top of page

ಅಯೋಧ್ಯಾ ಕಾಂಡ ಪ್ರಾರಂಭ (ರಾಮಾಯಣ ಕಥಾಮಾಲೆ 14)

ತಾಯಿ ತಂದೆಗಳ ಅನುಮತಿಯನ್ನು ಪಡೆದು, ಸೋದರಮಾವನ ಮನೆಗೆ ಹೊರಟ ಮಹಾತ್ಮನಾದ ಭರತನು, ನಿತ್ಯ ಶತ್ರುಗಳನ್ನು ಅನುದಿನವು ಸಂಹರಿಸುತ್ತಿದ್ದ ಶತ್ರುಘ್ನನನ್ನು, ಜೊತೆಯಲ್ಲಿಯೇ ವಿಶ್ವಾಸ ಪೂರ್ವಕವಾಗಿ ಕರೆದುಕೊಂಡು ಹೋದನು. ಅಲ್ಲಿ ಭರತನು ಆದರಪೂರ್ವಕವಾದ ಸತ್ಕಾರವನ್ನು ಪಡೆಯುತ್ತಾ, ಸಹೋದರನೊಡನೆ ಸುಖವಾಗಿದ್ದನು. ಸಾವಿರಾರು ಕುದುರೆಗಳಿಗೆ ಒಡೆಯನಾದ ಯಧಾಜಿತನು ಶತ್ರುಘ್ನನನ್ನು ತನ್ನ ಮಗನಂತೆಯೇ ಲಾಲಿಸಿ ಪೋಷಿಸುತ್ತಿದ್ದನು.


ತನ್ನ ಶರೀರದಿಂದಲೇ ಹೊರಬಂದಿರುವ ನಾಲ್ಕು ತೋಳುಗಳಂತಿದ್ದ ಪುರುಷಶ್ರೇಷ್ಠರಾದ ನಾಲ್ವರು ಪುತ್ರರೂ, ದಶರಥನಿಗೆ ಬಹಳ ಪ್ರಿಯರಾಗಿಯೇ ಇದ್ದರು. ಆ ನಾಲ್ವರಲ್ಲಿಯೂ ಮಹಾತೇಜಸ್ವಿಯಾದ ಶ್ರೀರಾಮನು ದಶರಥನಿಗೆ ಹೆಚ್ಚು ಸಂತೋಷವನ್ನು ಉಂಟುಮಾಡುವವನಾಗಿದ್ದನು.


ಅದಕ್ಕೆ ಕಾರಣವೆಂದರೆ, ಶ್ರೀ ರಾಮನು ಕಡುಚೆಲುವನು, ವೀರ್ಯವಂತನು, ಇವನಿಗೆ ಎಣೆಯಾದ ಬೇರೆ ಪುತ್ರನು ಭೂಮಿಯಲ್ಲಿಯೇ ಯಾರು ಇರಲಿಲ್ಲ. ಶ್ರೀರಾಮನು ಗುಣಗಳಲ್ಲಿ ತಂದೆಯಾದ ದಶರಥನಿಗೆ ಅನುರೂಪನಾಗಿದ್ದನು. ಶ್ರೀರಾಮನು ಪ್ರಶಾಂತವಾದ ಮನಸ್ಸುಳ್ಳವನು, ಯಾವುದೇ ಕಾರಣದಿಂದಲೂ ಅವನ ಮನಸ್ಸು ಉದ್ವೇಗಗೊಳ್ಳುತ್ತಿರಲಿಲ್ಲ. ಮೃದುವಾದ ಮಾತುಗಳನ್ನಾಡುವವನು, ಯಾರಾದರೂ ಅವನೋಡನೆ ನಿಷ್ಠರವಾಗಿ ಮಾತನಾಡಿದರೂ ಅವನು ಮಾತ್ರ ನಿಷ್ಠುರತೆಯಿಂದ ಉತ್ತರಿಸುವವನಲ್ಲ. ಯಾರಾದರೂ, ಯಾವಾಗಲೂ, ಯಾವ ಕಾರಣದಿಂದಲಾದರೂ, ಮಾಡುವ ಒಂದು ಉಪಕಾರದಿಂದಲೂ ಶ್ರೀರಾಮನು ಸಂತೋಷಗೊಳ್ಳುವನು. ಆದರೆ ಒಬ್ಬನು ತನ್ನ ವಿಷಯದಲ್ಲಿ ನೂರಾರು ಅಪಕಾರಗಳನ್ನು ಮಾಡಿದ್ದರೂ, ಮನೋವಿಗ್ರಹವಿದ್ದ ಶ್ರೀರಾಮನು ಅಪಕಾರಗಳನ್ನು ಸ್ಮರಿಸಿಕೊಳ್ಳುತ್ತಿರಲಿಲ್ಲ. ಅಸ್ತ್ರಾಭ್ಯಾಸ ಮಾಡುವಾಗ ಮಧ್ಯದಲ್ಲಿ ಸಿಗುತ್ತಿದ್ದ ವಿರಾಮ ಕಾಲಗಳಲ್ಲಿ ಸದಾಚಾರ ಸಂಪನ್ನರೊಡನೆಯೂ, ಜ್ಞಾನ ವೃದ್ಧರೋಡನೆಯೂ, ವಯೋವೃದ್ಧರೊಡನೆಯೂ, ಸಜ್ಜನರೊಡನೆಯೂ, ರಾಜಯೋಗವಾದ ಮಾತುಗಳನ್ನಾಡುವವನಾಗಿದ್ದನು.


ಶ್ರೀರಾಮನು ಮಹಾ ಬುದ್ಧಿಶಾಲಿಯೂ, ಸವಿ ಮಾತುಗಳನ್ನಾಡುವವನಾಗಿದ್ದನು. ಮಹಾ ವೀರ್ಯವಂತನಾದರೂ ತನ್ನಲ್ಲಿ ಪರಾಕ್ರಮವಿದೆಯೆಂಬ ಅಹಂಕಾರವು ಅವನಿಗೆ ಇರಲಿಲ್ಲ. ಶ್ರೀರಾಮನು ವಿದ್ವಾಂಸರ, ಶೀಲವೃದ್ಧ-ಜ್ಞಾನವೃದ್ಧರ-ವಯೋವೃದ್ಧರ ಸೇವೆಯಲ್ಲಿ ನಿರತನು. ಇಂತಹ ಸಕಲ ಸದ್ಗುಣ ಸಂಪನ್ನನಾದ ಶ್ರೀ ರಾಮನನ್ನು ಕಂಡರೆ ಪ್ರಜೆಗಳಿಗೆ ವಿಶೇಷವಾದ ಪ್ರೀತಿ. ಅಂತೆಯೇ ಪ್ರಜೆಗಳ ವಿಷಯದಲ್ಲಿ ಶ್ರೀರಾಮನಿಗೂ ವಿಶೇಷವಾದ ಪ್ರೀತಿ.


ಶ್ರೀರಾಮನು ದಯಾಪರನು, ಕೋಪವನ್ನು ಜಯಿಸಿದವನು, ಬ್ರಾಹ್ಮಣರನ್ನು ಸತ್ಕರಿಸುವವನು. ದೀನರ ವಿಷಯದಲ್ಲಿ ವಿಶೇಷವಾದ ಅನುಕಂಪವುಳ್ಳವನು, ಧರ್ಮವನ್ನು ತಿಳಿದವನು, ಇಂದ್ರಿಯಗಳೆಂಬ ಕುದುರೆಗಳಿಗೆ ಕಡಿವಾಣಗಳನ್ನು ಹಾಕಿ, ಸರ್ವದಾ ಸೆಳೆದು ಹಿಡಿದಿರುವವನಾಗಿದ್ದನು. ಶ್ರೇಯಸ್ಸಿಗೆ ಸಾಧಕವಲ್ಲದ ವಿಷಯಗಳಲ್ಲಿ ಶ್ರೀರಾಮನಿಗೆ ಆಸಕ್ತಿ ಇರಲಿಲ್ಲ. ಧರ್ಮ ವಿರುದ್ಧವಾದ ಅಥವಾ ವಿಶ್ಲೇಷವಾದ ಕಥನಗಳಲ್ಲಿಯೂ ಮತ್ತು ಶ್ರಾವಣಗಳಲ್ಲಿ ಆಸಕ್ತಿ ಇರಲಿಲ್ಲ. ವೈದಿಕ ಅಥವಾ ತಾರ್ಕಿಕ ವಿಷಯಗಳಲ್ಲಿ, ನಿರ್ಣಾಯಕವಾದ ಚರ್ಚೆಯು ನಡೆದಾಗ ಒಂದಾದ ಮೇಲೆ ಮತ್ತೊಂದರಂತೆ ಯುಕ್ತಿಗಳನ್ನು ಹೇಳುತ್ತಾ ಬೃಹಸ್ಪತಿಯಂತೆ ತನ್ನ ಸಿದ್ದಾಂತವನ್ನು ಸಮರ್ಥಿಸಿಕೊಳ್ಳುತ್ತಿದ್ದನು.


ಹೀಗೆ ಭೂಲೋಕದ ಪ್ರಜೆಗಳ ಮಧ್ಯದಲ್ಲಿ ಸಕಲ ಸದ್ಗುಣಗಳಿಂದ ಕೂಡಿದ್ದ, ದಶರಥನ ಮಗನಾದ ಶ್ರೀ ರಾಮನು, ಮೂರು ಲೋಕಗಳಲ್ಲಿಯೂ ಸಮ್ಮಾನ್ಯನು. ತನ್ನಲ್ಲಿದ್ದ ಕ್ಷಮಾಗುಣದಿಂದ ಭೂದೇವಿಗೆ ಸಮಾನನು, ಬುದ್ಧಿಯಲ್ಲಿ ಬೃಹಸ್ಪತಿಗೆ ಸದೃಶನು, ಶೌರ್ಯ ಪರಾಕ್ರಮಗಳಲ್ಲಿ ಇಂದ್ರನಿಗೆ ಸಮಾನನು ಆಗಿದ್ದನು. ಇಂತಹ ಅಪಾರವಾದ ಮತ್ತು ಅನುಪಮವಾದ ಗುಣಗಳಿಂದ ಕೂಡಿದ ಮಗನನ್ನು ನೋಡಿ ಹಿರಿಹಿಗ್ಗಿದ ಪರಂತಪನಾದ ದಶರಥನು ಯೋಚಿಸತೊಡಗಿದನು.


ವಯೋವೃದ್ಧನಾದ, ಜ್ಞಾನವೃದ್ಧನಾದ ದಶರಥನಿಗೆ ಶ್ರೀರಾಮನಲ್ಲಿ ಈ ವಿಧವಾದ ಪ್ರೀತಿ ಉಂಟಾಯಿತು. ತನ್ನ ಕಣ್ಮುಂದೆಯೇ ಶ್ರೀರಾಮನು ರಾಜನಾಗಬೇಕೆನ್ನಿಸಿತು. ಆದರೆ ತಾನು ಜೀವಿಸಿರುವಾಗ ಶ್ರೀ ರಾಮನು ಹೇಗೆ ರಾಜನಾಗುವುದು? ಎಂದು ಯೋಚಿಸಿದನು. 'ಕದಾ ರಾಮಂ ಸುತಂ ದ್ರಕ್ಷಾಮಿ ಅಭಿಷಿಕ್ತ ಮಹಂ ಪ್ರಿಯಂ' - "ನನಗೆ ಅತ್ಯಂತ ಪ್ರಿಯವಾದ ಶ್ರೀರಾಮನು ರಾಜ್ಯಸಿಂಹಾಸನದಲ್ಲಿ ಅಭಿಷೇಕ್ತನಾಗುವುದನ್ನು ನಾನೆಂದು ಕಂಡೇನು?" ಎಂಬ ಅತ್ಯುತ್ಕಟವಾದ ಪ್ರೀತಿಯು ದಶರಥನ ಹೃದಯದಲ್ಲಿ ಉಂಟಾಯಿತು. ಈ ನನ್ನ ಇಳಿವಯಸ್ಸಿನಲ್ಲಿ ನಾನು ಆಳುತ್ತಿರುವ ಸಮಗ್ರವಾದ ಈ ಭೂಮಂಡಲವನ್ನು ಮಗನು ಆಳುವುದನ್ನು ಕಣ್ತುಂಬ ನೋಡಿ, ಆನಂದ ಪಟ್ಟು ಅನಂತರ ಸ್ವರ್ಗಕ್ಕೆ ಹೋಗಬೇಕೆಂಬುದಾಗಿ ಯೋಚಿಸಿ, ಮಂತ್ರಿಗಳೊಡನೆ ಸಮಾಲೋಚಿಸಿ, ಶ್ರೀರಾಮನನ್ನು ಯುವರಾಜನನ್ನಾಗಿ ಮಾಡಬೇಕೆಂದು ನಿಶ್ಚಯಿಸಿದನು. ಧರ್ಮಾತ್ಮನಾದ ದಶರಥನು ತನ್ನ ಮತ್ತು ಪ್ರಜೆಗಳ ಶ್ರೇಯಸ್ಸಿಗೂ - ಹಿತಕ್ಕೂ ಮತ್ತು ಶ್ರೀರಾಮನ ಮೇಲಿನ ಪ್ರೀತಿಯಿಂದಲೂ, ಅಭಿಷೇಕದ ಕಾಲವು ಬಂದೊಡನೆ ಪಟ್ಟಾಭಿಷೇಕಕ್ಕೆ ಬೇಕಾಗುವ ಸಂಭಾರಗಳನ್ನು ಸಿದ್ದಪಡೆಸುವಂತೆ ಮಂತ್ರಿಗಳನ್ನು ತ್ವರೆಗೊಳಿಸಿದನು. ತನ್ನ ರಾಜ್ಯದ ಅನೇಕ ನಗರಗಳಲ್ಲಿ ವಾಸ ಮಾಡುತ್ತಿದ್ದ ಜನರನ್ನು, ಗ್ರಾಮಾಂತರ ಪ್ರದೇಶಗಳ ಜನರನ್ನು ಮತ್ತು ಪೃಥ್ವಿಯಲ್ಲಿದ್ದ ಇತರ ರಾಜರನ್ನು ದಶರಥನು ಶ್ರೀರಾಮನ ಯುವರಾಜ ಅಭಿಷೇಕಕ್ಕಾಗಿ ಕರೆಸಿದನು. ಅವಸರದ ಕಾರಣದಿಂದಾಗಿ ದಶರಥನು ಕೇಕಯ ಮಹಾರಾಜನನ್ನಾಗಲಿ ಅಥವಾ ಶ್ರೀರಾಮನ ಮಾವನಾದ ಜನಕ ಮಹಾರಾಜನನ್ನಾಗಲಿ ಆಹ್ವಾನಿಸಲು ರಾಜಭಟರನ್ನು ಕಳುಹಿಸಿಕೊಡಲಿಲ್ಲ.


ಶ್ರೀರಾಮನ ಯುವರಾಜ ಪಟ್ಟಾಭಿಷೇಕವಾದ ನಂತರ ಅವರಿಗೆ ಆ ಪ್ರಿಯವಾರ್ತೆಯನ್ನು ತಿಳಿಸಬೇಕೆನ್ನುವ ಅಭಿಪ್ರಾಯವು ದಶರಥನಿಗಿದ್ದಿತು.

Comments


bottom of page