ಕೌಸಲ್ಯೆಯ ದುಃಖ (ರಾಮಾಯಣ ಕಥಾಮಾಲೆ 25)
- Ganapati Hegde Moodkani

- Nov 30, 2025
- 2 min read
ಮರುದಿನ ತನಗೆ ಯೌವರಾಜ್ಯ ಪಟ್ಟಾಭಿಷೇಕವಾಗುವುದೆಂಬ ಶುಭ ವಾರ್ತೆಯನ್ನು ಶ್ರೀರಾಮನಿಂದಲೇ ಕೇಳಿದ್ದ ಪುತ್ರ ಹಿತೈಷಿಣಿಯಾದ ಕೌಸಲ್ಯಾದೇವಿಯು ಶ್ರೀರಾಮನ ಪಟ್ಟಾಭಿಷೇಕ ಕಾಲದಲ್ಲಿ ಸಕಲದೇವತೆ ಜಾಗರಣೆಯಿಂದ ಕಳೆದು ಬೆಳಗಾಗುತ್ತಲೇ ಮಂಗಳ ಸ್ನಾನ ಮಾಡಿ ಶುಚಿಯಾಗಿ ಪಟ್ಟೆವಸ್ತ್ರಗಳನುಟ್ಟು ಶ್ರೀರಾಮನು ಬರುವ ವೇಳೆಗೆ ಪರಾತ್ಪರನಾದ ಮಹಾವಿಷ್ಣುವಿನ ಪೂಜೆಯನ್ನು ಮಾಡಿ ಮುಗಿಸಿದ್ದಳು. ಆ ಸಮಯಕ್ಕೆ ಸರಿಯಾಗಿ ಶ್ರೀರಾಮನು ಶುಭಪ್ರದವಾದ ತಾಯಿಯ ಅಂತಃಪುರವನ್ನು ಪ್ರವೇಶಿಸಿ, ತನ್ನ ತಾಯಿಯು ಬ್ರಾಹ್ಮಣರ ಮೂಲಕ ಅಗ್ನಿಯಲ್ಲಿ ಶ್ರೇಯಃ ಪ್ರದವಾದ ಹೋಮಮಾಡಿಸುತ್ತಿರುವುದನ್ನು ನೋಡಿದನು.

ಬೆಳಗಾದ ಬಹಳ ಹೊತ್ತಿನ ಮೇಲೆ ಮಾತೃನಂದನನಾದ ಪ್ರಿಯಪುತ್ರನಾದ ಶ್ರೀರಾಮನು ತನ್ನ ಅಂತಃಪುರಕ್ಕೆ ಬಂದುದನ್ನು ಕಂಡು ಸಂತಸಗೊಂಡ ಕೌಸಲ್ಯೆಯು ರಾಮನ ಬಳಿಗೆ ಧಾವಿಸಿದಳು. ತನ್ನ ಬಳಿಗೆ ಧಾವಿಸಿ ಬಂದ ತಾಯಿಗೆ ರಾಘವನು ಅಭಿವಾದನಪೂರ್ವಕವಾಗಿ ನಮಸ್ಕರಿಸಿದನು. ಒಡನೆಯೇ ಕೌಸಲ್ಯೆಯು ತನ್ನ ಪ್ರಿಯಸುತನನ್ನು ಎರಡೂ ಕೈಗಳಿಂದಲೂ ಹಿಡಿದೆತ್ತಿ, ಎರಡೂ ತೋಳುಗಳಿಂದಲೂ ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿ, "ಮಗು! ಈಗಲೇ ನೀನು ಸತ್ಯ ಪ್ರತಿಜ್ಞನಾದ, ರಾಜನಾದ ನಿನ್ನ ತಂದೆಯನ್ನು ಕಾಣು ಧರ್ಮಾತ್ಮನಾದ ನಿನ್ನ ತಂದೆಯು ನಿನಗೆ ಇಂದೇ ಯುವರಾಜ ಪದವಿಯಲ್ಲಿ ಪಟ್ಟಾಭಿಷೇಕವನ್ನು ಮಾಡುವನು. ಭೋಜನ ಮಾಡಿಕೊಂಡು ತಂದೆಯ ಬಳಿ ಹೋಗು" ಎಂದು ಹೇಳಿ ಕೌಸಲ್ಯೆಯು ಭೋಜನಕ್ಕೆಂದು ಸಿದ್ಧ ಪಡಿಸಿದ ಪೀಠವನ್ನು ತಾಯಿಯ ಮಾತಿಗೆ ಗೌರವ ಕೊಡಬೇಕೆಂಬ ಆಶಯದಿಂದ ಸ್ಪರ್ಶ ಮಾಡಿ ವಿನಯದಿಂದ ಕೈಮುಗಿದು, "ತಾಯೇ! ಮಹಾಭಯವು ಸನ್ನಿಹಿತವಾಗಿರುವುದೆಂಬುದನ್ನು ನೀನರಿಯೇ ಇಂದಿನ ಸನ್ನಿವೇಶವು ನಿನಗೂ, ಸೀತೆಗೂ ಹಾಗೂ ಲಕ್ಷ್ಮಣನಿಗೂ ಅತ್ಯಂತ ದುಃಖವನ್ನು ಉಂಟುಮಾಡುವುದಾಗಿದೆ. ನಾನೀಗಲೇ ದಂಡಕಾರಣ್ಯಕ್ಕೆ ಹೋಗುವೆನಮ್ಮಾ! ಈ ಸುವರ್ಣಮಯವಾದ ಆಸನವಾದರೂ ನನಗೇಕೆ? ದರ್ಭಾಸನದಲ್ಲಿ ಕುಳಿತುಕೊಳ್ಳಲು ಯೋಗ್ಯವಾದ ಕಾಲವು ನನಗೆ ಸನ್ನಿಹಿತವಾಗಿದೆ. ಹದಿನಾಲ್ಕು ವರ್ಷಗಳ ಕಾಲ ಜನರಹಿತವಾದ ದಂಡಕಾರಣ್ಯದಲ್ಲಿ ಮುನಿಗಳಂತೆ ಭೋಗ್ಯ ವಸ್ತುಗಳನ್ನು ತೊರೆದು ಕಂದ-ಮೂಲ-ಫಲಗಳನ್ನು ಸೇವಿಸುತ್ತಾ ಜೀವಿಸುತ್ತೇನೆ" ಎಂದನು.
ಶ್ರೀರಾಮನ ಮಾತುಗಳನ್ನು ಕೇಳಿದೊಡನೆಯೇ ಕೌಸಲ್ಯಾದೇವಿಯು ಅಂತರಿಕ್ಷದಿಂದ ಬಿದ್ದ ದೇವತೆಯಂತೆ ದೊಪ್ಪನೆ ನೆಲದ ಮೇಲೆ ಬಿದ್ದು ಬಿಟ್ಟಳು. ಬಿದ್ದು ಮೂರ್ಛಿತಳಾದ ತಾಯಿಯನ್ನು ಶ್ರೀರಾಮನು ಒಡನೆಯೇ ಹಿಡಿದೆತ್ತಿ ಕುಳ್ಳಿರಿಸಿದನು. ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಿ ಆನಂದಿಸಲು ಅರ್ಹಳಾಗಿದ್ದು ಅದಕ್ಕೆ ವಿರುದ್ಧವಾದ ವಾರ್ತೆಯನ್ನು ಕೇಳಿ ದುಃಖ ಪೀಡಿತಳಾದ ಕೌಸಲ್ಯಾ ದೇವಿಯು ಹತ್ತಿರದಲ್ಲಿ ಕುಳಿತಿದ್ದ ಪುತ್ರ ವ್ಯಾಘ್ರನಾದ ಶ್ರೀರಾಮನಿಗೆ ಪಕ್ಕದಲ್ಲಿಯೇ ಇದ್ದ ಲಕ್ಷ್ಮಣನಿಗೂ ಕೇಳಿಸುವಂತೆ, "ಮಗು! ನನಗೆ ಈ ವಿಧವಾದ ಪರಮದಾರುಣವಾದ ಪುತ್ರ ವಿಯೋಗ ದುಃಖವನ್ನುಂಟುಮಾಡಲು ನೀನು ಹುಟ್ಟದಿದ್ದರೇ ಚೆನ್ನಾಗಿತ್ತು. ಆಗ ಬಂಜೆಯೆಂಬ ಮಾನಸಿಕವಾದ ದುಃಖವೊಂದರ ಹೊರತಾಗಿ ಅದಕ್ಕಿಂತಲೂ ಮಿಗಿಲಾದ ಇಂತಹ ದುಃಖವನ್ನು ನಾನು ಅನುಭವಿಸಬೇಕಿರಲಿಲ್ಲ. ಸವತಿಯರಿಂದ ಕೆಟ್ಟ ಮಾತುಗಳನ್ನು ಕೇಳುವುದಕ್ಕಿಂತಲೂ ದುಃಖಕರವಾದುದು ಹೆಂಗಸರಿಗೆ ಬೇರೆಯಾವುದಿದೆ? ನಿಶ್ಚಯವಾಗಿ ಹೇಳುವುದಾದರೆ ಮಗು! ನನ್ನ ದುಃಖ-ಶೋಕಗಳ ಪಾರವೆಷ್ಟೆಂಬುದನ್ನು ಹೇಳ ತೀರದಾಗಿದೆ. ಅದು ಅನಂತವಾದುದು. ನೀನು ನನ್ನ ಬಳಿಯಲ್ಲಿರುವಾಗಲೇ ಸವತಿಯರು ನನ್ನನ್ನು ತಿರಸ್ಕಾರಭಾವದಿಂದ ಕಾಣುತ್ತಿದ್ದಾರೆ. ನೀನೂ ಇಲ್ಲಿಂದ ಹೊರಟು ಹೊಡೆಯಾದರೆ ನನ್ನ ಪಾಡೆನಾಗುವುದೆಂಬುದನ್ನು ಹೇಳಬೇಕಾಗಿಯೇ ಇಲ್ಲ. ರಾಮ ನೀನು ಹುಟ್ಟಿ ಹದಿನೇಳು ವರ್ಷಗಳು ಕಳೆದುಹೋದವು. ಇನ್ನು ಮೇಲಾದರೂ ನನ್ನ ದುಃಖವು ಕಡಿಮೆಯಾಗುವುದೆಂದು ಆಶಿಸಿದ್ದೆನು. ಆದರೆ ನನ್ನ ದುಃಖವು ಅಕ್ಷಯವಾಗಿದೆ. ಈ ದುಃಖವನ್ನು ಬಹಳಕಾಲದವರೆಗೆ ಸಹಿಸಿಕೊಂಡಿರಲು ನನಗೆ ಸಾಧ್ಯವಿಲ್ಲ. ರಾಮ! ಆದರೆ ನನ್ನ ಹೃದಯವು ದುಃಖದ ಆವೇಗದಿಂದ ಬಿರುದು ಹೋಗಲಿಲ್ಲ. ಚೀತ್ಕಾರ ಮಾಡುತ್ತಿರುವ ಹೆಣ್ಣುಜಿಂಕೆಯನ್ನು ಸಿಂಹವು ಬಲಾತ್ಕಾರದಿಂದ ಸೆಳೆದುಕೊಂಡು ಹೋಗುವಂತೆ ಬಹಳ ದುಃಖಿತೆಯಾಗಿರುವ ನನ್ನನ್ನು ಮೃತ್ಯುವು ಈಗಲೇ ಸೆಳೆದುಕೊಂಡು ಹೋಗದಿರುವುದನ್ನು ನೋಡಿದರೆ ನನಗೆ ನಿಶ್ಚಯವಾಗಿಯೂ ಮರಣವೇ ಇಲ್ಲ. ಯಮನ ಮನೆಯಲ್ಲಿ ನನಗೆ ಸ್ಥಳವೂ ಇಲ್ಲ. ರಾಮ! ನನಗೆ ಮರಣವು ಒಡನೆಯೇ ಪ್ರಾಪ್ತವಾಗದಿದ್ದರೂ ನೀನಿಲ್ಲದ ನನ್ನ ಜೀವನವು ವ್ಯರ್ಥವೇ ಸರಿ ಆದುದರಿಂದ ಕರುವನ್ನರಸಿ ತಾಯಿಯು ವಾತ್ಸಲ್ಯದಿಂದ ಅದರ ಹಿಂದೆಯೇ ಹೋಗುವಂತೆ ದುಃಖದಿಂದ ಅತಿ ದುರ್ಬಲಳಾಗಿರುವ ನಾನು ನಿನ್ನ ಮೇಲಿನ ವಾತ್ಸಲ್ಯದಿಂದ ನಿನ್ನ ಜೊತೆಯಲ್ಲಿಯೇ ಅರಣ್ಯಕ್ಕೆ ಬಂದು ಬಿಡುತ್ತೇನೆ" ಎಂದಳು.
ಕೌಸಲ್ಯಾ ದೇವಿಯು ಆ ಸಮಯದಲ್ಲಿ ಆಕಸ್ಮಿಕವಾಗಿ ಒದಗಿದ ದುಃಖವನ್ನು ಸಹಿಸಿಕೊಳ್ಳಲಾಗದೆ ಹೋದಳು. ದುಃಖದ ವಾರ್ತೆಯನ್ನು ಕೇಳಿ ಮಗನು ತಂದೆಯ ಆಜ್ಞೆಗೆ ಕಟ್ಟು ಬಿದ್ದಿರುವುದನ್ನು ಮನಗಂಡು ಶ್ರೀರಾಮನನ್ನೇ ಎವೆಯಿಕ್ಕದೇ ನೋಡುತ್ತಾ ಬಂಧನಕ್ಕೆ ಸಿಕ್ಕಿದ ಮಗನನ್ನು ನೋಡಿ ದುಃಖಗೊಂಡ ಕಿನ್ನರಿಯಂತೆ ಕೌಸಲ್ಯೆಯು ಬಹಳವಾಗಿ ಗೋಳಾಡಿದಳು.







Comments