ಭಾರ್ಗವರಾಮರ ಪ್ರವೇಶ (ರಾಮಾಯಣ ಕಥಾಮಾಲೆ 11)
- Ganapati Hegde Moodkani

- Aug 3
- 2 min read
Updated: Aug 5
ರಾತ್ರಿಯು ಕಳೆದು ಪ್ರಾತಃಕಾಲವಾಯಿತು. ಮಹಾಮುನಿಗಳಾದ ವಿಶ್ವಾಮಿತ್ರರು ಜನಕ ದಶರಥರ ಅನುಮತಿಯನ್ನು ಪಡೆದು ಹಿಮವತ್ಪರ್ವತಕ್ಕೆ ಹೊರಟುಹೋದರು. ವಿಶ್ವಾಮಿತ್ರರು ಹೊರಟುಹೋದ ನಂತರ ದಶರಥನು, ಜನಕರಾಜನ ಅನುಮತಿಯನ್ನು ಪಡೆದು ಅಯೋಧ್ಯಾಪಟ್ಟಣಕ್ಕೆ ಪ್ರಯಾಣ ಹೊರಟನು. ವಿದೇಹಾಧಿಪತಿಯಾದ ಜನಕನು ತನ್ನ ಹೆಣ್ಣು ಮಕ್ಕಳಿಗೆ ಹೇರಳವಾದ ಕನ್ಯಾಧನವನ್ನು ಕೊಟ್ಟು ಕಳುಹಿಸಿದನು. ಅಯೋಧ್ಯಾಧಿಪತಿಯಾದ ದಶರಥನು ಜನಕರಾಜನಿಗೆ ಯಥೋಚಿತವಾದ ಸವಿಮಾತುಗಳನ್ನು ಹೇಳಿ ಕಳುಹಿಸಿ ಕೊಟ್ಟ ನಂತರ, ಮಹರ್ಷಿಗಳನ್ನು ಮುಂದು ಮಾಡಿಕೊಂಡು, ಚತುರಂಗ ಬಲ ಸಮೇತನಾಗಿ, ಮಹಾತ್ಮರಾದ ತನ್ನ ಮಕ್ಕಳೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದನು. ಹಾಗೆ ಪ್ರಯಾಣ ಮಾಡುತ್ತಿದ್ದಾಗ ದಾರಿಯಲ್ಲಿ ಪಕ್ಷಿಗಳು ಅಲ್ಲಲ್ಲಿ ಘೋರವಾಗಿ ಅಪಸ್ವರದಿಂದ ಚೀರುತ್ತಿದ್ದವು. ಭೂಮಿಯಲ್ಲಿ ಓಡಾಡುತ್ತಿದ್ದ ಮೃಗಗಳು ದಶರಥನನ್ನು ಬಲಭಾಗದಲ್ಲಿ ಬಿಟ್ಟುಕೊಂಡು ಮುಂದೆ ಹೋಗುತ್ತಿದ್ದವು. ಅದನ್ನು ಕಂಡ ದಶರಥನು ವಸಿಷ್ಠರನ್ನು, "ಮಹರ್ಷಿಗಳೇ ಮೃಗಗಳು ನನ್ನನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿವೆ ಆದರೆ ನನ್ನ ಸುತ್ತಲೂ ಭಯಂಕರವಾದ ಪಕ್ಷಿಗಳು ಚೀರಾಡುತ್ತಿವೆ. ಇದಕ್ಕೆ ಕಾರಣವೇನು? ಎಂದು ಕೇಳಿದನು.
ದಶರಥನ ಮಾತುಗಳನ್ನು ಕೇಳಿ ಮಹರ್ಷಿಗಳಾದ ವಸಿಷ್ಠರು, "ಮಹಾರಾಜ! ಪಕ್ಷಿಗಳ ಘೋರ ನಿನಾದವು ಮುಂದೊಂದಗಲಿರುವ ಭಯಕ್ಕೆ ಸೂಚಕವಾಗಿದೆ. ಆದರೆ ಈ ಮೃಗಗಳು ಪ್ರದಕ್ಷಿಣೆ ಮಾಡಿ ಹೋಗುತ್ತಿರುವುದರಿಂದ ಪ್ರಾಪ್ತವಾಗಲಿರುವ ವಿಪತ್ತು ಒಡನೆಯೇ ನಿವಾರಣೆಯಾಗುವುದೆಂದು ಸೂಚಿತವಾಗುತ್ತದೆ. ಆದುದರಿಂದ ನೀನು ಭಯಪಡುವ ಕಾರಣವಿಲ್ಲ ನಿರಾತಂಕವಾಗಿರಬಹುದು" ಎಂದರು.
ವಸಿಷ್ಠರು ದಶರಥನೊಡನೆ ಹೀಗೆ ಸಂಭಾಷಣೆ ಮಾಡುತ್ತಿದ್ದಾಗಲೇ ಸುಂಟರಗಾಳಿಯು ರಭಸದಿಂದ ಬೀಸತೊಡಗಿತು. ಅದು ಭೂಮಿಯನ್ನೇ ನಡುಗಿಸುತ್ತಿದ್ದಿತು. ಅನೇಕ ಮಹಾವೃಕ್ಷಗಳನ್ನು ಬುಡಮೇಲಾಗಿ ಮಾಡಿತು. ಆ ಸುಂಟರಗಾಳಿಯಿಂದೆದ್ದ ಧೂಳಿನಿಂದ ಸೂರ್ಯನೂ ಮುಚ್ಚಿಹೋದನು. ಸರ್ವವೂ ಅಂಧಕಾರಮಯವಾಯಿತು. ದಶರಥನ ಪರಿವಾರದವರಿಗೆ ದಿಕ್ಕುಗಳೇ ಕಾಣದಾದವು. ದಿಕ್ಕುಗಳೆಲ್ಲ ಕಾಂತಿಹೀನವಾದವು. ಭಸ್ಮದಿಂದ ಮುಚ್ಚಿಹೋದ ದಶರಥನ ಚತುರಂಗ ಬಲಕ್ಕೆ ಮುಂದೇನು ಮಾಡಬೇಕೆಂಬುದೇ ತಿಳಿಯದಂತಾಯಿತು.

ವಸಿಷ್ಠರು ಅವರೊಡನಿದ್ದ ಇತರ ಋಷಿ ಮಹರ್ಷಿಗಳು ದಶರಥ ರಾಜ ಮತ್ತು ಅವನ ಮಕ್ಕಳು ಇವರು ಮಾತ್ರ ಸುಂಟರಗಾಳಿಯಿಂದ ಭ್ರಾಂತರಾಗದೇ ಸಚೇತನರಾಗಿದ್ದರು. ಉಳಿದವರೆಲ್ಲರೂ ಪ್ರಜ್ಞಾಹೀನರಾದರು. ಆ ಘೋರವಾದ ಅಂಧಕಾರದಲ್ಲಿ ಚತುರಂಗ ಬಲವು ಭಯಂಕರ ಪ್ರಕಾಶದಿಂದ ಕೂಡಿದ್ದ, ಜಟಾಮಂಡಲಧಾರಿಯಾದ, ಜಮದಗ್ನಿಯ ಮಗನಾದ ಕ್ಷತ್ರಿಯಕುಲವಿದ್ವಂಸಕನಾದ ಪರಶುರಾಮನನ್ನು ಕಂಡಿತು. ಕೈಲಾಸಪರ್ವತದಂತೆ ಅತಿಕ್ರಮಣ ಮಾಡಲು ದುಸ್ಸಾಧ್ಯನಾದ, ಕಾಲಾಗ್ನಿಯಂತೆ ಸಹಿಸಲಶಕ್ಯನಾದ, ಮಹಾತೇಜಸ್ವಿನಿಂದ ಪ್ರಜ್ವಲಿಸುತ್ತಲಿದ್ದ, ಪ್ರಾಕೃತಜನರಿಂದ ನೋಡಲೂ ಅಶಕ್ಯನಾಗಿ ಹೆಗಲಿನ ಮೇಲೆ ಗಂಡುಗೊಡಲಿಯನ್ನು ಸಜ್ಜು ಮಾಡಿ ಇಟ್ಟುಕೊಂಡಿದ್ದ, ವಿದ್ಯುತ್ತಿನಂತೆ ಪ್ರಕಾಶಿಸುತ್ತಿರುವ ಧನುಸ್ಸನ್ನೂ ಮತ್ತು ಉಗ್ರವಾದ ಬಾಣವನ್ನೂ ಹಿಡಿದು ತ್ರಿಪುರ ಹಂತಕನಾದ ಶಿವನೋಪಾದಿಯಲ್ಲಿದ್ದ ಪರಶುರಾಮನನ್ನು ದಶರಥನೇ ಮೊದಲಾದವರು ಕಂಡರು. ಭಯಂಕರ ಪ್ರಕಾಶವಿಶಿಷ್ಟನಾದ ಪರಶುರಾಮನನ್ನು ಕಂಡು ವಸಿಷ್ಠಪ್ರಮುಖರಾದ ಬ್ರಾಹ್ಮಣರು ಒಂದೆಡೆಯಲ್ಲಿ ಸೇರಿ ತಮ್ಮ ತಮ್ಮಲ್ಲಿಯೇ, "ಹಿಂದೊಮ್ಮೆ ಈ ಪರಶುರಾಮನು, ಕ್ಷತ್ರಿಯನೊಬ್ಬನಿಂದಾದ ತನ್ನ ತಂದೆಯ ವಧೆಯಿಂದಾಗಿ ಬಹಳ ಕುಪಿತನಾಗಿದ್ದನಾದರೂ ಈಗ ಕ್ಷತ್ರಿಯರನ್ನು ವಿನಾಶಮಾಡಲಾರನು. ಏಕೆಂದರೆ ಪೂರ್ವದಲ್ಲಿಯೇ ಇವನು ಭೂಮಿಯಲ್ಲಿನ ಸರ್ವಕ್ಷತ್ರಿಯರನ್ನೂ ವಧೆಮಾಡಿ ಕೋಪರಹಿತನೂ ಚಿಂತಾರಹಿತನೂ ಆಗಿದ್ದನು. ಆದುದರಿಂದ ಕ್ಷತ್ರಿಯವಂಶವನ್ನು ವಿನಾಶ ಮಾಡುವುದು ಇವನ ಇಂದಿನ ಆಶಯವಾಗಿರಲಾರದು." ಹೀಗೆಂಬುದಾಗಿ ಪರಸ್ಪರ ಮಾತನಾಡಿಕೊಂಡು ತಾತ್ಕಾಲಿಕವಾಗಿ ಮಾಡಬೇಕಾದ ತಮ್ಮ ಕರ್ತವ್ಯವನ್ನು ನೆನೆದು ಅರ್ಘ್ಯಪಾದ್ಯಾದಿಗಳನ್ನು ತೆಗೆದುಕೊಂಡು ಭಯಂಕರನಾಗಿ ಕಾಣುತ್ತಿದ್ದ ಪರಶುರಾಮನನ್ನು ಆದರದಿಂದ ಸ್ವಾಗತಿಸಿ, "ಭಾರ್ಗವ! ನಿನಗೆ ಸ್ವಾಗತವು. ನಾವು ಕೊಡಲಿರುವ ಈ ಅರ್ಘ್ಯ ಪಾದ್ಯಾದಿಗಳನ್ನು ಸ್ವೀಕರಿಸು" ಇದೇ ಮುಂತಾದ ಸವಿಮಾತುಗಳಿಂದ ಓಲೈಸಿದರು. ಪರಶುರಾಮನು ಆದರಪೂರ್ವಕವಾಗಿ ಕೊಡಲ್ಪಟ್ಟ ಅರ್ಘ್ಯಪಾದ್ಯಾದಿಗಳಿಂದೊಡಗೂಡಿದ ಪೂಜೆಯನ್ನು ಸ್ವೀಕರಿಸಿ ದಶರಥ ಪುತ್ರನಾದ ಶ್ರೀರಾಮನಿಗೆ "ರಾಮ! ದಾಶರಥೇ! ನಿಮ್ಮ ಪರಮಾದ್ಭುತವಾದ ಪರಾಕ್ರಮವು ಎಲ್ಲೆಲ್ಲಿಯೂ ಕೇಳಿಬರುತ್ತಿದೆ. ತಾಟಕಾವಧೆಯ ಮೊದಲ್ಗೊಂಡು ಇತ್ತೀಚೆಗೆ ಮಾಡಿದ ಶಿವಧನುರ್ಭಂಗದವರೆಗೂ ನೀನು ಮಾಡಿರುವ ಸಕಲ ಕಾರ್ಯವನ್ನೂ ನಾನು ಕೇಳಿದ್ದೇನೆ. ರಾಮ! ಅದ್ಭುತವಾದ, ಇತರರಿಂದ ಊಹಿಸಲೂ ಕೂಡ ಅಶಕ್ಯವಾದ ಶೈವ ಧನುಸ್ಸನ್ನು ನೀನು ಮುರಿದಿರುವೆ. ಅದನ್ನು ಕೇಳಿ ಮತ್ತೊಂದು ಶುಭಕರವಾದ ಮಹಾಧನುಸ್ಸನ್ನು ತೆಗೆದುಕೊಂಡು ನಿನ್ನ ಬಳಿಗೆ ಬಂದಿರುವೆನು. ಇದು ಘೋರ ರೂಪವಾಗಿರುವ ಮಹಾಧನುಸ್ಸು. ಮಹಾಮಹಿಮನಾದ ಜಮದಗ್ನಿಯಿಂದ ಪ್ರಾಪ್ತವಾದುದು. ಈ ಮಹಾಧನುಸ್ಸಿನ ಮೌರ್ವಿಯನ್ನು ಬಿಗಿದು, ಈ ಮಹಾಧನುಸ್ಸಿನಲ್ಲಿ ಬಾಣವನ್ನು ಸಂಯೋಜಿಸು. ಈ ಮೂಲಕವಾಗಿ ನಿನ್ನಲ್ಲಿರಬಹುದಾದ ಪರಾಕ್ರಮವನ್ನು ತೋರಿಸು. ನೀನು ಈ ಮಹಾಧನುಸ್ಸಿನ ತೋಲನ-ಪೂರಣ-ಶರಸಂಧಾನಾದಿಗಳನ್ನು ಮಾಡಿ ನಿನ್ನ ಅದ್ಭುತ ಬಲವನ್ನು ತೋರಿದೆಯಾದರೆ ಅನಂತರ ನಾನು ನಿನಗೆ ವೀರ್ಯಶ್ಲಾಘ್ನವಾದ ದ್ವಂದ್ವ ಯುದ್ಧವನ್ನು ಕೊಡುತ್ತೇನೆ" ಎಂದರು.
ಪರಶುರಾಮನ ಆ ಮಾತನ್ನು ಕೇಳಿ ದಶರಥ ರಾಜನು ಅತಿದೀನನಾಗಿ ಪರಶುರಾಮನಿಗೆ ಕೈ ಮುಗಿದು "ಭಾರ್ಗವರಾಮ! ನಿನ್ನ ತಂದೆಯ ವಧೆಯನ್ನು ಕ್ಷತ್ರಿಯರು ಮಾಡಿದುದಕ್ಕಾಗಿ ಕೋಪಾವೇಶದಿಂದ ಇಪ್ಪತ್ತೊಂದು ಕ್ಷತ್ರಿಯರನ್ನು ಸಂಗ್ರಹಿಸಿ ಪ್ರಶಾಂತನಾಗಿರುವ ಮಹಾತಪಸ್ವಿಯಾದ ಬ್ರಾಹ್ಮಣನಾದ ನೀನು, ನಿನ್ನ ಮಕ್ಕಳಿಗೆ ಅಭಯಪ್ರದಾನ ಮಾಡುವುದು ಉಚಿತವಾಗಿದೆ. ಅಧ್ಯಯನ ಮತ್ತು ವ್ರತಗಳಿಂದ ಪ್ರಕಾಶಿತರಾ ಮಹಾಮಹಿಮರಾದ ಭಾರ್ಗವರ ವಂಶದಲ್ಲಿ ಹುಟ್ಟಿರುವ ನೀನು ಇನ್ನು ಮುಂದೆ ಶಸ್ತ್ರಧಾರಣೆ ಮಾಡುವುದಿಲ್ಲ ಎಂದು ಇಂದ್ರನಮುಂದೆ ಪ್ರತಿಜ್ಞೆ ಮಾಡಿ ನಿನ್ನ ಶಸ್ತ್ರಾಸ್ತ್ರಗಳೆಲ್ಲವನ್ನೂ ಅವನಲ್ಲಿಯೇ ಬಿಟ್ಟುಬಂದಿರುವೆ. ಅಂತಹ ಧರ್ಮಪರನಾದ ನೀನು ಕ್ಷತ್ರಿಯರನ್ನು ದ್ವಂಸ ಮಾಡಿ ಸಂಪಾದಿಸಿದ್ದ ಈ ಭೂಮಂಡಲವನ್ನು ಕಷ್ಯಪನಿಗೆ ದಾನವನ್ನಾಗಿ ಕೊಟ್ಟು ಕಾಡಿಗೆಹೋಗಿ ಅಲ್ಲಿಂದ ಮುಂದೆ ಬಹುದೂರ ಪ್ರಯಾಣಮಾಡಿ ಮಹೇಂದ್ರ ಪರ್ವತಕ್ಕೆ ಹೋಗಿ ಅಲ್ಲಿ ವಾಸಮಾಡಿಕೊಂಡಿರುವೆ. ಆದರೆ ಶಾಂತಮನಸ್ಕನಾಗಿ ತಪಶ್ಚರಣೆಯಲ್ಲೇ ಆಸಕ್ತನಾಗಿದ್ದ ನೀನು ಇಂದ್ರನ ಸಮ್ಮುಖದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಕಡೆಗಣಿಸಿ ಶಸ್ತ್ರಪಾಣಿಯಾಗಿ ನನ್ನ ಸರ್ವವಿನಾಶಕ್ಕೆಂದೇ ಇಲ್ಲಿಗೆ ಆಗಮಿಸಿರುವೆ. ಏಕೆಂದರೆ ನೀನು ದ್ವಂದ್ವ ಯುಧ್ಧಕ್ಕೆ ಕರೆದಿರುವ ರಾಮನೊಬ್ಬನು ಹತನಾದರೂ ನಾವುಗಳಾರೂ ಬದುಕುವುದಿಲ್ಲ. ಇದು ಸತ್ಯ" ಎಂದನು.








Comments