top of page

ಮಂಥರೆ ಮತ್ತು ಕೈಕೆಯ ಸಂಭಾಷಣೆ (ರಾಮಾಯಣ ಕಥಾಮಾಲೆ 17)

ಮಂಥರೆಯ ಇಷ್ಟು ಪ್ರಚೋದನೆಯ ಮಾತುಗಳನ್ನಾಡಿದರೂ ಕೈಕೇಯಿಯ ಮನಸ್ಸು ಸ್ವಲ್ಪವಾದರೂ ಉದ್ವೇಗಗೊಳಲಿಲ್ಲ. ಮಂಥರೆಯು ಹೇಳಿದ ಮಾತುಗಳಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವಾಗುವುದೆಂಬುದನ್ನು ಗ್ರಹಿಸಿ ಹರ್ಷಪೂರ್ಣಳಾದ ಕೈಕೇಯಿಯು, ಶರತ್ಕಾಲದ ಚಂದ್ರನ ಬೆಳದಿಂಗಳಿನಂತೆ ಪ್ರಫುಲ್ಲವಾದ ಮುಖಾರವಿಂದದಿಂದ ಕೂಡಿದವಳಾಗಿ ಹಾಸಿಗೆಯಿಂದ ಮೇಲೆದ್ದು ಕುಳಿತಳು. ರಾಮಾಭಿಷೇಕದ ಸುವಾರ್ತೆಯನ್ನು ಹೇಳಿದುದಕ್ಕಾಗಿ ದಿವ್ಯವಾದ ಶುಭಾವಹವಾದ ಕಂಠಾಭರಣವನ್ನೇ ತೆಗೆದು ಮಂಥರೆಗೆ ಪಾರಿತೋಷಕವಾಗಿ ಕೊಟ್ಟು, "ಮಂಥರೇ! ಶ್ರೀರಾಮನ ಪಟ್ಟಾಭಿಷೇಕವೆಂಬ ಪರಮ ಪ್ರಿಯವಾದ ಮಾತನ್ನು ನನಗೆ ನೀನೀಗ ಹೇಳಿರುವೆ. ಇಂತಹ ಪರಮ ಪ್ರಿಯವಾದ, ಸಂತೋಷ ಜನಕವಾದ ರಾಮ ಪಟ್ಟಾಭಿಷೇಕ ವಾರ್ತೆಯನ್ನು ಹೇಳಿರುವ ನಿನಗೆ ನಾನೀಗ ಪಾರಿತೋಷಕವಾಗಿ ಕೊಟ್ಟಿರುವ ಆಭರಣವು ಏನೇನೂ ಸಾಲದು. ಮತ್ತೇನನ್ನು ಕೊಡಲಿ ಅಥವಾ ಬೇರೆ ಯಾವ ಸಂತೋಷ ಜನಕವಾದ ಕಾರ್ಯವನ್ನು ಮಾಡಿ ಕೊಡಲಿ? ಹೇಳು ಮಂಥರೆ! ಧಾತ್ರಿ! ರಾಮ-ಭರತರಲ್ಲಿ ನನಗೆ ತಾರತಮ್ಯವೇ ಇಲ್ಲ. ಭರತನು ನನಗೆಷ್ಟು ಪ್ರಿಯನೋ, ರಾಮನೂ ಅಷ್ಟೇ ಪ್ರಿಯನಾಗಿದ್ದಾನೆ. ಆದುದರಿಂದ ರಾಜನು ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಲು ನಿಶ್ಚಯಿಸಿರುವುದು ನನಗೆ ಹೆಚ್ಚು ಸಂತೋಷವಾಗಿದೆ. ಯಾವುದೇ ಅನರ್ಘ್ಯ ವಸ್ತುವೂ ಇಂತಹ ಶ್ರೇಷ್ಠ ವಾದ ಪ್ರಿಯ ವಾರ್ತೆಗೆ ಸಾಟಿಯಾದ ಬಹುಮಾನವಾಗುವುದಿಲ್ಲ. ಆದುದರಿಂದ ನಿನಗೆ ಬೇಕಾದ ವಸ್ತುವನ್ನು ನಿಸ್ಸಂಕೋಚವಾಗಿ ಕೇಳು" ಎಂದಳು.



ಕೈಕೇಯಿಯು ತನ್ನ ಅಭಿಪ್ರಾಯವನ್ನು ಇಷ್ಟು ಸ್ಪಷ್ಟವಾಗಿ ತಿಳಿಸಿದರೂ ಮಂಥರೆಯು ತನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. 'ಇವಳೆಂತಹ ಮೂಢೆ ಇರಬಹುದು?' ಎಂದು ಚಿಂತಿಸಿದ ಮಂಥರೆಯು, ಕೈಕೇಯಿಯ ಮೌಢ್ಯಕ್ಕಾಗಿ ಅವಳನ್ನು ನಿಂದಿಸುತ್ತಾ, ಅವಳು ಪಾರಿತೋಷಿಕವಾಗಿ ಕೊಟ್ಟಿದ್ದ ಕಂಠಾಭರಣವನ್ನು ಅವಳ ಮುಂದೆಯೇ ಎಸೆದು, ತಾನು ಹೇಳಿದ ಹಿತವಾಕ್ಯವನ್ನು ಕೇಳಲಿಲ್ಲವೆಂದು ಕೋಪದಿಂದಲೂ, ರಾಮನಿಗೆ ಅಭಿಷೇಕವಾಗಿಬಿಟ್ಟರೆ ಮುಂದೆ ಮಹಾನರ್ಥವು ಸಂಭವಿಸುವುದೆಂಬ ದುಃಖದಿಂದಲೂ ಕೂಡಿದವಳಾಗಿ ಕೈಕೇಯಿಗೆ, "ಏನೂ ತಿಳಿಯದ ಹಸುಳೆಯಂತಿರುವವಳೇ! ಅನುಚಿತವಾದ ಕಾಲದಲ್ಲಿ ಏನಿದು ನಿನ್ನ ಸಂತೋಷ? ನೀನೀಗ ಶೋಕಸಾಗರದ ಮಧ್ಯಭಾಗದಲ್ಲಿ ಮುಳುಗಿ ಹೋಗುತ್ತಿರುವೆಯೆಂಬುದನ್ನೂ ಅರಿತುಕೊಂಡಿಲ್ಲವಲ್ಲ ! ನಿನಗೊದಗಿರುವ ಈ ವಿಪತ್ತನ್ನು ಮನಗಂಡು ನಾನು ದುಃಖ ಪೀಡಿತಳಾಗಿದ್ದೇನೆ. ಇಂತಹ ಮಹಾವ್ಯಸನದಲ್ಲಿ ಮುಳುಗಿ ಶೋಕಿಸಬೇಕಾಗಿರುವ ಈ ಸಮಯದಲ್ಲಿ ನೀನೀಗ ಸಂತೋಷಪಡುತ್ತಿರುವೆ. ನಿನ್ನಲ್ಲುಂಟಾಗಿರುವ ಇಂತಹ ವೈಪರೀತ್ಯವನ್ನು ಕಂಡು ಮನಸ್ಸಿನಲ್ಲಿಯೇ ನಗುತ್ತಲೂ ಇದ್ದೇನೆ.


ದಶರಥನ ಈ ಸಾಮ್ರಾಜ್ಯದಲ್ಲಿ ರಾಮನಿಗೆ ಎಷ್ಟು ಹಕ್ಕಿದೆಯೋ ಭರತನಿಗೂ ಅಷ್ಟೇ ಹಕ್ಕಿದೆ. ಈ ವಿಷಯವು ರಾಮನಿಗೆ ತಿಳಿದಿರುವುದು. ಪಟ್ಟಮಹಿಷಿಯಾಗಿದ್ದ ಕೌಸಲ್ಯೆಯು ರಾಮಾಭಿಷೇಕವಾದ ಬಳಿಕ ರಾಜಮಾತೆಯೂ ಆಗಿ, ಮಹತ್ತರವಾದ ಸಂಪತ್ತನ್ನೂ ದಶರಥನ ಅನುಪಮವಾದ ಪ್ರೀತಿಯನ್ನೂ ಗಳಿಸಿ ಶತ್ರುಸಮಾನರಾದ ತನ್ನ ಸವತಿಯರನ್ನು ಕೀಳಾಗಿ ಕಾಣುತ್ತಾ, ವಿಖ್ಯಾತೆಯಾಗಿ ವೈಭವದಿಂದಿರುವಾಗ, ಅವಳನ್ನು ನೀನು ಸಾಮಾನ್ಯ ದಾಸಿಯಂತೆ ಕೈಮುಗಿದು ನಿಂತು ಉಪಚರಿಸಲಿರುವೆ. ಹಾಗೇನಾದರೂ ಆದರೆ ನಿನ್ನ ದಾಸಿಯಾಗಿರುವ ನಾವೆಲ್ಲರೂ ನಿನ್ನ ಜೊತೆಯಲ್ಲಿಯೇ ಕೌಸಲ್ಯೆಯ ದಾಸಿಯರಾಗುತ್ತೇವೆ. ಇಷ್ಟು ಮಾತ್ರವಲ್ಲ. ನಿನ್ನ ಮಗನೂ ರಾಮನ ದಾಸನಾಗುತ್ತಾನೆ. ರಾಮನು ರಾಜನಾಗುವುದರಿಂದ ರಾಮನಿಗೆ ಸಂಬಂಧಿಸಿದ ಶ್ರೇಷ್ಠ ಸ್ತ್ರೀಯರೆಲ್ಲರೂ ಪರಮ ಹರ್ಷಿತರಾಗುತ್ತಾರೆ."


ಹೀಗೆ ಮಂಥರೆಯು ರಾಮನ ವಿಷಯದಲ್ಲಿ ಬಹಳ ಅಪ್ರಿಯವಾದ ಮಾತುಗಳನ್ನಾಡುತ್ತಿದ್ದರೂ ಕೈಕೇಯಿಯು ಶ್ರೀರಾಮನ ಅನೇಕ ಗುಣಗಳನ್ನೇ ವರ್ಣಿಸುತ್ತಾ, "ಮಂಥರೇ! ಶ್ರೀರಾಮನು ಧರ್ಮಜ್ಞನು, ಗುಣವಂತನು ಮಾಡಿದ ಸ್ವಲ್ಪವೇ ಉಪಕಾರವನ್ನು ಸ್ಮರಿಸತಕ್ಕವನು. ಸತ್ಯವಾದಿಯು ಅಂತಃಶುದ್ಧಿ, ಬಹಿಃಶುದ್ಧಿಯುಳ್ಳವನು. ಪಿತೃ ಪಿತಾಮಹರಿಂದ ಅನುಭೂತವಾದ ರಾಮನ ರಾಜ್ಯವನ್ನು ನೂರು ವರ್ಷಗಳ ಅನಂತರವಾದರೂ ನರಶ್ರೇಷ್ಠನಾದ ಭರತನು ಪಡೆದುಕೊಳ್ಳುವನೆಂಬುದು ನಿಶ್ಚಯ" ಎಂದಳು.


ಕೈಕೇಯಿಯ ಆ ಮಾತುಗಳನ್ನು ಕೇಳಿ ಮಂಥರೆಗೆ ಬಹಳ ದುಃಖವಾಯಿತು. ತನ್ನ ಪ್ರಯತ್ನವು ಫಲಿಸಲಿಲ್ಲವೆಂದು ದೀರ್ಘವಾಗಿ ನಿಟ್ಟುಸಿರು ಬಿಟ್ಟು ಪುನಃ ಕೈಕೇಯಿಗೆ, "ಕೈಕೇಯಿ! ನೂರು ವರ್ಷಗಳು ಕಳೆದ ನಂತರವಾದರೂ ಭರತನು ಕೂಡ ರಾಜನಾಗುವನು ಎಂಬ ನಿನ್ನ ಅಭಿಪ್ರಾಯವು ಸರಿಯಲ್ಲ. ಸಂಪ್ರದಾಯವೂ ಹಾಗೆ ಬೆಳೆದು ಬಂದಿಲ್ಲ. ರಾಮನು ನಾಳೆ ರಾಜನಾಗುತ್ತಾನೆ. ರಾಮನ ಅನಂತರದಲ್ಲಿ ಅವನ ಮಗನು ರಾಜನಾಗುತ್ತಾನೆ. ಹೀಗಾಗಿ ಭರತನು ರಾಜವಂಶದಿಂದಲೇ ಚ್ಯುತನಾಗುತ್ತಾನೆ. ಮುಂದೆ ಭರತನಿಗಾಗಲೀ, ಅವನ ಮಕ್ಕಳಿಗಾಗಲೀ ರಾಜ್ಯವು ಸಿಗುವ ಸಾಧ್ಯತೆಯೇ ಇಲ್ಲ. ಭರತನ ವಿಷಯದಲ್ಲಿ ನೀನೂ ಅಪರಾಧವನ್ನೆಸಗಿರುವೆ. ಅವನಿನ್ನೂ ಚಿಕ್ಕ ವಯಸ್ಸಿನವನಾಗಿರುವಾಗಲೇ ಅವನನ್ನು ಅವನ ಸೋದರ ಮಾವನ ಮನೆಗೆ ಕಳುಹಿಸಿಕೊಟ್ಟೆ. ಅವನಿಲ್ಲಿಯೇ ಇದ್ದಿದ್ದರೇ ರಾಜನು ರಾಮನ ವಿಷಯದಲ್ಲಿ ಪಕ್ಷಪಾತ ಮಾಡುವ ಸಾಧ್ಯತೆಯಿರಲಿಲ್ಲ. ಭರತನ ಮೇಲೆಯೂ ರಾಜನಿಗೆ ಅನುರಾಗವಿರುತ್ತಿದ್ದಿತು. ಭರತನ ಜೊತೆಯಲ್ಲಿಯೇ ಹೋಗಿರುವುದರಿಂದ ಶತ್ರುಘ್ನನಿಗೂ ಇದೇ ಪಾಡಾಯಿತು. ರಾಮ ಲಕ್ಷ್ಮಣರಲ್ಲಿ ಪರಸ್ಪರವಾಗಿರುವ ಭಾತೃ ಸ್ನೇಹವು ಅನ್ಯಾದೃಶವಾಗಿದೆ. ಲಕ್ಷ್ಮಣನು ಯಾವಾಗಲೂ ರಾಮನ ರಕ್ಷಣೆಯಲ್ಲಿಯೇ ಬದ್ಧ ಕಂಕಣನಾಗಿರುತ್ತಾನೆ. ಅಂತೆಯೇ ರಾಮನೂ ಲಕ್ಷ್ಮಣನ ರಕ್ಷಣೆಯಲ್ಲಿ ಜಾಗರೂಕನಾಗಿರುತ್ತಾನೆ. ಈ ಕಾರಣದಿಂದ ಲಕ್ಷ್ಮಣನ ವಿಷಯದಲ್ಲಿ ರಾಮನೆಂದಿಗೂ ಪಾಪ ಕಾರ್ಯವನ್ನು ಮಾಡಲಾರನು. ಭರತನ ವಿಷಯದಲ್ಲಿ ಪಾಪ ಕಾರ್ಯವನ್ನು ಮಾಡಿಯೇ ತೀರುವನು. ಅವನ ವಿನಾಶಕ್ಕಾಗಿಯೇ ಸತತವಾಗಿ ಪ್ರಯತ್ನವನ್ನು ಮಾಡುವನು.ಇದರಲ್ಲಿ ಸಂಶಯವೇ ಇಲ್ಲ. ಆದುದರಿಂದ ಸೋದರಮಾವನ ಮನೆಯಿಂದಲೇ ಭರತನು ಅರಣ್ಯಕ್ಕೆ ಬೇಗ ಹೊರಟುಹೋಗಲಿ. ಈ ಸಮಯದಲ್ಲಿ ಇದೇ ನನಗೆ ಸಮುಚಿತನಾಗಿ ಕಾಣುತ್ತಾನೆ. ಹೀಗೆ ಮಾಡಿದರೆ ನಿನ್ನ ಸವತಿಯ ಪಕ್ಷಕ್ಕೂ ಶ್ರೇಯಸ್ಸುಂಟಾಗುತ್ತದೆ. ನಿನ್ನ ಮೌಢ್ಯವೇನೇ ಇರಲಿ, ನಾನಂತೂ ಮುಂದೇನಾಗುವುದೆಂಬುದನ್ನು ನಿರ್ಧಾರಮಾಡಿ ಹೇಳಿ ಬಿಡುತ್ತೇನೆ. ಅಖಂಡ ಸಾಮ್ರಾಜ್ಯವನ್ನು ರಾಮನು ವಹಿಸಿಕೊಂಡ ಕೂಡಲೇ ಭರತನೊಡನೆ ನೀನು ದೀನಳಾಗುವೆ. ಅಶುಭವನ್ನೂ, ಪರಾಭವವನ್ನೂ ಹೊಂದುವೆ. ರಾಮನು ರಾಜ್ಯವನ್ನು ಪಡೆದೊಡನೆಯೇ ಭರತನು ಉಳಿಯಲಾರನು. ಆದುದರಿಂದ ಕಾಲವು ಮೀರಿ ಹೋಗುವುದರೊಳಗಾಗಿ ಸಂಪೂರ್ಣವಾಗಿ ಸಮಾಲೋಚಿಸು. ನಿನ್ನ ಮಗನಿಗೆ ರಾಜ್ಯವು ಸಿಕ್ಕಬೇಕು. ಇಷ್ಟು ಮಾತ್ರವಲ್ಲ ಈಗ ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಸಿದ್ಧನಾಗಿರುವ ರಾಮನನ್ನು ಅರಣ್ಯಕ್ಕೆ ಕಳುಹಿಸುವ ಉಪಾಯವನ್ನು ಯೋಚಿಸಬೇಕು" ಎಂದಳು.

Comments


bottom of page