ಲಕ್ಷ್ಮಣನೂ ವನವಾಸಕ್ಕೆ ಸಿದ್ಧನಾದ (ರಾಮಾಯಣ ಕಥಾಮಾಲೆ 29)
- Ganapati Hegde Moodkani

- Dec 28, 2025
- 2 min read
ಕೌಸಲ್ಯೆಯ ಅಂತಃಪುರದಿಂದ ಶ್ರೀರಾಮನ ಜೊತೆಯಲ್ಲಿ ಮೊದಲೇ ಬಂದಿದ್ದ ಲಕ್ಷ್ಮಣನು, ಪತಿ ಪತ್ನಿಯರ ಈ ಸಂವಾದಗಳೆಲ್ಲವನ್ನೂ ಕೇಳಿ ಶೋಕವನ್ನು ಸಹಿಸಿಕೊಳ್ಳಲಾರದೇ ಕಣ್ಣೀರಿನಿಂದ ತೊಯ್ದ ಮುಖವುಳ್ಳವನಾಗಿ, ಅಣ್ಣನ ಕಾಲುಗಳನ್ನು ಭದ್ರವಾಗಿ ಹಿಡಿದು ನಮಸ್ಕರಿಸಿ, ಹದಿನಾಲ್ಕು ವರ್ಷಗಳ ವನವಾಸವೆಂಬ ಮಹಾವ್ರತವನ್ನು ಕೈಗೊಂಡಿದ್ದ ಶ್ರೀರಾಮನಿಗೂ ಮತ್ತು ಯಶಸ್ವಿನಿಯಾದ ಸೀತೆಗೂ ಕೈಮುಗಿದು, "ಮೃಗಗಳಿಂದಲೂ, ಆನೆಗಳಿಂದಲೂ ನಿಬಿಡವಾಗಿರುವ ಅರಣ್ಯಕ್ಕೆ ಪ್ರಯಾಣ ಮಾಡಲು ನೀವು ನಿಶ್ಚಯಿಸಿರುವೆಯಾದರೆ, ನಿಮ್ಮನ್ನನುಸರಿಸಿ ನಾನೂ ಅರಣ್ಯಕ್ಕೆ ಬರುತ್ತೇನೆ. ನೀವಿಲ್ಲದೆ ನನಗೆ ದೇವಲೋಕವನ್ನು ಜಯಿಸುವುದೂ ಬೇಕಾಗಿಲ್ಲ. ದೇವತ್ವವೂ ಬೇಕಾಗಿಲ್ಲ. ಲೋಕಗಳಲ್ಲಿರುವ ಐಶ್ವರ್ಯವನ್ನೂ ನಾನು ಅಪೇಕ್ಷಿಸುವುದಿಲ್ಲ. ಅನವರತವಾಗಿ ನಿಮ್ಮ ಜೊತೆಯಲ್ಲಿರುವುದೊಂದೇ ನನ್ನ ಅಪೇಕ್ಷೆಯಾಗಿದೆ" ಎಂದನು.
ಆಗ ಶ್ರೀರಾಮನು "ಲಕ್ಷ್ಮಣ! ನನ್ನ ವಿಷಯದಲ್ಲಿ ನೀನು ಅತ್ಯಂತ ಸ್ನೇಹಯುಕ್ತನಾಗಿರುವೆ. ಧರ್ಮನಿರತನಾಗಿರುವೆ. ಸರ್ವಕಾಲಗಳಲ್ಲಿಯೂ ಸತ್ಪುರುಷರಿಂದ ಅನುಸರಿಸಲ್ಪಟ್ಟಿರುವ ಧರ್ಮ ಮಾರ್ಗದಲ್ಲಿಯೇ ನಡೆಯುವೆ. ನನಗಂತೂ ನೀನು ಪ್ರಾಣಪ್ರಿಯನು ಈಗ ನೀನೂ ನನ್ನೊಡನೆ ಕಾಡಿಗೆ ಬಂದು ಬಿಟ್ಟರೆ ನಮ್ಮ ತಾಯಂದಿರಾದ ಕೌಸಲ್ಯಾ ಸುಮಿತ್ರೆಯರನ್ನು ಭರಿಸಿ ಪೋಷಿಸುವವರು ಯಾರಿದ್ದಾರೆ? ಕೈಕೇಯಿಯಿಂದ ರಾಜ್ಯವನ್ನು ಪಡೆಯುವ ಭರತನು ಕೈಕೇಯಿಯ ನಿಯಂತ್ರಣದಲ್ಲಿಯೇ ಇರುವವನಾದುದರಿಂದ, ಬಹುದುಃಖಿತರಾದ ಕೌಸಲ್ಯೆಯನ್ನಾಗಲೀ ಸುಮಿತ್ರೆಯನ್ನಾಗಲ್ಲಿ ಪೋಷಿಸಲಾರನು. ಆದುದರಿಂದ ಆರ್ಯೆಯಾದ ಕೌಸಲ್ಯಾದೇವಿಯನ್ನು ರಾಜನ ಅನುಮತಿಯನ್ನು ಪಡೆದಾಗಲೀ ನೀನೇ ಮಾಡಿದ ಸಂಪಾದನೆಯಿಂದಾಗಲೀ ಭರಿಸಿ ಪೋಷಿಸು. ಧರ್ಮಜ್ಞನೇ! ನಾನು ಹೇಳಿದಂತೆ ನೀನು ಮಾಡುವುದರಿಂದ ನನ್ನ ಮೇಲೆ ನೀನಿಟ್ಟಿರುವ ಭಕ್ತಿಯು ಚೆನ್ನಾಗಿ ಬೆಳಕಿಗೆ ಬರುತ್ತದೆ. ಎಣೆಯಿಲ್ಲದ ಮತ್ತು ಮಹತ್ತರವಾದ ಪುಣ್ಯವೂ ಲಭಿಸುತ್ತದೆ" ಎಂದನು.
ಶ್ರೀರಾಮನು ಹೀಗೆ ಹೇಳಲು ಲಕ್ಷ್ಮಣನು, "ಅಣ್ಣ! ನಿನ್ನ ಪ್ರಭಾವದಿಂದಲೇ ಭರತನು ಕೌಸಲ್ಯೆಯನ್ನೂ ಮತ್ತು ಸುಮಿತ್ರೆಯನ್ನೂ ಪ್ರಯತ್ನಪೂರ್ವಕವಾಗಿ ಸತ್ಕರಿಸುತ್ತಾನೆ. ಅಲ್ಲದೇ ಕೌಸಲ್ಯಾದೇವಿಯು ನನ್ನಂತಹ ಸಾವಿರ ಮಂದಿಯನ್ನಾದರೂ ಭರಿಸಿ ಪೋಷಿಸಲು ಸಮರ್ಥಳು. ಆದುದರಿಂದ ನಮ್ಮ ತಾಯಿಯರ ಭರಣ ಪೋಷಣೆಗಳ ವಿಷಯವಾಗಿ ನಾವು ಯೋಚಿಸಬೇಕಾಗಿಯೇ ಇಲ್ಲ. ರಾಮಭದ್ರ! ನೀನು ನನ್ನನ್ನು ಅನುಚರನನ್ನಾಗಿ ಮಾಡಿಕೊ. ಹೀಗೆ ನನ್ನನ್ನು ಸೇವಕನನ್ನಾಗಿ ಪರಿಗ್ರಹಿಸುವುದು ಧರ್ಮವಿರುದ್ಧವಲ್ಲ. ನಿನ್ನ ಕೈಂಕರ್ಯದಿಂದಾಗಿ ನಾನೂ ಕೃತಾರ್ಥನಾಗುವೆನು. ಧನುರ್ಬಾಣಗಳನ್ನು ತೆಗೆದುಕೊಂಡು, ನಿನಗೆ ಹಾದಿಯನ್ನು ತೋರಿಸುತ್ತಾ ನಿನ್ನ ಮುಂದೆ ಹೋಗುತ್ತಿರುತ್ತೇನೆ. ಕಾಡಿನಲ್ಲಿರುವ ನಿನಗೆ ಅನುದಿನವೂ ಕಂದ ಮೂಲಗಳನ್ನು ಹಣ್ಣುಗಳನ್ನೂ ತಂದುಕೊಡುತ್ತೇನೆ. ನೀನು ನಿಶ್ಚಿಂತನಾಗಿ ವೈದೇಹಿಯೊಡನೆ ಪರ್ವತದ ತಪ್ಪಲು ಪ್ರದೇಶಗಳಲ್ಲಿ ವಿಹರಿಸು" ಎಂದನು.
ಶ್ರೀರಾಮನು ಲಕ್ಷ್ಮಣನ ಮಾತಿನಿಂದ ಸುಪ್ರೀತನಾಗಿ, "ಲಕ್ಷ್ಮಣ! ನನ್ನ ಜೊತೆಯಲ್ಲಿ ಬರಲು ನಿನಗೆ ಅನುಮತಿಯನ್ನಿತ್ತಿದ್ದೇನೆ. ಈಗಲೇ ಹೊರಡು. ಜನಕರಾಜನು ಮಾಡಿದ ಮಹಾಯಜ್ಞದ ಸಮಯದಲ್ಲಿ ಸುಪ್ರೀತನಾದ ವರುಣನು ತಾನಾಗಿಯೇ ಬಂದು ಜನಕರಾಜನಿಗೆ ಭಯಂಕರವಾದ ಎರಡು ಧನಸ್ಸುಗಳನ್ನೂ, ಅಭೇದ್ಯವಾದ ಭಯಂಕರವಾದ ಎರಡು ಕವಚಗಳನ್ನೂ, ದಿವ್ಯವಾದ ಅಕ್ಷಯವಾದ ಬಾಣಗಳಿರುವ ಎರಡು ಬತ್ತಳಿಕೆಗಳನ್ನೂ, ಸೂರ್ಯನ ಕಿರಣಗಳಂತೆ ಥಳ ಥಳಿಸುವ ಮತ್ತು ಚಿನ್ನದ ಹಿಡಿಯಿಂದ ಕೂಡಿರುವ ಎರಡು ಖಡ್ಗಗಳನ್ನೂ ಕೊಟ್ಟಿದ್ದನು. ಅವೆಲ್ಲವನ್ನೂ ಜನಕನು ಜನಕನು ನನಗೆ ವಿವಾಹ ಸಮಯದಲ್ಲಿ ಬಳುವಳಿಯಾಗಿ ಕೊಟ್ಟನು ಆ ಎಲ್ಲ ಆಯುಧಗಳನ್ನು ನಾನು ವಿಧಿವತ್ತಾಗಿ ಪೂಜಿಸಿ ಆಚಾರ್ಯರಾದ ವಸಿಷ್ಠರ ಮನೆಯಲ್ಲಿ ಇಟ್ಟಿರುವೆನು. ಆ ಆಯುಧಗಳೆಲ್ಲವನ್ನೂ ನೀನಿಗಲೇ ತೆಗೆದುಕೊಂಡು ಬರಬೇಕು" ಎಂದು ಆಜ್ಞಾಪಿಸಿದನು.

ಶ್ರೀರಾಮನು ಹೇಳಿದಂತೆ ಲಕ್ಷ್ಮಣನು ಸ್ನೇಹಿತರನ್ನು ಬರಮಾಡಿಕೊಂಡು ಅವರಿಗೆ ತಾನು ಶ್ರೀರಾಮನೊಡನೆ ಅರಣ್ಯಕ್ಕೆ ಹೋಗುವ ವಿಷಯವನ್ನು ತಿಳಿಸಿ, ಗುರುಗಳಾದ ವಸಿಷ್ಠರ ಮನೆಗೆ ಹೋಗಿ ಅಲ್ಲಿದ್ದ ಆಯುಧಗಳೆಲ್ಲವನ್ನೂ ತೆಗೆದುಕೊಂಡು ಶ್ರೀರಾಮನ ಬಳಿಗೆ ಬಂದನು.
ಸೀತಾ ಲಕ್ಷ್ಮಣ ಸಹಿತನಾದ ಶ್ರೀರಾಮನು ವಸಿಷ್ಠ ಪುತ್ರನಾದ ಸುಯಜ್ಞನನ್ನು ಕರೆಸಿ ಅವನಿಗೂ ಅವನ ಪತ್ನಿಗೂ ಬಹುಮೂಲ್ಯವಾದ ಆಭರಣಗಳನ್ನೂ, ರತ್ನಗಳನ್ನೂ, ಧನವನ್ನೂ ದಾನ ಮಾಡಿದನು. ರಾಮ ಲಕ್ಷ್ಮಣರು ಸ್ವೀತೆಯೊಡನೆ ಬ್ರಾಹ್ಮಣರಿಗೆ ಅಪಾರವಾದ ಧನವನ್ನು ದಾನ ಮಾಡಿದ ನಂತರ ತಂದೆಯನ್ನು ನೋಡಲು ಸೀತೆಯೊಡನೆ ದಶರಥನ ಅರಮನೆಗೆ ಹೊರಟರು. ಕಣ್ಣುಗಳನ್ನು ಕೋರೈಸುವ ಕಾಂತಿಯಿಂದ ಕೂಡಿದ್ದ, ರಾಮ ಲಕ್ಷ್ಮಣರು ಧರಿಸಿದ್ದ ಆಯುಧಗಳು ಸೀತಾದೇವಿಯಿಂದ ಪೂಜಿಸಲ್ಪಟ್ಟು ಹೂಮಾಲೆಗಳಿಂದ ಅಲಂಕರಿಸಲ್ಪಟ್ಟು ಕಂಗೊಳಿಸುತ್ತಿದ್ದವು. ಸೀತಾ ರಾಮ ಲಕ್ಷ್ಮಣರು ರಾಜಮಾರ್ಗದಲ್ಲಿ ದಶರಥನ ಅರಮನೆಗೆ ಅಭಿಮುಖವಾಗಿ ನಡೆದುಹೋಗುತ್ತಿದ್ದಾಗ ಅಯೋಧ್ಯಾ ಪಟ್ಟಣದ ಶ್ರೀಮಂತರಾದ ಜನರು ಧನಿಕರು ಮನೆಗಳನ್ನೂ, ದೇವ ಮಂದಿರಗಳನ್ನೂ, ಏಳು ಅಂತಸ್ತಿನ ಉಪ್ಪರಿಗೆಯ ಮನೆಗಳನ್ನೂ ಹತ್ತಿ ವಿಷಣವದನರಾಗಿ ಅವರನ್ನು ನೋಡುತ್ತಿದ್ದರು. ಅವರು ಹೋಗುತ್ತಿದ್ದ ದಾರಿಯು ಜನನಿಬಿಡವಾಗಿದ್ದುದರಿಂದ ಶೀಘ್ರವಾಗಿ ನಡೆದು ಹೋಗುವ ಸಾಧ್ಯತೆಯೂ ಇರಲಿಲ್ಲ. ಆದುದರಿಂದಲೇ ದೈನ್ಯದಿಂದ ಕೂಡಿದ್ದ ಜನರೆಲ್ಲರೂ ಪ್ರಾಸಾದಗಳನ್ನು ಹತ್ತಿ ಶ್ರೀರಾಮನನ್ನು ನೋಡುತ್ತಿದ್ದರು. ತಮ್ಮನೊಡನೆಯೂ, ಭಾರ್ಯೆಯೊಡನೆಯೂ ಶ್ರೀರಾಮನು ದಶರಥನ ಅರಮನೆಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿರುವುದನ್ನೂ ಕಂಡು ಶೋಕದಿಂದ ಕುಗ್ಗಿ ಹೋದ ಉದಾಸೀನವಾದ ಮನಸ್ಸುಳ್ಳ ಜನರು ತಮ್ಮ ತಮ್ಮಲ್ಲಿಯೇ ನಾನಾವಿಧವಾದ ಮಾತಾಡಿಕೊಳ್ಳುತ್ತಿದ್ದರು.
ಹಲವಾರು ಜನರು ಆಡಿಕೊಳ್ಳುತ್ತಿದ್ದ ನಾನಾ ಪ್ರಕಾರವಾದ ಮಾತುಗಳನ್ನು ಶ್ರೀರಾಮನು ಕೇಳುತ್ತಿದ್ದರೂ ಅವನ ಮನಸ್ಸು ವಿಕಾರಗೊಳ್ಳಲಿಲ್ಲ. ಮದಿಸಿದ ಆನೆಯಂತೆ ಪರಾಕ್ರಮವುಳ್ಳ ಧರ್ಮಾತ್ಮನಾದ ಶ್ರೀರಾಮನು ಕೈಲಾಸ ಶಿಖರಕ್ಕೆ ಸಮಾನವಾಗಿದ್ದ ತಂದೆಯ ಅರಮನೆಗೆ ಬಹಳ ದೂರದಿಂದ ನಡೆದೇ ಬಂದನು. ರಾಜನ ಅರಮನೆಯನ್ನು ಪ್ರವೇಶಿಸುತ್ತಲೇ ವಿನೀತನೂ, ವೀರ ಪುರುಷನೂ, ದೀನನೂ ಆಗಿದ್ದ ಸುಮಂತ್ರನು ಸಮೀಪದಲ್ಲಿಯೇ ನಿಂತಿರುವುದನ್ನು ಶ್ರೀರಾಮನು ನೋಡಿದನು.
ತನಗಾಗಿ ಸಂಕಟಪಡುತ್ತಿದ್ದ ಜನರನ್ನು ದಾರಿಯುದ್ದಕ್ಕೂ ನೋಡುತ್ತಾ ಬಂದರೂ ಶ್ರೀರಾಮನು ದುಃಖವಿಲ್ಲದವನಂತೆಯೇ ಕಾಣುತ್ತಿದ್ದನು. ಅವನ ಮುಖದಲ್ಲಿ ಸ್ವಲ್ಪವಾದರೂ ಸಂಕಟದ ಅನುಭವವಿರಲಿಲ್ಲ. ನಗುಮುಖದಿಂದಲೇ ಇದ್ದನು. ಬಾಗಿಲಿನ ಬಳಿ ನಿಂತಿದ್ದ ಸುಮಂತ್ರನನ್ನು ನೋಡಿ, ತನ್ನ ಆಗಮನದ ವಿಷಯವನ್ನು ತಂದೆಗೆ ತಿಳಿಸುವಂತೆ ಹೇಳುವ ಸಲುವಾಗಿ ಅಲ್ಲಿಯೇ ನಿಂತುಕೊಂಡು 'ನಾನು ಬಂದಿರುವ ವಿಷಯವನ್ನು ರಾಜನಿಗೆ ನಿವೇದಿಸು' ಎಂದು ಹೇಳಿದನು.







Comments