top of page

ಮಿಥಿಲಾ ಗಮನ - ಅಹಲ್ಯಾ ವೃತ್ತಾಂತ (ರಾಮಾಯಣ ಕಥಾಮಾಲೆ - 6)

ಮಹರ್ಷಿಗಳಾದ ವಿಶ್ವಾಮಿತ್ರರು ಸಕಲಕಾರ್ಯ ಸಾಧನಭೂತವಾದ ಉತ್ತಮೋತ್ತಮವಾದ ಸಿದ್ಧಾಶ್ರಮವನ್ನು ಪ್ರದಕ್ಷಿಣೆ ಮಾಡಿ ರಾಮ ಲಕ್ಷ್ಮಣರಿಂದಲೂ ಮತ್ತು ಮಹರ್ಷಿಗಳಿಂದಲೂ ಕೂಡಿದವರಾಗಿ, ಉತ್ತರ ದಿಕ್ಕಿನ ಕಡೆಗೆ ಪ್ರಯಾಣ ಮಾಡತೊಡಗಿದರು. ಅನಂತರ ವಿಶ್ವಾಮಿತ್ರ ಪ್ರಮುಖರಾದ ಮಹರ್ಷಿಗಳು, ಬಹಳ ದೂರದವರೆಗೂ ನಡೆದು, ಸೂರ್ಯನು ಅಸ್ತನಾಗುತ್ತಿರಲಾಗಿ ಶೋಣಾನದಿಯ ತೀರಪ್ರದೇಶದಲ್ಲಿ ತಂಗಿದರು.

🔸ವಿಶಾಲಾ ನಗರ ಪ್ರವೇಶ

ಅಲ್ಲಿಂದ ಮುಂದುವರೆದು ರಾಮ-ಲಕ್ಷ್ಮಣರಿಗೆ ಬ್ರಹ್ಮಪುತ್ರನಾದ ಕುಶನ ನಾಲ್ಕು ಮಕ್ಕಳ ವಿಚಾರ, ಶೋಣಾನದಿಯ ತೀರ ಪ್ರದೇಶಕ್ಕೆ ವಸುವಿನ ಭೂಮಿ ಎಂದು ಹೆಸರು ಬರಲು ಕಾರಣ, ಗಂಗೆಯ ಜನ್ಮ ವೃತ್ತಾಂತ, ದೇವ ದಾನವರು ಸಮುದ್ರವನ್ನು ಕಡೆದುದು ಮುಂತಾದ ವೃತ್ತಾಂತಗಳನ್ನು ವಿವರಿಸುತ್ತಾ "ವಿಶಾಲಾ" ಎಂಬ ಪಟ್ಟಣವನ್ನು ತಲುಪಿದರು. ಈ ಪ್ರದೇಶದ ಕುರಿತಾಗಿ ಕುತೂಹಲಿಯಾಗಿ ಪ್ರಶ್ನಿಸಿದ ರಾಮನ ಕುರಿತಾಗಿ ವಿಶ್ವಾಮಿತ್ರರು "ನರವ್ಯಾಘ್ರನೇ! ಪೂರ್ವಕಾಲದಲ್ಲಿ ಇಕ್ಷ್ವಾಕುವಿಗೆ, ಅಲಂಬುಷಾ ಎಂಬ ಭಾರ್ಯೆಯಲ್ಲಿ ಪರಮಧಾರ್ಮಿಕನಾದ "ವಿಶಾಲ"ನೆಂಬ ಸುಪ್ರಸಿದ್ಧನಾದ ಮಗನು ಹುಟ್ಟಿದನು. ವಿಶಾಲರಾಜನು ಇದೇ ಸ್ಥಳದಲ್ಲಿ ವಿಶಾಲಾ ಎಂಬ ಹೆಸರಿನ ಈ ಪಟ್ಟಣವನ್ನು ನಿರ್ಮಿಸಿದನು. ಮಹಾಬಲಿಷ್ಠನಾದ ಹೇಮಚಂದ್ರನು ವಿಶಾಲ ರಾಜನ ಮಗ. ಹೇಮಚಂದ್ರನ ನಂತರ ಅವನ ಮಗನು ಸುಚಂದ್ರನೆಂಬ ಹೆಸರಿನಿಂದ ವಿಖ್ಯಾತನಾಗಿದ್ದನು. ಧೂಮ್ರಾಶ್ವನು ಸುಚಂದ್ರನ ಮಗ. ಧೂಮ್ರಾಶ್ವನಿಗೆ ಸೃಂಜಯನೆಂಬ ಮಗನು ಹುಟ್ಟಿದನು. ಮಹಾಪ್ರತಾಪಶಾಲಿಯಾದ, ಶ್ರೀಮಂತನಾದ ಸಹದೇವನು ಸೃಂಜಯನ ಮಗ. ಪರಮಧಾರ್ಮಿಕನಾದ ಕುಶಾಶ್ವನು ಸಹದೇವನ ಮಗ. ಮಹಾತೇಜಸ್ವಿಯಾದ ಸೋಮದತ್ತನು ಕುಶಾಶ್ವನ ಮಗ. ಸೋಮದತ್ತನ ಮಗ ಕಾಕುತ್ಸ್ಥ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದನು. ಮಹಾತೇಜಸ್ವಿಯಾದ, ದೇವತೆಗಳಿಗೆ ಸಮಾನನಾದ, ಶತ್ರುಗಳಿಂದ ಜಯಿಸಲು ಅಸಾಧ್ಯನಾದ, ಕಾಕುತ್ಸ್ಥನ ಮಗನಾದ ಸುಮತಿಯೆಂಬುವನು ಈಗ ಈ ಪಟ್ಟಣವನ್ನು ಆಳುತ್ತಿದ್ದಾನೆ. ಇಕ್ಷ್ವಾಕು ಮಹಾರಾಜನ ಅನುಗ್ರಹದಿಂದಾಗಿ ಅವನ ವಂಶೀಯರಾದ, ವಿಶಾಲವಾಸಿಗಳಾದ ರಾಜರು ದೀರ್ಘಾಯುಷ್ಮಂತರೂ, ಮಹಾತ್ಮರೂ, ವೀರ್ಯವಂತರೂ, ಧಾರ್ಮಿಕರೂ ಆಗಿರುತ್ತಾರೆ. ಈ ಪಟ್ಟಣದಲ್ಲಿಯೇ ನಾವು ಈ ರಾತ್ರಿ ಸುಖವಾಗಿ ಮಲಗಿ ವಿಶ್ರಾಂತಿಯನ್ನು ಪಡೆಯೋಣ. ನಾಳೆ ಬೆಳಿಗ್ಗೆ ಇಲ್ಲಿಂದ ಮಿಥಿಲಾಪಟ್ಟಣಕ್ಕೆ ಪ್ರಯಾಣ ಮಾಡೋಣ. ಅಲ್ಲಿ ನೀನು ಪರಮ ಧಾರ್ಮಿಕನಾದ ಜನಕನನ್ನು ನೋಡಬಹುದು" ಎಂದರು.


ಹೀಗೆ ಮಾತನಾಡುತ್ತಿರುವಾಗಲೇ ಪರಮಧಾರ್ಮಿಕನಾದ ಸುಮತಿಯು, ವಿಶ್ವಾಮಿತ್ರರ ಶಿಷ್ಯರೊಡನೆ ತನ್ನ ಪಟ್ಟಣದ ಕಡೆಗೆ ಬರುತ್ತಿರುವರೆಂಬ ವಾರ್ತೆಯನ್ನು ಕೇಳಿ, ಮಂತ್ರಿ ಪುರೋಹಿತರೊಡನೆ ಅರಮನೆಯಿಂದ ಹೊರಬಂದು, ವಿಶ್ವಾಮಿತ್ರರನ್ನು ಎದುರ್ಗೊಂಡು, ರಾಜ ಮರ್ಯಾದೆಗಳೊಡನೆ ಮಹರ್ಷಿಗಳನ್ನೂ ಮತ್ತು ಅವರ ಅನುಯಾಯಿಗಳನ್ನೂ ಅರಮನೆಯೊಳಕ್ಕೆ ಕರೆದೊಯ್ದನು. ಬಂದವರನ್ನೆಲ್ಲ ಸತ್ಕರಿಸಿ, "ಮಹರ್ಷಿಗಳೇ! ನಿಮಗೆ ಮಂಗಳವಾಗಲಿ. ದೇವತೆಗಳ ಪರಾಕ್ರಮಕ್ಕೆ ಅನುಗುಣವಾದ ಪರಾಕ್ರಮವುಳ್ಳ, ಆನೆಯಂತೆ ಗಂಭೀರತೆಯುಳ್ಳ, ಸಿಂಹದಂತೆ ಅಪ್ರಹಿತವಾದ ಗಮನವುಳ್ಳ, ಹುಲಿಯಂತೆ ಎದುರಿಸಲು ಅಸಾಧ್ಯವಾದ, ಎತ್ತಿನಂತೆ ಉನ್ನತವಾದ ಹೆಗಲುಗಳುಳ್ಳ, ವೀರರಾದ, ಪದ್ಮ ಪತ್ರದಂತೆ ವಿಶಾಲವಾದ ಕಣ್ಣುಗಳುಳ್ಳ, ಖಡ್ಗವನ್ನು-ಧನಸ್ಸು-ಬತ್ತಳಿಕೆಗಳನ್ನು ಧರಿಸಿರುವ, ಅಶ್ವಿನಿ ದೇವತೆಗಳಿಗೆ ಅನುರೂಪವಾದ ರೂಪಾತಿಷಯವುಳ್ಳ, ಪ್ರಾಪ್ತವಯಸ್ಕರಾಗಿರುವ, ದೇವಲೋಕದಿಂದ ಭೂಲೋಕಕ್ಕೆ ಇಚ್ಛೆಯಿಂದ ಬಂದಿರುವ ದೇವತೆಗಳೋಪಾದಿಯಲ್ಲಿರುವ, ಈ ಇಬ್ಬರು ಕುಮಾರರು ಯಾರು? ಇವರು ಕಾಲ್ನಡಿಗೆಯಿಂದಲೇ ನಮ್ಮ ದೇಶಕ್ಕೆ ಬಂದಿರುವ ಕಾರಣವಾದರೂ ಏನು? ಇವರು ಯಾವ ಪುಣ್ಯಪುರುಷರ ಮಕ್ಕಳು? ಇವೆಲ್ಲವನ್ನೂ ವಿಸ್ತಾರವಾಗಿ ತಿಳಿಸಿರಿ" ಎಂದನು.


ಸುಮತಿಯು ಹೇಳಿದ ಮಾತುಗಳನ್ನು ಕೇಳಿ ವಿಶ್ವಾಮಿತ್ರ ಪರಮಹರ್ಷಿತರಾಗಿ ದಶರಥನ ಪೂರ್ವೇತಿಹಾಸ, ಅವನು ಮಕ್ಕಳಿಗಾಗಿ ಪುತ್ರಕಾಮೆಷ್ಠಿಯಾಗವನ್ನು ಮಾಡಿದುದು, ರಾಮ-ಲಕ್ಷ್ಮಣ-ಭರತ-ಶತ್ರಘ್ರ ಜನನ, ತಾನು ಸಿದ್ಧಾಶ್ರಮದಲ್ಲಿ ಮಾಡುತ್ತಿದ್ದ ಯಜ್ಞಕ್ಕೆ ರಾಕ್ಷಸರಿಂದ ಉಪದ್ರವ, ಯಜ್ಞ ರಕ್ಷಣೆಗಾಗಿ ರಾಮ ಲಕ್ಷ್ಮಣರನ್ನು ಅಯೋಧ್ಯೆಯಿಂದ ಕರೆತಂದ ದಾರಿಯಲ್ಲಿಯೇ ತಾಟಕಸಂಹಾರ, ಸಿದ್ಧಾಶ್ರಮದಲ್ಲಿ ರಾಕ್ಷಸರ ವಿನಾಶ ಮತ್ತು ಯಜ್ಞರಕ್ಷಣೆಯನ್ನು ವೀರರಾದ ಶ್ರೀರಾಮ ಲಕ್ಷ್ಮಣರು ಮಾಡಿದುದು, ಅಲ್ಲಿಂದ ಮುಂದೆ ಜನಕಾರಾಜನ ಶಿವಧನುಸ್ಸುನ್ನು ರಾಮನಿಗೆ ತೋರಿಸುವ ಅಪೇಕ್ಷೆಯಿಂದ ಅವರನ್ನು ಮಿಥಿಲಾಪಟ್ಟಣಕ್ಕೆ ಕರೆದೊಯ್ಯುತ್ತಿರುವುದು - ಇವಿಷ್ಟು ವಿಷಯಗಳನ್ನು ಸುಮತಿಗೆ ತಿಳಿಸಿದರು. ಅವರ ಮಾತುಗಳನ್ನು ಕೇಳಿ ಸುಮತಿಯು ಪರಮಹರ್ಷಿತನಾಗಿ ದಶರಥನ ಆಯಾ ಇಬ್ಬರು ಮಕ್ಕಳನ್ನು ಯಥಾವಿಧಿಯಾಗಿ ಸತ್ಕರಿಸಿದನು. ಸುಮತಿಯ ಅಮೋಘವಾದ ಸತ್ಕಾರವನ್ನು ಪಡೆದ ನಂತರ ರಾಮ - ಲಕ್ಷ್ಮಣರು ಆ ರಾಜನ ಅರಮನೆಯಲ್ಲಿ ಒಂದು ರಾತ್ರಿ ತಂಗಿದ್ದು, ಬೆಳಗಾಗುತ್ತಲೇ ನಿತ್ಯಕರ್ಮಗಳನ್ನು ಮುಗಿಸಿ ವಿಶ್ವಾಮಿತ್ರರೊಡನೆ ಮಿಥಿಲಾಪಟ್ಟಣಕ್ಕೆ ಹೊರಟರು.


🔸ಅಹಲ್ಯಾ ವೃತ್ತಾಂತ

ಮಿಥಿಲಾ ಪಟ್ಟಣವು ಸಮೀಪಿಸಿತು. ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿದ್ದ ಉಪವನದಲ್ಲಿ ಪುರಾತನವಾದ, ಜನರಹಿತವಾದ, ಆದರೂ ನೋಡಲು ಬಹುರಮ್ಯವಾಗಿದ್ದ ಆಶ್ರಮವೊಂದನ್ನು ಕಂಡು ರಾಮನು ಉತ್ಸುಕತೆಯಿಂದ ವಿಶ್ವಾಮಿತ್ರರನ್ನು " ಮಹರ್ಷಿಗಳೇ! ಈ ವನಮಧ್ಯದಲ್ಲಿ ಕಂಗೊಳಿಸುತ್ತಿರುವ ಈ ನಿವಾಸವು ಋಷ್ಯಾಶ್ರಮದಂತೆಯೇ ಇರುವುದು. ಆದರೆ ಇಲ್ಲಿ ಯಾವ ಮಹರ್ಷಿಯು ಕಾಣುತ್ತಿಲ್ಲ. ಇದು ಹಿಂದೆ ಯಾರ ಅಶ್ರಮವಾಗಿದ್ದಿತು? ಈಗ ಇಲ್ಲಿ ಮುನಿಗಳಿಲ್ಲದಿರಲು ಕಾರಣವೇನು? ಇವೆಲ್ಲವನ್ನೂ ವಿವರವಾಗಿ ತಿಳಿದುಕೊಳ್ಳಲು ಬಯಸುತ್ತೇನೆ." ಎಂದು ಭಿನ್ನವಿಸಿಕೊಂಡನು.


ವಾಕ್ಯವಿಶಾರದರಾದ ವಿಶ್ವಾಮಿತ್ರರು ರಾಘವನ ಮಾತುಗಳನ್ನು ಕೇಳಿ, "ರಾಘವ! ದೇವಲೋಕದ ಆಶ್ರಮಕ್ಕೆ ಅನುರೂಪವಾಗಿರುವ ಮತ್ತು ದೇವತೆಗಳಿಂದಲೂ ಪೂಜಿಸಲ್ಪಡುತ್ತಿದ್ದ ಈ ಆಶ್ರಮವು ಮಹಾತ್ಮರಾದ ಗೌತಮ ಮಹರ್ಷಿಗಳ ಆಶ್ರಮವಾಗಿದ್ದಿತು. ಅವರು ಭಾರ್ಯೆಯಾದ ಅಹಲ್ಯೆಯೊಡನೆ ಅನೇಕ ವರ್ಷಗಳವರೆಗೆ ಇಲ್ಲಿ ತಪ್ಪಸನ್ನು ಮಾಡುತಿದ್ದರು. ಒಮ್ಮೆ ಶಚಿಪತಿಯಾದ ಇಂದ್ರನು ಮಹರ್ಷಿಯು ಅಶ್ರಮಲ್ಲಿರದ ವೇಳೆಯನ್ನು ನಿರೀಕ್ಷಿಸುತ್ತಿದ್ದು, ಗೌತಮರು ಆಶ್ರಮದಿಂದ ಬಹಳದೂರ ಹೋಗಿರುವ ಸಮಯದಲ್ಲಿ, ಗೌತಮರ ವೇಷವನ್ನೇ ಧರಿಸಿ, ಆಶ್ರಮವನ್ನು ಪ್ರವೇಶಿಸಿ ಅಹಲ್ಯೆಯ ಬಳಿಗೆ ಹೋಗಿ ಅವಳಿಗೆ "ಸುಂದರಾಂಗಿಯೇ! ಮನ್ಮಥನಿಂದ ಪೀಡಿತರಾದವರು ತಾವು ಕಾಮಿಸಿದ ಯುವತಿಗೆ ಋತುಕಾಲವು ಪ್ರಾಪ್ತವಾಗಿರುವುದೇ - ಇಲ್ಲವೇ? ಎಂದು ವಿವೇಚನೆಯನ್ನು ಮಾಡಲಾರರು. ನಾನೀಗ ನಿನ್ನೊಡನೆ ಸಮಾಗಮವನ್ನು ಬಯಸುತ್ತೇನೆ." ಎಂದನು.


ಅವನ ಈ ವಿಧವಾದ ಮಾತುಗಳಿಂದ ಅಹಲ್ಯೆಗೆ ತನ್ನೊಡನೆ ಮಾತನಾಡುತ್ತಿರುವವನು ಗೌತಮನಲ್ಲವೆಂಬದು ಸ್ಪಷ್ಟವಾಗಿ ತಿಳಿಯಿತಲ್ಲದೆ ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವನೆಂದೂ ಅವಳು ನಿರ್ಧರಿಸಿದಳು. ದೇವರಾಜನು ಬಂದು ತನ್ನನ್ನು ರತಿಸುಖಕ್ಕಾಗಿ ಪ್ರಾರ್ಥಿಸುತ್ತಿರುವನೆಂಬ ಕುತೂಹಲದಿಂದ ಮೂಢಳಾದ ಅಹಲ್ಯೆಯು, ಇಂದ್ರನೊಡನೆ ಸಂಗಮ ಮಾಡಲು ನಿಶ್ಚಯಿಸಿದಳು. ಅವನೊಡನೆ ರತಿಸುಖವನ್ನನುಭವಿಸಿ ಪರಮಸಂತುಷ್ಟಳಾದ ಅಹಲ್ಯೆಯು ಇಂದ್ರನಿಗೆ "ದೇವೇಶ! ನಿನ್ನ ಸಮಾಗಮದಿಂದ ಕೃತಾರ್ಥಳಾದೆನು. ಮುಂದೆ ದುಷ್ಪರಿಣಾಮವಾಗದ ರೀತಿಯಲ್ಲಿ ನೀನೀಗಲೇ ಇಲ್ಲಿಂದ ಹೊರಟು ಹೋಗು. ಗೌತಮರ ಶಾಪದಿಂದ ನನ್ನನ್ನೂ ರಕ್ಷಿಸು ಮತ್ತು ನೀನೂ ಅವರ ಶಾಪಕ್ಕೆ ಗುರಿಯಾಗಬೇಡ ಎಂದಳು". ಆಗ ಇಂದ್ರನು ನಸುನಗುತ್ತಾ, "ಸುಶ್ರೋಣಿ! ನೀನು ನನ್ನ ಪ್ರಾರ್ಥನೆಯನ್ನು ಅಂಗೀಕರಿಸಿ ನನ್ನೊಡನೆ ಸಮಾಗಮ ಮಾಡಿದುದಕ್ಕಾಗಿ ನಾನೂ ಸಂತುಷ್ಟನಾಗಿದ್ದೇನೆ. ನಾನಿನ್ನು ಬಂದಂತೆಯೇ ಹೊರಟು ಹೋಗುತ್ತೇನೆ" ಎಂದು ಹೇಳಿ ಆಶ್ರಮದಿಂದ ಹೊರಬಿದ್ದನು. ಭಯಭೀತನಾಗಿ, 'ಗೌತಮರೆಲ್ಲಿ ಬಂದುಬಿಡುವರೋ' ಎಂಬ ಅವಸರದಿಂದಲೇ ಇಂದ್ರನು ಆಶ್ರಮದಿಂದ ಹೊರಟ ವೇಳೆಗೆ ಸರಿಯಾಗಿ ಗೌತಮರು ಆಶ್ರಮವನ್ನು ಪ್ರವೇಶಿಸುತ್ತಿದ್ದುದ್ದನ್ನು ಕಂಡು ನಡುಗಿದನು. ಗೌತಮರಾದರೋ ಸಾಮಾನ್ಯರಲ್ಲ. ದೇವ ದಾನವರುಗಳಿಂದಲೂ ಜಯಿಸಲಸಾಧ್ಯರಾದವರು. ತಪೋಬಲದಿಂದ ಸಂಪನ್ನರಾದವರು. ಆಗ ಗೌತಮರು ತೀರ್ಥೋದಕದಲ್ಲಿ ಮಿಂದು, ಶುಚಿಯಾಗಿ ಬರುತ್ತಿದ್ದರು. ಅಂತಹ ಮಹಾಮಹಿಮರಾದ ಗೌತಮರು ಎದುರಾಗಿ ಬಂದು ತನ್ನ ಮುಂದೆ ನಿಂತೊಡನೆಯೇ, ಸುರಪತಿಯು ನಡುಗಿಹೋದನು. ಮುಖವು ವಿವರ್ಣವಾಯಿತು. ಮುನಿವೇಷಧರನಾದ, ದುಷ್ಕಾರ್ಯಪ್ರವೃತ್ತನಾದ ಇಂದ್ರನನ್ನು ಕಂಡು ಸದ್ವೃತ್ತಿ ಸಂಪನ್ನರಾದ ಗೌತಮರು ಕೋಪಾವಿಷ್ಟರಾಗಿ, "ದುರ್ಮತಿಯೇ! ನನ್ನ ರೂಪವನ್ನು ಧರಿಸಿ ನೀನು ಈ ಅಕಾರ್ಯವನ್ನು ಮಾಡಿರುವೆ. ಆದುದರಿಂದ ನೀನೀಗಲೇ ಫಲರಹಿತನಾಗುವೆ." ಎಂದು ಶಾಪವನ್ನಿತ್ತರಲ್ಲದೆ ಭಾರ್ಯೆಯಾದ ಅಹಲ್ಯೆಗೂ "ದುರ್ವೃತ್ತಿಯುಳ್ಳವಳೇ! ನೀನು ಸಾವಿರ ವರ್ಷಗಳ ಕಾಲ ಈ ಉಪವನದಲ್ಲಿಯೇ ಗಾಳಿಯನ್ನೇ ಆಹಾರವನ್ನಾಗಿ ಸೇವಿಸುತ್ತಾ, ನಿರಾಹಾರಳಾಗಿ, ಪಶ್ಚಾತ್ತಾಪದಿಂದ ತಪಿಸುತ್ತಾ ಭಸ್ಮರಾಶಿಯ ಮೇಲೆ ಮಲಗುತ್ತಾ ಸಕಲಪ್ರಾಣಿಗಳಿಗೂ ಅದೃಷ್ಯಳಾಗಿ ಈ ಆಶ್ರಮದಲ್ಲಿ ವಾಸಮಾಡುವೆ, ಯಾವಾಗ ಈ ನಿರ್ಜನವಾದ ಘೋರಾರಣ್ಯದಲ್ಲಿರುವ ಈ ಆಶ್ರಮಕ್ಕೆ ದುರ್ಧರ್ಷಣನಾದ ದಶರಥನ ಮಗನಾದ ರಾಮನು ಬರುವನೋ ಆಗ ನೀನು ಪೂತಾತ್ಮಳಾಗುವೆ. ದಯಾಮಯನಾದ ಶ್ರೀರಾಮನ ಆತಿಥ್ಯದಿಂದ ನೀನು ಲೋಭ ಮೋಹಗಳಿಂದ ವಿಮುಕ್ತಳಾಗಿ ನಿನ್ನ ಪೂರ್ವ ಶರೀರವನ್ನು ಧರಿಸಿ ಸರ್ವರಿಂದಲೂ ಪ್ರೇಕ್ಷ್ಯಳಾಗಿ ಸಂತೋಷದಿಂದ ನಿನ್ನನ್ನು ಸೇರುವೆ" ಎಂದು ಶಾಪವನ್ನಿತ್ತರು.

ರಾಮ! ಗೌತಮರು ದುಷ್ಟಚಾರಿಣಿಯಾದ ಅಹಲ್ಯೆಗೆ ಹೀಗೆ ಹೇಳಿ, ಈ ಆಶ್ರಮವನ್ನು ತ್ಯಜಿಸಿ, ಸಿದ್ಧ ಚಾರಣರಿಂದ ಸಂಸೇವ್ಯಮಾನವಾದ, ರಮ್ಯವಾದ ಹಿಮವತ್ಪರ್ವತದ ತಪ್ಪಲಿನಲ್ಲಿ ತಪಶ್ಚರಣೆ ಮಾಡಲು ಹೊರಟುಹೋದರು" ಎಂದರು.

2 Comments


Guest
Jun 29

ಅಹಲ್ಯೆ ಶಿಲೆಯಾಗುವುದಿಲ್ಲ. ಮಲಿನೆಯಾಗಿ ಶೀಲಾ ಸದೃಶ ಬಾಳು.

Like
Replying to

ನಮಸ್ತೆ! ಇದು ವಾಲ್ಮೀಕಿ ಕವಿಗಳ ರಾಮಾಯಣವನ್ನು ಆಧರಿಸಿ ಬರೆದಿರುವಂತದ್ದು! 'ಶಿಲಾಸದೃಶ ಬಾಳು' ಎಂಬುದು ತೀರ Reality ವಿಷಯ! ಕಾವ್ಯ-ಕಥೆ ಅಂತ ಬಂದಾಗ ಶಿಲೆಯಾಗಿದ್ದಳು ಅಂತಲೇ ಹೇಳಬೇಕಲ್ಲ! ಶ್ರೀರಾಮನ ಪಾದಸ್ಪರ್ಶ ಆಗಿದ್ದು ಶಿಲೆಗೆ ಅಂತ ಕಥೆ!


ಶಿಲಾ ಸದೃಷ ಬಾಳು ಎಂದು ವಿಮರ್ಶಕರ ಸ್ಥಾನದಲ್ಲಿ ನಿಂತು ತರ್ಕಿಸಬಹುದು!


Edited
Like
bottom of page