ಸೀತಾ-ರಾಮ ಕಲ್ಯಾಣದ ಸಿದ್ಧತೆ (ರಾಮಾಯಣ ಕಥಾಮಾಲೆ 9)
- Ganapati Hegde Moodkani

- Jul 20
- 2 min read
ಜನಕನಿಂದ ಕಳುಹಿಸಲ್ಪಟ್ಟ ಸಚಿವರು ಮತ್ತು ರಾಜಭಟರು, ಬಹುದೂರದ ಪ್ರಯಾಣದಿಂದ ಕುದುರೆಗಳು ಬಹಳ ಬಳಲಿದ್ದ ಕಾರಣ ಮಾರ್ಗದಲ್ಲಿ ಮೂರು ರಾತ್ರಿ ತಂಗಿದ್ದು, ನಾಲ್ಕನೆಯ ದಿನ ಅಯೋಧ್ಯೆಗೆ ಸೇರಿದರು. ದಶರಥ ರಾಜನ ಅರಮನೆಯ ಬಾಗಿಲಿಗೆ ಹೋಗಿ, ತಾವು ಜನಕರಾಜನಿಂದ ಕಳುಹಿಸಲ್ಪಟ್ಟಿರುವುದಾಗಿಯೂ, ದಶರಥ ರಾಜನನ್ನು ಒಡನೆಯೇ ಕಾಣಬೇಕಾಗಿದೆಯೆಂದೂ ದ್ವಾರಪಾಲಕರಿಗೆ ಹೇಳಲು, ದ್ವಾರಪಾಲಕರು ಹೋಗಿ ದಶರಥ ರಾಜನಿಗೆ ಆ ಸಮಾಚಾರವನ್ನು ನಿವೇದಿಸಿದರು. ದಶರಥ ರಾಜನು ಜನಕನ ಸಚಿವರುಗಳನ್ನೂ, ರಾಜಭಟರುಗಳನ್ನೂ ಮರ್ಯಾದೆಯಿಂದ ಅರಮನೆಯೊಳಗೆ ಕರೆತರುವಂತೆ ದ್ವಾರಪಾಲಕರಿಗೆ ಆಜ್ಞಾಪಿಸಿದನು.
ದ್ವಾರಪಾಲಕರ ಜೊತೆಯಲ್ಲಿ ಅವರೆಲ್ಲರೂ ಸಭಾಮಂಟಪವನ್ನು ಪ್ರವೇಶಿಸಿ, ಅಲ್ಲಿ ಸಿಂಹಾಸನಾರೂಢನಾಗಿದ್ದ, ದೇವಸದೃಶನಾಗಿದ್ದ ದಶರಥ ರಾಜನನ್ನು ಸಂದರ್ಶಿಸಿ, "ಮಹಾರಾಜ! ಮಿಥಿಲಾಧಿಪತಿಯಾದ, ಸಕಲ ಪ್ರಜೆಗಳಿಗೂ ಸುಖವನ್ನುಂಟು ಮಾಡುತ್ತಿರುವ ಜನಕರಾಜನು, ವಿಶ್ವಾಮಿತ್ರರ ಅನುಮತಿಯೊಡನೆ ನಿಮಗೆ ಈ ಮಾತುಗಳನ್ನು ಹೇಳುವಂತೆ ಹೇಳಿರುವನು, 'ದಶರಥ ಮಹಾರಾಜ! ನನ್ನ ಮಗಳು ವೀರ್ಯಶುಲ್ಕಳೆಂದು ನಾನು ಮಾಡಿದ್ದ ಪ್ರತಿಜ್ಞೆಯು ಸರ್ವತ್ರವಿದಿತವಾಗಿದೆ. ಆ ವಾರ್ತೆಯನ್ನು ಕೇಳಿ ಕೋಪಗೊಂಡು ನಿರ್ವೀರ್ಯರಾದ ಅನೇಕ ರಾಜರು ತಮ್ಮ ಪರಾಕ್ರಮವನ್ನು ತೋರುವ ಸಲುವಾಗಿ ವಿದೇಹಕ್ಕೆ ಬಂದು, ವೀರ್ಯದ ಪರಿಮಿತಿಯನ್ನಳೆಯಲು ಸಿದ್ಧಪಡಿಸಿದ್ದ ಧನುಸ್ಸನ್ನು ಮೇಲಕ್ಕೆತ್ತಲೂ ಸಮರ್ಥರಾಗದೇ ಪರಾಙ್ಮುಖರಾಗಿ ಹೊರಟುಹೋದರು. ಈ ವಿಷಯವೂ ನಿನಗೆ ತಿಳಿದಿದೆ. ವೀರ್ಯಶುಲ್ಕಳಾದ ನನ್ನ ಮಗಳು, ನನ್ನ ಅದೃಷ್ಟ ವಿಶೇಷದಿಂದ ವಿಶ್ವಾಮಿತ್ರರೊಡನೆ ನನ್ನ ಅರಮನೆಗೆ ಆಗಮಿಸಿರುವ ನಿನ್ನ ಮಕ್ಕಳಿಂದ ಜಯಿಸಲ್ಪಟ್ಟಳು. ಮಹಾರಾಜ! ಇತರರಿಂದ ಎತ್ತಿಹಿಡಿಯಲೂ ಸಾಧ್ಯವಾಗದಿದ್ದ ದಿವ್ಯವಾದ ಶೈವಧನುಸ್ಸನ್ನು, ತುಂಬಿದ ಸಭೆಯಲ್ಲಿ ಮಹಾತ್ಮನಾದ ನಿನ್ನ ಜ್ಯೇಷ್ಠ ಪುತ್ರನಾದ ರಾಮನು ಭಗ್ನಗೊಳಿಸಿದನು. ಧನುರ್ಭಂಜನ ಮಾಡಿ ಅತಿಶಯವೀರ್ಯವನ್ನು ತೋರಿಸಿರುವ ಮಹಾತ್ಮನಾದ ಶ್ರೀರಾಮನಿಗೆ ವೀರ್ಯಶುಲ್ಕಳಾದ ಸೀತೆಯನ್ನು ಕೊಟ್ಟು ಮದುವೆಮಾಡಬೇಕಾಗಿದೆ. ಈ ವಿವಾಹ ಸಂಬಂಧಕ್ಕೆ ನೀನೂ ಸಮ್ಮತಿಸುವುದು ಯೋಗ್ಯವಾಗಿದೆ. ಉಪಾಧ್ಯಾಯ ಸಮೇತನಾಗಿ, ಪುರೋಹಿತನನ್ನು ಮುಂದೆಮಾಡಿಕೊಂಡು ಒಡನೆಯೇ ಆಗಮಿಸುವವನಾಗು. ನಿನ್ನ ಮಕ್ಕಳಿಬ್ಬರ ಕಲ್ಯಾಣದಿಂದ ಉಂಟಾಗುವ ಆನಂದವನ್ನು ನೀನು ಪಡೆಯುವೆ" ಈ ರೀತಿಯಾಗಿ ಜನಕನು ನಮ್ಮೊಡನೆ ಹೇಳಿ ಕಳುಹಿಸಿರುವನು" ಎಂದನು.
ಜನಕರಾಜನ ದೂತರು ಹೇಳಿದ ಮಾತುಗಳನ್ನು ಕೇಳಿ ದಶರಥನು ಪರಮಸಂತುಷ್ಟನಾಗಿ ವಸಿಷ್ಠರನ್ನು, ವಾಮದೇವರನ್ನೂ, ಮಂತ್ರಿ ಅಮಾತ್ಯರುಗಳನ್ನೂ ಮತ್ತು ಸಭಾಮಂದಿರದಲ್ಲಿದ್ದ ಇತರರನ್ನು ಉದ್ದೇಶಿಸಿ, "ಪೂಜ್ಯರೇ! ಜನಕರಾಜನ ದೂತರು ವಿಜ್ಞಾಪಿಸಿಕೊಂಡಂತೆ ವಿಶ್ವಾಮಿತ್ರರಿಂದ ಸುರಕ್ಷಿತನಾದ ಕೌಸಲ್ಯೆಯ ಆನಂದವನ್ನು ಹೆಚ್ಚಿಸುವ ರಾಮನು, ತನ್ನ ಅನುಜನಾದ ಲಕ್ಷ್ಮಣನೊಡನೆ ಮಿಥಿಲಾಪಟ್ಟಣದಲ್ಲಿ ವಾಸಮಾಡುತ್ತಿದ್ದಾನೆ. ಮಹಾತ್ಮನಾದ, ಶಿವಧನುರ್ಭಂಗ ಮಾಡಿದ ರಾಮನ ಮಹಾಪರಾಕ್ರಮವನ್ನು ಕಂಡು, ಜನಕರಾಜನು ತನ್ನ ಮಗಳಾದ ಸೀತಾದೇವಿಯನ್ನು ರಾಮನಿಗೆ ಪ್ರದಾನ ಮಾಡಲು ಆಶಿಸಿದ್ದಾನೆ. ಜನಕರಾಜನೊಡನೆ ನಾವು ಮಾಡಲಿರುವ ಈ ವಿವಾಹ ಸಂಬಂಧವು ನಿಮ್ಮೆಲ್ಲರಿಗೂ ಯುಕ್ತವೆನಿಸಿದರೆ, ನಾವೆಲ್ಲ ವಿಳಂಬ ಮಾಡದೇ ಮಿಥಿಲಾಪಟ್ಟಣಕ್ಕೆ ಪ್ರಯಾಣ ಮಾಡೋಣ" ಎಂದನು.
ದಶರಥನ ಮಾತುಗಳನ್ನು ಕೇಳಿ ಸಭಾಮಂದಿರದಲ್ಲಿದ್ದ ಮಂತ್ರಿಗಳು, ಋಷಿ, ಪುರೋಹಿತರು ಏಕಕಾಲದಲ್ಲಿ 'ಹಾಗೆಯೇ ಆಗಲಿ, ಒಡನೆಯೇ ಪ್ರಯಾಣ ಮಾಡೋಣ. ಜನಕ ರಾಜನೊಡನೆ ಸಂಬಂಧ ಮಾಡುವುದು ಸೂಕ್ತವಾಗಿದೆ' ಎಂದು ಹೇಳಿದರು. ಅವರ ಉತ್ತರವನ್ನು ಕೇಳಿ ದಶರಥನು ಹಿರಿಹಿಗ್ಗಿದನು. ಮರುದಿನವೇ ಪ್ರಯಾಣವೆಂದು, ಮಂತ್ರಿಗಳಿಗೆ ಪ್ರಯಾಣದ ದಿನವನ್ನು ಗೊತ್ತುಮಾಡಿ ಹೇಳಿದನು. ಜನಕರಾಜನಿಂದ ಕಳುಹಿಸಲ್ಪಟ್ಟಿದ್ದ ಸಕಲಸದ್ಗುಣ ಪರಿಪೂರ್ಣರಾದ ಮಂತ್ರಿಗಳು ಮತ್ತು ದೂತರು ರಾಜಸಭೆಯಲ್ಲಾದ ನಿರ್ಣಯವನ್ನು ಕೇಳಿ ಪರಮಸಂತುಷ್ಟರಾದರು ಮತ್ತು ದಶರಥನಿಂದ ಸತ್ಕೃತರಾಗಿ ಆ ರಾತ್ರಿಯನ್ನು ಕಳೆದರು.
ರಾತ್ರಿಯು ಕಳೆಯಲಾಗಿ ಬಂಧು ಅಮಾತ್ಯರುಗಳೊಡನೆ ಪರಮಸಂತುಷ್ಟನಾಗಿ ಕುಳಿತಿದ್ದ ದಶರಥನು, ಸಾರಥಿಯಾದ ಸುಮಂತ್ರನಿಗೆ "ಸುಮಂತ್ರ! ಜನಕನಿಂದ ಕಳುಹಿಸಲ್ಪಟ್ಟಿರುವ ಮಂತ್ರಿಗಳು ಮತ್ತು ದೂತರು ನನ್ನನ್ನು ಅವಸರಪಡಿಸುತ್ತಿದ್ದಾರೆ. ಆದುದರಿಂದ ಕಾಲವು ಮೀರಿಹೋಗುವುದರೊಳಗಾಗಿ ಮಿಥಿಲಾಪಟ್ಟಣವನ್ನು ತಲುಪಲು ಶಕ್ಯವಾಗುವಂತೆ, ಉತ್ತಮವಾದ ರಥವನ್ನು ನನಗಾಗಿ ಸಿದ್ಧಪಡಿಸು" ಎಂದನು.

ರಾಜಾಜ್ಞೆಯಂತೆ ಋಷಿ ಪುರೋಹಿತರ ಸಮೇತವಾಗಿ ಮಿಥಿಲಾಪಟ್ಟಣಕ್ಕೆ ಪ್ರಯಾಣ ಹೊರಟಿದ್ದ ಚತುರಂಗಬಲವು ದಶರಥರಾಜನ ಹಿಂದೆ ಹೊರಟಿತು. ನಾಲ್ಕು ದಿನಗಳ ಪ್ರಯಾಣ ಮಾಡಿದ ನಂತರ, ದಶರಥರಾಜನು ಪರಿವಾರಸಮೇತವಾಗಿ ಮಿಥಿಲಾಪಟ್ಟಣವನ್ನು ಸೇರಿದನು. ದಶರಥಮಹಾರಾಜನು ಬರುತ್ತಿರುವರೆಂಬ ವಾರ್ತೆಯನ್ನು ದೂತರಿಂದ ತಿಳಿದ ಜನಕರಾಜನು, ಅವರಿಗೆ ಅದ್ಭುತವಾದ ಸ್ವಾಗತವನ್ನು ನೀಡಲು ಪೂಜಾ ಸಂಭಾರಗಳನ್ನು ಸಿದ್ಧಪಡಿಸಿದನು. ಅರಮನೆಯನ್ನು ಪ್ರವೇಶಿಸಿದ ದಶರಥರಾಜನನ್ನು ಕಂಡು ಜನಕನು ಪರಮಾನಂದ ಭರಿತನಾದನು. ತನ್ನ ಆದರದ ಸ್ವಾಗತದಿಂದ ಹರ್ಷಿತನಾಗಿದ್ದ ದಶರಥನಿಗೆ ಜನಕರಾಜನು, "ರಘುಕುಲಾವತಂಸ! ನಿನಗೆ ಆದರದ ಸ್ವಾಗತವು. ನಮ್ಮ ಭಾಗ್ಯ ವಿಶೇಷದಿಂದ ನೀನಿಂದು ನಮಗೆ ಪ್ರಾಪ್ತನಾಗಿರುವೆ. ನಿಶ್ಚಯವಾಗಿಯೂ ಇಂದು ನಿಮ್ಮ ದರ್ಶನದ ಫಲವಾಗಿ ವಿಘ್ನಗಳೆಲ್ಲವೂ ದೂರವಾದವು. ಮಹಾತ್ಮರಾದ ಮಹಾಪರಾಕ್ರಮಿಗಳಾದ, ರಘುವಂಶ ಪ್ರದೀಪರುಗಳೊಡನೆ ನಾನು ಮಾಡಲಿರುವ ವಿವಾಹ ಸಂಬಂಧದಿಂದಾಗಿ ನಮ್ಮ ವಂಶವು ಪುರಸ್ಕೃತವಾಯಿತು. ಮಹಾರಾಜ! ನಾಳೆಯ ದಿನ ಪ್ರಾತಃಕಾಲ ಈ ವಿವಾಹವನ್ನು ನೀನು ನಡೆಸಿಕೊಡುವುದು ಸಾಧುವಾಗಿದೆ. ಯಜ್ಞವು ಮುಗಿದನಂತರ ವಿವಾಹ ಮಾಡುವುದು ಋಷಿಸಮ್ಮತವೂ ಆಗಿರುವುದು".
ಜನಕರಾಜನ ಆ ಮಾತುಗಳನ್ನು ಕೇಳಿ ಋಷಿಗಳ ಮಧ್ಯದಲ್ಲಿ ಕುಳಿತಿದ್ದ ವಾಕ್ಯವಿಶಾರದನಾದ ದಶರಥನು "ಜನಕರಾಜ! ಕನ್ಯಾ, ಗೋವು ಮುಂತಾದವುಗಳ ಪ್ರತಿಗ್ರಹವೂ ದಾನಕೊಡುವವನ ಅಧೀನದಲ್ಲಿರತಕ್ಕುವುಗಳೆಂಬ ಆರ್ಯೋಕ್ತಿಯನ್ನು ನಾನು ಈ ಹಿಂದೆ ಕೇಳಿದ್ದೇನೆ. ಆದುದರಿಂದ ಕನ್ಯಾದಾತೃವಾದ ಧರ್ಮಜ್ಞನಾದ ನೀನು ಹೇಗೆ ಹೇಳುವೆಯೋ ಅದರಂತೆ ನಾವು ನಡೆಯಲು ಸಿದ್ಧರಿದ್ದೇವೆ" ಎಂದನು.
ಬಳಿಕ ರಾಮನು ಲಕ್ಷ್ಮಣನೊಡನೆ ವಿಶ್ವಾಮಿತ್ರನನ್ನು ಮುಂದುಮಾಡಿಕೊಂಡು, ದಶರಥನಿದ್ದೆಡೆಗೆ ಬಂದು ಅವನ ಎರಡು ಕಾಲುಗಳನ್ನು ಮುಟ್ಟಿ ನಮಸ್ಕರಿಸಿದನು.
ದಶರಥನೂ ಕಾಂತಿಮಂತರಾದ ತನ್ನ ಇಬ್ಬರು ಮಕ್ಕಳನ್ನು ಕಂಡು ಪರಮ ಸಂತುಷ್ಟನಾದನು. ಜನಕನಿಂದ ಸತ್ಕೃತನಾದ ದಶರಥನು ಪರಮಪ್ರೀತನಾಗಿ ಆ ರಾತ್ರಿಯನ್ನು ಸುಖದಿಂದ ಕಳೆದನು.








Comments