ಶಾಪಗ್ರಸ್ತ ವಪುವಿನ ಜನನ
- Praveen Tattisar

- Aug 4
- 2 min read
Updated: Aug 11
ವಪುವು ದೂರ್ವಾಸರಿಂದ ಪಕ್ಷಿಯಾಗಿ ಜನಿಸು ಎಂಬ ಶಾಪವನ್ನು ಪಡೆದಳು ಎಂಬಲ್ಲಿಯವರೆಗಿನ ಕಥನವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಹಾಗಾದರೆ ಶಾಪ ಪಡೆದ ವಪುವು ಹೇಗೆ ಪಕ್ಷಿ ಜನ್ಮ ಪಡೆದಳು? ಈ ಕಥಾನಕವನ್ನು ಈಗ ನೋಡೋಣ!!
ಪಕ್ಷಿರಾಜನಾದ ಗರುಡನ ತಂದೆ ಅರಿಷ್ಟನೇಮಿ. ಗರುಡನ ಮಗ ಸಂಪಾತಿ. ಶೂರನೂ ವೀರನೂ ಆದ ಸುಪಾರ್ಶ್ವನು ಸಂಪಾತಿಯಲ್ಲಿ ಜನಿಸಿದವನು. ಈತನ ಮಗ ಕುಂತಿ. ಕುಂತಿಗೆ ಪ್ರಲೋಲುಪ ಎಂಬ ಮಗನಿದ್ದನು. ಅವನಿಗೆ ಕಂಕ ಮತ್ತು ಕಂಧರ ಎಂಬ ಈರ್ವರು ಪುತ್ರರು ಜನಿಸಿದರು.
ಒಂದು ದಿನ ಕಂಕನು ಕೈಲಾಸ ಪರ್ವತದಲ್ಲಿ ಕುಬೇರನ ಅನುಚರನಾದ ವಿದ್ಯುದ್ರೂಪ ಎಂಬ ರಾಕ್ಷಸನನ್ನು ಕಂಡನು. ವಿದ್ಯುದ್ರೂಪನು ತನ್ನ ಭಾರ್ಯೆಯೊಡನೆ ಕುಳಿತು ಮಧುಪಾನ ಮಾಡುತ್ತಾ, ಒಂದು ಶಿಲೆಯ ಮೇಲೆ ಸಂತೋಷದಿಂದ ಸಮಯ ಕಳೆಯುತ್ತಿದ್ದನು. ಕಂಕನನ್ನು ಕಂಡ ಅವನು ತಕ್ಷಣವೇ ಕೋಪಗೊಂಡು, 'ಎಲಾ ಪಕ್ಷಿಯೇ! ಎಲ್ಲಿ ಯಾವಾಗ ಪ್ರವೇಶ ಮಾಡಬೇಕು ಎಂಬ ಕಲ್ಪನೆ ಇಲ್ಲವೇ? ನನ್ನ ಪ್ರಿಯೆಯೊಡನೆ ಏಕಾಂತದಲ್ಲಿರುವ ಸಮಯದಲ್ಲಿ ಹೀಗೆ ಬರಕೂಡದು' ಎಂದನು. ಇದನ್ನು ಕೇಳಿ ಕಂಕನು, 'ಈ ಪರ್ವತದ ಮೇಲೆ ಎಲ್ಲಾ ಜೀವಿಗಳಿಗೂ ಸಮಾನವಾದ ಅಧಿಕಾರವಿದೆ. ನಿನಗೆ ಹೇಗೆ ಅಧಿಕಾರವಿದೆಯೋ ನನಗೂ ಹಾಗೆ ಈ ಪರ್ವತದಲ್ಲಿ ಸಂಚರಿಸಲು ಅಧಿಕಾರವಿದೆ. ಹಾಗೂ ಇತರ ಜೀವಜಂತುಗಳಿಗೂ ಇದೆ. ನೀನೇಕೆ ಆಕ್ಷೇಪಿಸುತ್ತಿರುವೆ?' ಎಂದನು. ಇದನ್ನು ಕೇಳಿದ ವಿದ್ಯುದ್ರೂಪನು ಕ್ರೋಧಗೊಂಡು ತಕ್ಷಣವೇ ತನ್ನ ಖಡ್ಗದಿಂದ ಕಂಕ ಪಕ್ಷಿಯ ಶಿರವನ್ನು ತುಂಡರಿಸಿದನು.
ತನ್ನ ಸಹೋದರನಾದ ಕಂಕ ಅಳಿದ ವಿಚಾರ ಕಂಧರನಿಗೆ ತಿಳಿಯಿತು. ಕೋಪಾವಿಷ್ಟನಾಗಿ ತನ್ನ ಸೋದರನನ್ನು ಕೊಂದ ಆ ವಿದ್ಯುದ್ರೂಪನನ್ನು ಕೊಲ್ಲುವುದಾಗಿ ಮನದಲ್ಲಿ ಸಂಕಲ್ಪಿಸಿಕೊಂಡು, ತಕ್ಷಣವೇ ವಿದ್ಯುದ್ರೂಪನಿದ್ದಲ್ಲಿಗೆ ಹೊರಟನು. ಅವನ ವೇಗಕ್ಕೆ ದೊಡ್ಡ ದೊಡ್ಡ ಪರ್ವತಗಳೇ ನಡುಗಿದವು. ಸಮುದ್ರದ ನೀರು ಉಕ್ಕೇರಲಾರಂಭಿಸಿತು. ಪರಮ ಕ್ರೋಧದಿಂದ ಆ ವಿದ್ಯುದ್ರೂಪನು ಸುವರ್ಣಶಯ್ಯೆಯಲ್ಲಿ ಮದ್ಯಪಾನ ನಿರತನಾಗಿರುವುದನ್ನು ಕಂಡನು. ಅವನ ಕುರಿತು ಕಂಧರನು, 'ಏ ದುಷ್ಟನೇ! ನೀನು ಈ ಕೂಡಲೇ ನನ್ನೊಡನೆ ಯುದ್ಧ ಮಾಡು. ನನ್ನ ಅಣ್ಣನನ್ನು ಕೊಂದ ನಿನ್ನನ್ನು ಈಗಲೇ ಯಮನಾಲಯಕ್ಕೆ ಕಳುಹಿಸುತ್ತೇನೆ.' ಎಂದನು.

ಪತ್ನಿಯ ಸಮೀಪ ಕುಳಿತಿದ್ದ ವಿದ್ಯುದ್ರೂಪನು ಕಂಧರನ ಮಾತನ್ನು ಕೇಳಿ ಕುಪಿತನಾಗಿ, 'ನಿನ್ನ ಸಹೋದರನನ್ನು ಕೊಂದ ಹಾಗೇ ನಿನ್ನನ್ನೂ ವಧಿಸುತ್ತೇನೆ, ಬಾ ಮುಂದೆ' ಎಂದು ಖಡ್ಗವನ್ನು ಝಳಪಿಸಿದನು. ಕಂಧರನು ಆ ಖಡ್ಗವನ್ನು ಕೊಕ್ಕಿನಲ್ಲಿ ಹಿಡಿದು, ಕಾಲುಗಳಿಂದ ತುಂಡರಿಸಿದನು. ಅನಂತರ ಅವರಿಬ್ಬರ ನಡುವೆ ಬಾಹುಯುದ್ಧ ಪ್ರಾರಂಭವಾಯಿತು. ಕಂಧರನು ವಿದ್ಯುದ್ರೂಪನ ವಕ್ಷಃಸ್ಥಳವನ್ನಕ್ರಮಿಸಿ ಕೊಕ್ಕು ಮತ್ತು ಉಗುರುಗಳಿಂದ ಬಗೆಯುತ್ತಾ, ಆ ರಾಕ್ಷಸನ ಕೈ-ಕಾಲುಗಳನ್ನೂ, ಶಿರವನ್ನೂ ಕತ್ತರಿಸಿದನು. ವಿದ್ಯುದ್ರೂಪನು ಅಸುನೀಗಿದನು.
ಆಗ ವಿದ್ಯುದ್ರೂಪನ ಪತ್ನಿಯಾದ ಮದನಿಕೆಯು ಭಯಭೀತಳಾಗಿ ಕಂಧರನಿಗೆ ಶರಣಾದಳು. 'ನಿನ್ನ ಭಾರ್ಯೆಯಾಗಿರುವೆನು' ಎಂದು ಬೇಡಿದಳು. ಕಂಧರನು ವಿದ್ಯುದ್ರೂಪನನ್ನು ಸಂಹರಿಸಿ ತನ್ನ ಸಹೋದರನ ಸಾವಿನ ಸೇಡನ್ನು ತೀರಿಸಿಕೊಂಡನು. ಮದನಿಕೆಯನ್ನು ಜೊತೆಯಲ್ಲಿ ಕರೆದುಕೊಂಡು ತನ್ನ ಮನೆಗೆ ತೆರಳಿದನು. ಮದನಿಕೆಯು ತನ್ನ ಮನಸ್ಸಿಗೆ ಬಂದ ರೂಪವನ್ನು ಧತಿಸುವ ಶಕ್ತಿ ಹೊಂದಿದ್ದಳು ಹಾಗೂ ಅವಳು ಮೇನಕೆಯ ಪುತ್ರಿಯಾಗಿದ್ದಳು. ಕಂಧರನ ಜೊತೆ ಬಂದಮೇಲೆ ಪಕ್ಷಿಯ ರೂಪವನ್ನೇ ಧರಿಸಿ ಅವನೊಡನೆ ವಾಸಮಾಡಿದಳು. ಈ ಪಕ್ಷಿಣಿಯ ಉದರದಿಂದ ಜನಿಸಿದವಳೇ ~ ದೂರ್ವಾಸರ ಶಾಪಾಗ್ನಿಯಿಂದ ಬೆಂದ ವಪು ಎಂಬ ಅಪ್ಸರೆ. ಅವಳಿಗೆ ತಾರ್ಕ್ಷೀ ಎಂದು ನಾಮಕರಣ ಮಾಡಲಾಯಿತು.
ಹಾಗಿದ್ದರೆ,
ತಾರ್ಕ್ಷೀಯಾಗಿ ಜನಿಸಿದ ವಪುವಿನ ಶಾಪವಿಮೋಚನೆ ಹೇಗೆ ಆಯಿತು?
ಅವಳ ನಾಲ್ವರು ಪುತ್ರರು ಯಾರು?
ಅವಳನ್ನು ವರಿಸಿದವರ್ಯಾರು?
ಇದೆಲ್ಲವನ್ನೂ ಮುಂದಿನ ಸಂಚಿಕೆಯಲ್ಲಿ ನೋಡೋಣ!!








Comments