top of page

ದಶರಥನ ಸಂತಾಪ (ರಾಮಾಯಣ ಕಥಾಮಾಲೆ 21)


ಕೈಕೇಯಿಯ ಕರ್ಣ ಕಠೋರವಾದ ಮಾತನ್ನು ಕೇಳಿದೊಡನೆಯೇ ದಶರಥನು ಬಹಳವಾಗಿ ಸಂತಾಪಗೊಂಡು ಚಿಂತಾಮಗ್ನನಾದನು. ಸ್ವಲ್ಪ ಹೊತ್ತು ಅವನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. "ಇದೇನು ಹಗಲುಗನಸೇ? ನಾನು ಜಾಗೃತನಾಗಿರುವೆನೇ? ನನ್ನ ಬುದ್ಧಿಯೇನಾದರೂ ವಿಮೋಹಗೊಂಡಿರುವುದೇ? ಜನ್ಮಾಂತರದಲ್ಲಿ ಅನುಭವಿಸಿರುವ ವಿಷಯದ ಸ್ಮರಣೆಯೇ?" ಹೀಗೆಲ್ಲಾ ಯೋಚನೆ ಮಾಡುತ್ತಿದ್ದ ರಾಜನಿಗೆ ಸ್ವಲ್ಪವಾದರೂ ಸುಖವಿಲ್ಲವಾಯಿತು.

ಬರಿಯ ನೆಲದ ಮೇಲೆ ಕುಳಿತಿದ್ದ ರಾಜನು ಮಂಡಲದಲ್ಲಿ ಮಂತ್ರದಿಂದ ಅಭಿಮಂತ್ರಿತವಾಗಿ ಬಂಧಿಸಲ್ಪಟ್ಟ ವಿಷಸರ್ಪದಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ, "ಅಯ್ಯೋ! ನನ್ನ ರಾಜತ್ವಕ್ಕೆ ದಿಕ್ಕಾರವಿರಲಿ" ಎಂದು ಉದ್ಗರಿಸುತ್ತಾ ಶೋಕಸಂತಪ್ತನಾಗಿ ಎಚ್ಚರದಪ್ಪಿ ಕೆಳಗೆ ಬಿದ್ದನು. ಬಹಳ ಹೊತ್ತಿನ ನಂತರ ಎಚ್ಚರಗೊಂಡ ರಾಜನು ಬಹಳ ದುಃಖಿತನಾಗಿ ಮತ್ತು ಪರಮಕ್ರುಧ್ಧನಾಗಿ ಕಣ್ಣುಗಳಿಂದಲೇ ಕೈಕೇಯಿಯನ್ನು ದಹಿಸಿಬಿಡುವನೋ ಎಂಬ ರೀತಿಯಲ್ಲಿ ಅವಳನ್ನು ದುರ ದುರನೆ ನೋಡುತ್ತಾ, "ಅತ್ಯಂತ ಕ್ರೂರಸ್ವಭಾವದವಳೇ! ದುರಾಚಾರಿಣಿಯೇ! ಕುಲವಿನಾಶಿನಿಯೇ! ಪಾಪಿಷ್ಠಳೇ! ರಾಮನು ನಿನಗೆ ಯಾವ ಅಪರಾಧವನ್ನು ಮಾಡಿರುವನು ಅಥವಾ ನಾನಾದರೂ ನಿನಗೆ ಯಾವ ಅಪರಾಧವನ್ನು ಮಾಡಿರುವೆನು?"


"ಮಹಾತ್ಮನಾದ ರಾಘವನು ತನ್ನ ತಾಯಿಗೆ ಮಾಡುವ ಶುಶ್ರೂಷೆಯನ್ನೇ ನಿನಗೂ ಮಾಡುತ್ತಿರುವನು. ನಿನ್ನನ್ನೂ ಅವನು ಹೆತ್ತ ತಾಯಿಯೆಂದೇ ಭಾವಿಸಿದ್ದಾನೆ. ನಿನ್ನಲಾಗಲೀ, ಕೌಸಲ್ಯೆಯಲ್ಲಾಗಲೀ ಅವನಿಗೆ ಯಾವ ವ್ಯತ್ಯಾಸವೂ ಇಲ್ಲ. ಅಂತಹವನಿಗೆ ನೀನು ಈ ಅನರ್ಥವನ್ನುಂಟು ಮಾಡಲು ಯತ್ನಿಸುತ್ತಿರುವುದಕ್ಕೆ ಕಾರಣವೇನು? ನಿನ್ನ ನಿಜಸ್ವರೂಪವೇನೆಂಬುದನ್ನು ತಿಳಿಯದೇ, ತೀಕ್ಷ್ಣವಾದ ವಿಷದಿಂದ ಕೂಡಿರುವ ಹೆಣ್ಣು ಹಾವನ್ನು ಮನೆಯಲ್ಲಿಟ್ಟುಕೊಳ್ಳುವಂತೆ, ನನ್ನ ವಿನಾಶಕ್ಕಾಗಿಯೇ ರಾಜಪುತ್ರಿಯಾದ ನಿನ್ನನ್ನು ನನ್ನ ಅರಮನೆಗೆ ಕರೆತಂದಂತಾಯಿತು."



"ಈ ಪ್ರಪಂಚದಲ್ಲಿರುವ ಸಕಲಪ್ರಜೆಗಳೂ ಶ್ರೀರಾಮನ ಸದ್ಗುಣಗಳನ್ನು ಕೊಂಡಾಡುತ್ತಿರುವಾಗ ಅವನ ಯಾವ ಅಪರಾಧವನ್ನು ನೆಪಮಾಡಿಕೊಂಡು ನನಗೆ ಅತ್ಯಂತ ಪ್ರಿಯನಾದ ಅವನನ್ನು ಪರಿತ್ಯಜಿಸಲಿ? ಅಂತಹ ಪ್ರಸಂಗವು ಸಂಭವಿಸಿದರೆ ಕೌಸಲ್ಯೆ ಸುಮಿತ್ರೆಯರನ್ನಾದರೂ ಪರಿತ್ಯಜಿಸುವೆನು. ಈ ಸಾಮ್ರಾಜ್ಯವನ್ನಾದರೂ ಪರಿತ್ಯಜಿಸುವೆನು. ನನ್ನ ಪ್ರಾಣವನ್ನಾದರೂ ಪರಿತ್ಯಜಿಸುವೆನು. ಆದರೆ ಪಿತೃವತ್ಸಲನಾದ ಶ್ರೀರಾಮನನ್ನು ಮಾತ್ರ ಪರಿತ್ಯಾಗ ಮಾಡುವ ಸಾಧ್ಯತೆಯೇ ಇಲ್ಲ."


"ಪಾಪಸಂಕಲ್ಪಳೇ! ಈ ಕಾರಣದಿಂದಾಗಿ ನನ್ನ ಪ್ರಾಣಕ್ಕೆ ವ್ಯಾಘಾತವನ್ನುಂಟು ಮಾಡುವ ಈ ನಿನ್ನ ಪಾಪಸಂಕಲ್ಪವನ್ನು ಪರಿತ್ಯಜಿಸು. ನಿನ್ನ ಕಾಲುಗಳಿಗೆ ಬಿದ್ದಾದರೂ ಬೇಡಿಕೊಳ್ಳುವೆನು. ನನ್ನ ವಿಷಯದಲ್ಲಿ ಪ್ರಸನ್ನಳಾಗು. ನೀನೀಗ ಹೇಳುತ್ತಿರುವ ಕರ್ಣ ಕಠೋರವಾದ ಮಾತುಗಳು ಸಹಜವಾಗಿ ನಿನ್ನ ಅಂತಃ ಕರಣದಿಂದ ಬಂದಿರುವುದೆಂದು ನಾನು ನಂಬುವುದಿಲ್ಲ. ನಿಶ್ಚಯವಾಗಿಯೂ ನಿನಗೆ ರಾಘವನು ಮಹಾತ್ಮನಾದ ಭರತನಿಗೆ ಸಮಾನನಾಗಿದ್ದನಲ್ಲವೇ? ನೀನು ನಿನ್ನ ಮಗನಾದ ಭರತನಲ್ಲಿಟ್ಟಿದ್ದ ವಾತ್ಸಲ್ಯವನ್ನೇ ರಾಮನಲ್ಲಿಯೂ ಇಟ್ಟಿದ್ದೆ ಈ ವಿಷಯವಾಗಿ ನೀನೇ ನನಗೆ ಹಲವಾರು ಬಾರಿ ಹೇಳಿರುವೆ. ಯಶಸ್ವಿಯಾದ ಧರ್ಮಾತ್ಮನಾದ ರಾಮನು ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡುವುದು ನಿನಗೆ ಹೇಗೆ ತಾನೇ ರುಚಿಸಿತು? ದೇವಿ! ರಾಮನು ವನವಾಸ ಮಾಡುವುದರಿಂದ ನೀನು ಹೇಗೆ ತಾನೇ ಸಂತೋಷಿಸುವೇ? "


"ದೇವಿ! ಕೈಮುಗಿದು ಕೇಳಿಕೊಳ್ಳುತ್ತೇನೆ. ನಿನ್ನ ಕಾಲುಗಳನ್ನು ಮುಟ್ಟಿ ನಮಸ್ಕಾರವನ್ನು ಮಾಡುತ್ತೇನೆ. ರಾಮನಿಗೆ ನೀನು ಶರಣ್ಯಳಾಗು ರಾಮನನ್ನು ರಕ್ಷಿಸು ವರದಾನವೆಂಬ ಒಂದು ಪ್ರತಿಜ್ಞಾವಚನವನ್ನು ನಡೆಸಿಕೊಡಲು ಹೋಗಿ ಜ್ಯೇಷ್ಠವ್ಯತಿಕ್ರಮದ ಮತ್ತು ನಿರಪರಾಧಿಯನ್ನು ಕಾಡಿಗಟ್ಟಿದ ಅಧರ್ಮವು ನನ್ನನ್ನು ತಾಗದಿರಲಿ" ಎಂದು ಗೋಗರೆದನು.


ಹೀಗೆ ದುಃಖದಿಂದ ಪರಿತಪಿಸುತ್ತಿದ್ದ, ಶೋಕದ ಕಣ್ಣೀರಿನಿಂದ ಚೆನ್ನಾಗಿ ನೆನೆದುಹೋಗಿದ್ದ, ಬಾರಿ ಬಾರಿಗೂ ಪತ್ನಿಯನ್ನು ಪ್ರಾರ್ಥಿಸುತ್ತಿದ್ದ ದಶರಥನನ್ನು ಕುರಿತು, ಭಯಂಕರ ರೂಪವನ್ನು ತಾಳಿದ ಕೈಕೇಯಿಯು, "ಮಹಾರಾಜ! ವರಗಳನ್ನು ಕೊಟ್ಟು ಅವುಗಳನ್ನು ಕಾರ್ಯಗತ ಮಾಡಬೇಕಾದ ಕಾಲದಲ್ಲಿ ನೀನು ಅನುತಾಪ ಪಡುವುದಾದರೆ 'ನಾನು ಧಾರ್ಮಿಕ', 'ಧರ್ಮ ಪ್ರಿಯ', 'ಧರ್ಮಾತ್ಮಾ' ಮುಂತಾಗಿ ಈ ಪ್ರಪಂಚದಲ್ಲಿ ಹೇಗೆ ತಾನೇ ಹೇಳಿಕೊಳ್ಳುವೇ? ನೀನೊಬ್ಬನು ಮಿತ್ಯಾಭಾಷಿಯಾದುದರಿಂದ ಪ್ರತಿಜ್ಞಾಭಂಗದ ಕಳಂಕವು ನಿನಗೊಬ್ಬನಿಗೆ ಮಾತ್ರವೇ ಪ್ರಾಪ್ತವಾಗುವುದಿಲ್ಲ. ನಿನ್ನ ವಂಶದ ಮಹಾಮಹಿಮರಾದ ರಾಜರೆಲ್ಲರಿಗೂ ನೀನು ಅಪಯಶಸ್ಸನ್ನು ತರಲಿರುವೆ. ದೇವತೆಗಳೊಮ್ಮೆ ತೀರವನ್ನು ಅತಿಕ್ರಮಿಸಿ ಹೋಗದಂತೆ ಸಮುದ್ರ ರಾಜನನ್ನು ಕೇಳಿಕೊಂಡರು. ಸಮುದ್ರರಾಜನು ಅವರ ಮಾತಿಗೆ ಸಮ್ಮತಿಸಿ ಇನ್ನೂ ಮುಂದೆ ತೀರವನ್ನು ಅತಿಕ್ರಮಿಸಿ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಅಂದಿನಿಂದ ಇಂದಿನವರೆಗೂ ಸಮುದ್ರವು ತನ್ನ ತೀರವನ್ನು ಅತಿಕ್ರಮಿಸಿರುವುದಿಲ್ಲ. ಪೂರ್ವಜರ ಇತಿಹಾಸವನ್ನು ಸ್ಮರಿಸಿಯಾದರೂ ನೀನು ಮಾಡಿರುವ ಪ್ರತಿಜ್ಞೆಯನ್ನು ಸುಳ್ಳಾಗಿಸಬೇಡ.

ದುರ್ಮತಿಯೇ! ಪರಮಧಾರ್ಮಿಕರ ವಂಶದಲ್ಲಿ ಹುಟ್ಟಿರುವ ನೀನು ಧರ್ಮವನ್ನು ಪರಿತ್ಯಜಿಸಿ ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಡನೆ ನಿತ್ಯವೂ ರಮಿಸಲು ಇಚ್ಛಿಸಿರುವೆಯಾ? ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ, ಸಕಲ ಪ್ರಜೆಗಳೂ ಕೈಜೋಡಿಸಿಕೊಂಡು ಮಾಡುವ ಪ್ರಣಾಮಗಳನ್ನು ಅಟ್ಟಹಾಸದಿಂದ ಸ್ವೀಕರಿಸುವ ಕೌಸಲ್ಯೆಯನ್ನು, ಒಂದು ದಿನವೂ ನಾನು ನೋಡಿ ಸಹಿಸಲಾರೆನು. ಸವತಿಯ ಅಂತಹ ವೈಭವವನ್ನು ನೋಡುವುದಕ್ಕಿಂತಲೂ ನನಗೆ ಮರಣವೇ ಶ್ರೇಯಸ್ಕರವು. ನನ್ನ ಮೇಲೆ ಮತ್ತು ನನಗೆ ಪ್ರಾಣರೂಪನಾಗಿರುವ ಭರತನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನೀನು ರಾಮನನ್ನು ಅರಣ್ಯಕ್ಕೆ ಕಳುಹಿಸುವುದರ ಹೊರತಾಗಿ ಬೇರೆ ಯಾವುದರಿಂದಲೂ ನನಗೆ ಸಂತೋಷವಾಗುವುದಿಲ್ಲ.


ಹೀಗೆ ತನ್ನ ಖಚಿತವಾದ ಅಭಿಪ್ರಾಯವನ್ನು ಸ್ಪಷ್ಟವಾದ ಮಾತುಗಳಿಂದ ಹೇಳಿ ಕೈಕೇಯಿಯು ವಿರಮಿಸಿದಳು. ರಾಮನು ವಿರಹವನ್ನು ನೆನೆದು ಗೋಳಾಡುತ್ತಿದ್ದ ರಾಜನಿಗೆ ಸಮಾಧಾನವಾಗುವ ಯಾವ ಮಾತನ್ನೂ ರಾಣಿಯು ಆಡಲಿಲ್ಲ. 'ರಾಮನಿಗೆ ವನವಾಸ; ಭರತನಿಗೆ ರಾಜ್ಯಾಭಿಷೇಕ' ಎಂಬ ಪರಮದಾರುಣನಾದ ಮಾತನ್ನು, ಕೈಕೇಯಿಯಿಂದ ಪುನಃ ಪುನಃ ಕೇಳಿ, ರಾಜನು ಕ್ಷಣಕಾಲ ಏನನ್ನೂ ಹೇಳಲಿಲ್ಲ. ವ್ಯಾಕುಲವಾದ ಮನಸ್ಸಿನಿಂದ ಕೂಡಿದ್ದ ದಶರಥನು, ಅಪ್ರಿಯವಾದ ಮಾತುಗಳನ್ನು ಹೇಳುತ್ತಿದ್ದ ಕೈಕೇಯಿಯನ್ನು ಮುಹೂರ್ತಕಾಲ ಎವೆಯಿಕ್ಕದೇ ನೋಡುತ್ತಿದ್ದನು. ಮನಸ್ಸಿಗೆ ಅಪ್ರಿಯವಾದ, ದುಃಖ ಶೋಕಗಳಿಗೆ ಕಾರಣವಾದ, ಸಿಡಿಲಿನಂತೆ ಅತಿ ಕಠೋರವಾದ ಕೈಕೇಯಿಯ ಮಾತುಗಳನ್ನು ಕೇಳಿ ರಾಜನು ಅಸುಖಿಯಾದನು. ಭರತನಿಗೆ ಪಟ್ಟಕಟ್ಟಲು ಮತ್ತು ಶ್ರೀರಾಮನನ್ನು ಅರಣ್ಯಕ್ಕೆ ಕಳುಹಿಸಲು ಕೈಕೇಯಿಯ ಪ್ರಯತ್ನ, ಅದಕ್ಕಾಗಿ ಅವಳು ಭರತನ ಮೇಲೆ ಆಣೆಯಿಟ್ಟು‌ ಮಾಡಿದ ಶಪಥ, ತಾನೂ ಕೂಡ ಶ್ರೀರಾಮನ ಮೇಲೆ ಆಣೆಯಿಟ್ಟು ಕೈಕೇಯಿಯ ಮಾತನ್ನು ನಡೆಸಿಕೊಡುವೆನೆಂದು ಹೇಳಿದುದು! ಈ ಎಲ್ಲವನ್ನೂ ಚಿಂತಿಸುತ್ತಿದ್ದ ದಶರಥನು ಬೇರಾವಗತಿಯನ್ನೂ ಕಾಣದೇ

'ಹಾ ರಾಮ!' ಎನ್ನುತ್ತಾ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಬುಡಕಡಿದ ಮರವು ದೊಪ್ಪನೆ ಬೀಳುವಂತೆ, ಪ್ರಜ್ಞಾಹೀನನಾಗಿ ನೆಲದ ಮೇಲುರುಳಿದನು.


Comments


bottom of page