ್ರಬುದ್ಧರಾದ ಶಿಶುಪಕ್ಷಿಗಳು
- Praveen Tattisar

- Aug 18
- 1 min read
ನಾಲ್ಕು ಶಿಶುಪಕ್ಷಿಗಳನ್ನು ಶಮೀಕ ಮಹರ್ಷಿಗಳು ತಮ್ಮ ಆಶ್ರಮದಲ್ಲಿ, ಪ್ರತಿನಿತ್ಯವೂ ಆಹಾರ ಪಾನೀಯಗಳನ್ನು ನೀಡುವುದರಿಂದಲೂ, ಯಾವ ಭಯವಿಲ್ಲದ ವಾತಾವರಣದಲ್ಲಿ ನೋಡಿಕೊಳ್ಳುವುದರಿಂದಲೂ ಪಾಲಿಸತೊಡಗಿದರು. ಒಂದು ತಿಂಗಳ ಅವಧಿ ಕಳೆದಿತ್ತಷ್ಟೇ! ಆ ಹಕ್ಕಿಮರಿಗಳು ಆಕಾಶದೆತ್ತರಕ್ಕೆ ಹಾರತೊಡಗಿದವು. ಆಶ್ರಮದಲ್ಲಿದ್ದ ಮುನಿಕುಮಾರರೆಲ್ಲ ಆಶ್ಚರ್ಯಚಕಿತರಾಗಿ ಈ ಹಕ್ಕಿಮರಿಗಳು ಹಾರುವುದನ್ನು, ವಿಹರಿಸುವುದನ್ನು ನೋಡುತ್ತಿದ್ದರು. ಈ ಪಕ್ಷಿಗಳು ತಿರ್ಯಕ್ ಯೋನಿಯಲ್ಲಿ ಜನಿಸಿದ ಮಹಾತ್ಮರಾಗಿದ್ದುದು ಸತ್ಯ. ಅವುಗಳು ವನ-ಗಿರಿ-ನದಿ-ನಗರಗಳಿಂದ ಕೂಡಿದ ವಿಶಾಲವಾದ ಭೂ ಮಂಡಲವನ್ನು ನೋಡಿ ಆಯಾಸಗೊಂಡವು ಹಾಗೂ ಪುನಃ ಆಶ್ರಮಕ್ಕೆ ಮರಳಿದವು.
ಶಮೀಕ ಮಹರ್ಷಿಗಳು ಹೀಗೆ ಒಂದು ದಿನ ತಮ್ಮ ಶಿಷ್ಯರಿಗೆ ಧರ್ಮೋಪದೇಶ ಮಾಡುತ್ತಿರುವ ಸಂದರ್ಭ!!, ಮಹರ್ಷಿಗಳ ಪ್ರಭಾವವೋ ಎಂಬಂತೆ ಪಕ್ಷಿಗಳ ಅಂತಃಕರಣದಲ್ಲಿ ಜ್ಞಾನವು ಪ್ರಕಟವಾಯಿತು. ಹಾಗೇ ಪಕ್ಷಿಗಳು ಮಹರ್ಷಿಗಳನ್ನು ಪ್ರದಕ್ಷಿಣೆ ಮಾಡಿ, ನಮಸ್ಕರಿಸಿ, "ಮಹರ್ಷಿಗಳೇ! ಪೂಜ್ಯರಾದ ತಾವು ನಮ್ಮನ್ನು ಘೋರವಾದ ಮರಣದುಃಖದಿಂದ ದೂರಮಾಡಿದ್ದೀರಿ. ನೀವೇ ನಮಗೆ ಅನ್ನಾಹಾರವನ್ನೂ, ನಿರ್ಭಯ ವಾತಾವರಣವನ್ನೂ ನೀಡಿ ಪೋಷಿಸಿದ್ದೀರಿ. ತಂದೆ ತಾಯಿಯರಿಂದ ರಕ್ಷಿಸಲ್ಪಡದ ನಮಗೆ ನೀವೇ ರಕ್ಷಕರಾಗಿದ್ದೀರಿ. 'ದುರ್ಬಲರಾದ ಪಕ್ಷಿಗಳು ಯಾವಾಗ ಹಾರಬಲ್ಲವು~ಇವು ಆಕಾಶದಲ್ಲಿ ಹಾರುವುದನ್ನು ಯಾವಾಗ ನೋಡಬಹುದು?~ನೆಲದಿಂದಮರಕ್ಕೆ ಹಾರಿ ಅಲ್ಲಿಂದ ಮತ್ತೊಂದು ಮರಕ್ಕೆ ಹಾರುವುದನ್ನು ಎಂದು ನೋಡಬಹುದು?' ಈ ರೀತಿಯ ಆಶಯದಿಂದ ಅಕ್ಕರೆಯಿಂದ ನಮ್ಮನ್ನು ಸಾಕಿದ್ದೀರಿ. ಈಗ ನಾವು ಸಾಕಷ್ಟು ಬೆಳೆದಿದ್ದೇವೆ. ತಮಗೆ ಕೃತಜ್ಞರೂ ಆಗಿದ್ದೇವೆ ಹಾಗೂ ತಮ್ಮ ಕೃಪೆಯಿಂದ ಪ್ರಬುದ್ಧರೂ ಆಗಿದ್ದೇವೆ. ಈಗ ನಮ್ಮಿಂದ ಏನು ಕಾರ್ಯವಾಗಬೇಕು ಎಂದು ಆಜ್ಞಾಪಿಸಿರಿ" ಎಂದವು.

ಪಕ್ಷಿಗಳ ಈ ತೆರನಾದ ಸಂಸ್ಕಾರಯುತವಾದ ಹಾಗೂ ಸ್ಪಷ್ಟವಾದ ಮಾತುಗಳನ್ನು ಕೇಳಿ ಶಮೀಕ ಮಹರ್ಷಿಗಳಿಗೆ ಬಹು ಆಶ್ಚರ್ಯವಾಯಿತು ಹಾಗೂ ಅಷ್ಟೇ ಸಂತೋಷಗೊಂಡರು. ರೋಮಾಂಚನಭರಿತರಾದ ಹಾಗೂ ಪಕ್ಷಿಗಳನ್ನು ತನ್ನ ಮಕ್ಕಳೋಪಾದಿಯಲ್ಲಿ ಸಾಕಿದ ಮಹರ್ಷಿಗಳು, ಅವರನ್ನು ಕುರಿತು, "ಮಕ್ಕಳೇ!, ಸತ್ಯವಾಗಿ ನುಡಿಯಿರಿ, ಇಂತಹ ಸುಸ್ಪಷ್ಟವಾದ ಮಾತನ್ನು ನೀವು ಹೇಗೆ ಆಡಿದಿರಿ? ನಿಮ್ಮ ಮಾತಿಗೂ ಹಾಗೂ ರೂಪಕ್ಕೂ ಯಾವ ಹೊಂದಾಣಿಕೆ ಕಾಣಬರುವುದಿಲ್ಲ! ಎಂಬಲ್ಲಿಗೆ ನೀವು ಯಾವುದೋ ಮಹಾತ್ಮರ ಶಾಪದಿಂದ ಇಂತಹ ರೂಪವನ್ನು ಪಡೆದದ್ದಿರಬೇಕು! ಯಾರು ನೀವು? ನಿಮ್ಮ ಪೂರ್ವ ವೃತ್ತಾಂತವೇನು? ತಿಳಿಸಿರಿ" ಎಂದರು.
ಆಗ ಪಕ್ಷಿಗಳು ತಮ್ಮ ನಿಜ ವೃತ್ತಾಂತವನ್ನು ಪ್ರಾರಂಭಿಸಿದವು:
ಹಿಂದಿನ ಕಾಲದಲ್ಲಿ ವಿಪುಲಸ್ವಾನ್ ಎಂದು ಪ್ರಸಿದ್ಧರಾದ ಮುನಿಗಳಿದ್ದರು. ಅವರಿಗೆ ಸುಕೃಷ ಹಾಗೂ ತುಂಬುರು ಎಂಬ ಇಬ್ಬರು ಮಕ್ಕಳಿದ್ದರು. ಮಹಾತ್ಮನೂ ಜಿತೇಂದ್ರಿಯನೂ ಆದ ಆಗಿದ್ದ ಸುಕೃಷರ ಮಕ್ಕಳಾಗಿದ್ದವರೇ ಈ ನಾಲ್ಕು ಪಕ್ಷಿಗಳಾಗಿದ್ದರು!
ಹಾಗಾದರೆ ಪಕ್ಷಿಗಳಾಗಿ ಜನ್ಮ ತಾಳುವುದಕ್ಕೆ ಕಾರಣವೇನು?
ಇಷ್ಟಕ್ಕೆಲ್ಲಾ ಕಾರಣ ದೇವೇಂದ್ರ!!
ದೇವೇಂದ್ರನಿಂದಾಗಿ ಸುಕೃಷ ಮಹರ್ಷಿಗಳ ನಾಲ್ವರು ಮಕ್ಕಳು ತಿರ್ಯಕ್ ಯೋನಿಯಲ್ಲಿ ಪಕ್ಷಿಗಳಾಗಿ ಜನ್ಮ ತಳೆಯುವ ಶಾಪ ಪಡೆದರು!!
ಶಾಪ ಕೊಟ್ಟವರ್ಯಾರು? ಕಾರಣವೇನು?
ಮುಂದಿನ ಸಂಚಿಕೆಯಲ್ಲಿ ನೋಡೋಣ!!








Comments