top of page

ಶಿವಧನುರ್ಭಂಜನ (ರಾಮಾಯಣ ಕಥಾಮಾಲೆ - 8)

ರಾತ್ರಿಯು ಕಳೆದು ನಿರ್ಮಲವಾದ ಸುಪ್ರಭಾತವಾಗಲು, ಜನಕರಾಜನು ಪ್ರಾತಃ ಸಂಧ್ಯಾವಂದನಾದಿಗಳನ್ನು ಮುಗಿಸಿ, ಮಹಾತ್ಮರಾದ ವಿಶ್ವಾಮಿತ್ರರಿಗೆ, ರಾಮ-ಲಕ್ಷ್ಮಣರ ಸಮೇತರಾಗಿ ಅರಮನೆಗೆ ಆಗಮಿಸುವಂತೆ ಆಹ್ವಾನವನ್ನು ಕಳುಹಿಸಿಕೊಟ್ಟನು. ಜನಕರಾಜನು ಕಳುಹಿಸಿಕೊಟ್ಟ ಆಹ್ವಾನವನ್ನು ಸ್ವೀಕರಿಸಿ, ರಾಮ-ಲಕ್ಷ್ಮಣರೋಡಗೂಡಿ ಅರಮನೆಗೆ ಬಂದ ವಿಶ್ವಾಮಿತ್ರರನ್ನು, ಮಹಾರಾಜನಾದ ಜನಕನು ಪರಿವಾರದೊಡನೆ ಆದರದಿಂದ ಸ್ವಾಗತಿಸಿ, ವಿದ್ಯುಕ್ತವಾದ ರೀತಿಯಲ್ಲಿ ಸತ್ಕರಿಸಿ "ಪೂಜ್ಯರೇ! ನಿಮಗೆ ಸ್ವಾಗತವನ್ನು ಬಯಸುತ್ತೇನೆ. ನಾನು ನಿಮಗಾಗಿ ಯಾವ ಕಾರ್ಯ ಮಾಡಬೇಕೆಂಬುದನ್ನು ದಯವಿಟ್ಟು ಆಜ್ಞಾಪಿಸಿರಿ. ನಾನು ತಮ್ಮ ಆಜ್ಞಾನಿರ್ವಹಣೆಗೆ ಸಿದ್ದನಾಗಿದ್ದೇನೆ" ಎಂದನು.

ಮಹಾತ್ಮನಾದ ಜನಕನ ಕೋರಿಕೆಗೆ ಮುನಿಶಿಷ್ಟರು "ಜನಕರಾಜ! ಈ ಇಬ್ಬರು ಕುಮಾರರೂ ಕ್ಷತ್ರಿಯರು, ದಶರಥನ ಮಕ್ಕಳು, ತಮ್ಮ ಭುಜಬಲ-ಪರಾಕ್ರಮಗಳಿಂದ ಲೋಕ ಪ್ರಸಿದ್ಧರಾಗಿದ್ದಾರೆ. ನಿನ್ನಲ್ಲಿರುವ ಶ್ರೇಷ್ಠವಾದ ಧನಸ್ಸನ್ನು ಇವರಿಗೆ ತೋರಿಸು, ಅದರ ದರ್ಶನದಿಂದ ಈ ರಾಜಕುಮಾರರ ಇಚ್ಛೆಯು ಪೂರ್ಣವಾದಂತಾಗುತ್ತದೆ. ಅನಂತರ ಇವರು ತಮ್ಮ ಇಚ್ಛೆಯೆಡೆಗೆ ಪ್ರಯಾಣ ಮಾಡುತ್ತಾರೆ" ಎಂದರು.


ವಿಶ್ವಾಮಿತ್ರರ ಈ ಮಾತನ್ನು ಕೇಳಿ ಜನಕನು "ಮಹರ್ಷಿಗಳೇ! ಈ ಧನಸ್ಸಿನ ಇತಿಹಾಸವನ್ನು ಮತ್ತು ಈ ಧನಸ್ಸು ಇಲ್ಲಿರುವ ಕಾರಣವನ್ನು ವಿವರಿಸಿ ಹೇಳುವೆನು ಕೇಳಿರಿ. ನಿಮಿ ಚಕ್ರವರ್ತಿಯಿಂದ ಆರನೆಯವನಾದ ದೇವರಾತನೆಂದು ಪ್ರಸಿದ್ಧನಾದ ರಾಜನಿದ್ದನು. ಮಹಾತ್ಮನಾದ ದೇವರಾತನ ಕೈಯಲ್ಲಿ ದೇವತೆಗಳಿಂದ ನಿಕ್ಷೇಪರೂಪವಾಗಿ ಈ ಧನಸ್ಸು ಇಡಲ್ಪಟ್ಟಿತು. ಹಿಂದೆ ದಕ್ಷಯಾಗದ ಧ್ವಂಸಕಾಲದಲ್ಲಿ ಮಹಾಪರಾಕ್ರಮಿಯಾದ ರುದ್ರನು, ಈ ಧನಸ್ಸನ್ನು ಲೀಲೆಯಿಂದ ಸ್ವಲ್ಪವೂ ಶ್ರಮವಿಲ್ಲದೆ ಬಗ್ಗಿಸಿ ಹಿಡಿದು ರೋಷಾವಿಷ್ಟನಾಗಿ ದೇವತೆಗಳಿಗೆ ಹೇಳಿದನು. 'ಯಾವ ಕಾರಣದಿಂದ ನೀವು ಯಜ್ಞದಲ್ಲಿ ನನ್ನ ಹವಿರ್ಭಾಗವನ್ನು ನನಗೆ ಸಿದ್ಧಮಾಡಿಕೊಡಲಿಲ್ಲವೋ ಅದೇ ಕಾರಣದಿಂದಾಗಿ ಪೂಜೆನೀಯವಾದ ನಿಮ್ಮ ಶಿರಸ್ಸುಗಳನ್ನು ಈ ಧನಸ್ಸಿನಿಂದ ಭೇದಿಸಿ ಬಿಡುತ್ತೇನೆ' ಹೀಗೆ ಹೇಳುತ್ತಾ ರುದ್ರನು, ರೌದ್ರಾವೇಶದಿಂದ ನಿಂತೊಡನೆ ದೇವತೆಗಳು ಭೀತರಾದರು.


ದೀನರಾದ ದೇವತೆಗಳು ಶಿವನನ್ನು ನಾನಾವಿಧವಾದ ಸ್ತೋತ್ರಗಳಿಂದ ಪ್ರಸನ್ನನನ್ನಾಗಿ ಮಾಡಿದರು. ಅದರಿಂದ ರುದ್ರನು ಪ್ರಸನ್ನನಾಗಿ

ದೇವತೆಗಳ ವಿಷಯದಲ್ಲಿ ಪರಮಪ್ರೀತನಾಗಿ, ಈ ಮಹಾಧನಸ್ಸನ್ನು ಮಹಾತ್ಮರಾದ ಅವರಿಗೇ ಕೊಟ್ಟುಬಿಟ್ಟನು. ಧನಸ್ಸುಗಳಲ್ಲಿಯೇ ರತ್ನಪ್ರಾಯವಾದ ಈ ಧನಸ್ಸನ್ನು, ದೇವತೆಗಳು ನಮ್ಮ ಪೂರ್ವಜನಾದ ದೇವರಾತನಲ್ಲಿ ನಿಕ್ಷೇಪರೂಪವಾಗಿ ಇಟ್ಟರು. ಪೂಜ್ಯರೇ! ಒಮ್ಮೆ ನಾನು ಚಯಾನಾರ್ಥನಾಗಿ ಭೂಮಿಯನ್ನು ಶೋಧಿಸುವ ಸಲುವಾಗಿ ನೇಗಿಲಿನಿಂದ ಭೂಮಿಯನ್ನು ಊಳುತ್ತಿದ್ದಾಗ, ನೇಗಿಲಿನ ಗುಳಕ್ಕೆ ಸಿಕ್ಕಿ ಒಂದು ಹೆಣ್ಣು ಮಗುವು ಹೊರಬಂದಿತು. ಅವಳಿಗೆ ಸೀತೆಯೆಂದು ನಾಮಕರಣ ಮಾಡಿ, ನನ್ನ ಮಗಳೆಂದೇ ಭಾವಿಸಿ ಸಾಕಿದೆನು. ಅಯೋನಿಜೆಯಾದ ಇವಳಿಗೆ ಶಿವಧನುಸ್ಸನ್ನು ಮೇಲೆತ್ತಿ ಹೆದೆಯೇರಿಸಿ, ಯಾರು ಅತುಲವಾದ ಪರಾಕ್ರಮ ತೋರುವರೋ, ಅವರಿಗೆ ಮಾತ್ರವೇ ಇವಳನ್ನು ಕೊಟ್ಟು ಮದುವೆ ಮಾಡಬೇಕೆಂದಿರುವೆನು. ಮುನಿಪುಂಗವರೇ! ಭೂಮಿಯಲ್ಲಿ ಉತ್ಪನ್ನಳಾಗಿ, ಪ್ರವರ್ಧಮಾನಳಾಗುತ್ತಿರುವ, ನನ್ನ ಮಗಳಾದ ಸೀತೆಯನ್ನು ಮಾಡುವೆ ಮಾಡಿಕೊಳ್ಳುವ ಸಲುವಾಗಿ, ಅನೇಕ ರಾಜರು ನನ್ನ ಬಳಿಗೆ ಬಂದು ಪ್ರಸ್ತಾಪಿಸಿದರು. ಅವರೆಲ್ಲರಿಗೂ ನಾನು - ಈ ಸೀತೆಯನ್ನು ಅತುಲ ಪರಾಕ್ರಮವಿರುವವನಿಗೆ ಮಾತ್ರವೇ ನಾನಿವಳನ್ನು ಮದುವೆ ಮಾಡಿಕೊಡುವೆನೆಂದು ಸ್ಪಷ್ಠವಾಗಿ ಹೇಳಿದೆನು. ಅನಂತರ ಎಲ್ಲ ರಾಜರುಗಳೂ ಒಟ್ಟಾಗಿ ಮಿಥಿಲಾಪಟ್ಟಣಕ್ಕೆ ಬಂದು ಈ ವಿಷಯದ ಕುರಿತಾಗಿ ಜಿಜ್ಞಾಸೆ ಮಾಡತೊಡಗಿದರು. ಹಾಗೆ ಜಿಜ್ಞಾಸೆ ನಡೆಸುತ್ತಿರುವಾಗ ನಾನು ಶೈವಧನುಸ್ಸನ್ನು ತರಿಸಿಟ್ಟೆನು. ಅದನ್ನೆತ್ತಿ ಶಿಂಜಿನಿಯನ್ನು ಸೆಳೆದು ಹೆದೆಯೇರಿಸಿ, ಬಾಣವನ್ನು ಧನುಸ್ಸಿಗೆ ಸಂಯೋಜಿಸುವುದೇ ಶುಲ್ಕವೆಂದು ನಿಶ್ಚಯಿಸಲಾಯಿತು. ತಮ್ಮ ಬಲಪರಾಕ್ರಮವನ್ನು ಪ್ರದರ್ಶಿಸಲು ಯತ್ನಿಸಿದ ರಾಜಕುಮಾರರು ಈ ಶೈವಧನುಸ್ಸನ್ನು ಹಿಡಿದುಕೊಳ್ಳುವುದಕ್ಕಾಗಲೀ, ಮೇಲೆತ್ತುವುದಕ್ಕಾಗಲೀ, ಅಲುಗಾಡಿಸುವುದಕ್ಕಾಗಲೀ, ಸಮರ್ಥರಾಗಲಿಲ್ಲ. ಆಗ ನಾನು ಆ ಪರಾಕ್ರಮಿಗಳನ್ನು ಅಲ್ಪ ಪರಾಕ್ರಮಿಗಳೆಂದು ನಿಶ್ಚಯಿಸಿ, ಸೀತೆಯನ್ನು ಕೊಟ್ಟು ಮದುವೆ ಮಾಡುವ ಸಾಧ್ಯತೆಯಿಲ್ಲವೆಂದು ಅವರಿಗೆ ಹೇಳಿ ಕಳುಹಿಸಿದನು. ಆದರೆ ವಿಷಯವು ಅಲ್ಲಿಗೆ ಮುಗಿಯಲಿಲ್ಲ. ಆ ಅಲ್ಪ ಬಲದವರಿಗೆ ನಾನು ಸೀತೆಯನ್ನು ಕೊಟ್ಟು ಮದುವೆ ಮಾಡುವ ಸಾಧ್ಯತೆಯಿಲ್ಲವೆಂದು ಹೇಳಿಕಳುಹಿಸಿದ್ದಕ್ಕಾಗಿ, ಅತ್ಯುಗ್ರವಾದ ಕೋಪವೇ ಬಂದಿತು. 'ನಮಗಿಂತಲೂ ಪರಾಕ್ರಮಿಗಳಾರಿದ್ದಾರೆ? ನಮ್ಮಲ್ಲಿ ಪರಾಕ್ರಮವೇ ಇಲ್ಲವೇ? ನಮ್ಮ ಪರಾಕ್ರಮವನ್ನು ಜನಕನಿಗೆ ತೋರಿಸಲೇಬೇಕು' ಎಂದು ನಿಶ್ಚಯಿಸಿದವರಾಗಿ, ತಿರಸ್ಕೃತರಾದ ರಾಜರೆಲ್ಲರೂ ಮಿಥಿಲಾ ಪಟ್ಟಣವನ್ನು ಮುತ್ತಿದರು. ಒಂದು ವರ್ಷದ ಯುದ್ಧದಲ್ಲಿ ದುರ್ಗರಕ್ಷಣೆಗೆ ಸಂಗ್ರಹಿಸುತ್ತಿದ್ದ ಸಾಧನಗಳೆಲ್ಲವೂ ನಾಶವಾದವು. ಅವರಿಂದ ನನಗೆ ಬಹಳ ದುಃಖವಾಯಿತು. ಆಗ ನನಗಿದ್ದುದು ಒಂದೇ ಮಾರ್ಗ. ದೇವತೆಗಳನ್ನು ಕುರಿತು ತಪಸ್ಸು ಮಾಡುವುದು. ಸರ್ವದೇವತೆಗಳನ್ನು ತಪಸ್ಸಿನಿಂದ ಪ್ರಸನ್ನರಾಗುವಂತೆ ಮಾಡಿಕೊಂಡೆನು. ತಪಸ್ಸಿನಿಂದ ಸುಪ್ರೀತರಾದ ದೇವತೆಗಳು ನನಗೆ ಚತುರಂಗಬಲವನ್ನು ದಯಪಾಲಿಸಿದರು. ದೇವತೆಗಳು ಪ್ರಸನ್ನರಾಗಿ ಕೊಟ್ಟ ಆ ಚತುರಂಗ ಬಲದಿಂದ, ರಾಜರೆಲ್ಲರೂ ಪೆಟ್ಟು ತಿಂದು ಸೋತು ಹೋದರು. ಸುಮಿತ್ರರೇ! ಹೀಗೆ ನೂರಾರು ರಾಜರಿಂದಲೂ ಎತ್ತಲಾಗದ ತೇಜೋ ವಿಶಿಷ್ಟವಾದ ಈ ಮಹಾಧನುಸ್ಸನ್ನು ರಾಮ ಲಕ್ಷ್ಮಣರಿಗೂ ತೋರಿಸುತ್ತೇನೆ. ಒಂದು ವೇಳೆ ರಾಮನು ಈ ಮಹಾಧನುಸ್ಸಿನ ಗ್ರಹಣ-ಧಾರಣ-ತೋಲನ-ಆರೋಪಣಾದಿಗಳನ್ನು ಮಾಡಿದ್ದೇ ಆದರೆ ನನ್ನ ಮಗಳಾದ, ಆಯೋನಿಜೆಯಾದ ಸೀತೆಯನ್ನು, ದಶರಥಸುತನಾದ ಈ ರಾಮನಿಗೆ ಮದುವೆ ಮಾಡಿ ಕೊಡುತ್ತೇನೆ" ಎಂದನು.


ಜನಕರಾಜನ ಮಾತುಗಳನ್ನು ಕೇಳಿ ವಿಶ್ವಾಮಿತ್ರರು, "ಮಹಾರಾಜ, ಶ್ರೀರಾಮನಿಗೆ ಧನುಸ್ಸನ್ನು ತೋರಿಸು" ಎಂದು ಹೇಳಿದರು. ವಿಶ್ವಾಮಿತ್ರರ ಆದೇಶದಂತೆ ಜನಕರಾಜನು "ಸಚಿವೋತ್ತಮರೇ! ಗಂಧ ಮಾಲ್ಯಾದಿಗಳಿಂದ ಅಲಂಕೃತವಾಗಿರುವ ದಿವ್ಯವಾದ ಶಿವಧನುಸ್ಸನ್ನು ತೆಗೆದುಕೊಂಡು ಬನ್ನಿರಿ" ಎಂದು ಸಚಿವರಿಗೆ ಆಜ್ಞಾಪಿಸಿದನು. ಸಚಿವರು ದೃಢಕಾಯರಾದ ರಾಜಭಟರಿಂದ ಆ ಮಹಾಧನುಸ್ಸನ್ನು ತೆಗೆದುಕೊಂಡು ಜನಕನ ಆಸ್ಥಾನಕ್ಕೆ ಬಂದರು. ದೀರ್ಘಾಕಾರವುಳ್ಳ, ದೃಢಕಾಯರಾದ, ಮಹಾತ್ಮರಾದ ಐವರು ರಾಜಭಟರು, ಎಂಟು ಚಕ್ರಗಳಿಂದ ಕೂಡಿದ್ದ ಆ ಧನುಸ್ಸಿನ ಪೆಟ್ಟಿಗೆಯನ್ನು ಬಹಳ ಕಷ್ಟಪಟ್ಟು ಎಳೆದು ತಂದರು.


ತರಿಸಿರುವ ಪೆಟ್ಟಿಗೆಯನ್ನು ಕಂಡು ವಿಶ್ವಾಮಿತ್ರರು ರಾಮನ ಕಡೆಗೆ ತಿರುಗಿ "ವತ್ಸ ರಾಮ! ಧನುಸ್ಸನ್ನು ನೋಡು" ಎಂದು ಹೇಳಿದರು. ಮಹರ್ಷಿಗಳಾದ ವಿಶ್ವಾಮಿತ್ರರ ಮಾತುಗಳನ್ನು ಕೇಳಿ, ಶ್ರೀರಾಮನು ಒಡನೆಯೇ ಮೇಲೆದ್ದು ಧನುಸ್ಸಿನ ಪೆಟ್ಟಿಗೆಯಿದ್ದಲ್ಲಿಗೆ ಹೋಗಿ, ಮುಚ್ಚಳವನ್ನು ತೆಗೆದು ಧನುಸ್ಸನ್ನು ನೋಡಿ " ಪೂಜ್ಯರೇ! ಈ ದಿವ್ಯವಾದ ಧನೂರತ್ನವನ್ನು ಮುಟ್ಟಬೇಕೆಂಬ ಅಪೇಕ್ಷೆಯಾಗಿದೆ. ಸ್ಪರ್ಶಮಾಡಿದ ನಂತರ ಇದರ ತೋಲನ, ಪೂರಣ, ಶರ ಸಂಧಾನ ಮುಂತಾದುವನ್ನು ಮಾಡಲೂ ಯತ್ನಿಸುತ್ತೇನೆ" ಎಂದನು. " ಹಾಗೆಯೇ ಆಗಲಿ" ಎಂಬ ಅನುಜ್ಞಾವಚನವು ಜನಕನ ಮತ್ತು ವಿಶ್ವಾಮಿತ್ರರ ಮುಖಾರವಿಂದಗಳಿಂದ ಒಂದೇ ಕಾಲದಲ್ಲಿ ಹೊರ ಹೊರಟಿತು. ಆಚಾರ್ಯರಾದ ವಿಶ್ವಾಮಿತ್ರರ ಅನುಜ್ಞೆಯನ್ನು ಪಡೆದು, ಶ್ರೀರಾಮನು ಪೆಟ್ಟಿಗೆಯಲ್ಲಿದ್ದ ಧನುಸ್ಸಿನ ಮಧ್ಯಭಾಗವನ್ನು ಹಿಡಿದು ನಗುನಗುತ್ತಲೇ ಮೇಲೆತ್ತಿದನು. ಸಾವಿರಾರು ಜನರು ನೋಡುತ್ತಿದ್ದಂತೆಯೇ ಧರ್ಮಾತ್ಮನಾದ ರಘುನಂದನನು, ಮಹಾಧನುಸ್ಸಿನ ಒಂದು ತುದಿಯಲ್ಲಿದ್ದ ಶಿಂಜಿನಿಯನ್ನು ಮತ್ತೊಂದು ತುದಿಗೆ ಕಟ್ಟಲು ಮೌರ್ವಿಯನ್ನು ಲೀಲೆಯಿಂದ ಸೆಳೆದನು. ನರಶ್ರೇಷ್ಠನಾದ, ಮಹಾಯಶೋವಂತನಾದ ವೀರ್ಯವಂತನಾದ ಶ್ರೀರಾಮನು ಮೌರ್ವಿಯನ್ನು ಸೆಳೆದು ಕಟ್ಟಿ ಎಳೆದಾಗ, ಆ ಧನುಸ್ಸು ಮಧ್ಯಭಾಗಕ್ಕೆ ಸರಿಯಾಗಿ ಮುರಿದು ಕೆಳಗೆ ಬಿದ್ದಿತು. ಧನುರ್ಭಂಜನದಿಂದ ಸಿಡಿಲಿಗೆ ಸಮಾನವಾದ ಘೋರನಿನಾದವಾಯಿತು. ಪರ್ವತವು ಸೀಳಿ ಹೋಗುತ್ತಿರುವಾಗ ಭೂಕಂಪವು ಸಂಭವಿಸುವಂತೆ ಈ ಮಹಾಧನುಸ್ಸಿನ ಭಂಜನವಾದಾಗಲು ಭೂಕಂಪವಾಯಿತು. ಜನಕ, ವಿಶ್ವಾಮಿತ್ರ ಮತ್ತು ರಾಮ ಲಕ್ಷ್ಮಣರ ಹೊರತಾಗಿ, ಜನಕನ ಸಭಾಮಂದಿರದಲ್ಲಿದ್ದ ಉಳಿದವರೆಲ್ಲರೂ ಧನುರ್ಭಂಜನದ ಘೋರಶಬ್ದವನ್ನು ಕೇಳಿದೊಡನೆಯೇ ಭಯಭ್ರಾಂತರಾಗಿ ಕೆಳಗೆ ಬಿದ್ದರು. ಕೆಲವು ಕ್ಷಣಗಳಾದ ನಂತರ ಮೇಲೆದ್ದು ಕುಳಿತ ಪ್ರಜೆಗಳಿಗೆ ನಿಜಸಂಗತಿಯನ್ನು ಹೇಳಿ ಸಂತೈಸಲಾಯಿತು.


"ಧನುಸ್ಸಿನ ತೋಲನ-ಪೂರಣಗಳಲ್ಲಿ ಸಮರ್ಥರಾದವರು ಸಿಕ್ಕಿಯಾರೇ? ಸೀತೆಗೆ ಸ್ವಯಂವರವಾದೀತೇ?" ಎಂಬ ಜನಕರಾಜನ ಶಂಕೆಯ ಧನುರ್ಭಂಜನದಿಂದ ದೂರವಾಗಲು ಭಯದಿಂದ ವಿಮುಕ್ತನಾದ, ವಾಕ್ಯಜ್ಞನಾದ ಜನಕನು ಬದ್ಧಾಂಜಲಿಯಾಗಿ ಮುನಿಪುಂಗವರಾದ ವಿಶ್ವಾಮಿತ್ರರಿಗೆ "ಮಹರ್ಷಿಗಳೇ, ದಾಶರಥಿಯ ಪರಾಕ್ರಮವೆಷ್ಟೆಂಬುದನ್ನು ನಾನು ಕಂಡೆನು. ನಿಶ್ಚಯವಾಗಿಯೂ ಇವನ ಪರಾಕ್ರಮವು ಅದ್ಭುತವಾದುದು, ಅಚಿಂತ್ಯವಾದುದು. ಇವನು ಇಷ್ಟು ಪರಾಕ್ರಮೀ ಎಂಬುದನ್ನು ನಾನು ನಿಶ್ಚಯವಾಗಿಯೂ ಯೋಚಿಸಿರಲಿಲ್ಲ. ನನ್ನ ಪ್ರಿಯಸುತೆಯಾದ ಸೀತೆಯು ಮಹಾಪರಾಕ್ರಮಿಯಾದ, ದಶರಥನ ಮಗನಾದ ಈ ರಾಮನನ್ನು ಪತಿಯನ್ನಾಗಿ ವರಿಸಿ ಜನವಂಶಕ್ಕೆ ಕೀರ್ತಿಯನ್ನು ತರುತ್ತಾಳೆ. ಕೌಶಿಕರೇ! ಈ ನನ್ನ ಮಗಳನ್ನು ಈ ಕೂಡಲೇ ರಾಮನಿಗೆ ಕೊಟ್ಟು ಮದುವೆ ಮಾಡಬೇಕಾಗಿದೆ. ಆದುದರಿಂದ ನಿಮ್ಮ ಅನುಮತಿಯನ್ನು ಪಡೆದು, ನನ್ನ ಸಚಿವರುಗಳು ಈ ಕೂಡಲೇ ಅಯೋಧ್ಯೆಗೆ ಪ್ರಯಾಣ ಮಾಡಲಿ. ಅವರು ಅಲ್ಲಿ ದಶರಥನನ್ನು ಸಂಧಿಸಿ ಇಲ್ಲಿ ನಡೆದಿರುವುದನ್ನೆಲ್ಲ ತಿಳಿಸಿ, ನಯ ವಿನಯಯುತವಾದ ಮಾತುಗಳಿಂದ ಸಂತೋಷ ಪಡಿಸಿ ನನ್ನ ಪಟ್ಟಣಕ್ಕೆ ಕರೆತರಲಿ" ಎಂದನು.


ವಿಶ್ವಾಮಿತ್ರರು ಮಂದಸ್ಮಿತರಾಗಿ "ತಥಾಸ್ತು, ಹಾಗೆಯೇ ಆಗಲಿ" ಎಂದು ರಾಜನ ಪ್ರಾರ್ಥನೆಗೆ ಅನುಮತಿಯನ್ನಿತ್ತರು.

Comments


bottom of page