top of page

ವಿಶಾಲಪುರಿಯ ಹಿನ್ನೆಲೆಯ ಕಥೆ

ರಾಮಾಯಣದ ಬಾಲಕಾಂಡದ ಕಥೆಗಳಲ್ಲಿ ನಾವು "ವಿಶಾಲ"ಪುರಿಯ ಪ್ರಸ್ತಾಪವನ್ನು ಕೇಳಿರುತ್ತೇವೆ. ಲೋಕಕಲ್ಯಾಣಕ್ಕಾಗಿ ವಿಶ್ವಾಮಿತ್ರರು ಮಾಡುತ್ತಿರುವ ಯಜ್ಞಕ್ಕೆ ವಿಘ್ನವನ್ನು ಒಡ್ದುತ್ತಿದ್ದ ದುಷ್ಟ ರಕ್ಕಸರನ್ನು ನಿಗ್ರಹಿಸಿದ ನಂತರ, ವಿಶ್ವಾಮಿತ್ರರ ನಿರ್ದೇಶನದಂತೆ ಅವರ ಜೊತೆಗೂಡಿ ರಾಮ ಲಕ್ಷ್ಮಣರು ಮಿಥಿಲೆಗೆ ಪ್ರಯಾಣಿಸುವ ಮಾರ್ಗ ಮಧ್ಯೆ, ಸುಂದರವಾದಂತಹ ನಗರವನ್ನು ನೋಡಿ ಕುತೂಹಲಿಗಳಾಗಿ ಆ ನಗರದ ಕುರಿತು ತಿಳಿಸುವಂತೆ, ವಿಶ್ವಾಮಿತ್ರರಲ್ಲಿ ಪ್ರಾರ್ಥಿಸುತ್ತಾರೆ. ಆಗ ವಿಶ್ವಮಿತ್ರರು ರಾಮ ಲಕ್ಷ್ಮಣರಿಗೆ "ವಿಶಾಲ" ನಗರದ ಇತಿಹಾಸವನ್ನು ತಿಳಿಸಿಕೊಡುತ್ತಾರೆ.

ಸಮುದ್ರಮಥನದ ಸಮಯದಲ್ಲಿ ಅಮೃತಕ್ಕಾಗಿ ನಡೆದಂತ ಯುದ್ಧದಲ್ಲಿ ಹತರಾದಂತಹ ತನ್ನ ಮಕ್ಕಳನ್ನು ನೋಡಿ, ದಿತಿ ದೇವಿ ಬಹಳ ದುಃಖವನ್ನು ಹೊಂದುತ್ತಾಳೆ. ತನ್ನ ಪತಿಯಾದಂತಹ ಕಶ್ಯಪರ ಬಳಿ ಹೋಗಿ, "ಪೂಜ್ಯರೇ.. ನನ್ನ ಪುತ್ರರನ್ನು ದೇವತೆಗಳೆಲ್ಲ ಸೇರಿ ಕೊಂದು ಹಾಕಿದ್ದಾರೆ, ಆದ್ದರಿಂದ ನಾನು ದೀರ್ಘಕಾಲ ತಪಸ್ಸನ್ನು ಮಾಡಿ ಇಂದ್ರನ ಮೇಲೆ ಹಗೆ ತೀರಿಸಿಕೊಳ್ಳಬೇಕು. ಅದಕ್ಕಾಗಿ ನಾನೀಗ ಕಠಿಣವಾದಂತಹ ತಪಸ್ಸನ್ನು ಆಚರಿಸುತ್ತೇನೆ. ನೀವು ನನಗೆ ಅಪ್ಪಣೆ ಕೊಡಬೇಕು. ನನ್ನ ಗರ್ಭದಲ್ಲಿ ಒಬ್ಬ ಸಮರ್ಥನು, ಸರ್ವ ಕಾರ್ಯ ನಿಪುಣನು, ಇಂದ್ರನನ್ನ ವಧಿಸುವಂತಹವನು ಆದಂತಹ ಪುತ್ರನನ್ನ ಕರುಣಿಸಬೇಕು" ಅಂತ ಪ್ರಾರ್ಥಿಸುತ್ತಾಳೆ.

ಅದನ್ನ ಕೇಳಿ ಕಶ್ಯಪರು ದಿತಿಯನ್ನು ಸಮಾಧಾನಿಸುತ್ತಾ, "ನಿನ್ನ ಇಚ್ಛೆಯಂತೆ ಆಗಲಿ, ಯುದ್ಧದಲ್ಲಿ ಇಂದ್ರನನ್ನು ಕೊಲ್ಲುವಂತಹ ಮಗ ನಿನ್ನಲ್ಲಿ ಹುಟ್ಟುತ್ತಾನೆ, ಆದರೆ ಇದಕ್ಕಾಗಿ ನೀನು ಶುಚಿತ್ವವನ್ನು ಪಾಲಿಸಬೇಕು, ಒಂದು ಸಾವಿರ ವರ್ಷಗಳವರೆಗೆ ನೀನು ಪವಿತ್ರತೆಯಿಂದ ಇದ್ದರೆ, ಇಂದ್ರನನ್ನು ವಧೆ ಮಾಡುವಂತಹ ಸಮರ್ಥನಾದ ಪುತ್ರನನ್ನು ಪಡೆಯುವುದು ಸಾಧ್ಯ" ಎಂದು ಹೇಳುತ್ತಾರೆ. ಇದನ್ನು ಕೇಳಿ ಹರ್ಷಿತಳಾದಂತಹ ದಿತಿ, ಕುಶಪ್ಲವ ಎನ್ನುವಂತಹ ತಪೋವನಕ್ಕೆ ಬಂದು ಕಠಿಣವಾದ ತಪಸ್ಸಿನಲ್ಲಿ ತೊಡಗುತ್ತಾಳೆ. ದಿತಿ ದೇವಿ ಹಾಗೆ ತಪಸ್ಸಿನಲ್ಲಿ ತೊಡಗಿರುವಾಗ ದೇವತೆಗಳ ಒಡೆಯ ಇಂದ್ರ ವಿನಯದಿಂದ ಆಕೆಯ ಸೇವೆಯನ್ನು ಮಾಡತೊಡುತ್ತಾನೆ. ತನ್ನ ಚಿಕ್ಕಮ್ಮ ದಿತಿಗಾಗಿ ನಿತ್ಯವೂ ಕುಶ, ಕಾಷ್ಟ, ಜಲ, ಫಲಮೂಲ ಹಾಗೂ ಇತರ ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಮಾಡಿಕೊಡುತ್ತಾನೆ. ಚಿಕ್ಕಮ್ಮನ ಸೇವೆಯನ್ನು ಮಾಡುತ್ತಾ, ಅವಳ ಬಳಲಿಕೆಯನ್ನು ದೂರಗೊಳಿಸುತ್ತಾನೆ. ಅವಳಿಗೆ ಅವಶ್ಯಕತೆ ಇರುವಂತಹ ಎಲ್ಲ ಸೇವೆಗಳನ್ನು ಒದಗಿಸುತ್ತಾನೆ.

ಹೀಗೆ ದಿತಿ ದೇವಿಯು ತಪಸ್ಸನ್ನು ಆಚರಿಸುತ್ತ ಸಾವಿರ ವರ್ಷಗಳು ಪೂರ್ಣವಾಗಲು ಇನ್ನು ಹತ್ತು ವರ್ಷ ಬಾಕಿ ಉಳಿದಾಗ, ಒಂದು ದಿನ ದಿತಿ ದೇವಿಯು ಅತ್ಯಂತ ಹರ್ಷದಿಂದ ದೇವೇಂದ್ರನಲ್ಲಿ ಹೇಳುತ್ತಾಳೆ... "ನನ್ನ ತಪಸ್ಸಿನ ಇನ್ನು ಹತ್ತು ವರ್ಷ ಮಾತ್ರ ಬಾಕಿ ಉಳಿದಿದೆ. ಹತ್ತು ವರ್ಷಗಳ ಬಳಿಕ ನಿನ್ನ ತಮ್ಮ ಹುಟ್ಟಲಿದ್ದಾನೆ. ನಿನ್ನ ವಧೆಗಾಗಿಯೇ ನಾನು ಈ ಪುತ್ರನನ್ನು ಬೇಡಿದ್ದೇನೆ. ಆದರೆ ನಿನ್ನ ಈ ಸೇವೆಯಿಂದ ನೀನು ನನ್ನ ಮನ ಗೆದ್ದಿರುವೆ. ಆದ್ದರಿಂದ ನಿನ್ನ ವಿನಾಶಕ್ಕಾಗಿ ನಾನು ಯಾವ ಪುತ್ರನನ್ನು ಬಯಸಿದ್ದೇನೋ... ಅವನು ನಿನ್ನಲ್ಲಿ ದ್ವೇಷ ಭಾವವನ್ನು ತಾಳಿದರೆ, ಅವನನ್ನು ನಾನು ಶಾಂತ ಗೊಳಿಸುತ್ತೇನೆ. ಅವನು ನಿನ್ನಲ್ಲಿ ಶಾಂತಿಯಿಂದ ಹಾಗೂ ಪ್ರೇಮ ಭಾವದಿಂದ ವ್ಯವಹರಿಸುವಂತೆ ಮಾಡುತ್ತೇನೆ. ಅವನ ಜೊತೆಗೂಡಿ ನೀನು ತ್ರಿಭುವನವನ್ನು ನಿಶ್ಚಿಂತೆಯಿಂದ ಭೋಗಿಸು" ಅಂತ ಹೇಳುತ್ತಾಳೆ.

ಹಾಗೆ ಹೇಳಿದ ದಿತಿ, ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಕುಳಿತಲ್ಲೇ ನಿದ್ದೆಮಾಡ ತೊಡಗುತ್ತಾಳೆ. ನಿದ್ರೆಯ ಮಂಪರಿನಲ್ಲಿ ಅವಳ ತಲೆ ಬಾಗಿ ಕಾಲನ್ನು ಸ್ಪರ್ಶಿಸುತ್ತದೆ. ಅದನ್ನು ನೋಡಿದ ಇಂದ್ರ, ದಿತಿದೇವಿಯು ಅಪವಿತ್ರಳಾದಳು ಎನ್ನುವುದನ್ನು ತಿಳಿದು ಸಂತೋಷಗೊಳ್ಳುತ್ತಾನೆ. ಸರಿಯಾದ ಸಮಯವನ್ನು ಕಾಯುತ್ತಿದ್ದ ಇಂದ್ರ, ದಿತಿಯ ಉದರವನ್ನು ಪ್ರವೇಶಿಸಿ, ಅಲ್ಲಿದ್ದ ಗರ್ಭವನ್ನು ಏಳು ತುಂಡುಗಳಾಗಿ ಕತ್ತರಿಸಿಬಿಡುತ್ತಾನೆ. ನೂರು ಅಲಗುಗಳುಳ್ಳ ವಜ್ರಾಯುಧದಿಂದ ಗರ್ಭವನ್ನು ಕತ್ತರಿಸುವಾಗ, ಆ ಗರ್ಭಸ್ಥ ಬಾಲಕನು ಜೋರಾಗಿ ಅಳತೊಡಗುತ್ತಾನೆ. ಅದರಿಂದ ದಿತಿ ಎಚ್ಚರಗೊಳ್ಳುತ್ತಾಳೆ. ಇಂದ್ರನಲ್ಲಿ ತನ್ನ ಮಗುವನ್ನು ಕೊಲ್ಲಬೇಡ ಎಂದು ಪ್ರಾರ್ಥಿಸುತ್ತಾಳೆ. ತಾಯಿಯ ಮಾತಿಗೆ ಮನ್ನಣೆಯುತ್ತ ಇಂದ್ರ ಕೂಡಲೇ ದಿತಿಯ ಉದರದಿಂದ ಹೊರ ಬರುತ್ತಾನೆ. "ತಾಯಿ! ನಿನ್ನ ಶಿರವು ನಿನ್ನ ಪಾದವನ್ನು ಸ್ಪರ್ಶಿಸಿದ್ದರಿಂದ ನೀನು ಅಪವಿತ್ರವಾದದನ್ನು ಗಮನಿಸಿದೆ.. ನನ್ನ ಹಿತಕ್ಕಾಗಿ ಈ ಸಮಯವನ್ನು ಬಳಸಿಕೊಂಡು, ನಿನ್ನ ಉದರವನ್ನು ಪ್ರವೇಶಿಸಿ ನನ್ನ ವೈರಿಯಾದ ನಿನ್ನ ಮಗುವನ್ನು ಏಳು ತುಂಡುಗಳಾಗಿ ಕತ್ತರಿಸಿದ್ದೇನೆ. ತಾಯಿ! ಈ ನನ್ನ ಅಪರಾಧವನ್ನು ಕ್ಷಮಿಸು" ಎಂದು ಪ್ರಾರ್ಥಿಸುತ್ತ ದಿತಿಯ ಕಾಲಿಗೆ ಎರಗುತ್ತಾನೆ.

ಇದನ್ನು ಕೇಳಿದ ದಿತಿ, "ಮಗು! ಇದರಲ್ಲಿ ನಿನ್ನ ತಪ್ಪು ಏನೂ ಇಲ್ಲ. ನನ್ನ ಅಪರಾಧದಿಂದಲೇ ಈ ಗರ್ಭವು ನಾಶವಾಯಿತು. ಒಂದು ಸಾವಿರ ವರ್ಷಗಳವರೆಗೆ ಪವಿತ್ರತೆಯನ್ನು ಸಾಧಿಸಿ, ನನ್ನ ಗರ್ಭವನ್ನು ಕಾಯ್ದುಕೊಳ್ಳುವಲ್ಲಿ ನಾನು ವಿಫಲಳಾಗಿಬಿಟ್ಟೆ. ಆ ಸಮಯವನ್ನು ಸಾಧಿಸಿ ನೀನು, ನಿನ್ನ ಉಳಿವಿಗಾಗಿ ನನ್ನ ಗರ್ಭವನ್ನು ನಾಶ ಮಾಡಿದೆ. ಆದರೆ ಈ ನನ್ನ ಗರ್ಭವು ವ್ಯರ್ಥವಾಗದಂತೆ, ನಿನಗೂ ಹಿತವಾಗುವಂತಹ ವಿಚಾರವೊಂದನ್ನು ನಾನು ಮಾಡಿದ್ದೇನೆ. ನನ್ನ ಗರ್ಭದ ಈ ಏಳು ತುಂಡುಗಳು ಏಳು ವ್ಯಕ್ತಿಗಳಾಗಿ ಏಳು ಮರುದ್ ಗಣಗಳ ಸ್ಥಾನವನ್ನು ಪಾಲಿಸುವ ಶಕ್ತಿಗಳಾಗಿ, ದಿವ್ಯ ರೂಪಧಾರಿಗಳಾಗಿ ನನ್ನ ಏಳು ಪುತ್ರರಾಗಿ ಮರುತ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿ ಆಕಾಶದಲ್ಲಿ ವಿಹರಿಸುವ ವಾತ ಸ್ಕಂಧಗಳಾಗಲಿ.. ಅವರೆಲ್ಲರೂ ನಿನ್ನ ಆಜ್ಞೆಯಂತೆ, ಎಲ್ಲ ದಿಕ್ಕುಗಳಲ್ಲಿ ಸಂಚರಿಸುವಂಥವರಾಗಲಿ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಇಂದ್ರ ದಿತಿಗೆ ಕೈ ಮುಗಿಯುತ್ತಾ, "ಅಮ್ಮ! ನೀನು ಹೇಳಿದಂತೆ ಆಗಲಿ. ನಿನ್ನ ಈ ಪುತ್ರರು ದೇವರೂಪರಾಗಿ ಅಂತರಿಕ್ಷದಲ್ಲಿ ಸಂಚರಿಸಲಿ" ಎಂದು ಹೇಳಿ, ಚಿಕ್ಕಮ್ಮ ದಿತಿಯ ಸಮೇತನಾಗಿ ಸ್ವರ್ಗ ಲೋಕಕ್ಕೆ ತೆರಳುತ್ತಾನೆ.


ದಿತಿ ದೇವಿಯು ತಪಸ್ಸನ್ನು ಆಚರಿಸಿದ ಹಾಗೂ.. ತಪಸ್ಸಿನಲ್ಲಿ ನಿರತಳಾಗಿದ್ದಂತಹ ದಿತಿ ದೇವಿಯನ್ನು ದೇವರಾಜ ಇಂದ್ರ ಸೇವೆಗೈದಂತಹ ಈ ಸ್ಥಳ ಮುಂದೆ ವಿಶಾಲಪುರಿ ಎಂದು ಖ್ಯಾತವಾಯಿತು. ಇಕ್ಷಾಕು ಮಹಾರಾಜನ ಮಗ ವಿಶಾಲನೆಂಬುವವನು ಈ ಪುರವನ್ನು ನಿರ್ಮಿಸಿದ ಕಾರಣದಿಂದ ವಿಶಾಲ ಅಥವಾ ವೈಶಾಲಿ ಅಂತ ಈ ಪುರವನ್ನ ಕರೆಯುತ್ತಾರೆ.

Comments


bottom of page