ವನವಾಸಕ್ಕೆ ಸಿದ್ಧರಾದ ರಾಮ-ಸೀತೆ-ಲಕ್ಷ್ಮಣ (ರಾಮಾಯಣ ಕಥಾಮಾಲೆ 30)
- Ganapati Hegde Moodkani

- 11 hours ago
- 2 min read
ವನವಾಸಕ್ಕೆ ಸಿದ್ಧರಾದ ರಾಮ-ಸೀತೆ-ಲಕ್ಷ್ಮಣ
ಶ್ರೀರಾಮನಿಂದ ಪ್ರೇರಿಸಲ್ಪಟ್ಟ ಸುಮಂತ್ರನು ಅಂತಃಪುರವನ್ನು ಪ್ರವೇಶಿಸಿ, ರಾಮನನ್ನೇ ಕುರಿತು ದುಃಖಿಸುತ್ತಾ ಬಹಳವಾಗಿ ವ್ಯಾಕುಲಗೊಂಡ ಮನಸ್ಸುಳ್ಳವನಾಗಿದ್ದ ರಾಜನನ್ನು ನೋಡಿ, "ಪ್ರಭುವೇ! ನೀನು ಕ್ಷಣಕ್ಷಣಕ್ಕೂ ನೆನೆಸಿಕೊಳ್ಳುತ್ತಿರುವ, ನಿನ್ನ ಪ್ರಿಯ ಪುತ್ರನಾದ ಶ್ರೀರಾಮನು, ಬ್ರಾಹ್ಮಣರಿಗೂ ಮತ್ತು ಆಶ್ರಿತರಿಗೂ ತನ್ನ ಐಶ್ವರ್ಯವೆಲ್ಲವನ್ನೂ ಹಂಚಿಕೊಟ್ಟು ನಿನ್ನ ಅಂತಃಪುರದ ಬಾಗಿಲಿನಲ್ಲಿ ನಿಂತಿದ್ದಾನೆ" ಎಂದನು.
ಸುಮಂತ್ರನ ಮಾತನ್ನು ಕೇಳಿ ದಶರಥನು ತನ್ನ ಪತ್ನಿಯರೆಲ್ಲರಿಗೂ ಅಂತಃಪುರಕ್ಕೆ ಬರುವಂತೆ ತಿಳಿಸಿ, ನಂತರ ರಾಮನನ್ನು ಬರುವಂತೆ ಸೂಚಿಸಿದನು. ಎಲ್ಲರೂ ಅಂತಃಪುರಕ್ಕೆ ಬಂದ ನಂತರ ಶ್ರೀರಾಮನು ಕೈಮುಗಿದುಕೊಂಡು, "ಮಹಾರಾಜ! ನೀನು ನಮ್ಮೆಲ್ಲರಿಗೂ ಸ್ವಾಮಿಯಾಗಿರುವೆ. ಆದುದರಿಂದ ನಿನ್ನ ಅನುಮತಿಯನ್ನು ಕೇಳಲು ಬಂದಿರುವೆನು. ದಂಡಕಾರಣ್ಯಕ್ಕೆ ಹೊರಟಿರುವ ನನ್ನನ್ನು ಶುಭದೃಷ್ಟಿಯಿಂದ ನೋಡು. ನನ್ನ ಜೊತೆಯಲ್ಲಿ ಬರಲು ಲಕ್ಷ್ಮಣನಿಗೂ ಅನುಮತಿಯನ್ನು ಕೊಡು. ಸೀತೆಯೂ ಕೂಡ ನನ್ನ ಜೊತೆಯಲ್ಲಿ ಕಾಡಿಗೆ ಬರುತ್ತಾಳೆ. ವಾಸ್ತವವಾಗಿ ಅನೇಕ ಕಾರಣಗಳನ್ನು ಹೇಳಿ ಅರಣ್ಯಕ್ಕೆ ಬರಬಾರದೆಂದು ತಡೆದರೂ, ಇಬ್ಬರೂ ನನ್ನನ್ನು ಬಿಟ್ಟು ಇಲ್ಲಿರಲು ಇಚ್ಛಿಸುತ್ತಿಲ್ಲ. ನೀನು ನಿನ್ನ ಶೋಕವನ್ನು ಪರಿತ್ಯಜಿಸಿ ನಾವೆಲ್ಲರೂ ಅರಣ್ಯಕ್ಕೆ ಹೋಗಲು ಅನುಮತಿಸು" ಎಂದನು.

ಆಗ ದಶರಥನು, "ರಾಘವ! ನಾನು ಕೈಕೇಯಿಗೆ ಕೊಟ್ಟ ವರದಾನದಿಂದ ವಂಚಿತನಾದೆನು. ಈಗಲೇ ನನ್ನನ್ನು ಬಂಧಿಸಿ ಅಯೋಧ್ಯೆಗೆ ರಾಜನಾಗು" ಎಂದನು. ರಾಜನು ಹೀಗೆ ಹೇಳಲು ಧರ್ಮಾತ್ಮರಲ್ಲಿ ಶ್ರೇಷ್ಠನಾದ, ವಾಕ್ಯವಿಶಾರದನಾದ ಶ್ರೀರಾಮನು, "ಮಹಾರಾಜ! ನೀನು ಇನ್ನೂ ಒಂದು ಸಾವಿರ ವರ್ಷಗಳವರೆಗೆ ಈ ಜಗತ್ತಿಗೆ ಒಡೆಯನಾಗಿರು. ನಾನು ಕಾಡಿನಲ್ಲೇ ಇರುತ್ತೇನೆ. ನಿನ್ನ ಮಾತನ್ನು ಸುಳ್ಳಾಗಿಸುವುದು ನನ್ನ ಕರ್ತವ್ಯವಲ್ಲ. ಹದಿನಾಲ್ಕು ವರ್ಷಗಳು ಅರಣ್ಯದಲ್ಲಿ ವಿಹರಿಸುತ್ತಿದ್ದು, ಪ್ರತಿಜ್ಞೆಯು ಪೂರ್ಣವಾದೊಡನೆಯೇ ಪುನಃ ಅಯೋಧ್ಯೆಗೆ ಬಂದು ನಿನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತೇವೆ" ಎಂದನು.
ಸತ್ಯಪಾಶದಿಂದ ಬದ್ಧನಾಗಿ, ಆರ್ತನಾಗಿ, ಶ್ರೀರಾಮನನ್ನು ಅರಣ್ಯಕ್ಕೆ ಕಳುಹಿಸುವಂತೆ ಕೈಕೇಯಿಯಿಂದ ರಹಸ್ಯದ ಪ್ರಚೋದಿತನಾದ ರಾಜನು ರೋದನ ಮಾಡುತ್ತಾ ರಾಮನಿಗೆ, "ಮಗು! ಪಾರಲೌಕಿಕವಾದ ಫಲವನ್ನು ಪಡೆಯುವುದಕ್ಕೂ ಐಹಿಕವಾದ ಅಭಿವೃದ್ಧಿಯನ್ನು ಹೊಂದುವುದಕ್ಕೂ ಪುನಃ ಅಯೋಧ್ಯೆಗೆ ಹಿಂದಿರುಗುವುದಕ್ಕೂ ಏಕಾಗ್ರಚಿತ್ತನಾಗಿ ಅರಣ್ಯಕ್ಕೆ ಪ್ರಯಾಣಮಾಡು. ನಿನಗೆ ಶುಭವಾಗಲಿ" ಎಂದು ಹಾರೈಸಿ ಕಂಬನಿಗರೆಯುತ್ತಾ ಕ್ಷಣ ಕ್ಷಣಕ್ಕೂ ನಿಟ್ಟುಸಿರು ಬಿಡುತ್ತಾ ಸುಮಂತ್ರನೊಡನೆ, "ಸೂತ! ನವರತ್ನಗಳಿಂದ ಪರಿಪೂರ್ಣವಾದ, ರಥ, ಆನೆ, ಕುದುರೆ, ಪದಾತಿಗಳೆಂಬ ನಾಲ್ಕು ಬಗೆಯ ಬಲದಿಂದ ಕೂಡಿರುವ ಸೈನ್ಯವು ಶ್ರೀರಾಮನನ್ನನುಸರಿಸಿ ಪ್ರಯಾಣಮಾಡಲು ಸನ್ನದ್ಧವಾಗುವಂತೆ ಈ ಕೂಡಲೇ ಆಜ್ಞೆಯನ್ನು ಹೊರಡಿಸು. ಮಹಾಬಾಹುವಾದ ಭರತನಾದರೋ ಜನರಿಂದಲೂ, ಐಶ್ವರ್ಯದಿಂದಲೂ ರಹಿತವಾದ ಈ ಅಯೋಧ್ಯೆಯನ್ನು ಆಳುವನು. ಶ್ರೀಮಂತನಾದ ರಾಮನು ಸಕಲಭೋಗ್ಯವಸ್ತುಗಳೊಡನೆ ಅರಣ್ಯಕ್ಕೆ ಹೋಗಲಿ" ಎಂದನು.
ದಶರಥನು ಹೀಗೆ ಆಜ್ಞೆಮಾಡುತ್ತಿರಲು ಕೈಕೇಯಿಗೆ ಭಯವುಂಟಾಯಿತು. ಮುಖವು ಬಾಡಿ ಹೋಯಿತು ಬಾಯಿಂದ ಮಾತೇ ಹೊರಡದಾಯಿತು. ಖಿನ್ನಳಾದ ಭಯಗ್ರಸ್ತಳಾದ ಬಾಡಿಹೋದ ಮುಖವುಳ್ಳವಳಾಗಿದ್ದ ಆಕೆಯು ರಾಜನಿಗೆ ಎದುರಾಗಿ ನಿಂತು "ಸಾರವನ್ನು ಹೀರಿದ ನಂತರ ಉಳಿಯುವ, ಆಸ್ವಾದಿಸಲು ಯೋಗ್ಯವಲ್ಲದ ನೀರಸವಾದ ಸುರೆಯಂತೆ, ಜನರೆಲ್ಲರೂ ಹೊರಟುಹೋದ ಬಳಿಕ ಭೋಗ್ಯವಸ್ತುಗಳಿಲ್ಲದ ಶೂನ್ಯವಾದ ಅಯೋಧ್ಯಾ ಪಟ್ಟಣವು ಭರತನಿಗೆ ಬೇಡ" ಎಂದಳು. ಕೈಕೇಯಿಯ ಮಾತುಗಳನ್ನು ಕೇಳಿ ದಶರಥನು "ಪಾಪಾಚಾರಳೇ! ನನಗೆ ಹಿತಕರವಾದುದು ಯಾವುದೆಂಬುದನ್ನಾಗಲೀ ನೀನು ತಿಳಿದಿಲ್ಲ. ಕುತ್ಸಿತವಾದ ಕಾರ್ಯವನ್ನು ಮಾಡುತ್ತಿರುವ ನೀನು ಕ್ಷುದ್ರವಾದ ಮಾರ್ಗವನ್ನು ಅವಲಂಬಿಸಿರುವಂತೆ ನಿನ್ನ ಈ ಕಾರ್ಯವು ಸತ್ಪುರುಷರ ಮಾರ್ಗದಿಂದ ಅತಿದೂರವಿದೆ. ರಾಜ್ಯವನ್ನೂ, ಸುಖವನ್ನೂ, ಧನವನ್ನೂ ಪರಿತ್ಯಜಿಸಿ ನಾನೀಗಲೇ ರಾಮನ ಹಿಂದೆಯೇ ಕಾಡಿಗೆ ಹೋಗುತ್ತೇನೆ. ರಾಜನಾದ ಭರತನೊಡನೆ ನೀನು ಈ ರಾಜ್ಯದ ಸುಖಭೋಗಗಳನ್ನು ಬಹಳ ಕಾಲದವರೆಗೂ ಅನುಭವಿಸಿಕೊಂಡಿರು" ಎಂದು ಹೇಳಿದನು.
ಇವರುಗಳ ಮಾತುಗಳನ್ನು ಕೇಳಿ ಶ್ರೀರಾಮನು, "ಮಹಾರಾಜ! ಸಕಲಸುಖೋಪಭೋಗಗಳನ್ನೂ ತ್ಯಜಿಸಿಯೇ ಇಲ್ಲಿಂದ ಹೊರಟಿರುವ, ಅರಣ್ಯದಲ್ಲಿ ಸಿಕ್ಕುವ ಗಡ್ಡೆ ಗೆಣಸುಗಳಿಂದಲೇ ಜೀವನ ಮಾಡುವ, ಸರ್ವಸಂಗ ಪರಿತ್ಯಾಗ ಮಾಡಿರುವ ನನಗೆ ನನ್ನನ್ನನುಸರಿಸಿ ಬರುವ ಚತುರಂಗಬಲದಿಂದಾಗಲೀ, ಧನ-ಕನಕ-ವಸ್ತು-ವಾಹನಗಳಿಂದಾಗಲೀ ಯಾವ ಪ್ರಯೋಜನವಿದೆ? ಶ್ರೇಷ್ಠವಾದ ಆನೆಯನ್ನೇ ಕೊಟ್ಟ ನಂತರ ಅದನ್ನು ಕಟ್ಟುವ ಹಗ್ಗಕ್ಕೆ ಯಾವನು ತಾನೇ ಅಪೇಕ್ಷೆ ಪಡುತ್ತಾನೆ? ಹಾಗೆಯೇ ಸಾಮ್ರಾಜ್ಯಲಕ್ಷ್ಮಿಯನ್ನೇ ತ್ಯಜಿಸಿ ಹೊರಟಿರುವ ನನಗೆ ಈ ಸೈನ್ಯವು ಏಕೆ ಬೇಕು? ಇವುಗಳ ಮೇಲೆ ನನಗೆ ಯಾವ ಆಸಕ್ತಿಯೂ ಇಲ್ಲ. ರಾಜ್ಯಕ್ಕೆ ಸಂಬಂಧಿಸಿದ ಈ ಎಲ್ಲ ವಸ್ತು ವಾಹನಗಳನ್ನೂ ಭರತನು ಪಡೆದುಕೊಳ್ಳಲು ನನ್ನ ಅನುಮತಿಯಿದೆ. ನನಗೆ ಈಗ ಬೇಕಾಗಿರುವ ನಾರು ಮಡಿಯನ್ನು ಸೇವಕರು ತರಲಿ. ಹದಿನಾಲ್ಕು ವರ್ಷಗಳು ಅರಣ್ಯದಲ್ಲಿ ವಾಸಮಾಡಲಿರುವ ನನಗೆ ಗುದ್ದಲಿ ಮಂಕರಿಗಳನ್ನು ತನ್ನಿರಿ" ಎಂದನು.
ಶ್ರೀರಾಮನು ಹೀಗೆ ಹೇಳಿದೊಡನೆಯೇ ಆ ಜನಸಮೂಹದಲ್ಲಿ ಕೈಕೇಯಿಯು ಸ್ವಲ್ಪವೂ ನಾಚಿಕೆಯೇ ಇಲ್ಲದವಳಾಗಿ ನಾರು ಮಡಿಯನ್ನು ತಾನೇ ತಂದು ಶ್ರೀರಾಮನಿಗೆ ಉಡಲು ಹೇಳಿ ಕೊಟ್ಟಳು. ಪುರುಷ ಶ್ರೇಷ್ಠನಾದ ಶ್ರೀರಾಮನು ಕೈಕೇಯಿಯಿಂದ ನಾರು ಬಟ್ಟೆಗಳನ್ನು ಪಡೆದುಕೊಂಡು ತಾನುಟ್ಟಿದ್ದ ಬಹುಮೂಲ್ಯವಾದ ಸೂಕ್ಷ್ಮವಸ್ತುಗಳನ್ನು ಬಿಚ್ಚಿಟ್ಟು, ಮುನಿಯೋಗ್ಯವಾದ ನಾರು ಮಡಿಗಳನ್ನು ಉಟ್ಟುಕೊಂಡನು. "ಅಯ್ಯೋ! ಎಂತಹ ವಿಪರ್ಯಾಸ" ಎಂದು ಎಲ್ಲರೂ ಹೇಳುತ್ತಿರಲು ಲಕ್ಷ್ಮಣನು ಕೂಡ ತಾನುಟ್ಟಿದ್ದ ಬಹುಮೂಲ್ಯವಾದ ವಸ್ತ್ರಗಳನ್ನು ಅಲ್ಲಿಯೇ ಬಿಚ್ಚಿಟ್ಟು ತಂದೆಯ ಎದುರಿನಲ್ಲಿಯೇ ತಾಪಸರಿಗೆ ಯೋಗ್ಯವಾದ ನಾರು ಮಡಿಯನ್ನುಟ್ಟನು.
ಯಾವಾಗಲೂ ರೇಷ್ಮೆಯ ವಸ್ತ್ರವನ್ನೇ ಉಡುತ್ತಿದ್ದ ಸೀತಾ ದೇವಿಯು ರಾಜಗುರುಗಳಾದ ವಸಿಷ್ಠರಾದಿಯಾಗಿ ಎಲ್ಲರೂ ನಾರು ಮಡಿಯನ್ನು ಉಡುವುದು ಬೇಡವೆಂದರೂ, ಪ್ರಿಯಾಪತಿಗೆ ಸದೃಶಳಾಗಿರಬೇಕೆಂಬ ಅಭಿಲಾಷೆಯಿಂದ ಸೀತಾದೇವಿಯು ನಾರು ಮಡಿಯನ್ನುಡುವ ನಿಶ್ಚಯವನ್ನು ಬದಲಾಯಿಸಲಿಲ್ಲ.








Comments