ಬಾಲಕಾಂಡದ ಕೊನೇಯ ಅಧ್ಯಾಯ (ರಾಮಾಯಣ ಕಥಾಮಾಲೆ 13)
- Ganapati Hegde Moodkani

- Aug 17
- 2 min read
ಪರಶುರಾಮನು ಮಹೇಂದ್ರಪರ್ವತಕ್ಕೆ ಹೊರಟುಹೋದನು. ನಂತರ ಪ್ರಶಾಂತಾತ್ಮನಾದ ರಾಮನು, ತನ್ನಲ್ಲಿದ್ದ ಬಾಣಸಹಿತ ವೈಷ್ಣವಧಾನುಸ್ಸನ್ನು, ದ್ವಂದ್ವ ಯುದ್ಧವನ್ನು ನೋಡುವ ಕುತೂಹಲದಿಂದ ದೇವತೆಗಳೊಡನೆ ಆಗಮಿಸಿದ್ದ ವರುಣನಿಗೆ ನಿಕ್ಷೇಪರೂಪವಾಗಿ ಕೊಟ್ಟನು. ಅನಂತರ ಶ್ರೀರಾಮನು ವಸಿಷ್ಠ ಪ್ರಮುಖರಾದ ಋಷಿ ಮಹರ್ಷಿಗಳಿಗೆ ಅಭಿವಾದನ ಪೂರ್ವಕವಾಗಿ ನಮಸ್ಕರಿಸಿ, ತಂದೆಯು ಖಿನ್ನವಾಗಿರುವುದನ್ನು ಕಂಡು, "ತಂದೆಯೇ! ಜಮದಗ್ನಿಯ ಪುತ್ರನಾದ ರಾಮನು ಹೊರಟುಹೋದನು. ನಿನ್ನಿಂದ ಪರಿಪಾಲಿತವಾದ ಚತುರಂಗ ಸೇನೆಯು ಅಯೋಧ್ಯಾಭಿಮುಖವಾಗಿ ಪ್ರಯಾಣಮಾಡಲಿ" ಎಂದನು.
ಶ್ರೀರಾಮನ ಆ ಮಾತನ್ನು ಕೇಳಿ ದಶರಥರಾಜನು ಮಹತ್ತಾದ ಆನಂದದಿಂದ ಎರಡು ಕೈಗಳಿಂದಲೂ ಮಗನನ್ನು ಬಾಚಿ ತಬ್ಬಿಕೊಂಡು, ನೆತ್ತಿಯನ್ನು ಪ್ರೇಮ ಪುರಸ್ಸರವಾಗಿ ಆಘ್ರಾಣಿಸಿದನು. ತಾನೂ ಮತ್ತು ತನ್ನ ಮಗನೂ ಪುನರ್ಜನ್ಮವನ್ನೇ ಪಡೆದುದಾಗಿ ದಶರಥನು ಭಾವಿಸಿ, ಪ್ರಯಾಣವನ್ನು ಮುಂದುವರಿಸುವಂತೆ ಚತುರಂಗಬಲಕ್ಕೆ ಆಜ್ಞೆಯನ್ನಿತ್ತನು. ಚತುರಂಗ ಬಲ ಸಮೇತನಾದ ದಶರಥನು ಶೀಘ್ರವಾಗಿ ಅಯೋಧ್ಯಾನಗರಿಯನ್ನು ಸೇರಿದನು. ನಗರವನ್ನು ಪ್ರವೇಶಿಸಿದೊಡನೆಯೇ ಬ್ರಾಹ್ಮಣ ಪುರಸ್ಕೃತರಾದ ಪ್ರಜೆಗಳು ರಾಜನಿಗೂ ರಾಜಕುಮಾರರಿಗೂ ಪುಷ್ಪಹಾರಗಳನ್ನು ಹಾಕಿ, ಆದುದರಿಂದ ಸ್ವಾಗತಿಸಿದರು. ರಾಜಮಹರ್ಷಿಯರಾದ ಕೌಸಲ್ಯ, ಸುಮಿತ್ರಾ, ಕೈಕೇಯಿಯರು ಮತ್ತು ರಾಜನ ಅಂತಃ ಪುರದಲ್ಲಿದ್ದ ಇತರ ರಾಜಮಹಿಳೆಯರು ನೂತನ ವಧುಗಳಾದ ಸೀತಾ, ಊರ್ಮಿಳಾ, ಮಾಂಡವಿ, ಶ್ರುತಕೀರ್ತಿಯರನ್ನು ಮನೆ ತುಂಬಿಸಿಕೊಳ್ಳುವ ಮಂಗಳ ಕಾರ್ಯಕ್ಕೆ ಸಿದ್ಧ ಮಾಡಿಕೊಂಡರು. ಸಂಪ್ರದಾಯಾನುಸಾರವಾದ ಮಂಗಳ ಕಾರ್ಯಗಳು ಮುಗಿದನಂತರ ದಶರಥನ ಪತ್ನಿಯರು ಮಹಾಭಾಗಳಾದ ಸೀತಾದೇವಿಗೂ, ಯಶಸ್ವಿನಿಯಾದ ಊರ್ಮಿಳೆಗೂ ಮತ್ತು ಕುಶಧ್ವಜನ ಮಕ್ಕಳಾದ ಭರತ ಶತ್ರುಘ್ನರ ಪತ್ನಿಯರಾದ ಮಾಂಡವಿ, ಶ್ರುತಕೀರ್ತಿಯರಿಗೂ ಕುಂಕುಮವನ್ನಿಟ್ಟು ಆರತಿಮಾಡಿ ಮನೆದುಂಬಿಸಿಕೊಂಡರು.
ಹೀಗೆ ಶ್ರೀರಾಮ ಲಕ್ಷ್ಮಣ ಭರತ ಶತ್ರುಘ್ನರಿಗೆ ವಿವಾಹವಾಗಿ ಅವರು ಗೃಹಸ್ಥಾಶ್ರಮವನ್ನು ಪ್ರವೇಶಿಸಿದರು. ಆ ವೇಳೆಗೆ ಧನುರ್ವಿದ್ಯಾಭ್ಯಾಸವೂ ಮುಗಿದು ನಾಲ್ವರೂ ಧನುರ್ವಿದ್ಯೆಯಲ್ಲಿ ನಿಷ್ಣಾತರಾಗಿದ್ದರು. ಸಕಲ ವಿಧಗಳಲ್ಲಿಯೂ ಪರಿಪೂರ್ಣರಾಗಿದ್ದ ಆ ರಾಜಕುಮಾರರು ತಂದೆಯ ಶುಶ್ರೂಷೆ ಮಾಡುತ್ತಾ ಆನಂದದಿಂದ ಕಾಲಕಳೆಯುತ್ತಿದ್ದರು.

ಕೆಲವು ದಿನಗಳು ಕಳೆದನಂತರ ದಶರಥರಾಜನು ಕೈಕೇಯಿಯ ಮಗನಾದ ಭರತನಿಗೆ, "ಪುತ್ರಕ! ಕೇಕಯ ರಾಜನ ಮಗನಾದ ಮತ್ತು ನಿನ್ನ ಸೋದರಮಾವನಾದ ಯುಧಾಜಿತನು, ನಿನ್ನನ್ನು ತನ್ನ ತಂದೆಯ ಬಳಿಗೆ ಕರೆದೊಯ್ಯುವ ಆಶಯದಿಂದಾಗಿ ನಮ್ಮಲಿಯೇ ತಂಗಿದ್ದಾನೆ" ಎಂದನು.
ತಂದೆಯ ಮಾತುಗಳನ್ನು ಕೇಳಿ ಭರತನು ಶತ್ರುಘ್ನನೊಡನೆ ತನ್ನ ತಾತನ ಮನೆಗೆ ಪ್ರಯಾಣ ಮಾಡಲು ನಿಶ್ಚಯಿಸಿದನು. ಭರತನ ಸೋದರಮಾವನಾದ ಯುಧಾಜಿತನು ತನ್ನ ಮನೋಭೀಷ್ಟದಂತೆ ಭರತ, ಶತ್ರುಘ್ನರನ್ನು ಕರೆದುಕೊಂಡು ಪರಮಸಂತುಷ್ಟನಾಗಿ ರಾಜ ಪುತ್ರರೊಡನೆ ತನ್ನ ಪಟ್ಟಣವನ್ನು ಸೇರಿದನು. ಮೊಮ್ಮಗನನ್ನು ಕಂಡು ಕೇಕಯ ರಾಜನೂ ಆನಂದಭರಿತನಾದನು. ಭರತ-ಶತ್ರುಘ್ನರು ಕೇಕಯರಾಜ್ಯಕ್ಕೆ ಹೊರಟುಹೋದ ನಂತರ ರಾಮ-ಲಕ್ಷ್ಮಣರು ದೇವಸದೃಶನಾದ ತಂದೆಯನ್ನು ಕಾಲ ಕಾಲಗಳಲ್ಲಿ ಶುಶ್ರೂಷೆ ಮಾಡುತ್ತಿದ್ದರು. ಯಾರ ವಿಷಯದಲ್ಲಿಯೂ ಔದಾಸೀನ್ಯವನ್ನು ತೋರದೇ, ಮಾತಾ ಪಿತೃ ಆಚಾರ್ಯರುಗಳ ಯೋಗ ಕ್ಷೇಮಗಳನ್ನೂ ವಿಚಕ್ಷಣೆಯಿಂದ ನೋಡಿಕೊಳ್ಳುತ್ತಿದ್ದರು. ಈ ವಿಧವಾದ ರಾಮನ ಸೌಶೀಲ್ಯದಿಂದಲೂ, ಸದ್ವೃತ್ತಿಯಿಂದಲೂ ದಶರಥನು ಸುಪ್ರೀತನಾದನು. ಬ್ರಾಹ್ಮಣ ವೈಶ್ಯರೂ ಮತ್ತು ಕೋಸಲದೇಶದ ಪ್ರಜೆಗಳೂ ಶ್ರೀರಾಮನ ಧರ್ಮಮೂಲವಾದ ರಾಜ್ಯಾಡಳಿತದಿಂದಾಗಿ ಪರಮಪ್ರೀತರಾದರು. ದಶರಥನ ಪುತ್ರರಾದ ನಾಲ್ವರಲ್ಲಿ ಶ್ರೀರಾಮನು ಮಹಾಯಶಸ್ವಿಯಾಗಿದ್ದನು. ಸತ್ಯ ಪರಾಕ್ರಮಿಯಾದ ಅವನು ಲೋಕದಲ್ಲಿಯೇ ಅತ್ಯಂತ ಗುಣಶಾಲಿಯೆಂದೂ, ಜೀವಕೋಟಿಯ ಮಧ್ಯದಲ್ಲಿರುವ ಬ್ರಹ್ಮನಿಗೆ ಸಮಾನನೆಂದೂ ವಿಖ್ಯಾತನಾದನು. ಶ್ರೀರಾಮನು ಸೀತೆಯೊಡನೆ ಅನೇಕ ಋತುಗಳ ಪರ್ಯಂತವಾಗಿ ಸುಖೋಪಭೋಗಗಳನ್ನನುಭವಿಸುತ್ತಾ ಕಾಲ ಕಳೆದನು. ನಿಶ್ಚಲ ಮನಸ್ಸುಳವನಾಗಿದ್ದ ಶ್ರೀರಾಮನು ಸೀತೆಯಲ್ಲಿಯೇ ನೆಟ್ಟ ಮನಸ್ಸುಳ್ಳವನಾಗಿದ್ದನು. ಅವನಿಗೆ ಸೀತೆಯು ಪರಮಪ್ರಿಯಳಾಗಿದ್ದಳು. ಸೀತೆಗಿದ್ದ ಪಾತಿವ್ರತ್ಯಾದಿ ಗುಣಾತಿಶಯದಿಂದಲೂ ಮತ್ತು ರೂಪ ಸಂಪತ್ತಿನಿಂದಲೂ ಶ್ರೀರಾಮನ ಹೃದಯದಲ್ಲಿ ಸೀತೆಯ ಮೇಲಿನ ಪ್ರೀತಿಯು ಕ್ಷಣ ಕ್ಷಣಕ್ಕೂ ವೃದ್ಧಿ ಹೊಂದುತ್ತಿದ್ದಿತು. ಅದೇ ರೀತಿಯಲ್ಲಿ ಶ್ರೀರಾಮನ ಗುಣಾತಿಶಯದಿಂದಲೂ ಮತ್ತು ರೂಪ ಲಾವಣ್ಯಗಳಿಂದಲೂ ಸೀತೆಯ ಹೃದಯದಲ್ಲಿ ಶ್ರೀರಾಮನು ದ್ವಿಗುಣಿತನಾಗಿ ಪ್ರಕಾಶಿಸಿದನು. ಅದರಿಂದಾಗಿ ಶ್ರೀರಾಮನು ಯಾವುದಾದರೂ ವಿಷಯವನ್ನು ಕುರಿತು ಯೋಚಿಸಿದನೆಂದರೆ, ಶ್ರೀರಾಮನ ಹೃದಯದಲ್ಲಿ ವಿರಾಜಿಸುತ್ತಿದ್ದ ಸೀತೆಗೆ ಅದು ತಿಳಿದು, ಆ ಮೂಲಕವಾಗಿ ಸೀತೆಯ ಮನಸ್ಸಿಗೂ ಶ್ರೀರಾಮನ ವಿಚಾರ ಲಹರಿಯು ತಿಳಿಯುತ್ತಿದ್ದಿತು. ರಾಜರ್ಷಿಯಾದ, ದಶರಥನ ಮಗನಾದ ಶ್ರೀರಾಮನು, ತನ್ನ ಮನಸ್ಸಿನ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಿದ್ದ, ಉತ್ತಮವಾದ ರಾಜವಂಶದಲ್ಲಿ ಹುಟ್ಟಿದ, ಸೀತೆಯೊಡಗೂಡಿ ಪರಮ ಸಂತುಷ್ಟನಾಗಿ, ಅಮರೇಶ್ವರನಾದ ಮಹಾವಿಷ್ಣುವು ಮಹಾಲಕ್ಷ್ಮಿಯೊಡಗೂಡಿ ವಿರಾಜಿಸುವಂತೆ ವಿರಾಜಿಸುತ್ತಿದ್ದನು.
ಬಾಲಕಾಂಡವು ಸಮಾಪ್ತವಾಯಿತು.








Comments