ಮಂಥರೆಯ ದುರ್ವಚನ (ರಾಮಾಯಣ ಕಥಾಮಾಲೆ 16)
- Ganapati Hegde Moodkani

- Sep 7
- 2 min read
ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದ, ಕಡೆಗೆ ಕೈಕೆಯ ಜೊತೆಯಲ್ಲಿದ್ದು, ಕೈಕೆಯ ತಂದೆಯ ಮನೆಯಿಂದ ಅವಳ ಜೊತೆಯಲ್ಲೇ ಬಂದ ದಾಸಿ ಒಬ್ಬಳು, ಚಂದ್ರನ ಬೆಳದಿಂಗಳ ಸಮಾನವಾದ ಕಾಂತಿಯಿಂದ ಕೂಡಿದ್ದ ಉಪ್ಪರಿಗೆಯನ್ನು ಸ್ವೇಚ್ಛೆಯಿಂದ ಹತ್ತಿದಳು. ಆ ಸಮಯದಲ್ಲಿ ಶ್ರೀ ರಾಮನು ಪಟ್ಟಾಭಿಷೇಕದ ಸಲುವಾಗಿ ರಾಜಮಾರ್ಗವೂ ನೀರಿನಿಂದ ಶುದ್ಧಗೊಳಿಸಲ್ಪಟ್ಟಿದ್ದಿತು.
ಎಲ್ಲೆಡೆಗಳಲ್ಲಿಯೂ ಸುಗಂಧಮಯವಾದ ಹೂಗಳನ್ನೆರೆಚಿ ಬೀದಿಗಳನ್ನು ಸಿಂಗರಿಸಿದ್ದರು. ಅಂತಹ ರಮ್ಯವಾದ ಅಯೋಧ್ಯಾ ಪಟ್ಟಣವನ್ನು ಉಪ್ಪರಿಗೆ ಮೇಲಿನಿಂದ ಮಂಥರೆಯು ನೋಡಿದಳು. ಪತಾಕೆಗಳಿಂದಲೂ, ಉತ್ಕ್ರಾಷ್ಟವಾದ ಧ್ವಜಗಳಿಂದಲೂ ನಗರವು ಸಿಂಗರಸಲ್ಪಟ್ಟಿದ್ದಿತು. ಬ್ರಾಹ್ಮಣರು ಶ್ರೀರಾಮನಿಗೆ ಅರ್ಪಿಸುವ ಸಲುವಾಗಿ ಹೂಮಾಲೆಗಳನ್ನು, ಮೋದಕಗಳನ್ನು ಹಿಡಿದು 'ಶ್ರೀ ರಾಮೋ ಜಯತು ರಾಮ ರಾಮ ಜಯತು' ಎಂಬುದಾಗಿ ಜಯ ಘೋಷಗಳನ್ನು ಮಾಡುತ್ತಿದ್ದರು. ದೇವಾಲಯಗಳನ್ನು ಭೂಮಾಲೆಗಳಿಂದ ಸಿಂಗರಿಸಿದ್ದರು. ಮಂಗಳವಾದ್ಯಗಳು ಮೊಳಗುತ್ತಿದ್ದವು. ಶ್ರೀರಾಮನ ಪಟ್ಟಾಭಿಷೇಕದ ವಾರ್ತೆಯನ್ನು ಕೇಳಿ ಆನಂದಪುಳಕಿತರಾಗಿದ್ದ ಜನರಿಂದ ಅಯೋಧ್ಯೆಯು ತುಂಬಿಹೋಗಿದ್ದಿತು. ಶ್ರೀರಾಮನ ಪಟ್ಟಾಭಿಷೇಕದ ವಾರ್ತೆಯಿಂದ ಇಷ್ಟೊಂದು ಸಂಭ್ರಮ ವಿಶಿಷ್ಟವಾಗಿದ್ದ ಅಯೋಧ್ಯಾನಗರಿಯನ್ನು ಕೈಕೇಯಿಯ ಅಂತಪುರದ ಉಪ್ಪರಿಗೆಯ ಮೇಲೆ ನಿಂತಿದ್ದ ಮಂಥರೆಯು ಕಂಡು ಆಶ್ಚರ್ಯಭರಿತಳಾದಳು.
ಆ ವೇಳೆಗೆ ಸರಿಯಾಗಿ ಶ್ರೀರಾಮನ ಪಟ್ಟಾಭಿಷೇಕ ವಾರ್ತೆಯನ್ನು ಕೇಳಿ, ಆನಂದತುಂದಿಲಳಾಗಿ ವಿಕಸಿತವಾದ ಕಣ್ಣುಗಳಿಂದ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದ, ದಾಸಿಯೊಬ್ಬಳು ಹತ್ತಿರದಲ್ಲಿಯೇ ಇದ್ದುದನ್ನು ಕಂಡು, ಮಂಥರೆಯು, "ಧಾತ್ರಿ! ಮಹಾನಂದದಿಂದ ಯುಕ್ತಳಾಗಿರುವ ಶ್ರೀ ರಾಮನ ತಾಯಿಯು ಉತ್ತರೋತ್ತರ ಅಭಿವೃದ್ಧಿಗಾಗಿ ಜನರಿಗೆ ಐಶ್ವರ್ಯವನ್ನೇನಾದರೂ ಹಂಚುತ್ತಿರುವಳೇ? ಅಯೋಧ್ಯಾಪಟ್ಟಣದ ಜನರಿಗಿಂದು ಅತ್ಯಧಿಕವಾದ ಸಂತೋಷ ಉಂಟಾಗಿದೆ. ಇದರ ಕಾರಣವೇನೆಂಬುದನ್ನು ತಿಳಿಸು" ಎಂದಳು.
ರಾಮಾಭಿಷೇಕದ ವಾರ್ತೆಯನ್ನು ಹೇಳಲು ದಾಸಿಯ ಹೃದಯವು ಸಂತೋಷಾಧಿಕ್ಯದಿಂದ ಬಿರಿದು ಹೋಯಿತು. ಅವಳು ಶ್ರೀರಾಮನಿಗೆ ಪ್ರಾಪ್ತವಾಗಿರುವ ಪರಮೋತ್ಕ್ರಷ್ಟವಾದ ಶ್ರೇಯಸ್ಸಿನ ವಾರ್ತೆಯನ್ನು ಕುಬ್ಜೆಯಾದ ಮಂಥರೆಗೆ ವಿವರಿಸುತ್ತಾ, "ಮಂಥರೆ! ನಾಳೆ ಪುಷ್ಯ ನಕ್ಷತ್ರಯುಕ್ತವಾದ ಅಭಿಜಿನ್ಮುಹೂರ್ತದಲ್ಲಿ, ಜಿತಾಕ್ರೋಧ, ಜಿತೇಂದ್ರಿಯನಾದ, ಪಾಪರಹಿತನಾದ, ತನ್ನ ಆಶ್ರಯ ಪಡೆದವರ ಪಾಪಗಳನ್ನು ಪರಿಹರಿಸುವ ಸಮರ್ಥನಾದ, ರಘುಕುಲಾವತಂಸನಾದ ಶ್ರೀರಾಮನನ್ನು ದಶರಥರಾಜನು ಯುವರಾಜ ಪದವಿಯಲ್ಲಿ ಅಭಿಷೇಚಿಸಲಿದ್ದಾನೆ" ಎಂದಳು.
ಧಾತ್ರೆಯ ಆ ಮಾತುಗಳನ್ನು ಕೇಳಿದೊಡನೆ ಮಂಥರೆಗೆ ಆಗಬಾರದು ಆಗಿ ಹೋಯಿತೆನ್ನುವಷ್ಟು ಸಂಕಟ ಉಂಟಾಯಿತು.
ರಾಮಾಭಿಷೇಕದ ವಿಷಯವಾಗಿ ಮುಂದೆ ಬಂದು ಮಾತನ್ನು ಕೇಳಲು ಕೂಡ ಅವಳಿಗೆ ಸಹನೆ ಇರಲಿಲ್ಲ. ಒಡನೇ ಧಾತ್ರಿಯ ಕಡೆಯಿಂದ ತನ್ನ ಮುಖವನ್ನು ತಿರುಗಿಸಿಕೊಂಡು ಅಲ್ಲಿ ಒಂದು ಕ್ಷಣವೂ ನಿಲ್ಲದೆ ಕೈಲಾಸ ಶಿಖರಾಕಾರದ ಪ್ರಾಸಾದದಿಂದ ಕೆಳಗಿಳಿದಳು. ಕೋಪದಿಂದ ಉರಿದು ಬೀಳುತ್ತಿದ್ದ ಪಾಪದ ದೃಷ್ಟಿಯುಳ್ಳ ಮಂಥರೆಯು ಮಲಗಿ ನಿದ್ರಿಸುತಿದ್ದ ಕೈಕೇಯಿಯ ಬಳಿಗೆ ಹೋಗಿ ಅವಳನ್ನು ತನ್ನ ಕರ್ಕಶದ್ವನಿಯಿಂದ ಕೂಗಿ ಎಬ್ಬಿಸಿ "ಮೂರ್ಖಳೇ! ಎದ್ದೇಳು, ಯಾಕಿನ್ನೂ ಮಲಗಿರುವೆ? ಭಯವು ನಿನ್ನನ್ನು ಸುತ್ತುವರೆದು ನಿಂತಿದೆ. ದುಃಖ ಸಮೂಹದಲ್ಲಿ ಮುಳುಗಿ ಹೋಗುತ್ತಿರುವೆಯಂಬುದನ್ನು ನೀನಿನ್ನೂ ಅರಿಯೆಯಾ? ರಾಜನಿಗೆ ಇಷ್ಟವಾದವಳೇ! ನೀನು ರಾಜನಿಗೆ ಇಷ್ಟದವಳಾಗಿರದಿದ್ದರೂ, ಸೌಭಾಗ್ಯವತಿ ಅಲ್ಲದಿದ್ದರೂ, ನಾನೇ ಮಹಾಸೌಭಾಗ್ಯವತಿಯೆಂದೂ, ಪಟ್ಟದರಸಿಗೂ ಮಿಗಿಲಾದವಳೆಂದೂ ಜಂಭ ಕೊಚ್ಚಿಕೊಳ್ಳುವೆ. ನದಿಯ ಪ್ರವಾಹವು ಬೇಸಿಗೆಯಲ್ಲಿ ಬತ್ತಿ ಹೋಗುವಂತೆ ನಿನ್ನ ಸೌಭಾಗ್ಯವೂ ಚಂಚಲವಾದುದು. ವಿನಾಶ ಹೊಂದುವ ಸ್ಥಿತಿಯಲ್ಲಿದೆ."
ಕುಪಿತಳಾಗಿದ್ದ, ಪಾಪೈಕದೃಷ್ಟಿಯುಳ್ಳ ಮಂಥರೆಯು ಕರ್ಣ ಕಠೋರವಾಗಿ ಹೀಗೆ ಹೇಳಲು, ಕೈಕೆಯು ಬಹಳವಾಗಿ ವಿಷಾದಿಸಿದಳು. "ಮಂಥರೇ! ಅಮಂಗಳದ ಪ್ರಸಂಗವೇನಾದರೂ ಸಂಭವಿಸುವುದೇ? ನಮ್ಮ ಬಂಧುಗಳಿಗೇನಾದರೂ ಅನಾರೋಗ್ಯ ಉಂಟಾಗಿರುವುದೇ? ನೀನು ಅತ್ಯಂತ ದುಃಖಿತಳಾಗಿರುವುದನ್ನು ವಿಷಣ್ಣವದನಳಾಗಿರುವುದನ್ನೂ ನಾನು ಕಾಣುತ್ತಿದ್ದೇನೆ" ಎಂದಳು.

ಮಂಥರೆಯು ಕಠಿಣವಾದ ಮಾತುಗಳನ್ನ ಆಡಿದರೂ, ಕೈಕೆಯು ಸೌಜನ್ಯದಿಂದಲೇ ಮಾತನಾಡಿದಳು. ಮಧುರಾಕ್ಷರಯುಕ್ತವಾದ ಆ ಮಾತನ್ನು ಕೇಳಿ ಪ್ರೋತ್ಸಾಹಿತಳಾಗಿ ಮಾತನಾಡುವುದರಲ್ಲಿ ಚತುರೆಯಾದ ಮಂಥರೆಯು, ಕುಪಿತಳಾಗಿ ಕೈಕೆಯ ದುರ್ದೈವವನ್ನು ನೆನೆದು ಬಹಳವಾಗಿ ವಿಷಾದಿಸುತ್ತಿರುವಂತೆಯೂ, 'ಕೈಕೇಯಿಗೆ ಹಿತೈಷಿಣಿ ಎಂದರೆ ಮಂಥರೆ ಒಬ್ಬಳೇ' ಎಂಬ ಭಾವನೆಯುಂಟಾಗುವಂತೆಯೂ ಚಾತುರ್ಯದಿಂದ ಮಾತನಾಡುತ್ತಾ, "ದೇವೀ! ಕ್ಷಯವೇ ಇಲ್ಲದ ವಿನಾಶವು ನಿನಗೆ ಪ್ರಾಪ್ತವಾಗಲಿದೆ. ಅಂತಹ ನಿನ್ನ ಸರ್ವ ವಿನಾಶಕಾರಿಯಾದ ಕಾರ್ಯವು ಯಾವುದೆನ್ನುವಯಾ? ದಶರಥ ರಾಜನು ರಾಮನನ್ನು ಯುವರಾಜ ಪದವಿಯಲ್ಲಿ ಅಭಿಷೇಚಿಸಿಬಿಡುತ್ತಾನೆ. ಇದೇ ನಿನ್ನ ಸರ್ವವಿನಾಶಕವಾದ ಕಾರ್ಯ. 'ರಾಮನಿಗೆ ಪಟ್ಟಾಭಿಷೇಕ ವಾಗುವುದು' ಎಂಬ ಈ ಒಂದು ಮಾತು ಅಗ್ನಿಯಂತೆ ನನ್ನ ಹೃದಯದಲ್ಲಿ ಸೇರಿಕೊಂಡು ನನ್ನ ಅಂಗಾಂಗಗಳನ್ನೆಲ್ಲವನ್ನೂ ಸುಟ್ಟು ಹಾಕುತ್ತಿದೆ. ಈ ಸಮಯದಲ್ಲಿ ಪ್ರಿಯ ಗೆಳತಿಯಾದ ನಿನ್ನ ಹಿತವನ್ನು ಹೇಗಾದರೂ ಸಾಧಿಸಿಯೇ ತೀರಬೇಕೆಂದು ನಿಶ್ಚಯಿಸಿ ನಿನ್ನಲ್ಲಿಗೆ ಅವಸರದಿಂದ ಬಂದಿರುತ್ತೇನೆ. ಗೆಳತಿ! ನೀನು ದುಃಖಿ ಆದರೆ ನನಗೂ ಬಹಳ ದುಃಖವಾಗುತ್ತದೆ. ಈ ವಿಷಯದಲ್ಲಿ ಸಂಶಯವೇ ಇಲ್ಲ. ನೀನು ರಾಜವಂಶದಲ್ಲಿ ಹುಟ್ಟಿದವಳು. ಮಹಾರಾಜನ ಪತ್ನಿಯಾಗಿರುವವಳು. ನೀನೇಕೆ ತಿಳಿದುಕೊಂಡಿಲ್ಲ? ಶ್ರೀರಾಮನಿಗೆ ಪಟ್ಟ ಕಟ್ಟಲು ಹೊರಟಿರುವ, ಪಾಪಿಷ್ಠನಾದ, ತೋರಿಕೆಯ ಪ್ರೇಮಾದರಗಳನ್ನು ನಿನ್ನಲ್ಲಿ ತೋರಿಸುತ್ತಿರುವ ರಾಜನು ಸುಖೋಚಿತಳಾದ ನಿನ್ನನ್ನು ಪುತ್ರಸಮೇತವಾಗಿ ವಿನಾಶಗೊಳಿಸಿದ್ದಾನೆ. ನಿನ್ನನ್ನು ನಿನ್ನ ಮಗನನ್ನು ಕಡೆಗಣಿಸಿ ರಾಮನಿಗೆ ನಿಶ್ಚಯ ಮಾಡಿರುವುದರಿಂದ ನಿಮ್ಮನ್ನು ಅವನು ವಧಿಸಿದಂತೆಯೇ ಸರಿ. ವಿಸ್ಮಯದರ್ಶನಳೇ! ನಾನು ಇಷ್ಟು ಬಗೆಯಲ್ಲಿ ಹೇಳುತ್ತಿದ್ದರು ನಿನ್ನ ಮುಖದಲ್ಲಿ ಭಯವಾಗಲಿ, ಕೋಪವಾಗಲಿ, ಅಸೂಯೆಯಾಗಲಿ ಕಾಣುತ್ತಿಲ್ಲ. ನಾನು ಹೇಳುವುದಕ್ಕೆ ಆಶ್ಚರ್ಯ ಪಡುವಂತೆ ಕಾಣುತ್ತಿರುವೆ. ಹೀಗಿರುವುದು ನಿನಗೆ ಉಚಿತವಾಗಿ ಕಾಣುವುದಿಲ್ಲ ಕಾರ್ಯ ಮಾಡಲು ಇದು ಸಕಾಲವಾಗಿದೆ. ಕಾಲವು ಮೀರಿ ಹೋಗಿಲ್ಲ. ಕ್ಷಿಪ್ರವಾಗಿ ನಿನ್ನ ಹಿತವನ್ನು ಸಾಧಿಸಿಕೊ. ಮಗನನ್ನು ನನ್ನನ್ನು ರಕ್ಷಿಸು. ನಿನ್ನನ್ನೂ ರಕ್ಷಿಸಿಕೋ. ಉದಾಸೀನ ಮಾಡಬೇಡ" ಎಂದಳು.







Comments