top of page

ಶ್ರೀರಾಮನ ವನಾಭಿಗಮನ (ರಾಮಾಯಣ ಕಥಾಮಾಲೆ 32)

ಅರಣ್ಯಾಭಿಮುಖವಾಗಿ ಹೋಗುತ್ತಿದ್ದ ಶ್ರೀರಾಮನ ರಥದ ಕಡೆಗೆ ನೆಟ್ಟ ದೃಷ್ಟಿಯಿಟ್ಟು ನಿಂತಿದ್ದ ರಾಜನು ರಥದ ಚಲನೆಯಿಂದ ಮೇಲೇಳುತ್ತಿದ್ದ ಧೂಳಿಯು ಕಾಣುವವರೆಗೂ ತನ್ನ ದೃಷ್ಟಿಯನ್ನು ಹಿಂದಕ್ಕೆ ತೆಗೆದುಕೊಳ್ಳಲೇ ಇಲ್ಲ. ಎಲ್ಲಿಯವರೆಗೆ ರಾಜನು ತನ್ನ ಪ್ರಿಯನಾದ ಮತ್ತು ಪರಮಧಾರ್ಮಿಕನಾದ ಪುತ್ರನನ್ನು ಕಾಣುತ್ತಿದ್ದನೋ ಅಲ್ಲಿಯವರೆಗೂ ಭೂಮಿಯ ಮೇಲಿದ್ದ ಅವನ ಶರೀರವು ಮಗನನ್ನು ನೋಡಲು ವೃದ್ಧಿ ಹೊಂದುತ್ತಲೇ ಇದ್ದಿತು. ಯಾವಾಗ ರಥಚಕ್ರದಿಂದ ಹುಟ್ಟುತ್ತಿದ್ದ ಧೂಳಿಯು ದಶರಥನಿಗೆ ಕಾಣಲಿಲ್ಲವೋ ಆಗ ರಾಜನು ಪರಮ ದುಃಖಿತನಾಗಿ ವಿಷಣ್ಣನಾಗಿ ಭೂಮಿಯಲ್ಲಿ ಬಿದ್ದನು.


ಇತ್ತಲಾಗಿ ಅರಣ್ಯಕ್ಕೆ ಪ್ರಯಾಣ ಮಾಡುತ್ತಿದ್ದ ಸತ್ಯ ಪರಾಕ್ರಮನಾದ, ಮಹಾತ್ಮನಾದ ಶ್ರೀರಾಮನನ್ನೇ ಅನುಸರಿಸಿ ಅವನಲ್ಲಿಯೇ ಹೆಚ್ಚು ಅನುರಾಗವಿದ್ದ ಅಯೋಧ್ಯಾಪುರ ವಾಸಿಗಳೂ ಹೋಗುತ್ತಿದ್ದರು. ದಶರಥನನ್ನೂ ಮತ್ತು ಸುಹೃದರನ್ನೂ ಅಮಾತ್ಯರು ಬಲಾತ್ಕಾರಪೂರ್ವಕವಾಗಿ ಹಿಂದಿರುಗಿಸಿದರೂ, ಶ್ರೀರಾಮನ ರಥದ ಹಿಂದೆ ಹೋಗುತ್ತಿದ್ದ ಪುರಜನರು ಹಿಂದಿರುಗಲೇ ಇಲ್ಲ. ಆ ಜನಸಮೂಹದ ಮಧ್ಯದಲ್ಲಿ ಜ್ಞಾನವೃದ್ಧರೂ, ವಯೋವೃದ್ಧರೂ ಮತ್ತು ಮಹಾತೇಜಸ್ವಿಗಳೂ ಆಗಿದ್ದ ಬ್ರಾಹ್ಮಣರು ವಯೋಧರ್ಮದಿಂದ ನಡುಗುತ್ತಿದ್ದ ತಲೆಗಳಿಂದ ಕೂಡಿದವರಾಗಿ ಶ್ರೀರಾಮನ ರಥಕ್ಕೆ ಬಹಳ ದೂರದಲ್ಲಿಯೇ ನಿಂತು, "ಶ್ರೀರಾಮನನ್ನು ಹೊತ್ತಿ ಬಹು ವೇಗದಿಂದ ಅರಣ್ಯದ ಕಡೆಗೆ ಓಡುತ್ತಿರುವ ಉತ್ತಮಜಾತಿಯ ಕುದುರೆಗಳೇ! ನಾವು ಹೇಳುವುದನ್ನು ಆಲಿಸಿ ಕೇಳಿರಿ. ನೀವು ಈ ಕೂಡಲೇ ಅಯೋಧ್ಯಾ ಪಟ್ಟಣದ ಕಡೆಗೆ ಹಿಂದಿರುಗಿರಿ. ಶ್ರೀರಾಮನು ಪರಿಶುದ್ಧವಾದ ಮನಸ್ಸುಳ್ಳವನು ವೀರನು, ಶುಭಪ್ರದನು, ದೃಢವ್ರತನು ಇಂತಹ ಸಕಲ ಗುಣಪರಿಪೂರ್ಣನಾದ ನಿಮ್ಮ ಸ್ವಾಮಿಯನ್ನು ಪಟ್ಟಣಕ್ಕೆ ಕರೆತರುವುದು ನಿಮ್ಮಂತಹ ಉತ್ತಮಜಾತಿಯ ಕುದುರೆಗಳಿಗೆ ಯೋಗ್ಯವಾಗಿರುವುದೇ ಹೊರತು ಪಟ್ಟಣದಿಂದ ಅರಣ್ಯಕ್ಕೊಯ್ಯುವುದು ಖಂಡಿತವಾಗಿಯೂ ಸರಿಯಲ್ಲ" ಎಂದರು.


ಹೀಗೆ ಶ್ರೀರಾಮನ ಹಿಂದಿರುಗುವಿಕೆಯಲ್ಲಿ ಆಸಕ್ತರಾಗಿ ಗೋಳಾಡುತ್ತಿದ್ದ ಆ ಬ್ರಾಹ್ಮಣರ ಪ್ರಾರ್ಥನಾನುಸಾರವಾಗಿ ಶ್ರೀರಾಮನನ್ನು ತಡೆಯಲೋ ಎಂಬಂತೆ ರಥಕ್ಕೆ ಅಡ್ಡಲಾಗಿ ತಮಸಾನದಿಯು ಕಂಡಿತು. ಬಳಿಕ ಸುಮಂತ್ರನು ರಥವನ್ನು ನಿಲ್ಲಿಸಿದನು.


ರಾಘವನು ರಮ್ಯವಾಗಿದ್ದ ತಮಸಾ ನದಿಯ ತೀರವನ್ನು ಸೇರಿದ ನಂತರ ಸೀತೆಯನ್ನೊಮ್ಮೆ ನೋಡಿ ಲಕ್ಷ್ಮಣನಿಗೆ, "ಲಕ್ಷ್ಮಣ! ಅರಣ್ಯಕ್ಕೆ ಹೊರಟಿರುವ ನನಗೆ ಇದು ಮೊದಲನೆಯ ರಾತ್ರಿಯಾಗಿದೆ. ನಿನಗೆ ಮಂಗಳವಾಗಲಿ. ನಿರ್ಜನವಾದ ಈ ಅರಣ್ಯವನ್ನು ನೋಡಿ ನೀನು ತವಕ ಪಡುವ ಕಾರಣವಿಲ್ಲ. ಗೂಡುಗಳನ್ನು ಸೇರಿ ಕೊಳ್ಳುತ್ತಿರುವ ಮೃಗ ಪಕ್ಷಿಗಳಿಂದ ತುಂಬಿ ಹೋಗಿರುವ ಅರಣ್ಯಗಳು ನಮ್ಮ ಸುತ್ತಲೂ ರೋದನ ಮಾಡುತ್ತಿವೆಯೋ ಎಂಬಂತೆ ಕಾಣುತ್ತಿವೆ. ಲಕ್ಷ್ಮಣ! ಪುರುಷರಿಂದಲೂ ಸ್ತ್ರೀಯರಿಂದಲೂ ಕೂಡಿರುವ ನಮ್ಮ ತಂದೆಯ ರಾಜಧಾನಿಯಾದ ಅಯೋಧ್ಯಾ ಪಟ್ಟಣವು ಅರಣ್ಯಕ್ಕೆ ಹೊರಟಿರುವ ನಮ್ಮ ಸಲುವಾಗಿ ದುಃಖಿಸುತ್ತಿದೆ. ಇದರಲ್ಲಿ ಸಂಶಯವೇ ಇಲ್ಲ. ಅಯೋಧ್ಯೆಯ ಪ್ರಜೆಗಳು ಅನೇಕ ಸದ್ಗುಣಗಳಿಂದ ಸಂಪನ್ನನಾಗಿರುವ ನಮ್ಮ ರಾಜನನ್ನು ಬಹಳವಾಗಿ ಪ್ರೀತಿಸುತ್ತಾರೆ. ಹಾಗೆಯೇ ನನ್ನನ್ನು, ನಿನ್ನನ್ನೂ ಮತ್ತು ಭಾರತ ಶತ್ರುಘ್ನರನ್ನೂ ನಮ್ಮ ಪ್ರಜೆಗಳು ಬಹಳ ಅಕ್ಕರೆಯಿಂದ ಕಾಣುತ್ತಾರೆ. ನಮ್ಮ ತಂದೆಯನ್ನೂ ಮತ್ತು ಯಶಸ್ವಿನಿಯಾದ ತಾಯಿಯನ್ನೂ ನೆನೆದು ನಾನು ಬಹಳ ದುಃಖಿಸುತ್ತೇನೆ. ಅವರು ನಮ್ಮನ್ನು ಬಾರಿ ಬಾರಿಗೂ ನೆನೆಯುತ್ತಾ ಅತ್ತು ಅತ್ತು ಕಣ್ಣುಗಳನ್ನೆಲ್ಲ ಕಳೆದುಕೊಂಡು ಬಿಡುವರೋ ಎಂದು ನಾನು ದುಃಖಿಸುತ್ತಿದ್ದೇನೆ. ಆದರೆ ಅಷ್ಟಕ್ಕೆ ಅವಕಾಶವಿರಲಾರದು. ನಮ್ಮ ತಮ್ಮನಾದ ಭರತನು ಧರ್ಮಾತ್ಮನಲ್ಲವೇ! ತಂದೆಯನ್ನೂ ತಾಯಿಯನ್ನೂ ಅವನು ಧರ್ಮಾರ್ಥಕಾಮಸಹಿತವಾದ ಮಾತುಗಳಿಂದ ಸಂತೈಸುತ್ತಾನೆ. ಲಕ್ಷ್ಮಣ! ನೀನು ನನ್ನೊಡನೆ ಬಂದು ಒಂದು ಮುಖ್ಯವಾದ ಕಾರ್ಯವನ್ನು ಆಗಮಾಡಿಕೊಟ್ಟಿರುವೆ. ನೀನು ಬರದಿದ್ದರೆ ವೈದೇಹಿಯ ರಕ್ಷಣೆಗಾಗಿ ಸಹಾಯವನ್ನು ಪಡೆಯಲು ಯಾರನ್ನಾದರೂ ಹುಡುಕಬೇಕಾಗಿದ್ದಿತು. ಸೌಮಿತ್ರೆ! ನಾನು ನೀರನ್ನು ಮಾತ್ರ ಕುಡಿದು ಈ ರಾತ್ರಿಯನ್ನು ಕಳೆಯಬೇಕೆಂದಿರುತ್ತೇನೆ. ಕಾಡಿನ ಹಲವು ಬಗೆಯ ಗೆಡ್ಡೆ ಗೆಣಸುಗಳು ಸಿಕ್ಕುವುದಾಗಿದ್ದರೂ ನನಗೆ ಉಪವಾಸದಿಂದಲೇ ಈ ರಾತ್ರಿಯನ್ನು ಕಳೆಯುವುದು ನನಗೆ ಉಚಿತವಾಗಿ ತೋರುತ್ತದೆ" ಎಂದು ಹೇಳಿದನು.



ಸೂರ್ಯನು ಅಸ್ತಂಗತನಾಗಲಾಗಿ ಸುಮಂತ್ರನು ಶ್ರೀರಾಮನ ಮಾತಿನಂತೆಯೇ ಕುದುರೆಗಳನ್ನು ಕಟ್ಟಿ, ಲಕ್ಷ್ಮಣನೊಡನೆ ಶ್ರೀರಾಮನಿಗೆ ಮಲಗಲು ಹಾಸಿಗೆಯನ್ನು ಸಿದ್ಧ ಮಾಡಿಕೊಟ್ಟನು. ತಮಸಾ ನದಿಯ ತೀರದಲ್ಲಿ ಸುಮಂತ್ರನು ಲಕ್ಷ್ಮಣನೊಡಗೂಡಿ, ಮರದ ಚಿಗುರೆಲೆಗಳಿಂದ ನಿರ್ಮಿಸಿದ್ದ ಆ ಹಾಸಿಗೆಯಲ್ಲಿ ಶ್ರೀರಾಮನು ಸೀತಾ ದೇವಿಯೊಡನೆ ಪವಡಿಸಿದನು. ಬಹಳವಾಗಿ ಬಳಲಿದ್ದ ಶ್ರೀರಾಮನು ಭಾರ್ಯೆಯೊಡನೆ ಸುಖವಾಗಿ ನಿದ್ರಿಸುತ್ತಿರುವುದನ್ನು ನೋಡಿ ಲಕ್ಷ್ಮಣನು ಸಮೀಪದಲ್ಲಿದ್ದ ಸುಮಂತ್ರನಿಗೆ ರಾಮನ ನಾನಾ ವಿಧವಾದ ಸದ್ಗುಣಗಳನ್ನು ಹೇಳಲು ಉಪಕ್ರಮಿಸಿದ್ದನು.


ಸೂತನಿಗೆ ಲಕ್ಷ್ಮಣನು ಶ್ರೀರಾಮನ ಗುಣಗಳನ್ನು ವರ್ಣಿಸಿ ಹೇಳುತ್ತಿದ್ದಂತೆಯೇ ಸೂರ್ಯನು ಉದಯಿಸುವ ಸೂಚನೆಗಳು ಕಂಡುಬಂದವು. ಹೀಗೆ ಆ ರಾತ್ರಿಯನ್ನು ಲಕ್ಷ್ಮಣನು ಜಾಗರಣೆಯಿಂದಲೇ ಕಳೆದನು. ಗೋಕುಲದಿಂದ ಆವೃತವಾಗಿದ್ದ ತಮಸಾನದಿಯ ತೀರಕ್ಕೆ ಸ್ವಲ್ಪ ದೂರದಲ್ಲಿ ಶ್ರೀರಾಮನು ತನ್ನನ್ನು ಅನುಸರಿಸಿ ಬಂದಿದ್ದ ಪ್ರಜೆಗಳೊಡನೆ ಆ ರಾತ್ರಿಯಲ್ಲಿ ವಾಸವಾಗಿದ್ದನು. ಮಹಾತೇಜಸ್ವಿಯಾದ ಶ್ರೀರಾಮನು ಬ್ರಾಹ್ಮಿಮಹೂರ್ತದಲ್ಲೆದ್ದು ಸುತ್ತಲೂ ಮಲಗಿದ್ದ ಪ್ರಜೆಗಳನ್ನು ನೋಡಿ ಲಕ್ಷ್ಮಣನಿಗೆ, "ಲಕ್ಷ್ಮಣ! ತಮ್ಮ ಮನೆಗಳ ವಿಷಯದಲ್ಲಿಯೂ ನಿರಾಸಕ್ತರಾಗಿ, ನಮ್ಮಲ್ಲಿಯೇ ಹೆಚ್ಚಿನ ಪ್ರೀತಿಯಿಂದ ನಮ್ಮನ್ನನುಸರಿಸಿ ಬಂದು, ಮರಗಳ ಬುಡದಲ್ಲಿ ಮಲಗಿ ನಿದ್ರಿಸುತ್ತಿರುವ ಈ ನಮ್ಮ ಪ್ರಜೆಗಳನ್ನು ನೋಡು. ನಮ್ಮನ್ನು ಹಿಂದಕ್ಕೆ ಕರೆದುಕೊಂಡು ಹೋಗುವುದರಲ್ಲಿ ಇವರು ಸ್ಥಿರ ಪ್ರತಿಜ್ಞರಾಗಿರುತ್ತಾರೆ. ಈ ನಮ್ಮ ಪ್ರಜೆಗಳು ಪ್ರಾಣಗಳನ್ನಾದರೂ ಬಿಟ್ಟಾರು, ಆದರೆ ತಮ್ಮ ದೃಢನಿಶ್ಚಯವನ್ನು ಮಾತ್ರ ಕೈಬಿಡರು. ಆದುದರಿಂದ ಇವರು ಮಲಗಿರುವಾಗಲೇ ನಾವು ರಥವನ್ನೇರಿ ಭಯರಹಿತವಾದ ಈ ಮಾರ್ಗದಲ್ಲಿ ಶೀಘ್ರವಾಗಿ ಪ್ರಾಯಾಣಮಾಡೋಣ. ನನ್ನಲ್ಲಿಯೇ ಅನುರಕ್ತರಾಗಿರುವ ಅಯೋಧ್ಯಾ ಪುರವಾಸಿಗಳಾದ ಇವರು ಮರಗಳ ಅಡಿಯಲ್ಲಿ ಪುನಃ ಮಲಗುವಂತಾಗಬಾರದು. ರಾಜಕುಮಾರರು ಪಟ್ಟಣಿಗರನ್ನು ದೈವಿಕವಾದ ಅಥವಾ ತಾವಾಗಿಯೇ ಉಂಟುಮಾಡಿಕೊಂಡ ದುಃಖಗಳಿಂದ ಪಾರುಮಾಡಬೇಕು. ಆದರೆ ದೈವಯೋಗದಿಂದ ರಾಜನಿಗೇ ದುಃಖವುಂಟಾದಲ್ಲಿ, ಆ ದುಃಖವನ್ನು ಪ್ರಜೆಗಳಿಗೆ ಹಂಚಬಾರದು... ತಾನೊಬ್ಬನೇ ಅನುಭವಿಸಬೇಕು" ಎಂದನು.

Comments


bottom of page