ಭಕ್ತ ಅಂಬರೀಶ
- Asha Satish

- 2 days ago
- 3 min read
ವೈವಸ್ವತ ಮನುವಿನ ಮಗ ನಭಗ. ಅವನ ಮಗ ನಾಭಾಗ. ಆ ನಾಭಾಗನಿಗೆ ಒಬ್ಬ ಭಗವತ್ಪ್ರೇಮಿಯೂ, ಧರ್ಮಾತ್ಮನೂ ಆದ ಅಂಬರೀಶ ಎನ್ನುವ ಮಗನಿದ್ದ. ಅಂಬರೀಶ ಮಹಾರಾಜನು ಸಪ್ತ ದ್ವೀಪಗಳಿಂದ ಒಳಗೊಂಡ ಅಖಂಡ ಭೂಮಂಡಲಕ್ಕೆ ಒಡೆಯನಾಗಿ, ಸಕಲ ಸಂಪತ್ತು ಐಶ್ವರ್ಯಗಳು ಅವನಿಗಿದ್ದರೂ, ಅದನ್ನು ಕ್ಷಣಿಕವೆಂದೂ, ಸಂಪತ್ತಿನ ಮೋಹದಿಂದ ಮನುಷ್ಯನು ತಮೋಗುಣದಲ್ಲಿ ಮುಳುಗಿ ನರಕವಶನಾಗುತ್ತಾನೆಂದೂ ನಂಬಿದವನಾಗಿದ್ದನು. ಭಗವಂತನಲ್ಲಿ ಪರಮ ಪ್ರೀತಿಯನ್ನೂ, ಭಕ್ತಿಯನ್ನೂ ಹೊಂದಿದ ಅಂಬರೀಶನಿಗೆ ಲೌಕಿಕ ವಿಚಾರಗಳಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಪರಮಭಾಗವತನಾದ ಅಂಬರೀಶನ ಮನಸ್ಸು ಸಂಪೂರ್ಣವಾಗಿ ಭಗವಂತನ ಸ್ಮರಣೆಯಲ್ಲಿ ಭಗವಂತನ ಸೇವೆಯಲ್ಲಿಯೇ ಆನಂದವನ್ನು ಹೊಂದುತ್ತಿತ್ತು. ತನ್ನ ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ಭಗವಂತನ ಸೇವೆಗಾಗಿಯೇ ಇರುವುದೆಂದು ಭಾವಿಸಿದಂತಹ ಸದ್ಭಕ್ತನಾಗಿದ್ದನು. ಮಾಡುವ ಪ್ರತಿ ಕೆಲಸಗಳಲ್ಲಿಯೂ ನಿಷ್ಕಾಮವಾದ ಪ್ರೀತಿಯನ್ನು ಹೊಂದಿದ್ದು, ಕರ್ಮಫಲವನ್ನು ಭಗವಂತನಿಗೆ ಅರ್ಪಿಸಿ ಭಗವಂತನ ದಾಸಾನುದಾಸನಾಗಿ ಬದುಕುತ್ತಿದ್ದನು. "ಧನ್ವ" ಎನ್ನುವ ಮರುಭೂಮಿಯಲ್ಲಿ ಸರಸ್ವತಿ ನದಿಯ ಪ್ರವಾಹಕ್ಕೆ ಎದುರಾಗಿ, ವಸಿಷ್ಠರು-ಗೌತಮರು ಮೊದಲಾದ ಮಹಾ ಆಚಾರ್ಯರ ಮೂಲಕವಾಗಿ, ಬಹುದಕ್ಷಣೆಗಳನ್ನು ನೀಡಿ ಅಶ್ವಮೇಧ ಯಜ್ಞವನ್ನು ಮಾಡಿ, ಯಜ್ಞಪತಿಯಾದ ಭಗವಂತನನ್ನು ಆರಾಧಿಸಿದ್ದನು. ಸದಾ ರಾಜ್ಯದ ಹಾಗೂ ಪ್ರಜೆಗಳ ಹಿತವನ್ನು ಲಕ್ಷ್ಯ,ದಲ್ಲಿಟ್ಟುಕೊಂಡು ಧರ್ಮಕಾರ್ಯಗಳಲ್ಲಿ ನಿರತನಾಗಿ, ಪ್ರಜೆಗಳ ಪಾಲಿಗೆ ಸ್ವತಃ ದೇವರಂತೆ ಪರಿಣಮಿಸಿದ್ದನು. ರಾಜನನ್ನು ನೋಡಿ ಪ್ರಜೆಗಳು ಕೂಡ ಭಗವಂತನ ಆರಾಧನೆಯಲ್ಲಿ ತೊಡಗಿದ್ದರು. ಅರಮನೆ, ಪತ್ನಿ, ಪುತ್ರರು, ಬಂಧು ಬಾಂಧವರು, ಶ್ರೇಷ್ಠವಾದಂತಹ ಆನೆ, ಕುದುರೆ, ರಥ ಚತುರಂಗ ಸೈನ್ಯ, ಅಕ್ಷಯ ಭಂಡಾರ ಇವೆಲ್ಲವುಗಳಿಂದ ವಿರಕ್ತನಾಗಿ ಭಗವಂತನ ಸೇವೆಯಲ್ಲೇ ಪರಮಾನಂದವನ್ನು ಹೊಂದುತ್ತಿದ್ದನು. ಅವನ ಅನನ್ಯವಾದ ಭಕ್ತಿಯಿಂದ ಸುಪ್ರೀತನಾದ ಶ್ರೀಹರಿಯು ಅವನ ರಕ್ಷಣೆಗಾಗಿ ಸುದರ್ಶನ ಚಕ್ರವನ್ನು ನಿಯಮಿಸಿದ್ದನು.
ಒಮ್ಮೆ ಅಂಬರೀಶ ಮಹಾರಾಜನು ತನ್ನ ಪತ್ನಿಯ ಜೊತೆಗೂಡಿ, ಭಗವಾನ್ ಶ್ರೀಹರಿಯ ಆರಾಧನೆ ನಿಮಿತ್ತ, ದ್ವಾದಶಿ ಪ್ರಧಾನವಾದ ಏಕಾದಶಿ ವೃತವನ್ನು ಕೈಗೊಂಡಿದ್ದನು. ವೃತ ಸಮಾಪ್ತಿಗೊಳಿಸಲು, ಕಾರ್ತಿಕ ಮಾಸದಲ್ಲಿ, ಯಮುನಾ ನದಿಯಲ್ಲಿ ಸ್ನಾನ ಮಾಡಿ ಮಧುವನದಲ್ಲಿ ಭಗವಾನ್ ಶ್ರೀಹರಿಯನ್ನು ಪೂಜಿಸುತ್ತಿದ್ದನು. ಮಹಾಭಿಷೇಕ ವಿಧಿಯಿಂದ ಸಮಸ್ತ ಪರಿಕರಗಳೊಂದಿಗೆ ಭಗವಂತನಿಗೆ ಅಭಿಷೇಕ ಮಾಡಿ, ವಸ್ತ್ರಾಭೂಷಣ, ಚಂದನ, ಹೂಮಾಲೆಗಳಿಂದ ಹರಿಯನ್ನು ಪೂಜಿಸುತ್ತಿದ್ದನು. ಬ್ರಾಹ್ಮಣ ಶ್ರೇಷ್ಠರನ್ನು ಭಕ್ತಿಪೂರ್ವಕವಾಗಿ ಆದರಿಸಿ ಸತ್ಕರಿಸುತ್ತಿದ್ದನು. ಸರ್ವಾಭರಣಭೂಷಿತವಾದ ಗೋವುಗಳನ್ನು ದಾನವಾಗಿ ನೀಡಿದನು. ಅಂಬರೀಶ ಮಹಾರಾಜನಿಂದ ದಾನವನ್ನು ಪಡೆದು ಬ್ರಾಹ್ಮಣರು ಮಹಾರಾಜನನ್ನು ಹರಸುತ್ತಿದ್ದರು. ಬ್ರಾಹ್ಮಣರ ಅನುಜ್ಞೆಯಂತೆ ವೃತ ಪಾರಣೆಗಾಗಿ ಮಹಾರಾಜ ಸಿದ್ದನಾಗುತ್ತಿದ್ದ. ಅದೇ ಸಮಯಕ್ಕೆ ಸರಿಯಾಗಿ ಶಾಪಾನುಗ್ರಹ ಶಕ್ತರಾದಂತಹ ದೂರ್ವಾಸರು, ಅಂಬರೀಶ ಮಹಾರಾಜನ ಎದುರು ಅತಿಥಿಗಳಾಗಿ ಆಗಮಿಸುತ್ತಾರೆ. ಅವರನ್ನು ನೋಡಿದ ಕೂಡಲೇ ಎದ್ದು ನಿಂತು ಆದರದಿಂದ ಆಸನವಿತ್ತು, ಅತಿಥಿಯಾಗಿ ಬಂದಿರುವ ದೂರ್ವಾಸರನ್ನು ವಿಧವಿಧವಾಗಿ ಪೂಜಿಸಿ ಭೋಜನ ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ. ದೂರ್ವಾಸರು ಅಂಬರೀಶನ ಪ್ರಾರ್ಥನೆಯನ್ನು ಮನ್ನಿಸಿ ಸ್ನಾನಾದಿ ನಿತ್ಯಕರ್ಮಗಳನ್ನು ಪೂರೈಸಲಿಕ್ಕಾಗಿ ನದಿ ತೀರಕ್ಕೆ ಹೋಗುತ್ತಾರೆ.
ಇತ್ತ ದ್ವಾದಶಿಯು ಕೇವಲ ಒಂದು ಘಳಿಗೆ ಮಾತ್ರ ಉಳಿದಿತ್ತು. ಆ ಸಮಯಕ್ಕೆ ಅತಿಥಿಗಳಾಗಿ ಆಗಮಿಸಿರುವ ದೂರ್ವಾಸರು ಸ್ನಾನ ಪೂರೈಸಿ ಹಿಂದಿರುಗದ ಕಾರಣದಿಂದ, ಧರ್ಮಜ್ಞನಾದ ಅಂಬರೀಶನು ಧರ್ಮಸಂಕಟಕ್ಕೆ ಒಳಗಾಗಿ ಬ್ರಾಹ್ಮಣರ ಜೊತೆಯಲ್ಲಿ ವಿಚಾರ ವಿಮರ್ಶೆಗೆ ತೊಡಗುತ್ತಾನೆ. "ಬ್ರಾಹ್ಮಣರೆ! ಅತಿಥಿಯಾದ ಬ್ರಾಹಣ ಶ್ರೇಷ್ಠರಿಗೆ ಭೋಜನ ಬಡಿಸದೆ ನಾನು ಭೋಜನ ಮಾಡುವುದು ಮತ್ತು ದ್ವಾದಶಿ ಕಳೆದ ಮೇಲೆ ಪಾರಣೆ ಮಾಡುವುದು ಎರಡೂ ಕೂಡ ದೋಷಪೂರಿತವಾಗಿದೆ. ಆದ್ದರಿಂದ ಇಂತಹ ಸಮಯದಲ್ಲಿ ನನಗೆ ಧರ್ಮ ಬದ್ಧವಾದ ದಾರಿಯನ್ನು ತಿಳಿಸಿರಿ" ಎಂದು ಪ್ರಾರ್ಥಿಸುತ್ತಾನೆ. 'ಕೇವಲ ನೀರು ಕುಡಿಯುವುದರಿಂದ ಭೋಜನ ಮಾಡಿದಂತೆಯೂ ಮಾಡದಂತೆಯೂ ಇರುವುದಾಗಿ ಶ್ರುತಿಗಳಲ್ಲಿ ತಿಳಿಸಿದ್ದಾರೆ. ಆದ್ದರಿಂದ ನಾನು ಈ ಸಮಯದಲ್ಲಿ ಕೇವಲ ನೀರು ಕುಡಿದು ಪಾರಣೆ ಮಾಡುತ್ತೇನೆ' ಎಂದು ನಿಶ್ಚಯಿಸಿ ಮನಸ್ಸಿನಲ್ಲಿ ಭಗವಂತನನ್ನು ಚಿಂತಿಸುತ್ತ, ರಾಜರ್ಷಿ ಅಂಬರೀಶನು ಜಲಪ್ರಾಶನವನ್ನು ಮಾಡುತ್ತಾನೆ. ಸ್ನಾನವನ್ನು ಪೂರೈಸಿ ದೂರ್ವಾಸರು ಯಮುನಾ ನದಿಯಿಂದ ಮರಳುತ್ತಾರೆ. ರಾಜನು ಮುಂದೆ ಹೋಗಿ ಅವರಿಗೆ ಅಭಿನಂದಿಸಿ ಭೋಜನಕ್ಕೆ ಆಹ್ವಾನಿಸುತ್ತಾನೆ. ಆ ಸಮಯದಲ್ಲಿ ರಾಜನು ಪಾರಣೆ ಮಾಡಿರುವ ವಿಚಾರವನ್ನು ತಿಳಿದು ದುರ್ವಾಸರು ಕ್ರುದ್ಧರಾಗುತ್ತಾರೆ. ವಿಧೇಯನಾಗಿ ಕೈಮುಗಿದು ನಿಂತ ಅಂಬರೀಶ ಮಹಾರಾಜನನ್ನು ಕುರಿತು ಕೋಪದಿಂದ ಅಬ್ಬರಿಸುತ್ತಾರೆ. "ನಾನು ಅತಿಥಿಯಾಗಿ ನಿನ್ನಲ್ಲಿಗೆ ಬಂದಿರುವೆನು. ಅತಿಥಿ ಸತ್ಕಾರ ಮಾಡಲು ನನ್ನನ್ನು ಆಹ್ವಾನಿಸಿ, ನನಗೆ ಊಟ ಬಡಿಸುವ ಮುನ್ನವೇ ನೀನು ಭೋಜನ ಮಾಡಿರುವೆ. ಇಂತಹ ಧರ್ಮ ಅತಿಕ್ರಮಕ್ಕೆ ಸಿಗುವ ಫಲ ಏನು ಎಂಬುದನ್ನು ನಾನೀಗ ನಿನಗೆ ತೋರಿಸಿಕೊಡುತ್ತೇನೆ", ಎಂದು ಅಬ್ಬರಿಸುತ್ತ ಸಿಟ್ಟಿನಿಂದ ಉರಿಯುತ್ತಾರೆ. ತಮ್ಮ ಜಟೆಯೊಳಗಿನ ಒಂದು ಕೂದಲನ್ನು ಕಿತ್ತು, ಅದರಿಂದ ಒಂದು ಕೃತ್ಯೆಯನ್ನು ನಿರ್ಮಿಸಿ, ಅಂಬರೀಶನನ್ನು ಕೊಂದುಬಿಡಲು ನಿರ್ದೇಶನ ನೀಡುತ್ತಾರೆ. ಅದು ಬೆಂಕಿಯಂತೆ ಉರಿಯುತ್ತಾ ಭೂಮಿಯನ್ನು ನಡುಗಿಸುವಂತೆ ಅಂಬರೀಶನ ಮೇಲೆ ಆಕ್ರಮಣವನ್ನು ಮಾಡುತ್ತದೆ. ಆದರೆ ಅದನ್ನು ನೋಡಿಯೂ ಅಂಬರೀಶ ಮಹಾರಾಜ ನಿಂತ ಜಾಗದಿಂದ ಕದಲದೆ ನಿಶ್ಚಲನಾಗಿ ನಿಂತಿರುತ್ತಾನೆ. ಪರಮಪುರುಷ ಪರಮಾತ್ಮನು ತನ್ನ ಸೇವಕನ ರಕ್ಷಣೆಗಾಗಿ ಮೊದಲೇ ಸುದರ್ಶನ ಚಕ್ರವನ್ನು ನಿಯುಕ್ತಗೊಳಿಸಿದ್ದರಿಂದ ಸುದರ್ಶನ ಚಕ್ರವು ದೂರ್ವಾಸರ ಕೃತ್ಯೆಯನ್ನು ಸುಟ್ಟು ಬೂದಿ ಮಾಡಿಬಿಡುತ್ತದೆ.

ತಾನು ಸೃಷ್ಠಿಸಿದ ಕೃತ್ಯೆಯು ಭಸ್ಮವಾದದನ್ನು ಮತ್ತು ಚಕ್ರವು ತನ್ನಡೆಗೆ ಬರುತ್ತಿರುವುದನ್ನು ಕಂಡು ದೂರ್ವಾಸರು ಭಯದಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ. ಆದರೆ ಅವರೆಲ್ಲೇ ಹೋದರೂ ಸುದರ್ಶನ ಚಕ್ರವೂ ಅವರನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆಗ ದೂರ್ವಾಸರು ಸುಮೇರು ಪರ್ವತದ ಗುಹೆಯನ್ನು ಪ್ರವೇಶಿಸಲು ಅತ್ತ ಕಡೆ ಓಡುತ್ತಾರೆ. ದೂರ್ವಾಸರು ದಶ ದಿಕ್ಕುಗಳಲ್ಲಿ ಆಕಾಶ, ಪೃಥ್ವಿ, ಅತಲ, ವಿತಲ ಮುಂತಾದ ಕೆಳಗಿನ ಲೋಕಗಳಲ್ಲಿ, ಸಮುದ್ರ, ಲೋಕಪಾಲರಿಂದ ರಕ್ಷಿತವಾದ ಲೋಕಗಳಲ್ಲಿ, ಸ್ವರ್ಗಗಳಲ್ಲಿ ಹೀಗೆ ಎಲ್ಲ ಕಡೆಗಳಲ್ಲಿಯೂ ಓಡುತ್ತಾ ಸಾಗುತ್ತಾರೆ. ಆದರೆ ಅವರು ಹೋದಲ್ಲೆಲ್ಲ ಸಹಿಸಲು ಅಸಾಧ್ಯವಾದಂತಹ ತೇಜಸ್ಸಿನಿಂದ ಕೂಡಿದ ಸುದರ್ಶನವೂ ಕೂಡ ಅವರನ್ನು ಅಟ್ಟಿಸಿಕೊಂಡು ಸಾಗುತ್ತದೆ. ಎಲ್ಲಿಯೂ ಯಾರೂ ರಕ್ಷಕರು ದೊರೆಯದೆ ಹೋದ ಕಾರಣ ದುರ್ವಾಸರು ಭಯಭೀತರಾಗುತ್ತಾರೆ. ತನಗಾಗಿ ಬದುಕುಳಿಯುವ ಸ್ಥಳವನ್ನು ಹುಡುಕುತ್ತಾರೆ. ಬ್ರಹ್ಮ ದೇವರ ಬಳಿ, ಭಗವಂತನ ಈ ತೇಜೋಮಯ ಚಕ್ರದಿಂದ ನನ್ನನ್ನು ಕಾಪಾಡಿರಿ ಎಂದು ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮ ದೇವರು, 'ನಾನೂ ಕೂಡ ಶ್ರೀಹರಿಯ ಆಜ್ಞೆಯನ್ನು ಶಿರಸಾ ವಹಿಸಿ ಪ್ರಪಂಚದ ಹಿತ ಕಾಯುವವನು. ಮಹಾಮಹಿಮನಾದ ವಿಷ್ಣುವಿನ ಭಕ್ತನಿಗೆ ನೀನು ದ್ರೋಹವೆಸಗಿರುವ ಕಾರಣ ರಕ್ಷಣೆಯನ್ನು ನೀಡಲು ಸಾಧ್ಯವಿಲ್ಲ' ಎಂದು ರಕ್ಷಣೆಯನ್ನು ನೀಡಲು ನಿರಾಕರಿಸುತ್ತಾರೆ. ಅಲ್ಲಿಂದ ದುರ್ವಾಸರು ಭಗವಾನ್ ಶಂಕರನಲ್ಲಿ ಮೊರೆ ಹೋಗುತ್ತಾರೆ. ಶಂಕರನೂ ಕೂಡ ರಕ್ಷಣೆ ನೀಡಲು ನಿರಾಕರಿಸಿ ಮಹಾವಿಷ್ಣುವಿನ ಮೊರೆ ಹೋಗುವಂತೆ ನಿರ್ದೇಶಿಸುತ್ತಾನೆ. ಅಲ್ಲಿಯೂ ಕೂಡ ನಿರಾಶರಾದ ದುರ್ವಾಸರು ಲಕ್ಷ್ಮೀಪತಿ ಯಾದ ಭಗವಂತನನ್ನ ದರ್ಶಿಸುವುದಕ್ಕೆ ವೈಕುಂಠಕ್ಕೆ ತೆರಳುತ್ತಾರೆ. ಭಗವಂತನ ಸುದರ್ಶನದ ತಾಪದಿಂದ ಬೇಯುತ್ತಿದ್ದ ಅವರು ನಡುಗುತ್ತ ಭಗವಂತನ ಚರಣಗಳಿಗೆ ಎರಗಿ ತನ್ನನ್ನು ರಕ್ಷಿಸುವಂತೆ ಅಂಗಲಾಚುತ್ತಾರೆ. "ನಿನ್ನ ಪರಮಾದ್ಭುತವಾದ ಪ್ರಭಾವವನ್ನು ಅರಿಯದೆ ನಾನು ನಿನ್ನ ಪ್ರಿಯ ಭಕ್ತನಿಗೆ ಅಪಮಾನ ಮಾಡಿದ್ದೇನೆ, ನನ್ನನ್ನು ಈ ಸುದರ್ಶನದಿಂದ ಪಾರು ಮಾಡು" ಎಂದು ದೀನರಾಗಿ ಪ್ರಾರ್ಥಿಸುತ್ತಾರೆ. ಅದಕ್ಕೆ ಶ್ರೀ ಹರಿಯು, "ಮುನಿ ಶ್ರೇಷ್ಠರೇ! ನಾನು ಸಂಪೂರ್ಣವಾಗಿ ನನ್ನ ಭಕ್ತರ ವಶನಾಗಿದ್ದೇನೆ. ನನ್ನನ್ನು ನಿಷ್ಠೆಯಿಂದ ಪ್ರೇಮದಿಂದ ಆರಾಧಿಸಿದ ಆ ನಾಭಾಗನಂದನ ಅಂಬರೀಶ ಮಹಾರಾಜನ ಬಳಿ ಹೋಗಿ ಅವನಲ್ಲಿ ಕ್ಷಮೆ ಯಾಚಿಸಿರಿ, ಆಗ ನಿಮ್ಮ ಇಚ್ಛೆ ನೆರವೇರುತ್ತದೆ", ಎಂದು ತಿಳಿಸುತ್ತಾರೆ.
ಹೀಗೆ ಭಗವಂತನಿಂದ ಅಪ್ಪಣೆ ಪಡೆದು ದೂರ್ವಾಸರು, ಮರಳಿ ಅಂಬರೀಶ ರಾಜನ ಬಳಿಗೆ ಬಂದು, ಮಹಾರಾಜನ ಕಾಲುಗಳನ್ನು ಹಿಡಿದುಕೊಂಡು ದುಃಖಿಸುತ್ತ ಸುದರ್ಶನದಿಂದ ತನ್ನನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಾರೆ. ಇದನ್ನು ನೋಡಿ ದಯೆಯಿಂದ ಕರಗಿದ ಅಂಬರೀಶ ಮಹಾರಾಜ, ವಿವಿಧ ರೀತಿಯಲ್ಲಿ ಸುದರ್ಶನವನ್ನು ಸ್ತುತಿಸುತ್ತ, 'ದುರ್ವಾಸರ ತಾಪವನ್ನು ನೀಗಿ ಅವರನ್ನು ಕಾಪಾಡು' ಎಂದು ಸುದರ್ಶನ ಚಕ್ರವನ್ನು ಪ್ರಾರ್ಥಿಸುತ್ತಾನೆ. ಅಂಬರೀಶನ ಪ್ರಾರ್ಥನೆಗೆ ಮಣಿದು ಸುದರ್ಶನ ಚಕ್ರವು ಶಾಂತವಾಗಿ ದೂರ್ವಾಸರನ್ನು ಉರಿಯಂದ ವಿಮುಕ್ತರಾಗಿಸುತ್ತದೆ. ಇದರಿಂದ ಸಂತೋಷಗೊಂಡು ದುರ್ವಾಸ ಮುನಿಗಳು ಅಂಬರೀಶನಿಗೆ ಶುಭಾಶೀರ್ವಾದಗಳನ್ನು ಮಾಡುತ್ತಾರೆ.
ಈ ಎಲ್ಲಾ ಪ್ರಕರಣಗಳು ಮುಗಿಯುವಲ್ಲಿಗೆ ಸುಮಾರು ವರ್ಷಗಳೇ ಕಳೆದು ಹೋಗುತ್ತದೆ. ಅಂದು ದೂರ್ವಾಸರು ಭೋಜನವನ್ನು ತಿರಸ್ಕರಿಸಿ ಹೋದ ದಿನದಿಂದ ಇಂದಿನವರೆಗೂ ಅಂಬರೀಶ ಮಹಾರಾಜನು ಭೋಜನವನ್ನು ಮಾಡಿರಲಿಲ್ಲ. ಅವರು ಮರಳಿ ಬರುವ ದಾರಿಯನ್ನೇ ಕಾಯುತ್ತಿದ್ದನು. ಈಗ ದುರ್ವಾಸರ ಕಾಲಿಗೆ ಬಿದ್ದು ಅವರನ್ನು ಸಂತೋಷಪಡಿಸಿ ಭೋಜನವನ್ನು ಬಡಿಸಿ ಅವರನ್ನು ತೃಪ್ತಿಗೊಳಿಸಿ ತಾನು ಕೂಡ ಭೋಜನವನ್ನು ಸ್ವೀಕರಿಸುತ್ತಾನೆ. ತನ್ನ ಕಾರಣದಿಂದಲೇ ದೂರ್ವಾಸರಿಗೆ ಉಂಟಾದ ದುಃಖ ಹಾಗೂ ತನ್ನ ಪ್ರಾರ್ಥನೆಯಿಂದಲೇ ಅದರ ನಿವೃತ್ತಿ ನಡೆದಿರುವುದು ಭಗವಂತನ ಮಹಿಮೆ ಎಂದೇ ಭಾವಿಸಿದ ಅಂಬರೀಶನು ತನ್ನ ಕರ್ಮಗಳ ಮೂಲಕ ಭಗವಂತನಲ್ಲಿ ಭಕ್ತಿ ಭಾವವನ್ನು ಇನ್ನಷ್ಟು ದೃಢಗೊಳಿಸುತ್ತಾ ಬದುಕಲು ತೊಡಗುತ್ತಾನೆ.
ನಂತರದ ದಿನಗಳಲ್ಲಿ ಹರಿ ಭಕ್ತರಾದ ತನ್ನ ಪುತ್ರರಿಗೆ ರಾಜ್ಯವನ್ನು ಒಪ್ಪಿಸಿ ಸ್ವತಃ ತಪಸ್ಸಿಗಾಗಿ ಕಾಡಿಗೆ ತೆರಳಿ ಪರಮಾತ್ಮನಲ್ಲಿ ಮನಸ್ಸನ್ನು ಲೀನಗೊಳಿಸಿ ಲೌಕಿಕ ಜಗತ್ತಿನಿಂದ ಮುಕ್ತನಾಗುತ್ತಾನೆ.








Comments