top of page

ಲಕ್ಷ್ಮಣನ‌ ಕ್ರೋಧ - ಕೌಸಲ್ಯೆಯ ದುಃಖ (ರಾಮಾಯಣ ಕಥಾಮಾಲೆ 26)

ಶ್ರೀರಾಮನ ವಿಯೋಗವನ್ನು ನೆನೆ-ನೆನೆದು ಈ ಪರಿಯಲ್ಲಿ ಗೋಳಾಡುತ್ತಿದ್ದ ಶ್ರೀರಾಮನ ತಾಯಿಯಾದ ಕೌಸಲ್ಯಾ ದೇವಿಗೆ, ದೀನ ಭಾವದಿಂದ ಕೂಡಿದ್ದ ಲಕ್ಷ್ಮಣನು, "ಆರ್ಯೇ! ಶ್ರೀರಾಮನು ಒಬ್ಬ ಹೆಂಗಸಿನ ಮಾತಿಗೆ ಕಟ್ಟುಬಿದ್ದು ಈ ಸಾಮ್ರಾಜ್ಯದ ಐಶ್ವರ್ಯವನ್ನೂ ಪರಿತ್ಯಜಿಸಿ ಅರಣ್ಯಕ್ಕೆ ಹೋಗುವುದು ನನಗೂ ಸರಿಯಾಗಿ ಕಾಣುತ್ತಿಲ್ಲ. 'ಶ್ರೀರಾಮನು ಕೈಕೇಯಿಯ ಆಜ್ಞೆಯಿಂದ ಕಾಡಿಗೆ ಹೋಗುತ್ತಿಲ್ಲ; ರಾಜಾಜ್ಞೆಯಂತೆ ಕಾಡಿಗೆ ಹೋಗುತ್ತಿದ್ದಾನೆ' ಎನ್ನುವುದಾದರೆ ಈಗಿನ ಸಂದರ್ಭದಲ್ಲಿ ರಾಜಾಜ್ಞೆಯೂ ಪಾಲಿಸಲು ಅನರ್ಹವಾಗಿದೆ. ಏಕೆಂದರೆ ರಾಜನು ವ್ಯತ್ಯಸ್ತವಾದ ಬುದ್ಧಿಯುಳ್ಳವನು ವೃದ್ಧನು, ವಿಷಯಲಂಪಟನು, ವೃದ್ಧಾಪ್ಯದಿಂದ ಬಾಲ ಭಾವವನ್ನು ಹೊಂದಿರುವ, ವಿವೇಕ ಶೂನ್ಯನಾದ ಈ ರಾಜನ ವಿವೇಕರಹಿತವಾದ ಮಾತುಗಳನ್ನು ರಾಜನೀತಿಯನ್ನು ಪೂರ್ಣವಾಗಿ ತಿಳಿದಿರುವ ಯಾವ ರಾಜ ಪುತ್ರನು ತಾನೇ ಮನಸ್ಸಿಗೆ ತಂದುಕೊಳ್ಳುತ್ತಾನೆ? ಅಣ್ಣ! 'ರಾಮನು ವನವಾಸ ಮಾಡಬೇಕೆಂಬ ರಾಜಾಜ್ಞೆಯಾಗಿದೆ' ಎಂಬ ಈ ವಾರ್ತೆಯು ಜನಜನಿತವಾಗುವುದರೊಳಗೆ ನೀನು ನನ್ನ ಸಹಕಾರದಿಂದ ಈ ರಾಜ್ಯ ಸಿಂಹಾಸನವನ್ನು ಸ್ವಾಧೀನಕ್ಕೆ ತೆಗೆದುಕೊಂಡು ರಾಜ್ಯ ಶಾಸನವನ್ನು ಮಾಡಲು ಉಪಕ್ರಮಿಸು. 'ಕೈಕೇಯಿಯಿಂದ ಪ್ರಚೋದಿತರಾಗಿ ಯಾರಾದರೂ ನಮ್ಮ ಮೇಲೆ ಯುದ್ಧಮಾಡಲು ಬಂದರೆ?' ಎಂಬ ಶಂಕೆಯೂ ನಿನ್ನ ಮನಸ್ಸಿನಲ್ಲಿ ಉಂಟಾಗದಿರಲಿ. ನಿನ್ನ ಪಕ್ಕದಲ್ಲಿ ಧನುಷ್ಪಾಣಿಯಾಗಿ ನಿಂತು ನನ್ನಿಂದ ರಕ್ಷಿಸಲ್ಪಡುತ್ತಾ ಯಮಧರ್ಮನಂತೆಯೇ ನಿಲ್ಲುವ ನಿನ್ನ ಮೇಲೆ, ಯಾರು ತಾನೇ ತಮ್ಮ ಅಧಿಕ ಸಾಮರ್ಥ್ಯವನ್ನು ತೋರಬಲ್ಲರು? ಒಂದು ವೇಳೆ ನಿನಗೆ ವಿರೋಧವಾಗಿ ಭರತನ ಪಕ್ಷವನ್ನು ವಹಿಸಿ ಈ ಅಯೋಧ್ಯೆಯೇ ನಮ್ಮ ಮೇಲೆ ದಂಗೆಯೆದ್ದು ಬಂದರೂ, ತೀಕ್ಷ್ಣವಾದ ನನ್ನ ಈ ಬಾಣಗಳಿಂದ ಈ ಅಯೋಧ್ಯಾ ಪಟ್ಟಣವನ್ನೇ ಜನರಹಿತವನ್ನಾಗಿ ಮಾಡಿಬಿಡುತ್ತೇನೆ. 'ಮೃದುರ್ಹಿ ಪರಿಭೂಯತೇ' ಮೃದುತ್ವಕ್ಕೆ ಯಾವಾಗಲೂ ಬೆಲೆಯಿಲ್ಲ. ಕೈಕೇಯಿಯಿಂದ ಪ್ರೋತ್ಸಾಹಿತನಾಗಿ ದುಷ್ಟನಾದ ನಮ್ಮ ತಂದೆಯೇನಾದರೂ ಭರತನಿಗೆ ಯೌವರಾಜ್ಯಾಭಿಷೇಕವನ್ನು ಮಾಡುವುದರಿಂದಲೇ ಸಂತುಷ್ಟನಾಗುವುದಾದರೆ ನಮ್ಮ ವಿಷಯದಲ್ಲಿ ಶತ್ರುತ್ವವನ್ನೇ ತಾಳುವುದಾದರೆ ತಂದೆಯೆಂಬುದನ್ನೂ ಲೆಕ್ಕಿಸದೇ ಅವನನ್ನು ಬಂಧನದಲ್ಲಿಡೋಣ ಅಥವಾ ಕೊಂದೇ ಬಿಡೋಣ. ಗರ್ವಿಷ್ಟನಾಗಿ, ಕಾರ್ಯಾ ಕಾರ್ಯ ವಿವೇಚನೆಯಿಲ್ಲದೇ, ಶಿಷ್ಟರ ಮಾರ್ಗವನ್ನು ಅನುಸರಿಸದೇ ತಪ್ಪುದಾರಿಯನ್ನು ಹಿಡಿದವನು ಗುರುವೇ ಆಗಿದ್ದರೂ ಶಿಕ್ಷಾರ್ಹನಾಗುತ್ತಾನೆ." ಎಂಬುದಾಗಿ ರಾಜ್ಯಾಧಿಕಾರವನ್ನು ತಂದೆಯಿಂದ ಬಲಾತ್ಕಾರ ಪೂರ್ವಕವಾಗಿ ಪಡೆದುಕೊಳ್ಳಲು ಸಲಹೆ ನೀಡಿದನು.



ಮಹಾತ್ಮನಾದ ಲಕ್ಷ್ಮಣನ ಆ ಮಾತುಗಳನ್ನು ಕೇಳಿ ಶೋಕಾಕುಲಳಾದ ಕೌಸಲ್ಯಾದೇವಿಯು ಬಿಕ್ಕಿ ಬಿಕ್ಕಿ ಅಳುತ್ತಾ, "ಮಗು! ನಿನ್ನ ಪ್ರೀತಿಯ ತಮ್ಮನಾದ ಲಕ್ಷ್ಮಣನು ಹೇಳಿದುದೆಲ್ಲವನ್ನು ಕೇಳಿರುವೆ. ಮುಂದೆ ಮಾಡಬೇಕಾಗಿರುವ ಕಾರ್ಯದಲ್ಲಿ ನಿನಗೆ ಯಾವುದು ಸೂಕ್ತವಾಗಿ ಕಾಣುವುದೋ ಆ ಕಾರ್ಯವನ್ನು ಮಾಡು. ಆದರೆ ನನ್ನ ಸವತಿಯ ಅಧರ್ಮಯುಕ್ತವಾದ ಮಾತನ್ನು ಕೇಳಿ ಶೋಕದಿಂದ ಪರಿತಪಿಸುತ್ತಿರುವ ನನ್ನನ್ನು ಇಲ್ಲಿಯೇ ಬಿಟ್ಟು ಕಾಡಿಗೆ ಹೋಗುವುದು ನಿನಗೆ ಉಚಿತವಲ್ಲ. ಧರ್ಮಜ್ಞನೇ! ನೀನು ಧರ್ಮಿಷ್ಠನಾಗಿದ್ದು ಧರ್ಮ ಮಾರ್ಗದಲ್ಲಿಯೇ ನಡೆಯುವ ಇಚ್ಛೆಯುಳ್ಳವನಾಗಿದ್ದರೆ ಇಲ್ಲಿಯೇ ನನ್ನ ಶುಶ್ರೂಷೆ ಮಾಡಿಕೊಂಡಿರು. ಮಾತೃ ಶುಶ್ರೂಷೆಯೆಂಬುದು ಉತ್ತಮೊತ್ತವಾದ ಧರ್ಮವಾಗಿರುತ್ತದೆ. ರಾಜನು ಹೇಗೆ ನಿನಗೆ ಪೂಜ್ಯನೋ ಹಾಗೆಯೇ ತಾಯಿಯಾಗಿರುವ ನಾನೂ ನಿನಗೆ ಪೂಜ್ಯಳು. ತಂದೆಯ ಆಜ್ಞೆಯನ್ನು ಪರಿಪಾಲಿಸಬೇಕು. ನಾನು ನಿನಗೆ ಅರಣ್ಯಕ್ಕೆ ಹೋಗಲು ಅನುಮತಿಯನ್ನು ಕೊಡುವುದಿಲ್ಲ" ಎಂದಳು.


ದೀನಳಾದ ತಾಯಿಗೆ ಧರ್ಮಾತ್ಮನಾದ ಶ್ರೀರಾಮನು, "ಅಮ್ಮ! ತಂದೆಯ ಆಜ್ಞೆಯನ್ನು ಮೀರಲು ನನಗೆ ಸಾಮರ್ಥ್ಯವಿಲ್ಲ. ನಿನಗೆ ತಲೆ ಬಾಗಿ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ ಪ್ರಸನ್ನಳಾಗು ವ್ರತ ನಿಷ್ಠನಾದ, ವಿದ್ವಾಂಸನಾದ ಕಂಡು ಮಹರ್ಷಿಯು ಗೋವನ್ನು ಹತ್ಯೆ ಮಾಡಕೂಡದೆಂಬ ಧರ್ಮವನ್ನು ತಿಳಿದವನಾಗಿದ್ದರೂ ಪಿತೃ ವಾಕ್ಯವನ್ನು ಪರಿಪಾಲಿಸುವ ಸಲುವಾಗಿ ಗೋಹತ್ಯೆಯನ್ನು ಮಾಡಿದನು. ಪಿತೃ ವಾಕ್ಯ ಪರಿಪಾಲಕನಾದ ಪರಶುರಾಮನು ತಂದೆಯಾದ ಜಮದಗ್ನಿಯ ಆಜ್ಞೆಯಂತೆ ಅರಣ್ಯದಲ್ಲಿ ತಾಯಿಯಾದ ರೇಣುಕೆಯ ತಲೆಯನ್ನೇ ಗಂಡು ಗೊಡಲಿಯಿಂದ ಕತ್ತರಿಸಿದನು. ಅಮ್ಮ! ಇವರೇ ಅಲ್ಲದೇ ದೇವಸದೃಶರಾದ ಇನ್ನೂ ಅನೇಕ ಪುರುಷರು ತಂದೆಯ ಆಜ್ಞೆಯನ್ನು ಪರಿಪಾಲಿಸಿದ್ದಾರೆ. ಅಂತೆಯೇ ನಾನೂ ಕೂಡ ವೀರಪುರುಷ ಯೋಗ್ಯವಾದ, ತಂದೆಗೆ ಹಿತಕರವಾದ ಈ ಕಾರ್ಯವನ್ನು ಮಾಡುತ್ತೇನೆ. ಪಿತೃ ವಾಕ್ಯ ಪರಿಪಾಲನಾ ಧರ್ಮವನ್ನು ಅನುಸರಿಸುವವನು ನಾನೊಬ್ಬನೇ ಅಲ್ಲ ಅಥವಾ ನಾನು ಮೊದಲನೆಯವನೂ ಅಲ್ಲ. ತಂದೆಯ ಆಜ್ಞೆಯನ್ನು ಪರಿಪಾಲಿಸುವುದೇ ಇಂದಿನ ನನ್ನ ಮುಖ್ಯ ಕರ್ತವ್ಯವಾಗಿದೆ. ಪ್ರಪಂಚದಲ್ಲಿ ಧಾರ್ಮಿಕರ ಮಾರ್ಗಾನುಸರಣೆಯೂ ಇದೇ ಆಗಿರುವುದು. ಇದಕ್ಕೆ ವಿರುದ್ಧವಾಗಿ ಪ್ರಪಂಚದ ನಡುವಳಿಕೆಯೂ ಇರುವುದಿಲ್ಲ. ನನ್ನ ಅಭಿಪ್ರಾಯದಂತೆ ಪಿತುರ್ಹಿ ವಚನಂ ಕುರ್ವನ್ನ ಕಶ್ಚಿನ್ನಾಮ ಹೀಯತೇ| ತಂದೆಯ ಆಜ್ಞೆಯನ್ನು ಪರಿಪಾಲಿಸಿದ ಯಾವನೂ ಹಾಳಾಗಿ ಹೋಗಿಲ್ಲ ಹೋಗುವುದೂ ಇಲ್ಲ." ಎಂದನು.

Comments


bottom of page