top of page

ಧ್ರುವ ಚರಿತ್ರೆ

ಉತ್ತಾನಪಾದ ಎಂಬ ಮಹಾರಾಜನಿಗೆ ಸುನೀತಿ ಮತ್ತು ಸುರುಚಿ ಎಂಬ ಇಬ್ಬರು ಪತ್ನಿಯರಿದ್ದರು. ಸುರುಚಿಗೆ ಉತ್ತಮ ಎಂಬ ಪುತ್ರ, ಸುನೀತಿಗೆ ಧ್ರುವ ಎನ್ನುವಂತಹ ಪುತ್ರರು ಇದ್ದರು. ಅವರಿಬ್ಬರಲ್ಲಿ ಧ್ರುವಕುಮಾರನ ತಾಯಿಯಾದಂತಹ ಸುನೀತಿಯ ಮೇಲೆ ಮಹಾರಾಜನಿಗೆ ಹೆಚ್ಚಿನ ಪ್ರೇಮ ಇರಲಿಲ್ಲ. ಸುರುಚಿ ಎಂಬವಳು ಮಹಾರಾಜನಿಗೆ ಅತ್ಯಂತ ಪ್ರೀತಿ ಪಾತ್ರಳಾಗಿದ್ದಳು.

ಮನನೊಂದ ಧ್ರುವಕುಮಾರ

ಒಂದು ದಿನ ಮಹಾರಾಜನು ತನ್ನ ಪ್ರಿಯ ಪತ್ನಿ ಸುರುಚಿಯ ಪುತ್ರನಾದಂತಹ ಉತ್ತಮಕುಮಾರನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆಟವಾಡಿಸುತ್ತಾ ಮುದ್ದಿಸುತ್ತಿದ್ದನು. ಅದೇ ಸಮಯದಲ್ಲಿ ಧ್ರುವಕುಮಾರನು ಕೂಡ ಬಂದು ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಲು ಬಯಸುತ್ತಾನೆ. ಆದರೆ ರಾಜನು ಧ್ರುವ ಕುಮಾರನನ್ನು ಹತ್ತಿರ ಕರೆದು ಮುದ್ದಿಸಲಿಲ್ಲ. ಅಲ್ಲೇ ಇದ್ದು, ಅದನ್ನು ಗಮನಿಸಿದ ಮಹಾರಾಜನ ಪ್ರಿಯ ಪತ್ನಿ ಸುರುಚಿಯು ತನ್ನ ಸವತಿಯ ಪುತ್ರನಾದ ಧ್ರುವಕುಮಾರನು ಮಹಾರಾಜನ ತೊಡೆಯನೇರಲು ಬಯಸಿದ್ದನ್ನು ಕಂಡು ಅವನನ್ನು ಅವಮಾನಿಸಿ ಅಹಂಕಾರದ ನುಡಿಗಳಿಂದ ಅವಮಾನಿಸುತ್ತಾಳೆ. "ನೀನು ರಾಜ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅರ್ಹತೆ ಇದ್ದವನಲ್ಲ, ಮಹಾರಾಜರ ಮಗನಾದ ಮಾತ್ರಕ್ಕೆ ನಿನಗೆ ಆ ಯೋಗ್ಯತೆ ಬರುವುದಿಲ್ಲ. ಏಕೆಂದರೆ ನೀನು ನನ್ನ ಗರ್ಭದಲ್ಲಿ ಹುಟ್ಟಿದವನಲ್ಲ. ಮಹಾರಾಜರಿಗೆ ಪ್ರಿಯಾಳಾದ ನನ್ನ ಗರ್ಭದಲ್ಲಿ ಹುಟ್ಟಿದವರಿಗೆ ಮಾತ್ರ ಸಿಂಹಾಸನವನ್ನು ಪಡೆಯಲು ಯೋಗ್ಯತೆ ಬರುತ್ತದೆ. ನಿನಗೆ ರಾಜಸಿಂಹಾಸನವನ್ನು ಪಡೆಯಬೇಕೆಂಬ ಇಚ್ಛೆ ಇದ್ದರೆ.. ತಪಸ್ಸನ್ನು ಮಾಡಿ ಪರಮಪುರುಷನಾದ ಶ್ರೀಮನ್ ನಾರಾಯಣನನ್ನು ಆರಾಧಿಸು, ಅವನ ಕೃಪೆಯಿಂದ ನನ್ನ ಗರ್ಭದಿಂದ ಹುಟ್ಟಿ ಬಾ", ಎಂದು ವ್ಯಂಗ್ಯ ನುಡಿಗಳನ್ನು ಆಡುತ್ತಾಳೆ. ತಾಯಿಯ ವ್ಯಂಗ್ಯ ನುಡಿಗಳನ್ನು ಕೇಳಿದ ಧ್ರುವ ಕುಮಾರನು ನೊಂದು ತನ್ನ ತಾಯಿಯ ಬಳಿ ಓಡುತ್ತಾನೆ. ತಾಯಿಯನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಅದನ್ನು ನೋಡಿ ತಾಯಿಯಾದ ಸುನೀತಿಯು 'ಏನಾಯಿತು' ಎಂದು ಧ್ರುವ ಕುಮಾರನನ್ನು ವಿಚಾರಿಸದಾಗ, ನಡೆದ ವಿಷಯವನ್ನು ಹೇಳುತ್ತಾನೆ. ಸವತಿಯಾದ ಸುರುಚಿಯು ಆಡಿದ ಮಾತುಗಳನ್ನು ತಿಳಿದು ಸುನೀತಿಗೂ ಕೂಡ ಅತ್ಯಂತ ದುಃಖವಾಯಿತು . ಆದರೂ ಧ್ರುವ ಕುಮಾರನನ್ನು ತೊಡೆಯ ಮೇಲೆ ಕುಳ್ಳಿಸಿಕೊಂಡು, ಸಮಾಧಾನ ಮಾಡುತ್ತಾ, "ಮಗು! ನೀನು ಇನ್ನೊಬ್ಬರಿಗೆ ಯಾವ ಕೇಡನ್ನೂ ಬಯಸಕೂಡದು. ಇತರರಿಗೆ ದುಃಖ ಕೊಡುವವನು ಸ್ವತಃ ತಾನೆ ದುಃಖಕ್ಕೆ ವಶನಾಗುತ್ತಾನೆ. ದುರದೃಷ್ಟಶಾಲಿಯಾದ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬೆಳೆದವನು ನೀನು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಕಾರಣದಿಂದಲೇ ನಿನಗೆ ರಾಜಸಿಂಹಾಸನ ದುರ್ಲಭವಾಗಿದೆ. ರಾಜ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಇಚ್ಛೆ ನಿನಗಿದ್ದರೆ ದ್ವೇಷ ಭಾವವನ್ನು ಬಿಟ್ಟು ಶ್ರೀಹರಿಯನ್ನು ಆರಾಧಿಸು. ನಿನ್ನ ದುಃಖವನ್ನು ದೂರ ಮಾಡಲು ಅವನಲ್ಲದೆ ಬೇರಾರು ನಮಗೆ ಗತಿಯಿಲ್ಲ", ಎಂದು ಮಗನನ್ನು ಸಮಾಧಾನಿಸುತ್ತಾಳೆ. ತಾಯಿಯ ಹಿತನುಡಿಗಳಿಂದ ತನ್ನ ಬುದ್ಧಿಯ ಮೂಲಕ ಚಿತ್ತಕ್ಕೆ ಸಮಾಧಾನವನ್ನು ತಂದುಕೊಂಡ ಧ್ರುವಕುಮಾರನು ಕೂಡಲೇ ರಾಜ್ಯವನ್ನು ಆ ನಗರವನ್ನು ಬಿಟ್ಟು ತಪಸ್ಸನ್ನು ಆಚರಿಸಲು ಕಾಡುಗಳತ್ತ ಮುಖ ಮಾಡುತ್ತಾನೆ.



ಧ್ರುವಕುಮಾರ - ನಾರದರ ಭೇಟಿ

ಕಾಡಿನಲ್ಲಿ ಒಬ್ಬಂಟಿಯಾಗಿ ಅಲೆಯುತ್ತಿದ್ದ ಪುಟ್ಟ ಬಾಲಕ ಧ್ರುವನನ್ನು ಒಮ್ಮೆ ನಾರದ ಮಹರ್ಷಿಗಳು ನೋಡುತ್ತಾರೆ. ಅತ್ಯಂತ ತೇಜಸ್ವಿಯಾದ ಪುಟ್ಟ ಬಾಲಕನನ್ನು ನೋಡಿ ನಾರದರಿಗೆ ಆಶ್ಚರ್ಯ ಉಂಟಾಗುತ್ತದೆ. "ಮಗು ನೀನಿನ್ನು ಎಳೆಯ ಹಸುಳೆ, ನಗರದ ಆಟ ಪಾಠಗಳನ್ನು ಬಿಟ್ಟು ಈ ವಯಸ್ಸಿನಲ್ಲಿ ಈ ಕಾಡಿನಲ್ಲಿ ಅಲೆಯುತ್ತಿರುವ ಕಾರಣ ಏನು" ಎಂದು ಕೇಳುತ್ತಾರೆ. ಆಗ ಧ್ರುವ ಕುಮಾರನು ಎಲ್ಲ ವಿಚಾರಗಳನ್ನು ನಾರದರಿಗೆ ತಿಳಿಸುತ್ತಾನೆ. ಅವರು, "ಮಗು! ತಾಯಿಯ ಉಪದೇಶದಂತೆ ಯೋಗ ಸಾಧನೆಯ ಮೂಲಕ ಭಗವಂತನ ಕೃಪೆಯನ್ನು ಪಡೆಯುವುದು ನಿನ್ನ ಆಶಯ ಆದರೆ ಭಗವಂತನನ್ನು ಒಲಿಸಿಕೊಳ್ಳುವುದು ಸಾಮಾನ್ಯವಾದ ವಿಚಾರವಲ್ಲ, ಅನೇಕ ಋಷಿಮುನಿಗಳು ಕೂಡ ನಿರಂತರವಾದ ಯೋಗ ಸಾಧನೆಯನ್ನು ನಡೆಸಿಯೂ ಕೂಡ ಭಗವಂತನನ್ನು ಕಾಣುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಎಳೆಯ ಮಗುವಾದ ನೀನು ಈ ವ್ಯರ್ಥವಾದ ಹಠವನ್ನು ಬಿಟ್ಟು ನಿನ್ನ ತಾಯಿ ಇದ್ದಲ್ಲಿಗೆ ನಡೆ" ಎಂದು ಹೇಳುತ್ತಾರೆ.


ಇದನ್ನು ಕೇಳಿದ ಧ್ರುವ ಕುಮಾರನು, "ಪೂಜ್ಯರೇ! ನನ್ನಂತಹ ಅಜ್ಞಾನಿಗೆ ಭಗವಂತನನ್ನು ಒಲಿಸಿಕೊಳ್ಳುವ ಮಾರ್ಗ ಖಂಡಿತವಾಗಿಯೂ ದುರ್ಲಭವಾದದ್ದೆ. ಅದೂ ಅಲ್ಲದೆ ಕ್ಷತ್ರಿಯ ಕುಲದಲ್ಲಿ ಹುಟ್ಟಿದ ನನ್ನಲ್ಲಿ ಸಹಜವಾಗಿ ವಿನಯ ಭಾವವೂ ಇಲ್ಲ. ಆದರೆ ಸುರುಚಿಯ ಕಟುವಚನಗಳಿಂದ ಛಿದ್ರವಾದ ನನ್ನ ಹೃದಯದಲ್ಲಿ ಈ ನಿಮ್ಮ ಉಪದೇಶದಿಂದ ಬದಲಾವಣೆ ಆಗಲಾರದು. ನನ್ನ ತಂದೆ ತಾತಂದಿರಿಂದ ಪಡೆಯಲಾಗದ ವಿಶೇಷವಾದ ಪರಮ ಶ್ರೇಷ್ಠವಾದ ಸ್ಥಾನವನ್ನು ನಾನು ಪಡೆದೆ ತೀರಬೇಕು. ಅದೇ ನನ್ನ ಜೀವನದ ಗುರಿ. ಅದನ್ನು ಪಡೆಯುವುದಕ್ಕೆ ಅದೆಷ್ಟೇ ಕಠಿಣವಾದ ದಾರಿಯಾದರೂ ನಾನು ಹಿಂದೆ ಸರಿಯುವವನಲ್ಲ, ಅದಕ್ಕಾಗಿ ಭಗವಂತನಿಗೆ ಪ್ರಿಯರಾದ ತಾವೇ ಮುಂದೆ ನಿಂತು ನನಗೆ ಒಳ್ಳೆಯ ಮಾರ್ಗವನ್ನು ಉಪದೇಶಿಸಿರಿ" ಎಂದು ವಿನಮ್ರನಾಗಿ ನುಡಿಯುತ್ತಾನೆ. ಇದನ್ನು ಕೇಳಿ ನಾರದರು ಧ್ರುವಕುಮಾರನನ್ನು ಕುರಿತು, "ಮಗು ನಿನ್ನ ತಾಯಿ ಹೇಳಿರುವುದು ನಿನಗೆ ಪರಮ ಕಲ್ಯಾಣ ಕರವಾದ ಮಾರ್ಗವೇ ಹೌದು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳ ಅಭಿಲಾಷೆಯುಳ್ಳ ಮನುಷ್ಯನಿಗೆ ಅವುಗಳನ್ನು ಹೊಂದುವ ಏಕ ಮಾತ್ರ ಸಾಧನವೆಂದರೆ ಅದು ಶ್ರೀಹರಿಯ ಉಪಾಸನೆ ಒಂದೆ. ಆದ್ದರಿಂದ ಯಮುನಾ ನದಿಯ ದಡದಲ್ಲಿರುವ ಶ್ರೀಹರಿಯ ಸಾನಿಧ್ಯಕ್ಕೆ ತೆರಳಿ ನದಿಯ ನಿರ್ಮಲ ಜಲದಲ್ಲಿ ತ್ರಿಕಾಲಗಳಲ್ಲೂ ಸ್ನಾನವನ್ನು ಪೂರೈಸಿ ಏಕ ಚಿತ್ತನಾಗಿ ಭಗವಂತನನ್ನು ಧ್ಯಾನಿಸು. ಸಾಮಾನ್ಯರಿಗೆ ದುರ್ಲಭವಾದ ಭಗವಂತನನ್ನು ಒಲಿಸಿಕೊಳ್ಳಲು "ಓಂ ನಮೋ ಭಗವತೇ ವಾಸುದೇವಾಯ" ಎಂಬ ದಿವ್ಯ ಮಂತ್ರವನ್ನು ಸದಾ ಸ್ಮರಿಸು. ಶುದ್ಧವಾದ ಜಲ ಪುಷ್ಪಗಳಿಂದ ಸದಾ ಪರಮಾತ್ಮನ ನ್ನು ಪೂಜಿಸು." ಎಂದು ಉಪದೇಶಿಸುತ್ತಾರೆ. ನಾರದರಿಂದ ಉಪದೇಶವನ್ನು ಪಡೆದು ರಾಜಕುಮಾರನಾದ ಧ್ರುವನು ಅವರಿಗೆ ಪ್ರದಕ್ಷಿಣೆಗೈದು ನಮಸ್ಕರಿಸುತ್ತಾನೆ. ಆ ಬಳಿಕ ಅವರು ನಿರ್ದೇಶಸಿದ ತಪೋವನದತ್ತ ಹೊರಡುತ್ತಾನೆ.


ಅತ್ತ ನಾರದರು ಉತ್ತಾನಪಾದನ ಅರಮನೆಗೆ ಬಂದು, ಮಹಾರಾಜನಿಗೆ ಧ್ರುವಕುಮಾರನು ಸಿಕ್ಕು ಅಲ್ಲಿ ನಡೆದ ವಿಚಾರಗಳ ಬಗ್ಗೆ ತಿಳಿಸುತ್ತಾರೆ. ದೇವರ್ಷಿ ನಾರದರ ಮಾತನ್ನು ಕೇಳಿದ ಉತ್ತಾನಪಾದನು ರಾಜಕುಮಾರ ಧ್ರುವ ಹಾಗೂ ಅವನ ತಾಯಿ, ಸುನೀತಿಯ ವಿಚಾರದಲ್ಲಿ ತಾನು ಎಸಗಿದ ತಪ್ಪಿನಿಂದ ಪಶ್ಚಾತಾಪ ಪಟ್ಟು, ರಾಜಕಾರ್ಯ ರಾಜಭೋಗಗಳಲ್ಲಿ ಉದಾಸೀನನಾಗಿ ನಿರಂತರವಾಗಿ ಧ್ರುವನ ಕುರಿತು ಚಿಂತಿತನಾಗುತ್ತಾನೆ.


ಧ್ರುವಕುಮಾರನ ಕಠಿಣ ತಪಸ್ಸು

ಇತ್ತ ಧ್ರುವ ಕುಮಾರನು ನಾರದರು ಉಪದೇಶಿಸಿದಂತೆ ಏಕಾಗ್ರ ಚಿತ್ತದಿಂದ ಶ್ರೀಮನ್ನಾರಾಯಣನ ಉಪಾಸನೆಯನ್ನು ಪ್ರಾರಂಭಿಸುತ್ತಾನೆ. ಮೊದಲು ಮೂರು ದಿನಗಳಿಗೆ ಒಮ್ಮೆ ಮಾತ್ರ ಅಲ್ಪ ಪ್ರಮಾಣದ ಫಲಹಾರವನ್ನು ಸೇವಿಸಿ ಭಗವಂತನ ಆರಾಧನೆಯಲ್ಲಿ ತೊಡಗಿ ತಿಂಗಳು ಕಳೆಯುತ್ತಾನೆ. ಎರಡನೇ ತಿಂಗಳಲ್ಲಿ ಆರು ದಿನಗಳಿಗೆ ಒಮ್ಮೆಯಂತೆ ಒಣಗಿದ ಎಲೆ ಮತ್ತು ಹುಲ್ಲನ್ನು ತಿಂದು ಭಗವಂತನನ್ನು ಧ್ಯಾನಿಸುತ್ತಾನೆ. ಮೂರನೆಯ ತಿಂಗಳಲ್ಲಿ 9 ದಿನಗಳಿಗೊಮ್ಮೆ ಕೇವಲ ನೀರನ್ನು ಕುಡಿದು ಸಮಾಧಿ ಯೋಗದ ಮೂಲಕ ಭಗವಂತನನ್ನು ಆರಾಧಿಸುತ್ತಾನೆ. ನಾಲ್ಕನೆಯ ತಿಂಗಳಲ್ಲಿ ಶ್ವಾಸವನ್ನು ಜಯಿಸಿ 12 ದಿನಗಳಿಗೊಮ್ಮೆ ಮಾತ್ರ ವಾಯುವನ್ನು ಸ್ವೀಕರಿಸಿ ಧ್ಯಾನ ಯೋಗದ ಮೂಲಕ ಭಗವಂತನನ್ನು ಆರಾಧಿಸುತ್ತಾನೆ. ಐದನೆಯ ತಿಂಗಳಲ್ಲಿ ಶ್ವಾಸವನ್ನು ಸಂಪೂರ್ಣವಾಗಿ ಜಯಿಸಿ ಪರಬ್ರಹ್ಮನನ್ನೇ ಚಿಂತಿಸುತ್ತ ಒಂಟಿ ಕಾಲಿನ ಮೇಲೆ ನಿಶ್ಚಲವಾಗಿ ನಿಂತು ತಪಸ್ಸನ್ನು ಆಚರಿಸಲು ತೊಡಗುತ್ತಾನೆ. ಧ್ರುವ ಕುಮಾರನ ಈ ಘೋರವಾದ ತಪಸ್ಸಿನಿಂದ ಅವನ ತೇಜಸ್ಸನ್ನು ಸಹಿಸಲಾರದೆ ಮೂರು ಲೋಕಗಳು ಕೂಡ ನಡುಗಲಾರಂಭಿಸುತ್ತದೆ. ಅವನು ಒಂಟಿ ಕಾಲಿನ ಮೇಲೆ ನಿಂತುಕೊಂಡಾಗ ಅವನ ಕಾಲಿನ ಹೆಬ್ಬರಳಿನಿಂದ ತುಳಿಯಲ್ಪಟ್ಟ ಭೂಮಿಯು ಗಜರಾಜನು ಏರಿದ ಹಡಗಿನಂತೆ ಎಡ ಬಲಕ್ಕೆ ತೂಗಲಾರಂಭಿಸುತ್ತದೆ. ಧ್ರುವನು ತನ್ನ ಇಂದ್ರಿಯ ದ್ವಾರಗಳನ್ನು ಸ್ಥಂಬಿಸಿ ಅನನ್ಯ ಬುದ್ಧಿಯಿಂದ ವಿಷ್ಣುವನ್ನು ಧ್ಯಾನಿಸತೊಡಗಿದಾಗ ಸರ್ವ ಲೋಕಗಳಿಗೂ ಉಸಿರು ಕಟ್ಟಿ ಹೋಗುತ್ತದೆ. ಇದರಿಂದ ಎಲ್ಲಾ ಲೋಕಗಳು ಮತ್ತು ಲೋಕ ಪಾಲಕರು ಭಯಗೊಂಡು ಶ್ರೀಹರಿಯನ್ನು ಶರಣು ಹೋಗುತ್ತಾರೆ. "ಭಗವಂತ! ಈ ಎಳೆಯ ಬಾಲಕನ ಘೋರವಾದ ತಪಸ್ಸಿನಿಂದ ಸಮಸ್ತ ಸೃಷ್ಟಿಯು ಸ್ತಬ್ಧವಾಗಿದೆ. ಈಗ ನಮ್ಮೆಲ್ಲರನ್ನು ಕಾಪಾಡುವ ಹೊಣೆಯು ನಿನ್ನದೆ. ನೀನೇ ನಮಗೆ ದಾರಿ ತೋರಬೇಕು" ಎಂದು ಬೇಡಿಕೊಳ್ಳುತ್ತಾರೆ. ಇದನ್ನು ಕೇಳಿದ ಶ್ರೀಹರಿಯು, "ದೇವತೆಗಳೇ! ಹೆದರಬೇಡಿ. ಉತ್ತಾನ ಪಾದನ ಪುತ್ರನಾದ ಧ್ರುವ ಕುಮಾರನು ತನ್ನ ಚಿತ್ತವನ್ನು ನನ್ನಲ್ಲಿ ಲೀನವಾಗಿರಿಸಿ ತಪಸ್ಸನ್ನು ಮಾಡುತ್ತಿದ್ದಾನೆ. ನಾನೀಗಲೇ ಅವನನ್ನು ಅನುಗ್ರಹಿಸಿ ಈ ಎಲ್ಲಾ ಆತಂಕಗಳಿಂದ ಸೃಷ್ಟಿಯನ್ನು ಮುಕ್ತಗೊಳಿಸುತ್ತೇನೆ" ಎಂದು ಹೇಳುತ್ತಾನೆ. ಇಷ್ಟು ಹೇಳಿದ ಶ್ರೀಮನ್ನಾರಾಯಣನು ಗರುಡನನ್ನು ಏರಿ ತನ್ನ ಭಕ್ತನನ್ನು ಕಾಣಲು ಧಾವಿಸಿ ಬರುತ್ತಾನೆ.


ಭಕ್ತಿಗೆ ಒಲಿದ ಶ್ರೀಮನ್ನಾರಾಯಣ

ಕಠಿಣವಾದ ತಪಸ್ಸಿಗೆ ಒಲಿದು ಬಂದ ಶ್ರೀಹರಿಯನ್ನು ಕಣ್ಣೆದುರು ಕಂಡಾಗ ಬಾಲಕ ಧ್ರುವನಿಗೆ ಅತ್ಯಂತ ಸಂಭ್ರಮವಾಗುತ್ತದೆ. ತನ್ನ ಕಣ್ಣನ್ನೇ ತಾನು ನಂಬಲಾರದೇ ಭ್ರಮೆಗೆ ಒಳಗಾಗುತ್ತಾನೆ. ನಾನಾ ರೀತಿಯಿಂದ ಭಗವಂತನನ್ನು ಸ್ತುತಿಸಿ ನಮಿಸುತ್ತಾನೆ. ಧ್ರುವಕುಮಾರನ ಭಕ್ತಿಗೆ ಮಣಿದ ಭಗವಂತನು, "ವತ್ಸ! ನಿನ್ನ ಹೃದಯದ ಆಶಯವನ್ನು ನಾನು ಅರಿತಿದ್ದೇನೆ. ನೀನು ಬೇಡುತ್ತಿರುವುದು ಬಹಳ ಕಠಿಣವಾದ ಪದವಿಯಾದರೂ, ನಿನ್ನ ಭಕ್ತಿಗೆ ಮೆಚ್ಚಿ ನಾನದನ್ನು ಅನುಗ್ರಹಿಸುತ್ತಿದ್ದೇನೆ. ಯಾವತ್ತಿಗೂ ಸ್ಥಿರವಾದಂತಹ, ಪ್ರಳಯ ಕಾಲದಲ್ಲಿ ಎಲ್ಲ ಲೋಕಗಳು ನಾಶ ಹೊಂದಿದರೂ ಸ್ಥಿರವಾಗಿರುವಂತಹ ಧ್ರುವಲೋಕವನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ತಂದೆಯು ನಿನಗೆ ರಾಜ್ಯ ಸಿಂಹಾಸನವನ್ನು ಕೊಟ್ಟು ವಾನಪ್ರಸ್ಥ ಕ್ಕೆ ತೆರಳಿದ ಬಳಿಕ, ನೀನು ಶಕ್ತಿವಂತನಾಗಿ ಪರಾಕ್ರಮ ಶೀಲನಾಗಿ ಧರ್ಮದಿಂದ ಮೂವತ್ತಾರು ಸಾವಿರ ವರ್ಷಗಳವರೆಗೆ ಭೂಮಂಡಲವನ್ನು ಆಳು. ಭೂಲೋಕದ ಸಕಲ ಭೋಗಗಳನ್ನು ಅನುಭವಿಸಿ ಮುಂದೊಂದು ದಿನ ನಿನ್ನ ಜೀವನದ ಕೊನೆಯ ಕಾಲದಲ್ಲಿ, ಅನೇಕ ಬಗೆಯ ಯಾಗ ಯಜ್ಞಗಳಿಂದ ನನ್ನನ್ನು ಪೂಜಿಸಿ ನನ್ನನ್ನೇ ಸ್ಮರಿಸು. ಇದರಿಂದ ನೀನು ಕೊನೆಯಲ್ಲಿ ಸಮಸ್ತ ಲೋಕಗಳಿಗೂ ಮಿಗಿಲಾದ ಸಪ್ತರ್ಷಿಗಳಿಗಿಂತಲೂ ಮೇಲಿರುವ ಧ್ರುವಧಾಮಕ್ಕೆ ಹೋಗುವೆ. ಅಲ್ಲಿನ ಪದವಿ ನಿನಗೆ ಸ್ಥಿರವಾಗಿರುತ್ತದೆ" ಎಂದು ಆಶೀರ್ವದಿಸುತ್ತಾನೆ.


ಭಗವಂತನ ಅನುಗ್ರಹದಿಂದ ಧ್ರುವ ಕುಮಾರನು ಅತ್ಯಂತ ಸಂತೋಷವನ್ನು ಹೊಂದುತ್ತಾನೆ. ಅಷ್ಟು ದಿನಗಳ ಕಠಿಣ ತಪಸ್ಸನ್ನು ಆಚರಿಸಿಯೂ ಅವನ ಮನಸಿನಲ್ಲಿ ಅವರಿಸಿದ್ದ ತನ್ನ ಮಲತಾಯಿಯ ಮೇಲಿನ ದ್ವೇಷ ಭಾವವು ಭಗವಂತನ ದರ್ಶನದಿಂದ ಮರೆಯಾಗಿ, ಅವನ ಮನದ ಮಾಲಿನ್ಯಗಳೆಲ್ಲವೂ ದೂರಾಗಿ ನಿಷ್ಕಲ್ಮಶ ಭಾವ ಅವನಲ್ಲಿ ಸ್ಫುರಿಸುತ್ತದೆ. ಆಗ, 'ಭಗವಂತನ ಸಾಕ್ಷಾತ್ಕಾರವಾದಾಗ ಭವದ ಬಂಧನವನ್ನು ಬಿಡಿಸುವ ಮೋಕ್ಷವನ್ನೇ ಅನುಗ್ರಹಿಸು ಎಂದು ಕೇಳುವ ಬದಲು ಪದವಿಯನ್ನು ಬೇಡಿ ತಪ್ಪು ಮಾಡಿದೆ. ತನ್ನ ಮಂದಮತಿಗೆ ತಿಳಿಯಲಿಲ್ಲವಲ್ಲ' ಎಂದು ತನ್ನ ತಪ್ಪಿಗಾಗಿ ಪಶ್ಚಾತಾಪ ಪಟ್ಟು ಹಳಹಳಿಸುತ್ತಾ ಭಗವಂತನು ನಿರ್ದೇಶಿಸಿದಂತೆ ತನ್ನ ತಂದೆಯ ನಗರಕ್ಕೆ ಹಿಂದಿರುಗಲು ನಿರ್ಧಾರಿಸುತ್ತಾನೆ.


ರಾಜ್ಯಕ್ಕೆ ಮರಳಿದ ಧ್ರುವಕುಮಾರ

ಇತ್ತ ತನ್ನ ಮಗನು ಮರಳಿ ರಾಜ್ಯಕ್ಕೆ ಬರುತ್ತಿರುವ ಸಮಾಚಾರವನ್ನು ಕೇಳಿ, ಮಹಾರಾಜ ಉತ್ತಾನಪಾದನು ಅತ್ಯಂತ ಸಂತೋಷದಿಂದ ಬ್ರಾಹ್ಮಣರನ್ನು, ಮಂತ್ರಿಗಳನ್ನು, ಪುರಜನರನ್ನು ಜೊತೆಯಲ್ಲಿ ಕರೆದುಕೊಂಡು, ಅತ್ಯಂತ ಸಂಭ್ರಮದಿಂದ ರಾಜಕುಮಾರನನ್ನು ಇದಿರುಗೊಳ್ಳಲು ನಗರದ ಹೊರಗೆ ಬರುತ್ತಾನೆ. ಅವನ ರಾಣಿಯರಾದ ಸುನೀತಿ ಮತ್ತು ಸುರುಚಿಯರೂ ಕೂಡ ಅವನೊಡನೆ ಬಂದಿದ್ದರು. ಧ್ರುವಕುಮಾರನು ತಂದೆಯನ್ನು ಕಾಣುತ್ತಲೇ ತಂದೆಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುತ್ತಾನೆ. ತನ್ನ ಇಬ್ಬರು ತಾಯಂದಿರ ಚರಣಗಳಿಗೆ ತಲೆಹಚ್ಚಿ ನಮಸ್ಕಾರ ಮಾಡಿದಾಗ, ಚಿಕ್ಕಮ್ಮಳಾದ ಸುರುಚಿಯು ಕೂಡ ಕಾಲಿಗೆ ಬಿದ್ದ ಧ್ರುವಕುಮಾರನನ್ನು ಮೇಲೆತ್ತಿ 'ಚಿರಂಜೀವಿಯಾಗು' ಎಂದು ಆಶೀರ್ವದಿಸುತ್ತಾಳೆ. ತಾಯಿ ಸುನೀತಿಯು ಕೂಡ ತನ್ನ ಮಗನನ್ನು ನೋಡಿ ಅತ್ಯಂತ ಸಂತೋಷದಿಂದ ಅಷ್ಟು ದಿನಗಳ ತನ್ನೆಲ್ಲ ನೋವುಗಳನ್ನು ಮರೆಯುತ್ತಾಳೆ.


ಹಲವು ವರ್ಷಗಳ ನಂತರ ಧ್ರುವ ಕುಮಾರನು ಶಿಶುಮಾರನೆಂಬ ಪ್ರಜಾಪತಿಯ ಪುತ್ರಿ "ಭ್ರಮೆ" ಎಂಬುವವಳನ್ನು ವಿವಾಹವಾಗಿ ಅವಳಲ್ಲಿ ಕಲ್ಪ ಮತ್ತು ವತ್ಸರ ಎಂಬ ಇಬ್ಬರು ಪುತ್ರರನ್ನು ಪಡೆಯುತ್ತಾನೆ. ಇನ್ನೊಬ್ಬ ಪತ್ನಿಯಾಗಿದ್ದ ವಾಯು ಪುತ್ರಿ ಇಲಾದೇವಿಯಿಂದ ಉತ್ಕಲ ಎಂಬ ಪುತ್ರನನ್ನು ಹಾಗೂ ಒಂದು ಕನ್ಯಾರತ್ನವನ್ನು ಪಡೆಯುತ್ತಾನೆ.


ಒಂದು ದಿನ ಧ್ರುವನ ಸಹೋದರನಾದ ಉತ್ತಮಕುಮಾರನು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ, ಒಬ್ಬ ಯಕ್ಷನು ಅವನನ್ನು ಕೊಂದು ಹಾಕುತ್ತಾನೆ. ಪುತ್ರನ ಮರಣದ ಶ್ಲೋಕದಿಂದ ಅವನ ತಾಯಿ ಸುರುಚಿಯು ಕೂಡ ಮರಣವನ್ನ ಅಪ್ಪುತ್ತಾಳೆ. ಇದರಿಂದಾಗಿ ಕೆರಳಿದ ಧ್ರುವನು ಯಕ್ಷರ ಮೇಲೆ ಸಮರವನ್ನು ಸಾರಿ, ಕುಬೇರನ ರಾಜಧಾನಿಗೇ ಹೋಗಿ, ತನ್ನ ಪರಾಕ್ರಮದಿಂದ ಅಪಾರ ಹಾನಿಯನ್ನು ಉಂಟು ಮಾಡಿ ಕುಬೇರನನ್ನು ಕಂಗಡಿಸುತ್ತಾನೆ. ತನ್ನ ವಂಶದ ಹಿರಿಯನಾದ ಮನುವಿನ ಉಪದೇಶದಂತೆ ಯುದ್ಧವನ್ನು ನಿಲ್ಲಿಸಿ ತನ್ನ ಲೋಕಕ್ಕೆ ಮರಳುತ್ತಾನೆ. ಧ್ರುವಕುಮಾರನ ಸಾಹಸವನ್ನು ಮೆಚ್ಚಿ ಕುಬೇರನು ಅನುಗ್ರಹಿಸಲು ಮುಂದಾದಾಗ ಧ್ರುವನು, 'ಶ್ರೀಹರಿಯ ಸ್ಮರಣೆಯು ನನ್ನಲ್ಲಿ ಸದಾ ಸ್ಥಿರವಾಗಿರಲಿ' ಎಂದು ವರವನ್ನು ಬೇಡುತ್ತಾನೆ.


ಧ್ರುವಲೋಕ

ಇದಾದ ಮೇಲೆ ಅನೇಕ ಸಾವಿರ ವರ್ಷಗಳವರೆಗೆ ಧರ್ಮತ್ಮನಾಗಿ ಭೂಮಂಡಲವನ್ನು ಆಳಿದ ಧ್ರುವಕುಮಾರನು, ತನ್ನ ಪುತ್ರನಾದ ಉತ್ಕಲನಿಗೆ ರಾಜಸಿಂಹಾಸನವನ್ನು ಒಪ್ಪಿಸಿ ಬದರಿಕಾಶ್ರಮಕ್ಕೆ ತೆರಳುತ್ತಾನೆ. ಅಲ್ಲಿ ಭಗವಂತನ ಸ್ಮರಣೆಯಲ್ಲಿ ಕಾಲ ಕಳೆಯುತ್ತಿರುವಾಗ ಒಂದು ದಿನ ಶ್ರೀಹರಿಯ ಸೇವಕರು ಒಂದು ಸುಂದರವಾದ ವಿಮಾನದಲ್ಲಿ ಬಂದು ಧ್ರುವನನ್ನು ಕರೆದುಕೊಂಡು ಹೋಗುತ್ತಾರೆ. ಆ ದಿವ್ಯವಾದ ವಿಮಾನದಲ್ಲಿ ಕುಳಿತು ಮೂರು ಲೋಕಗಳನ್ನು ದಾಟಿ ಸಪ್ತರ್ಷಿ ಮಂಡಲದಿಂದಲೂ ಮೇಲಿರುವ ಮಹಾವಿಷ್ಣುವಿನ ಧಾಮವನ್ನು ತಲುಪಿ, ಹಿಂದೆಯೇ ಭಗವಂತನು ಅನುಗ್ರಹಿಸಿದಂತೆ ಸ್ಥಿರವಾದ ಪದವಿಯನ್ನು ಹೊಂದುತ್ತಾನೆ.

Comments


bottom of page