ದಕ್ಷ ಯಜ್ಞ
- Asha Satish

- Dec 3, 2025
- 4 min read
ಒಮ್ಮೆ ದೇವಲೋಕದಲ್ಲಿ ಪ್ರಜಾಪತಿಗಳ ನೇತೃತ್ವದಲ್ಲಿ ಒಂದು ಶ್ರೇಷ್ಠವಾದಂತಹ ಯಜ್ಞವನ್ನು ಕೈಗೊಂಡಿರುತ್ತಾರೆ. ಆ ಯಜ್ಞದಲ್ಲಿ ಎಲ್ಲಾ ಋಷಿ ಮುನಿಗಳು, ಸಮಸ್ತ ದೇವತೆಗಳು ಕೂಡ ತಮ್ಮ ಅನುಯಾಯಿಗಳೊಡನೆ ಬಂದು ಸೇರಿರುತ್ತಾರೆ. ಆ ಸಭೆಯನ್ನು ದಕ್ಷಪ್ರಜಾಪತಿಯು ಕೂಡ ಪ್ರವೇಶಿಸುತ್ತಾನೆ. ಅವನನ್ನು ಕಂಡೊಡನೆ ಆ ಸಭೆಯಲ್ಲಿ ನೆರೆದಂತಹ ಎಲ್ಲ ಋಷಿಮುನಿಗಳು, ದೇವತೆಗಳು, ಗೌರವದಿಂದ ತಮ್ಮ ಆಸನವನ್ನು ಬಿಟ್ಟು ಎದ್ದುನಿಂತು ಗೌರವಿಸುತ್ತಾರೆ. ಗೌರವದಿಂದ ತಲೆಬಾಗಿ ನಿಲ್ಲುತ್ತಾರೆ. ಆದರೆ ದಕ್ಷ ಪ್ರಜಾಪತಿಯ ತಂದೆಯಾದಂತಹ ಬ್ರಹ್ಮದೇವರು ಹಾಗೂ ದಕ್ಷನ ಮಗಳಾದ ಸತೀ ದೇವಿಯನ್ನು ವಿವಾಹವಾಗಿದ್ದ ಭಗವಾನ್ ಪರಮೇಶ್ವರರು ಮಾತ್ರ ತಾವು ಕುಳಿತ ಸ್ಥಳದಿಂದ ಏಳುವುದಿಲ್ಲ. ತಂದೆಯಾದಂತಹ ಬ್ರಹ್ಮ ದೇವರಿಗೆ ಒಂದಿಸಿ, ಅವರ ಅಪ್ಪಣೆಯನ್ನು ಪಡೆದು ದಕ್ಷ ಪ್ರಜಾಪತಿಯು ತನ್ನ ಆಸನದಲ್ಲಿ ಮಂಡಿಸುತ್ತಾನೆ. ತಾನು ಬಂದಿದ್ದನ್ನು ಗಮನಿಸಿಯೂ ಕುಳಿತಲ್ಲಿಂದ ಏಳದೆ, ತನಗೆ ಗೌರವ ಸಲ್ಲಿಸದೆ ಇದ್ದ ಪರಮೇಶ್ವರನನ್ನು ಕ್ರೋಧಾಗ್ನಿಂದ ಸುಟ್ಟುಬಿಡುವಂತೆ ದುರದುರನೇ ನೋಡುತ್ತಾ, ಪರಮೇಶ್ವರನನ್ನು ಬಾಯಿಗೆ ಬಂದಂತೆ ನಿಂದಿಸುತ್ತಾನೆ. "ಇಂದಿನಿಂದ ಈತನಿಗೆ ದೇವತೆಗಳೊಡನೆ ಯಜ್ಞದಲ್ಲಿ ಭಾಗವು ದೊರೆಯದಿರಲಿ" ಎಂದು ಶಪಿಸುತ್ತಾನೆ. ಇದನ್ನು ನೋಡಿದ ನಂದಿಕೇಶ್ವರನು ಕ್ರೋಧದಿಂದ ದಕ್ಷ ಪ್ರಜಾಪತಿಗೂ ಕೂಡ ದುರ್ವಚನಗಳಿಂದ ನಿಂದಿಸುತ್ತಾನೆ. ದಕ್ಷನನ್ನು ಬೆಂಬಲಿಸಿದ ಬ್ರಾಹ್ಮಣರನ್ನು ಕೂಡ ಶಪಿಸುತ್ತಾನೆ.

ಇದಾದ ಒಂದು ಸಾವಿರ ವರ್ಷಗಳ ನಂತರ ಬ್ರಹ್ಮದೇವರು ದಕ್ಷನನ್ನು ಸಮಸ್ತ ಪ್ರಜಾಪತಿಗಳಿಗೆ ಅಧಿಪತಿಯಾಗಿಸುತ್ತಾರೆ. ಇದರಿಂದ ದಕ್ಷನ ಗರ್ವವು ಇನ್ನೂ ಹೆಚ್ಚಾಗುತ್ತದೆ. ಭಗವಾನ್ ಶಂಕರನನ್ನು ತಿರಸ್ಕರಿಸಿ ಯಜ್ಞ ಭಾಗವನ್ನು ಕೊಡದೆ ಯಾಗಗಳನ್ನು ಮಾಡಲು ಮುಂದಾಗುತ್ತಾನೆ. ದಕ್ಷ ಪ್ರಜಾಪತಿಯ ಆಹ್ವಾನವನ್ನು ಸ್ವೀಕರಿಸಿ ಎಲ್ಲಾ ಬ್ರಹ್ಮರ್ಷಿಗಳು, ದೇವರ್ಷಿಗಳು, ಪಿತೃಗಳು, ದೇವತೆಗಳು ಮುಂತಾದವರೆಲ್ಲ ತಮ್ಮ ತಮ್ಮ ಪತ್ನಿಯರೊಂದಿಗೆ ಆ ಮಹಾಯಾಗದಲ್ಲಿ ಭಾಗವಹಿಸುತ್ತಾರೆ. ಅದೇ ಸಮಯದಲ್ಲಿ ಆಕಾಶಮಾರ್ಗವಾಗಿ ಹೋಗುತ್ತಿದ್ದ ದೇವತೆಗಳು ಆ ಯಜ್ಞದ ಕುರಿತು ಪರಸ್ಪರ ಚರ್ಚಿಸುವುದನ್ನು ಪ್ರಜಾಪತಿಯ ಮಗಳಾದ ಸತಿ ದೇವಿಯು ತಿಳಿಯುತ್ತಾಳೆ. ತಮ್ಮ ವಾಸಸ್ಥಾನವಾದ ಕೈಲಾಸದ ದಾರಿಯಾಗಿ, ಎಲ್ಲ ಕಡೆಗಳಿಂದಲೂ ಬ್ರಾಹ್ಮಣರು, ಯಕ್ಷರು, ಗಂಧರ್ವರು ಸರ್ವಾಲಂಕಾರ ಭೂಷಿತರಾಗಿ ಯಾಗೋತ್ಸವಕ್ಕೆ ಹೋಗುತ್ತಿರುವುದನ್ನು ನೋಡಿ, ತಾನು ಕೂಡ ಆ ಯಜ್ಞೋತ್ಸವಕ್ಕೆ ಹೋಗಲು ಅಪೇಕ್ಷಿಸುತ್ತಾಳೆ. ಪತಿಯಾದ ಪರಮೇಶ್ವರನಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ಪ್ರಾರ್ಥಿಸುತ್ತಾಳೆ. ಆದರೆ ಹಿಂದಿನ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ತನ್ನನ್ನು ಆಮಂತ್ರಿಸದ ಕಾರಣ, ಆ ಜಾಗಕ್ಕೆ ಹೋಗಲು ಪರಮೇಶ್ವರನು ಒಪ್ಪಲಿಲ್ಲ. ತವರಿನ ಉತ್ಸವದಲ್ಲಿ ಭಾಗಿಯಾಗಬೇಕೆಂಬ ಆಸೆಯಿಂದ ಸತೀ ದೇವಿಯು ಪರಮೇಶ್ವರನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ತನ್ನ ತಾಯಿ ತಂಗಿಯರು ಬಂಧುಗಳನ್ನು ಕಾಣಲೇ ಬೇಕೆಂಬ ತುಡಿತದಿಂದ ಪತಿಯಲ್ಲಿ ಅಂಗಲಾಚುತ್ತಾಳೆ. ಶಂಕರನೂ ಕೂಡ ಪರಿಪರಿಯಾಗಿ ಪರಿಸ್ಥಿತಿಯನ್ನು ತಿಳಿಯಪಡಿಸಲು ಪ್ರಯತ್ನಿಸಿದರೂ ಲೆಕ್ಕಿಸದೇ, ಸ್ತ್ರೀ ಸಹಜವಾದ ತವರಿನ ಮೋಹಕ್ಕೆ ಒಳಗಾಗಿ ಯಜ್ಞದ ಉತ್ಸವದಲ್ಲಿ ಪಾಲ್ಗೊಳ್ಳಲು ಒಬ್ಬಂಟಿಯಾಗಿಯೇ ಹೊರಟು ಬಿಡುತ್ತಾಳೆ. ಸತೀ ದೇವಿಯು ಒಬ್ಬಂಟಿಗಳಾಗಿ ಹೊರಟಿರುವುದನ್ನು ನೋಡಿದ ಮಹಾದೇವನ ಪರಿವಾರದ ಸಾವಿರಾರು ಸೇವಕರು ಭಗವಂತನ ವಾಹನವಾದ ವೃಷಭವನ್ನು ಮುಂದಿಟ್ಟುಕೊಂಡು ಆಕೆಯನ್ನು ಹಿಂಬಾಲಿಸುತ್ತಾರೆ.
ವೃಷಭನ್ನೇರಿ ಪ್ರಯಾಣಿಸಿದ ಸತಿ ದೇವಿಯು ಕೊನೆಗೂ ತನ್ನ ಸೇವಕರೊಡನೆ ದಕ್ಷನ ಯಜ್ಞ ಶಾಲೆಯನ್ನು ಪ್ರವೇಶಿಸುತ್ತಾಳೆ. ಅಲ್ಲಿ ಯಾಗ ಮಂಟಪದ ಸುತ್ತೆಲ್ಲ ಬ್ರಾಹ್ಮಣರು, ಋಷಿಗಳು, ದೇವತೆಗಳು, ಎಲ್ಲ ಕಡೆಗಳಲ್ಲಿಯೂ ಋತ್ವಿಜರು ಗಂಭೀರವಾದ ಕಂಠದಿಂದ ವೇದಘೋಷವನ್ನು ಮಾಡುತ್ತಾ ಯಜ್ಞ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಬ್ರಾಹ್ಮಣರಿಗೆ ಸಂತೃಪ್ತಿಯಾಗುವಷ್ಟು ವಿವಿಧ ರೀತಿಯ ದಾನ ದಕ್ಷಿಣೆಗಳನ್ನು ನೀಡಿ ಮಾನಿಸಲಾಗುತ್ತಿತ್ತು. ಇದನ್ನೆಲ್ಲಾ ಸಂಭ್ರಮದಿಂದ ವೀಕ್ಷಿಸಿದ ಸತೀ ದೇವಿಯು ತನ್ನ ತಂದೆ ತಾಯಿ ಸಹೋದರಿಯರು ಹಾಗೂ ಬಂಧು ಬಾಂಧವರತ್ತ ಪ್ರೀತಿಯಿಂದ ಧಾವಿಸಿ ನಡೆಯುತ್ತಾಳೆ.

ಸತೀ ದೇವಿಯ ಆಗಮನವನ್ನು ಗಮನಿಸಿದ ಯಜ್ಞದ ಯಜಮಾನನೂ, ಸತೀ ದೇವಿಯ ತಂದೆಯು ಆಗಿದ್ದ ದಕ್ಷನು ಆಕೆಯತ್ತ ತಿರಸ್ಕಾರದಿಂದ ನೋಡಿದನು. ಅದನ್ನು ಕಂಡು ಅವನಿಗೆ ಹೆದರಿದ ಇತರರು ಕೂಡ ಆಕೆಯನ್ನು ಆದರಿಸಲಿಲ್ಲ. ತಾಯಿ ಮತ್ತು ಸೋದರಿಯರು ಅವಳನ್ನು ಪ್ರೀತಿಯಿಂದ ಕರೆದು ಮಾತನಾಡಿಸಲಿಲ್ಲ. ಸರ್ವ ಲೋಕೇಶ್ವರನ ಸತಿಯಾದ ಸತೀ ದೇವಿಗೆ ಆ ಯಜ್ಞೋತ್ಸವದಲ್ಲಿ ತೀವ್ರವಾದ ಅವಮಾನವಾಗುತ್ತದೆ. ಯಜ್ಞ ಮಂಟಪದತ್ತ ದೃಷ್ಟಿ ಹಾಯಿಸಿದಾಗ ತನ್ನ ಪತಿಯಾದ ಮಹಾದೇವನಿಗೆ ಹವಿರ್ಭಾಗವನ್ನೇ ಕೊಡದೆ ದೊಡ್ಡ ದೈವಾಪರಾಧವನ್ನು ನಡೆಸಿರುವುದು ಸತೀದೇವಿಯ ಗಮನಕ್ಕೆ ಬರುತ್ತದೆ. ಇದರಿಂದ ಕೋಪಾವೇಶದಿಂದ ತನ್ನ ತಂದೆಯನ್ನು ಪ್ರಶ್ನಿಸುತ್ತಾಳೆ, "ಜಗದೀಶ್ವರನಾದ ಶಂಕರನ ಮಹಿಮೆಯನ್ನು ನೀನು ತಿಳಿದಿರುವೆ. ಈ ಲೋಕದಲ್ಲಿ ಅವನಿಗಿಂತ ಮಿಗಿಲಾದವರು ಯಾರೂ ಇಲ್ಲ ಎನ್ನುವುದನ್ನು ತಿಳಿದು ಕೂಡ, ಅವನನ್ನು ಕಡೆಗಣಿಸಿ ಮಹಾಪರಾದ ಎಸಗಿರುವೆ. ಬಹುಷಃ ನಿನ್ನ ಈ ದುರ್ವರ್ತನೆಯ ಅರಿವಿನಿಂದಲೇ ನನ್ನನ್ನು ತಡೆದ ನನ್ನ ಪತಿಯ ಮಾತನ್ನು ಉಲ್ಲಂಘಿಸಿ ತಪ್ಪು ಮಾಡಿದೆ. ಆ ತಪ್ಪಿಗೆ ತಕ್ಕುದಾದ ಶಿಕ್ಷೆ ಆಗಲೇಬೇಕು. ಮತ್ತೆ ಪರಶಿವನನ್ನು ಕಾಣುವ ಧೈರ್ಯ ನನಗಿಲ್ಲ. ಆತನ ಮಾತನ್ನು ಉಲ್ಲಂಘಿಸಿ, ಇಡೀ ಜಗತ್ತು ತಲೆಬಾಗಿ ನಿಲ್ಲುವ ಜಗದೀಶ್ವರನನ್ನು, ನನ್ನ ತಂದೆಯಾದ ನೀನು ಅವಮಾನಿಸಿದೆ ಎಂದಾದರೆ....ನಿನ್ನಿಂದಲೇ ಹುಟ್ಟಿದ ಈ ನನ್ನ ದೇಹವು ಇನ್ನು ಬದುಕಿರಬಾರದು. ಈ ದೇಹವನ್ನು ನಾನು ಈ ಕ್ಷಣವೇ ತೊರೆಯುತ್ತೇನೆ" ಎಂದು ಹೇಳಿ, ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು, ಶುದ್ಧಾಚಮನವನ್ನು ಮಾಡಿ, ಕಣ್ಣು ಮುಚ್ಚಿಕೊಂಡು ದೇಹ ತ್ಯಾಗ ಮಾಡುವ ಸಂಕಲ್ಪದಿಂದ ಯೋಗ ಮಾರ್ಗದಲ್ಲಿ ಸ್ಥಿತಳಾಗುತ್ತಾಳೆ. ಆಸನವನ್ನು ಸ್ಥಿರಗೊಳಿಸಿಕೊಂಡು ಯೋಗಾಗ್ನಿಯನ್ನು ಸ್ಥಾಪಿಸಿ ತನ್ನ ದೇಹವನ್ನು ಸುಟ್ಟುಬಿಡುತ್ತಾಳೆ. ಅದನ್ನು ನೋಡಿದ ದೇವತೆಗಳು ಋಷಿಗಳು ಹಾಹಾಕಾರ ಮಾಡುತ್ತಾರೆ. ಅವರ ಕೋಲಾಹಲವು ಆಕಾಶ ಭೂಮಿಯಲ್ಲಿ ಹರಡುತ್ತದೆ.
ಇತ್ತ ಸತೀ ದೇವಿಯು ಯೋಗಾಗ್ನಿಯಲ್ಲಿ ಸುಟ್ಟು ಹೋದ ನಂತರ, ಸಮಸ್ತ ಶಿವಗಣಗಳು ಅಸ್ತ್ರ ಶಸ್ತ್ರಗಳನ್ನು ಧರಿಸಿ ದಕ್ಷನನ್ನು ಕೊಲ್ಲಲು ಆಕ್ರಮಣ ಮಾಡುತ್ತಾ ಮುನ್ನುಗ್ಗುತ್ತಾರೆ. ಅದನ್ನು ನೋಡಿ ಯಜ್ಞದ ಅದ್ವೈರ್ಯವನ್ನು ವಹಿಸಿದ್ದ ಭೃಗು ಮುನಿಯು ಯಜ್ಞಕ್ಕೆ ವಿಘ್ನವನ್ನುಂಟು ಮಾಡುವವರನ್ನು ನಾಶ ಮಾಡುವುದಕ್ಕಾಗಿಯೇ ಇರುವಂತಹ ಮಂತ್ರಗಳನ್ನು ಉಚ್ಛರಿಸುತ್ತಾ, ಆಹುತಿ ನೀಡಲು ಆರಂಭಿಸುತ್ತಾನೆ. ಆ ಕೂಡಲೇ ಯಜ್ಞ ಕುಂಡದಿಂದ ಬ್ರಹ್ಮತೇಜ ಸಂಪನ್ನರಾದ "ಋಭು" ಎಂಬ ಸಾವಿರಾರು ದೇವತೆಗಳು ಪ್ರಕಟರಾಗಿ ಉರಿಯುವ ಕೊಳ್ಳಿಗಳನ್ನು ಆಯುಧವಾಗಿ ಹಿಡಿದು ಆಕ್ರಮಿಸಿ ಶಿವಗಣಗಳನ್ನು ಓಡಿಸುತ್ತಾರೆ.
ಮುಂದೆ ಈ ಎಲ್ಲ ವಿಚಾರಗಳು ನಾರದರ ಮುಖೇನವಾಗಿ ಮಹಾದೇವನಿಗೆ ತಿಳಿಯುತ್ತದೆ. ಶಿವನು ಉಗ್ರರೂಪವನ್ನು ಧರಿಸಿ ಕ್ರೋಧದಿಂದ ತನ್ನ ಜಟೆಯೊಳಗಿನ ಒಂದು ಕೂದಲನ್ನು ಕಿತ್ತು ಗಂಭೀರವಾದ ಅಟ್ಟಹಾಸ ಮಾಡುತ್ತಾ ನೆಲಕ್ಕೆ ಅಪ್ಪಳಿಸುತ್ತಾನೆ. ತಕ್ಷಣವೇ ವಿಶಾಲಕಾಯನಾದ ಒಬ್ಬ ಪುರುಷನು ಅದರಿಂದ ಉತ್ಪತ್ತಿಯಾಗುತ್ತಾನೆ. ಆತನಿಗೆ ಸಾವಿರ ತೋಳುಗಳು,ಕಪ್ಪುವರ್ಣದ ಕೆಂಪಾದ ಕಣ್ಣುಗಳುಳ್ಳ, ಕರಾಳವಾದ ಕೋರೆ ದಾಡೆ ಗಳನ್ನು ಹೊಂದಿದ, ಕುತ್ತಿಗೆಯಲ್ಲಿ ನರಮುಂಡಮಾಲೆಯನ್ನು ಹೊಂದಿದ, ಕೈಗಳಲ್ಲಿ ಬಗೆ ಬಗೆಯ ಶಸ್ತ್ರಗಳನ್ನು ಹೊಂದಿದ ಒಬ್ಬ ಪುರುಷ ಉತ್ಪತ್ತಿಯಾದನು. ಅವನು ಭಗವಾನ್ ಪರಮೇಶ್ವರನನ್ನು ಕೈಜೋಡಿಸಿ ತನ್ನಿಂದ ಯಾವ ಕೆಲಸ ಆಗಬೇಕು ಆಜ್ಞಾಪಿಸಿ ಎಂದು ಪ್ರಾರ್ಥನೆ ಮಾಡುತ್ತಾನೆ. ಅದಕ್ಕೆ ಪರಮೇಶ್ವರನು, "ವತ್ಸ! ನಿನ್ನನ್ನು ನಾನು 'ವೀರಭದ್ರ' ಎಂದು ಕರೆಯುತ್ತೇನೆ. ನೀನು ನನ್ನ ಅಂಶ ಸಂಭೂತನು. ನನ್ನ ಭಟರಿಗೆ ಅದಿನಾಯಕನಾಗಿ ಈಗಲೇ ಹೋಗಿ ಆ ದಕ್ಷನನ್ನು ಆತನ ಯಜ್ಞವನ್ನು ಧ್ವಂಸ ಮಾಡಬೇಕು" ಎಂದು ಅಪ್ಪಣೆಯನ್ನು ನೀಡುತ್ತಾನೆ. ವೀರಭದ್ರನು ಪರಮೇಶ್ವರನಿಗೆ ಪ್ರದಕ್ಷಿಣೆ ಮಾಡಿ ನಮಿಸಿ , ಈಶ್ವರನ ಆಜ್ಞಾಧಾರಕನಾಗಿ ಅಲ್ಲಿಂದ ಹೊರಡುತ್ತಾನೆ.
ಇತ್ತ ದಕ್ಷನ ಯಜ್ಞ ಶಾಲೆಯಲ್ಲಿ ಕುಳಿತಿದ್ದ ಋತ್ವಿಜರು, ಯಜಮಾನನಾದ ದಕ್ಷ ಪ್ರಜಾಪತಿಯು, ಬ್ರಾಹ್ಮಣರು, ದಕ್ಷನ ಪರಿವಾರವೂ ಉತ್ತರ ದಿಕ್ಕಿನ ಕಡೆಯಿಂದ ಭಯಂಕರವಾಗಿ ಎದ್ದಿರುವ ಧೂಳನ್ನು ಕಂಡು ಕಂಗಾಲಾಗುತ್ತಾರೆ. ಏನಾಗುತ್ತಿದೆ ಎಂದು ಅರಿಯುವುದರೊಳಗಾಗಿ ರುದ್ರನ ಸೇವಕರಾದ ಪ್ರಮಥಗಣಗಳು ಆ ದೊಡ್ಡ ಯಜ್ಞ ಮಂಟಪವನ್ನು ಸುತ್ತುವರಿದು ಮುತ್ತಿಗೆ ಹಾಕುತ್ತಾರೆ. ಅವರೆಲ್ಲರೂ ಅಸ್ತ್ರ ಶಸ್ತ್ರಗಳಿಂದ ಸಜ್ಜಿತರಾಗಿದ್ದರು. ಆ ಸೇನೆಯ ನೇತೃತ್ವವನ್ನು ವಹಿಸಿದ ವೀರಭದ್ರನು ಭೃಗು ಮಹರ್ಷಿಯನ್ನು ಕಟ್ಟಿ ಹಾಕಿ, ದಕ್ಷ ಪ್ರಜಾಪತಿಯನ್ನು ಸೆರೆ ಹಿಡಿಯುತ್ತಾನೆ. ಆ ಯಜ್ಞ ಶಾಲೆಯ ತುಂಬ ತುಂಬಿದ್ದ ಋತ್ವಿಜರು, ದೇವತೆಗಳು ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ. ಹಿಂದೆ ದಕ್ಷನು ಶಿವನ ಕುರಿತು ಅಪಹಾಸ್ಯ ಮಾಡುವ ಸಂದರ್ಭದಲ್ಲಿ ತನ್ನ ಗಡ್ಡ ಮೀಸೆಯನ್ನು ತಿರುವಿ ಅಹಂಕಾರ ಮೆರೆದಿದ್ದ ಭೃಗು ಮಹರ್ಷಿಯ ಗಡ್ಡ ಮೀಸೆಗಳನ್ನು ಕಿತ್ತು ಬಿಸಾಡುತ್ತಾನೆ. ಭಗದೇವತೆಯು ಸಭೆಯಲ್ಲಿ ದಕ್ಷನು ಶಿವನನ್ನು ನಿಂದಿಸುವಾಗ ಕಣ್ಣನ್ನು ಮಿಟುಕಿಸಿ ದಕ್ಷನನ್ನು ಪ್ರೇರೇಪಿಸಿದ್ದ ಕಾರಣ ವೀರಭದ್ರನು ಅವನನ್ನು ಕೆಳಕ್ಕೆ ಕುಕ್ಕಿ ಆತನ ಕಣ್ಣನ್ನು ಕಿತ್ತು ಹಾಕುತ್ತಾನೆ. ಹಲ್ಲು ಕಿರಿದು ನಕ್ಕಿದ್ದ ಪೂಷ ಎನ್ನುವ ದೇವತೆಯೊಬ್ಬನ ಹಲ್ಲು ಮುರಿದು ಕೆಡವುತ್ತಾನೆ. ಅದಾದ ಬಳಿಕ ವೀರಭದ್ರನು ದಕ್ಷನನ್ನು ಹಿಡಿದು ಯಜ್ಞದಲ್ಲಿ ಪಶುವನ್ನು ಬಲಿಕೊಡುವಂತೆಯೇ ದಕ್ಷನ ಕತ್ತನ್ನು ಕತ್ತರಿಸುತ್ತಾನೆ. ಈ ರೀತಿಯಾಗಿ ಕತ್ತರಿಸಿದ ತಕ್ಷಣ ಶಿರವನ್ನು ಯಜ್ಞದ ಅಗ್ನಿಯಲ್ಲಿ ಎಸೆದು ದಕ್ಷನ ಆ ಮಹಾಯಜ್ಞವನ್ನು ಹಾಗೂ ದಕ್ಷನನ್ನು ಧ್ವಂಸ ಮಾಡುತ್ತಾನೆ.
ವೀರಭದ್ರನ ಆಕ್ರಮಣದಿಂದ ಅನೇಕ ದೇವತೆಗಳು ಗಾಯಗೊಂಡರು, ಇನ್ನೂ ಅನೇಕರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು. ನಡೆದ ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದ ಬ್ರಾಹ್ಮಣರು, ಋಷಿಮುನಿಗಳು, ಹಾಗೂ ದೇವತೆಗಳೆಲ್ಲ ಆದ ಅನಾಹುತದ ಕುರಿತು ಬ್ರಹ್ಮ ದೇವರಿದ್ದಲ್ಲಿಗೆ ಹೋಗಿ ವಿಷಯವನ್ನು ಅರುಹುತ್ತಾರೆ. ದೇವತೆಗಳ ಬಾಯಿಂದ ಎಲ್ಲ ವೃತ್ತಾಂತವನ್ನು ತಿಳಿದ ಬ್ರಹ್ಮದೇವರು, "ದೇವತೆಗಳೇ! ನಿಮ್ಮಿಂದ ಪರಮೇಶ್ವರನಿಗೆ ಅಪಚಾರವಾಗಿದೆ. ಯಜ್ಞದಲ್ಲಿ ಶಂಕರನಿಗೆ ದೊರೆಯಬೇಕಾದ ಗ ಹವಿರ್ಭಾಗವನ್ನು ನೀಡದೆ ದೊಡ್ಡ ಅಪರಾಧವನ್ನು ಎಸಗಿದ್ದಿರಿ. ಈ ಯಜ್ಞವು ಪೂರ್ಣಗೊಳ್ಳಬೇಕೆಂದಾದರೆ ಈ ಕೂಡಲೇ ನೀವು ಶಂಕರನ ಬಳಿ ಹೋಗಿ ಕ್ಷಮೆ ಕೇಳಬೇಕು. ಅವನ ಪಾಲಿನ ಹವಿರ್ಭಾಗವನ್ನು ಅವನಿಗೆ ಸಲ್ಲಿಸಬೇಕು. ಅಲ್ಲಿಯವರೆಗೂ ಈ ಯಜ್ಞ ಪರಿಸಮಾಪ್ತಿ ಹೊಂದುವುದಿಲ್ಲ" ಎಂದು ಹೇಳುತ್ತಾರೆ. ಬ್ರಹ್ಮದೇವರ ಮಾತಿನಂತೆ ದೇವತೆಗಳೆಲ್ಲರೂ ಬ್ರಹ್ಮದೇವರ ಸಮೇತರಾಗಿ ಶಂಕರನನ್ನು ಕಾಣಲು ಧಾವಿಸುತ್ತಾರೆ.
ದೇವತೆಗಳೆಲ್ಲ ಶಂಕರನೆದುರು ಕೈಮುಗಿದು ನಿಂತು, ಪ್ರಭು! ನಮ್ಮಿಂದ ತಪ್ಪಾಗಿದೆ, ನೀನು ನಮ್ಮನ್ನು ಅನುಗ್ರಹಿಸಬೇಕು. ಯಜಮಾನನಾದ ದಕ್ಷನು ಜೀವಂತನಾಗಲಿ, ಭಗದೇವತೆಗೆ ಕಣ್ಣುಗಳು ಬರಲಿ, ಭ್ರಗು ಮಹರ್ಷಿಗಳಿಗೆ ಗಡ್ಡ ಮೀಸೆಗಳು ಬರಲಿ, ಪೂಷಾ ದೇವತೆಗೆ ಮೊದಲಿನಂತೆ ಹಲ್ಲುಗಳು ಮೂಡಲಿ, ನಿನ್ನ ಸೇವಕರ ಅಸ್ತ್ರ ಶಸ್ತ್ರಗಳ ದಾಳಿಯಿಂದ ಘಾಸಿಗೊಂಡ ದೇವತೆಗಳ ಅಂಗಾಂಗಗಳು ನಿನ್ನ ಅನುಗ್ರಹದಿಂದ ಮತ್ತೆ ಸರಿಯಾಗಲಿ, ಯಜ್ಞ ಸಂಪೂರ್ಣವಾದ ಬಳಿಕ ಶೇಷವಾಗಿ ಉಳಿಯುವುದೆಲ್ಲವನ್ನು ನೀನು ಹವಿರ್ಭಾಗವಾಗಿ ಸ್ವೀಕರಿಸುವ ಮೂಲಕ ಯಜ್ಞ ಪೂರ್ಣವಾಗಲಿ ಎಂದು ಪ್ರಾರ್ಥಿಸುತ್ತಾರೆ. ದೇವತೆಗಳ ಈ ಮಾತಿಗೆ ಪ್ರಸನ್ನನಾದ ಶಂಕರನು ನಗುತ್ತಾ.. "ದೇವತೆಗಳೇ ಭಗವಂತನ ಮಾಯೆಗೆ ಒಳಗಾದ ದಕ್ಷ ನಂತಹ ತಿಳಿಗೇಡಿಗಳ ಅಪರಾಧವನ್ನು ನಾನು ಲೆಕ್ಕಿಸುವುದಿಲ್ಲ. ಆದರೆ ದಕ್ಷ ನ ಅಹಂಕಾರವನ್ನು ಮುರಿದು ಅವನನ್ನು ಎಚ್ಚರಿಸಲಿಕ್ಕಾಗಿ ಈ ದಂಡನೆಯನ್ನು ವಿಧಿಸಿದ್ದೇನೆ. ದಕ್ಷ ಪ್ರಜಾಪತಿಯ ತಲೆಯು ಸುಟ್ಟು ಭಸ್ಮವಾಗಿದೆ ಅದಕ್ಕಾಗಿ ಅವನಿಗೆ ಹೋತದ ತಲೆಯನ್ನು ತಂದು ಜೋಡಿಸಿರಿ" ಎಂದು ಹೇಳುತ್ತಾನೆ. ಪರಮೇಶ್ವರನ ಮಾತಿನಿಂದ ಸಂತೋಷಗೊಂಡ ದೇವತೆಗಳು ಜಯಕಾರ ಮಾಡುತ್ತಾ ಮಹಾದೇವನನ್ನು ದಕ್ಷನ ಯಜ್ಞಶಾಲೆಗೆ ಕರೆದುಕೊಂಡು ಹೋಗುತ್ತಾರೆ.
ಶಂಕರನು ಹೇಳಿದಂತೆಯೇ ಅಲ್ಲಿ ದಕ್ಷನ ದೇಹಕ್ಕೆ ಆಡಿನ ತಲೆಯನ್ನು ತಂದು ಜೋಡಿಸುತ್ತಾರೆ. ತಲೆಯನ್ನು ಜೋಡಿಸಿದಾಗ ಪರಮೇಶ್ವರನು ದಕ್ಷನು ಪುನಃ ಜೀವಂತನಾಗುವಂತೆ ಅನುಗ್ರಹಿಸುತ್ತಾನೆ. ಎಚ್ಚರಗೊಂಡ ದಕ್ಷನು ತನ್ನ ಮುಂದೆ ನಿಂತಿದ್ದ ಪರಮೇಶ್ವರನನ್ನು ನೋಡಿ ತನ್ನ ತಪ್ಪಿನಿಂದಾಗಿ ಪರಮೇಶ್ವರನ ಪ್ರಿಯ ಸತಿಯಾಗಿದ್ದ ತನ್ನ ಮಗಳನ್ನು ಕಳೆದುಕೊಂಡುದಕ್ಕಾಗಿ ಪಶ್ಚಾತಾಪ ಪಟ್ಟು ವಿಶುದ್ದ ಭಾವದಿಂದ ಪರಮೇಶ್ವರನನ್ನು ಸ್ತುತಿಸಿ, ತನ್ನ ಅಪರಾಧಕ್ಕಾಗಿ ಕ್ಷಮೆಯನ್ನು ಯಾಚಿಸುತ್ತಾನೆ.
ಆನಂತರ ಬ್ರಹ್ಮದೇವರ ಆದೇಶದಂತೆ ಋತ್ವಿಜರ ಸಹಾಯದಿಂದ ಪುನಃ ಯಜ್ಞವನ್ನು ಪ್ರಾರಂಭಿಸುತ್ತಾನೆ. ಯಜ್ಞ ಸಂಪೂರ್ಣಗೊಳಿಸಲು ಎಲ್ಲ ದೇವತೆಗಳ ಪಾಲಿನ ಹವಿರ್ಭಗವನ್ನು ನೀಡುತ್ತಿರುವಂತೆಯೇ, ಶ್ರೀ ಹರಿಯು ಪ್ರತ್ಯಕ್ಷನಾಗಿ ದಕ್ಷ ನನ್ನು ಹಾಗೂ ಎಲ್ಲ ದೇವತೆಗಳನ್ನು ಆಶೀರ್ವದಿಸಿ ಅನುಗ್ರಹಿಸುತ್ತಾನೆ. ಅಲ್ಲಿಗೆ ದಕ್ಷನ ಯಜ್ಞ ಪರಿಸಮಾಪ್ತಿ ಹೊಂದುತ್ತದೆ.




Comments