ಅಭಿಷೇಕದಿಂದ ಅರಣ್ಯವಾಸದ ಆಘಾತಕ್ಕೆ (ರಾಮಾಯಣ ಕಥಾಮಾಲೆ 24)
- Ganapati Hegde Moodkani

- Nov 23, 2025
- 2 min read
ಶತ್ರುಸೂದನನಾದ ಶ್ರೀರಾಮನು ಅಪ್ರಿಯವಾದ ಮತ್ತು ಮರಣ ಸಮಾನವಾದ ಕೈಕೆಯಿಯ ಅಂತಹ ಮಾತುಗಳನ್ನು ಕೇಳಿಯೂ ದುಃಖಗೊಳ್ಳಲಿಲ್ಲ. ಅಂತಯೇ ಕೈಕೇಯಿಗೆ " ಹಾಗೆಯೇ ಆಗಲಿ, ತಾಯೇ! ರಾಜನ ಪ್ರತಿಜ್ಞಾ ವಚನವನ್ನು ಪರಿಪಾಲಿಸುವ ಸಲುವಾಗಿ ಜಟಾವಲ್ಕಗಳನ್ನು ಧರಿಸಿ ಇಲ್ಲಿಂದ ಅರಣ್ಯಕ್ಕೆ ಹೋಗಿ ಅಲ್ಲಿಯೇ ವಾಸ ಮಾಡಿಕೊಂಡಿರುತ್ತೇನೆ. ಆದರೆ ಈ ಒಂದು ವಿಷಯವನ್ನು ಮಾತ್ರ ನಿನ್ನಿಂದ ಕೇಳಿ ತಿಳಿದುಕೊಳ್ಳಲು ಬಯಸುತ್ತೇನೆ. ಅತುಲ ಪರಾಕ್ರಮಿಯಾದ ರಾಜನೇಕೆ ನನ್ನೊಡನೆ ಹಿಂದಿನಂತೆ ಸಂತೋಷದಿಂದ ಮಾತನಾಡುತ್ತಿಲ್ಲ? ಇದರ ಕಾರಣವನ್ನು ದಯಮಾಡಿ ಹೇಳು, ತಾಯೇ!" ಎಂದನು.
ಶ್ರೀರಾಮನ ಮಾತುಗಳನ್ನು ಕೇಳಿ ಸಂತುಷ್ಟಳಾದ ಕೈಕೇಯಿಗೆ, ಶ್ರೀರಾಮನು ಖಂಡಿತವಾಗಿಯೂ ಅರಣ್ಯಕ್ಕೆ ಹೋಗುವನೆಂಬ ವಿಶ್ವಾಸವುಂಟಾಗಿ, ಅವನನ್ನು ಒಡನೆಯೇ ಕಾಡಿಗೆ ಹೋಗಲು ಅವಸರ ಪಡಿಸುತ್ತಾ, " ರಾಮ! ನೀನು ಹೇಳಿದಂತೆ ಶೀಘ್ರಗಾಮಿಗಳಾದ ಕುದುರೆಗಳ ಮೂಲಕ ರಾಜಭಟರು ಭರತನನ್ನು ಅವನ ಸೋದರ ಮಾವನ ಮನೆಯಿಂದ ಕರೆತರಲು ಹೋಗುತ್ತಾರೆ. ಆದರೆ ತಂದೆಯ ಸತ್ಯ ವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋಗಲು ಉತ್ಸುಕನಾಗಿರುವ ನೀನು ಯಾವುದೇ ಕಾರಣದಿಂದಲೂ ತಡಮಾಡುವುದು ನನಗೆ ಉಚಿತವಾಗಿ ಕಾಣುವುದಿಲ್ಲ. ಆದುದರಿಂದ ನೀನೀಗಲೇ ಕಾಡಿಗೆ ಹೊರಟುಹೋಗು. ರಾಜನು ನಾಚಿಕೆಗೊಂಡಿರುವುದೇ ನಿನ್ನೊಡನೆ ಮಾತನಾಡದಿರುವುದಕ್ಕೆ ಕಾರಣವಾಗಿದೆ. ಬೇರಾವ ಕಾರಣವೂ ಇಲ್ಲ. ರಾಜನು ಮಾತನಾಡಲಿಲ್ಲವೆಂಬ ನಿನ್ನ ಶೋಕವನ್ನು ಪರಿತ್ಯಜಿಸು. ನೀನು ಎಲ್ಲಿಯವರೆಗೆ ಈ ಅಯೋಧ್ಯಾ ಪಟ್ಟಣದಿಂದ ಅವಸರಪಟ್ಟುಕೊಂಡು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೂ ರಾಜನು ಸ್ನಾನವನ್ನೂ ಮಾಡುವುದಿಲ್ಲ ಊಟವನ್ನೂ ಮಾಡುವುದಿಲ್ಲ" ಎಂದಳು.

ಕೈಕೇಯಿಯ ಆ ಮಾತನ್ನು ಕೇಳಿದೊಡನೆ ಅದುವರೆಗೂ ಮೌನಿಯಾಗಿದ್ದ, ಶೋಕ ಸಾಗರದಲ್ಲಿ ಮುಳುಗಿ ಹೋಗಿದ್ದ ರಾಜನು, "ಅಯ್ಯೋ! ನನಗೆ ಧಿಕ್ಕಾರವಿರಲಿ; ಈ ಕಷ್ಟವನ್ನು ನಾನು ಸಹಿಸಿಕೊಳ್ಳಲಾರೆ ದಿಕ್ಕಷ್ಟಂ!' ಎಂದು ಉದ್ಗರಿಸುತ್ತ ದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಸುವರ್ಣ ಮಯವಾಗಿದ್ದ ಮಂಚದ ಮೇಲೆ ಮೂರ್ಚಿತನಾಗಿ ಬಿದ್ದನು. ಒಡನೆಯೇ ಶ್ರೀರಾಮನು ರಾಜನನ್ನು ಹಿಡಿದತ್ತಿ ಕುಳ್ಳಿರಿಸಿ ಉಪಚರಿಸಿದನು. ಆದರೆ ಕೈಕೇಯಿಗೆ ರಾಜನ ಸ್ಥಿತಿಯನ್ನು ನೋಡಿ ಮರುಕವೇನು ಉಂಟಾಗಲಿಲ್ಲ. ಶ್ರೀರಾಮನು ಸಾಧ್ಯವಾದಷ್ಟು ಶೀಘ್ರವಾಗಿ ಅರಣ್ಯಕ್ಕೆ ಹೊರಟು ಹೋದರೆ ಎಲ್ಲವೂ ಸರಿಹೋಗುವುದೆಂಬುದು ಅವಳ ಅನಿಸಿಕೆಯಾಗಿದ್ದಿತು. ಕೈಕೇಯಿಯ ಅಪ್ರಿಯವಾದ ಮತ್ತು ಕಠೋರವಾದ ಮಾತುನ್ನು ಕೇಳಿ ಶ್ರೀರಾಮನು, "ನಿಶ್ಚಯವಾಗಿಯೂ ಇಷ್ಟು ವರ್ಷಗಳ ಕಾಲ ನಿನ್ನ ಸನಿಹದಲ್ಲೇ ಇದ್ದರೂ ನನ್ನಲ್ಲಿರುವ ಗುಣಗಳನ್ನು ನೀನು ಲೇಶವಾದರೂ ತಿಳಿದವಳಾಗಿಲ್ಲ. ಇದು ಆಶ್ಚರ್ಯವೇ ಸರಿ. ನನಗೆ ಕಾಡಿಗೆ ಹೊರಡಲು ಸ್ವಲ್ಪವೇ ಸಮಯವು ಬೇಕಾಗಿದೆ. ಅಷ್ಟಕ್ಕೆ ಅವಕಾಶ ಮಾಡಿಕೊಡು. ನನ್ನ ತಾಯಿಯ ಅಪ್ಪಣೆಯನ್ನು ಪಡೆಯಬೇಕಾಗಿದೆ. ಸೀತೆಯನ್ನು ಸಂತಾಯಿಸಬೇಕಾಗಿದೆ. ಇಷ್ಟು ಮಾಡಿದ ಕೂಡಲೇ ದಂಡಕಾರಣ್ಯಕ್ಕೆ ಹೊರಟು ಹೋಗುತ್ತೇನೆ. ಭರತನು ಯಾವ ರೀತಿಯಲ್ಲಿ ರಾಜ್ಯ ಪರಿಪಾಲನೆ ಮಾಡುವನೋ ಅದೇ ರೀತಿಯಲ್ಲಿ ತಂದೆಯ ಶುಶ್ರೂಷೆಯನ್ನು ಮಾಡುವಂತೆ ನೋಡಿಕೊಳ್ಳುವುದು ನಿನ್ನ ಕರ್ತವ್ಯವಾಗಿದೆ. ತಂದೆಯು ವೃದ್ಧನಾಗಿರುವಾಗ ಅವನ ಶುಶ್ರೂಷೆ ಮಾಡುವುದು ಸನಾತನಧರ್ಮ."
ಶ್ರೀರಾಮನ ಮಾತುಗಳನ್ನು ಕೇಳಿ ದಶರಥನು ಮಿತಿಮೀರಿ ದುಃಖಪೀಡಿತನಾದನು. ದುಃಖ್ಹೊದ್ವೇಗದಿಂದ ಧಾರಾಕಾರವಾಗಿ ಬರುತ್ತಿದ್ದ ಕಣ್ಣೀರನ್ನು ತಡೆಯಲಾಗದೆ ಗಟ್ಟಿಯಾಗಿದೆ ಬಿಕ್ಕಿ ಬಿಕ್ಕಿ ಅಳತೊಡಗಿದನು. ಶ್ರೀ ರಾಮನು ತಂದೆಗೂ ಮತ್ತು ಕೈಕೇಯಿಗೂ ಪ್ರದಕ್ಷಿಣೆ ಮಾಡಿ ಅಂತಃಪುರದಿಂದ ಹೊರಬಂದು ಆತ್ಮೀಯರನ್ನು ಸಂದರ್ಶಿಸಿದನು. ಅದುವರೆಗೂ ಶ್ರೀರಾಮನ ಹಿಂದೆಯೇ ನಿಂತು ವಿಷಯಗಳೆಲ್ಲವನ್ನು ಗ್ರಹಿಸಿದ್ದ ಸುಮಿತ್ರಾದೇವಿಯ ಆನಂದವರ್ಧನನಾದ ಲಕ್ಷ್ಮಣನು, ಕಂಬನಿ ದುಂಬಿದ ಕಣ್ಣುಗಳುಳ್ಳವನಾಗಿ ಪರಮಕ್ರುದ್ಧನಾಗಿ ಶ್ರೀರಾಮನನ್ನೇ ಅನುಸಿರಿಸಿಹೋದನು. ಶ್ರೀ ರಾಮನು ಅಂತಃಪುರದಿಂದ ಹೊರ ಬಿದ್ದೊಡನೆಯೇ ತನ್ನ ಅಭಿಷೇಕಕ್ಕಾಗಿ ಅನೇಕ ನದಿ -ನದ- ಸರೋವರ -ಸಮುದ್ರಗಳಿಂದ ತರಲ್ಪಟ್ಟಿದ್ದ ಪುಣ್ಯತೀರ್ಥಗಳ ಕಲಶಗಳನ್ನು ಪ್ರದಕ್ಷಿಣ ಪೂರ್ವಕವಾಗಿ ನಮಸ್ಕರಿಸಿ, ಆ ಭಾಂಡದ ತೀರ್ಥದಿಂದಲೇ ಭರತನ ಪಟ್ಟಾಭಿಷೇಕವಾಗಲೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾ ಅಭಿಷೇಕಾರ್ಥವಾಗಿ ಸಿದ್ಧಪಡಿಸಿದ್ದ ಸಾಮಗ್ರಿಗಳ ಕಡೆಗೆ ಒಮ್ಮೆಯೂ ದೃಷ್ಟಿಯನ್ನು ಹೊರಳಿಸದೆ ಮೆಲ್ಲಮೆಲ್ಲನೆ ಹೆಜ್ಜೆಗಳನ್ನಿಡುತ್ತಾ ಹೋಗುತ್ತಿದ್ದನು.
ಶುಭಕರವಾದ ಶ್ವೇತಚ್ಛತ್ರವನ್ನೂ ಅಲಂಕೃತವಾದ ಚಾಮರಗಳನ್ನೂ ಹಿಡಿದುಕೊಂಡು ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ರಾಜಭಟರನ್ನು ತನ್ನೊಡನೆ ಬಾರದಂತೆ ಪ್ರತಿಷೇಧಿಸಿ, ಆತ್ಮೀಯರನ್ನೂ ರಥವನ್ನೂ ಮತ್ತು ಪುರ ಜನರನ್ನೂ ರಾಜನ ಅಂತಃಪುರದ ಸಮೀಪದಲ್ಲಿಯೇ ಬಿಟ್ಟು, ದುಃಖವನ್ನು ಮನಸ್ಸಿನಲ್ಲಿಯೇ ಅಡಗಿಸಿಕೊಂಡು, ದುಃಖೋದ್ವೇಗದಿಂದ ಉಂಟಾಗುವ ಇಂದ್ರಿಯ ವಿಕಾರಗಳಿಗೂ ಅವಕಾಶವನ್ನೀಯದೆ, ಜಿತೇಂದ್ರಿಯನಾಗಿ ಆತ್ಮ ಬಲದಿಂದ ಕೂಡಿದವನಾಗಿ, ತಾಯಿಗೆ ಅಪ್ರಿಯವಾದ ಮಾತನ್ನು ಹೇಳಲು ಕೌಸಲ್ಯ ದೇವಿಯ ಅಂತಃಪುರವನ್ನು ಪ್ರವೇಶಿಸಿದನು. ಶ್ರೀರಾಮನ ಸುತ್ತಲೂ ಇದ್ದ ಸಕಲ ಶ್ರೀಮಂತ ಜನರಲ್ಲಿ ಯಾರಿಗೂ, ಶ್ರೀಮಂತನಾದ, ಸತ್ಯಸಂಧನಾದ ಶ್ರೀರಾಮನ ಮುಖದಲ್ಲಿ ಅಭಿಷೇಕವು ತಪ್ಪಿಹೋದುದಕ್ಕಾಗಿ ಮತ್ತು ವನವಾಸವು ಪ್ರಾಪ್ತವಾದದ್ದಕ್ಕಾಗಿ ಯಾವ ವಿಧವಾದ ವಿಕಾರವೂ ಕಂಡು ಬರಲಿಲ್ಲ.







Comments