top of page

ಅಹಲ್ಯೋದ್ಧರಣ - ಮಿಥಿಲಾ ಪ್ರವೇಶ (ರಾಮಾಯಣ ಕಥಾಮಾಲೆ 7)

ಗೌತಮರ ಕೋಪಾವಿಷ್ಟಕ್ಕೆ ಗುರಿಯಾದ ಇಂದ್ರ ಹಾಗೂ ಅಹಲ್ಯೆಯರ ಕಥೆಯನ್ನು ರಾಮನಿಗೆ ವಿವರಿಸಿದ ವಿಶ್ವಾಮಿತ್ರರು, " ರಾಮ! ನಾನು ನಿನಗೆ ಅಹಲ್ಯೆಯ ವೃತ್ತಾಂತವೆಲ್ಲವನ್ನೂ ಪೂರ್ಣವಾಗಿ ಹೇಳಿದೆನಲ್ಲವೇ! ನೀನು ಪುಣ್ಯಾತ್ಮರಾದ ಗೌತಮರ ಈ ಆಶ್ರಮವನ್ನು ಪ್ರವೇಶಿಸಿ ಮಹಾಭಾಗೆಯಾದ, ದೇವರೂಪಿಣಿಯಾದ ಅಹಲ್ಯೆಯನ್ನು ಉದ್ಧರಿಸು" ಎಂದರು.

ವಿಶ್ವಾಮಿತ್ರರ ಆ ಮಾತುಗಳನ್ನು ಕೇಳಿ ರಾಘವನು, ವಿಶ್ವಾಮಿತ್ರ ಪುರಸ್ಸರನಾಗಿ, ಲಕ್ಷ್ಮಣನೊಡನೆ ಗೌತಮರ ದಿವ್ಯಾಶ್ರಮವನ್ನು ಪ್ರವೇಶಿಸಿದನು. ಆಶ್ರಮದೊಳಗೆ ರಾಮನು ಕಾಲಿಟ್ಟೊಡನೆಯೇ ಮಹಾಭಾಗೆಯಾದ, ಸಾವಿರ ವರ್ಷಗಳು ಅನವರತವಾಗಿ ಮಾಡಿದ ತಪಸ್ಸಿನಿಂದ ಪ್ರಾಪ್ತಿಯಾದ ಕಾಂತಿಯಿಂದ ದೇವೀಪ್ಯಮಾನಳಾಗಿದ್ದ, ದೇವ ರಾಕ್ಷಸರಿಂದಲೂ ಮಾನವರಿಂದಲೂ ಸಮೀಪದಲ್ಲಿ ನಿಂತು ನೋಡಲು ಅಶಕ್ತಳಾಗಿದ್ದ ಅಹಲ್ಯಾದೇವಿಯನ್ನು ನೋಡಿದನು. ಶಾಪದಿಂದ ವಿಮುಕ್ತಳಾದ ಅಹಲ್ಯಾದೇವಿಯ ಸೊಬಗು ಅನ್ಯಾದೃಶವಾಗಿದ್ದಿತು. ಬ್ರಹ್ಮನು ಅವಳನ್ನು ಅತ್ಯಂತ ಪ್ರಯತ್ನಪೂರ್ವಕವಾಗಿ ವಿಶೇಷ ಲಕ್ಷ್ಯವನ್ನಿತ್ತು, ದೇವಮಾಯೆಯಿಂದ ನಿರ್ಮಿಸಿರುವನೋ ಎಂಬಂತೆ ಕಾಣುತ್ತಿದ್ದಳು. ಹೋಮಧೂಮದಂತಿರುವ ಧೂಳಿನಿಂದ ಆವೃತವಾದ ಶರೀರದಿಂದ ಕೂಡಿದ್ದ ಅಹಲ್ಯಾದೇವಿಯು ಅಗ್ನಿಯ ಜ್ವಾಲೆಯಂತೆ ಕಂಗೊಳಿಸುತ್ತಿದ್ದಳು. ಆಶ್ರಮಭೂಮಿಯಲ್ಲಿ ಹೂಗಿಡ ಮರ ಬಳ್ಳಿಗಳ ಮಧ್ಯದಲ್ಲಿದ್ದ ಹಿಮದ ಆವರಣದಿಂದ ಕೂಡಿದ್ದ ಅಹಲ್ಯೆಯು, ಮೋಡಗಳಿಂದ ಕೂಡಿದ್ದ ಪೂರ್ಣ ಚಂದ್ರನ ಪ್ರಭೆಯಂತೆ ಪ್ರಕಾಶಿಸಿದಳು. ಅಂತಹ ಅನುಪಮವಾದ ತೇಜೋರಾಶಿಯಿಂದ ಕೂಡಿದ್ದ ಅಹಲ್ಯಾದೇವಿಯನ್ನು ಶ್ರೀರಾಮನು ಕಂಡನು. ಅಹಲ್ಯೆಯಾದರೋ ಗೌತಮರ ಶಾಪದಿಂದಾಗಿ ಶ್ರೀರಾಮ ದರ್ಶನವಾಗುವವರೆಗೂ ತ್ರೈಲೋಕ್ಯ ವಾಸಿಗಳಲ್ಲಿ ಯಾರಿಂದಲೂ ನೋಡಲು ಅಶಕ್ಯಳಾಗಿದ್ದಳು. ಶ್ರೀರಾಮನ ದರ್ಶನವಾದೊಡನೆಯೇ ಶಾಪದಿಂದ ವಿಮುಕ್ತಳಾಗಿ ಎಲ್ಲರ ಕಣ್ಣಿಗೂ ಗೋಚರವಾದಳು. ಮಹಾಮಹಿಮಳಾದ ಅಹಲ್ಯೆಯನ್ನು ಆಶ್ರಮದಲ್ಲಿ ಕಂಡೊಡನೆಯೇ ಶ್ರೀರಾಮ ಲಕ್ಷ್ಮಣರು ಸಂತೋಷಭರಿತರಾಗಿ, ಆ ಋಷಿಪತ್ನಿಯ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದರು. ಅಹಲ್ಯೆಯು ಲಕ್ಷ್ಮಣ ಸಮೇತನಾದ ಶ್ರೀರಾಮನನ್ನು ,ಅರ್ಘ್ಯ ಪಾದ್ಯ ಆಚಮನೀಯಗಳಿಂದಲೂ, ಕಂದ ಮೂಲ ಫಲಗಳಿಂದಲೂ ಯಥಾ ವಿಧಿಯಾಗಿ ಸತ್ಕರಿಸಿದಳು. ರಾಮನೂ ಅವಳು ಮಾಡಿದ ಸತ್ಕಾರವನ್ನು ಯಥಾವಿಧಿಯಾಗಿ ಆದರದಿಂದ ಸ್ವೀಕರಿಸಿದನು. ತಮ್ಮ ಆಶ್ರಮಕ್ಕೆ ರಾಮನು ಆಗಮಿಸಿರುವುದನ್ನು ದಿವ್ಯದೃಷ್ಟಿಯಿಂದ ತಿಳಿದ ಗೌತಮರು ಅಲ್ಲಿಗೆ ಬಂದು, ಶಾಪಮುಕ್ತಳಾದ ಅಹಲ್ಯೆಯೊಡನೆ ಶ್ರೀರಾಮನನ್ನು ಯಥೋಚಿತವಾಗಿ ಸತ್ಕರಿಸಿ, ಅನಂತರ ಯಥಾಪೂರ್ವವಾಗಿ ತಪಸ್ಸಿನಲ್ಲಿ ನಿರತರಾದರು. ಶ್ರೀರಾಮನೂ ಮಹರ್ಷಿಗಳಾದ ಗೌತಮರಿಂದ ಪರಮಾದರದ ಸತ್ಕಾರವನ್ನು ಪಡೆದು, ಲಕ್ಷ್ಮಣ ವಿಶ್ವಾಮಿತ್ರರೊಡನೆ ಮಿಥಿಲಾಪಟ್ಟಣಕ್ಕೆ ಪ್ರಯಾಣ ಮಾಡಿದನು.


ಬಳಿಕ ರಾಮ ಲಕ್ಷ್ಮಣರು ವಿಶ್ವಾಮಿತ್ರರನ್ನು ಮುಂದೆ ಮಾಡಿಕೊಂಡು ಮಿಥಿಲೋಪವನದ ಈಶಾನ್ಯ ದಿಕ್ಕಿನ ಕಡೆಗೆ ಪ್ರಯಾಣ ಮಾಡಿ ಸ್ವಲ್ಪಕಾಲದಲ್ಲಿಯೇ ಜನಕರಾಜನ ಯಾಗಶಾಲೆಯನ್ನು ತಲುಪಿದರು.


ವಿಶ್ವಾಮಿತ್ರರು ಬಂದಿರುವ ವಾರ್ತೆಯನ್ನು ತಿಳಿದ ಮಹಾತ್ಮನಾದ ಜನಕನು, ಒಡನೆಯೇ ಪುರೋಹಿತನಾದ, ನಿಷ್ಕಳಂಕನಾದ ಶತಾನಂದನನ್ನು ಮುಂದುಮಾಡಿಕೊಂಡು, ವಿನಯದಿಂದಲೂ ಭಕ್ತಿಯಿಂದಲೂ ಯುಕ್ತನಾಗಿ ವಿಶ್ವಾಮಿತ್ರರಿರುವಲ್ಲಿಗೆ ಧಾವಿಸಿದನು. ಪರಸ್ಪರ ಕುಶಲ ಪ್ರಶ್ನೆಗಳಾದನಂತರ, ಜನಕ ಮಹಾರಾಜನು ಕೈಮುಗಿದುಕೊಂಡು ವಿಶ್ವಾಮಿತ್ರರಿಗೆ, "ಮಹಾನುಭಾವರೆ! ಇಂದು ಯಾವ ವಿಧವಾದ ನ್ಯೂನತೆಯುೂ ಇಲ್ಲದ ಯಜ್ಞಸಮೃದ್ಧಿಯು ದೇವತೆಗಳಿಂದ ಅನುಗ್ರಹಿಸಲ್ಪಟ್ಟಿದೆ. ಭಗವತ್ಸ್ವರೂಪರಾದ ತಮ್ಮ ದರ್ಶನದಿಂದ ಯಜ್ಞದ ಪೂರ್ಣ ಫಲವು ಪ್ರಾಪ್ತವಾದಂತಾಯಿತು. ತಾವು ಈ ಮುನಿಪುಂಗವರೊಡನೆ ನನ್ನ ಯಜ್ಞ ಶಾಲೆಗೆ ದಯಮಾಡಿಸಿ ನನ್ನನ್ನು ಅನುಗ್ರಹಿಸಿದ್ದೀರಿ ನಾನಿಂದು ನಿಶ್ಚಯವಾಗಿಯೂ ಧನ್ಯನು. ಈಗ ನಾನು ಆರಂಭಿಸಿರುವ ಯಜ್ಞದ ಸುತ್ಯಾಹೋಮಕ್ಕೆ ಹನ್ನೆರಡು ದಿವಸಗಳು ಉಳಿದಿವೆಯೆಂದು ಶ್ರಾತಪ್ರಯೊಗ ಪರಿಣತರು ಹೇಳಿದ್ದಾರೆ ಹನ್ನೆರಡು ದಿವಸಗಳು ಕಳೆದನಂತರ ಸುತ್ಯಾ ಹೋಮವು ನಡೆಯಲಿದೆ. ಆ ಹೋಮದಲ್ಲಿ ಹವಿರ್ಭಾಗಗಳನ್ನು ಸ್ವೀಕರಿಸಲು ದೇವತೆಗಳು ಪ್ರತ್ಯಕ್ಷವಾಗಿ ಬರುವುದನ್ನು ತಾವೂ ಕಾಣಬಹುದು ಎಂದನು.


ಜನಕರಾಜನು ಸಂತಸದಿಂದ ಕೂಡಿದ ಮುಖಾರವಿಂದವುಳ್ಳವನಾಗಿ, ವಿಶ್ವಾಮಿತ್ರಮಹರ್ಷಿಗಳಿಗೆ ಹೀಗೆ ಹೇಳಿ ಬದ್ಧಾಂಜಲಿಯಾಗಿ ಪುನಃ ಅವರನ್ನು, "ಮಹರ್ಷಿಗಳೇ! ನಿಮಗೆ ಮಂಗಳವಾಗಲಿ ದೇವತೆಗಳಿಗಿರುವ ಪರಾಕ್ರಮಕ್ಕೆ ಸಮನಾದ ಪರಾಕ್ರಮವುಳ್ಳ ಆನೆಯಂತೆ ವೀರಮಂದಗತಿಯುಳ್ಳ, ಸಿಂಹದಂತೆ ಅಪ್ರತಿಹತವಾದ ಗಮನವುಳ್ಳ ಶಾರ್ದೂಲದಂತೆ ದುರ್ಧರ್ಷರಾದ, ವೃಷಭದಂತೆ ಉನ್ನತವಾದ ಹೆಗಲುಗಳುಳ್ಳ ವೀರರಾದ, ಪದ್ಮಪತ್ರದಂತೆ ವಿಶಾಲವಾದ ಕಣ್ಣುಗಳುಳ್ಳ, ಖಡ್ಗವನ್ನೂ ಬಿಲ್ಲು ಬಿತ್ತಳಿಕೆಗಳನ್ನೂ ಧರಿಸಿರುವ, ಅಶ್ವಿನಿದೇವತೆಗಳಿಗೆ ಅನುರೂಪವಾದ ರೂಪಾತಿಶಯವುಳ್ಳ, ಪ್ರಾಪ್ತವಯಸ್ಕರಾದ, ದೇವಲೋಕದಿಂದ ಭೂಲೋಕಕ್ಕೆ ಸ್ವೇಚ್ಛೆಯಿಂದ ಬಂದಿರುವ ದೇವತೆಗಳೋಪಾದಿಯಲ್ಲಿರುವ ಈ ಸುಕುಮಾರರು ಯಾರು? ಇವರು ಕಾಲ್ನಡಿಗೆಯಲ್ಲಿಯೇ ನಮ್ಮ ದೇಶಕ್ಕೆ ಬರಲು ಕಾರಣವಾದರೂ ಏನು? ಈ ಸುಕುಮಾರರು ಇಷ್ಟು ದೂರ ಹೇಗೆ ನಡೆದು ಬಂದರು? ಇವರು ಯಾವ ಪುಣ್ಯ ಪುರುಷನ ಮಕ್ಕಳು? ಇವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿರಿ" ಎಂದನು.


ಮಹಾತ್ಮನಾದ ಜನಕರಾಜನ ಮಾತುಗಳನ್ನು ಕೇಳಿ ವಿಶ್ವಾಮಿತ್ರರು, "ಜನಕರಾಜ! ಈ ಸುಕುಮಾರರು ಅಯೋಧ್ಯಾಧಿಪತಿಯಾದ ದಶರಥನ ಮಕ್ಕಳು" ಎಂದು ಹೇಳಿ ರಾಮ ಲಕ್ಷ್ಮಣರ ಸೂಕ್ಷ್ಮ ಪರಿಚಯವನ್ನು ಮಾಡಿಕೊಟ್ಟರು. ಅನಂತರ ಜನಕ ರಾಜನ ಉಳಿದ ಪ್ರಶ್ನೆಗಳಿಗೆ ಉತ್ತರವೀಯುತ್ತಾ ರಾಮ ಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆತಂದುದು, ಅಲ್ಲಿ ಅವರು ಮಾಡಿದ ರಾಕ್ಷಸರವಧೆ ಮತ್ತು ಯಜ್ಞರಕ್ಷಣೆ ಸಾವಿರಾರು ರಾಕ್ಷಸರಿಂದ ನಿಬಿಡವಾದ ಕಾಡುಗಳಲ್ಲಿ ನಿರ್ಭಯರಾಗಿ ಋಷಿಸಮೂಹವನ್ನು ರಕ್ಷಿಸುತ್ತಾ ಪ್ರಯಾಣ ಮಾಡಿದುದು, ವಿಶಾಲ ನಗರಿಯ ದರ್ಶನ ಮತ್ತು ಸುಮತಿಯಿಂದ ಆತಿಥ್ಯಸ್ವೀಕಾರ ಮಿಥಿಲೋಪವನದಲ್ಲಿ ಅಹಲ್ಯಾದರ್ಶನ ಮತ್ತು ಶಾಪವಿಮೋಚನೆ ಮಹರ್ಷಿ ಗೌತಮರೊಡನೆ ಸಮಾಗಮ - ಇವೆಲ್ಲವನ್ನೂ ವಿಸ್ತಾರವಾಗಿ ಅಪೂರ್ವವಾದ ಮಹಾಧನುಸ್ಸಿನ ಬಲವನ್ನು ಪರೀಕ್ಷಿಸಲೋಸುಗ ರಾಮಲಕ್ಷ್ಮಣರು ಮಿಥಿಲಾಪಟ್ಟಣಕ್ಕೆ ಬಂದಿರುವರೆಂಬುವುದನ್ನು ಜನಕರಾಜನಿಗೆ ವಿಶ್ವಾಮಿತ್ರರು ತಿಳಿಸಿ ವಿರಮಿಸಿದರು.

Comments


bottom of page