top of page

ಯಜ್ಞ ರಕ್ಷಣೆ (ರಾಮಾಯಣ ಕಥಾಮಾಲೆ - 5)

ಶತ್ರುಗಳ ದರ್ಪವನ್ನು ಮುರಿಯಲು ಸಮರ್ಥರಾಗಿದ್ದ ರಾಮ ಲಕ್ಷ್ಮಣರು ಯಜ್ಞ ದೀಕ್ಷಾ ಬದ್ಧರಾದ ವಿಶ್ವಾಮಿತ್ರರಿಗೆ "ಪೂಜ್ಯರೇ! ಯಾವ ಕಾಲದಲ್ಲಿ ನಾವು ರಾಕ್ಷಸರನ್ನು ದಂಡಿಸಿ ಯಜ್ಞವನ್ನು ಸಂರಕ್ಷಿಸಬೇಕಾಗಿದೆ? ಆ ಕಾಲವು ಮೀರದಂತಾಗಲಿ ಇವೆಲ್ಲವನ್ನೂ ಸಾವಕಾಶ ಮಾಡದೆ ಹೇಳಿರಿ" ಎಂದರು.

ಈ ರೀತಿಯಾಗಿ ಪದೇ ಪದೇ ಹೇಳುತ್ತಿದ್ದ, ಯುದ್ಧ ಮಾಡುವ ಉತ್ಸಾಹದಿಂದ ತ್ವರೆ ಮಾಡುತ್ತಿದ್ದ ರಾಜಕುಮಾರರನ್ನು ಕಂಡು, ಸಿದ್ಧಾಶ್ರಮ ವಾಸಿಗಳಾದ ಋಷಿಗಳೆಲ್ಲರು ಪರಮಪ್ರೀತರಾಗಿ ರಾಮ-ಲಕ್ಷ್ಮಣರಿಗೆ, "ರಾಜಕುಮಾರರೇ! ಇಂದು ಮೊದಲ್ಗೊಂಡು ಆರು ರಾತ್ರಿಗಳವರೆಗೆ ನೀವು ಯಾಗವನ್ನು ರಕ್ಷಣೆ ಮಾಡಿರಿ, ದೀಕ್ಷಾಬದ್ಧರಾದೊಡನೆಯೇ ವಿಶ್ವಾಮಿತ್ರರು ಮೌನವ್ರತವನ್ನು ಅನುಷ್ಠಾನ ಮಾಡುತ್ತಾರೆ." ಎಂದರು.

🔥ರಾಮನ ಶೌರ್ಯ: ಮಾರೀಚ ಮತ್ತು ಸುಬಾಹು ರಾಕ್ಷಸರ ನಿಗ್ರಹ

ree

ಮಹರ್ಷಿಗಳ ಮಾತನ್ನು ಕೇಳಿ ರಾಮ-ಲಕ್ಷ್ಮಣರು ನಿದ್ದೆಯನ್ನೇ ಮಾಡದೇ, ಆರು ರಾತ್ರಿಗಳವರೆಗೆ ತಪೋವನವನ್ನು ನಿರ್ಬಾಧಕವಾಗಿ ಸಂರಕ್ಷಿಸಿದರು. ವಿಶ್ವಾಮಿತ್ರರ ಸಮೀಪದಲ್ಲಿಯೇ ಇದ್ದು ಅವರನ್ನು ಸಂರಕ್ಷಿಸುತ್ತಿದ್ದರು. ಐದು ರಾತ್ರಿ ಕಳೆದು ಆರನೇ ದಿನವೂ ಬರಲಾಗಿ ರಾಮನು ಸೌಮಿತ್ರೆಗೆ, "ಲಕ್ಷ್ಮಣ! ಏಕಾಗ್ರವಾದ ಮನಸ್ಸಿನಿಂದ ಯುದ್ಧಕ್ಕೆ ಸಜ್ಜಾಗಿ ನಿಲ್ಲು" ಎಂದು ಹೇಳುತ್ತಿರುವಾಗಲೇ, ಉಪಾಧ್ಯಾಯನಿಂದಲೂ, ಪುರೋಹಿತನಿಂದಲೂ ಮತ್ತು ಯತ್ವಿಜರಿಂದಲೂ ಸಮಾವೃತವಾಗಿದ್ದ, ಯಜ್ಞವೇದಿಕೆಯು ಒಡನೆಯೇ ಪ್ರಜ್ವಲಿಸತೊಡಗಿತು. ವೇದಮಂತ್ರವು ಯಾವ ರೀತಿಯಲ್ಲಿ ಸ್ವರ ಸಹಿತವಾಗಿ ಅನೂಚಾನವಾದ ರೀತಿಯಲ್ಲಿ ಯಥಾ ಕ್ರಮವಾಗಿ ಹೇಳಲ್ಪಡುವುದೋ, ಅದೇ ರೀತಿಯಲ್ಲಿ ವಿಶ್ವಾಮಿತ್ರರು ಆರಂಭಿಸಿದ ಯಜ್ಞವು ಆರು ದಿನಗಳವರೆಗೆ ಯಥಾವಿಧಿಯಾಗಿ ಯಥಾಶಾಸ್ತ್ರವಾಗಿ ನಡೆಯುತ್ತಿದ್ದಿತು. ಆರನೆಯ ದಿವಸ ಆಕಾಶದಲ್ಲಿ ಭಯಾನಕವಾದ ಘೋರ ಶಬ್ದವುಂಟಾಯಿತು. ವರ್ಷ ಋತುವಿನಲ್ಲಿ ಆಕಾಶವನ್ನು ಮೇಘವು ಹೇಗೆ ಆವರಿಸಿಕೊಂಡಿರುತ್ತದೋ, ಅದೇ ರೀತಿಯಲ್ಲಿ ಮಾಯಾವಿದ್ಯೆಯಿಂದ ಅಂತರಿಕ್ಷವನ್ನೇ ಆವರಿಸಿಕೊಂಡು ಸುಬಾಹು-ಮಾರೀಚರೆಂಬ ಇಬ್ಬರು ರಾಕ್ಷಸರು ಯಜ್ಞಭೂಮಿಯ ಸಮೀಪಕ್ಕೆ ಧಾವಿಸಿ ಬಂದರು. ಭಯಂಕರಾಕಾರವುಳ್ಳ ಮಾರೀಚ-ಸುಬಾಹುಗಳು ಅನುಚರರ ಸಮೇತರಾಗಿ ಬಂದು ಯಜ್ಞವೇದಿಕೆಯ ಮೇಲೆ ರಕ್ತದ ಮಳೆಯನ್ನೇ ಕರೆದರು. ರಕ್ತದಿಂದ ತೋಯಿಸಲ್ಪಟ್ಟ ವೇದಿಕೆಯನ್ನು ನೋಡಿ ರಾಮನು ಒಡನೆಯೇ ಆಕಾಶದ ಕಡೆಗೆ ತಿರುಗಿ ಅಲ್ಲಿ ರಕ್ತದ ಮಳೆಗರೆಯುತ್ತಿರುವವರನ್ನು ಕಂಡನು. ತನಗೆ ಅಭಿಮುಖವಾಗಿ ಬಹಳ ರಭಸದಿಂದ ಬೀಳುತ್ತಿದ್ದ ಸುಬಾಹು ಮಾರಿಚರನ್ನು ಕಂಡು ಒಡನೆಯೇ ರಾಘವನು ಲಕ್ಷ್ಮಣನಿಗೆ, "ಲಕ್ಷ್ಮಣ! ದುರ್ವೃತ್ತರಾದ, ಮಾಂಸಾಶನರಾದ, ನಮ್ಮೆದುರಾಗಿ ಬರುತ್ತಿರುವ ಈ ರಾಕ್ಷಸರನ್ನು ನೋಡು ವಾಯುವಿನಿಂದ ಮೋಡಗಳು ಚದುರಿ ಹೋಗುವಂತೆ ಮಾನವಾಸ್ತ್ರದಿಂದ ಇವರು ಬಹಳ ದೂರಹೋಗಿ ಬೀಳುವಂತೆ ಮಾಡುವೆನು. ಇದರಲ್ಲಾವ ಸಂಶಯವೂ ಇಲ್ಲ, ಆದರೆ ಇವರನ್ನು ಕೊಲ್ಲುವ ಉತ್ಸಾಹವು ನನಗಿಲ್ಲ" ಎಂದವನೇ, ಮಾನವಾಸ್ತ್ರವನ್ನು ಧನುಸ್ಸಿನಲ್ಲಿ ಹೂಡಿ, ನಾಣನ್ನು ಸೆಳೆದು, ಅತಿಕೋಪಾವಿಷ್ಟನಾಗಿ ಮಾರೀಚನ ಎದೆಗೆ ಗುರಿಯಿಟ್ಟು ಹೊಡೆದನು.


ಮಾರೀಚನು ಆ ಶ್ರೇಷ್ಠವಾದ ಮಾನವಾಸ್ತ್ರದಿಂದ ಪೀಡಿತನಾಗಿ ನೂರು ಯೋಜನಗಳಷ್ಟು ದೂರಕ್ಕೆ ಎಸೆಯಲ್ಪಟ್ಟವನಾಗಿ, ಸಮುದ್ರ ಮಧ್ಯದಲ್ಲಿ ಬಿದ್ದನು. ಮಹಾಸ್ತ್ರದ ಆಘಾತದಿಂದ ಚೇತನಾರಹಿತನಾಗಿ ಗರಗರನೆ ತಿರುಗುತ್ತಾ ಬಹಳ ದೂರ ಎಸೆಯಲ್ಪಟ್ಟ ಆ ಮಾರೀಚನನ್ನು ಕಂಡು ರಾಮನು ಲಕ್ಷ್ಮಣನಿಗೆ, "ಲಕ್ಷ್ಮಣ! ಈ ಶೀತೇಷುವಿನ ಪ್ರಭಾವವನ್ನಾದರೂ ನೋಡು, ಮನು ಪ್ರಾಯುಕ್ತವಾದ ಈ ಮಾನವಾಸ್ತ್ರವು ಮಾರೀಚನನ್ನು ತನ್ನ ಪ್ರಹಾರದಿಂದ ಮೂರ್ಛಿತನಾದಂತೆ ಮಾಡಿ, ಬಹಳ ದೂರಕ್ಕೆ ಒಯ್ಯುತ್ತಿದೆ. ಆದರೆ ಈ ಅಸ್ತ್ರವು ಅವನ ಪ್ರಾಣ ಹರಣವನ್ನು ಮಾಡುವುದಿಲ್ಲ. ದಯಾರಹಿತರಾದ, ದುಷ್ಟ ಕರ್ಮಿಗಳಾದ, ರಕ್ತಪಾನ ಮಾಡುವ, ಮಾಂಸಾಹಾರಿಗಳಾದ ಇತರ ರಾಕ್ಷಸರನ್ನು ಸಂಹರಿಸುತ್ತೇನೆ." ಎಂದು ಹೇಳಿ ಕೈಚಳಕವನ್ನು ತೋರಿಸುತ್ತಿರುವನೋ ಎಂಬಂತೆ ಆಗ್ನೇಯಾಸ್ತ್ರವನ್ನು ಧನುಸ್ಸಿಗೆ ಹೂಡಿ, ನಾಣನ್ನು ಸೆಳೆದು ಸುಬಾಹುವಿನ ಎದೆಗೆ ಗುರಿಯಿಟ್ಟು ಹೊಡೆದನು. ಆಗ್ನೇಯಾಸ್ತ್ರದ ಘಾತವಾದೊಡನೆಯೇ ಸುಬಾಹುವು ಪ್ರಾಣವನ್ನು ತೊರೆದು ಕೆಳಗುರುಳಿದನು. ತನ್ನ ಕೈಚಳಕವನ್ನು ನೋಡುತ್ತಿದ್ದ ಋಷಿಗಳಿಗೆ ಆನಂದವನ್ನುಂಟುಮಾಡುತ್ತಾ, ಉಳಿದ ರಾಕ್ಷಸರೆಲ್ಲರನ್ನೂ ವಾಯವ್ಯವೆಂಬ ಒಂದೇ ಮಹಾಸ್ತ್ರವನ್ನು ಪ್ರಯೋಗ ಮಾಡಿ ಸಂಹರಿಸಿದನು. ಏಳು ದಿನಗಳ ಕಾಲದ ವಿಶ್ವಾಮಿತ್ರರ ಯಜ್ಞದ ಅವಭೃಥವಾದ ನಂತರ ಮಹಾಮುನಿಗಳಾದ ವಿಶ್ವಾಮಿತ್ರರು ನಾಲ್ಕೂ ದಿಕ್ಕುಗಳನ್ನು ನೋಡಿ, "ವಾತ್ಸಾ, ಶ್ರೀರಾಮ! ಮನಸ್ಸಂಕಲ್ಪಿತವಾದ ಯಜ್ಞವನ್ನು ನಿರಾತಂಕವಾಗಿ ಮಾಡಿ ನಾನು ಕೃತಾರ್ಥನಾದೆನು. ನಿನ್ನಿಂದ ಗುರುವಿನಾಜ್ಞೆಯು ನಿರ್ವಹಿಸಲ್ಪಟ್ಟಿತು. ನಿನ್ನ ಅಭಿಲಾಷೆಯಂತೆ ಇಂದು ಈ ಸಿದ್ಧಾಶ್ರಮದ ಅನ್ವರ್ಥ ನಾಮವು ಪುನಃ ನಿನ್ನಿಂದ ಸತ್ಯವಾಗಿ ಮಾಡಲ್ಪಟ್ಟಿತು." ಇದೇ ಮುಂತಾಗಿ ಶ್ರೀರಾಮನನ್ನು ಪ್ರಶಂಸೆ ಮಾಡಿ ರಾಮ ಲಕ್ಷ್ಮಣರೊಡನೆ ಸಾಯಂ ಸಂಧ್ಯಾವಂದನೆಗೆ ಹೊರಟರು.

🔥ವಿಶ್ವಾಮಿತ್ರರೊಂದಿಗೆ ಮಿಥಿಲಾ ಯಾತ್ರೆಗೆ ರಾಮ-ಲಕ್ಷ್ಮಣರ ಸಿದ್ಧತೆ

ಸಾಯಂ ಸಂಧ್ಯಾವಂದನಾದಿಗಳು ಮುಗಿದನಂತರ ಮಹರ್ಷಿಗಳಾದ ವಿಶ್ವಾಮಿತ್ರರು ನಿಯೋಜಿಸಿದ್ದ ಕಾರ್ಯದಲ್ಲಿ ಕೃತಕೃತ್ಯರಾದ ರಾಮ ಲಕ್ಷ್ಮಣರು ಪ್ರಹೃಷ್ಟಾಂತಃಕರಣವುಳ್ಳವರಾಗಿ, ವಿಶ್ವಾಮಿತ್ರರ ಯಜ್ಞಶಾಲೆಯಲ್ಲಿಯೇ ಆ ರಾತ್ರಿ ಮಲಗಿದರು. ರಾತ್ರಿಯು ಕಳೆದು ಸುಪ್ರಭಾತವಾಗಲಾಗಿ ರಾಮ ಲಕ್ಷ್ಮಣರೆದ್ದು, ಪ್ರಾತರಾಹ್ನಿಕಾದಿಗಳನ್ನು ಮುಗಿಸಿದವರಾಗಿ, ವಿಶ್ವಾಮಿತ್ರ ಮಹರ್ಷಿಗಳಿಗೆ ಸಮಸ್ಕರಿಸಿ, "ಮುನಿಪುಂಗವರೇ! ನಿಮ್ಮ ಸೇವಕರಾಗಿ ನಾವಿಲ್ಲಿಗೆ ಬಂದಿದ್ದೇವೆ. ನಾವೀಗ ನಿಮಗಾಗಿ ಪುನಃ ಏನು ಮಾಡಬೇಕೆಂಬುದನ್ನು ಆಜ್ಞಾಪಿಸಿರಿ. ಇಚ್ಛಾನುಸಾರವಾಗಿ ಏನಾದರೂ ನಿರ್ದೇಶಿಸಿರಿ" ಎಂದರು.

ree

ರಾಮ ಲಕ್ಷ್ಮಣರು ಹೀಗೆ ವಿಶ್ವಾಮಿತ್ರರಿಗೆ ಕೇಳಿದ ನಂತರ ಅಲ್ಲಿ ಕುಳಿತಿದ್ದ ಇತರ ಮಹರ್ಷಿಗಳು ವಿಶ್ವಾಮಿತ್ರರ ಅನುಮತಿಯನ್ನು ಪಡೆದು ರಾಮನಿಗೆ "ಪುರುಷೋತ್ತಮ! ಮಿಥಿಲಾಧಿಪತಿಯಾದ ಜನಕನ ಅತಿಪುಣ್ಯಕರವಾದ ಯಜ್ಞವು ಮಿಥಿಲಾಪಟ್ಟಣದಲ್ಲಿ ನಡೆಯಲಿದೆ. ಆ ಯಜ್ಞದಲ್ಲಿ ಭಾಗವಹಿಸಲು ನಾವೆಲ್ಲರೂ ಅಲ್ಲಿಗೆ ಹೋಗಲಿದ್ದೇವೆ. ನೀನೂ ನಮ್ಮೊಡನೆ ಬಂದೆಯಾದರೆ ಆ ಯಜ್ಞವನ್ನು ನೋಡಬಹುದು. ಅಲ್ಲಿರುವ ಅತ್ಯದ್ಭುತವಾದ, ಪ್ರಸಿದ್ಧವಾದ ಮತ್ತು ಶ್ರೇಷ್ಠವಾದ ಧನಸ್ಸನ್ನೂ ನೀನು ನೋಡಬಹುದು. ಆ ಧನಸ್ಸಿನ ವೃತ್ತಾಂತವನ್ನು ಹೇಳುವೆವು ಕೇಳು, ಅಸಾಧಾರಣವಾದ, ಬಹುವಿಶಿಷ್ಟವಾದ, ಘೋರತಮವಾದ, ತೇಜೋಯುಕ್ತವಾದ ಆ ಧನುಸ್ಸಿನ ಸಹಾಯದಿಂದ ಪರಶಿವನು ದಕ್ಷನ ಯಜ್ಞವನ್ನು ಧ್ವಂಸ ಮಾಡಿದನು. ಕಾಲಾಂತರದಲ್ಲಿ ಆ ಧನಸ್ಸು ದೇವರಾತನೆಂಬ ಮಿಥಿಲಾಧಿಪತಿಗೆ ಶಿವನಿಂದ ಕೊಡಲ್ಪಟ್ಟಿತು. ದೇವರಾತನ ವಂಶದಲ್ಲಿ ಹುಟ್ಟಿದ ಜನಕ ಮಹಾರಾಜನು ಅತ್ಯಮೋಘವಾದ ಒಂದು ಯಜ್ಞವನ್ನು ಮಾಡಿದನು. ಅವನು ಮಾಡಿದ ಯಜ್ಞದಿಂದ ಸುಪ್ರೀತರಾದ ದೇವತೆಗಳು ಜನಕರಾಜನಿಗೆ ಆ ಶಿವಧನಸ್ಸನ್ನು ಯಜ್ಞ ಮಂಟಪದಲ್ಲಿ ಬಹುಮಾನರೂಪವಾಗಿ ಕೊಟ್ಟರು. ರಾಮ! ಆ ಮಹಾ ಧನಸ್ಸಿನ ಶಿಂಜಿನಿಯನ್ನು ಸೆಳೆದು ಕಟ್ಟಲು ದೇವ, ದಾನವ, ಗಂಧರ್ವ, ರಾಕ್ಷಸ, ಮಾನವರಲ್ಲಿ ಯಾರೂ ಸಮರ್ಥರಲ್ಲ. ನೀನು ನಮ್ಮೊಡನೆ ಬಂದೆಯಾದರೆ ಮಹಾತ್ಮನಾದ ಜನಕರಾಜನ ಶಿವಧನಸ್ಸನ್ನೂ ಮತ್ತು ಪರಮಾದ್ಭುತವಾದ ಯಜ್ಞವನ್ನೂ ಸಂದರ್ಶಿಸುವೆ" ಎಂದರು.


ಶ್ರೀರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರ ಆಶ್ರಮದಲ್ಲಿದ್ದ ಮಹರ್ಷಿಗಳು ಹೀಗೆ ಹೇಳಿದ ನಂತರ ವಿಶ್ವಾಮಿತ್ರರು ಮುನಿಗಳ ಸಮೂಹದೊಡನೆಯೂ, ರಾಮ ಲಕ್ಷ್ಮಣರೊಡನೆಯೂ ಮಹಾ ಮಂತ್ರಗಳ ಪುನಶ್ಚರಣೆ ಮಾಡಿ, ವನದೇವತೆಗಳನ್ನು ಆಮಂತ್ರಿಸಿ ಪ್ರಯಾಣಸನ್ನದ್ಧರಾದರು.

Comments


bottom of page