top of page

ಸೀತೆಯೂ ವನವಾಸಕ್ಕೆ‌ ಸಿದ್ಧಳಾದಳು (ರಾಮಾಯಣ‌ ಕಥಾಮಾಲೆ 28)

ಕೌಸಲ್ಯಾದೇವಿಯನ್ನು ಅಭಿವಾದನಪೂರ್ವಕವಾಗಿ ನಮಸ್ಕರಿಸಿ, ಅವಳಿಂದ ಮಂಗಳಾಶಾಸನವನ್ನು ಪಡೆದು ಧರ್ಮಿಷ್ಠರ ಮಾರ್ಗಾನುವರ್ತಿಯಾದ ಶ್ರೀರಾಮನು ಅರಣ್ಯಕ್ಕೆ ಹೊರಡಲು ಉದ್ಯುಕ್ತನಾದನು.


ಇತ್ತಲಾಗಿ ತಪಸ್ವಿನಿಯಾದ ವೈದೇಹಿಯಾದರೋ ಶ್ರೀರಾಮನ ಪಟ್ಟಾಭಿಷೇಕಕ್ಕೆ ಉಂಟಾದ ವಿಘಾತವನ್ನು ಕೇಳಿರಲಿಲ್ಲ. ಶ್ರೀರಾಮನಿಗೆ ಯೌವರಾಜ್ಯಾಭಿಷೇಕವಾಗುವುದೆಂದೇ ಅವಳ ಮನಸ್ಸಿನಲ್ಲಿ ಇನ್ನೂ ಇದ್ದಿತು. ಆನಂದ ತುಂದಿಲರಾದ ಜನರಿಂದ ತುಂಬಿಹೋಗಿದ್ದ, ಚೆನ್ನಾಗಿ ಅಲಂಕರಿಸಲ್ಪಟ್ಟಿದ್ದ ಅರಮನೆಯನ್ನು ಪ್ರವೇಶಿಸಿದೊಡನೆಯೇ ಶ್ರೀರಾಮನು ಅಲ್ಲಿದ್ದ ಜನರ ಉತ್ಸಾಹವನ್ನು ನೋಡಿ ನಾಚಿ ತಲೆ ತಗ್ಗಿಸಿದನು. ಅವನು ಅಂತಃಪುರಕ್ಕೆ ಬಂದೊಡನೆಯೇ ಸೀತೆಯು ಮೇಲೆದ್ದಳು. ಶೋಕಸಂತಪ್ತನಾಗಿಯೂ, ಚಿಂತೆಯಿಂದ ವ್ಯಾಕುಲಗೊಂಡ ಇಂದ್ರಿಯಗಳುಳ್ಳವನಾಗಿಯೂ ಇದ್ದ ಶ್ರೀರಾಮನನ್ನು ಭ್ರಾಂತಿಯಿಂದ ನಡುಗುತ್ತಾ ನೋಡಿದಳು. ತಾಯಿಗೂ, ತಮ್ಮನಿಗೂ ಸಮಾಧಾನವನ್ನು ಹೇಳಿದ ಶ್ರೀರಾಮನು ಸೀತೆಯ ಬಳಿಗೆ ಬಂದೊಡನೆಯೇ ದುಃಖಿತನಾದನು. ಬಾಡಿದ ಮುಖವುಳ್ಳವನಾಗಿದ್ದ, ಬೆವರಿನಿಂದ ತೊಯ್ದುಹೋಗಿದ್ದ ಶ್ರೀರಾಮನನ್ನು ನೋಡು ದುಃಖದಿಂದ ಪರಿತಪಿಸುತ್ತಾ ಸೀತೆಯು, "ಕಿಮಿದಾ ನೀಮಿದಂ ಪ್ರಭೋ-- ಪ್ರಭುವೇ! ಈ ಸಮಯದಲ್ಲಿ ಇದೇನಿದು? ಹೀಗೇಕಿರುವೆ? ಸಂತಸದಿಂದಿರಬೇಕಾದ ನೀನೇಕೆ ಇಂದು ಮನಸ್ಕನಾಗಿರುವೆ? ಈ ವಿಧವಾದ ನಿನ್ನ ಮುಖಭಾವವು ಅಪೂರ್ವವಾದುದು; ಹಿಂದೆಂದೂ ಕಂಡಿರಲಿಲ್ಲ. ಏಕೆ ಹೀಗಿರುವೆ?" ಎಂದು ಪ್ರಲಾಪಿಸಿದಳು.



ಶ್ರೀರಾಮನು "ಸೀತೆ! ಪೂಜ್ಯಪಾದನಾದ ತಂದೆಯು ನನ್ನನ್ನು ಅರಣ್ಯಕ್ಕೆ ಕಳುಹಿಸುತ್ತಿದ್ದಾನೆ. ಯಾವ ಕಾರಣದಿಂದಾಗಿ ನನ್ನ ತಂದೆಯು ನನ್ನನು ಅರಣ್ಯಕ್ಕೆ ಕಳುಹಿಸಲಿರುವನೆಂಬುದನ್ನೂ ಹೇಳುವೆನು" ಎಂಬುದಾಗಿ ಶ್ರೀರಾಮನು ಹಿಂದಿನ ವೃತ್ತಾಂತಗಳೆಲ್ಲವನ್ನೂ ವಿವರಿಸಿ ಮುಂದುವರಿದು, "ಸೀತೆ! ನಾನು ಈಗಲೇ ಗುರುವಾದ ನನ್ನ ತಂದೆಯ ಪ್ರತಿಜ್ಞೆಯನ್ನು ಪರಿಪಾಲಿಸುವ ಸಲುವಾಗಿ ಅರಣ್ಯಕ್ಕೆ ಹೋಗುತ್ತೇನೆ. ನಾನು ಅರಣ್ಯಕ್ಕೆ ಹೊರಟುಹೋದ ನಂತರ ನೀನು ವೃತೋಪವಾಸನಿಷ್ಠಳಾಗಿರಬೇಕು. ಅರುಣೋದಯವಾಗುತ್ತಲೇ ಹಾಸಿಗೆಯಿಂದೆದ್ದು, ಮಡಿಯುಟ್ಟು ಯಥಾವಿಧಿಯಾಗಿ ದೇವತೆಗಳಿಗೆ ಪೂಜೆಯನ್ನು ಮಾಡಿ, ಜನೇಶ್ವರನಾದ ನನ್ನ ತಂದೆಯಾದ ದಶರಥನಿಗೆ ನಮಸ್ಕಾರ ಮಾಡಬೇಕು. ನನ್ನ ತಾಯಿಯಾದ ಕೌಸಲ್ಯೆಯಾದರೋ ಇಳಿವಯಸ್ಸಿನವಳು. ಪುತ್ರ ವಿಯೋಗವಾಗುವುದೆಂಬ ಸಂತಾಪದಿಂದ ಪೀಡಿತಳಾಗಿದ್ದಾಳೆ. ಅವಳನ್ನೂ ನೀನು ಧರ್ಮೇಕ ದೃಷ್ಟಿಯಿಂದ ಗೌರವಿಸಬೇಕು. ನಿನ್ನ ಉಳಿದ ಚಿಕ್ಕ ತಾಯಿಯರನ್ನೂ ನೀನು ಅನುದಿನವೂ ಸಮಸ್ಕರಿಸುತ್ತಾ ಗೌರವಿಸಬೇಕು. ಭರತ ಶತ್ರುಘ್ನರು ನನ್ನ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯರಾಗಿರುತ್ತಾರೆ. ಅವರನ್ನೂ ನೀನು ವಿಶೇಷವಾಗಿ ತಮ್ಮಂದಿರಂತೆಯೂ ಮಕ್ಕಳಂತೆಯೂ ಕಾಣಬೇಕು. ಭರತನಿಗೆ ಅಪ್ರಿಯವಾದ ಕಾರ್ಯವನ್ನು ಯಾವಾಗಲೂ ಮಾಡಲೇಬಾರದು. ಕಲ್ಯಾಣೀ! ನನ್ನನ್ನಗಲಿ ನೀನು ಧರ್ಮದಲ್ಲಿಯೇ ನಿರತಳಾಗಿ, ಸತ್ಯನಿಷ್ಠಳಾಗಿ, ವೃತಾನುಷ್ಠಾನಪರಳಾಗುತ್ತಾ ರಾಜನಾದ ಭರತನನ್ನು ಅನುಸರಣೆ ಮಾಡಿಕೊಂಡಿರು" ಎಂದನು.


ಶ್ರೀರಾಮನು ಹೀಗೆ ಹೇಳಿದನಂತರ ವೈದೇಹಿಯು ಕೋಪಗೊಂಡವಳಂತೆ ಗಂಡನೊಡನೆ "ರಾಮಭದ್ರ! ಇದೇನು ಇಷ್ಟು ಹಗುರವಾಗಿ ಮಾತನಾಡುತ್ತಿರುವೆ? ಈ ನಿನ್ನ ಮಾತುಗಳು ವೀರರಾದ, ಶಸ್ತ್ರಾಸ್ತ್ರಗಳಲ್ಲಿ ಪರಿಣಿತರಾದ ರಾಜಪುತ್ರರು ಹೇಳತಕ್ಕುವುಗಳಲ್ಲ. ವೀರಪತ್ನಿಯಾದ ನನಗೂ ಈ ಮಾತು ಕೇಳಲು ಕೂಡ ಅರ್ಹವಾಗಿಲ್ಲ. ತಂದೆ, ತಾಯಿ, ಸಹೋದರ, ಮಗ, ಸೊಸೆ ಇವರೆಲ್ಲರೂ ತಾವು ಮಾಡಿದ ಪುಣ್ಯ ಪಾಪಗಳ ಫಲರೂಪವಾದ ತಮ್ಮ ತಮ್ಮ ಶುಭಾಶುಭಫಲಗಳನ್ನು ಪಡೆಯುತ್ತಾರೆ. ಆದರೆ ಭಾರ್ಯೆಯ ವಿಷಯ ಹಾಗಲ್ಲ.

'ಭರ್ತು ರ್ಭಾಗ್ಯಂ ತು ಭಾರ್ಯೈಕಾ ಪ್ರಾಪ್ನೋತಿ ಪುರುಷರ್ಷಭ| ಪತ್ನಿಯಾದವಳು ಮಾತ್ರವೇ ಪತಿಯ ಭಾಗ್ಯವನ್ನು ಪಡೆಯುತ್ತಾಳೆ. ಆದುದರಿಂದ ನನ್ನ ಅತ್ತೆ ಮಾವಂದಿರು ನನ್ನನ್ನು ಪ್ರತ್ಯೇಕವಾಗಿ ಕರೆಯಿಸಿ ಕಾಡಿಗೆ ಹೋಗುವಂತೆ ಹೇಳಬೇಕಾದ ಕಾರಣವಿಲ್ಲ. ನಿನ್ನ ಅರ್ಧಾಂಗಿಯಾದ ನನ್ನನ್ನು ಕಾಡಿಗೆ ಹೋಗಲು ಹೇಳಿದಂತೆಯೇ ಸರಿ. 'ಇಹ ಪ್ರೇತ್ಯ ಚ ನಾರೀಣಾಂ ಪತಿರೇಕೋ ಗತಿಃ ಸದಾ'

ತಂದೆಯಾಗಲೀ, ಮಗನಾಗಲೀ, ತಾಯಿಯಾಗಲೀ ಸುಖೀಜನರಾಗಲೀ ಹೆಂಗಸಿಗೆ ರಕ್ಷಕರಾಗುವುದಿಲ್ಲ. ತಾನಾಗಿಯೇ ರಕ್ಷಿಸಿಕೊಳ್ಳಲು ಕೂಡ ಸ್ತ್ರೀಯು ಸ್ವತಂತ್ರಳಲ್ಲ. ಇಹದಲ್ಲಾಗಲೀ ಪರದಲ್ಲಾಗಲೀ ಪ್ರತಿಯೊಬ್ಬನೇ ಸ್ತ್ರೀಯರಿಗೆ ಪರಮಾಶ್ರಯನು. ದುರ್ಗಮವಾದ ಅರಣ್ಯಕ್ಕೆ ನೀನು ಈಗಲೇ ಹೊರಡುವುದಾದರೂ, ಹಾದಿಯಲ್ಲಿರುವ ಮುಳ್ಳುಗಳನ್ನೂ ದರ್ಭೆಯನ್ನೂ ನಾಶಗೊಳಿಸಿ ನಿನ್ನ ಮಾರ್ಗವನ್ನು ಸುಗಮಗೊಳಿಸಲು ನಿನಗಿಂತಲೂ ಮೊದಲೇ ನಾನು ಹೊರಡುತ್ತೇನೆ. ಅನೇಕ ಮೃಗಗಳಿಂದ ವ್ಯಾಪ್ತವಾದ, ಕಪಿಗಳಿಂದಲೂ, ಆನೆಗಳಿಂದಲೂ ಕೂಡಿರುವ ದುರ್ಗಮವಾದ ಅರಣ್ಯಕ್ಕೆ ನಿನ್ನೊಡನೆ ಪ್ರಯಾಣ ಮಾಡುತ್ತೇನೆ. ನಾನು ನನ್ನ ತವರು ಮನೆಯಲ್ಲಿರುವಷ್ಟೇ ಆನಂದದಿಂದ, ನಿನ್ನ ಪಾದಸೇವೆಯನ್ನು ಮಾಡುತ್ತಾ ನಿಯಮನಿಷ್ಠಳಾಗಿ ಅರಣ್ಯದಲ್ಲಿ ವಾಸ ಮಾಡುತ್ತೇನೆ. ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರಲ್ಲಿಯೂ ವಿಶ್ವಾಸವಿಡದಿರುವ, ನಿನ್ನಲ್ಲಿಯೇ ಯಾವಾಗಲೂ ಅನುರಕ್ತವಾದ ಬುದ್ಧಿಯಿಂದ ಕೂಡಿರುವ, ನಿನ್ನಿಂದ ವಿಯೋಗವೇನಾದರೂ ಆದರೆ ಮರಣ ಹೊಂದಲು ನಿಶ್ಚಯಿಸಿರುವ, ನನ್ನ ಪ್ರಾರ್ಥನೆಯನ್ನು ನಡೆಸಿಕೊಂಡು ನನ್ನನ್ನೂ ಅರಣ್ಯಕ್ಕೆ ಕರೆದುಕೊಂಡು ಹೋಗು. ನನ್ನಿಂದ ನಿನಗೆ ಹೆಚ್ಚಿನ ಭಾರವೇನೂ ಆಗುವುದಿಲ್ಲ" ಎಂದಳು.


ಧರ್ಮವತ್ಸಲೆಯಾದ ಸೀತಾದೇವಿಯು ಹೀಗೆ ಹೇಳುತ್ತಿದ್ದರೂ ನರಶ್ರೇಷ್ಠನಾದ ಶ್ರೀರಾಮನು ಸೀತೆಯನ್ನು ಅರಣ್ಯಕ್ಕೆ ಕರೆದೊಯ್ಯಲು ಇಷ್ಟ ಪಡಲಿಲ್ಲ. ಅವಳ ಮನಸ್ಸನ್ನು ಅರಣ್ಯವಾಸದಿಂದ ಹಿಂದಿರುಗಿಸಲು ಸಾಧಕನಾದ ಅನೇಕ ಮಾತುಗಳನ್ನೂ ಅರಣ್ಯವಾಸದ ಕಷ್ಟಗಳನ್ನೂ ವಿವರಿಸಿ ಹೇಳಿದನು. ಆದರೆ ಸೀತೆಯೂ ಶ್ರೀರಾಮನ ಮಾತನ್ನು ಕೇಳಲಿಲ್ಲ. ಅರಣ್ಯಕ್ಕೆ ಹೋಗಲೇ ಬೇಕೆನ್ನುವ ದೃಢತೆಯಿಂದ ಪುನಃ ರಾಮನನ್ನು ಒತ್ತಾಯ ಪಡಿಸಿದಳು. ದುಃಖದಿಂದ ಪರಿತಪಿಸುತ್ತಾ ಕಲ್ಲುಮನಸ್ಸಿನವರಿಗೂ ಕರುಣೆಯುಂಟಾಗುವ ರೀತಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತಳು. ಪತಿಯನ್ನು ಬಿಟ್ಟಿರಲಾರದೇ ಅವನನ್ನು ಬಿಗಿಯಾಗಿ ಅಪ್ಪಿಕೊಂಡು ' ಪ್ರಾಣೇಶ್ವರ! ನನ್ನನ್ನು ಬಿಟ್ಟು ಹೋಗಬೇಡ ' ಎಂದು ಗಟ್ಟಿಯಾಗಿ ಕೂಗಿಕೊಂಡಳು.


ಸೀತೆಯ ಈ ಪರಿಯ ದುಃಖವನ್ನು ನೋಡಲಾರದೆ ಶ್ರೀರಾಮನು "ದೇವಿ! ನೀನು ದುಃಖ ಪಡುತ್ತಿರುವಾಗ ಸ್ವರ್ಗವೂ ನನಗೆ ಇಷ್ಟವಾಗುವುದಿಲ್ಲ. ನಾನು ಅರಣ್ಯದಲ್ಲಿ ನಿನ್ನೊಡನೆ ವಾಸಮಾಡುತ್ತೇನೆ ಎಂದು ಹೇಳಿ ನನ್ನನ್ನು ಅನುಸರಿಸಿ ಬರಲು ನೀನು ನಿಶ್ಚಯಿಸಿದೆಯಾದ ಕಾರಣ ನಿನ್ನನ್ನು ದಂಡಕಾರಣ್ಯಕ್ಕೆ ಒಯ್ಯುಕೂಡದೆಂದು ಯೋಚಿಸಿದ್ದ ನನ್ನ ಬುದ್ಧಿಯು ಶಿಥಿಲವಾಯಿತು. ಜನಕ ನಂದನೇ! ದೈವದಿಂದಲೇ ನೀನು ವನವಾಸ ಮಾಡಲು ಸೃಷ್ಟಿಸಲ್ಪಟ್ಟಿರುವೆ. ಆದುದರಿಂದ ನನ್ನನ್ನು ಅನುಸರಿಸಿ ಅರಣ್ಯಕ್ಕೆ ನೀನು ಬರಬಹುದು. ಈ ನಿನ್ನ ಧೃಡ ನಿಶ್ಚಯವು ನಮ್ಮ ವಂಶಕ್ಕೂ ಮತ್ತು ನಿನ್ನ ವಂಶಕ್ಕೂ ಅನುಗುಣವಾಗಿದೆ" ಎಂದನು.


ಕಾಡಿಗೆ ಪ್ರಯಾಣಮಾಡುವುದು ಪತಿಗೆ ಸಮ್ಮತವಾಯಿತೆಂದು ತಿಳಿದೊಡನೆಯೇ ಸೀತಾದೇವಿಯು ಹಿರಿ ಹಿರಿಯಾಗಿ ತನ್ನ ವಸ್ತ್ರಾಭರಣಗಳೆಲ್ಲವನ್ನೂ ದಾನಮಾಡಲು ಆರಂಭಿಸಿಯೇ ಬಿಟ್ಟಳು. ಪತಿಯ ಮಾತನ್ನು ಕೇಳಿ ಸೀತೆಯು ಆನಂದಭರಿತಳಾದಳು.


Comments


bottom of page