top of page

ಕೈಕೇಯಿಯ ಮನ ಕದಡಿದ ಮಂಥರೆ (ರಾಮಾಯಣ ಕಥಾಮಾಲೆ 18)

ಕೈಕೆಯಿಯು ರಾಮನ ವಿಷಯದಲ್ಲಿ ಎಷ್ಟೇ ಅಕ್ಕರೆಯಿಂದಿದ್ದರೂ ವಾಕ್ಯವಿಶಾರದಳಾದ ಮಂಥರೆಯು, ಭರತನ ತಾಯಿಯ ಮನಸ್ಸನ್ನು ಕದಡಿಯೇಬಿಟ್ಟಳು. ಮಂಥರೆಯು ಹೀಗೆ ಹೇಳಿದ ನಂತರ ಕೈಕೇಯಿ ಕೋಪದಿಂದ ಕೆಂಡದಂತೆ ಕೆಂಪಾದ ಮುಖಭಾವವನ್ನು ಹೊಂದಿದವಳಾಗಿ ನಿಟ್ಟುಸಿರು ಬಿಡುತ್ತಾ ಮಂಥರೆಗೆ, "ಮಂಥರೇ! ಈಗಲೇ ನಾನು ರಾಮನನ್ನು ಅಯೋಧ್ಯೆಯಿಂದ ಕಾಡಿಗೆ ಓಡಿಸಿ ಬಿಡುತ್ತೇನೆ. ಅಷ್ಟೇ ಶೀಘ್ರವಾಗಿ ಭರತನನ್ನು ಯುವರಾಜ ಪದವಿಯಲ್ಲಿಯೂ ಅಭಿಷೇಚಿಸುತ್ತೇನೆ. ಯಾವ ಉಪಾಯದಿಂದ ಭರತನು ರಾಜ್ಯವನ್ನು ಪಡೆಯಲು ಸಾಧ್ಯವಾಗುವುದೆಂಬುದನ್ನು ಈಗಲೇ ಯೋಚಿಸಿ ಹೇಳು. ರಾಮನು ಮಾತ್ರ ಯಾವುದೇ ಕಾರಣಕ್ಕೂ ರಾಜ್ಯವನ್ನು ಪಡೆದುಕೊಳ್ಳಬಾರದು" ಎಂದಳು.


ಈ ಮಾತುಗಳನ್ನು ಕೇಳಿ ಮಂಥರೆಗೆ ಅಮಿತಾನಂದವಾಯಿತು. "ಕೈಕೇಯಿ! ಅಬ್ಬಾ! ಈಗಲಾದರೂ ನಾನು ಹೇಳಿದ್ದು ನಿಜವೆಂದು ನೀನು ಮನಗಂಡೆಯಲ್ಲವೇ! ನಿನ್ನ ಮಗನಾದ ಭರತನು ಈ ಅಖಂಡ ಸಾಮ್ರಾಜ್ಯವನ್ನು ಯಾವ ಉಪಾಯದಿಂದ ಪಡೆಯುವನೆಂಬುದನ್ನು ಹೇಳುವೆನು ಕೇಳು. ನೀನು ನನಗೆ ಈ ಹಿಂದೆ ಹಲವು ಬಾರಿ ನಿನ್ನ ಹಿರಿಮೆಯನ್ನು ತೋರ್ಪಡಿಸಲು ಹೇಳಿರುವ ವಿಷಯವನ್ನೇ ಈಗ ನಿನ್ನೊಡನೆ ಹೇಳುತ್ತೇನೆ. ಇದನ್ನು ಕೇಳಿದ ಮೇಲಾದರೂ ಆ ಉಪಾಯದಿಂದ ನಮ್ಮ ಈ ಎರಡು ಕಾರ್ಯಗಳನ್ನು ಸಾಧಿಸಲು ಸಾಧ್ಯವಾಗುವುದೇ? ಎಂಬುದನ್ನು ನೀನೆ ವಿಮರ್ಶಿಸು" ಎಂದಳು.



ಹಾಸಿಗೆಯ ಮೇಲೆ ಕಾಲು ಚಾಚಿಕೊಂಡು ಮಲಗಿ ಮಂಥರೆಯ ಮಾತನ್ನು ಕೇಳುತ್ತಿದ್ದ ಕೈಕೆಯಿಯು ಹಾಸಿಗೆಯಿಂದ ಸ್ವಲ್ಪ ಮೇಲೆದ್ದು "ಹೇಳು! ಮಂಥರೆ! ಬೇಗ ಹೇಳು. ಯಾವ ಉಪಾಯದಿಂದ ಭರತನಿಗೆ ಈ ರಾಜ್ಯವು ಲಭಿಸುವಂತೆ - ರಾಮನಿಗೆ ಪಟ್ಟಾಭಿಷೇಕವಾಗದಂತೆ ಮಾಡಬಹುದೆಂಬುದನ್ನು ಬೇಗ ಹೇಳು" ಎಂದು ಗಾಬರಿಪಡಿಸಿದಳು.


ಕೈಕೇಯಿಯು ಹೀಗೆ ಹೇಳುತ್ತಲೇ ಪಾಪದರ್ಶನಿಯಾದ ಮಂಥರೆಯು "ಕೈಕೇಯಿ ! ಹಿಂದೆ ದೇವಾಸುರ ಯುದ್ಧವು ನಡೆದ ಸಮಯದಲ್ಲಿ ಇಂದ್ರನಿಗೆ ಸಹಾಯ ಮಾಡುವ ಉದ್ದೇಶದಿಂದ, ಅವನ ಪ್ರಾರ್ಥನೆಯನ್ನಂಗೀಕರಿಸಿ, ನಿನ್ನ ಪತಿಯಾದ ದಶರಥನು ಅನೇಕ ಸಾಮಂತರಾಜರೊಡನೆ ನಿನ್ನನ್ನು ಕರೆದುಕೊಂಡು ದಕ್ಷಿಣ ದಿಕ್ಕಿಗೆ ಹೊರಟು, ದಂಡಕಾರಣ್ಯದ ಮಧ್ಯದಲ್ಲಿದ್ದ ತಿಮಿಧ್ವಜನೆಂಬ ರಾಕ್ಷಸನ ರಾಜಧಾನಿಯಾದ ವೈಜಯಂತವೆಂದು ಪ್ರಸಿದ್ಧವಾಗಿದ್ದ ಪಟ್ಟಣಕ್ಕೆ ಹೋದನು. ತಿಮಿಧ್ವಜನು ಶಂಬರನೆಂಬ ಹೆಸರಿನಿಂದಲೂ ವಿಖ್ಯಾತಿಪಡೆದಿದ್ದನು. ಅವನು ರಾಕ್ಷಸರ ಪ್ರಮುಖನಾಗಿದ್ದುದಲ್ಲದೇ ಅನೇಕಾನೇಕ ಮಾಯೆಗಳನ್ನೂ ತಿಳಿದವನಾಗಿದ್ದನು. ಅವನು ದೇವತೆಗಳೆಲ್ಲರನ್ನೂ ಸೋಲಿಸಿ ಇಂದ್ರನೊಡನೆ ನೇರವಾಗಿ ಯುದ್ಧಕ್ಕೆ ಹೋದನು. ಆ ಸಂಗ್ರಾಮದಲ್ಲಿ ಶಸ್ತ್ರಗಳ ಘಾತಗಳಿಗೆ ಒಳಗಾಗಿ ಯುದ್ಧ ರಂಗದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಇಂದ್ರನ ಸೈನಿಕರನ್ನು ರಾಕ್ಷಸರು ರಾತ್ರಿಯಲ್ಲಿ ಬಂದು ಕೊಂದುಹಾಕುತ್ತಿದ್ದರು. ಆ ಸಮಯದಲ್ಲಿ ಇಂದ್ರನ ಸಹಾಯಕ್ಕೆಂದು ಹೋದ ಮಹಾಬಾಹುವಾದ ದಶರಥನು ರಾಕ್ಷಸರೊಡನೆ ಬಹು ಘೋರವಾದ ಯುದ್ಧವನ್ನು ಮಾಡಿದನು. ರಾಕ್ಷಸರ ಶಸ್ತ್ರಗಳ ಸತತ ಪ್ರಹಾರದಿಂದಾಗಿ ದಶರಥನ ಸರ್ವಾಂಗಗಳು ನುಚ್ಚುನೂರಾದವು. ಶರೀರಾದ್ಯಂತವು ಕ್ಷತ-ವಿಕ್ಷತನಾಗಿದ್ದ ದಶರಥ ರಾಜನನ್ನು ಅಂದು ರಾತ್ರಿ ರಾಕ್ಷಸರು ಕೊಂದೆ ಬಿಡುತ್ತಿದ್ದರು. ಅಂತಹ ಒಂದು ಮಹಾವಿಪತ್ತು ರಾಜನಿಗೊದಗಿದ್ದಾಗ ರಾಜನು ಪ್ರಜ್ಞಾಹೀನನಾಗಿ ರಥದಲ್ಲೇ ಬಿದ್ದಿದ್ದ ವೇಳೆಯಲ್ಲಿ ನೀನು ಯುದ್ಧ ರಂಗದಿಂದ ರಾಜನನ್ನು ಬೇರೆಯ ಕಡೆಗೆ ಒಯ್ದು ಅವನನ್ನು ರಕ್ಷಿಸಿದೆ. ಶೈತ್ಯೋಪಚಾರಾದಿಗಳನ್ನು ಮಾಡಿದ ನಂತರ ರಾಜನಿಗೆ ಪ್ರಜ್ಞೆಯೂ ಬಂದಿತು. ನೀನು ಮಾಡಿದ ಸಾಹಸ ಕಾರ್ಯವು ಅವನಿಗೆ ತಿಳಿಯಿತು. ಸುಪ್ರೀತನಾದ ಅವನು ನಿನಗೆರಡು ವರಗಳನ್ನು ಕೊಟ್ಟನು. 'ಯದಾ ಇಚ್ಛೆಯಂ ತದಾವಕಾ ಗೃಹ್ಣಿಯಾಂ' 'ಯಾವಾಗ ಬಯಸುವೆನೋ ಆಗ ನಾನು ನಿನ್ನಿಂದ ಎರಡು ವರಗಳನ್ನು ಪಡೆದುಕೊಳ್ಳುವೆನು' ಎಂದು ನೀನವನಿಗೆ ಹೇಳಿದೆ. ರಾಜನು ಹಾಗೆಯೇ ಆಗಲೆಂದನು.‌ ನೀನೇ ಹಿಂದೆ ಎಲ್ಲವನ್ನು ನನಗೆ ಹೇಳಿದ್ದೆ . ಈಗ ನೀನು ನಿನ್ನ ಆ ವರಗಳ ಬಲದಿಂದ ದಶರಥನನ್ನು ಬಲತ್ಕರಿಸಿ ರಾಮನ ಅಭಿಷೇಕಕ್ಕೆ ಅವಕಾಶ ಕೊಡಬೇಡ. ಭರತನಿಗೆ ರಾಜ್ಯದ ಪಟ್ಟಾಭಿಷೇಕವಾಗಬೇಕೆಂಬ ಮೊದಲನೆಯ ವರವನ್ನೂ, ಹದಿನಾಲ್ಕು ವರ್ಷಗಳ ಕಾಲ ರಾಮನನ್ನು ಕಾಡಿಗೆ ಕಳುಹಿಸಬೇಕೆಂದು ಎರಡನೇ ವರವನ್ನೂ ಕೇಳು. ಹದಿನಾಲ್ಕು ವರ್ಷಗಳ ಕಾಲ ರಾಮಕಾಡಿನಲ್ಲಿ ಇರುವ ವೇಳೆ ರಾಜ್ಯ ಪರಿಪಾಲನೆ ಮಾಡುವ ಭರತನ ವಿಷಯದಲ್ಲಿ ಪ್ರಜೆಗಳಿಗೆ ಕಾಲಾನುಕ್ರಮವಾಗಿ ಅನುರಾಗವು ಬೆಳೆದೇ ಬೆಳೆಯುತ್ತದೆ. ಹಾಗಾಗಿ ಈಗಲೇ ನೀನು ಕೋಪದ ಮನೆಯನ್ನು ಪ್ರವೇಶಿಸು. ಕೋಪಗೊಂಡಿರುವವಳಂತೆ ನಟಿಸು. ಇದಕ್ಕೆ ಪೂರಕವಾಗಿ ಅಸ್ತರಣವಿಲ್ಲದ ಬರಿಯ ನೆಲದ ಮೇಲೆ ಮಲಗು. ಹಳೆಯದಾದ ಮತ್ತು ಕೊಳೆಯಾಗಿರುವ ಸೀರೆಯನ್ನುಟ್ಟುಕೋ. ರಾಜನು ಬಂದನೆಂದರೆ ಅವನ ಕಡೆಗೆ ತಿರುಗಿಯೂ ನೋಡಬೇಡ. ಅವನೊಡನೆ ಮಾತನ್ನು ಆಡಬೇಡ. ರಾಜನು ಬಂದುದ್ದನ್ನು ನೋಡಿ ನೆಲದ ಮೇಲೆ ಹೊರಳಾಡುತ್ತಾ ಶೋಕವನ್ನು ವ್ಯಕ್ತಪಡಿಸು. ಗಟ್ಟಿಯಾಗಿ ರೋಧನ ಮಾಡು. ನೀನು ನಿನ್ನ ಪತಿಗೆ ಅತ್ಯಂತ ಪ್ರೀತಿ ಪಾತ್ರಳಾದ ಪತ್ನಿಯಾಗಿರುವೆ. ಇದರಲ್ಲಿ ಸಂಶಯವೇ ಇಲ್ಲ. ನಿನಗೆ ಪ್ರಿಯವನ್ನುಂಟು ಮಾಡಲು ಪ್ರಾಣವನ್ನಾದರೂ ತ್ಯಜಿಸಬಲ್ಲನು. ರಾಜನನ್ನು ಹೇಳಿದ ಹಾಗೆ ಕೇಳುವಂತೆ ಮಾಡುವ ಅಪಾರವಾದ ಶಕ್ತಿಯು ನಿನ್ನಲ್ಲಿದೆ. ಈ ಸಮಯದಲ್ಲವನು ನಿನಗೆ ವಿಧವಿಧವಾದ ಬಹುಮೌಲ್ಯದ ಅಪಾರವಾದ ಮಣಿ-ಮುತ್ತು-ಸುವರ್ಣ-ರತ್ನಗಳನ್ನು ಕೊಡಬಹುದು. ಅದಕ್ಕೆ ನೀನು ಮನಸೋತು ಬಿಡಬೇಡ. ನೀನು ನಿನ್ನ ಮನಸ್ಸಿನ ಭಯವನ್ನು ದೂರೀಕರಿಸಿ ರಾಜನನ್ನು ರಾಮಾಭಿಷೇಕದ ಸಂಕಲ್ಪದಿಂದ ಬಲತ್ಕಾರವಾಗಿಯೇ ಆದರೂ ವಿಮುಖನಾಗುವಂತೆ ಮಾಡು" ಎಂದಳು.

Comments


bottom of page