ರಾಮನನ್ನು ಬೀಳ್ಕೊಟ್ಟ ಕೌಸಲ್ಯಾ (ರಾಮಾಯಣ ಕಥಾಮಾಲೆ 27)
- Ganapati Hegde Moodkani

- Dec 14, 2025
- 2 min read
ಹೀಗೆ ವಾಗ್ಮಿಗಳಲ್ಲಿ ಮತ್ತು ಸರ್ವಧನುಷ್ಮಂತರಲ್ಲಿ ಶ್ರೇಷ್ಠನಾದ ಶ್ರೀರಾಮನು ತಾಯಿಯನ್ನು ಸಮಾಧಾನಗೊಳಿಸಿ ಲಕ್ಷ್ಮಣನಿಗೆ
"ಲಕ್ಷ್ಮಣ! ನಿನಗೆ ನನ್ನ ಮೇಲಿರುವ ಅತಿಶ್ರೇಷ್ಠವಾದ ಸ್ನೇಹವನ್ನು ನಾನು ಬಲ್ಲೆನು. ಅಂತೆಯೇ ನಿನ್ನಲ್ಲಿರುವ ಪರಾಕ್ರಮವನ್ನೂ, ಸತ್ವವನ್ನೂ ಮತ್ತು ಶತ್ರುಗಳಿಂದ ಎದುರಿಸಲಾಗದ ತೇಜಸ್ಸನ್ನೂ ಬಲ್ಲೆನು. ಶುಭ ಲಕ್ಷಣನೇ! ತಂದೆಯ ಮೇಲಿನ ಕೋಪವನ್ನೂ, ನನ್ನ ವನವಾಸದಿಂದ ಉಂಟಾಗಿರುವ ದುಃಖವನ್ನು ಪರಿತ್ಯಜಿಸು. ಧೈರ್ಯವನ್ನು ಹೊಂದು, ಪಟ್ಟಾಭಿಷೇಕಕ್ಕೆ ಸಿದ್ಧನಾಗಿದ್ದವನು ಅರಣ್ಯಕ್ಕೆ ಹೋಗುವುದು ಅವಮಾನವೆಂದು ಭಾವಿಸಬೇಡ. ಅರಣ್ಯಕ್ಕೆ ಹೋಗುವುದೂ ಒಳ್ಳೆಯದಕ್ಕಾಗಿಯೇ ಎಂದು ಸಂತೋಷಿಸು. ಇಲ್ಲಿ ನನ್ನ ಅಭಿಷೇಕದ ಸಲುವಾಗಿ ಯಾವ ಕೆಲವು ಸಾಮಾಗ್ರಿಗಳು ಸಿದ್ಧವಾಗಿವೆಯೇ ಅವೆಲ್ಲವನ್ನೂ ಶೀಘ್ರವಾಗಿ ವಿಸರ್ಜಿಸು. ಲಕ್ಷ್ಮಣ! ರಾಜನು ರಾಜ್ಯವನ್ನು ವಹಿಸಿಕೊಡಲು ನಿಶ್ಚಯಿಸಿದುದೂ, ವಹಿಸಿಕೊಡಬೇಕಾದ ದಿನವೇ ಈ ರಾಜ್ಯದ ಯೌವರಾಜ್ಯಾಧಿಕಾರವು ನನಗಿಲ್ಲದಂತಾದುದು ರಾಜ್ಯವನ್ನು ಪಡೆದುಕೊಳ್ಳುವುದಕ್ಕೆ ಬದಲಾಗಿ ನಾನು ವನವಾಸ ಮಾಡಬೇಕಾಗಿ ಬಂದುದೂ, ಈ ಎಲ್ಲಾ ಕಾರ್ಯಗಳಲ್ಲಿಯೂ ವಿಧಿಯ ಕೈವಾಡವನ್ನೇ ನಾವು ಕಾಣಬಹುದಾಗಿದೆ. ನಮ್ಮ ಚಿಂತನೆಗೆ ಯಾವುದು ನಿಲುಕುವುದಿಲ್ಲವೋ ಅದೇ ದೈವ ಅಥವಾ ವಿಧಿ. ಪ್ರಾಣಿಗಳ ಅಧಿಷ್ಠಾತೃಗಳಾದ ಬ್ರಹ್ಮಾದಿಗಳಲ್ಲಿಯೂ ವಿಧಿಯು ಪರಾಭವವನ್ನು ಹೊಂದುವುದಿಲ್ಲ. ನನಗೆ ಪ್ರಾಪ್ತವಾಗಿರುವ ವನವಾಸ ಮತ್ತು ಕೈಕೇಯಿಯ ಬುದ್ಧಿಯಲ್ಲಿ ಉಂಟಾಗಿರುವ ವಿಪರ್ಯಾಸ ಇವುಗಳಿಂದಲೇ ವಿಧಿಯ ಪ್ರಭಾವವು ವ್ಯಕ್ತವಾಗುತ್ತದೆ. ವಿಧಿಯೆಂಬುದು ಕೈಗೆ ಸಿಕ್ಕುವುದಿಲ್ಲ. ವಿಧಿಯ ವಿಲಾಸವನ್ನು ನಾವು ಕಾರ್ಯವಾದ ಬಳಿಕವೇ ಕಾಣುತ್ತೇವೆ. ಅಂತಹ ಅದೃಶ್ಯವಾದ ದೈವದೊಡನೆ ಸೆಣೆಸಲು ಯಾವ ಮನುಷ್ಯನು ತಾನೇ ಉತ್ಸಾಹಿತನಾಗುತ್ತಾನೆ? ಲಕ್ಷ್ಮಣ! ರಾಜಲಕ್ಷ್ಮಿಯಾದರೇನು? ವನಲಕ್ಷ್ಮೀಯಾದರೇನು? ನನ್ನ ಅಭಿಪ್ರಾಯದಲ್ಲಿ ಇಂದು ನನಗೆ ವನವಾಸವೇ ಅಭ್ಯುದಯಕಾರಕವಾಗಿದೆ" ಎಂದನು.

ಪುರುಷ ಶ್ರೇಷ್ಠನಾದ ಶ್ರೀರಾಮನು ಅತ್ಯಂತ ದುಃಖಿತಳಾದ ತಾಯಿಯನ್ನು ಸಮಾಧಾನಗೊಳಿಸುತ್ತಾ, "ಅಮ್ಮಾ! ಈ ಸಮಯದಲ್ಲಿ ನೀನು ರಾಜನನ್ನು ಬಿಟ್ಟು ಬರುವುದು ಸರ್ವಥಾ ಯುಕ್ತವಲ್ಲ. ಕೈಕೇಯಿಯಿಂದ ವಂಚಿತನಾಗಿರುವ ನಮ್ಮ ರಾಜನು, ನಾನೂ ಕಾಡಿಗೆ ಹೋಗಿ ನಿನ್ನಿಂದಲೂ ಪರಿತ್ಯಕ್ತನಾದರೆ ಖಂಡಿತವಾಗಿಯೂ ಬದುಕಲಾರನು. ಜಗತೀಪತಿಯಾದ ನನ್ನ ತಂದೆಯು ಎಲ್ಲಿಯವರೆಗೆ ಜೀವಿಸಿರುವನೋ ಅಲ್ಲಿಯವರೆಗೂ ನೀನು ಅವನ ಶುಶ್ರೂಷೆಯನ್ನು ಮಾಡಲೇಬೇಕು. ಇದೇ ಸನಾತನ ಧರ್ಮ" ಎಂದನು.
ಶ್ರೀರಾಮನು ಹೀಗೆ ಹೇಳಲು ಕಂಬನಿದುಂಬಿದ ಕಣ್ಣುಗಳುಳ್ಳವಳಾಗಿದ್ದ ಪುತ್ರವಿರಹ ಶೋಕದಿಂದ ಪೀಡಿತಳಾಗಿದ್ದ ಕೌಸಲ್ಯಾದೇವಿಯು ಶ್ರೀರಾಮನಿಗೆ, "ಪುತ್ರ! ಕಾಡಿಗೆ ಹೋಗುವುದರಲ್ಲಿ ನಿನ್ನ ಸುದೃಢವಾದ ಬುದ್ಧಿಯನ್ನು ಬದಲಿಸಲು ನಾನು ಖಂಡಿತವಾಗಿಯೂ ಶಕ್ತಳಲ್ಲ. "ನೂನಂಕಾಲೋ ದುರತ್ಯಃ" ನಿಶ್ಚಯವಾಗಿಯೂ ಕಾಲಧರ್ಮವನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಪಿತೃವಾಕ್ಯ ಪರಿಪಾಲನೆಯಲ್ಲಿಯೇ ಏಕಾಗ್ರಚಿತ್ತನಾಗಿ ನೀನು ಅರಣ್ಯಕ್ಕೆ ಪ್ರಯಾಣ ಮಾಡು" ನಿನಗೆ ಸರ್ವಕಾಲಗಳಲ್ಲಿಯೂ ಮಂಗಳವಾಗಲಿ. ನೀನು ಅರಣ್ಯದಿಂದ ಹಿಂದಿರುಗಿದ ನಂತರ ನಾನು ಶೋಕ ರಹಿತಳಾಗುವೆನು. ರಾಘವ ಶ್ರೇಷ್ಠನೇ! ನೀನು ಯಾವ ಧರ್ಮವನ್ನು ಧೈರ್ಯದಿಂದಲೂ ನಿಯಮದಿಂದಲೂ ಪರಿಪಾಲನೆ ಮಾಡುವೆಯೋ ಅದೇ ಧರ್ಮವು ನಿನ್ನನ್ನು ರಕ್ಷಿಸಲಿ. ಪವಿತ್ರ ಸ್ಥಳಗಳಲ್ಲಿಯೂ ಮತ್ತು ದೇವಮಂದಿರಗಳಲ್ಲಿಯೂ ಇರುವ ಯಾವ ದೇವತೆಗಳನ್ನು ನೀನು ಅನುದಿನವೂ ಭಕ್ತಿ ಪೂರ್ವಕವಾಗಿ ನಮಸ್ಕರಿಸುವೆಯೋ, ಆ ಎಲ್ಲ ದೇವತೆಗಳೂ ಅರಣ್ಯದಲ್ಲಿ ನಿನ್ನನ್ನು ರಕ್ಷಿಸಲಿ.
ಬುದ್ಧಿವಂತರಾದ ವಿಶ್ವಾಮಿತ್ರರು ನಿನಗೆ ಯಾವ ಯಾವ ಮಹಾಸ್ತ್ರಗಳನ್ನು ಕೊಟ್ಟಿರುವರೋ ಆ ಮಹಾಸ್ತ್ರಗಳು ನಿನ್ನನ್ನು ಸದಾ ರಕ್ಷಿಸಲಿ.
ಪಿತೃಶುಶ್ರೂಷೆಯಿಂದ ಪ್ರಾಪ್ತವಾದ ಫಲದಿಂದಲೂ, ಮಾತೃಶುಶ್ರೂಷೆಯಿಂದ ಪ್ರಾಪ್ತವಾದ ಫಲದಿಂದಲೂ, ಸತ್ಯ ಪರಿಪಾಲನೆಯ ಫಲದಿಂದಲೂ ಸಂರಕ್ಷಿಸಲ್ಪಟ್ಟವನಾಗಿ ಚಿರಂಜೀವಿಯಾಗು. ತಾಯಿಯ ದಾಸ್ಯಶೃಂಖಲೆಯನ್ನು ಬಿಡಿಸಲು ಅಮೃತವನ್ನು ತರಲು ಹೊರಟ ಗರುಡನಿಗೆ ವಿನತಾದೇವಿಯು ಹೇಗೆ ಮಂಗಳಶಾಸನವನ್ನು ಮಾಡಿದಳೋ, ಹಾಗೆಯೇ ನಾನೂ ಅರಣ್ಯಕ್ಕೆ ಹೊರಟಿರುವ ಈ ಸಮಯದಲ್ಲಿ ನಿನಗೆ ಮಂಗಳಶಾಸನವನ್ನು ಮಾಡುತ್ತೇನೆ. ಗರುಡನಿಗೆ ಪ್ರಾಪ್ತವಾದ ಮಂಗಳವು ನಿನಗೂ ಪ್ರಾಪ್ತವಾಗಲಿ. ಅಮೃತ ಪ್ರಾಪ್ತಿಯ ಕಾಲದಲ್ಲಿ ದೇವತೆಗಳಿಗೂ ಮತ್ತು ಅಸುರರಿಗೂ ಯುದ್ಧವಾಗುತ್ತಿದ್ದಾಗ ಅಸುರರನ್ನು ದಮನ ಮಾಡುತ್ತಿದ್ದ ಇಂದ್ರನಿಗೆ ಜಯವಾಗಲೆಂದು ಅದಿತಿಯು ಯಾವ ಮಂಗಳಶಾಸನವನ್ನು ಮಾಡಿದಳೋ, ಅದೇ ಮಂಗಳಶಾಸನವನ್ನೇ ನಾನೂ ನಿನಗೆ ಮಾಡುತ್ತಿದ್ದೇನೆ. ಇಂದ್ರನಿಗಂದು ಪ್ರಾಪ್ತವಾದ ಸನ್ಮಂಗಳವು ನಿನಗೂ ಲಭಿಸಲಿ. ಅಖಂಡಭೂಮಂಡಲವನ್ನು ವ್ಯಾಪಿಸಿ ಒಂದು ಹೆಜ್ಜೆಯನ್ನು ಆಕಾಶವನ್ನು ವ್ಯಾಪಿಸಿ ಮತ್ತೊಂದು ಹೆಜ್ಜೆಯನ್ನೂ ಇಟ್ಟು ಮೂರನೆಯ ಹೆಜ್ಜೆಯನ್ನು ಬಲಿಚಕ್ರವರ್ತಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳಕ್ಕೆ ತುಳಿದ ಕಾಲದಲ್ಲಿ ಅಮಿತ ತೇಜಸ್ವಿಯಾದ ವಾಮನರೂಪಿಯಾದ ಮಹಾವಿಷ್ಣುವಿಗೆ ಯಾವ ಮಂಗಳವುಂಟಾಯಿತೋ ಅದೇ ಮಂಗಳವು ನಿನಗೂ ಉಂಟಾಗಲಿ.
ಆರು ಋತುಗಳೂ, ಏಳು ಸಮುದ್ರಗಳೂ ಏಳು ದ್ವೀಪಗಳೂ, ನಾಲ್ಕು ವೇದಗಳೂ, ಎಂಟು ದಿಕ್ಕುಗಳೂ ಶುಭಪ್ರಾದಗಳಾಗಿ ನಿನಗೆ ಶುಭ ಮಂಗಳಗಳನ್ನು ಸರ್ವದಾ ದಯಪಾಲಿಸಲಿ."
ಹೀಗೆ ಕೌಸಲ್ಯಾದೇವಿಯು ಮಗನಿಗೆ ಮಂಗಳಾಶಾಸನ ಮಾಡಿ ಆಶೀರ್ವದಿಸಿದಳು. ಮುಂದಕ್ಕೆ ಬಾಗಿ ಪುತ್ರನನ್ನು ಬಾಚಿ ತಬ್ಬಿಕೊಂಡು ನೆತ್ತಿಯನ್ನು ಆಘ್ರಾಣಿಸಿ ಅಸ್ಪಷ್ಟವಾದ ಮಾತುಗಳಿಂದ "ಮಗು! ರಾಮ, ನಿನ್ನ ಇಷ್ಟಾರ್ಥವು ನೆರವೇರಲಿ; ಸುಖವಾಗಿ ಹೋಗಿ ಬಾ. ನೀನು ಕಾಡಿಗೆ ಹೊರಟೊಡನೆಯೇ ನನ್ನ ಕಂದನು ಯಾವ ಕಾಡಿನಲ್ಲಿ ಪ್ರಯಾಣ ಮಾಡುತ್ತಿರುವನೋ? ಅವನ ಸುಕೋಮಲವಾದ ಕಾಲುಗಳಿಗೆ ಎಷ್ಟು ಮುಳ್ಳುಗಳು ಚುಚ್ಚಿವೆಯೋ? ಅವನು ಎಷ್ಟು ಮುಳ್ಳುಗಳು ಚುಚ್ಚಿವೆಯೋ? ಅವನು ಎಷ್ಟು ದುಷ್ಟಮೃಗಗಳನ್ನು ಎದುರಿಸಬೇಕಾಗುವುದೋ? ರಾತ್ರಿಯಲ್ಲಿ ಇಲ್ಲಿ ಮಲಗಿದನೋ? ಇವೇ ಮುಂತಾಗಿ ದುಷ್ಟವಾದ ಕಲ್ಪನೆಗಳು ನನ್ನ ಮನಸ್ಸಿನಲ್ಲಿ ಹುಟ್ಟುತ್ತಲೇ ಇರುತ್ತವೆ. ಹೋಗಿ ಬಾ, ರಾಮ! ಹೋಗಿ ಬಾ! ವನವಾಸವು ಕಳೆದನಂತರ ರಾಜೋಚಿತವಾದ ವಸ್ತ್ರಾಭರಣಗಳಿಂದ ಸಂಪನ್ನನಾಗಿ ನನ್ನ ಮತ್ತು ನನ್ನ ಸೊಸೆಯಾದ ಸೀತೆಯ ಸಕಲವಾದ ಕಾಮನೆಗಳನ್ನೂ ನಿತ್ಯವೂ ಪೂರೈಸಿಕೊಡುವೆಯಂತೆ ಎಲ್ಲ ದಿಕ್ಕುಗಳೂ ನಿನಗೆ ಶುಭವನ್ನುಂಟು ಮಾಡಲಿ. ಹೋಗಿ ಬಾ, ರಾಮ! ಹೋಗಿ ಬಾ" ಎಂದಳು.
ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ಕೌಸಲ್ಯಾ ದೇವಿಯು ಶ್ರೀರಾಮನ ರಕ್ಷಣಾರ್ಥವಾಗಿ ಪ್ರದಕ್ಷಿಣೆ ಮಾಡಿದಳು. ಪುನಃ ಪುನಃ ಶ್ರೀರಾಮನನ್ನೇ ನೋಡುತ್ತಾ ಅವನನ್ನು ಬಿಟ್ಟಿರಲಾರದೇ ಬಾಚಿ ತಬ್ಬಿ ಅಲ್ಲಿಂದ ಬೀಳ್ಕೊಟ್ಟಳು.






Comments