ಕ್ರೋಧಾಗಾರದಲ್ಲಿ ಕೈಕೇಯಿ (ರಾಮಾಯಣ ಕಥಾಮಾಲೆ 19)
- Ganapati Hegde Moodkani

- Sep 28
- 2 min read
Updated: Oct 21
ಮಂಥರೆಯ ಈ ಬಗೆಯ ಯುಕ್ತಿಯುಕ್ತವಾದ ಚತುರತೆಯ ಮಾತುಗಳಿಂದ, ರಾಮನ ವಿಷಯದಲ್ಲಿ ಪರಿಶುದ್ಧಾಂತಃಕರಣಳಾಗಿದ್ದ ಕೈಕೇಯಿಯು ಪೂರ್ಣವಾಗಿ ಪರಿವರ್ತನೆ ಹೊಂದಿದಳು. ಮಂಥರೆಯ ಅನರ್ಥಕರವಾದ ಸಲಹೆಯೇ ಸಾಧುವಾಗಿರುವುದೆಂದು ಅದನ್ನು ಪರಿಗ್ರಹಿಸಿದಳು. ಮಂಥರೆಯಿಂದ ಪ್ರೋತ್ಸಾಹಿತಳಾದ, ವಿಶಾಲಾಕ್ಷಿಯಾದ, ರೂಪೈಶ್ವರ್ಯಗಳಿಂದ ಗರ್ವಿಷ್ಠೆಯಾಗಿದ್ದ ಕೈಕೇಯಿಯು ಮಂಥರೆಯೊಡನೆ ಕ್ರೋಧಾಗಾರವನ್ನು ಪ್ರವೇಶಿಸಿದಳು.
ಇತ್ತಲಾಗಿ ದಶರಥನು ಶ್ರೀರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಂಭಾರಗಳೆಲ್ಲವನ್ನೂ ಸಿದ್ಧಪಡಿಸುವಂತೆ ಸುಮಂತ್ರಾದಿ ಅಮಾತ್ಯರಿಗೆ ಆಜ್ಞಾಪಿಸಿ ಪುರೋಹಿತರಾದ ವಸಿಷ್ಠರ ಅನುಮತಿಯನ್ನು ಪಡೆದು ಆ ಸ್ಥಾನದಲ್ಲಿದ್ದವರಿಗೆ ಹೊರಡಲು ಅನುಮತಿಯನ್ನಿತ್ತು ಅಂತಃಪುರದ ಒಳಗೆ ಪ್ರವೇಶಿಸಿದನು. ರಾಮಾಭಿಷೇಕವು ಇಂದು ತಾನೇ ನಿಶ್ಚಿತವಾಗಿದೆ. ಆದುದರಿಂದ ಕೈಕೇಯಿಗೆ ಈ ವಿಷಯವು ತಿಳಿಯಲು ಅವಕಾಶವಾಗಿಲ್ಲವೆಂದು ಭಾವಿಸಿದ ಸರ್ವತಂತ್ರ ಸ್ವತಂತ್ರನಾದ ದಶರಥನು, ಪ್ರಿಯವಾರ್ತೆಯನ್ನು ಹೇಳಲು ಪ್ರೇಮಕ್ಕೆ ಅರ್ಹಳಾದ ಕೈಕೇಯಿಯ ಅಂತಃಪುರಕ್ಕೆ ಹೋದನು. ಬಿಳಿಯ ಮೋಡಗಳಿಂದ ಕೂಡಿರುವ ಮತ್ತು ರಾಹುವಿನಿಂದ ಯುಕ್ತವಾದ ಆಕಾಶವನ್ನು ರಾಹುವಿಗೆ ಗ್ರಾಸವಾಗುವ ಸಲುವಾಗಿ ಚಂದ್ರನು ಪ್ರವೇಶಿಸುವಂತೆ, ಮಹಾಯಶೋವಂತನಾದ ದಶರಥನು ಕೈಕೇಯಿಯ ಭವ್ಯವಾದ ಅಂತಃಪುರವನ್ನು ರಾಹುರೂಪಳಾದ ಕೈಕೇಯಿಗೆ ವಶನಾಗಲೋ ಎಂಬಂತೆ ಪ್ರವೇಶಿಸಿದನು. ಆದರೆ ಅಲ್ಲಿದ್ದ ಹಂಸ ತೂಲಿಕಾತಲ್ಪದಲ್ಲಿ ರಾಜನು ತನ್ನ ಪ್ರಿಯತಮೆಯಾದ ಕೈಕೇಯಿಯನ್ನು ಕಾಣಲಿಲ್ಲ. ಆ ಸಮಯದಲ್ಲಿ ರಾಜನು ಕಾಮಪೀಡಿತನಾಗಿದ್ದನು. ಪ್ರೇಯಸಿಯೊಡನೆ ರತಿಸುಖವನ್ನು ಬಯಸಿದ್ದನು. ಪ್ರಿಯಭಾರ್ಯೆಯನ್ನು ಹಾಸಿಗೆಯಲ್ಲಿ ಕಾಣದೇ ರಾಣಿಯೆಲ್ಲಿರುವಳೆಂದು ಸೇವಕಿಯನ್ನು ಪ್ರಶ್ನಿಸಿದನು. ರಾಮಾಭಿಷೇಕದ ಸಂತೋಷವಾರ್ತೆಯನ್ನು ತಿಳಿಸಿ ರತಿಸುಖವನ್ನು ಪಡೆಯಬೇಕೆಂದು ಬಯಸಿದ್ದ ರಾಜನಿಗೆ ಪ್ರೇಯಸಿಯಿಲ್ಲದಿರುವುದನ್ನು ಕಂಡು ಬಹಳ ದುಃಖವಾಯಿತು. ಆ ಹಿಂದೆ ಯಾವಾಗಲೂ ಕೈಕೇಯಿಯು ಹೊತ್ತು ಮೀರಿ ಬಂದವಳಲ್ಲ. ರಾಜನು ಬರುವ ವೇಳೆಗೆ ಅಲಂಕರಿಸಿಕೊಂಡು ನಗುಮುಖದಿಂದ ಸ್ವಾಗತಿಸಲು ಸಿದ್ಧಳಾಗಿರುತ್ತಿದ್ದಳು. ಹಿಂದೆಂದೂ ರಾಜನು ಶೂನ್ಯವಾದ ಅಂತಃಪುರವನ್ನು ಪ್ರವೇಶಿಸಿಯೇ ಇರಲಿಲ್ಲ. ಶೂನ್ಯವಾದ ಅಂತಃಪುರದಲ್ಲಿದ್ದ ರಾಜನು, ಮೂರ್ಖೆಯಾದ ಕೈಕೇಯಿಯು ಸ್ವಾರ್ಥ ಸಾಧನೆಯಲ್ಲಿ ಪ್ರವೃತ್ತಳಾಗಿರುವಳೆಂಬುದನ್ನು ತಿಳಿಯದೇ, ಹಿಂದಿನಂತೆಯೇ ಕೈಕೇಯಿಯು ಎಲ್ಲೆಂದು ಪ್ರತಿಹಾರಿಯನ್ನು ಪ್ರಶ್ನಿಸಿದನು. ರಾಜನ ಮಾತನ್ನು ಕೇಳಿ ಭಯಗೊಂಡ ಪ್ರತಿಹಾರಿಯು ಕೈ ಮುಗಿದುಕೊಂಡು, "ದೇವ! ದೇವಿಯು ಪರಮ ಕ್ರುದ್ಧೆಯಾಗಿ ಕ್ರೋಧಾಗಾರವನ್ನು ಪ್ರವೇಶಿಸಿದ್ದಾಳೆ" ಎಂದಳು.

ಕೈಕೇಯಿಯು ಕ್ರೋಧಾಗಾರಕ್ಕೆ ಹೋಗಿರುವಳೆಂಬುದನ್ನು ತಿಳಿದು ರಾಜನು ಬಹಳವಾಗಿ ವಿಷಾದಿಸಿದನು. ಬಳಿಕ ತಾನೂ ಅಲ್ಲಿಗೇ ಹೋದನು. ಅಲ್ಲವನು ಮಲಿನ ವಸ್ತ್ರವನ್ನುಟ್ಟು ಅಸ್ತವ್ಯಸ್ತವಾಗಿ ಮಲಗಿದ್ದ ಪ್ರೇಯಸಿಯನ್ನು ಕಂಡು, ಬೇಡನಿಂದ ಗಾಯಗೊಂಡ ಹೆಣ್ಣಾನೆಯನ್ನು ಮಹಾಗಜವು ಸೊಂಡಿಲಿನಿಂದ ಮುಟ್ಟಿ ಸಂತೈಸುವಂತೆ, ಭಯಗೊಂಡ ಮನಸ್ಸಿನಿಂದ ಕೂಡಿದ್ದ ಕಾಮಿಯಾದ ದಶರಥನು ಕಮಲಪತ್ರದಂತೆ ವಿಶಾಲವಾದ ಕಣ್ಣುಗಳುಳ್ಳ ಪತ್ನಿಯನ್ನು ತನ್ನೆರಡು ಕೈಗಳಿಂದಲೂ ಮೃದುವಾಗಿ ಸ್ಪರ್ಶಿಸುತ್ತಾ, "ಪ್ರಿಯೇ! ನಿನ್ನ ಹೃದಯವೂ ಕೋಪಕ್ಕೆ ಅವಕಾಶ ಕೊಡುವುದೆಂಬುದನ್ನು ನಾನು ಇದುವರೆಗೂ ತಿಳಿದೇ ಇರಲಿಲ್ಲ. ದೇವಿ! ನಿಜ ಹೇಳು ನಿನ್ನನ್ನು ಯಾರು ನಿಂದಿಸಿದರು? ಯಾರು ಅವಮಾನಗೊಳಿಸಿದರು? ನಿನ್ನ ಈ ದುರಾವಸ್ಥೆಯಿಂದ ನನ್ನ ಮನಸ್ಸನ್ನು ಕಲಕುತ್ತಿರುವೆ. ನನಗೆ ದುಃಖವನ್ನುಂಟು ಮಾಡಲೆಂದೇ ನೀನು ಈ ಧೂಳಿನ ಮೇಲೆ ಮಲಗಿರುವೆಯಾ? ಮಂಗಳಕರವಾದ ಮನಸ್ಸಿನಿಂದ ಕೂಡಿರುವ ನಾನಿನ್ನೂ ಜೀವಿಸಿರುವಾಗ ದೆವ್ವ ಬಡಿದವಳಂತೆ ನೀನೇಕೆ ಭೂಮಿಯಲ್ಲಿ ಬಿದ್ದು ಹೊರಳಾಡುತ್ತಿರುವೆ? ಎಂದು ಕೇಳಿದನು.
ಮುಂದುವರಿದು, "ಭಾಮಿನಿ! ನಮ್ಮಲ್ಲಿ ಕುಶಲರಾದ ವೈದ್ಯರಿದ್ದಾರೆ. ನಿನ್ನ ಈಗಿನ ವ್ಯಾಧಿಯೇನೆಂಬುದನ್ನು ಹೇಳು. ಕ್ಷಣಮಾತ್ರದಲ್ಲಿ ನಿನ್ನ ವ್ಯಾಧಿಯನ್ನು ಔಷಧೋಪಚಾರಗಳಿಂದ ಗುಣಪಡಿಸಿ ನಿನ್ನನ್ನು ಸುಖಿಯನ್ನಾಗಿ ಮಾಡುತ್ತಾರೆ. ಯಾರಿಂದ ನಿನಗೆ ಪ್ರಿಯವಾದ ಕಾರ್ಯವನ್ನು ಮಾಡಿಸಿಕೊಡಬೇಕಾಗಿದೆ? ಯಾರಿಗೆ ನಿನ್ನಿಂದ ಒಳ್ಳೆಯದಾಗಬೇಕಾಗಿದೆ? ನಿನಗಿಷ್ಟವಿಲ್ಲದ ಕಾರ್ಯವನ್ನು ಯಾರಾದರೂ ಮಾಡಿರುವರೆ? ಅದನ್ನಾದರೂ ಹೇಳು. ಹೀಗೆಲ್ಲಾ ನೆಲದ ಮೇಲೆ ಹೊರಳಾಡುತ್ತಾ ರೋಧನ ಮಾಡಬೇಡ. ಹಾಗೆ ಹೊರಳುತ್ತಾ ಈ ನಿನ್ನ ಸುಂದರ ಶರೀರವನ್ನು ಕ್ಲೇಷಗೊಳಿಸಬೇಡ. ನಿನ್ನ ಪ್ರೀತಿಗಾಗಿ ಮಾಡಬಾರದುದನ್ನು ಮಾಡಲೂ ನಾನು ಸಿದ್ಧನಾಗಿರುವೆನು. ವಧಾರ್ಹನಲ್ಲದವನನ್ನು ವಧಿಸಲೇ? ಮರಣದಂಡನೆಗೆ ಗುರಿಯಾಗಿರುವವನನ್ನು ಬಿಡಿಸಲೇ? ದರಿದ್ರನಾದವನನ್ನು ಐಶ್ವರ್ಯವಂತನನ್ನಾಗಿ ಮಾಡಲೇ? ಐಶ್ವರ್ಯವಂತನನ್ನು ದರಿದ್ರನನ್ನಾಗಿ ಮಾಡಲೇ? ನಿನ್ನ ಪ್ರೀತಿಗಾಗಿ ನಾನೇನು ಮಾಡಬೇಕೆಂಬುದನ್ನು ಹೇಳು. ನಾನು ಮತ್ತು ನನ್ನ ಪರಿವಾರಕ್ಕೆ ಸೇರಿದವರೆಲ್ಲರೂ ನಿನ್ನ ಅಧೀನರಾಗಿದ್ದೇವೆ. ಆದುದರಿಂದ ನಿನ್ನ ಯಾವುದೇ ಅಭಿಪ್ರಾಯವನ್ನು ತಿರಸ್ಕರಿಸುವ ಉತ್ಸಾಹವು ನನಗಿಲ್ಲ. ನಿನಗಾಗಿ ನನ್ನ ಪ್ರಾಣಾರ್ಪಣೆ ಮಾಡಲೂ ಸಿದ್ಧನಿದ್ದೇನೆ. ನಿನ್ನ ಮನಸ್ಸಿನಲ್ಲಿರುವುದನ್ನು ನಿಸ್ಸಂಕೋಚವಾಗಿ ಹೇಳು. ನಿನ್ನ ರೂಪ ಲಾವಣ್ಯಗಳಿಂದ ನನ್ನ ಮನಸ್ಸನ್ನು ಆಕರ್ಷಿಸುವ ಬಲವು ನಿನ್ನಲ್ಲಿ ಎಷ್ಟಿರುವುದೆಂಬುದು ನಿನಗೆ ಗೊತ್ತೆ ಇದೆ. ನಿನ್ನ ರೂಪ ಲಾವಣ್ಯಗಳಿಗೆ ಮಾರುಹೋಗಿ ನಾನು ನಿನ್ನ ದಾಸನಾಗಿಬಿಟ್ಟಿರುವೆನು. ನಾನಿದುವರೆಗೂ ಸತ್ಕರ್ಮಗಳಿಂದ ಗಳಿಸಿರುವ ಸುಕೃತದ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಿನ್ನ ಮನೋಗತವಾದ ಕಾರ್ಯವನ್ನು ಮಾಡಿಕೊಟ್ಟು ನಿನಗೆ ಪ್ರೀತಿಯನ್ನುಂಟು ಮಾಡುತ್ತೇನೆ. ಏಳು ಎದ್ದೇಳು ಹೀಗೆ ನೆಲದ ಮೇಲೆ ಹೊರಳಾಡುತ್ತಾ ಆಯಾಸಪಡುವೆಯೇಕೆ? ಯಾವ ಕಾರಣದಿಂದ ನೀನು ಭಯಗೊಂಡಿರುವೆಯೆಂಬುದನ್ನು ಸ್ಪಷ್ಟವಾಗಿ ಹೇಳು" ಎಂದನು.







Comments