ದಶರಥನ ಮೌನ (ರಾಮಾಯಣ ಕಥಾಮಾಲೆ 22)
- Ganapati Hegde Moodkani

- Nov 9
- 2 min read
ಇತ್ತಲಾಗಿ ರಾತ್ರಿಯು ಕಳೆದು ಬೆಳಗಾಯಿತು. ಸೂರ್ಯನು ಉದಯಿಸಿದನು. ಪುಷ್ಯ ನಕ್ಷತ್ರ ಯುಕ್ತವಾದ ಅಭಿಷೇಕದ ಮುಹೂರ್ತವು ಸನ್ನಿಹಿತವಾಯಿತು. ಗುಣಸಂಪನ್ನರಾದ ವಸಿಷ್ಠರು ಪಟ್ಟಾಭಿಷೇಕಕ್ಕೆ ಬೇಕಾದ ಸಂಭಾರಗಳನ್ನು ತೆಗೆದುಕೊಂಡು ಶಿಷ್ಯರಿಂದ ಪರಿವೃತ್ತರಾಗಿ ಅಯೋಧ್ಯಾ ಪಟ್ಟಣವನ್ನು ಪ್ರವೇಶಿಸಿದರು.
ಅಯೋಧ್ಯೆಯ ಎಲ್ಲ ಬೀದಿಗಳನ್ನೂ ಗುಡಿಸಿ ಸಾರಿಸಿದ್ದರು. ಉತ್ತಮವಾದ ಪತಾಕೆಗಳಿಂದ ಪಟ್ಟಣವು ಅಲಂಕೃತವಾಗಿದ್ದಿತು. ಚಿತ್ರ ವಿಚಿತ್ರವಾದ ಕುಸುಮಗಳನ್ನು ಬೀದಿಯುದ್ದಕ್ಕೂ ಎರಚಿದ್ದರು. ಚಪ್ಪರಗಳನ್ನು ಹಾಕಿ ಅವುಗಳನ್ನು ಹೂಮಾಲೆಗಳಿಂದ ಅಲಂಕರಿಸಿದ್ದರು. ಎಲ್ಲಾ ಬೀದಿಗಳಲ್ಲಿಯೂ ಜನರು ಬಹಳ ಸಂಭ್ರಮದಿಂದ ತಿರುಗಾಡುತ್ತಿದ್ದರು. ಎಲ್ಲೆಲ್ಲಿಯೂ ಉತ್ಸವದ ದೃಶ್ಯಗಳು ಕಾಣುತ್ತಿದ್ದವು.
ಜನನಿಬಿಡವಾಗಿದ್ದ ಅಯೋಧ್ಯಾ ಪಟ್ಟಣದ ಬೀದಿಗಳನ್ನು ದಾಟಿ ವಸಿಷ್ಠರು, ತಮ್ಮ ಶಿಷ್ಯರೊಡನೆ ಅಂತಃಪುರದ ಬಳಿಗೆ ಬಂದರು. ಆ ವೇಳೆಗೆ ಸರಿಯಾಗಿ ದಶರಥನ ಸಚಿವನೂ, ಸಾರಥಿಯೂ ಆದ ಸುಮಂತ್ರನು ದಶರಥ ರಾಜನ ಅಂತಃಪುರದ ಬಾಗಿಲಿನಲ್ಲಿ ನಿಂತಿರುವುದನ್ನು ಕಂಡು ತಾವು ಬಂದಿರುವುದನ್ನು ಮಹಾರಾಜನಿಗೆ ಕೂಡಲೇ ತಿಳಿಸಬೇಕೆಂದೂ, ದಶರಥನಿಗೆ ಶೀಘ್ರವಾಗಿ ಬರುವಂತೆ ತಿಳಿಸಬೇಕೆಂದೂ ಹೇಳಿದರು.
ಮಹಾತ್ಮರಾದ ವಸಿಷ್ಠರ ಆ ಮಾತನ್ನು ಕೇಳಿ ಸುಮಂತ್ರನು ದಶರಥ ರಾಜನನ್ನು ಸ್ತೋತ್ರ ಮಾಡುತ್ತಾ ಅಂತಃಪುರವನ್ನು ಪ್ರವೇಶಿಸಿದನು. ಆ ಸಮಯದಲ್ಲಿ ಅಂತಃಪುರದೊಳಗೆ ಹೋಗಲು ಯಾರಿಗೂ ಅನುಮತಿಯಿಲ್ಲದಿದ್ದರೂ, ಯಾರಿಂದಲೂ ಯಾವಾಗಲೂ ವೃದ್ಧನಾದ ಸುಮಂತ್ರನು ತಡೆಯಲ್ಪಡತಕ್ಕವನಲ್ಲ. ಯಾವ ಸಮಯದಲ್ಲಾದರೂ ಸುಮಂತ್ರನು ರಾಜಭವನಕ್ಕೆ ಪ್ರವೇಶಿಸಬಹುದು ಎಂಬ ಸಾರ್ವಕಾಲಿಕವಾದ ರಾಜಾಜ್ಞೆಯಿದ್ದುದರಿಂದ, ದ್ವಾರಪಾಲಕರು ಸುಮಂತ್ರನನ್ನು ಅಂತಃಪುರದೊಳಗೆ ಹೋಗದಂತೆ ತಡೆಯಲು ಸಮರ್ಥರಾಗಲಿಲ್ಲ. ರಾಜನ ಸಮೀಪಕ್ಕೆ ಹೋದ ಸುಮಂತ್ರನು ಕಳೆದ ರಾತ್ರಿ ಅಂತಃಪುರದಲ್ಲಿ ನಡೆದ ಹಗರಣವನ್ನು ತಿಳಿಯದೇ, ರಾಜನನ್ನು ಹೆಚ್ಚು ಸಂತೋಷಗೊಳಿಸುವ ಮಾತುಗಳಿಂದ ಸ್ತೋತ್ರ ಮಾಡಲು ಉಪಕ್ರಮಿಸಿದನು.

ಹಿಂದಿನಂತೆಯೇ ಸುಮಂತ್ರನು ಕೈಮುಗಿದು ನಿಂತು ಜಗತೀಪತಿಯನ್ಮದ ದಶರಥನನ್ನು ಸ್ತುತಿಸಿ "ಮಹಾರಾಜ! ಏಳು ರಾತ್ರಿಯು ಕಳೆಯಿತು. ಮಂಗಳಕರವಾದ ಹಗಲು ಪ್ರಾರಂಭವಾಗಿದೆ. ರಾಜಸಿಂಹನೇ! ಎಚ್ಚರಗೊಳ್ಳು. ಮುಂದಿನ ಮಂಗಳಕಾರ್ಯದಲ್ಲಿ ತೊಡಗು. ಶ್ರೀರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲ ಸಾಮಾಗ್ರಿಗಳೂ ಸಿದ್ಧವಾಗಿವೆ. ಪಟ್ಟಣಿಗರಿಂದಲೂ, ದೇಶೀಯ ಪ್ರಜೆಗಳಿಂದಲೂ, ವೈಶ್ಯರಿಂದಲೂ ನಮಸ್ಕರಿಸಲ್ಪಡುತ್ತಿರುವ ಪೂಜ್ಯರಾದ ವಸಿಷ್ಠರು ಬ್ರಾಹ್ಮಣರೊಡನೆ ಆಗಮಿಸಿದ್ದಾರೆ. ಆದುದರಿಂದ ಲೋಕಾಭಿರಾಮನಾದ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಲು ಕೂಡಲೇ ಆಜ್ಞಾಪಿಸು" ಎಂದನು.
ಸುಮಂತ್ರನ ಸಾಂತ್ವನಪೂರ್ವಕವಾದ ಮತ್ತು ಅರ್ಥವತ್ತಾದ ಮಾತುಗಳನ್ನು ಕೇಳಿ ದಶರಥ ರಾಜನು ಪುನಃ ಶೋಕಾವಿಷ್ಟನಾದನು. ಬಳಿಕ ಮಗನ ಸಂಬಂಧವಾದ ಸಂತೋಷದಿಂದ ವಂಚಿತನಾಗಿದ್ದ, ನಿರಂತರವಾದ ರೋಧನದಿಂದ ಕೆಂಪಾದ ಕಣ್ಣುಗಳುಳ್ಳವನಾಗಿದ್ದ ಧಾರ್ಮಿಕನಾದ ರಾಜನು ತಲೆಯೆತ್ತಿ ಸುಮಂತ್ರನನ್ನು ನೋಡಿ, "ಸುಮಂತ್ರ! ನೀನಾಡುತ್ತಿರುವ ಮಾತುಗಳಿಂದ ನನ್ನ ಮರ್ಮಸ್ಥಳಗಳನ್ನು ಪುನಃ ಪುನಃ ಕತ್ತರಿಸುತ್ತಿರುವೆ" ಎಂದನು.
ದೀನನಾಗಿದ್ದ ರಾಜನ ಕರುಣಾಜನಕವಾದ ಮಾತನ್ನು ಕೇಳಿ ಕೈ ಮುಗಿದುಕೊಂಡು ನಿಂತಿದ್ದ ಸುಮಂತ್ರನು ಸ್ವಲ್ಪ ಹಿಂದಕ್ಕೆ ಸರಿದನು. ರಾಜನು ದೈನ್ಯದ ಕಾರಣದಿಂದ ಸುಮಂತ್ರನೊಡನೆ ಮಾತನಾಡಲು ಅಸಮರ್ಥನಾದಾಗ, ರಾಜನೀತಿಜ್ಞಳಾದ ಕೈಕೇಯಿಯೇ ಸುಮಂತ್ರನಿಗೆ "ಸುಮಂತ್ರ! ನಿಮ್ಮ ಮಹಾರಾಜನು ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆನ್ನುವ ಉತ್ಸಾಹದಿಂದ ರಾತ್ರಿಯಲ್ಲಿ ಎಚ್ಚರಗೊಂಡೆ ಇದ್ದನು. ಇದರಿಂದ ಆಯಾಸವಾಗಿ ಈಗ ತಾನೇ ನಿದ್ರೆಯು ಹತ್ತುತ್ತಿದೆ. ಆದುದರಿಂದ ಯಶೋವಂತನಾದ ರಾಜಪುತ್ರನಾದ ರಾಮನನ್ನು ನೀನೀಗಲೆ ಇಲ್ಲಿಗೆ ಕರೆದುಕೊಂಡು ಬಾ. ನಿನಗೆ ಮಂಗಳವಾಗಲಿ. ನೀನೀ ವಿಷಯದಲ್ಲಿ ಹಿಂದೂ ಮುಂದೂ ಯೋಚಿಸುವ ಕಾರಣವಿಲ್ಲ. ಬೇಗ ಹೋಗು" ಎಂದಳು.
"ಭಾಮಿನಿ! ರಾಜನ ಅಭಿಪ್ರಾಯವನ್ನು ತಿಳಿಯದೇ ರಾಮನನ್ನು ಕರೆತರಲು ನಾನು ಹೇಗೆ ಹೋಗಲಿ?". ಮಂತ್ರಿಯು ಹೇಳಿದ ಮಾತನ್ನು ಕೇಳಿ ರಾಜನು ಸುಮಂತ್ರನೊಡನೆ "ಸುಮಂತ್ರ! ಸುಂದರನಾದ ರಾಮನನ್ನೊಮ್ಮೆ ನೋಡಬೇಕೆಂಡಿದ್ದೇನೆ. ಶೀಘ್ರವಾಗಿ ಅವನನ್ನಿಲ್ಲಿಗೆ ಕರೆದುಕೊಂಡು ಬಾ!". ರಾಜನ ಮಾತಿನಿಂದಾಗಲೀ ಕೈಕೇಯಿಯ ಮಾತಿನಿಂದಾಗಲೀ ಸುಮಂತ್ರನಿಗೆ ವಿಷಯವೇನೆಂಬುದೇ ಅರ್ಥವಾಗಲಿಲ್ಲ. ದಶರಥನು ರಾಮನ ಕಲ್ಯಾಣಕ್ಕಾಗಿಯೇ ಅವನನ್ನು ಕರೆಸುತ್ತಿರುವನೆಂದು ಭಾವಿಸಿದ ಸುಮಂತ್ರನು ರಾಜನ ಶಾಸನವನ್ನು ಶಿರಸಾವಹಿಸಿ ಅತ್ಯಂತ ಸಂತೋಷದಿಂದ ದಶರಥನ ಅಂತಃಪುರವನ್ನು ಬಿಟ್ಟು ರಾಮನ ಅರಮನೆಯ ಕಡೆಗೆ ಅವಸರದಿಂದಲೇ ಹೊರಟನು.
ರಾಮಭವನಕ್ಕೆ ಹೊರಟಾಗಲು ಪುನಃ ಕೈಕೇಯಿಯು, 'ಯಶೋವಂತನಾದ ರಾಜಪುತ್ರನನ್ನು ಇಲ್ಲಿಗೆ ಅತಿಶೀಘ್ರವಾಗಿ ಕರೆದುಕೊಂಡು ಬಾ' ಎಂದು ಒತ್ತಾಯ ಮಾಡಿ ಹೇಳಿದುದನ್ನು ನೆನೆದು ಸುಮಂತ್ರನು ಚಿಂತಿಸತೊಡಗಿದನು. "ಕೈಕೇಯಿಯು ಏತಕ್ಕಾಗಿ ರಾಮನ ಆಗಮನಕ್ಕೆ ಇಷ್ಟೊಂದು ಅವಸರ ಪಡುತ್ತಿದ್ದಾಳೆ? ಬಹುಶಃ ರಾಮನ ಪಟ್ಟಾಭಿಷೇಕಕ್ಕೆಂದೇ ಅವಸರ ಪಡುತ್ತಿರಬೇಕು. ಕೈಕೇಯಿಯೇ ಹೇಳಿದಂತೆ ರಾಮನ ಪಟ್ಟಾಭಿಷೇಕದ ಸಂತೋಷಾಧಿಕ್ಯದಿಂದ ದಶರಥನು ನಿನ್ನೆಯ ರಾತ್ರಿ ಜಾಗರಣೆ ಮಾಡಿದ್ದು, ಆಯಾಸಗೊಂಡು ಇಂದು ಪಟ್ಟಾಭಿಷೇಕವಾಗುವ ಸ್ಥಳಕ್ಕೆ ಬರಲಾಗದೇ ರಾಮನನ್ನು ಅಂತಃಪುರಕ್ಕೆ ಕರೆಯಿಸಿ, ಪಟ್ಟಾಭಿಷಿಕ್ತನಾಗಲು ಅನುಜ್ಞೆಯನ್ನು ನೀಡುವ ಸಲುವಾಗಿಯೇ ರಾಮನನ್ನು ಶೀಘ್ರವಾಗಿ ಕರೆತರಲು ಹೇಳಿರಬಹುದು" ಎಂದು ಯೋಚಿಸಿ ಆನಂದಭರಿತನಾಗಿ, ರಾಘವನನ್ನು ನೋಡುವ ಆಶಯದಿಂದ ವೇಗವಾಗಿ ನಡೆದನು.







Comments