ಶ್ರೀರಾಮ ಪಟ್ಟಾಭಿಷೇಕದ ಸಿದ್ಧತೆ (ರಾಮಾಯಣ ಕಥಮಾಲೆ 15)
- Ganapati Hegde Moodkani

- Aug 31
- 2 min read
ದಶರಥನು ಆಗಮಿಸಿದ್ದ ರಾಜರನ್ನೂ, ಪ್ರಜೆಗಳನ್ನೂ ಸಂದರ್ಶಿಸಿದ ಬಳಿಕ ಸಭಾಮಂದಿರಕ್ಕೆ ಅಲ್ಲಿದ್ದ ರತ್ನಖಚಿತವಾದ ಸಿಂಹಾಸನದಲ್ಲಿ ಕುಳಿತು "ವಸಿಷ್ಠ ಪ್ರಮುಖರಾದ ಬ್ರಾಹ್ಮಣೋತ್ತಮರೆ! ಈಗ ನಡೆಯುತ್ತಿರುವ ಚೈತ್ರವು ಅತ್ಯಂತ ಪುಣ್ಯಕರವಾದ ಮತ್ತು ವನಸಿರಿಯೆಂಬ ಸಂಪತ್ತಿನಿಂದ ಕೂಡಿರುವ ಮಾಸವಾಗಿದೆ. ಈ ಸಮಯದಲ್ಲಿ ಅರಣ್ಯದಲ್ಲಿರುವ ಗಿಡ ಮರ ಬಳ್ಳಿಗಳೆಲ್ಲವೂ ಪುಷ್ಪ ಭರಿತವಾಗಿದೆ. ಈ ಮಾಸವು ಶ್ರೀರಾಮನ ಜನ್ಮ ಮಾಸವೂ ಆಗಿರುವುದರಿಂದ ಪುಣ್ಯತಮವಾದ ಮಾಸವಾಗಿರುತ್ತದೆ. ಶ್ರೀರಾಮನ ಯೌವರಾಜ್ಯಾಭಿಷೇಕಕ್ಕೆ ಇದೇ ಪ್ರಶಸ್ತವಾದ ಮಾಸವೆಂಬುದು ನನ್ನ ಅಭಿಪ್ರಾಯವಾಗಿದೆ. ಆದುದರಿಂದ ಈ ಸಮಾರಂಭಕ್ಕೆ ಬೇಕಾಗುವ ಸಕಲ ಸಾಮಾಗ್ರಿಗಳೆಲ್ಲವನ್ನು ಸಿದ್ಧಪಡಿಸಿರಿ" ಎಂದನು.
ದಶರಥನು ಹೀಗೆ ಹೇಳಿ ಮುಗಿಸಿದೊಡನೆಯೇ "ಶ್ರೀ ರಾಮೋ ಜಯತು! ರಾಜಾ ರಾಮೋ ಜಯತು" ಎಂಬ ಜನರ ಮಹತ್ತರವಾದ ಜಯಘೋಷವುಂಟಾಯಿತು. ವಸಿಷ್ಠ ವಾಮದೇವರು ಶ್ರೀರಾಮನ ಪಟ್ಟಾಭಿಷೇಕಾಂಗವಾಗಿ ಮಾಡಬೇಕಾದ ಕಾರ್ಯಗಳನ್ನೂ ತರಬೇಕಾದ ಸಾಮಾಗ್ರಿಗಳನ್ನು ಮಂತ್ರಿಗಳಿಗೆ ತಿಳಿಯ ಪಡಿಸಿ ಅರಮನೆಯಲ್ಲಿ ಮಾಡಬೇಕಿದ್ದ ಉಳಿದ ಕರ್ಮಗಳನ್ನು ರಾಜನಿಗೆ ಯಥೋಚಿತವಾಗಿ ತಿಳಿಯಪಡಿಸಿ ನೆರವೇರಿಸಿದರು.

ಹೀಗೆ ಪಟ್ಟಾಭಿಷೇಕದ ವ್ಯವಸ್ಥೆಯಾದ ನಂತರ ಸಂತೋಷಗೊಂಡ ವಸಿಷ್ಠ ವಾಮದೇವರು ದಶರಥನ ಬಳಿಗೆ ಹೋಗಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲಸಂಭಾರಗಳು ಸಿದ್ಧವಾಗಿವೆಂದು ತಿಳಿಸಿದರು.
ಬಳಿದ ದಶರಥನು ಧರ್ಮಾತ್ಮನಾದ ಶ್ರೀರಾಮನನ್ನು ಶೀಘ್ರವಾಗಿ ಕರೆತರುವಂತೆ ಸುಮಂತ್ರನಿಗೆ ಹೇಳಿದನು. ಸುಮಂತ್ರನು ಹಾಗೆಯೇ ಆಗಲೆಂದು ಹೇಳಿ ರಾಜಾಜ್ಞೆಯಂತೆ ರಥಿಗಳಲ್ಲಿ ಶ್ರೇಷ್ಠನಾದ ಶ್ರೀರಾಮನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ದಶರಥನ ಬಳಿಗೆ ಕರೆತಂದನು. ದೇವತೆಗಳಿಂದ ಪರಿವೃತನಾದ ಇಂದ್ರನು ದಿವ್ಯಪ್ರಾಸಾದದಲ್ಲಿ ವಿರಾಜಿಸುವಂತೆ ಭೂಮಂಡಲದ ರಾಜರಿಂದ ಪರಿವೃತನಾಗಿ ಉಪ್ಪರಿಗೆಯ ಮೇಲೆ ವಿರಾಜಿಸುತ್ತಿದ್ದ ದಶರಥನು ತನ್ನ ಮಗನು ಸುಮಂತ್ರನೊಡನೆ ರಥದಲ್ಲಿ ಕುಳಿತು ಬರುವುದನ್ನು ಎವೆಯಿಕ್ಕದೆ ನೋಡುತ್ತಿದ್ದರೂ ದಶರಥನಿಗೆ ತೃಪ್ತಿಯಾಗಲಿಲ್ಲ.
ಕೈಲಾಸ ಶಿಖರಕ್ಕೆ ಸಮಾನವಾಗಿದ್ದ ಆ ಭವ್ಯವಾದ ಅರಮನೆಯ ಉಪ್ಪರಿಗೆಯನ್ನು ಶ್ರೀರಾಮನು ತಂದೆಯಾದ ದಶರಥನನ್ನು ನೋಡುವ ಇಚ್ಛೆಯಿಂದ ಸುಮಂತ್ರನೊಡನೆ ಹತ್ತಿದನು. ಬಳಿಕ ಶ್ರೀರಾಮನು ಸಿಂಹಾಸನಾರೂಢನಾಗಿದ್ದ ದಶರಥನನ್ನು ಕಂಡು ಬದ್ಧಾಂಜಲಿಯಾಗಿ ತಂದೆಯ ಬಳಿಗೆ ಸಾರಿ ದೀರ್ಘದಂಡ ನಮಸ್ಕಾರಮಾಡಿ ಅನಂತರ "ಶ್ರೀರಾಮ ನಾಮಹಮಭಿವಾದಯೇ" ಎಂದು ಹೇಳಿಕೊಂಡು ದಶರಥನ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದನು. ದಶರಥನು ನಮಸ್ಕರಿಸಿ ಪಕ್ಕದಲ್ಲಿ ವಿನೀತನಾಗಿ ಕೈ ಮುಗಿದುಕೊಂಡು ನಿಂತಿದ್ದ ಪ್ರಿಯಪುತ್ರನಾದ ಶ್ರೀರಾಮನನ್ನು ತನ್ನೆರಡು ಕೈಗಳಿಂದಲೂ ಹಿಡಿದು ಅವನನ್ನು ಹತ್ತಿರಕ್ಕೆ ಸೆಳೆದುಕೊಂಡು ಬಾಚಿತಬ್ಬಿದನು. ಹಾಗೆಯೇ ಅವನ ತಲೆಯನ್ನು ಆಘ್ರಾಣಿಸಿ ಪಕ್ಕದಲ್ಲಿಯೇ ಇದ್ದ ಮೌಕ್ತಿಕ ಗೋಮೇಧ ಪುಷ್ಯರಾಗಾದಿಮಣಿಗಳಿಂದಲೂ ಸುವರ್ಣದ ರೇಕುಗಳಿಂದಲೂ ಬಹಳ ಚೆನ್ನಾಗಿ ಅಲಂಕರಿಸಲ್ಪಟ್ಟಿದ್ದ, ಅತಿ ಸುಂದರವಾದ, ಉನ್ನತವಾದ ಮತ್ತು ಪರಮ ಶ್ರೇಷ್ಠವಾದ ಸಿಂಹಾಸನವನ್ನು ಶ್ರೀರಾಮನಿಗೆ ತೋರಿಸಿ ಅದರಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದನು. ಶ್ರೀರಾಮನು ಕುಳಿತುಕೊಂಡ ನಂತರ, "ರಾಮ! ನಾನು ವೃದ್ಧನಾಗಿದ್ದೇನೆ. ಇಷ್ಟು ದೀರ್ಘಕಾಲ ಬಾಳಿ ಬದುಕಿದ್ದೇನೆ. ನಾನಿಚ್ಚಿಸಿದ್ದಂತೆ ಬೇಕು ಬೇಕಾದಷ್ಟು ಭೋಗಗಳನ್ನು ಉಪಭೋಗಿಸಿದ್ದೇನೆ. ನೂರಾರು ಯಾಗಗಳನ್ನು ಮಾಡಿದ್ದೇನೆ. ನನಗೆ ಇಷ್ಟವಾದ ಪುತ್ರ ಪ್ರಾಪ್ತಿಯೂ ಆಗಿದೆ. ನನ್ನ ನಾಲ್ವರು ಪುತ್ರರಲ್ಲಿ ನೀನು ಲೋಕದಲ್ಲಿಯೇ ಮಿಗಿಲಾಗಿರುವೆ. ಆದುದರಿಂದ ಈಗ ನಾನು ಹೇಳಿದಂತೆ ಮಾಡುವುದು ನಿನಗೆ ಯೋಗ್ಯವಾಗಿದೆ. ಮೇಲಾಗಿ ನಮ್ಮ ಪ್ರಜೆಗಳೆಲ್ಲರೂ ನೀನೇ ರಾಜನಾಗಬೇಕೆಂದು ಬಯಸುತ್ತಿದ್ದಾರೆ. ಆದುದರಿಂದ ನಿನ್ನನ್ನೀಗಲೇ ಯುವರಾಜನನ್ನಾಗಿ ಮಾಡುತ್ತೇನೆ. ಇದಕ್ಕೆ ನೀನು ಸಮ್ಮತಿಸಬೇಕು. ರಾಘವ! ಇತ್ತೀಚೆಗೆ ನಾನು ಅಶುಭಸೂಚಕಗಳಾದ ಅನೇಕ ದುಃಸ್ವಪ್ನಗಳನ್ನು ಕಾಣುತ್ತಿದ್ದೇನೆ. ಸಿಡಿಲಿನೊಡನೆ ಘೋರ ಗರ್ಜನೆಗಳನ್ನು ಮಾಡುತ್ತಾ ಉಲ್ಕೆಗಳು ಹಗಲಿನಲ್ಲಿಯೇ ಅಂತರಿಕ್ಷದಿಂದ ಬೀಳುತ್ತಿವೆ. ಇದಕ್ಕನುಗುಣವಾಗಿ ನನ್ನ ಜನ್ಮ ನಕ್ಷತ್ರವು ಅಶುಭಗ್ರಹಗಳಾದ ಸೂರ್ಯಾಂಗಾರಕ ರಾಹುಗಳಿಂದ ಸಮಾಕ್ರಾಂತವಾಗಿರುವುದೆಂದು ದೈವಜ್ಞರು ಹೇಳುತ್ತಿದ್ದಾರೆ. ಇಂತಹ ದುರ್ನಿಮಿತ್ತಗಳು ಗೋಚರವಾದಾಗ ಪ್ರಾಯಶಃ ರಾಜನು ಸಾಯುತ್ತಾನೆ. ಅಥವಾ ಘೋರವಾದ ಆಪತ್ತಿಗಾದರೂ ಒಳಗಾಗುತ್ತಾನೆ. ಆದುದರಿಂದ ರಾಮ! ನನ್ನ ಈ ಬುದ್ಧಿಯು ವಿಮೋಹಗೊಳ್ಳುವುದರೊಳಗಾಗಿ ನಿನ್ನ ಯೌವ ರಾಜ್ಯಾಭಿಷೇಕವು ನಡೆದುಹೋಗಲಿ.
"ಚಲಾ ಹಿ ಪ್ರಾಣಿನಾಂ ಮತಿಃ" 'ಪ್ರಾಣಿಮಾತ್ರದವರ ಬುದ್ಧಿಯು ಸಾಮಾನ್ಯವಾಗಿ ಚಂಚಲವಾಗಿಯೇ ಇರುತ್ತದೆ'. ಚಂದ್ರನೀಗ ಪುಷ್ಯ ನಕ್ಷತ್ರದ ಹಿಂದಿನ ನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿದ್ದಾನೆ. ನಾಳೆಯೇ ಪುಷ್ಯ ನಕ್ಷತ್ರ ಯೋಗವಿದೆ. ಪುಷ್ಯ ನಕ್ಷತ್ರವು ಪಟ್ಟಾಭಿಷೇಕಕ್ಕೆ ಪ್ರಶಕ್ತವಾಗಿರುವ ನಕ್ಷತ್ರವೆಂದು ಜ್ಯೋತಿಷಿಕರು ಹೇಳುತ್ತಾರೆ. ನೀನು ಆ ಪುಷ್ಯನಕ್ಷತ್ರದಲ್ಲಿ ಪಟ್ಟಾಭಿಷಿಕ್ತನಾಗು. ಇದಕ್ಕಾಗಿ ನನ್ನ ಮನಸ್ಸು ಹಾತೊರೆಯುತ್ತಿದೆ. ಪರಂತನನೇ! ನಾಳೆಯೇ ನಿನ್ನನ್ನು ಯುವರಾಜ ಪದವಿಯಲ್ಲಿ ಅಭಿಷೇಚಿಸುತ್ತೇನೆ. ಆದುದರಿಂದ ನೀನು ಈಗಿನಿಂದಲೇ ನಿಯತಾತ್ಮನಾಗಿ ನಿನ್ನ ಪತ್ನಿಯೊಡನೆ ಈ ರಾತ್ರಿಯನ್ನು ಉಪವಾಸವಿದ್ದು ಕಳೆಯಬೇಕು. "ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ||" ಈ ವಿಧವಾದ ಮಹಾಕಾರ್ಯಗಳು ಅನೇಕವಿಧವಾದ ವಿಘ್ನಗಳಿಂದ ಕೂಡಿರುತ್ತದೆ. ಮೇಲಾಗಿ ನಮ್ಮಿಂದ ಸೋದರಮಾವನ ಮನೆಗೆ ಕಳುಹಿಸಲ್ಪಟ್ಟಿರುವ ಭರತನು ಹಿಂದಿರುಗಿ ಬರುವುದರೊಳಗಾಗಿ ನಿನಗೆ ಪಟ್ಟಾಭಿಷೇಕವಾಗಬೇಕು. ಆದುದರಿಂದ ಇದೇ ಸರಿಯಾದ ಕಾಲವೆಂದು ನನ್ನ ಅಭಿಪ್ರಾಯವಾಗಿದೆ. ನಿನ್ನ ತಮ್ಮನು ಸತ್ಪುರುಷರ ಮಾರ್ಗದಲ್ಲಿಯೇ ನಡೆಯತಕ್ಕವನು, ಅಣ್ಣನಾದ ನಿನ್ನನ್ನೇ ಅನುಸರಿಸಿ ಇರುವವನು, ಧರ್ಮಾತ್ಮನೂ, ದಯಾಪರನೂ ಇದರಲ್ಲಿ ಯಾವ ಸಂಶಯವೂ ಇಲ್ಲ ಆದರೂ "ಕಿಂತು ಚಿತ್ತಂ ಮನುಷ್ಯಾಣಾಮನಿತ್ಯಮಿತಿ ಮೇಮತಿ ಸತಾಂ ಚ ಧರ್ಮ ನಿತ್ಯಾನಾಂ ಕೃತಶೋಭಿಚ ರಾಘವ", ಮಾನವರ ಮನಸ್ಸು ಸ್ಥಿರವಲ್ಲವೆಂಬುದು ನನ್ನ ಖಚಿತವಾದ ಅಭಿಪ್ರಾಯವಾಗಿದೆ.
ಕೆಲವು ಸಮಯಗಳಲ್ಲಿ ಧರ್ಮನಿರತರಾದ ಸತ್ಪುರುಷರ ಮನಸ್ಸೂ ತತ್ತನಿಮ್ಮಿತ್ತವಾದ ರಾಗ ದ್ವೇಷಾದಿಗಳಿಂದ ಕೂಡಿರುತ್ತದೆ ಎಂಬುದಾಗಿ ಹೇಳಿ ಶ್ರೀರಾಮನು ತನ್ನ ಅರಮನೆಗೆ ಹಿಂದಿರುಗಲು ಅನುಮತಿಸಿದನು. ಶ್ರೀರಾಮನು ದಶರಥನಿಗೆ ಪುನಃ ಅಭಿವಾದನಪೂರ್ವಕವಾಗಿ ನಮಸ್ಕಾರಮಾಡಿ ತನ್ನ ಅರಮನೆಗೆ ತೆರಳಿದನು.







Comments