ಸೀತಾ ಕಲ್ಯಾಣ (ರಾಮಾಯಣ ಕಥಾಮಾಲೆ 10)
- Ganapati Hegde Moodkani

- Jul 27
- 3 min read
ಜನಕನಾಡಿದ ಮಾತುಗಳನ್ನು ಕೇಳಿ ವಿಶ್ವಾಮಿತ್ರರು "ನರಪುಂಗವ! ಸೀತಾ ಊರ್ಮಿಳೆಯರನ್ನು ರಾಮ ಲಕ್ಷ್ಮಣರಿಗೆ ಕೊಟ್ಟು ವಿವಾಹ ಮಾಡುವ ಈ ಶುಭಕಾರ್ಯವು ಧರ್ಮದ ಹಿನ್ನೆಲೆಯಲ್ಲಿಯೂ ಅನುರೂಪವಾಗಿದೆ. ರಾಮ-ಲಕ್ಷ್ಮಣ, ಸೀತಾ-ಊರ್ಮಿಳೆಯರ ಪರಸ್ಪರ ರೂಪಸಂಪತ್ತಿನಿಂದಲೂ ಅನುರೂಪವಾಗಿದೆ. ನರಶ್ರೇಷ್ಠನೇ! ನಿನ್ನೊಡನೆ ಇನ್ನೂ ಕೆಲವು ಮಾತುಗಳನ್ನಾಡುವುದಿದೆ. ನಿನ್ನ ಅನುಜನಾದ ಈ ಕುಶಧ್ವಜರಾಜನು ಧರ್ಮಜ್ಞನಾಗಿರುವನು. ಇವನಿಗೂ ಅಪ್ರತಿಮ ಲಾವಣ್ಯದಿಂದ ಕೂಡಿರುವ ಇಬ್ಬರು ಕನ್ಯೆಯರಿದ್ದಾರೆ. ಆ ಹೆಣ್ಣುಮಕ್ಕಳನ್ನು ಕುಮಾರನಾದ ಭರತನಿಗೂ ಮತ್ತು ಬುದ್ಧಿಮಂತನಾದ ಶತ್ರುಘ್ನನಿಗೂ ಪತ್ನ್ಯರ್ಥವಾಗಿ ಅಪೇಕ್ಷಿಸುತ್ತೇನೆ. ಮಹಾತ್ಮನಾದ ದಶರಥನ ಮಕ್ಕಳಾದ ಈ ನಾಲ್ವರೂ ರೂಪ ಯೌವನಶಾಲಿಗಳಾಗಿರುತ್ತಾರೆ. ಲೋಕಪಾಲಕರಿಗೆ ಸಮಾನರಾಗಿದ್ದಾರೆ. ದೇವತೆಗಳಿಗೆ ಸದೃಶವಾದ ಪರಾಕ್ರಮವುಳ್ಳವರಾಗಿದ್ದಾರೆ. ಜನಕರಾಜೇಂದ್ರ! ನೀವಿಬ್ಬರೂ ಇಕ್ಷ್ವಾಕು ಕುಲದೊಡನೆ ಸಂಬಂಧವನ್ನು ಬೆಳೆಸಿರಿ. ಪುಣ್ಯಶೀಲನಾದ ನಿನ್ನ ಮನಸ್ಸು ಈ ಸಂಬಂಧದ ವಿಷಯದಲ್ಲಿ ಚಂಚಲವಾಗದಿರಲಿ" ಎಂದರು.
ವಸಿಷ್ಠರ ಅನುಮತಿಯನ್ನು ಪಡೆದು ವಿಶ್ವಾಮಿತ್ರರು ಹೇಳಿದ ಆ ಮಾತುಗಳನ್ನು ಕೇಳಿ ಜನಕರಾಜನು, "ಉತ್ತಮೋತ್ತಮವಾದ ಇಕ್ಷ್ವಾಕು ವಂಶದೊಡನೆ ನಾವು ಮಾಡುವ ಸಂಬಂಧವು ಅನುರೂಪವಾಗಿರುವುದೆಂದು, ಮಹಾಮಹಿಮರಾದ ನೀವಿಬ್ಬರೂ ಆಜ್ಞಾಪಿಸಿರುವುದರಿಂದ, ನಿಶ್ಚಯವಾಗಿಯೂ ನಮ್ಮ ಕುಲವು ಧನ್ಯವಾಯಿತೆಂದು ನಾನು ತಿಳಿಯುತ್ತೇನೆ. ನಿಮ್ಮ ಇಚ್ಛೆಯಂತೆಯೇ ಸಕಲವೂ ನಡೆಯಲಿ. ಕುಶಧ್ವಜನ ಸುತೆಯರಿಬ್ಬರೂ ಯಾವಾಗಲೂ ಜೊತೆಯಲ್ಲಿಯೇ ಇರುವ ಭರತ ಶತ್ರುಘ್ನರ ಪತ್ನಿಯರಾಗಿ ಅವರನ್ನು ಸೇವಿಸಲಿ. ಮಹರ್ಷಿಗಳೇ! ಮಹಾಬಲರಾದ ನಾಲ್ವರು ರಾಜಪುತ್ರರೂ ನಾಲ್ಕು ಮಂದಿ ರಾಜಕುಮಾರಿಯರ ಪಾಣಿಗ್ರಹಣವನ್ನು ಒಂದೇ ದಿನ ಮಾಡಿಕೊಳ್ಳಲಿ. ವಿದ್ವಾಂಸರು ಫಲ್ಗುನೀ ನಕ್ಷತ್ರಗಳ ಎರಡನೆಯ ದಿವಸ ವಿವಾಹವನ್ನು ಮಾಡುವುದು ಪ್ರಶಸ್ತವೆಂದು ಹೇಳುತ್ತಾರೆ. ಏಕೆಂದರೆ ಪ್ರಜೋತ್ಪತ್ತಿಸ್ಥಾನದೇವತೆಯಾದ ಭಗದೇವನು ಈ ನಕ್ಷತ್ರಕ್ಕೆ ಅಧಿಪತಿಯಾಗಿರುತ್ತಾನೆ" ಎಂದನು. ಈ ರೀತಿಯಾಗಿ ವಿನಯಪೂರ್ವಕರಾಗಿ ಮಾತನಾಡಿ ವಸಿಷ್ಠ, ವಿಶ್ವಾಮಿತ್ರರಿಗೆ ಪುನಃ "ಮಹಾಮಹಿಮರಾದ ವಸಿಷ್ಠರೇ! ಮಹಾತಪಸ್ವಿಗಳಾದ ವಿಶ್ವಾಮಿತ್ರರೇ! ಈ ಕನ್ಯಾದಾನರೂಪವಾದ ಶ್ರೇಷ್ಠ ಧರ್ಮವು ನನಗೋಸ್ಕರ ತಮ್ಮಿಂದ ಉಪದಿಷ್ಟವಾಯಿತು. ನಾನು ನಿಮ್ಮ ಶಿಷ್ಯನಾಗಿದ್ದೇನೆ. ಇಷ್ಟು ಮಾತ್ರವಲ್ಲ, ಮೂರು ರಾಜ್ಯಗಳ ಸಿಂಹಾಸನಗಳನ್ನೂ ತಮಗರ್ಪಿಸುತ್ತೇನೆ. ಈ ದಿವ್ಯವಾದ ಸಿಂಹಾಸನಗಳಲ್ಲಿ ಕುಳಿತು ನಾನೇನು ಮಾಡಬೇಕೆಂಬುದನ್ನು ತಾವು ನಿರ್ದೇಶನ ಮಾಡಿರಿ. ನಿಮ್ಮ ಆಜ್ಞಾನುಸಾರವಾಗಿ ನಡೆಯಲು ಸಿದ್ಧನಿದ್ದೇನೆ" ಎಂದನು.

ಜನಕರಾಜನು ವಸಿಷ್ಠ ವಿಶ್ವಾಮಿತ್ರರಿಗೆ ಹೀಗೆ ಹೇಳಲು ದಶರಥನು ಪರಮಸಂತುಷ್ಟನಾಗಿ "ಮಿಥಿಲೇಶ್ವರರಾದ ನೀವಿಬ್ಬರು ಸಹೋದರರೂ ಅಪಾರವಾದ ಗುಣಗಳಿಂದ ಕೂಡಿರುವಿರಿ. ಜನಕರಾಜ! ನೀನು ನಿಶ್ಚಯವಾಗಿಯೂ ಈ ಕನ್ಯೆಯರ ದಾನದಿಂದ ಶ್ರೇಯಸ್ಸನ್ನು ಪಡೆಯುವೆ. ನಿನಗೆ ಮಂಗಳವಾಗಲಿ. ನಾನಿನ್ನು ನಮ್ಮ ಮನೆಗೆ ಹೋಗಿಬರುತ್ತೇನೆ. ಅಲ್ಲಿ ವಿವಾಹಪೂರ್ವದಲ್ಲಿ ಮಾಡಬೇಕಾದ ನಾಂದೀ ಅಭ್ಯುದಯಾದಿ ವಿಧ್ಯುಕ್ತ ಕರ್ಮಗಳನ್ನು ಯಥಾ ವಿಧಿಯಾಗಿ ಮಾಡುತ್ತೇನೆ" ಎಂದನು.
ದಶರಥನು ಹೀಗೆ ಹೇಳಿ ಜನಕನ ಅನುಮತಿಯನ್ನು ಪಡೆದು, ವಸಿಷ್ಠ ವಿಶ್ವಾಮಿತ್ರರೊಡನೆ ತನ್ನ ಭವನಕ್ಕೆ ತೆರಳಿದನು. ಆ ದಿನ ನಾಂದೀ ಶ್ರಾದ್ಧವನ್ನು ಯಥಾವಿಧಿಯಾಗಿ ಆಚರಿಸಿ, ಮಾರನೆಯ ದಿನ ಬೆಳಿಗ್ಗೆ ಗೋದಾನ ಕರ್ಮವನ್ನು ಮಾಡಿದನು. ತನ್ನ ಮಕ್ಕಳ ಗೋದಾನ ವ್ರತ ಸಮಾವರ್ತನಾದಿ ವಿವಾಹಪೂರ್ವ ಕರ್ಮಗಳನ್ನು ಮಾಡಿ ಮುಗಿಸಿದ್ದ ದಿನವೇ ಕೇಕಯ ರಾಜನ ಪುತ್ರನೂ, ಭರತನ ಸೋದರಮಾವನೂ, ವೀರನೂ ಆದ ಯಧಾಜಿತನು ಮಿಥಿಲಾಪಟ್ಟಣಕ್ಕೆ ಬಂದು, ದಶರಥನನ್ನು ಕಂಡು, ಪರಸ್ಪರರ ಕುಶಲ ಪ್ರಶ್ನೆಗಳಾದ ನಂತರ, "ಮಹಾರಾಜ! ನಮ್ಮ ತಂದೆಯಾದ ಕೇಕಯ ರಾಜನು, ಭರತನನ್ನು ನೋಡುವ ಆಶಯದಿಂದರುತ್ತಾನೆ. ಭರತನನ್ನು ಕರೆದುಕೊಂಡು ಹೋಗುವ ಸಲುವಾಗಿ ನಾನು ಅಯೋಧ್ಯಾ ಪಟ್ಟಣಕ್ಕೆ ಹೋದೆನು. ನೀನು ಪುತ್ರರ ವಿವಾಹಾರ್ಥವಾಗಿ ಪುತ್ರ ಪರಿವಾರ ಸಮೇತನಾಗಿ ಮಿಥಿಲಾಪಟ್ಟಣಕ್ಕೆ ಪ್ರಯಾಣ ಮಾಡಿದ ವಾರ್ತೆಯನ್ನು ಅಯೋಧ್ಯೆಯಲ್ಲಿ ಕೇಳಿ, ನನ್ನ ತಂಗಿಯ ಮಗನನ್ನು ನೋಡುವ ಆತುರದಿಂದ ಒಡನೆಯೇ ಅಲ್ಲಿಂದ ಹೊರಟು ಇಲ್ಲಿಗೆ ಬಂದೆನು" ಎಂದರು.
ಯಧಾಜಿತನು ಹೀಗೆ ಹೇಳಿದ ನಂತರ ದಶರಥರಾಜನು ಪೂಜಾರ್ಹನಾದ, ಪರಮಪ್ರೀತನಾದ, ಅತಿಥಿಯಾದ ಮತ್ತು ಬಂಧುವಾದ ಯಧಾಜಿತನನ್ನು ಯಥೋಚಿತವಾಗಿ ಸತ್ಕರಿಸಿದನು. ದಶರಥರಾಜನು ಆ ರಾತ್ರಿಯನ್ನು ಮಹಾತ್ಮರಾದ ತನ್ನ ಪುತ್ರರೊಡನೆ ಸುಖದಿಂದ ಕಳೆದು ಮುಂಜಾನೆ ಎದ್ದು ಸ್ನಾನ ಸಂಧ್ಯಾದಿ ನಿತ್ಯಕರ್ಮಗಳನ್ನು ವಿವಾಹಾಂಗವಾಗಿ ಮಾಡಬೇಕಾಗಿದ್ದ ಕರ್ಮಗಳನ್ನು ಮುಗಿಸಿಕೊಂಡು ಋಷಿಪುರಸ್ಪರನಾಗಿ ಯಜ್ಞಾಶಾಲೆಗೆ ಆಗಮಿಸಿದನು. ರಾಮನು ವಿಜಯಪ್ರದವಾದ ಮುಹೂರ್ತದಲ್ಲಿ ಸರ್ವಾಭರಣ ಭೂಷಿತನಾಗಿ ಮತ್ತು ರಕ್ಷಾಬಂಧನ ಕರ್ಮವನ್ನು ಮುಗಿಸಿಕೊಂಡವನಾಗಿ ವಸಿಷ್ಠರನ್ನು ಮತ್ತು ಇತರಮಹರ್ಷಿಗಳನ್ನೂ ಮುಂದುಮಾಡಿಕೊಂಡು ತಂದೆಯಾದ ದಶರಥನ ಸಮೀಪಕ್ಕೆ ಆಗಮಿಸಿದನು. ದಶರಥನು ಪರಿವಾರಸಮೇತನಾಗಿ ಯಜ್ಞಶಾಲೆಗೆ ಬಂದ ನಂತರ ವಸಿಷ್ಠರು ಅರಮನೆಗೆ ಹೋಗಿ ಜನಕನಿಗೆ, "ಜನಕರಾಜ! ವಿವಾಹ ಪೂರ್ವದ ರಕ್ಷಾಬಂಧನಾದಿ ಮಂಗಳಕಾರ್ಯಗಳೆಲ್ಲವನ್ನು ಮುಗಿಸಿ ಮಕ್ಕಳೊಡನೆ ದಶರಥನು ಕನ್ಯಾದಾತೃವಾದ ನಿನ್ನನ್ನು ನೋಡಲು ಬಯಸುತ್ತಾನೆ. ಉತ್ತಮೋತ್ತಮವಾದ ಈ ವಿವಾಹವನ್ನು ಮಾಡಿ ನಿನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸು" ಎಂದರು.
ಮಹಾತ್ಮರಾದ ವಸಿಷ್ಠರಿಂದ ಹೀಗೆ ನಿರ್ದೇಶಿತನಾದ ಜನಕನು, "ದಶರಥನು ನಿನ್ನನ್ನು ನೋಡಲಿಚ್ಛಿಸಿ ಯಜ್ಞಶಾಲೆಯಲ್ಲಿ ಕಾಯುವ ಕಾರಣವಿಲ್ಲ. ತನ್ನದೇ ಆಗಿರುವ ಈ ಅರಮನೆಗೆ ಯಾವ ವಿಧವಾದ ಸಂಕೋಚವೂ ಇಲ್ಲದೆ ಈ ಕೂಡಲೇ ದಯಮಾಡಿಸಬಹುದು. ನನ್ನ ಹೆಣ್ಣುಮಕ್ಕಳಿಗೂ ರಕ್ಷಾಬಂಧನಾದಿ ಮಂಗಳಕಾರ್ಯಗಳು ಮುಗಿದಿವೆ. ನಾನು ನಿಮ್ಮ ಪ್ರತೀಕ್ಷೆ ಮಾಡುತ್ತಾ ಸಿದ್ಧನಾಗಿ ಈ ವಿವಾಹ ಮಂಟಪದಲ್ಲಿ ಕುಳಿತಿದ್ದೇನೆ. ವಿವಾಹ ಶುಭಕಾರ್ಯವು ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರಂಭ ಮಾಡೋಣವಾಗಲಿ ಎಂದನು. ದಶರಥನು ಜನಕನ ಮಾತುಗಳನ್ನು ವಸಿಷ್ಠರಿಂದ ಕೇಳಿ, ಋಷಿ ಮಹರ್ಷಿಗಳನ್ನು, ತನ್ನ ನಾಲ್ವರು ಪುತ್ರರನ್ನು ವಿವಾಹ ವೇದಿಕೆಯ ಬಳಿಗೆ ಕರೆದೊಯ್ದನು.
ಪೂಜ್ಯರಾದ ವಸಿಷ್ಠರು, ವಿಶ್ವಾಮಿತ್ರ-ಶತಾನಂದರನ್ನು ಮುಂದುಮಾಡಿಕೊಂಡು ಯಜ್ಞ ಶಾಲೆಯ ಮಧ್ಯದಲ್ಲಿ ವಿಧಿವತ್ತಾಗಿ ವಿವಾಹ ವೇದಿಕೆಯನ್ನು ಸ್ಥಾಪಿಸಿ ಅದನ್ನು ಗಂಧದ ಪುಷ್ಪಾದಿಗಳಿಂದಲೂ, ಅಂಕುರಗಳಿಂದ ಕೂಡಿದ ವಿಚಿತ್ರವಾದ ಕುಂಭಗಳಿಂದಲೂ, ಧೂಪಪಾತ್ರೆಗಳಿಂದಲೂ, ಶಂಖ ಪಾತ್ರೆಗಳಿಂದಲೂ, ಅರ್ಘ್ಯ ಪಾತ್ರೆಗಳಿಂದಲೂ, ಅರಳು ತುಂಬಿರುವ ಪಾತ್ರೆಗಳಿಂದಲೂ ಅಕ್ಷತೆಯಿಂದ ತುಂಬಿರುವ ಪಾತ್ರೆಗಳಿಂದಲೂ ಅಲಂಕರಿಸಿದರು. ಶಾಸ್ತ್ರೋಕ್ತವಾದ ಪರಿಮಾಣದಿಂದ ಕೂಡಿದ್ದ ದರ್ಭೆಗಳ ಆಸ್ತರಣವನ್ನು ವಿಧ್ಯುಕ್ತವಾಗಿ ಮತ್ತು ಮಂತ್ರಪೂರ್ವಕವಾಗಿ ವೇದಿಕೆಯ ಸುತ್ತಲು ಹಾಕಿ, ನಂತರ ಅಗ್ನ್ಯಾಹರಣ ಮಾಡಿ ಯಥಾವಿಧಿಯಾಗಿ ಮಂತ್ರಪೂರ್ವಕವಾಗಿ ಪಾಣಿಗ್ರಹಣಕ್ಕೆ ಮೊದಲು ಮಾಡಬೇಕಾದ ಅಭ್ಯುದಯ ಹೋಮವನ್ನು ಮಾಡಿದರು.
ಅನಂತರ ಸರ್ವಾಭರಣಭೂಷಿತೆಯಾದ ಸೀತೆಯನ್ನು, ವಿವಾಹ ವೇದಿಕೆಯ ಬಳಿಗೆ ಕರೆತಂದು, ಯಜ್ಞೇಶ್ವರನ ಸಮ್ಮುಖದಲ್ಲಿ ರಾಘವನಿಗೆ ಎದುರಾಗಿ ಕುಳ್ಳಿರಿಸಿ ಶ್ರೀರಾಮನಿಗೆ ಜನಕರಾಜನು "ನನ್ನ ಮಗಳಾದ ಈ ಸೀತೆಯು ನಿನ್ನ ಸಹಧರ್ಮಿಣಿಯಾಗುವಳು. ಆದುದರಿಂದ ಇವಳನ್ನು ಸ್ವೀಕಾರ ಮಾಡು. ನಿನ್ನ ಕೈಗಳಿಂದ ಇವಳ ಕೈಯನ್ನು ಹಿಡಿದುಕೊ. ನಿನಗೆ ಮಂಗಳವಾಗಲಿ. ಇವಳು ಪತೀವ್ರತೆಯಾಗಿರುವಳು. ನಿನ್ನ ನೆರಳಿನಂತೆಯೇ ನಿನ್ನನ್ನು ಸರ್ವದಾ ಅನುಸರಿಸುವಳು". ಎಂದು ಹೇಳಿ ಸೀತೆಯ ಕೈಯನ್ನು ಶ್ರೀರಾಮನ ಕೈಯಲ್ಲಿಟ್ಟು, ಕನ್ಯಾದಾನ ಮಂತ್ರಪುನಶ್ಚರಣೆಮಾಡಿ, ಮಂತ್ರಪೂತವಾದ ತೀರ್ಥವನ್ನು ಶ್ರೀರಾಮನ ಕೈಯಲ್ಲಿ ಬಿಟ್ಟು ಧಾರೆಯೆರೆದನು. ವಿವಾಹಮಹೋತ್ಸವದಲ್ಲಿ ಉಪಸ್ಥಿತರಿದ್ದ ಮಹರ್ಷಿಗಳೂ, ದೇವತೆಗಳೂ "ಸಾಧು ಸಾಧು" ಎಂದು ಹೇಳುತ್ತಾ ಹರ್ಷಧ್ವನಿಗಳನ್ನು ಮಾಡಿದರು. ಹೀಗೆ ಸೀತೆಯನ್ನು ರಾಮನಿಗೆ ಧಾರೆಯೆರೆದು ಕೊಟ್ಟ ನಂತರ ಹರ್ಷದಿಂದ ರೋಮಾಂಚಿತನಾದ ಜನಕನು, ಲಕ್ಷ್ಮಣನಿಗೆ ಊರ್ಮಿಳಾಳನ್ನೂ, ಭರತನಿಗೆ ಮಾಂಡವಿಯನ್ನು ಹಾಗೂ ಶತ್ರುಘ್ನನಿಗೆ ಶ್ರುತಕೀರ್ತಿಯನ್ನು ಪಾಣಿಗ್ರಹಣ ಮಾಡಿದನು. ಪಾಣಿಗ್ರಹಣಾನಂತರದಲ್ಲಿ ಪತ್ನೀ ಸಮೇತರಾದ ರಾಜಕುಮಾರರು ಅಗ್ನಿಯನ್ನೂ, ವಿವಾಹ ವೇದಿಕೆಯನ್ನೂ, ಜನಕರಾಜನನ್ನು, ಋಷಿಗಳನ್ನೂ ಯಥಾವಿಧಿಯಾಗಿ ನಮಸ್ಕರಿಸಿ ವಿಧಿಪೂರ್ವಕವಾಗಿ ವಿವಾಹ ಹೋಮವನ್ನು ಮಾಡಿದರು. ಅನಂತರ ರಘುನಂದನರು, ತಮ್ಮ ತಮ್ಮ ಭಾರ್ಯೆಯರ ಸಮೇತರಾಗಿ ಶಿಬಿರಗಳಿಗೆ ತೆರಳಿದರು. ದಶರಥರಾಜನೂ ಬಂಧು ವರ್ಗದವರೊಡನೆಯೂ ಋಷಿಗಳೊಡನೆಯೂ ರಾಜಪುತ್ರರನನ್ನುಸರಿಸಿದನು.








Comments