top of page

ರಾಮನನ್ನು ಬಿಡಲೊಲ್ಲದ ಅಯೋಧ್ಯೆ(ರಾಮಾಯಣ ಕಥಾಮಾಲೆ 31)

ಧರ್ಮಜ್ಞನಾದ ಶ್ರೀರಾಮನು ತಂದೆಯಿಂದ ಅನುಮತಿಯನ್ನು ಪಡೆದು, ಸೀತಾ ಸಮೇತನಾಗಿ, ಕಂಬನಿಗರೆಯುತ್ತಿದ್ದ ತಾಯಿಯನ್ನು ನೋಡಿ, ಶೋಕಾಕುಲನಾಗಿ ಅವಳಿಗೂ ಪ್ರಣಾಮವನ್ನು ಮಾಡಿದನು. ಶ್ರೀರಾಮನನ್ನೇ ಅನುಸರಿಸಿ ಲಕ್ಷ್ಮಣನೂ, ಅಣ್ಣನ ತಾಯಿಯಾದ ಕೌಸಲ್ಯಗೆ ಪ್ರಣಾಮ ಮಾಡಿದನು. ಕೂಡಲೇ ಲಕ್ಷ್ಮಣನು ತನ್ನ ತಾಯಿಯಾದ ಸುಮಿತ್ರಾದೇವಿಯ ಕಾಲುಗಳನ್ನೂ ಮುಟ್ಟಿ ನಮಿಸಿದನು. ಹಾಗೆ ನಮಸ್ಕರಿಸುತ್ತಿದ್ದ ಮಹಾಬಾಹುವಾದ ಲಕ್ಷ್ಮಣನನ್ನು ತಾಯಿಯಾದ ಸುಮಿತ್ರಾದೇವಿಯು ಹಿಡಿದೆತ್ತಿ, ನೆತ್ತಿಯನ್ನು ಆಘ್ರಣಿಸಿ ಮಗನಿಗೆ, " ಪುತ್ರ! ಸತ್ಪುರುಷರಲ್ಲಿ ವಿಶೇಷವಾಗಿ ಅನುರಕ್ತನಾಗಿರುವ ನೀನು ವನವಾಸಕ್ಕಾಗಿಯೇ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿರುವೆ. ಶ್ರೀರಾಮನು ಸೀತಾ ಸಮೇತನಾಗಿ ಹೋಗುತ್ತಿರುವಾಗ ಅವರ ರಕ್ಷಣೆಯ ವಿಷಯದಲ್ಲಿ ಅಜಾಗರೂಕನಾಗಿರಬೇಡ. ಕಿರಿಯರು ಅಣ್ಣನ ಅಧೀನದಲ್ಲಿರುವುದೇ ಈ ಲೋಕದಲ್ಲಿ ಸತ್ಪುರುಷರ ಧರ್ಮವಾಗಿರುತ್ತದೆ. ಮಗು ಶ್ರೀ ರಾಮನನ್ನೇ ತಂದೆಯಾದ ದಶರಥನೆಂದು ಭಾವಿಸು. ಅತ್ತಿಗೆಯಾದ ಜನಕನ ಮಗಳಾದ ಸೀತೆಯನ್ನೇ ನಾನೆಂದು ಭಾವಿಸು. ಅರಣ್ಯವನ್ನೇ ಅಯೋಧ್ಯೆ ಎಂದು ತಿಳಿ. ಈ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸುಖವಾಗಿ ಪ್ರಯಾಣ ಮಾಡು." ಎಂದಳು.


ಬಳಿಕ ವಿನೀತನಾದ ಸುಮಂತ್ರನು ಕೈಮುಗಿದು, "ಮಹಾಯಶೋವಂತನಾದ ರಾಜಪುತ್ರನೇ ನಿನಗೆ ಮಂಗಳವಾಗಲಿ. ರಥವನ್ನು ಹತ್ತು. ನೀನು ಎಲ್ಲಿಗೆ ಕರೆದೊಯ್ಯಬೇಕೆಂದು ಆಜ್ಞಾಪಿಸುವೆಯೊ, ಅಲ್ಲಿಗೆ ನಿನ್ನನ್ನು ಕರೆದೊಯ್ಯುತ್ತೇನೆ. ಕೈಕೆಯಿಂದ ಪ್ರಚೋದಿತನಾದ ನೀನು ಹದಿನಾಲ್ಕು ವರ್ಷಗಳ ವನವಾಸವನ್ನು ಇಂದಿನಿಂದಲೇ ಪ್ರಾರಂಭಿಸಬೇಕಾಗಿದೆ." ಎಂದನು. ಸುಮಂತ್ರನೂ ಹೀಗೆ ಹೇಳಿದ ನಂತರ, ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾದೇವಿಯರು ರಥವನ್ನು ಏರಿದರು. ಬಹಳ ಕಾಲ ಅರಣ್ಯದಲ್ಲಿ ವಾಸ ಮಾಡುವ ಸಲುವಾಗಿ ಶ್ರೀರಾಮನು ಅರಣ್ಯದ ಕಡೆಗೆ ರಥದಲ್ಲಿ ಪ್ರಯಾಣ ಹೊರಟ ನಂತರ, ಅಯೋಧ್ಯ ಪಟ್ಟಣದ ನಾಗರಿಕರೆಲ್ಲರೂ ಮೂರ್ಚಿತರಾದರು. ಒಂದು ಕಡೆಯಲ್ಲಿ ಉದ್ವಿಗ್ನರಾದ ಜನರು ಹಾಹಾಕಾರ ಮಾಡುತ್ತಿದ್ದರು. ರಾಮನನ್ನುಸರಿಸಿ ಹೋಗಲು ಪ್ರಯತ್ನಿಸುತ್ತಿದ್ದರು. ಮಧಿಸಿದ ಮತ್ತು ಕೋಪಗೊಂಡ ಆನೆಗಳು ಗೀಳಿಡುತ್ತಿದ್ದವು. ಹೀಗೆ ಅಯೋಧ್ಯ ಪಟ್ಟಣವೇ ಶಬ್ದದಿಂದ ತುಂಬಿ ಹೋಗಿದ್ದಿತು. ಆಬಾಲ ವೃದ್ಧರಾದಿಯಾಗಿ ಅಯೋಧ್ಯಾ ಪಟ್ಟಣದ ಜನರೆಲ್ಲರೂ ರಥದ ಎಡಬಲ ಪಕ್ಕದಲ್ಲಿ ಮತ್ತು ಹಿಂದುಗಡೆಯಲ್ಲಿ ರಥಕ್ಕೆ ಜೋತು ಬಿದ್ದು ಕಂಬನಿದುಂಬಿದ ಕಣ್ಣುಗಳಿಂದ ಕೂಡಿದವರಾಗಿ 'ರಾಮ! ರಾಮ!' ಎಂದು ಗಟ್ಟಿಯಾಗಿ ಕೂಗಿ ಕೊಳ್ಳುತ್ತಾ ಸುಮಂತ್ರನಿಗೆ "ಸೂತ! ಕುದುರೆಗಳ ಕಡಿವಾಣಗಳನ್ನು ಎಳೆದು ಬಿಗಿಯಾಗಿ ಹಿಡಿದುಕೋ. ಮೆಲ್ಲ ಮೆಲ್ಲಗೆ ಹೋಗು. ಶ್ರೀ ರಾಮನ ಮುಖವನ್ನು ನೋಡುತ್ತೇವೆ. ಮುಂದೆ ಬಹಳ ಕಾಲದವರೆಗೆ ಇವನ ಸುಂದರವಾದ ಮುಖಾರವಿಂದವು ನೋಡಲು ಲಭಿಸದು." ಎಂದು ಗೋಗರೆದರು.



ಇತ್ತಲಾಗಿ ಶ್ರೀರಾಮನ ನಿರ್ಗಮನದಿಂದ ದೀನರಾಗಿದ್ದ, ಸ್ತ್ರೀಯರಿಂದ ಪರಿವೃತನಾಗಿದ್ದ, ದೀನನಾದ ಮನಸ್ಸಿನಿಂದ ಕೂಡಿದ್ದ ದಶರಥನು, "ಅಯ್ಯೋ! ನಾನು ಶ್ರೀರಾಮನನ್ನು ಬಿಟ್ಟಿರಲಾರೆನು. ಪ್ರಿಯ ರಾಮನ ಮುಖವನ್ನು ಮತ್ತೊಮ್ಮೆ ಆದರೂ ನೋಡುತ್ತೇನೆ" ಎಂದು ಹೇಳುತ್ತಾ ಅರಮನೆಯಿಂದ ಹೊರಟೇಬಿಟ್ಟನು.


ಒಂದೇ ರೀತಿಯ ವ್ಯಾಕುಲಿತವಾದ ಮನಸ್ಸಿನಿಂದ ಕೂಡಿದ್ದ ಪಟ್ಟಣವನ್ನು ಕಂಡು ದಶರಥನು, ಬುಡವನ್ನು ಕತ್ತರಿಸಿದ ವೃಕ್ಷದಂತೆ ಧೊಪ್ಪನೆ ಕೆಳಗೆ ಬಿದ್ದನು. ಮೂರ್ಛಿತನಾಗಿ ಕೆಳಗೆ ಬೀಳುತ್ತಿದ್ದ ದುಃಖಾಕುಲನಾಗಿದ್ದ ರಾಜನನ್ನು ನೋಡಿ ಶ್ರೀರಾಮನ ರಥದ ಹಿಂಬದಿಯಲ್ಲಿದ್ದ ಜನರೆಲ್ಲರೂ ಅಗಾಧವಾದ ಶಬ್ದಗಳನ್ನು ಮಾಡಿದರು. 'ಅಯ್ಯೋ! ರಾಜನು ಬಿದ್ದು ಹೋದನಲ್ಲ' ಎಂದು ಕೂಗಿಕೊಂಡರು. 'ಹಾ ರಾಮ! ಇತ್ತಲಾಗಿ ನೋಡು. ರಾಜನು ಬಿದ್ದು ಹೋಗುತ್ತಿದ್ದಾನೆ ' ಎಂದು ಕೆಲವರು ಕೂಗಿಕೊಳ್ಳುತ್ತಿದ್ದರು. ರೋದನ ಮಾಡುತ್ತಿದ್ದ ಜನರನ್ನು ಹಿಂದಿರುಗಿ ನೋಡಿದ ಶ್ರೀರಾಮನು - ವಿಷಣ್ಣನೂ, ಭ್ರಾಂತನೂ ಆಗಿದ್ದ ರಾಜನು ಮತ್ತು ತಾಯಿಯು ತನ್ನನ್ನು ಹಿಂಬಾಲಿಸಿಕೊಂಡೇ ಬರುತ್ತಿರುವುದನ್ನು ನೋಡಿದನು. ಅವರನ್ನು ನೋಡಿ ಶ್ರೀರಾಮನು ಶೀಘ್ರವಾಗಿ ಮುನ್ನಡೆಯುವಂತೆ ಸಾರಥಿಯನ್ನು ಪ್ರಚೋದಿಸಿದನು. ಪುರುಷ ಸಿಂಹನಾದ ಶ್ರೀರಾಮನಿಗೆ, ಅಂಕುಶದಿಂದ ಪ್ರಹರಿಸಲ್ಪಟ್ಟ ಆನೆಯಂತೆ, ತಾಯಿ-ತಂದೆಯರ ದುಃಖ ಜನಕವಾದ ಪರಿಸ್ಥಿತಿಯನ್ನು ನೋಡಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗೋಶಾಲೆಯಲ್ಲಿ ಕಟ್ಟಿರುವ ತನ್ನ ಕರುವಿನ ಮೇಲಿನ ವಾತ್ಸಲ್ಯದಿಂದ ತಾಯಿ ಹಸು, ಯಾವ ರೀತಿಯಲ್ಲಿ ತನ್ನ ಕಂದನನ್ನು ಕಾಣುವ ಸಲುವಾಗಿ ಗೋಶಾಲೆಯ ಕಡೆಗೆ ಓಡಿಬರುವುದೋ - ಅದೇ ರೀತಿಯಲ್ಲಿ ಧರ್ಮಪಾಶದಿಂದ ಬದ್ಧನಾಗಿ ರಥದಲ್ಲಿ ಕುಳಿತಿದ್ದ ತನ್ನ ಮಗನನ್ನು ಕಾಣುವ ಸಲುವಾಗಿ ಕೌಸಲ್ಯಾದೇವಿಯು ಧಾವಿಸಿ ಬಂದಳು. ಕೌಸಲ್ಯದೇವಿ ರೋಧನ ಮಾಡುತ್ತ ರಥದ ಹಿಂದೆ ಓಡಿ ಓಡಿ ಬರುತ್ತಿದ್ದಳು. ' ಹಾ ರಾಮ! ಹಾ ಸೀತೆ! ಹಾ ಲಕ್ಷ್ಮಣ! ನಿಮ್ಮನ್ನು ಒಮ್ಮೆ ನೋಡಿ ಹೋಗುವೆನು. ನಿಲ್ಲಿರಿ. ಅಯ್ಯೋ!'- ಎಂದು ಕೂಗಿ ಕೊಳ್ಳುತ್ತಿದ್ದಳು. ನರ್ತಕಿಯಂತೆ ಅತ್ತಲಿತ್ತ ಪರಿಬ್ರಮಿಸುತ್ತಾ ಬರುತ್ತಿದ್ದ ತಾಯಿಯನ್ನು ಶ್ರೀರಾಮನೊಮ್ಮೆ ನೋಡಿದನು. ಆ ಸಮಯದಲ್ಲಿ ರಾಜನೂ ಸುಮಂತ್ರನನ್ನು ಕೂಗಿ ರಥವನ್ನು ನಿಲ್ಲಿಸುವಂತೆ ಹೇಳಿದನು. ಶ್ರೀ ರಾಮನ ಮಾತ್ರ 'ನಡೆ‌ ನಡೆ - ಮುಂದೆ ಹೋಗು ರಥವನ್ನು ನಿಲ್ಲಿಸಬೇಡ'- ಎಂದು ಪದೇ ಪದೇ ಹೇಳುತ್ತಲೇ ಇದ್ದನು.


ಡೋಲಾಯಮಾನವಾದ ಮನಸ್ಸಿನಿಂದ ಬಹುವಾಗಿ ಯೋಚಿಸುತ್ತಿದ್ದ ಸುಮಂತ್ರನಿಗೆ ಶ್ರೀರಾಮನು, "ಸುಮಂತ್ರ! ನೀನೀಗ ರಥವನ್ನು ನಿಲ್ಲಿಸದೇ ಶೀಘ್ರವಾಗಿ ಮುಂದುವರೆಯುವುದೇ ಉಚಿತವಾಗಿದೆ. ನೀನು ಅರಮನೆಗೆ ಹಿಂದಿರುಗಿದ ನಂತರ ರಾಜನು ರಥವನ್ನೇಕೆ ನಿಲ್ಲಿಸಲಿಲ್ಲವೆಂದು ಪ್ರಶ್ನಿಸಿದರೆ- ನೀನು ಕೂಗಿದುದು ಕೇಳಿಸಲಿಲ್ಲವೆಂದು ಉತ್ತರಿಸಬಹುದು. ಹಾಗೆ ಮಾಡದೆ ರಾಜನು ಹೇಳಿದಂತೆ ನೀನು ರಥವನ್ನು ನಿಲ್ಲಿಸಿದರೆ ಕೆಟ್ಟ ಪರಿಣಾಮವಾಗುತ್ತದೆ. 'ಚಿರಂ ದುಃಖಸ್ಯ ಪಾಪಿಷ್ಠಂ' ದುಃಖದ ಚಿರಂತನತ್ವವು ಪಾಪಕ್ಕೆ ಕಾರಣವಾಗುತ್ತದೆ" ಎಂದನು.


ಸುಮಂತ್ರನು ಶ್ರೀರಾಮನ ಮಾತಿಗೆ ಒಪ್ಪಿ ರಥದ ಹಿಂದೆ ಬರುತ್ತಿದ್ದ ಜನರನ್ನು ಹಿಂದೆ ಸರಿದು ನಿಲ್ಲುವಂತೆಯೂ, ಮುಂದೆ ಪ್ರಯಾಣ ಮಾಡಲು ಅನುಮತಿಸಬೇಕೆಂತಲೂ ಕೇಳಿಕೊಂಡನು. ಕಡಿವಾಣಗಳನ್ನೇ ಹಿಡಿದಿದ್ದರೂ ಮುಂದೆ ಮುಂದೆ ಹೋಗುತ್ತಿದ್ದ ಕುದುರೆಗಳನ್ನು ಇನ್ನೂ ಶೀಘ್ರವಾಗಿ ಹೋಗುವಂತೆ ಚಪ್ಪರಿಸಿದನು. ರಥ ವೇಗದಿಂದ ಹೊರಟು ಹೋಗಲು ಹಿಂದುಳಿದ ರಾಜ ಪರಿವಾರದವರು ನಿಂತಲ್ಲಿಯೇ ಶ್ರೀರಾಮನಿಗೆ ಪ್ರದಕ್ಷಿಣೆ ಮಾಡಿ ತಮ್ಮ ತಮ್ಮ ಮನೆಗಳಿಗೆ ಹಿಂದುರುಗಿದರು. ಆದರೆ ಜನ ಸಮೂಹವು ಮನಸ್ಸಿನಿಂದಲೂ ಕಣ್ಣೀರಿನಿಂದಲೂ ಹಿಮ್ಮುಖರಾಗಲೇ ಇಲ್ಲ. ಪುರಜನರ ಮನಸ್ಸು ಶ್ರೀ ರಾಮನನ್ನನುಸರಿಸಿಯೇ ಹೊರಟು ಹೋಯಿತು.


'ಪ್ರಯಾಣ ಮಾಡುವ ಯಾವನನ್ನು ನಾವು ಸುಖದಿಂದ ನಮ್ಮ ಬಳಿಗೆ ಪುನಃ ಬರಲು ಅಪೇಕ್ಷಿಸುವೆವೋ ಅಂತಹವನ ಜೊತೆಯಲ್ಲಿ ಬಹಳ ದೂರದವರೆಗೂ ಹೋಗಬಾರದು' ಹೀಗೆ ಅಮಾತ್ಯರು ದಶರಥನಿಗೆ ಸ್ಮೃತಿ ವಾಕ್ಯವನ್ನು ಉದ್ದರಿಸಿ ಹೇಳಿದರು. ಬಹಳ ದುಃಖಿತನಾಗಿದ್ದ ದಶರಥನು ಅಮಾತ್ಯರ ಸರ್ವ ಗುಣಗಳಿಂದ ಯುಕ್ತವಾದ ಆ ಮಾತುಗಳನ್ನು ಕೇಳಿ ಭಾರ್ಯೆಯೊಡನೆ ಶ್ರೀರಾಮನು ಪ್ರಯಾಣ ಮಾಡಿದ ಮಾರ್ಗವನ್ನೇ ದಿಟ್ಟಿಸಿ ನೋಡುತ್ತಾ ಅಲ್ಲಿಯೇ ನಿಂತಿದ್ದನು.

Comments


bottom of page