ನಾರದರ ಪೂರ್ವ ವೃತ್ತಾಂತ
- Asha Satish

- Nov 24, 2025
- 3 min read
ಪುರಾಣದ ಕಥೆಗಳನ್ನು ಕೇಳುವಾಗ ಸದಾ ಕೇಳುವ ಒಂದು ಹೆಸರು ನಾರದ ಮಹರ್ಷಿಗಳದ್ದು. ಪುರಾಣಗಳ ಉದ್ದಕ್ಕೂ ನಾವು ಅಲ್ಲಲ್ಲಿ ನಾರದರ ಹೆಸರನ್ನು ಕೇಳಿರುತ್ತೇವೆ. ಅಷ್ಟೇ ಅಲ್ಲ, ನಾರದರೆಂದರೆ ತ್ರಿಲೋಕ ಸಂಚಾರಿಗಳೆಂದೂ, ಪರಮಾತ್ಮನ ಪರಮ ಭಕ್ತರೂ, ಭಗವಂತನಿಗೂ ಅಷ್ಟೇ ಪ್ರಿಯರಾದವರು ಎಂಬ ವಿಚಾರವೂ ಕೂಡ ನಮಗೆ ತಿಳಿದಿದೆ. ಹಾಗಾದರೆ ಈ ನಾರದರು ಯಾರು? ಇವರ ಪೂರ್ವ ವೃತ್ತಾಂತವನ್ನು ನಾವು ಈ ಕಥೆಯಲ್ಲಿ ತಿಳಿದುಕೊಳ್ಳೋಣ.

ವೇದ ಕೋವಿದರಾದ ಓರ್ವ ಬ್ರಾಹ್ಮಣ ಯೋಗಿ ಇದ್ದರು. ಅವರ ಮನೆಯಲ್ಲಿ ಓರ್ವ ದಾಸಿ ತನ್ನ ಮಗನೊಂದಿಗೆ ಯೋಗಿಗಳ ಮನೆಯ ಸೇವೆಯಲ್ಲಿ ನಿರತಳಾಗಿದ್ದಳು. ಆಕೆಯು ತನ್ನ ಮಗನಿನ್ನೂ ಎಳೆಯ ಬಾಲಕನಗಿರುವಾಗಲೇ ಅವನನ್ನು ಆ ಯೋಗಿಗಳ ಶುಶ್ರೂ ಷೆ ಗೆ ನೇಮಿಸಿದ್ದಳು. ಆ ಬಾಲಕನೂ ಕೂಡ ಅತ್ಯಂತ ಶ್ರದ್ಧೆಯಿಂದ ಆ ಯೋಗಿಗಳ ಸೇವೆ ಮಾಡುತ್ತಿದ್ದನು. ಅವರ ಅನುಮತಿಯನ್ನು ಪಡೆದು ಅವರಿಗಾಗಿ ಮಾಡಿದ್ದ ಅಡುಗೆಯ ಪಾತ್ರೆಯಲ್ಲಿ ಅಂಟಿಕೊಂಡಿದ್ದ ಅಲ್ಪ ಶೇಷವನ್ನೇ ಪ್ರಸಾದವೆಂದು ಭಾವಿಸಿ ದಿನಕ್ಕೆ ಒಂದು ಬಾರಿ ಮಾತ್ರ ಸೇವಿಸುತ್ತಿದ್ದನು. ಅದರಿಂದ ಆ ಬಾಲಕನ ಪಾಪಗಳೆಲ್ಲವೂ ತೊಳೆದು ಹೋದವು. ಅವರ ಸೇವೆಯನ್ನು ಮಾಡುತ್ತ ಮಾಡುತ್ತಾ ಆ ಬಾಲಕನ ಹೃದಯವು ಶುದ್ದವಾಗಿ ಆ ಯೋಗಿಗಳಂತೆ ಭಜನೆ ಪೂಜೆಗಳಲ್ಲಿ ಆ ಬಾಲಕನ ಮನಸ್ಸು ಆನಂದವನ್ನು ಕಾಣಲು ಆರಂಭಿಸುತ್ತದೆ. ಚಾಪಲ್ಯ ರಹಿತನೂ, ನಿಷ್ಕಲ್ಮಶ ಮನದವನೂ, ಮಿತ ಭಾಷಿಯೂ ಆಗಿದ್ದ ಆ ಬಾಲಕನ ಸದ್ಗುಣಗಳನ್ನು ಗಮನಿಸಿದ ಆ ಯೋಗಿಗಳು ಆ ಎಳೆಯ ಬಾಲಕನ ಮೇಲೆ ಪರಮಾನುಗ್ರಹವನ್ನು ಮಾಡಿದ್ದರು. ಪ್ರತಿನಿತ್ಯವೂ ಯೋಗಿಗಳ ಅನುಗ್ರಹದಿಂದ ಭಗವಂತನ ಮನೋಹರ ಕಥೆಗಳನ್ನು ಕೇಳುತ್ತಿದ್ದನು ಅವುಗಳ ಪ್ರಭಾವದಿಂದ ಬಾಲಕನ ಎಳೆಯ ಮನಸ್ಸು ಸಂಪೂರ್ಣವಾಗಿ ಭಗವಂತನ ನನ್ನು ಆರಾಧಿಸಿ ಪೂಜಿಸುತ್ತಾ ಸಂಪೂರ್ಣವಾಗಿ ಭಗವಂತನ ವಶವಾಗಿ ಹೋಯಿತು. ರಜೋಗುಣ ತಮೋಗುಣಗಳನ್ನು ನಾಶ ಮಾಡುವಂತಹ ದಿವ್ಯವಾದ ಭಕ್ತಿಯು ಆ ಬಾಲಕನ ಹೃದಯದಲ್ಲಿ ಅಂಕುರಿಸಿತು.
ಹೀಗಿರುವಾಗ ಒಮ್ಮೆ ಆ ಯೋಗಿಗಳು ತನ್ನನ್ನು ಪ್ರೀತಿಯಿಂದ ಸೇವೆಗೈದ ಆ ಬಾಲಕನಿಗೆ ಸ್ವಯಂ ಭಗವಂತನೇ ತನಗೆ ಉಪದೇಶ ಮಾಡಿದ್ದಂತಹ ರಹಸ್ಯವಾದ ಜ್ಞಾನವನ್ನು ಉಪದೇಶಿಸಿದರು. ಆ ಉಪದೇಶದಿಂದ ಜಗತ್ತಿನ ಮೇಲೆ ಭಗವಂತನ ಪ್ರಭಾವವು ಏನು ಎನ್ನುವುದನ್ನು ಆ ಬಾಲಕನು ಅರಿತು, ಆತ್ಮ ಸ್ವರೂಪದ ಜ್ಞಾನವನ್ನು ಕೂಡ ಪಡೆದನು. ಇದಾದ ಬಳಿಕ ಆ ಯೋಗಿಯು ಅಲ್ಲಿಂದ ಹೊರಟು ಹೋದರು.
ಭಗವಂತನ ಮೇಲೆ ಅಪಾರವಾದ ಪ್ರೇಮವನ್ನು ಹೊಂದಿದ್ದು, ಲೌಕಿಕ ಜೀವನದಿಂದ ದೂರ ಸರಿಯುವ ಮನಸ್ಸಿದ್ದರೂ ಕೂಡ ಇನ್ನೂ ಎಳೆಯ ವಯಸ್ಸಾಗಿದ್ದರಿಂದ ಮತ್ತು ತಾಯಿಗೆ ತನ್ನ ಹೊರತು ಮತ್ಯಾರೂ ಗತಿಯಿರದ ಕಾರಣ,ತನ್ನ ತಾಯಿಯೊಂದಿಗೇ ಆ ಬಾಲಕನು ಜೀವನವನ್ನು ಮುನ್ನಡೆಸುತ್ತಿದ್ದನು. ಒಂದು ದಿನ ಹಾಲು ಕರೆಯುವುದಕ್ಕೆ ಎಂದು ಹೋದ ತಾಯಿ ವಿಷ ಸರ್ಪದ ಕಡಿತಕ್ಕೆ ಒಳಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಳು. ಆದರೆ ಆತ್ಮ ಜ್ಞಾನವನ್ನು ಹೊಂದಿದ್ದ ಬಾಲಕ ತಾಯಿಯ ಸಾವಿನಿಂದ ಸ್ವಲ್ಪವೂ ವಿಚಲಿತನಾಗಲಿಲ್ಲ. ಇದು ಭಗವಂತನ ನಿರ್ಧಾರ ಎಂದು ತಿಳಿದು ಉತ್ತರ ದಿಕ್ಕಿನ ಕಡೆಗೆ ಹೊರಟುಬಿಟ್ಟನು.
ಒಬ್ಬಂಟಿಗನಾಗಿ ಹೊರಟ ಬಾಲಕನಿಗೆ ಅನೇಕ ಧನ ಧಾನ್ಯ ಸಂಪನ್ನ ದೇಶಗಳು, ನಗರಗಳು, ಗ್ರಾಮಗಳು ಎಲ್ಲವೂ ಸಿಕ್ಕರೂ ಕೂಡ ಯಾವುದರಲ್ಲೂ ಆಸಕ್ತಿ ಕಾಣಲಿಲ್ಲ. ಬಣ್ಣ ಬಣ್ಣದ ಧಾತುಗಳಿಂದ ಕಂಗೊಳಿಸುವ ಸಮೃದ್ಧ ಪರ್ವತಗಳು, ಮರ-ಗಿಡಗಳು, ಚಿಲಿಪಿಲಿ ಗುಟ್ಟುವ ಬಗೆ ಬಗೆಯ ಪಕ್ಷಿಗಳು, ಜೇಂಕರಿಸುವ ದುಂಬಿಗಳು, ಬಗೆ ಬಗೆಯ ಪುಷ್ಪಗಳು, ತಾವರೆಯ ಕೊಳಗಳು ಇವೆಲ್ಲಕ್ಕೂ ಕಾರಣನಾದ ಸಾಕ್ಷಾತ್ ಭಗವಂತನನ್ನೇ ಕಾಣಬೇಕೆಂದು ಮನಸ್ಸು ಹಪಹಪಿಸುತ್ತಿತ್ತು. ದೂರದ ಪ್ರಯಾಣದಿಂದ ಎಳೆಯ ಬಾಲಕನ ದೇಹ ಬಳಲಿ ಹಸಿವು ಬಾಯಾರಿಕೆಗಳಿಂದ ಜರ್ಜರಿತವಾಗಿತ್ತು. ಆಗ ಸಮೀಪವಿದ್ದ ನದಿಯೊಂದರಲ್ಲಿ ಸ್ನಾನ ಮಾಡಿ ನೀರು ಕುಡಿದು ಆಯಾಸವನ್ನ ಪರಿಹರಿಸಿಕೊಂಡು, ನಿರ್ಜನವಾದ ಅರಣ್ಯದ ಒಂದು ಅರಳಿ ಮರದ ಬುಡದಲ್ಲಿ ಕುಳಿತು ಪರಮಾತ್ಮನ ಸ್ವರೂಪವನ್ನು ಧ್ಯಾನ ಮಾಡತೊಡಗಿದನು. ಭಾವಪೂರ್ಣವಾಗಿ ಏಕಾಗ್ರ ಚಿತ್ತದಿಂದ ಭಗವಂತನ ಪಾದಾರವಿಂದಗಳನ್ನು ಧ್ಯಾನಿಸುತ್ತಿರುವಾಗ ಆತನ ದರ್ಶನದ ಉತ್ಕಟತೆಯಿಂದ ಕಣ್ಣುಗಳಲ್ಲಿ ಅರಿವಿಲ್ಲದೆಯೇ ಆನಂದದ ಅಶ್ರುಗಳು ತುಂಬಿದ್ದವು. ಎಳೆಯ ಬಾಲಕನ ಪುಟ್ಟ ಹೃದಯದಲ್ಲಿ ಶ್ರೀಹರಿಯು ಪ್ರಕಟನಾಗಿ ಬಿಟ್ಟನು. ಭಗವಂತನ ಮೇಲಿನ ಅನನ್ಯ ಪ್ರೇಮ ಭಾವದಿಂದ ರೋಮಾಂಚಿತನಾಗಿ ಅನಿರ್ವಚನೀಯ ಆನಂದವನ್ನು ಅನುಭವಿಸಿದನು. ಆ ಆನಂದದ ಪ್ರವಾಹದಲ್ಲಿ ಮುಳುಗಿ ಹೋಗಿದ್ದ ಬಾಲಕನಿಗೆ ಭಗವಂತನ ಹೊರತಾಗಿ ಏನೂ ಕಾಣಿಸದ ಹಾಗಾಯಿತು. ಆದರೆ ಕ್ಷಣ ಮಾತ್ರದಲ್ಲಿ ಆ ರೂಪವು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಬಾಲಕನಿಗೆ ಅತ್ಯಂತ ಬೇಸರವಾಯಿತು. ಭಗವಂತನ ಆ ದಿವ್ಯರೂಪವನ್ನು ಮತ್ತೆ ದರ್ಶಿಸಬೇಕೆಂದು ಬಯಸಿ ಮತ್ತೆ ಹಿಂದಿನಂತೆ ಮನಸ್ಸನ್ನು ನೆಲೆಗೊಳಿಸಿ ಭಗವಂತನ ದರ್ಶನಕ್ಕಾಗಿ ಸತತವಾದ ಪ್ರಯತ್ನವನ್ನು ನಡೆಸುತ್ತಿದ್ದನು. ಆದರೆ ಎಷ್ಟೇ ಪ್ರಯತ್ನಿಸಿದರು ಭಗವಂತನು ಪುನಃ ಕಾಣದಾದಾಗ ತೀವ್ರವಾದ ಅತೃಪ್ತಿಯಿಂದ ನರಳಾಡಿದನು. ಭಗವಂತನ ದರ್ಶನಕ್ಕಾಗಿ ಪುನಃ ಪುನಃ ಪ್ರಯತ್ನ ನಡೆಸುತ್ತಲೇ ಇದ್ದನು.
ಹಾಗಿರುವಾಗ ಒಮ್ಮೆ ಭಗವಂತನು ಅಶರೀರವಾಣಿಯ ಮೂಲಕವಾಗಿ ಈ ಜನ್ಮದಲ್ಲಿ ನೀನು ಮತ್ತೊಮ್ಮೆ ನನ್ನ ದರ್ಶನ ಮಾಡಲಾರೆ ಏಕೆಂದರೆ ನಿನ್ನ ಮನಸ್ಸು ಮನುಷ್ಯ ಸಹಜವಾದ ಆಸೆಗಳು ಶಾಂತವಾಗದೆ ಇರುವ ಅಪಕ್ವವಾದ ಮನಸ್ಸಾಗಿದೆ ಹೀಗೆ ಅಪಕ್ವವಾದ ಮನಸ್ಸನ್ನು ಹೊಂದಿರುವ ಯೋಗಿಗಳಿಗೆ ನನ್ನ ದರ್ಶನವು ದುರ್ಲಭ. "ಎಲೈ ಬಾಲಕ! ನಿನ್ನ ಹೃದಯದಲ್ಲಿ ನನ್ನನ್ನು ಪಡೆಯುವ ಹಂಬಲವನ್ನ ಜಾಗೃತವಾಗಿರಿಸಲೆಂದೇ ನಾನು ಒಮ್ಮೆ ನಿನಗೆ ನನ್ನ ರೂಪವನ್ನು ತೋರಿಸಿದೆ ನನ್ನನ್ನು ಪಡೆಯಬೇಕೆಂಬ ಉತ್ಕಟವಾದ ಆಕಾಂಕ್ಷೆ ನಿನ್ನ ಹೃದಯದಲ್ಲಿ ಸದಾ ಜಾಗೃತವಾಗಿ ಭಗವಂತನನ್ನು ಹೊಂದಲು ಅಡ್ಡಿಯಾಗಿರುವ ಲೌಕಿಕ ವಾಸನೆಯೂ ನಿನ್ನ ಹೃದಯದಿಂದ ಸಂಪೂರ್ಣ ತೊಲಗಿ ಹೋಗುತ್ತದೆ. ನನ್ನನ್ನು ಪಡೆಯಬೇಕೆಂಬ ನಿನ್ನ ದೃಢ ನಿಶ್ಚಯವು ಎಂದಿಗೂ ಕದಲಲಾರದು. ಸಮಸ್ತ ಸೃಷ್ಟಿಯು ಪ್ರಳಯವಾಗಿ ಹೋದರು ನನ್ನ ಕೃಪೆಯಿಂದ ನಿನ್ನಲ್ಲಿರುವ ನನ್ನ ಸ್ಮೃತಿಯು ಹಾಗೆಯೇ ಇರುವುದು" ಎಂದು ನುಡಿಯುತ್ತದೆ.
ಅಂದಿನಿಂದ ಆ ಬಾಲಕನು ಭಗವಂತನ ಮಂಗಳಮಯವಾದ ನಾಮಗಳನ್ನು ಲೀಲೆಗಳನ್ನು ಸಂಕೀರ್ತನೆ ಮಾಡುತ್ತಾ ಭೂಮಿಯ ತುಂಬಾ ಸಂಚರಿಸುತ್ತಾ ಮದ ಮಾತ್ಸರ್ಯ ಆಸೆಗಳನ್ನು ತೊರೆದು ಸಂತುಷ್ಟ ಮನಸ್ಸಿನಿಂದ ಕೂಡಿ ಭಗವಂತನನ್ನು ದರ್ಶಿಸುವ ಕಾಲವನ್ನು ಎದುರು ನೋಡುತ್ತಾ ಇರುತ್ತಾನೆ.
ಹೀಗಿರುವಾಗ ಶ್ರೀಮನ್ನಾರಾಯಣನು ಪ್ರಳಯ ಕಾಲದ ಸಮುದ್ರ ಜಲದಲ್ಲಿ ನಿದ್ರೆ ಮಾಡಲು ಸಂಕಲ್ಪಿಸುತ್ತಾನೆ. ಆಗ ಬ್ರಹ್ಮದೇವರು ತನ್ನ ಸೃಷ್ಟಿಯನ್ನು ಉಪಸಂಹಾರ ಗೊಳಿಸುತ್ತಾರೆ. ಆಗ ಈ ಬಾಲಕನು ಕೂಡ ಅವನ ಉಸಿರಾಗಿ ಭಗವಂತನನ್ನು ಸೇರಿಕೊಳ್ಳುತ್ತಾನೆ. ಒಂದು ಸಾವಿರ ಚತುರ್ ಯುಗಗಳು ಕಳೆದ ಬಳಿಕ ಬ್ರಹ್ಮನು ಎಚ್ಚರಗೊಂಡು ಪುನಃ ಸೃಷ್ಟಿಯನ್ನು ಮಾಡುತ್ತಾನೆ ಆ ಸಂದರ್ಭದಲ್ಲಿ ಅವನ ಪ್ರಾಣಗಳ ಮೂಲಕವಾಗಿ ಮರೀಚ್ಯಾದಿ ಅನೇಕ ಋಷಿಗಳನ್ನು ಪ್ರಕಟಗೊಳಿಸುತ್ತಾನೆ. ಅವರಲ್ಲಿ ಈ ಬಾಲಕನು ಕೂಡ ನಾರದ ಮುನಿಯಾಗಿ ಪ್ರಕಟಗೊಳ್ಳುತ್ತಾರೆ . ಅಂದಿನಿಂದ ಭಗವಂತನ ಕೃಪೆಯಿಂದ ಮೂರು ಲೋಕಗಳಲ್ಲಿಯ ಒಳಗೂ ಹೊರಗೂ ಯಾವ ಅಡೆತಡೆ ಇಲ್ಲದೆ ಸಂಚರಿಸುತ್ತಾ ಭಗವಂತನು ಅನುಗ್ರಹಿಸಿರುವ ನಾದಬ್ರಹ್ಮನಿಂದ ಅಲಂಕೃತವಾದ "ಮಹತಿ "ಎಂಬ ವೀಣೆಯನ್ನು ನುಡಿಸುತ್ತಾ ಶ್ರೀಹರಿಯ ದಿವ್ಯ ಮನೋಹರ ಕಥೆಗಳನ್ನು ಹಾಡುತ್ತಾ ಸಂಚರಿಸುತ್ತಾನೆ . ಸ್ತೋತ್ರ ಪ್ರಿಯನಾದ ಭಗವಂತನನ್ನು ಗಾನ ಮಾಡಿ ಸ್ತುತಿಸುತ್ತಾನೆ. ಹಾಗೆ ಮಾಡಿದಾಗೆಲ್ಲ ಭಗವಂತನು ನಾರದರ ಹೃದಯಕ್ಕೆ ಬಂದು ದಿವ್ಯದರ್ಶನವನ್ನು ದಯಪಾಲಿಸುತ್ತಾನೆ. ತನ್ನ ಅನನ್ಯ ಭಕ್ತನಾದ ನಾರದ ಮಹರ್ಷಿಗಳನ್ನು ಲೋಕಕಲ್ಯಾಣದ ತನ್ನ ಕಾರ್ಯಗಳಲ್ಲಿ ಭಗವಂತನು ಸದಾ ಬಳಸಿಕೊಳ್ಳುತ್ತಾನೆ.
ಆದ್ದರಿಂದಲೇ ನಾರದರು ದೇವಋಷಿ, ತ್ರಿಲೋಕ ಸಂಚಾರಿ ಎಂಬೆಲ್ಲ ಹೆಸರಿನಿಂದ ಭಗವಂತನ ಆರಾಧಕರಿಗೆ ಪೂಜ್ಯರೆನಿಸಿಕೊಂಡಿದ್ದಾರೆ.






Comments