ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಜನನ
- Asha Satish

- Jan 12
- 2 min read
ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಜನನ
ಹಿಂದೆ ನಾವು ಈ ಸರಣಿಯಲ್ಲಿ ವೈಕುಂಠ ದರ್ಶನಕ್ಕೆಂದು ಬಂದ ಸನಕಾದಿ ಋಷಿಕುಮಾರರನ್ನು ವೈಕುಂಠದ ದ್ವಾರಪಾಲಕರಾದ ಜಯ ವಿಜಯರು ತಡೆದ ಪರಿಣಾಮವಾಗಿ, ಹರಿ ವಿರೋಧಿಗಳಾಗಿ ಜನಿಸುವಂತೆ ಋಷಿಕುಮಾರರಿಂದ ಶಾಪಕ್ಕೆ ಒಳಗಾದ ಕಥೆಯನ್ನು ತಿಳಿದುಕೊಂಡಿದ್ದೇವೆ. ಶಾಪದ ಪರಿಣಾಮದಿಂದ ಜಯ ವಿಜಯರು ಮುಂದೆ ಏನಾಗುತ್ತಾರೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ಒಂದು ದಿನ ಸಾಯಂ ಸಂಧ್ಯೆಯ ವೇಳೆ, ಬ್ರಹ್ಮರ್ಷಿ ಕಶ್ಯಪರು ಯಜ್ಞಪತಿಯನ್ನು ಆರಾಧಿಸುತ್ತಿರುವಾಗ ಕಶ್ಯಪರ ಸತಿಯಾದ ದಿತಿದೇವಿಯು, ಕಶ್ಯಪರಲ್ಲಿ ಪುತ್ರಾನುಗ್ರಹವನ್ನು ಅಪೇಕ್ಷಿಸುತ್ತಾಳೆ. ಆದರೆ ಅದು ಸಂಧ್ಯಾ ಸಮಯವಾದ ಕಾರಣದಿಂದ ಕಶ್ಯಪರು, "ಈ ಸಮಯವು ಭಗವಂತನನ್ನು ಆರಾಧಿಸಿ ಸಂತೃಪ್ತಗೊಳಿಸುವ ಸಮಯವಾಗಿದೆ. ಇಂತಹ ಸಮಯದಲ್ಲಿ ಭಗವದಾರಾಧನೆಯನ್ನು ಬಿಟ್ಟು ಕಾಮಕೇಳಿಯಲ್ಲಿ ತೊಡಗುವುದು ಸರ್ವದಾ ಅಪರಾಧವೇನಿಸಿಕೊಳ್ಳುತ್ತದೆ" ಎಂದು ದಿತಿದೇವಿಗೆ ತಿಳಿಹೇಳುತ್ತಾರೆ. ಆದರೆ ಕಾಮಪರವಶಳಾಗಿದ್ದ ದಿತಿದೇವಿಯು ಕಶ್ಯಪರ ಮಾತಿನಿಂದ ಸಮಾಧಾನ ಹೊಂದದೆ ತನ್ನ ಹಠವನ್ನು ಮುಂದುವರಿಸುತ್ತಾಳೆ. ದಿತಿದೇವಿಯ ಹಠಕ್ಕೆ ಮಣಿದ ಕಶ್ಯಪರು "ದೈವೇಚ್ಛೆ ಇದ್ದಂತೆ ಆಗಲಿ" ಎಂದು ನಿರ್ಧರಿಸಿ ದಿತಿದೇವಿಯ ಆಗ್ರಹವನ್ನು ನೆರವೇರಿಸುತ್ತಾರೆ. ಅದಾದ ಬಳಿಕ ಪುನಃ ಸ್ನಾನ ಮಾಡಿ ಶುಚಿರ್ಭೂತರಾಗಿ ದೇವತಾ ಕೈಂಕರ್ಯದಲ್ಲಿ ನಿರತರಾಗುತ್ತಾರೆ.

ಸ್ವಲ್ಪ ಸಮಯದ ನಂತರ ಸಮಾಧಾನಚಿತ್ತವನ್ನು ಹೊಂದಿದ ದಿತಿದೇವಿಯು, ತಾನು ಮಾಡಿದ ಈ ಅಕಾರ್ಯದಿಂದ ಲಜ್ಜೆಗೊಂಡು ತನ್ನ ಅಪರಾಧಕ್ಕಾಗಿ ಪಶ್ಚಾತಾಪಪಡುತ್ತಾಳೆ. "ಭಗವಂತ! ನಿನ್ನನ್ನು ಸ್ಮರಿಸುತ್ತಾ ನಿನ್ನ ಆರಾಧನೆಯಲ್ಲಿ ತೊಡಗಬೇಕಾಗಿದ್ದ ಸಂಧ್ಯಾ ಸಮಯದಲ್ಲಿ ಅವಿವೇಕದ ಕೆಲಸವನ್ನು ಮಾಡಿಬಿಟ್ಟಿದ್ದೇನೆ. ನನ್ನ ಈ ಅಪರಾಧವನ್ನು ಜಗದೀಶ್ವರನಾದ ನೀನು ಮನ್ನಿಸಿ ಅಭಯವನ್ನು ನೀಡು" ಎಂದು ಪರಿಪರಿಯಾಗಿ ಭಗವಂತನನ್ನು ಪ್ರಾರ್ಥಿಸುತ್ತಾಳೆ. ಪತಿಯಾದ ಕಶ್ಯಪರ ಕಾಲಿಗೆರಗಿ ತನ್ನ ಅಪರಾಧವನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾಳೆ. ಆಗ ಕಶ್ಯಪರು, "ದೇವಿ! ನಾನೆಷ್ಟೇ ವಿಧವಾಗಿ ನಿನ್ನ ವಿವೇಕವನ್ನು ಜಾಗ್ರತಗೊಳಿಸಲು ಯತ್ನಿಸಿದರೂ ಲೆಕ್ಕಿಸದೆ, ದೇವತೆಗಳಿಗೆ ಅಪಚಾರವೆಸಗಿದೆ. ಅಶುಭ ಸಮಯದಲ್ಲಿ ಪುತ್ರಾಪೇಕ್ಷೆಯಿಂದ ನನ್ನನ್ನು ಸೇರಿದ ನಿನ್ನ ಆ ಗರ್ಭದಿಂದ ಲೋಕಕಂಟಕರಾದ ಪುತ್ರರು ಹುಟ್ಟುವರು. ಅವರು ತಮ್ಮ ದುರ್ವರ್ತನೆಯಿಂದ ಸಮಸ್ತ ಲೋಕಕ್ಕೆ ಪೀಡಕರಾಗಿ ಪರಿಣಮಿಸುತ್ತಾರೆ. ಅವರ ಕೈಯಿಂದ ಸಾವಿರಾರು ನಿರಪರಾಧಿಗಳು, ದೀನರು, ಪ್ರಾಣಿ-ಪಕ್ಷಿಗಳು ಕೊಲ್ಲಲ್ಪಡುತ್ತವೆ. ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಆಗ ಶ್ರೀಮನ್ನಾರಾಯಣನು ಕ್ರುದ್ಧನಾಗಿ ಭೂಮಿಯಲ್ಲಿ ಅವತರಿಸಿ ಅವರನ್ನು ವಧಿಸುತ್ತಾನೆ" ಎಂದು ಹೇಳುತ್ತಾರೆ. "ಅಷ್ಟೇ ಅಲ್ಲ, ನಿನಗೆ ಹುಟ್ಟುವ ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ನಾಲ್ವರು ಪುತ್ರರಾಗಿ ಅವರಲ್ಲಿ ಒಬ್ಬನು ಮಾತ್ರ ಸತ್ಪುರುಷನಾಗಿ ಲೋಕ ಮಾನ್ಯನೆನಿಸಿ ಭಗವಂತನಿಗೆ ಪ್ರಿಯನಾಗುತ್ತಾನೆ" ಎಂದು ಹೇಳುತ್ತಾರೆ.
ಕಶ್ಯಪರ ಈ ಮಾತಿನಿಂದ ಲೋಕಕಂಟಕರಾಗಿ ಜನಿಸುವ ತನ್ನ ಮಕ್ಕಳಿಗೆ ದೇವತೆಗಳಿಂದ ಖಂಡಿತವಾಗಿಯೂ ತೊಂದರೆ ಉಂಟಾಗಬಹುದು ಎಂದು ಭಾವಿಸಿದ ದಿತಿದೇವಿಯು, ಆ ಗರ್ಭವನ್ನು ಸುಮಾರು ನೂರು ವರ್ಷಗಳ ಕಾಲ ತನ್ನ ಹೊಟ್ಟೆಯಲ್ಲೇ ಇರಿಸಿಕೊಳ್ಳುತ್ತಾಳೆ. ಆದರೆ ಆ ಗರ್ಭವು ಹೊಟ್ಟೆಯೊಳಗಿರುವಾಗಲೇ ಲೋಕದಲ್ಲಿ ಅನೇಕ ಉತ್ಪಾತಗಳು ಉಂಟಾಗುತ್ತವೆ. ಸೂರ್ಯ ಚಂದ್ರಾದಿಗಳ ಪ್ರಕಾಶವು ಕ್ಷೀಣವಾಗುತ್ತದೆ. ಇಂದ್ರಾದಿ ಲೋಕಪಾಲಕರು ತೇಜೋಹೀನರಾಗುತ್ತಾರೆ. ಕಶ್ಯಪರಿಂದ ದಿತಿ ದೇವಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಗರ್ಭದಿಂದ ಎಲ್ಲ ದಿಕ್ಕುಗಳಲ್ಲಿಯೂ ಕತ್ತಲೆ ಕವಿದು ಅವ್ಯವಸ್ಥೆ ಉಂಟಾಗುತ್ತದೆ. ಲೋಕದಲ್ಲಿ ಅನೇಕ ರೀತಿಯ ಉತ್ಪಾತಗಳು ಉಂಟಾಗುತ್ತದೆ. ಅದೇನೆಂದು ಅರ್ಥವಾಗದೆ ದೇವತೆಗಳು ತಮ್ಮ ಶಂಕೆಯನ್ನು ಪರಿಹರಿಸಿಕೊಳ್ಳಲು ಬ್ರಹ್ಮದೇವರ ಬಳಿಗೆ ತೆರಳುತ್ತಾರೆ. ಆಗ ಬ್ರಹ್ಮದೇವರು, ದೇವತೆಗಳಿಗೆ.. ಜಯ ವಿಜಯರಿಗೆ ಸನಕಾದಿಗಳಿಂದ ಒದಗಿದ ಶಾಪ ಹಾಗೂ ಜಯ ವಿಜಯರೇ ದಿತಿ ದೇವಿಯ ಗರ್ಭದಲ್ಲಿ ಸ್ಥಾಪಿತವಾಗಿರುವ ಕುರಿತು ತಿಳಿಸಿ, ದೇವತೆಗಳಿಗೆ ಸಮಾಧಾನ ಹೇಳಿ ಕಳುಹುತ್ತಾರೆ.
ಇತ್ತ ನೂರು ವರ್ಷಗಳು ಕಳೆದಾಗ ದಿತಿ ದೇವಿಯು ತನ್ನ ಸಂತಾನಕ್ಕೆ ದೇವತೆಗಳಿಂದ ಉಪದ್ರವ ಉಂಟಾಗಬಹುದು ಎಂಬ ಭಯದಿಂದಲೇ ಅವಳಿ ಮಕ್ಕಳನ್ನು ಹಡೆಯುತ್ತಾಳೆ. ಆ ಸಮಯದಲ್ಲಿ ಭೂಮಿ ಪರ್ವತಗಳು ನಡುಗುತ್ತವೆ. ಎಲ್ಲ ದಿಕ್ಕುಗಳಲ್ಲಿಯೂ ಅಗ್ನಿ ಜ್ವಾಲೆಗಳು ಉರಿಯುತ್ತವೆ. ಉಲ್ಕೆಗಳು ಉದುರುತ್ತವೆ. ಸಿಡಿಲು ಬಡಿಯುತ್ತದೆ. ಆಕಾಶದಲ್ಲಿ ಅನಿಷ್ಟ ಸೂಚಕವಾದ ಧೂಮಕೇತುಗಳು ಕಾಣಿಸಿಕೊಳ್ಳುತ್ತವೆ. ಭಯಂಕರವಾದ ಬಿರುಗಾಳಿಗೆ ದೊಡ್ಡ ದೊಡ್ಡ ಮರಗಳು ಬುಡ ಮೇಲಾಗಿ ಬೀಳುತ್ತವೆ. ಆಕಾಶದ ತುಂಬಾ ದಟ್ಟವಾದ ಮೋಡಗಳು ಮುಸುಕಿ ಕತ್ತಲು ಆವರಿಸುತ್ತದೆ. ಸಮುದ್ರ ಭೋರ್ಗರೆಯುತ್ತದೆ. ನದಿ ಕೆರೆ ಕುಂಟೆಗಳು ಬತ್ತಿ ಹೋಗುತ್ತವೆ. ಸೂರ್ಯ ಚಂದ್ರರಿಗೆ ಮತ್ತೆ ಮತ್ತೆ ಗ್ರಹಣ ಬಂದೊದಗುತ್ತದೆ. ಈ ಮಹಾ ಉತ್ಪಾತವನ್ನು ನೋಡಿದ ಲೋಕದ ಜೀವಿಗಳೆಲ್ಲ ಪ್ರಳಯ ಸಂಭವಿಸಬಹುದೆಂದು ಭಯಭೀತರಾಗುತ್ತಾರೆ.
ಶಾಪಪೀಡಿತ ಆ ಮಕ್ಕಳು ಹುಟ್ಟುತ್ತಲೇ ತಮ್ಮ ಭಯಂಕರವಾದ ಪೌರುಷವನ್ನು ಪ್ರಕಟಪಡಿಸುತ್ತಾ, ಮಹಾಪರ್ವತದಂತೆ ಬೆಳೆದುಬಿಡುತ್ತಾರೆ. ಮಹಾಪರಾಕ್ರಮಿಗಳಾದ ಆ ಪುತ್ರರಿಗೆ ಕಶ್ಯಪರು ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ ಎಂದು ನಾಮಕರಣ ಮಾಡುತ್ತಾರೆ.








Comments