ಭೀಮಸೇನ
- Ravishankara Hegde Dodnalli

- Oct 25
- 2 min read
ಮಹಾಭಾರತದ ಮಹಾಪಾತ್ರಗಳಲ್ಲಿ ಬಲದಿಂದಲೂ, ಪರಾಕ್ರಮದಿಂದಲೂ, ವಿಶಿಷ್ಟವಾಗಿ ಕಾಣುವ ಪಾತ್ರ "ಭೀಮಸೇನ". ವಾಯುದೇವನ ವರಪ್ರಸಾದದಿಂದ ಜನಿಸಿದ ಭೀಮಸೇನ, ಪಾಂಡವರಿಗೆ ರಕ್ಷಾಕವಚವಾಗಿಯೇ ಕೊನೆತನಕವೂ ಇದ್ದುದು ಸಹ ಒಂದು ವಿಶೇಷ. ಭೀಮನ ಜನನದ ಸಂಕಲ್ಪವೇ ಹಾಗಿತ್ತು. "ಬಲಿಷ್ಠನಾದ ಪುತ್ರ ಜನಿಸಬೇಕು". ಆ ಬಲವೇ ಭೀಮನಿಗೆ ಸದಾ ಸಂಗಾತಿ.
ಭೀಮನ ಸ್ವಭಾವಗಳನ್ನು ಗಮನಿಸಿದರೆ ನಮಗೆ ಆಶ್ಚರ್ಯವಾಗುತ್ತದೆ. ಆತ ಯಾವುದನ್ನೂ ಅತಿಯಾಗಿ ತೊರ್ಪಡಿಸಿದವನಲ್ಲ. ಹಾಗೆಂದು ಯಾವ ಸಂದರ್ಭಕ್ಕೆ ಯಾವುದು ಉಚಿತವೋ, ಆ ಗುಣವನ್ನೇ ಆತ ತೋರಿಸಿದ್ದನ್ನು ಸಮಗ್ರ ಮಹಾಭಾರತದಲ್ಲಿ ನಾವು ಕಾಣಬಹುದು. ಕೌರವನಿಗೂ ಅರ್ಜುನನಿಗಿಂತ ಹೆಚ್ಚು ಆತಂಕ ಹಾಗೂ ಸೇಡು ಎರಡೂ ಭೀಮನ ಮೇಲೆಯೇ ಇತ್ತು. ಆತನಿಗೆ ವಿಷವುಣಿಸಿ ಕೈಕಾಲು ಕಟ್ಟಿ ನೀರಿಗೆಸೆದರೂ ಭೀಮ ಬದುಕಿ ಬಂದದ್ದು ಭೀಮನಲ್ಲಿದ್ದ ಆತ್ಮವಿಶ್ವಾಸ. ಅರಗಿನ ಮನೆಗೆ ಬೆಂಕಿ ಬಿದ್ದಾಗ ಭೀಮನೇ ಎಲ್ಲರನ್ನೂ ರಕ್ಷಿಸಿದ. ಹಿಡಿಂಬನನ್ನು ನಿಗ್ರಹಿಸುವಾಗ, ಬಕಾಸುರನನ್ನು ಕೊಲ್ಲುವಾಗ ಭೀಮ ಒಬ್ಬನೇ ಹೋರಾಡಿದನಲ್ಲವೇ..?
ದ್ಯೂತದ ಸಭೆಯಲ್ಲಿ ದ್ರೌಪದಿಯ ಅಪಮಾನವನ್ನು ಸಹಿಸಲಾರದೇ ಸಿಡಿದ ಪಾಂಡವನೂ ಭೀಮಸೇನನೇ ! ಕಿರ್ಮೀರನ್ನು ಕೊಲ್ಲುವಾಗ, ನಹುಷನ ಶಾಪ ವಿಮೋಚನೆ ಆಗುವಾಗ, ಸೈಂಧವನನ್ನು ಶಿಕ್ಷಿಸುವಾಗ, ಹನುಮನನ್ನು ಎದುರಿಸುವಾಗ, ಕುಬೇರನೊಡನೆ ಸೆಣಸುವಾಗ, ಎಲ್ಲ ಕಡೆಗೂ ಭೀಮ ಏಕಾಂಗಿಯಾಗಿಯೇ ಸಾಧಿಸಿದ. ಕೀಚಕ - ಉಪಕೀಚಕರನ್ನು ಕೊಲ್ಲುವಾಗ, ನೂರು ಕೌರವರನ್ನು ಕೊಂದು ಕಳೆಯುವಾಗ ಭೀಮ~ಬಲಭೀಮನಾಗಿಯೇ ವಿಜ್ರಂಭಿಸಿದನಲ್ಲದೇ ಅವನ ಜೊತೆ ಯಾರೂ ಇರಲಿಲ್ಲ.
ಭೀಮ ಅತ್ಯಂತ ಭಾವಜೀವಿ. ಆದರೆ ಅಷ್ಟೇ ಕಠೋರ ಹೃದಯಿ. ತನ್ನವರಿಗಾಗಿ ಎನನ್ನೂ ಮಾಡಲು ಸಿದ್ಧನಾಗುವ ಗುಣ ಅವನದ್ದು. ಭಾರೀ ಗಾತ್ರದ ಶರೀರವಾದರೂ, ಅದು ಹದವರಿತ ಕ್ಷಾತ್ರ ವಿದ್ಯೆಗಳನ್ನು ಚೆನ್ನಾಗಿ ಅರಗಿಸಿಕೊಂಡ ಸಂಸ್ಕರಿಸಲ್ಪಟ್ಟ ಕಾಯ. ಬಲ ಎಷ್ಟಿದ್ದರೂ ಅದು ಧರ್ಮದ ಮಾರ್ಗದಲ್ಲಿಯೇ ಬಳಹಲ್ಪಡಬೇಕು. ಅಧರ್ಮಕಾರ್ಯಕ್ಕಲ್ಲ. ಇದು ಭೀಮನ ನಿಲುವು. ಗದಾಯುದ್ಧ ವಿಶಾರದನಾಗಿದ್ದ ಭೀಮನ ವ್ಯಕ್ತಿತ್ವ ಗದೆಯನ್ನು ಬಿಟ್ಟು ಇಲ್ಲ. ಬಲರಾಮನಿಂದ ಗದಾಯುದ್ಧ ವಿದ್ಯೆಯನ್ನು ಅಭ್ಯಾಸ ಮಾಡಿದನು ಉಲ್ಲೇಖವೂ ಬರುತ್ತದೆ.

ಭೀಮನ ಇಡೀ ಜೀವನದಲ್ಲಿ ಅಚ್ಚೊತ್ತಿದಂತೆ ಕಾಣುವ ಎರಡು ಘಟನೆಗಳು ದುಶ್ಯಾಸನ ಹಾಗೂ ದುರ್ಯೋಧನರ ವಧೆಗಳು. ಭೀಮನ ವಚನ ಪೂರ್ತಿಗಾಗಿ ನಡೆದವು ಅವುಗಳಾದರೂ, ದುಶ್ಯಾಸನ ವಧೆ ಅತ್ಯಂತ ಬೀಭತ್ಸ. ಕೆಲವು ಕಾವ್ಯಗಳಲ್ಲಿ ಕೆಲವು ರಸಗಳು ಕೇವಲ ನೆಪ ಮಾತ್ರಕ್ಕೆ ಬಂದು ಹೋಗುತ್ತವೆ. ಈ ವಿಷಯದಲ್ಲಿ "ಮಹಾಭಾರತ" ಎಲ್ಲ ಕವಿಗಳಿಗೂ ಅನುಕರಣೀಯ. ಎಲ್ಲಾ ರಸಗಳು ಅತ್ಯಂತ ಶಾಸ್ತ್ರೀಯವಾಗಿ ಮತ್ತು ಅಚ್ಚು-ಕಟ್ಟಾಗಿ ಮಹಾಭಾರತದಲ್ಲಿ ನಿರೂಪಿಸಲ್ಪಟ್ಟಿದೆ. ಇಲ್ಲಿ ದುಶ್ಯಾಸನ ವಧೆ ಬೀಭತ್ಸಕ್ಕೆ ಒಂದು ಉತ್ಕೃಷ್ಟ ಉದಾಹರಣೆ.
ಮನಶಾಸ್ತ್ರಜ್ಞರು ಮನುಷ್ಯನ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಮತ್ತು ಸಂವೇದನೆಗಳ ಬಗ್ಗೆ ತಿಳಿಸುವಾಗ ಮನುಷ್ಯನು ತನ್ನ ಮನಸ್ಸಿನಲ್ಲಿ ದ್ವೇಷ ಹಾಗೂ ಸಿಟ್ಟಿನ ಕಾರಣಕ್ಕಾಗಿ ಅತನಲ್ಲಿ ಉಂಟಾಗುವ ಉದ್ವೇಗ, ಆತನ ಮೂಲ ಗುಣ ಹಾಗೂ ಸ್ವಭಾವಕ್ಕೆ ವಿರುದ್ಧವಾಗಿ ಆತನು ಪ್ರಾಣಿಯಂತೆ ವರ್ತಿಸಬಹುದು ಎನ್ನುತ್ತಾರೆ. ಈ ಮಾನಸಿಕ ಅಸಮತೋಲನವನ್ನು ಮತ್ತು ಅಧರ್ಮದ ವಿರುದ್ಧ ಭೀಮನಿಗೆ ಇದ್ದ ಅಸಹನೆಯನ್ನು, ಈ ದುಶ್ಯಾಸನ ವಧೆ ಪ್ರಕರಣ ಸ್ಪಷ್ಟವಾಗಿ ತೋರಿಸುತ್ತದೆ.
ಒಟ್ಟಾರೆಯಾಗಿ ಒಬ್ಬ ಧರ್ಮಮಾರ್ಗದಲ್ಲಿ ಪ್ರವೃತ್ತನಾದವನು. ಅಧರ್ಮವು ಅತಿರೇಕವಾದರೆ ಅಧರ್ಮದ ನಾಶಕ್ಕೆ ತಾನೇನು ಮಾಡಬೇಕು ಎಂಬುದನ್ನು ಭೀಮ ತನ್ನ ಇಡೀ ಜೀವನದಲ್ಲಿ ತೋರಿಸಿದ್ದಾನೆ. ಸಿಟ್ಟು, ಧಾರ್ಷ್ಟ್ಯಗಳು ಎಷ್ಟಿದ್ದರೂ ಅದು ಧರ್ಮಮಾರ್ಗದಲ್ಲಿಯೇ ಇದ್ದರೆ ರಾಕ್ಷಸೀ ಪ್ರವೃತ್ತಿ ಎನಿಸದೇ ದೈವೀಗುಣ ಎನಿಸುತ್ತದೆ ಎಂಬುದು ಭೀಮಸೇನನ ಪಾತ್ರದ ಅಂತರಾಳ.








Comments