top of page

ಗಜೇಂದ್ರ ಮೋಕ್ಷ

ಹತ್ತು ಸಾವಿರ ಯೋಜನ ಎತ್ತರವಾದ, ಸುತ್ತ ಕ್ಷೀರಸಾಗರದಿಂದ ಆವೃತವಾದ "ತ್ರಿಕೂಟ" ಎನ್ನುವಂತಹ ಒಂದು ಶ್ರೇಷ್ಠವಾದ ಪರ್ವತ ಇತ್ತು. ಆ ಪರ್ವತದ ಗರ್ಭದಲ್ಲಿ ವಿವಿಧ ಜಾತಿಯ ಮರ-ಗಿಡಗಳು ಪೊದೆಗಳು, ನದಿ ತೊರೆಗಳು ಜಲಪಾತಗಳು ಇದ್ದವು. ಪರ್ವತದ ಮಧ್ಯದಲ್ಲಿರುವ ಗುಹೆಗಳಲ್ಲಿ ಗಂಧರ್ವರು, ನಾಗರು, ಕಿನ್ನರರು, ಅಪ್ಸರೆಯರು ಇವರೆಲ್ಲ ಸ್ವಚ್ಛಂದವಾಗಿ ವಿಹರಿಸುವ ಸುಂದರವಾದ ಪರಿಸರವು ಕೂಡ ಇತ್ತು. ಪರ್ವತದ ತಪ್ಪಲು ಪ್ರದೇಶಗಳಲ್ಲಿ ಬಗೆ ಬಗೆಯ ಕಾಡು ಮೃಗಗಳು ಇದ್ದವು. ಪರ್ವತದ ಮಡಿಲಿನಲ್ಲಿರುವ ನದಿ ಸರೋವರಗಳಲ್ಲಿ ಸದಾ ದೇವಾಂಗನೆಯರು ಜಲಕ್ರೀಡೆಯನ್ನಾಡುತ್ತಾ ಸಂಭ್ರಮಿಸುತಿದ್ದರು. ಆ ಪರ್ವತದ ದಟ್ಟವಾದ ಅರಣ್ಯ ಭಾಗದಲ್ಲಿ ಹಲವಾರು ಹೆಣ್ಣಾನೆ ಗಳನ್ನು ಕೂಡಿಕೊಂಡು ಒಂದು ಆನೆಯು ವಾಸವಾಗಿತ್ತು. ಆ ಆನೆಯು ದೊಡ್ಡ ದೊಡ್ಡ ಶಕ್ತಿಶಾಲಿ ಆನೆಗಳಿಗೆಲ್ಲ ನಾಯಕನಾಗಿತ್ತು.


ಒಂದು ದಿನ ಆ ಗಜೇಂದ್ರ ತನ್ನ ಸಂಗಾತಿಗಳಾದ ಹೆಣ್ಣಾನೆಗಳನ್ನೆಲ್ಲ ಕೊಡಿಕೊಂಡು ಅರಣ್ಯದಲ್ಲಿದ್ದ ಬಿದಿರು, ಬೆತ್ತಗಳನ್ನು,ದೊಡ್ಡ ದೊಡ್ಡ ಪೊದೆಗಳನ್ನು, ಗಿಡಮರಗಳನ್ನು ಧ್ವಂಸ ಮಾಡುತ್ತಾ ಸ್ವೇಚ್ಛೆಯಿಂದ ಸಂಚರಿಸುತ್ತಿತ್ತು. ಸುಡು ಬಿಸಿಲಿನ ತಾಪಕ್ಕೆ ಬಾಯಾರಿದ ಗಜಗಳ ಹಿಂಡು ಸರೋವರದ ಜಾಡನ್ನು ಹಿಡಿದು ಹೊರಡುತ್ತವೆ. ವೇಗವಾಗಿ ನಡೆಯುತ್ತಾ ಸ್ವಲ್ಪ ಸಮಯದಲ್ಲಿ ಒಂದು ಸರೋವರದ ಬಳಿಗೆ ಬರುತ್ತವೆ. ಆ ಸರೋವರದ ನೀರು ಅತ್ಯಂತ ನಿರ್ಮಲವೂ ಸಿಹಿಯೂ ಆಗಿತ್ತು. ಸರೋವರದಲ್ಲಿಳಿದ ಆನೆಗಳ ಹಿಂಡು ಯಥೇಚ್ಛವಾಗಿ ನೀರನ್ನು ಕುಡಿದು ಅಲ್ಲಿಯೇ ಸ್ನಾನ ಮಾಡುತ್ತಾ, ಜಲಕ್ರೀಡೆ ಆಡುತ್ತಾ, ತಮ್ಮ ದಣಿವನ್ನು ಮರೆಯುತ್ತಿದ್ದವು. ಹೀಗೆ ಜಲ ಕೇಳಿಯಾಡುತ್ತಿರುವಾಗ ಆನೆಗಳ ತುಳಿತದಿಂದ ಘಾಸಿಗೊಂಡ ಕ ಆ ಸರೋವರದೊಳಗಿನ ಒಂದು ಮೊಸಳೆಯು ಕ್ರೋಧಗೊಂಡು ಗಜರಾಜನ ಕಾಲನ್ನು ಬಲವಾಗಿ ಕಚ್ಚಿ ಬಿಡುತ್ತದೆ. ಗಜರಾಜನೂ ಕೂಡ ಮೊಸಳೆಯನ್ನು ಘಾಸಿಗೊಳಿಸಿ,ಮೊಸಳೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಹೋರಾಟವನ್ನು ಮಾಡುತ್ತದೆ. ಆದರೆ ಅದೆಷ್ಟೇ ಹೋರಾಟ ನೀಡಿದರೂ ಕೂಡ ಬಲಶಾಲಿಯಾದ ಆಗಜೇಂದ್ರನು ಮೊಸಳೆಯ ಬಾಯಿಂದ ತನ್ನನ್ನು ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಗಜರಾಜ ಹಾಗೂ ಮೊಸಳೆಯು ತಮ್ಮ ತಮ್ಮ ಸಂಪೂರ್ಣ ಶಕ್ತಿಯಿಂದ ಪರಸ್ಪರ ಸೆಣಸಾಡುತ್ತಿದ್ದರು. ಹೀಗೆ ಕಾದಾಡುತ್ತಾ ಒಂದು ಸಾವಿರ ವರ್ಷಗಳು ಕಳೆಯುತ್ತದೆ. ಒಮ್ಮೆ ಒಬ್ಬರು ಗೆದ್ದರೆ ಮತ್ತೊಮ್ಮೆ ಮತ್ತೊಬ್ಬರು ಗೆಲ್ಲುತ್ತಿದ್ದರು. ಈ ಘಟನೆಯನ್ನು ನೋಡಿ ದೇವತೆಗಳೆಲ್ಲ ಬಹಳ ಆಶ್ಚರ್ಯ ಚಕಿತರಾಗುತ್ತಾರೆ. ವರ್ಷಗಳು ಕಳೆಯುತ್ತಿದ್ದಂತೆ ನಿರಂತರವಾದ ಹೋರಾಟದ ಸೆಣಸಾಟದ ಪರಿಣಾಮ, ಗಜರಾಜನ ಶರೀರವು ಶಿಥಿಲವಾಗಲು ಆರಂಭವಾಗುತ್ತದೆ. ಮನಸ್ಸಿನ ಉತ್ಸಾಹ ಹಾಗೂ ದೇಹದಲ್ಲಿ ಶಕ್ತಿಯು ಕ್ಷೀಣವಾಗುತ್ತದೆ. ಆದರೆ ಮೊಸಳೆಯ ಶಕ್ತಿಯು ಕುಗ್ಗುವ ಬದಲು ಇನ್ನೂ ಹೆಚ್ಚುತ್ತಾ ಹೋಗುತ್ತದೆ. ಮೊದಲಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಗಜರಾಜನನ್ನು ಕೊಚ್ಚಿ ಸೆಳೆಯತೊಡಗುತ್ತದೆ. ತನ್ನ ದೇಹ ಮತ್ತು ಸಾಮರ್ಥ್ಯದ ಬಗ್ಗೆ ಅತಿಯಾದ ಅಭಿಮಾನವುಳ್ಳ ಗಜರಾಜನು ತನ್ನನ್ನು ಬಿಡಿಸಿಕೊಳ್ಳುವದರಲ್ಲಿ ಸಂಪೂರ್ಣವಾಗಿ ಅಸಮರ್ಥನಾಗಿ ಹೋಗಿದ್ದನು. ಇನ್ನು ತನ್ನಿಂದ ಸಾಧ್ಯವೇ ಇಲ್ಲವೆಂದು ನಿಶ್ಚಯಿಸಿ, ಸರ್ವಶಕ್ತನಾದ ಪರಮಾತ್ಮನಲ್ಲಿ ತಾನು ಶರಣಾದರೆ ಆತನು ತನ್ನನ್ನು ರಕ್ಷಿಸಿ ಯಾನು ಎಂದು ಭಾವಿಸಿ ದೀನನಾಗಿ ತನ್ನನ್ನು ರಕ್ಷಿಸುವಂತೆ ನಾನಾ ವಿಧವಾಗಿ ಸ್ತುತಿಸುತ್ತ ಭಗವಂತನನ್ನು ಪ್ರಾರ್ಥಿಸಿಕೊಳ್ಳುತ್ತಾನೆ.


ಗಜರಾಜನ ಆ ಮೊರೆಯನ್ನು ಕೇಳಿ ಭಗವಂತ ಶ್ರೀಹರಿಯು ತಕ್ಷಣವೇ ಗರುಡನನ್ನು ಏರಿ, ಕೈಯಲ್ಲಿ ಸುದರ್ಶನವನ್ನು ಹಿಡಿದು ಆ ಸರೋವರದತ್ತ ಓಡಿ ಬರುತ್ತಾನೆ. ಶ್ರೀಹರಿಯನ್ನು ಕಂಡ ಗಜೇಂದ್ರನು ಭಕ್ತಿಯಿಂದ ಆ ಸರೋವರದಲ್ಲಿನ ಒಂದು ಸುಂದರವಾದ ಕಮಲವನ್ನು ತನ್ನ ಸೊಂಡಿಲಿನಿಂದ ಮೇಲೆತ್ತಿಕೊಂಡು, " ನಾರಾಯಣ ನನ್ನನ್ನು ರಕ್ಷಿಸು "ಎನ್ನುತ್ತಾ ಆ ಪುಷ್ಪವನ್ನು ಅರ್ಪಿಸುತ್ತಾನೆ. ಮೊಸಳೆಯಿಂದ ಪೀಡಿಸಲ್ಪಡುತ್ತಿರುವ ಗಜೇಂದ್ರನನ್ನು ನೋಡಿದೊಡನೆ, ದಯಾಮಯನಾದ ಶ್ರೀಹರಿಯು ಗರುಡನನ್ನು ಇಳಿದು ಗಜರಾಜನನ್ನು ಬಾಯಿಯಿಂದ ಕಚ್ಚಿ ಹಿಡಿದ ಮೊಸಳೆಯ ಸಮೇತವಾಗಿ ಸರೋವರದಿಂದ ಹೊರಗೆ ಕರೆದು ತರುತ್ತಾನೆ. ಈ ಸೋಜಿಗವನ್ನು ದೇವತೆಗಳೆಲ್ಲ ನೋಡನೋಡುತ್ತಿದ್ದಂತೆಯೇ.. ಶ್ರೀಹರಿಯು ಚಕ್ರಾಯುಧದಿಂದ ಮೊಸಳೆಯ ಬಾಯನ್ನು ಸೀಳಿ ಗಜೇಂದ್ರನನ್ನು ಬಿಡಿಸುತ್ತಾನೆ. ಶ್ರೀಹರಿಯ ಈ ಕಾರ್ಯವನ್ನು ನೋಡಿ ದೇವತೆಗಳು ಋಷಿಗಳು ಗಂಧರ್ವರು ಹೂ ಮಳೆಯನ್ನು ಗೈಯುತ್ತಾರೆ. ಸ್ವರ್ಗದಲ್ಲಿ ದೇವದುಂದುಭಿ ಗಳು ಮೊಳಗುತ್ತವೆ. ಗಂಧರ್ವ ಅಪ್ಸರೆಯರು ನೃತ್ಯಗಾನವನ್ನು ಮಾಡತೊಡಗುತ್ತಾರೆ. ಋಷಿಗಳು ಸಿದ್ಧರು ಶ್ರೀಹರಿಯನ್ನು ಸ್ತುತಿಸುತ್ತಾರೆ.


ಭಗವಂತನ ಚಕ್ರದ ಸ್ಪರ್ಶವಾದ ಕೂಡಲೇ ಆ ಮೊಸಳೆಯು ಒಂದು ದಿವ್ಯವಾದ ಶರೀರವನ್ನು ಹೊಂದುತ್ತದೆ. ಅವನು ಪೂರ್ವದಲ್ಲಿ "ಹೂಹೂ" ಎಂಬ ಗಂಧರ್ವನಾಗಿದ್ದನು. ಶಾಪದಿಂದ ಮೊಸಳೆಯಾಗಿ ಈ ಸರೋವರದಲ್ಲಿ ವಾಸಿಸುತ್ತಿದ್ದನು. ಭಗವಂತನ ಸ್ಪರ್ಶದಿಂದ ಅವನ ಪಾಪಗಳೆಲ್ಲ ನಾಶವಾಗಿ ಭಗವಂತನಿಗೆ ವಂದಿಸಿ ತನ್ನ ಲೋಕಕ್ಕೆ ತೆರಳುತ್ತಾನೆ.


ಇತ್ತ ಗಜೇಂದ್ರನೂ ಕೂಡ ಭಗವಂತನ ಸ್ಪರ್ಶ ಮಾತ್ರದಿಂದ ಅಜ್ಞಾನದ ಬಂಧನದಿಂದ ಮುಕ್ತನಾಗಿ ಪೀತಾಂಬರಧಾರಿಯಾಗಿ ಚತುರ್ಭುಜದಿಂದ ಕಂಗೊಳಿಸುತ್ತಾನೆ. ಗಜೇಂದ್ರನು ಕೂಡ ಹಿಂದಿನ ಜನ್ಮದಲ್ಲಿ ದ್ರವಿಡ ದೇಶದ ಪಾಂಡ್ಯ ವಂಶೀಯ ರಾಜನಾಗಿರುತ್ತಾನೆ. ಅವನಿಗೆ "ಇಂದ್ರದ್ಯುಮ್ನ" ಎಂಬ ಹೆಸರಿತ್ತು. ಹಿಂದಿನ ಜನ್ಮದಲ್ಲಿ ಆತ ಭಗವಂತನ ಉಪಾಸಕನಾಗಿದ್ದ. ಒಮ್ಮೆ ಇಂದ್ರದ್ಯುಮ್ನ ಮಹಾರಾಜನು ರಾಜ ವೈಭವವನ್ನು ತೊರೆದು ಪರ್ವತ ಒಂದರಲ್ಲಿ ತಪಸ್ಸನ್ನು ಆಚರಿಸುತ್ತಿರುತ್ತಾನೆ. ಆ ಸಮಯದಲ್ಲಿ ಒಂದು ದಿನ ಸ್ನಾನಾನಂತರ ಪೂಜೆ ಮಾಡುತ್ತ ಭಗವಂತನ ಆರಾಧನೆಯಲ್ಲಿ ತೊಡಗಿರುತ್ತಾನೆ. ಅದೇ ಸಮಯದಲ್ಲಿ ಪರಮ ತಪಸ್ವಿಗಳಾದ ಅಗಸ್ತ್ಯಮುನಿಗಳು ತನ್ನ ಶಿಷ್ಯರೊಂದಿಗೆ ಅಲ್ಲಿಗೆ ಆಗಮಿಸುತ್ತಾರೆ. ಇಂದ್ರದ್ಯುಮ್ನ ನು ತನ್ನ ಪ್ರಜಾಪಾಲನೆ ಮತ್ತು ಗೃಹಸ್ಥರಿಗೆ ಉಚಿತವಾದಂತಹ ಅತಿಥಿ ಸೇವೆ ಇವುಗಳನ್ನು ಮರೆತು ತಪಸ್ವಿಗಳಂತೆ ಏಕಾಂಗಿಯಾಗಿ ಏಕಾಂತದಲ್ಲಿ ಕುಳಿತು ಭಗವಂತನ ಉಪಾಸನೆ ಮಾಡುವುದನ್ನು ಕಂಡು ರಾಜನ ಮೇಲೆ ಕ್ರೋಧಗೊಳ್ಳುತ್ತಾರೆ.


"ಈ ರಾಜನು ಗುರು ಹಿರಿಯರಿಂದ ಶಿಕ್ಷಣವನ್ನು ಗ್ರಹಿಸಲಿಲ್ಲ, ಅಭಿಮಾನಕ್ಕೆ ವಶನಾಗಿ ಪರೋಪಕಾರದಿಂದ ನಿವೃತ್ತನಾಗಿ ಮನಬಂದಂತೆ ಮಾಡುತ್ತಿದ್ದಾನೆ. ಬ್ರಾಹ್ಮಣರಿಗೆ ಅಪಮಾನ ಮಾಡುವ ಇವನು ಆನೆಯಂತೆ ಜಡಬುದ್ಧಿಯವನಾಗಿ ಹೋಗಲಿ. ಘೋರ ಅಜ್ಞಾನಮಯ ಆನೆಯ ಜನ್ಮದೊರೆಯಲಿ" ಎಂದು ಶಾಪವನ್ನು ಕೊಡುತ್ತಾರೆ. ಈ ರೀತಿಯ ಶಾಪವನ್ನು ನೀಡಿ ಅಗಸ್ತ್ಯ ಋಷಿಗಳು ಅಲ್ಲಿಂದ ಹೊರಟು ಹೋದ ಮೇಲೆ, ಇದು ತನ್ನ ಪ್ರಾರಬ್ಧ ಎಂಬುದಾಗಿ ಭಾವಿಸಿ, ಇಂದ್ರದ್ಯುಮ್ನ ನು ಆ ಶಾಪವನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಮಹಾತ್ಮರ ಶಾಪದಂತೆ ಅಜ್ಞಾನಮಯ ಆನೆಯಾಗಿ ಆ ಪರ್ವತದಲ್ಲಿ ಜನಿಸುತ್ತಾನೆ. ಆದರೆ ಹಿಂದಿನ ಜನ್ಮದ ಭಗವಂತನ ಆರಾಧನೆಯ ಪ್ರಭಾವದಿಂದ ಅವನಿಗೆ ಭಗವಂತನ ಮೇಲಿನ ಸ್ಮೃತಿ ಯು ಹಿಂದಿನಂತೆಯೇ ಇತ್ತು. ಆದ್ದರಿಂದಲೇ ಸಂಕಟಕಾಲದಲ್ಲಿ ಭಗವಂತನನ್ನು ಧ್ಯಾನಿಸಿ ಭಗವಂತನ ಅನುಗ್ರಹವನ್ನು ಹೊಂದುತ್ತಾನೆ.


"ಗಜೇಂದ್ರ ಮೋಕ್ಷ" ಎಂಬ ಶೀರ್ಷಿಕೆಯಿಂದ ಶ್ರೀಹರಿಯ ಮಹಿಮೆಯ ನ್ನು ಸಾರುವ ಈ ಕಥೆಯು ಭಾಗವತ ಜನರಿಗೆ ಅತ್ಯಂತ ಪ್ರೀತಿಯ ಕಥೆಯಾಗಿದೆ.

Comments


bottom of page