top of page

ಕೈಕೇಯಿಯಿಂದ ವರದ ವಿಷಯ ತಿಳಿದ ರಾಮ (ರಾಮಾಯಣ ಕಥಾಮಾಲೆ 23)

ಸುಮಂತ್ರನಿಂದ, ಪತ್ನಿಯಾದ ಕೈಕೇಯಿಯೊಡನಿರುವ ರಾಜನು ತನ್ನನ್ನು ನೋಡ ಬಯಸಿದ್ದಾನೆ ಎಂಬ ವಿಚಾರ ತಿಳಿದ ತಕ್ಷಣ ಶ್ರೀರಾಮನು ರಥವನ್ನು ಏರಿ ಅಂತಃಪುರದತ್ತ ಸಾಗಿದನು. ಶ್ರೀರಾಮನು ಅಂತಃಪುರವನ್ನು ಪ್ರವೇಶಿಸಿದ ಸಮಯದಲ್ಲಿ ದಶರಥನು ಶುಭಾಸನದಲ್ಲಿ ಕುಳಿತಿದ್ದನು. ಕೈಕೇಯಿಯೂ ಜೊತೆಯಲ್ಲೇ ಇದ್ದಳು. ಆದರೆ ಅವನು ದೀನನಾಗಿದ್ದನು. ಮುಖವು ಬಾಡಿಹೋಗಿದ್ದಿತು. ಶ್ರೀರಾಮನು ಸ್ಥಿರಚಿತ್ತನಾಗಿಯೇ ವಿನೀತನಾದ ಪುತ್ರನಂತೆ, ಮೊದಲು ತಂದೆಯ ಎರಡು ಕಾಲುಗಳನ್ನೂ ಮುಟ್ಟಿ ನಮಸ್ಕರಿಸಿ, ಅನಂತರ ಕೈಕೇಯಿಯ ಕಾಲುಗಳನ್ನೂ ಮುಟ್ಟಿ ನಮಸ್ಕರಿಸಿದನು.


ದೀನನಾದ ದಶರಥನು ಭಾವೋದ್ವೇಗದಿಂದ 'ರಾಮ!' ಎಂದೊಮ್ಮೆ ಉದ್ಗರಿಸಿದನು. ಎರಡು ಕಣ್ಣುಗಳಲ್ಲಿಯೂ ನೀರು ತುಂಬಿದ್ದುದರಿಂದ ಅವನಿಗೆ ಶ್ರೀರಾಮನನ್ನು ಪುನಃ ನೋಡುವುದಕ್ಕೂ ಸಾಧ್ಯವಾಗಲಿಲ್ಲ. ದುಃಖೋದ್ವೇಗದಿಂದ ಕಂಠವು ಬಿಗಿದಿದ್ದು, ಮುಂದೆ ಮಾತನಾಡಲೂ ಸಾಧ್ಯವಾಗಲಿಲ್ಲ. ದಶರಥನ ಮಂದಹಾಸಪೂರ್ವಕವಾದ ಅನುಗ್ರಹವನ್ನು ನಿರೀಕ್ಷಿಸಿ ಅಂತಃಪುರಕ್ಕೆ ಬಂದಿದ್ದ ಶ್ರೀರಾಮನಿಗೆ ತಂದೆಯ ರೂಪವು ಭಯವನ್ನು ಉಂಟುಮಾಡುವುದಾಗಿದ್ದಿತು.


"ಇದೇನಿದು! ಕಾಲುಮುಟ್ಟಿ ನಮಸ್ಕಾರ ಮಾಡಿದೊಡನೆಯೇ ನನ್ನನ್ನು ಹಿಡಿದು ಮೇಲೆತ್ತಿ ಬಾಚಿ ತಬ್ಬಿಕೊಂಡು, ನೆತ್ತಿಯನ್ನು ಆಘ್ರಾಣಿಸಿ, ತಲೆಯ ಮೇಲೆ ಆನಂದ ಬಾಷ್ಪಗಳನ್ನು ಸುರಿಸುತ್ತಿದ್ದ ನನ್ನ ತಂದೆಯು, ಏನೊಂದನ್ನೂ ಮಾತನಾಡದೇ ಸುಮ್ಮನೆ ಕುಳಿತಿರುವನಲ್ಲಾ! ಇದಕ್ಕೆ ಕಾರಣವಾದರೂ ಏನಿರಬಹುದು? ಉಳಿದ ಸಮಯದಲ್ಲಿ ನನ್ನ ತಂದೆಯು ಕೋಪಗೊಂಡಿದ್ದರೂ ನನ್ನನ್ನು ನೋಡಿದೊಡನೆಯೇ ಪ್ರಸನ್ನನಾಗುತ್ತಿದ್ದನು. ಆದರೆ ಈಗ ನನ್ನನ್ನು ನೋಡಿ ಹೆಚ್ಚು ಆಯಾಸ ಪಡುತ್ತಿರುವಂತೆ ಕಾಣುತ್ತಿದ್ದಾನೆ" ಹೀಗೆಲ್ಲಾ ಯೋಚಿಸುತ್ತಿದ್ದ ಶ್ರೀರಾಮನು, ಶೋಕಪೀಡಿತನಾಗಿ ಕುಂದಿದ ಮುಖ ಕಾಂತಿಯಿಂದ ಕೂಡಿ, ಕೈಕೇಯಿಗೆ ಅಭಿವಾದನ ಮಾಡಿದ ನಂತರ ದೀನನಂತೆ, ಅವಳ ಮುಂದೆ ನಿಂತು, "ತಾಯೇ! ನಾನು ತಿಳಿದು ತಿಳಿದೂ ಯಾವ ಅಪರಾಧವನ್ನು ಮಾಡಿಲ್ಲ. ಒಂದು ವೇಳೆ ನಾನು ಅಜ್ಞಾನದಿಂದ ಯಾವುದಾದರೂ ಅಪರಾಧವನ್ನು ಮಾಡಿದ್ದು ಅದಕ್ಕಾಗಿಯೇ ತಂದೆಯು ಕೋಪಗೊಂಡಿರುವನೇ? ಹೇಳು ತಾಯೇ! ತಂದೆಯನ್ನು ನೀನೇ ಪ್ರಸನ್ನಗೊಳಿಸು. ಪ್ರಿಯದರ್ಶನನಾದ ಭರತ, ಮಹಾಸತ್ತ್ವನಾದ ಶತ್ರುಘ್ನ, ನನ್ನ ತಾಯಿಯರು ಇವರಲ್ಲಿ ಯಾರಿಗೂ ಅಶುಭವುಂಟಾಗಿಲ್ಲ ತಾನೇ? ಅಮ್ಮ! ನಾನು ತಂದೆಯನ್ನು ಸಂತೋಷಪಡಿಸಲಾಗದೇ ಕೋಪಿಸಿಕೊಂಡಿದ್ದರೆ, ನಾನು ಮುಹೂರ್ತಕಾಲವೂ ಜೀವಿಸಿರಲು ಇಚ್ಛೆ ಪಡುವುದಿಲ್ಲ. ತಾಯೇ! ಮನುಜಾಧಿಪನಾದ ದಶರಥ ರಾಜನಲ್ಲಿ ಹಿಂದೆಂದೂ ಕಾಣದಿದ್ದ ಈ ಮುಖ ವಿಕಾರವು, ಯಾವ ಕಾರಣದಿಂದ ಆಗಿರುವುದೆಂಬುದನ್ನು ದೈನ್ಯದಿಂದ ಪ್ರಶ್ನಿಸುತ್ತಿರುವ ನನಗೆ ಯಥಾವತ್ತಾಗಿ ಹೇಳು" ಎಂದು ಕೇಳಿದನು.



ಮಹಾತ್ಮನಾದ ರಾಘವನು ಹೀಗೆ ಹೇಳಲು ಕೈಕೇಯಿಯು ನಾಚಿಕೆಯೇ ಇಲ್ಲದೆ, "ರಾಮ! ರಾಜನು ಕೋಪಗೊಂಡು ಇಲ್ಲ, ಇವನಿಗೆ ಯಾವ ವ್ಯಸನವೂ ಇಲ್ಲ. ಆದರೆ ಇವನ ಮನಸ್ಸಿನಲ್ಲಿ ಏನೋ ಒಂದು ವಿಷಯವಿದೆ. ನಿನ್ನ ಸಂಬಂಧವಾದ ಭಯದಿಂದಾಗಿ ಅದನ್ನವನು ಹೇಳುತ್ತಿಲ್ಲ. ಪ್ರಿಯನಾದ ನಿನಗೆ ಅಪ್ರಿಯವಾಗುವುದನ್ನು ಹೇಳುವುದಕ್ಕೆ, ನಿನ್ನ ತಂದೆಯ ಬಾಯಿಯಿಂದ ಮಾತೇ ಹೊರಡುತ್ತಿಲ್ಲ. ಆದರೆ ರಾಜನು ನನಗೆ ಮಾತುಕೊಟ್ಟಿರುವಂತೆ, ಅಪ್ರಿಯವಾಗಿ ಕಂಡರೂ ನೀನು ಆ ಕಾರ್ಯವನ್ನು ಮಾಡಲೇಬೇಕು. ಹೀಗೆ ಈ ನಿನ್ನ ತಂದೆಯು ನಾನು ಮಾಡಿದ ಉಪಕಾರಕ್ಕೆ ನನ್ನನ್ನು ಯಥಾಯೋಗ್ಯವಾಗಿ ಪುರಸ್ಕರಿಸಿ ಎರಡು ವರಗಳನ್ನಿತ್ತಿದ್ದನು, ಈಗ ನಾನು ಆ ವರಗಳನ್ನು ಕೇಳಿದೊಡನೆಯೇ ಮಾತಿನಂತೆ ನಡೆಯಲು ಮನಸ್ಸಿಲ್ಲದೇ ಸಾಮಾನ್ಯ ಮನುಷ್ಯನಂತೆ ಪಶ್ಚಾತ್ತಾಪ ಪಡುತ್ತಿದ್ದಾನೆ. ವರವನ್ನು ಕೊಡುವೆನೆಂದು ಪ್ರತಿಜ್ಞೆ ಮಾಡಿ, ಬಳಿಕ ರಾಜನು, ನೀರೆಲ್ಲವೂ ಹರಿದು ಹೋದ ನಂತರ ಕಟ್ಟೆಯನ್ನು ಕಟ್ಟಲು ಇಚ್ಛಿಸುವಂತೆ ನಿರರ್ಥಕವಾಗಿ ಪರಿತಪಿಸುತ್ತಿದ್ದಾನೆ. ಸತ್ಯ ಪರಿಪಾಲನೆಯೇ ಧರ್ಮಕ್ಕೆ ಮೂಲವೆಂಬುದು ಸತ್ಪುರುಷರೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದುದರಿಂದ ನಿನ್ನ ಸಲುವಾಗಿ ನನ್ನ ಮೇಲೆ ಕೋಪಗೊಂಡಿರುವ ರಾಜನು, ಸತ್ಯವನ್ನು ಪರಿತ್ಯಾಗ ಮಾಡದಂತೆ ನೋಡಿಕೊಳ್ಳುವುದು ನಿನ್ನ ಕರ್ತವ್ಯವೂ ಆಗಿದೆ. ರಾಜನು ಒಳ್ಳೆಯದನ್ನೇ ಹೇಳಲಿ, ಕೆಟ್ಟುದನ್ನೇ ಹೇಳಲಿ, ಅವನು ಹೇಳಿದಂತೆ ಮಾಡುವೆಯಾದರೆ ಎಲ್ಲಾ ವಿಷಯಗಳನ್ನೂ ಪುನಃ ನಿನಗೆ ಹೇಳುತ್ತೇನೆ.

ರಾಜನು ಹೇಳಬೇಕಾಗಿರುವ ವಿಷಯವು ನಿನ್ನಲ್ಲಿ ನಿರರ್ಥಕವಾಗದಿದ್ದರೆ, ಅವನು ಹೇಳಬೇಕಾದುದನ್ನು ನಾನು ಹೇಳುತ್ತೇನೆ. ಏಕೆಂದರೆ ಈ ವಿಷಯವನ್ನು ಅವನೆಂದಿಗೂ ನಿನ್ನೊಡನೆ ಹೇಳುವುದಿಲ್ಲ" ಎಂದಳು.


ಕೈಕೇಯಿಯು ಹೇಳಿದ ಮಾತುಗಳನ್ನು ಕೇಳಿ ದುಃಖಗೊಂಡ ಶ್ರೀರಾಮನು, " 'ರಾಜನು ಹೇಳುವ ಮಾತು ನಿನ್ನಲ್ಲಿ ನಿರರ್ಥಕವಾಗದಿದ್ದರೆ' ಎಂದು ನೀನು ಪ್ರಶ್ನಿಸಿದೆಯಲ್ಲವೇ ತಾಯೇ! ಇಂತಹ ಸಂಶಯವು ನಿನ್ನ ಮನಸ್ಸಿನಲ್ಲಿ ಮೂಡಿಬಂದುದಕ್ಕಾಗಿ ನನಗೆ ಧಿಕ್ಕಾರವಿರಲಿ. ಆದರೆ ಹೀಗೆ ಹೇಳುವುದು ನಿನಗೆ ಖಂಡಿತವಾಗಿಯೂ ಯೋಗ್ಯವಲ್ಲ. ನಾನು ರಾಜನ ಮಾತಿನಂತೆ ಬೆಂಕಿಯಲ್ಲಾದರೂ ಬಿದ್ದೇನು. ತೀಕ್ಷ್ಣವಾದ ವಿಷವನ್ನಾದರೂ ಕುಡಿದೇನು. ಸಮುದ್ರದಲ್ಲಾದರೂ ಮುಳುಗಿ ಹೋದೇನು. ತಾಯೇ! ಅವನು ಬಯಸಿದ ಕಾರ್ಯವನ್ನು ಮಾಡುವೆನೆಂದು ಪ್ರತಿಜ್ಞೆಯನ್ನು ಮಾಡುವೆನು. ಆ ಕಾರ್ಯವನ್ನು ಮಾಡಿಯೇ ಮಾಡುತ್ತೇನೆ. 'ರಾಮೋ ದ್ವಿರ್ನಾಭಭಾಷತೇ' ' ರಾಮನೆಂದಿಗೂ ಎರಡು ಮಾತುಗಳನ್ನಾಡುವವನಲ್ಲ' " ಎಂದನು.


ಹೀಗೆ ಆಶ್ವಾಸನೆಯನ್ನಿತ್ತ ನಂತರ ಅನಾರ್ಯಳಾದ ಕೈಕೇಯಿಯು, "ರಾಮ! ಹಿಂದೊಮ್ಮೆ ದೇವತೆಗಳಿಗೂ ಅಸುರರಿಗೂ ಯುದ್ಧವು ನಡೆದಾಗ, ನಿನ್ನ ತಂದೆಯು ದೇವತೆಗಳಿಗೆ ಸಹಾಯಮಾಡಲು ಹೋದನು. ಆಗ ನಾನೂ ಜೊತೆಯಲ್ಲಿ ಹೋಗಿದ್ದೆನು. ಶಂಬರಾಸುರನೊಡನೆ ಯುದ್ಧ ಮಾಡುತ್ತಿದ್ದಾಗ ಇವನ ಶರೀರಾದ್ಯಂತವಾಗಿ ಬಾಣಗಳು ನೆಟ್ಟು ಪ್ರಜ್ಞಾಹೀನನಾದನು. ಆ ಸಮಯದಲ್ಲಿ ನಾನು ಇವನನ್ನು ಅಪಾಯವಿಲ್ಲದ ಸ್ಥಳಕ್ಕೆ ಕರೆದೊಯ್ದು ಉಪಚರಿಸಿ ರಕ್ಷಿಸಿದೆನು. ಅದರಿಂದ ಸುಪ್ರೀತನಾದ ರಾಜನು, ಆಗಲೇ ನನಗೆರಡು ವರಗಳನ್ನು ಕೊಟ್ಟಿದ್ದನು. ಆ ವರಗಳನ್ನೀಗ ನಾನು ಪಡೆದುಕೊಳ್ಳಲು ಅಪೇಕ್ಷಿಸಿ, ಮೊದಲನೆಯ ವರವಾಗಿ ಭರತನಿಗೆ ಪಟ್ಟಾಭಿಷೇಕವನ್ನೂ, ಎರಡನೆಯ ವರವಾಗಿ ದಂಡಕಾರಣ್ಯಕ್ಕೆ ನೀನು ಈಗಲೇ ಹೊರಟು ಹೋಗಬೇಕೆಂಬುದನ್ನೂ ಯಾಚಿಸಿದೆನು. ಈಗ ನಿನ್ನ ತಂದೆಯನ್ನು ಸತ್ಯಪ್ರತಿಜ್ಞನನ್ನಾಗಿ ಮಾಡುವ ಅಭಿಲಾಷೆಯುಳ್ಳವನಾಗಿದ್ದರೆ, ನೀನೂ ಸತ್ಯಪ್ರತಿಜ್ಞನಾದರೆ ನನ್ನ ಮಾತನ್ನು ಕೇಳು. ನಿಮ್ಮ ತಂದೆಯು ನನಗೆ ಪ್ರತಿಜ್ಞೆ ಮಾಡಿಕೊಟ್ಟಿರುವಂತೆ ಅವನ ಪ್ರತಿಜ್ಞಾಪಾಲನೆಗೆ ಸಾಧನಭೂತನಾಗಿ ನಿಲ್ಲು. ಇದರ ಫಲವಾಗಿ ನೀನು ಹದಿನಾಲ್ಕು ವರ್ಷಗಳ ಕಾಲ ಅರಣ್ಯದಲ್ಲಿರಬೇಕು. ನಿನಗೋಸ್ಕರ ರಾಜನಿಂದ ಸಿದ್ಧ ಮಾಡಲ್ಪಟ್ಟಿರುವ ಅಭಿಷೇಕ ಸಾಮಾಗ್ರಿಗಳಿಂದಲೇ ಭರತನಿಗೆ ಪಟ್ಟಗಟ್ಟಬೇಕು. ಈ ಪಟ್ಟಾಭಿಷೇಕ ಸಮಾರಂಭವನ್ನು ಪರಿತ್ಯಜಿಸಿ, ಜತೆ ನಾರುಮುಡಿಗಳನ್ನು ಧರಿಸಿ ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದಲ್ಲಿ ವಾಸ ಮಾಡಿಕೊಂಡಿರು. ಭರತನು ನಾನಾವಿಧವಾದ ರತ್ನಗಳಿಂದ ವ್ಯಾಪ್ತವಾಗಿರುವ ಅಶ್ವರಥಗಜಗಳಿಂದ ಸಮೃದ್ಧವಾಗಿರುವ ಕೋಸಲ ದೇಶದ ರಾಜಧಾನಿಯಾದ ಅಯೋಧ್ಯೆಯಲ್ಲಿದ್ದುಕೊಂಡು, ಈ ಭೂಮಂಡಲವನ್ನು ಆಳಲಿ. ನಿನ್ನ ವಿಷಯದಲ್ಲಿ ಅತ್ಯಂತ ದಯಾಪರನಾಗಿರುವ ರಾಜನು ಈ ಕಾರಣದಿಂದಲೇ ಮಹಾಶೋಕದಿಂದ ಕ್ಲೇಶಗೊಂಡ ಮುಖವುಳ್ಳವನಾಗಿ ನಿನ್ನನ್ನು ನೋಡಲು ಕೂಡ ಅಸಮರ್ಥನಾಗಿದ್ದಾನೆ. ದಶರಥ ರಾಜನ ಈ ಮಾತನ್ನು ನಡೆಸಿಕೊಡು. ಮಹತ್ತರವಾದ ಸತ್ಯ ಪರಿಪಾಲನೆಯಿಂದ ರಾಜನನ್ನು ಉದ್ಧರಿಸು".


ಹೀಗೆ ಕೈಕೇಯಿಯು ಅತಿಕಠೋರವಾದ ಮಾತುಗಳನ್ನಾಡುತ್ತಿದ್ದರೂ ಶ್ರೀರಾಮನಿಗೆ ಸ್ವಲ್ಪವಾದರೂ ವ್ಯಸನವಾಗಲಿಲ್ಲ.

Comments


bottom of page