ರಾಮ - ಪರಶುರಾಮರ ಯುದ್ಧ (ರಾಮಾಯಣ ಕಥಮಾಲೆ - 12)
- Ganapati Hegde Moodkani

- Aug 10
- 3 min read
ದಶರಥನು ಹೀಗೆ ಹೇಳುತ್ತಿರಲಾಗಿ ಪ್ರತಾಪಶಾಲಿಯಾದ ಪರಶುರಾಮನು ಅವನ ಮಾತನ್ನು ಗಣನೆಗೇ ತಂದುಕೊಳ್ಳದೇ, ತಿರಸ್ಕರಿಸುತ್ತಾ ರಾಮನ ಕಡೆ ತಿರುಗಿ "ರಾಮ! ನೀನು ಮುರಿದ ಶೈವಧನುಸ್ಸು ಮತ್ತು ಈಗ ನನ್ನಲ್ಲಿರುವ ವೈಷ್ಣವ ಧನುಸ್ಸು ಇವೆರಡೂ ದೇವಲೋಕದಲ್ಲಿ ಪ್ರಾಪ್ತವಾದುವುಗಳು. ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದವುಗಳು ಮತ್ತು ಮೂರು ಲೋಕಗಳ ಜನರಿಂದಲೂ ಪೂಜಿಸಲ್ಪತಕ್ಕುವುಗಳು, ದೃಢವಾದವುಗಳು. ಬಹಳ ಬಲವಾದುವುಗಳು. ತ್ರಿಪುರಾಸುರನನ್ನು ಸಂಹಾರ ಮಾಡಿದ ಶಿವನ ಆ ಮಹಾಧನುಸ್ಸನ್ನೇ ನೀನು ಭಂಗಮಾಡಿರುವೆ. ನನ್ನ ಕೈಯಲ್ಲಿರುವ ತೇಜೋ ವಿಶಿಷ್ಟವಾದ ಈ ಧನುಸ್ಸೇ ದೇವತೆಗಳು ವಿಷ್ಣುವಿಗೆ ಕೊಟ್ಟ ವೈಷ್ಣವ ಧನುಸ್ಸಾಗಿರುವುದು. ರಾಘವ! ಈ ವೈಷ್ಣವ ಧನುಸ್ಸು ಶಿವಧನುಸ್ಸಿಗೆ ಸಮಾನವಾದ ಬಲವುಳ್ಳದ್ದಾಗಿದೆ. ಆದರೆ ತ್ರಿಪುರ ಸಂಹಾರಕಾಲದಲ್ಲಿ ವಿಷ್ಣುವು ಈಶ್ವರನಿಗೆ ಬಾಣರೂಪನಾಗಿ ತ್ರಿಪುರಸಂಹಾರಕ್ಕೆ ನೆರವಾದ್ದರಿಂದ ಶಿತಿಕಂಠ ಮತ್ತು ವಿಷ್ಣು ಈ ಇಬ್ಬರಲ್ಲಿ ಬಲಶಾಲಿಗಳು ಯಾರೆಂಬುದನ್ನು ತಿಳಿಯುವ ಕುತೂಹಲದಿಂದ ಸರ್ವದೇವತೆಗಳೂ ಪಿತಾಮಹನ ಬಳಿಗೆ ಹೋಗಿ ಅವನನ್ನು ಈ ವಿಷಯವಾಗಿ "ಬ್ರಹ್ಮದೇವ! ಹರಿ ಹರ ಈ ಇಬ್ಬರು ದೇವತೆಗಳಲ್ಲಿ ಬಲಿಷ್ಠರು ಯಾರು?" ಎಂದು ಪ್ರಶ್ನಿಸಿದರು.

ದೇವದೇವನಾದ ದೇವಪಿತಾಮಹನು ದೇವತೆಗಳ ಅಭಿಪ್ರಾಯವನ್ನು ಹರಿ ಹರರಲ್ಲಿ ಪರಸ್ಪರ ವಿರೋಧವುಂಟಾಗುವಂತೆ ಮಾಡಿದನು. ಒಬ್ಬರು ಮತ್ತೊಬ್ಬರನ್ನು ಜಯಿಸಿ ತಮ್ಮ ಬಲಾಧಿಕ್ಯವನ್ನು ತೋರ್ಪಡಿಸಬೇಕೆಂಬ ಆಕಾಂಕ್ಷೆಯುಳ್ಳ ಹರಿ ಹರರಿಬ್ಬರಿಗೂ ರೋಮಾಂಚನವನ್ನುಂಟು ಮಾಡುವ ಘೋರವಾದ ಯುದ್ಧವು ಪ್ರಾರಂಭವಾಯಿತು. ಆ ಸಮಯದಲ್ಲಿ ವಿಷ್ಣುವು ಕೋಪಾಧಿಕ್ಯದಿಂದ ಒಂದು ಬಾರಿ ಹೂಂಕರಿಸಿದನು. ವಿಷ್ಣುವಿನ ಹುಂಕಾರ ಮಾತ್ರದಿಂದಲೇ ಶಿವನ ಕೈಲಿದ್ದ ಭಯಂಕರ ಪರಾಕ್ರಮವಿಶಿಷ್ಟವಾದ ಧನುಸ್ಸು ಶಿಥಿಲವಾಯಿತು. ತನ್ನ ಧನುಸ್ಸು ಶಿಥಿಲವಾದುದನ್ನು ಕಂಡು ತ್ರಿಲೋಚನನಾದ ಮಹಾದೇವನಾದ ಪರಶಿವನು ಸ್ತಂಭೀಭೂತನಾದನು. ಆ ಸಮಯಕ್ಕೆ ಸರಿಯಾಗಿ ಋಷಿಗಳ ಸಮೂಹದೊಡನೆಯೂ ಸಿದ್ಧ ಚಾರಣರೊಡನೆಯೂ ಕೂಡಿ ದೇವತೆಗಳು ಯುದ್ಧದ ನಿಲುಗಡೆಗಾಗಿ ಪ್ರಾರ್ಥಿಸಿದರು. ಸುರೋತ್ತಮರಾದ ಹರಿ ಹರರು ದೇವಾನುಗ್ರಹಾರ್ಥವಾಗಿ ಯುದ್ಧವನ್ನು ನಿಲ್ಲಿಸಿ ಶಾಂತರಾದರು. ವಿಷ್ಣುವಿನ ಪರಾಕ್ರಮಗಳಿಂದ ದೇವತೆಗಳು, ಸಿದ್ಧ ಚಾರಣರು ಮತ್ತು ಋಷಿ ಮಹರ್ಷಿಗಳು ವಿಷ್ಣುವನ್ನೇ ಶ್ರೇಷ್ಠನೆಂಬುದಾಗಿ ತಿಳಿದುಕೊಂಡರು. ಪರಮಕ್ರದ್ಧನಾಗಿದ್ದ ರುದ್ರನು ದೇವತೆಗಳ ಪ್ರಾರ್ಥನೆಯಂತೆ ಶಾಂತನಾಗಿ ತನ್ನಲ್ಲಿದ್ದ ಶೈವಧನುಸ್ಸನ್ನು ಬಾಣದೊಡನೆ ರಾಜರ್ಷಿಯಾದ ನಿಮಿ ಕುಲೋತ್ಪನ್ನಾದ ದೇವರಾತನ ಕೈಯಲ್ಲಿ ನಿಕ್ಷೇಪರೂಪವಾಗಿ ಕೊಟ್ಟನು. ರಾಮ! ಶತ್ರುಗಳ ಪಟ್ಟಣವನ್ನು ಜಯಿಸಲು ಸಮರ್ಥವಾದ, ನನ್ನ ಕೈಯಲ್ಲಿರುವ, ಉತ್ತಮೋತ್ತಮವಾದ ಈ ವೈಷ್ಣವ ಧನುಸ್ಸನ್ನು ವಿಷ್ಣುವು ಭೃಗುವಂಶೋತ್ಪನ್ನನಾದ ಋಚೀಕನಿಗೆ ನ್ಯಾಸರೂಪವಾಗಿ ಕೊಟ್ಟನು. ಮಹಾ ತೇಜಸ್ವಿಯಾದ ಋಚೀಕನು ಈ ಧನೂರತ್ನವನ್ನು ತನ್ನ ಮಗನಾದ, ತನ್ನನ್ನು ಕೊಲ್ಲಲು ಬಂದವರ ವಿಷಯದಲ್ಲಿಯೂ ಯಾವ ವಿಧವಾದ ಪ್ರತಿಕ್ರಿಯೆಯನ್ನೂ ಕೈಗೊಳ್ಳದ, ನನ್ನ ತಂದೆಯಾದ ಮಹಾತ್ಮನಾದ ಜಮದಗ್ನಿಗೆ ಕೊಟ್ಟನು. ಶಸ್ತ್ರಸಂನ್ಯಾಸವನ್ನು ಮಾಡಿದ್ದ ತಪೋಬಲ ಸಮನ್ವಿತವಾದ ನನ್ನ ತಂದೆಯನ್ನು ಅಲ್ಪವಾದ ಬುದ್ಧಿಯನ್ನು ಹೊಂದಿದ್ದ ಕಾರ್ತವೀರ್ಯನು ಸಂಹರಿಸಿದನು. ಅಮಾನುಷವಾದ, ನಿಷ್ಕಾರಣವಾದ, ಅತಿದಾರುಣವಾದ ನಮ್ಮ ತಂದೆಯ ಆ ವಧೆಯನ್ನು ಕೇಳಿದ ನಾನು, ಕೋಪದಿಂದ ಕ್ಷತ್ರ ವಂಶವು ಹುಟ್ಟು ಹುಟ್ಟುತ್ತಿದ್ದಂತೆಯೇ ಇಪ್ಪತ್ತೊಂದು ಬಾರಿ ಸಂಹರಿಸಿ, ಕ್ಷತ್ರಿಯರ ವಧೆಯಿಂದ ಪ್ರಾಪ್ತವಾದ ಅಖಂಡವಾದ ಈ ಪೃಥ್ವಿಯನ್ನು ನಾನು ಮಾಡಿದ ಯಜ್ಞದ ಅಂತ್ಯದಲ್ಲಿ ಪುಣ್ಯಶೀಲನಾದ, ಮಹಾತ್ಮನಾದ ಕಶ್ಯಪನಿಗೆ ದಕ್ಷಿಣಾರೂಪವಾಗಿ ಕೊಟ್ಟು ತಪೋಬಲ ಸಮನ್ವಿತನಾಗಿ ಮಹೇಂದ್ರ ಪರ್ವತದಲ್ಲಿ ವಾಸ ಮಾಡುತ್ತಿದ್ದೆನು. ನೀನು ಮಾಡಿದ ಶೈವಧನುರ್ಭಂಗವನ್ನು ಕೇಳಿದೊಡನೆಯೇ ನಿನ್ನನ್ನು ನೋಡುವ ಸಲುವಾಗಿ ಇಲ್ಲಿಗೆ ಬಂದೆನು. ಕಾಕುತ್ಸ್ಥ! ನಿಶ್ಚಯವಾಗಿಯೂ ನೀನು ಶಕ್ತನೇ ಆಗಿರುವುದಾದರೆ ಈ ವೈಷ್ಣವ ಧನುಸ್ಸನ್ನು ಬಗ್ಗಿಸಿ ನಾಣನ್ನು ಎಳೆದು, ಕಟ್ಟಿ, ಶತ್ರುಗಳ ಪಟ್ಟಣವನ್ನು ಜಯಿಸಲು ಸಮರ್ಥವಾದ ಬಾಣವನ್ನು ಹೂಡು. ನೀನು ಹಾಗೆ ಶರ ಸಂಧಾನ ಮಾಡಿದೆಯಾದರೆ ಅನಂತರ ನಿನ್ನೊಡನೆ ದ್ವಂದ್ವ ಯುದ್ಧವನ್ನು ಮಾಡುತ್ತೇನೆ" ಎಂದನು.
ಜಮದಗ್ನಿಯ ಮಗನಾದ ಪರಶುರಾಮನ ಮಾತುಗಳನ್ನು ಕೇಳಿ ತಂದೆಯಾದ ದಶರಥನು ಸಮೀಪದಲ್ಲಿಯೇ ಇದ್ದುದರಿಂದ ತಂದೆಗೆ ಗೌರವ ಕೊಡುವ ಸಲುವಾಗಿ ಹೆಚ್ಚು ಮಾತನಾಡದೇ ದಾಶರಥಿಯು ಪರಶುರಾಮನಿಗೆ "ಭಾರ್ಗವ! ಪಿತೃವಿನ ವಧೆಯಿಂದ ಉಂಟಾದ ಕೋಪದ ಪ್ರಶಮನಕ್ಕಾಗಿ ನೀನು ಇಪ್ಪತ್ತೊಂದು ಬಾರಿ ಕ್ಷತ್ರಿಯ ಕುಲವನ್ನೇ ವಿನಾಶ ಮಾಡಿದ ಕಥೆಯನ್ನು ನಾನು ಕೇಳಿದ್ದೇನೆ. ವೈರ ಶುದ್ಧಿಗೆ ಅಥವಾ ಕೋಪಪ್ರಶಮನಕ್ಕೆ ಶೂರರು ಮಾಡಬೇಕಾದ ಕಾರ್ಯವೇ ಇದಾಗಿದೆಯೆಂಬುದನ್ನೂ ನಾನು ಅಂಗೀಕರಿಸುತ್ತೇನೆ. ಆದರೆ ನೀನು ವೀರ್ಯಹೀನರನ್ನೂ, ಅಶಕ್ತರನ್ನೂ ಮಾತನಾಡಿಸುವಂತೆ ಕ್ಷತ್ರ ಧರ್ಮದಲ್ಲಿ ನಿಯುಕ್ತನಾಗಿರುವ ನನ್ನನ್ನು 'ಕ್ಷತ್ರ ಧರ್ಮಂ ಪುರಸ್ಕೃತ್ಯ' ಮುಂತಾಗಿ ಮಾತನಾಡಿ ಅವಮಾನ ಮಾಡುತ್ತಿರುವೆ. ನನ್ನ ಕ್ಷಾತ್ರ ತೇಜಸ್ಸನ್ನೂ ಮತ್ತು ನನ್ನ ಪರಾಕ್ರಮವನ್ನೂ ಈಗಲೇ ಕಾಣುವೆ" ಎಂದು ಹೇಳಿ ಪರಮಕ್ರುದ್ಧನಾದ, ಶೀಘ್ರಪರಾಕ್ರಮಿಯಾದ ಶ್ರೀರಾಮನು, ಪರಶುರಾಮನ ಕೈಯಿಂದ ಶ್ರೇಷ್ಠವಾದ ವೈಷ್ಣವ ಧನುಸ್ಸನ್ನೂ ಮತ್ತು ಬಾಣವನ್ನೂ ತೆಗೆದುಕೊಂಡು ಕ್ಷಣಮಾತ್ರದಲ್ಲಿ ಧನುಸ್ಸನ್ನು ಬಗ್ಗಿಸಿ ನಾಣನ್ನು ಕಟ್ಟಿ ಬಾಣವನ್ನು ಹೂಡಿದನು.
ಈ ಕ್ರಿಯೆಗಳೆಲ್ಲವೂ ನಿಮಿಷ ಮಾತ್ರದಲ್ಲಿ ನಡೆದುಹೋದವು. ಶರ ಸಂಧಾನ ಮಾಡಿದ ನಂತರ ಕ್ರುದ್ಧನಾದ ಶ್ರೀರಾಮನು ಪರಶುರಾಮನಿಗೆ, "ಭಾರ್ಗವರಾಮ! ನೀನು ಬ್ರಾಹ್ಮಣನಾಗಿರುವೆ. ಮೇಲಾಗಿ ನನ್ನ ಗುರುಗಳಾದ ವಿಶ್ವಾಮಿತ್ರರ ಭಗಿನಿಯಾದ ಸತ್ಯವತಿಯ ಪೌತ್ರನಾಗಿರುವೆ. ಈ ಎರಡು ಕಾರಣಗಳಿಂದಾಗಿ ನನಗೆ ನೀನು ಪೂಜ್ಯನಾಗಿರುವೆ. ಆದುದರಿಂದ ಸಜ್ಜುಗೊಳಿಸಿರುವ ಪ್ರಾಣಾಪಹಾರ ಸಾಮರ್ಥ್ಯವುಳ್ಳ ಈ ಬಾಣವನ್ನು ನಿನ್ನ ಮೇಲೆ ಪ್ರಯೋಗಿಸಲು ನನಗೆ ಇಷ್ಟವಿಲ್ಲ. ನೀನು ತಪೋಬಲದಿಂದ ಸಾಧಿಸಿಕೊಂಡಿರುವ ಸ್ವೇಚ್ಛಾ ಗಮನವನ್ನಾದರೂ ಈ ಬಾಣಪ್ರಯೋಗದಿಂದ ವಿನಾಶಮಾಡುತ್ತೇನೆ. ಅಥವಾ ಅಪ್ರತಿಮವಾದ ಲೋಕವನ್ನು ಪಡೆಯಲು ಸಾಧಕವಾದ ನಿನ್ನ ತಪಃ ಫಲವನ್ನಾದರೂ ವಿನಾಶಗೊಳಿಸುತ್ತೇನೆ. ಈ ಎರಡರಲ್ಲಿ ನಿನಗೆ ಯಾವುದನ್ನು ಉಳಿಸಿಕೊಳ್ಳಬೇಕೆಂಬ ಆಶೆಯಿದೆಯೆಂಬುದನ್ನು ಕೂಡಲೇ ನಿರ್ಧರಿಸಿ ಹೇಳು. ಆದರೆ ದಿವ್ಯವಾದ, ಶತ್ರುಗಳ ದರ್ಪಧ್ವಂಸಕವಾದ, ಶತ್ರುಗಳನ್ನು ಜಯಿಸಲು ಸಮರ್ಥವಾಗಿರುವ, ವೈಷ್ಣವ ಧನುಸ್ಸಿನಿಂದ ಚ್ಯುತವಾಗಲಿರುವ ಈ ಬಾಣವು ಲಕ್ಷ್ಯವನ್ನು ಭೇದಿಸದೇ ವ್ಯರ್ಥವಾಗಿ ಕೆಳಗೆ ಬೀಳಲಾರದು" ಎಂದನು. ರಾಮನು ಶ್ರೇಷ್ಠವಾದ ವೈಷ್ಣವಧನುಸ್ಸನ್ನು ಧರಿಸಿರಲಾಗಿ, ಜಮದಗ್ನಿಯ ಮಗನಾದ ಪರಶುರಾಮನು ನಿರ್ವೀರ್ಯನಾಗಿ ವಿಹ್ವಲನಾಗಿ ಶ್ರೀರಾಮನನ್ನು ನೋಡಿದನು.
ರಾಮನ ದಿವ್ಯತೇಜಸ್ಸಿನಿಂದಾಗಿ ಗತವೀರ್ಯನಾದ ಪರಶುರಾಮನು ಕಮಲಲೋಚನನಾದ ರಾಮನಿಗೆ ಮಂದವಾದ ದನಿಯಲ್ಲಿ "ರಾಮ! ನಾನು ವಿಶ್ವದ ಕ್ಷತ್ರಿಯರೆಲ್ಲರನ್ನೂ ಇಪ್ಪತ್ತೊಂದು ಬಾರಿ ಸಂಹರಿಸಿ ಗಳಿಸಿದ ಈ ಭೂಮಿಯನ್ನು, ಯಜ್ಞದ ದಕ್ಷಿಣಾರೂಪವಾಗಿ ಕಶ್ಯಪರಿಗೆ ದಾನಮಾಡಿದಾಗ ಕಶ್ಯಪರು ಈ ನನ್ನ ಭೂಮಿಯಲ್ಲಿ ನೀನು ಕ್ಷಣಮಾತ್ರವೂ ಇರಕೂಡದೆಂದು ಹೇಳಿದರು. ಗುರುಗಳಾದ ಮಹಾತ್ಮರಾದ ಕಶ್ಯಪರಿಂದ ಹೀಗೆ ಆಜ್ಞಪ್ತನಾದ ನಾನು ಒಡನೆಯೇ ಅವರ ಮುಂದೆ ರಾತ್ರಿಯ ವೇಳೆಯಲ್ಲಿ ಭೂಮಿಯಲ್ಲಿ ವಾಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದೆನು. ಅಂದು ಮೊದಲ್ಗೊಂಡು ನಾನು ರಾತ್ರಿಯ ಕಾಲದಲ್ಲಿ ಭೂಮಿಯ ಮೇಲೆ ವಾಸಮಾಡುವುದಿಲ್ಲ. ಏಕೆಂದರೆ ಪೃಥ್ವಿಯು ಕಶ್ಯಪರ ಸ್ವತ್ತಾಯಿತು. ಆದುದರಿಂದ ನಾನು ನನ್ನ ಪ್ರತಿಜ್ಞೆಯಂತೆ ಮನಸ್ಸಿನ ವೇಗದಿಂದ ಉತ್ತಮೋತ್ತಮವಾದ ಮಹೇಂದ್ರ ಪರ್ವತಕ್ಕೆ ಹೋಗಲೇ ಬೇಕಾಗಿರುವುದರಿಂದ ನನ್ನ ಮನೋಗತಿಗೆ ಸಾಧಕವಾದ ತಪಸ್ಸನ್ನು ನೀನು ಧ್ವಂಸ ಮಾಡುವುದು ಬೇಡ. ಆದರೆ ನಾನು ನನ್ನ ತಪಸ್ಸಿನಿಂದ ಉತ್ತಮೋತ್ತಮವಾದ ಅನೇಕ ಲೋಕಗಳನ್ನು ಜಯಿಸಿದ್ದೇನೆ. ಉತ್ತಮೋತ್ತಮ ಲೋಕ ಪ್ರಾಪಕವಾದ ಆ ತಪಃ ಫಲವನ್ನೇ ನಿನ್ನ ಶರಕ್ಕೆ ಲಕ್ಷ್ಯವಾಗಿಡುವೆನು. ನೀನು ಅದರ ಮೇಲೆ ನಿನ್ನ ಬಾಣವನ್ನು ಪ್ರಯೋಗಿಸು. ಕಾಲವಿಳಂಬವಾಗದಿರಲಿ. ಈ ವೈಷ್ಣವ ಮಹಾಧನುಸ್ಸಿನ ತೋಲನ ಧಾರಣ ಶರಸಂಧಾನಗಳನ್ನು ಮಾಡಿರುವ ನಿನ್ನನ್ನು ನಾನು ಜನ್ಮ ಮೃತ್ಯು ಜರಾರಹಿತನೆಂದೂ, ಮಧುಹಂತಕನಾದ ಸುರೇಶ್ವರನಾದ ವಿಷ್ಣುವೆಂದೂ ತಿಳಿಯುತ್ತೇನೆ. ಅಪ್ರತಿಮಕರ್ಮನಾದ ನಿನ್ನಿಂದಾದ ಪರಾಭವದಿಂದ ನಾನು ನಾಚಿಕೆಪಡುವ ಕಾರಣವಿಲ್ಲ. ಏಕೆಂದರೆ ನಾನು ಪರಾಜಿತನಾಗಿರುವುದು, ತ್ರೈಲೋಕ್ಯನಾಥನಾದ, ಪೂರ್ಣತೇಜೋವಿಶಿಷ್ಟನಾದ ವಿಷ್ಣುವಿನಿಂದ ನೀನಿನ್ನು ತಡಮಾಡದೇ ಲಕ್ಷ್ಯರೂಪವಾಗಿಟ್ಟಿರುವ ನನ್ನ ಅಪಾರ ಪುಣ್ಯರಾಶಿಯನ್ನುದ್ದೇಶಿಸಿ ಅಪ್ರತಿಮವಾದ ಬಾಣವನ್ನು ಪ್ರಯೋಗಿಸು, ನೀನು ಬಾಣಪ್ರಯೋಗ ಮಾಡಿದ ನಂತರ ನಾನು ಪರ್ವತೋತ್ತಮವಾದ ಮಹೇಂದ್ರ ಪರ್ವತಕ್ಕೆ ಹೋಗುವೆನು" ಎಂದನು.
ಪರಶುರಾಮ ಹೀಗೆ ಹೇಳುತ್ತಿರಲಾಗಿ ಶ್ರೀಮಂತನಾದ ದಶರಥ ಪುತ್ರನಾದ ರಾಮನು ಪರಶುರಾಮನ ಅಪಾರ ಪುಣ್ಯಫಲವನ್ನುದ್ದೇಶಿಸಿ ವೈಷ್ಣವ ಧನುಸ್ಸಿಗೆ ಸಂಯೋಜಿಸಿದ್ದ ಬಾಣವನ್ನು ಪ್ರಯೋಗಿಸಿದನು. ಪರಶುರಾಮನು ತಾನು ಅರ್ಜಿಸಿದ್ದ ಪುಣ್ಯರಾಶಿಯು ವಿನಾಶ ಹೊಂದಿದನ್ನು ಮನಗಂಡು ಒಡನೆಯೇ ಮಹೇಂದ್ರ ಪರ್ವತವನ್ನು ಸೇರಿದನು.








Comments