top of page

ವರ ಕೇಳಿದ ಕೈಕೇಯಿ (ರಾಮಾಯಣ ಕಥಮಾಲೆ 20)

ದಶರಥನು ಪತ್ನಿಯನ್ನು ಹೀಗೆ ಸಂತೈಸುತ್ತಿರಲು, ಸ್ವಲ್ಪ ಸಮಾಧಾನಗೊಂಡ ಕೈಕೇಯಿಯು ಪತಿಗೆ ಅಪ್ರಿಯವಾದ ಮಾತನ್ನು ಹೇಳಬಯಸಿ, ತನ್ನ ಮಾತನ್ನು ನಡೆಸಿಕೊಡಲು ಪ್ರತಿಜ್ಞೆ ಮಾಡುವಂತೆ ಗಂಡನನ್ನು ಪುನಃ ಪೀಡಿಸುತ್ತ, "ಪತಿದೇವ! ನನ್ನನ್ನು ಯಾರೂ ತಿರಸ್ಕರಿಸಿಯೂ ಇಲ್ಲ, ಅವಮಾನಿಸಿಯೂ ಇಲ್ಲ. ನನ್ನದೊಂದು ಅಭಿಪ್ರಾಯವಿದೆ. ಅದನ್ನು ನೀನು ತಪ್ಪದೇ ನಡೆಸಿಕೊಡಬೇಕಾಗಿದೆ. ನೀನು ನನ್ನ ಮನಸ್ಸಿನಲ್ಲಿರುವುದನ್ನು ನಡೆಸಿಕೊಡಲು ಇಚ್ಛಿಸುವೆಯಾದರೆ, ನಡೆಸಿಕೊಡುವೆನೆಂದು ಪ್ರತಿಜ್ಞೆ ಮಾಡಿಕೊಡು. ಅನಂತರವೇ ನಾನು ನನ್ನ ಹೃದ್ಗತವಾದ ಅಭಿಪ್ರಾಯವನ್ನು ನಿನ್ನೊಡನೆ ಹೇಳುವೆನು" ಎಂದಳು.

ಕಾಮುಕನಾಗಿದ್ದ ದಶರಥನು ಸ್ವಲ್ಪ ಮುಗುಳ್ನಗುತ್ತಾ, ನೆಲದ ಮೇಲೆ ಮಲಗಿದ್ದ ಕೈಕೇಯಿಯ ತಲೆಯನ್ನು ಎರಡು ಕೈಗಳಿಂದಲೂ ಎತ್ತಿ ತನ್ನ ತೊಡೆಯ ಮೇಲಿಟ್ಟುಕೊಂಡು ಮುಂದಲೆಯನ್ನು ಸವರುತ್ತಾ, "ರೂಪ ಲಾವಣ್ಯವಳ ಸಂಪತ್ತಿನಿಂದ ಗರ್ವಿಷ್ಠಳಾಗಿರುವವಳೇ! ನನಗೆ ನಿನಗಿಂತಲೂ ಹೆಚ್ಚಿನ ಪ್ರಿಯತಮೆಯಾಗಲೀ ಬೇರೆ ಯಾರೂ ಇಲ್ಲವೆಂಬ ವಿಷಯವು ನಿನಗೆ ಇದುವರೆಗೂ ತಿಳಿದೇ ಇಲ್ಲವೇ? ಯಾವನನ್ನು ಮುಹೂರ್ತಕಾಲ ನೋಡದಿದ್ದರೆ ನಿಶ್ಚಯವಾಗಿಯೂ ನಾನು ಜೀವಿಸುವುದೇ ಇಲ್ಲವೋ, ಅಂತಹ ಪ್ರಾಣಪ್ರಿಯನಾದ ರಾಮನ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ನಿನ್ನ ಮಾತನ್ನು ಖಂಡಿತವಾಗಿಯೂ ನಡೆಸಿಕೊಡುತ್ತೇನೆ" ಎಂದನು.


"ಮಹಾರಾಜ! ನೀನು ರಾಮನ ಮೇಲೆ ಮತ್ತು ನೀನು ಗಳಿಸಿರುವ ಸುಕೃತದ ಮೇಲೆ ಆಣೆಯಿಟ್ಟು ಹೇಳಿರುವ ಕ್ರಮದಲ್ಲಿ ನನಗೆ ವರವನ್ನು ದಯಪಾಲಿಸುವದರಲ್ಲಿ ಸಂದೇಹವಿಲ್ಲ. ಆದರೆ ನೀನು ಮಾಡಿರುವ ಈ ಪ್ರತಿಜ್ಞೆಯನ್ನು, ಅಗ್ನಿ ಪ್ರಮುಖರಾದ ಮೂವತ್ತು ಮೂರು ಕೋಟಿ ದೇವತೆಗಳೂ ಕೇಳಲಿ, ಚಂದ್ರ ಸೂರ್ಯರೂ ಕೇಳಲಿ, ಆಕಾಶವೂ ಇದಕ್ಕೆ ಸಾಕ್ಷಿಯಾಗಲಿ, ಈ ಪೃಥ್ವಿಯಲ್ಲಿರಬಹುದಾದ ಇತರ ಭೂತಗಣಗಳೂ ನೀನು ಹೇಳಿದ ಪ್ರತಿಜ್ಞಾ ವಚನವನ್ನು ತಿಳಿದಿರಲಿ" ಎಂದು ರಾಜನಿಗೆ ಹೇಳಿ ಕೈಕೇಯಿಯು ದೇವತೆಗಳನ್ನುದ್ದೇಶಿಸಿ, "ಎಲೈ ದೇವತೆಗಳಿರಾ! ನೀವೆಲ್ಲರೂ ಕೇಳಿರಿ. ಸತ್ಯಸಂಧನಾದ, ಮಹಾತೇಜಸ್ವಿಯಾದ, ಧರ್ಮಜ್ಞನಾದ ದಶರಥನು ಸಮಾಧಾನಚಿತ್ತನಾಗಿ ತಾನು ಪ್ರತಿಜ್ಞೆ ಮಾಡಿರುವಂತೆ ನನಗೆ ವರವನ್ನು ದಯಪಾಲಿಸಿದ್ದಾನೆ".



ಹೀಗೆ ಕೈಕೇಯಿಯು ವರದನಾದ ಮತ್ತು ಕಾಮಮೋಹಿತನಾಗಿದ್ದ ದಶರಥನನ್ನು, ಧರ್ಮಪಾಶದಿಂದ ಬಿಗಿದು, ದೇವತೆಗಳನ್ನು ಸಾಕ್ಷಿಗಳನ್ನಾಗಿ ಮಾಡಿಕೊಂಡು ಪತಿಯೊಡನೆ, "ಮಹಾರಾಜ! ಬಹಳ ದಿವಸಗಳ ಹಿಂದೆ ನಡೆದ ಒಂದು ವೃತ್ತಾಂತವನ್ನು ಜ್ಞಾಪಿಸಿಕೊ! ವೈಜಯಂತವೆಂಬ ಸ್ಥಳದಲ್ಲಿ ದೇವಾಸುರರಿಗೆ ಯುದ್ಧವು ನಡೆಯಿತು. ನೀನು ಇಂದ್ರನ ಸಹಾಯಾರ್ಥವಾಗಿ ಅಲ್ಲಿಗೆ ಹೋಗಿ ಶಂಬರಾಸುರರೊಡನೆ ಯುದ್ಧಮಾಡುತ್ತಿದ್ದೆ. ಆ ಯುದ್ಧದಲ್ಲಿ ಶತ್ರುವಾದ ಶಂಬರಾಸುರನು ನಿನ್ನ ಪ್ರಾಣಗಳನ್ನು ಮಾತ್ರವೇ ಉಳಿಸಿ, ನಖ ಶಿಖಾಂತವಾಗಿ ತೀಕ್ಷ್ಣವಾದ ಬಾಣಗಳಿಂದ ಗಾಯಗೊಳಿಸಿ ಮೂರ್ಛಿತನನ್ನಾಗಿ ಮಾಡಿದನು. ಆ ಸಮಯದಲ್ಲಿ ನಿನ್ನ ಸಂರಕ್ಷಣೆಯಲ್ಲಿಯೇ ಜಾಗರೂಕಳಾಗಿದ್ದ ನಾನು, ಸತತ ಪ್ರಯತ್ನದಿಂದ ನಿನ್ನ ಪ್ರಾಣಗಳನ್ನು ರಕ್ಷಿಸಿದೆನು. ಅದರಿಂದ ಸುಪ್ರೀತನಾದ ನೀನು ,ನನಗೆರಡು ವರಗಳನ್ನು ದಯಪಾಲಿಸಿದೆ. ಆದರೆ ಆಗಲೇ ನಾನು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಲಿಲ್ಲ. ಮುಂದೆ ಆ ವರಗಳ ಪ್ರಯೋಜನವನ್ನು ಪಡೆದುಕೊಳ್ಳುವುದಾಗಿ ಹೇಳಿ ಅವುಗಳನ್ನು ನಿನ್ನಲ್ಲಿಯೇ ನಿಕ್ಷೇಪ ರೂಪದಲ್ಲಿ ಇರಿಸಿದ್ದೇನೆ. ಈಗ ನಾನು ಆ ಎರಡು ವರಗಳ ಪ್ರಯೋಜನವನ್ನು ಪಡೆದುಕೊಳ್ಳಲು ಅಪೇಕ್ಷಿಸಿದ್ದೇನೆ. ನಿಕ್ಷೇಪರೂಪದಲ್ಲಿರುವ ಆ ವರಗಳನ್ನು ಕೇಳಿದಾಗ, ಕೊಡುವುದು ಧರ್ಮಾತ್ಮನಾದ ನಿನಗೆ ತಕ್ಕದಾಗಿಯೇ ಇದೆ. ಮೇಲಾಗಿ ನನ್ನ ಮಾತನ್ನು ನಡೆಸಿಕೊಡುವುದಾಗಿ ಪ್ರತಿಜ್ಞೆಯನ್ನೂ ಮಾಡಿರುವೆ. ಧರ್ಮದ ಹಿನ್ನೆಲೆಯಲ್ಲಿ ಪ್ರತಿಜ್ಞೆಯನ್ನು ಮಾಡಿ ನಾನು ಆ ಎರಡು ವರಗಳನ್ನು ಕೇಳಿದ ಬಳಿಕ ನೀನು ಕೊಡದಿದ್ದರೆ, ನಿನ್ನಿಂದ ಅವಮಾನಿತಳಾದ ನಾನು ಈಗಲೇ ನಿನ್ನ ಕಣ್ಣೆದುರಿನಲ್ಲಿಯೇ ಪ್ರಾಣವನ್ನು ತೊರೆಯುವೆನು" ಎಂಬುದಾಗಿ ಚತುರತೆಯ ಮಾತಿನಿಂದಲೇ, ಕೈಕೇಯಿಯು ರಾಜನನ್ನು ತನ್ನ ಅಧೀನನನ್ನಾಗಿ ಮಾಡಿಕೊಂಡುಬಿಟ್ಟಳು. ವ್ಯಾಧನ ಧ್ವನಿಯಿಂದ ಆಕರ್ಷಿತವಾಗಿ ಬಲೆಗೆ ಬೀಳುವ ಜಿಂಕೆಯಂತೆ, ರಾಜನು ತನ್ನ ವಿನಾಶಕ್ಕಾಗಿಯೇ ಧರ್ಮಪಾಶವನ್ನು ಕುತ್ತಿಗೆಗೆ ಬಿಗಿದುಕೊಂಡನು.


ಬಳಿಕ ಕಾಮಮೋಹಿತನಾಗಿದ್ದ ದಶರಥನಿಗೆ ಕೈಕೇಯಿಯು "ಪತಿದೇವ! ಆಗ ನೀನು ಕೊಟ್ಟು ನಿಕ್ಷೇಪರೂಪದಲ್ಲಿಟ್ಟಿರುವ ಆ ವರಗಳು ಯಾವುದೆಂಬುದನ್ನು ಈಗಲೇ ಹೇಳಿಬಿಡುವೆನು ಲಾಲಿಸು."


"ಯೋಭಿಷೇಕಸಮಾರಮ್ಭೋ ರಾಘವಸ್ಯೋಪಕಲ್ಪಿತಃ ಅನೇನೈವಾಭಿಷೇಕೇಣ ಭರತೋ ಮೇಭಿಷಿಚ್ಯತಾಮ್"

"ರಾಘವನಿಗೆ ಪಟ್ಟಾಭಿಷೇಕ ಮಾಡಲೆಂದು ಯಾವ ಸಂಭ್ರಮ ಸಮಾರಂಭಗಳು ನಡೆದಿವೆಯೋ, ಯಾವ ಸಂಭಾರ ಸಾಮಗ್ರಿಗಳು ಸಂಗ್ರಹವಾಗಿವೆಯೋ, ಅವೇ ಸಂಭ್ರಮ ಮತ್ತು ಸಂಭಾರ ಸಾಮಗ್ರಿಗಳಿಂದ, ರಾಮನಿಗೆ ಬದಲಾಗಿ ಭರತನಿಗೆ ಪಟ್ಟಾಭಿಷೇಕವಾಗಬೇಕು" ಇದು ಮೊದಲನೆಯ ವರ.


"ನವ ಪಞ್ಚಚ ವರ್ಷಾಣಿ ದಂಡಕಾರಣ್ಯಮಾಶ್ರಿತಃ

ಚೀರಾಜಿನಜಟಾಧಾರೀ ರಾಮೋ ಭವತು ತಾಪಸಃ"

"ಹದಿನಾಲ್ಕು ವರ್ಷಗಳ ಕಾಲ ರಾಮನು ದಂಡ ಕಾರಣ್ಯಕ್ಕೆ ಹೋಗಿ, ಅಲ್ಲವನು ಜಟಾಧಾರಿಯಾಗಿ ನಾರುಮಡಿಯನ್ನೂ ಕೃಷ್ಣಾಜಿನವನ್ನೂ ಧರಿಸಿ ತಪಸ್ವಿಯಾಗಲಿ" ,

"ಭರತನು ನಿಷ್ಕಂಟಕವಾದ ಈ ಯುವರಾಜ ಪದವಿಯನ್ನು ಪಡೆಯಲಿ. ಇದೇ ನನ್ನ ಹೆಬ್ಬಯಕೆಯಾಗಿರುವುದು. ನೀನು ಹಿಂದೆ ದಯಪಾಲಿಸಿದ್ದ ಎರಡು ವರಗಳನ್ನೇ ನಾನೀಗ ಪಡೆದುಕೊಳ್ಳಲು ಅಪೇಕ್ಷಿಸಿದ್ದೇನೆ. ರಾಜಾಧಿರಾಜನಾಗಿರುವ ನೀನು ಸತ್ಯ ಪ್ರತಿಜ್ಞನಾಗಿ ಸತ್ಯನಿಷ್ಠನಾಗಿ ಈ ರಘುವಂಶದ ಕೀರ್ತಿಯನ್ನು ಕಾಪಾಡು. ಶೀಲವನ್ನು ಸಂರಕ್ಷಿಸು" ಎಂದಳು.

Comments


bottom of page