top of page

ಜಯ ವಿಜಯರ ಕಥೆ

ಒಮ್ಮೆ ಬ್ರಹ್ಮ ಮಾನಸಪುತ್ರರಾದ ಸನಕಾದಿಗಳು ಮಹಾವಿಷ್ಣುವನ್ನು ಸಂದರ್ಶಿಸುವ ಉದ್ದೇಶದಿಂದ ವೈಕುಂಠ ಲೋಕಕ್ಕೆ ಹೋಗಲು ನಿರ್ಧರಿಸುತ್ತಾರೆ. ವೈಕುಂಠ ದರ್ಶನ ಸಾಮಾನ್ಯರಿಗೆ ದುರ್ಲಭವಾದದ್ದು. ಯಾರು ತಮ್ಮ ಕಾಮನೆಗಳನ್ನು ಜಯಿಸಿ ಕೇವಲ ಭಗವಂತನಲ್ಲಿ ಶರಣಾಗುತ್ತಾರೋ, ತಮ್ಮ ಧರ್ಮಾಚರಣೆಗಳ ಮೂಲಕ ಆರಾಧನೆ ಮಾಡುವ ತನ್ನ ಪರಮ ಭಕ್ತರಿರುತ್ತಾರೋ, ಅವರಿಗೆ ನಿಜವಾದ ಸುಖವನ್ನು ಅನುಗ್ರಹಿಸುವುದಕ್ಕಾಗಿಯೇ, ಶುದ್ಧ ಸತ್ವಮಯ ಸ್ವರೂಪವನ್ನು ಧರಿಸಿಕೊಂಡು, ಆದಿನಾರಾಯಣನು ವೈಕುಂಠದಲ್ಲಿ ಸ್ಥಿತನಾಗಿರುತ್ತಾನೆ. ಅಂತಹ ಆ ಶ್ರೀಮನ್ನಾರಾಯಣನನ್ನು ದರ್ಶಿಸುವ ಉದ್ದೇಶಕ್ಕಾಗಿ ತಮ್ಮ ಯೋಗ ಬಲದಿಂದ ಸನಾಕಾದಿ ಮುನಿಗಳು ವೈಕುಂಠವನ್ನು ತಲುಪುತ್ತಾರೆ. ಭಗವಂತನನ್ನು ಕಾಣಬೇಕೆನ್ನುವ ತವಕದಲ್ಲಿ, ವೈಕುಂಠದ ಇತರ ವೈಭವ ವಸ್ತು ವಿಶೇಷಗಳನ್ನು ಉಪೇಕ್ಷಿಸಿ ನೇರವಾಗಿ ವೈಕುಂಠ ಧಾಮದ ಆರು ದ್ವಾರಗಳನ್ನು ದಾಟಿ ಏಳನೆಯ ದ್ವಾರವನ್ನು ತಲುಪುತ್ತಾರೆ.



ಆಗ ಆ ದ್ವಾರದ ಅಕ್ಕಪಕ್ಕದಲ್ಲಿ ದಿವ್ಯ ಆಭರಣಗಳಿಂದ ಸಂಪನ್ನರಾಗಿದ್ದ ಜಯ ಮತ್ತು ವಿಜಯ ಎಂಬ ಇಬ್ಬರು ದಿವ್ಯ ಪುರುಷರನ್ನು ಕಾಣುತ್ತಾರೆ. ಅವರನ್ನು ಕಂಡಾಗಲೂ ಭಗವಂತನನ್ನು ಕಾಣುವ ಒಂದೇ ಉತ್ಕಟ ಆಕಾಂಕ್ಷೆಯಲ್ಲಿ ಅವರತ್ತ ಲಕ್ಷಿಸದೆ, ನೇರವಾಗಿ ಏಳನೆಯ ದ್ವಾರವನ್ನು ದಾಟುವುದಕ್ಕೆ ಮುಂದಾಗುತ್ತಾರೆ. ಅದನ್ನು ನೋಡಿ ಜಯ ವಿಜಯರು ಆಶ್ಚರ್ಯ ಚಕಿತರಾಗುತ್ತಾರೆ. ಏಕೆಂದರೆ ಸನಕಾದಿ ಮುನಿಗಳು ಐದು ವರ್ಷದ ಬಾಲಕರಂತೆ ಕಂಡು ಬರುತ್ತಿದ್ದರು. ತಮ್ಮ ದೇಹದ ಮೇಲೆ ಯಾವುದೇ ಆಭರಣವಾಗಲಿ ಬಟ್ಟೆಯನ್ನಾಗಲಿ ಧರಿಸದೆ ಬೆತ್ತಲೆಯಾಗಿದ್ದರು. ಆದರೂ ಯಾವ ಸಂಕೋಚವೂ ಇಲ್ಲದೆ ನಿ:ಶಂಕೆಯಿಂದ ವೈಕುಂಠದ ಏಳನೇ ದ್ವಾರದತ್ತ ಧಾವಿಸಿ ನುಗ್ಗುತ್ತಿದ್ದರು. ಅವರ ಈ ವರ್ತನೆಯಿಂದ ಜಯ ವಿಜಯರು ಕ್ರೋಧ ಭರಿತರಾಗಿ, ತಮ್ಮ ಕೈಯಲ್ಲಿದ್ದ ಆಯುಧವನ್ನು ಮುಂದೆ ಚಾಚಿ ಸನಕಾದಿಗಳನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಾರೆ. ಇದರಿಂದ ತಮ್ಮ ಪ್ರಭುವಿನ ದರ್ಶನದಲ್ಲಿ ತಡೆ ಉಂಟಾದ ಕಾರಣಕ್ಕೆ ಸನಕಾದಿಗಳು ಕೋಪಾವಿಷ್ಟರಾಗಿ ಜಯ ವಿಜಯ ರನ್ನು ಉದ್ದೇಶಿಸಿ, "ಎಲೈ ದ್ವಾರ ಪಾಲಕರೇ! ಭಗವಂತನ ಸೇವೆಯ ಪುಣ್ಯ ಪ್ರಭಾವದಿಂದ ಈ ಲೋಕಕ್ಕೆ ಬಂದು ವಾಸ ಮಾಡುವ ಮಹಾಭಾಗ್ಯ ನಿಮ್ಮ ಪಾಲಿಗೆ ಲಭಿಸಿದೆ. ಇಲ್ಲಿಗೆ ಬಂದ ಮೇಲೆ ಆ ಭಗವಂತನಂತೆಯೇ ಸಮದರ್ಶಿಗಳಾಗಿರುತ್ತಾರೆ. ಆದರೆ ನಿಮ್ಮ ಸ್ವಭಾವದಲ್ಲಿ ಆ ಭಾವವಿಲ್ಲ. ಭಗವಂತನಿಗೆ ಯಾರಲ್ಲಿಯೂ ವಿರೋಧವಿಲ್ಲ. ಆದ್ದರಿಂದ ಇಲ್ಲಿಗೆ ಬರುವ ಅಥವಾ ಇಲ್ಲಿರುವ ಯಾರ ಮೇಲೆಯೂ ಶಂಕೆ ಪಡುವುದಕ್ಕೂ ಅವಕಾಶವಿಲ್ಲ. ವೈಕುಂಠಪತಿಯಾದ ಭಗವಂತನ ಸೇವಕರಾದರೂ ನಿಮ್ಮ ಬುದ್ಧಿಯು ಈಗಲೂ ಮಂದವಾಗಿದೆ. ನಿಮ್ಮ ಅಪರಾಧಕ್ಕೆ ತಕ್ಕ ಶಿಕ್ಷೆ ಆಗಲೇಬೇಕು. ಈ ವೈಕುಂಠ ಧಾಮವನ್ನು ಬಿಟ್ಟು ಕಾಮ ಕ್ರೋಧ ಲೋಭಗಳೆಂಬ ಶತ್ರುಗಳು ವಾಸ ಮಾಡುತ್ತಿರುವ ಪಾಪಿಷ್ಟವಾದ ಜನ್ಮವನ್ನು ಪಡೆಯಿರಿ" ಎಂದು ಶಪಿಸುತ್ತಾರೆ.


ಸನಕಾದಿ ಮಹರ್ಷಿಗಳ ಈ ಕಠೋರವಾದ ಮಾತನ್ನು ಕೇಳಿ ಜಯ ವಿಜಯರು ಗಾಬರಿಗೊಳ್ಳುತ್ತಾರೆ. ಏಕೆಂದರೆ ಬ್ರಾಹ್ಮಣರ ಶಾಪವನ್ನು ಯಾವುದೇ ಅಸ್ತ್ರ ಶಸ್ತ್ರಗಳಿಂದ ನಿವಾರಿಸಲು ಸಾಧ್ಯವಿಲ್ಲ. ಪರಮಾತ್ಮ ಶ್ರೀಹರಿಯೂ ಕೂಡ ಬ್ರಾಹ್ಮಣರ ಕುರಿತಾಗಿ ಅತ್ಯಂತ ಪ್ರೇಮವನ್ನು ಹೊಂದಿದವನು. ಆದ್ದರಿಂದ ಜಯ ವಿಜಯರು ಮಹರ್ಷಿಗಳ ಪಾದಗಳನ್ನು ಹಿಡಿದುಕೊಂಡು ಅತಿ ದೈನ್ಯದಿಂದ, "ಸ್ವಾಮಿ! ಖಂಡಿತವಾಗಿಯೂ ನಾವು ಅಪರಾಧವನ್ನು ಮಾಡಿದ್ದೇವೆ. ನಮ್ಮ ಪಾಪಕ್ಕೆ ನಿಮ್ಮ ಶಾಪವು ಉಚಿತವೇ ಆಗಿದೆ. ನಿಮ್ಮ ವಿಷಯದಲ್ಲಿ ಭಗವಂತನ ಅಭಿಪ್ರಾಯವನ್ನು ತಿಳಿಯದೆ ಆತನ ಆಜ್ಞೆಯನ್ನು ನಾವು ಉಲ್ಲಂಘಿಸಿದ್ದೇವೆ, ಇದರಿಂದ ಉಂಟಾದ ಪಾಪವು ನೀವು ವಿಧಿಸಿರುವ ಶಾಪದಿಂದಾಗಿ ಕಳೆದು ಹೋಗಲಿ. ಆದರೆ ನಾವು ತಿಳಿಯದೆ ಮಾಡಿದ ಈ ಅಪರಾಧಕ್ಕಾಗಿ ನಿಮ್ಮಲ್ಲಿ ಕನಿಕರವಿದ್ದರೆ, ನಾವು ಹೀನ ಜನ್ಮದಲ್ಲಿ ಹುಟ್ಟಿದರೂ ಕೂಡ ನಮಗೆ ಭಗವಂತನ ಸ್ಮೃತಿಯನ್ನು ನಾಶ ಮಾಡುವಂತಹ ಮೋಹವು ಆವರಿಸದಿರುವಂತೆ ಅನುಗ್ರಹಿಸಿರಿ" ಎಂದು ಪ್ರಾರ್ಥಿಸುತ್ತಾರೆ.


ಆ ಸಮಯಕ್ಕಾಗಲೇ ತನ್ನ ಸೇವಕರಿಂದ ಸನಕಾದಿಗಳಿಗೆ ಅಪಚಾರವಾಗಿದೆ ಎಂಬುದನ್ನು ತಿಳಿದು ಶ್ರೀಮನ್ನಾರಾಯಣನು ಶ್ರೀದೇವಿ ಸಮೇತನಾಗಿ ಅಲ್ಲಿಗೆ ಬರುತ್ತಾನೆ. ಪರಮಾತ್ಮನನ್ನು ನೋಡಿ ಸನಕಾದಿ ಮಹರ್ಷಿಗಳು ಪರಮಾನಂದವನ್ನು ಹೊಂದಿ ಮೈಮರೆತು ಭಗವಂತನನ್ನು ಸ್ತುತಿಸಿ ನಮಸ್ಕರಿಸುತ್ತಾರೆ. ಪರಮಾತ್ಮನ ದರ್ಶನದಿಂದ ಜಯ ವಿಜಯರ ಮೇಲಿನ ಕ್ರೋಧದಿಂದ ಹೊರಬಂದ ಸನಕಾದಿ ಮುನಿಗಳು, "ಪರಮಾತ್ಮ! ಸಮಸ್ತ ಲೋಕಗಳಿಗೆ ನೀನು ಒಡೆಯನು. ಜಗದ್ರಕ್ಷಕನು. ಆದರೂ ನಮ್ಮ ವಿಷಯದಲ್ಲಿ ಇಷ್ಟೊಂದು ವಿನಯದಿಂದ ನಡೆದುಕೊಳ್ಳುತ್ತಿರುವೆ. ಈ ಸಮಸ್ತ ಲೋಕವು ನಿನ್ನ ಲೀಲಾ ವಿಲಾಸದಲ್ಲಿ ಒಳಪಟ್ಟಿರುವಂಥದ್ದು. ಸರ್ವೇಶ್ವರನಾಗಿರುವ ನೀನು ಈ ಜಯ ವಿಜಯರಿಗೆ ಉಚಿತವೆನಿಸಿದ ಶಿಕ್ಷೆಯನ್ನು ಕೊಡಬಹುದು. ಅಥವಾ ಅವರು ಮಾಡಿದ ಕೆಲಸ ಉಚಿತವೆನಿಸಿದರೆ ಪುರಸ್ಕಾರರೂಪವಾಗಿ ಅವರ ವೃತ್ತಿಯನ್ನು ವೃದ್ಧಿಪಡಿಸಬಹುದು. ನೀನೇನೆ ಮಾಡಿದರೂ ಅದು ನಮಗೆ ಸಮ್ಮತ. ನಿನ್ನ ಸೇವಕರಿಗೆ ಶಾಪ ಕೊಟ್ಟಿದ್ದಕ್ಕಾಗಿ ನೀನು ನಮಗೆ ಶಿಕ್ಷೆಯನ್ನು ವಿಧಿಸಿದರೂ ಕೂಡ ನಾವು ಅದನ್ನು ಹರ್ಷದಿಂದ ಸ್ವೀಕರಿಸುತ್ತೇವೆ "ಎಂದು ನುಡಿಯುತ್ತಾರೆ. ಸನಕಾದಿ ಮುನಿಗಳ ಭಕ್ತಿಗೆ ಪ್ರಸನ್ನನಾದ ಪರಮಾತ್ಮನು, ಮುನಿಗಳನ್ನು ಉದ್ದೇಶಿಸಿ "ಮುನಿವರ್ಯರೇ! ಜಯ ವಿಜಯರು ನಿಮ್ಮ ಶ್ರೇಷ್ಠತೆಯನ್ನು ಅರಿಯದೆ ಅಪಚಾರವನ್ನು ಎಸಗಿದ್ದಾರೆ. ಅವರಿಗೆ ನೀವು ವಿಧಿಸಿದ ದಂಡನೆಯು ನನಗೆ ಸಮ್ಮತ. ನೀವು ಅವರಿಗೆ ಶಾಪವನ್ನು ಕೊಟ್ಟಿರುವುದು ಕೂಡ ನನ್ನ ಪ್ರೇರಣೆಯಿಂದ ಅಂತಲೇ ಭಾವಿಸಬಹುದು. ಆ ಕುರಿತು ಪಶ್ಚಾತಾಪದ ಅಗತ್ಯವಿಲ್ಲ. ಈ ಕೂಡಲೇ ಅವರು ನಿಮ್ಮ ಶಾಪಕ್ಕನುಗುಣವಾಗಿ ದೈತ್ಯ ಜನ್ಮವನ್ನು ಪಡೆದು ಕ್ರೋಧಾವೇಶದಿಂದ ಬದುಕಿ ಮತ್ತೆ ನನ್ನ ಬಳಿಗೆ ಹಿಂತಿರುಗುವರು" ಎಂದು ನುಡಿಯುತ್ತಾನೆ. ಆನಂತರ ಸನಕಾದಿ ಮುನಿಗಳು ಭಗವಾನ್ ವಿಷ್ಣು ವನ್ನು ಹಾಗೂ ವೈಕುಂಠ ಧಾಮವನ್ನು ದರ್ಶಿಸಿ ಭಗವಂತನಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಆತನ ಅಪ್ಪಣೆಯನ್ನು ಪಡೆದು ಆತನ ಮಹಿಮೆಯನ್ನು ಕೊಂಡಾಡುತ್ತಾ ಪರಮಾನಂದದಿಂದ ಅಲ್ಲಿಂದ ಹಿಂದಿರುಗುತ್ತಾರೆ.


ಪರಮಾತ್ಮನು ಜಯ ವಿಜಯರನ್ನು ಉದ್ದೇಶಿಸಿ,"ಹೋಗಿ, ಭಯಪಡಬೇಡಿ. ನಾನು ಸರ್ವ ಸಮರ್ಥನಾಗಿದ್ದರೂ ಬ್ರಹ್ಮತೇಜಸ್ಸನ್ನು ಅಗೌರವಿಸಲು ಬಯಸುವುದಿಲ್ಲ. ಹಿಂದೊಮ್ಮೆ ನಾನು ಯೋಗ ನಿದ್ರೆಯಲ್ಲಿ ವಿಶ್ರಮಿಸುತ್ತಿದ್ದಾಗ ಒಳಗೆ ಪ್ರವೇಶ ಪ್ರವೇಶಿಸುತ್ತಿದ್ದ ಲಕ್ಷ್ಮಿ ದೇವಿಯನ್ನು ಕೂಡ ನೀವು ತಡೆದಿದ್ದೀರಿ. ಆಗ ಅವಳು ನಿಮಗೆ ಇದೇ ರೀತಿಯ ಶಾಪವನ್ನು ನೀಡಿದಳು. ಇದೆಲ್ಲದರ ಫಲವಾಗಿ ನೀವೀಗ ದೈತ್ಯ ಜನ್ಮವನ್ನು ಪಡೆದು ನನ್ನನ್ನು ವಿರೋಧಿಸಿ, ಈ ವಿಪ್ರಶಾಪದಿಂದ ಬಿಡುಗಡೆ ಹೊಂದಿ ಮರಳಿ ನನ್ನನ್ನು ಪಡೆಯುವಿರಿ" ಎಂದು ಹೇಳಿ ಜಯ ವಿಜಯರನ್ನು ಕಳುಹಿಸುತ್ತಾನೆ. ದೇವಶ್ರೇಷ್ಠರಾದ ಜಯ ವಿಜಯರು, ಈ ರೀತಿಯಾಗಿ ಸನಕಾದಿ ಮುನಿಗಳ ಶಾಪದಿಂದ ಭಗವದ್ಧಾಮದಿಂದ ಮರಳಿ ದಿತಿ ದೇವಿಯ ಗರ್ಭದಲ್ಲಿ ಪ್ರವೇಶಿಸಿ ದೈತ್ಯ ಜನ್ಮವನ್ನು ಪಡೆಯುತ್ತಾರೆ.

Comments


bottom of page