ಸ್ನೇಹ - ವೈರ - ವಿನಾಶ - ದ್ರೋಣ ಮತ್ತು ದ್ರುಪದ
- Shreenivasa Bhagwat Mattighatta

- Dec 29, 2025
- 5 min read
Updated: Dec 30, 2025
ಆದರ್ಶ ಮಿತ್ರರು ಪರಮ ಶತ್ರುಗಳಾದ ಕಥೆ
ದ್ರೋಣ-ದ್ರುಪದರ ಸ್ನೇಹ
ಭಾರದ್ವಾಜ ಮುನಿಗಳು ಬಹುದೊಡ್ಡ ಗುರುಕುಲವನ್ನು ನಡೆಸುತ್ತಿದ್ದ ಋಷಿಗಳು. ಅನೇಕ ಮಂದಿ ಕ್ಷತ್ರಿಯಕುಮಾರರೂ ಇಲ್ಲಿಯೇ ಉಳಿದು ಶಿಕ್ಷಣ ಪಡೆಯುತ್ತಿದ್ದರು. ಭಾರದ್ವಾಜರ ಮಗ ದ್ರೋಣ. ಕಾಂಪಿಲ್ಯದ ರಾಜಕುಮಾರ ದ್ರುಪದನೂ ವಿಧ್ಯಾಭ್ಯಾಸಕ್ಕೆ ಗುರುಕುಲ ಸೇರಿದ. ಒಂದೇ ವಾರಿಗೆಯ ದ್ರುಪದ - ದ್ರೋಣ ಸಹಪಾಠಿಗಳೂ ಆತ್ಮೀಯ ಸ್ನೇಹಿತರೂ ಆದರು. ಯಾವ ಮಟ್ಟದ ಪ್ರೀತಿಯೆಂದರೆ ಎರಡು ಹಣ್ಣು ಸಿಕ್ಕರೆ ಒಬ್ಬೊಬ್ಬರಿಗೆ ಒಂದೊಂದಲ್ಲ, ಎರಡೂ ಹಣ್ಣನ್ನು ಭಾಗ ಮಾಡಿ ತಿನ್ನುವಷ್ಟು! ಎರಡೂ ಹಣ್ಣಿನ ರುಚಿ ಇಬ್ಬರಿಗೂ ಸಿಗಲಿ ಎನ್ನುವ ಭಾವನೆ!!. ಹೀಗೇ ಹತ್ತಾರು ವರ್ಷ ಕಳೆದು ವಿದ್ಯಾಭ್ಯಾಸ ಮುಗಿಯಿತು. ದ್ರುಪದ ಭಾರವಾದ ಹೃದಯದಿಂದ ದ್ರೋಣನನ್ನು ಬೀಳ್ಕೊಟ್ಟು, ಗುರುಗಳಿಗೆ ವಂದಿಸಿ ತನ್ನ ದೇಶಕ್ಕೆ ಹೋರಟ. ಏನೇ ಮಾಡಿದರೂ ದ್ರೋಣನನ್ನು ಅಗಲುವ ಮನಸು ಅವನಿಗಿಲ್ಲ. "ದ್ರೋಣಾ ನೀನೂ ನನ್ನ ಜೊತೆ ಬಂದುಬಿಡು, ನನ್ನ ಅರ್ಧ ರಾಜ್ಯ ನಿನಗೇ ಕೊಡುತ್ತೇನೆ. ಇಬ್ಬರೂ ಕೂಡಿ ಆಳೋಣ" ಎಂದ. ತತ್ಕಾಲಕ್ಕೆ ಇದು ದ್ರೋಣನಿಗೆ ರುಚಿಸಲಿಲ್ಲ. "ನಾನು ಇಲ್ಲಿಯೇ ಇರುತ್ತೇನೆ, ನೀನು ಹೋಗಿ ಬಾ" ಎಂದು ಬೀಳ್ಕೊಟ್ಟ. "ಕಷ್ಟವೇನೇ ಬಂದರೂ ನೀನು ಬಂದು ನನ್ನನ್ನು ಕಾಣಬೇಕು" ಎಂದು ಸ್ನೇಹದ ನಿಬಂಧನೆ ಹಾಕಿ, ದ್ರುಪದ ತನ್ನ ರಾಜ್ಯ ಸೇರಿದ. ತಂದೆಗೆ ವಯಸ್ಸಾಗಿತ್ತು. ಬಲುಬೇಗ ಪಟ್ಟಾಭಿಷಿಕ್ತನೂ ಆದ.
ದ್ರೋಣರ ಬಡತನ
ಇತ್ತ ದ್ರೋಣನಿಗೆ ಯೌವನ ಕಾಲ. ತಂದೆಯಿಂದ ಕಲಿತ ವಿದ್ಯೆಯಲ್ಲಿ ಬ್ರಾಹ್ಮಣರ ಹಾಗೆ ಯಜ್ಞ ಯಾಗ ಅಧ್ಯಯನ ಅಧ್ಯಾಪನಗಳಲ್ಲಿ ಆಸಕ್ತಿಯೇ ಬೆಳೆಯಲಿಲ್ಲ. ಬಿಲ್ಲು, ಬಾಣ ಯುಧ್ಧ ಹೀಗೆ ಕ್ಷತ್ರಿಯ ವ್ರೃತ್ತಿಯಲ್ಲೇ ನಿತ್ಯ ಯೋಚನೆಯಾಯಿತು. ಕೃಪಾಚಾರ್ಯನ ತಂಗಿ ಕೃಪಿಯ ಜೊತೆ ವಿವಾಹವೂ ನಡೆಯಿತು. ವರ್ಷಾಂತರದಲ್ಲಿ ಮಗ ಅಶ್ವತ್ಥಾಮನೂ ಹುಟ್ಟಿದ. ಹುಟ್ಟಿದ ಮಗುವಿಗೆ ಒಂದು ಕುಡುತೆ ಹಾಲಿಗೂ ಒಂದು ಗೋವು ಗತಿಯಿರಲಿಲ್ಲ ದ್ರೋಣನಿಗೆ. ಎಷ್ಟು ದಿನ ಅವರಿವರ ಮನೆಯಲ್ಲಿ ಬೇಡಿ ತಂದಾಳು ತಾಯಿ. ಓರಗೆಯ ಮಕ್ಕಳೆಲ್ಲ ಹಾಲು ಕುಡಿಯುವುದನ್ನು ಕಂಡು ಅಶ್ವತ್ಥಾಮನೂ ಹಠ ಮಾಡುತ್ತಿದ್ದ. ಮನೆಯಲ್ಲಿದ್ದ ಅಕ್ಕಿಯ ಹಿಟ್ಟನ್ನು ಕದಡಿ, "ಇದೋ ಮಗನೆ ಹಾಲು ಕುಡೀ" ಎಂದು ಕೊಟ್ಟಳು ಒಂದು ದಿನ. ಆ ಮಗವೂ ಜಂಭದಿಂದ ವಾರಿಗೆಯ ಹುಡುಗರ ಮಧ್ಯೆ ಹೋಗಿ ನೋಡೀ ನಾನೂ ಹಾಲು ಕುಡಿಯುತ್ತಿದ್ದೇನೆ ಎಂದ. ಅವರೂ ಅಚ್ಚರಿಯಿಂದ ಈ ಬಡಪಾಯಿಗೆ ಹಾಲು ಎಲ್ಲಿಂದ ಬಂತೆಂದು ಪರೀಕ್ಷೀಸಿ ಅಣಕಿಸಲು ತೊಡಗಿದರು. ಮಗು ಅಳುತ್ತಾ ಅಮ್ಮನ ಬಳಿಗೋಡಿತು. ದೂರದಿಂದ ಇದನ್ನೆಲ್ಲ ನೋಡುತ್ತಿದ್ದ ದ್ರೋಣನಿಗೆ ಬದುಕೇ ಸಾಕೆನಿಸಿಬಿಟ್ಟಿತು. "ಇಂದು ಎಲ್ಲಾದರೂ ಒಂದು ಗೋವನ್ನು ಸಂಪಾದಿಸಿದೇ ಸಿಧ್ಧ" ಎಂದು ಮನೆಯಿಂದ ಹೊರಟ. ಆಗ ಪರಶುರಾಮರು ತಾನು ಕ್ಷತ್ರಿಯರನ್ನು ಕೊಂದು ಗಳಿಸಿದ ಸಂಪತ್ತು, ಭೂಮಿ ಎಲ್ಲವನ್ನೂ ಯತೇಚ್ಚ ದಾನ ಮಾಡುತ್ತಿದ್ದರು. ಅವರ ಬಳಿ ಹೋದ. ಇವನ ದುರ್ವಿಧಿಗೆ ಆಗ ಅವರಲ್ಲಿ ಇದ್ದುದು ಒಂದಿಷ್ಟು ಮಣ್ಣಿನ ಮಡಿಕೆಗಳು ಮಾತ್ರ. ಉಳಿದೆಲ್ಲವನ್ನೂ ದಾನ ಮಾಡಿ ಅವರು ಮಹೇಂದ್ರಾಚಲದತ್ತ ಹೊರಟು ನಿಂತಿದ್ದರು. ಆಗಲೂ ದ್ರೋಣನಿಗೆ ಹುಟ್ಟಿದ್ದು ಕ್ಷಾತ್ರಬುಧ್ಧಿಯೇ. "ನಿಮ್ಮಲ್ಲಿರುವ ಅಸ್ತ್ರ ಮಂತ್ರಗಳನ್ನಾದರೂ ಉಪದೇಶಿಸಿ" ಎಂದು ಪ್ರಾರ್ಥಿಸಿದ. ವೈರವನ್ನೆಲ್ಲ ಬಿಟ್ಟು ಸಾತ್ವಿಕ ಜೀವನದ ಕಡೆಗೆ ಮುಖ ಮಾಡಿದ್ದ ಪರಶುರಾಮರು ತನಗೊಬ್ಬ ಬ್ರಾಹ್ಮಣ ಶಿಷ್ಯ ಸಿಕ್ಕಿದನೆಂದು ನಿರ್ವಂಚನೆಯಿಂದ ಎಲ್ಲವನ್ನೂ ಧಾರೆ ಎರೆದರು.

ದ್ರುಪದನಿಂದ ಅವಮಾನ
ಮಂತ್ರಾಸ್ತ್ರಗಳಿಂದ ಹೊಟ್ಟೆ ತುಂಬೀತೇ? ಹೆಂಡತಿ ಮಗನ ಹೊಟ್ಟೆಪಾಡು ಮತ್ತೆ ನೆನಪಿಗೆ ಬಂತು. ಮನೆಗೆ ಹೋಗಿ ಮುಖ ತೋರಿಸುವುದು ಹೇಗೆ? ಇದೇ ಚಿಂತೆಯಲ್ಲಿರುವಾಗ ದ್ರುಪದ ನೆನಪಾದ. 'ಅರ್ಧ ರಾಜ್ಯವನ್ನೇ ಕೊಡುತ್ತೇನೆ ಎಂದಿದ್ದನಲ್ಲವೇ. ಹೌದು! ಅವನಿಂದ ರಾಜ್ಯ ಪಡೆದು ಅರಸನಾಗಿ ಕುಟುಂಬವನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸಿಬಿಡುತ್ತೇನೆ' ಎಂದು ಕನಸು ಕಟ್ಟಿದ. ನೇರ ಕಾಂಪಿಲ್ಯಕ್ಕೆ ನಡೆದ. ಅರಮನೆಯ ಬಾಗಿಲ ಭಟನಲ್ಲಿ ತಾನೊಬ್ಬ ಬ್ರಾಹ್ಮಣ, ಅರಸನನ್ನು ಕಾಣಬೇಕು, ಎಂದರಾದರೂ ಗೌರವ ಸಿಗುತ್ತಿತ್ತೇನೋ!! ತಾನು ಅರಸನ ಪ್ರಾಣ ಸ್ನೇಹಿತ, ಮುಂದೆ ಅರ್ಧ ರಾಜ್ಯವೇ ತನ್ನದು... ಒಳಗೆ ಬಿಡು!!, ಎಂದು ಗರ್ವದ ಮಾತಾಡಿದ. ಆತನೂ ಹಾಸ್ಯ ಮಾಡಿ, ಇವನೆಲ್ಲೋ ತಲೆತಿರುಕನೆಂದು ತಡೆದ. ಜಗಳ ಕಾದು ತಲೆಗೆ ಸಿಟ್ಟು ಏರಿಸಿಕೊಂಡೇ ಸಭೆಯನ್ನು ಹೊಕ್ಕ. ತನ್ನನ್ನು ಕಂಡ ಮರುಕ್ಷಣವೇ ದ್ರುಪದ ಕೆಳಗಿಳಿದು ಸ್ವಾಗತಿಸುತ್ತಾನೆಂದು ಈತನ ಗ್ರಹಿಕೆ. ದ್ರುಪದನಿಗೂ ರಾಜಸ ಅಹಂಕಾರ ಆವರಿಸಿತ್ತು. ಈ ನಿರ್ಗತಿಕನನ್ನು ಗುರುತಿಸಿದರೆ ತನಗೇ ಅವಮಾನವೆಂದು ಆಲೋಚಿಸಿ ಪರಿಚಯವೇ ಇಲ್ಲದವನಂತೆ, "ಯಾರು ನೀನು?" ಎಂದುಬಿಟ್ಟ. "ಅಯ್ಯಾ ದ್ರುಪದ, ಜೀವನದಲ್ಲಿ ಸೋತು ಹೋದೆ. ಮಗನಿಗೆ ಒಕ್ಕುಡುತೆ ಹಾಲಿಗೂ ಬರಗಾಲ. ಅಂದು ಅರ್ಧ ರಾಜ್ಯವನ್ನೇ ಕೊಡುತ್ತೇನೆ ಎಂದವ ನೀನು, ಇಂದು ನನ್ನ ಸಂಸಾರ ಬದುಕಲು ಏನಾದರೂ ಸಹಾಯ ಮಾಡು" ಎಂದು ಗೋಗರೆದ. "ಕ್ಷತ್ರಿಯ ಅರಸ ನಾನೆಲ್ಲಿ? ಬಡ ಬ್ರಾಹ್ಮಣ ನೀನೆಲ್ಲಿ? ನನಗೆ ನಿನ್ನೊಡನೆ ಸ್ನೇಹವೆ? ಹೊಟ್ಟೆಗಿಲ್ಲವೆಂದು ಬೇಡಿದರೆ ಕೊಡಬಹುದಿತ್ತು. ಮಿತ್ರ, ಅರ್ಧರಾಜ್ಯ ಎನ್ನುವ ಉದ್ಧಟತನದ ಮಾತಾಡಿ, ಸಭೆಯಲ್ಲಿ ನನ್ನನ್ನು ಅಗೌರವಿಸಿದ ನಿನ್ನ ಕೊರಳಿಗೆ ಕೈ ಹಾಕಿ ಹೊರದಬ್ಬುತ್ತೇನೆ" ಎಂದು ಅಬ್ಬರಿಸಿದ. ಇವನಿಗೂ ಕೋಪ ಇಮ್ಮಡಿಯಾಗಿತ್ತು. ನಿನ್ನ ತಂದೆಯಿಂದ ತಿರಸ್ಕರಿಸಲ್ಪಟ್ಟು, ಅಡವಿಯ ಪ್ರಾಣಿಗಳ ಪಾಲಾಗಬೇಕಾದ ಶಿಶು ನಿನ್ನನ್ನು ನನ್ನ ತಂದೆ ತಂದು ಸಾಕಿ, ಬೆಳೆಸಿ,ವಿದ್ಯೆ ಕಲಿಸಿದ್ದಕ್ಕೆ ನನಗೆ ಕೊಡುವ ಮರ್ಯಾದೆ ಇದೇ ನಿನ್ನದು? ನಿನ್ನ ಸೊಕ್ಕು ಇಳಿಸುತ್ತೇನೆ ನೋಡುತ್ತಿರು. ಅರ್ಧ ರಾಜ್ಯವಲ್ಲ, ಇಡೀ ಕಾಂಪಿಲ್ಯವನ್ನೇ ಗೆದ್ದು ನಿನ್ನನ್ನು ತಂದು ನನ್ನ ಮಂಚದ ಕಾಲಿಗೆ ಕಟ್ಟದಿದ್ದರೆ ನಾನು ದ್ರೋಣನೇ ಅಲ್ಲ" ಎಂದು ಶಪಥ ಮಾಡಿ ಅಲ್ಲಿಂದ ಹೊರಬಿದ್ದ.
ದ್ರೋಣರಿಗೆ ಹಸ್ತಿನಾವತಿಯ ನಂಟು
ಏನೇ ಶಪಥ ಮಾಡಿದರೂ, ಆ ಸಾಮರ್ಥ್ಯ ತನಗಿದ್ದರೂ ಹೊಟ್ಟೆಗೆ ಬೇಕಾದ ಹಿಟ್ಟಿನ ಚಿಂತೆ ಹಾಗೇ ಉಳಿಯಿತು. ಆಗ ನೆನಪಾದವ ಬಾವನಾದ ಕೃಪಾಚಾರ್ಯ. ಆತ ಹಸ್ತಿನಾವತಿಯ ಕೂಸಾಗಿ ಶಂತನುವಿನಿಂದ ಸಾಕಲ್ಪಟ್ಟು, ಅಲ್ಲಿಯೇ ಆಸ್ಥಾನ ವಿದ್ವಾಂಸನಾಗಿ ಬದುಕು ಕಟ್ಟಿಕೊಂಡಿದ್ದವ. ಹೆಂಡತಿ ಮಗನನ್ನು ಕಟ್ಟಿಕೊಂಡು ಹಸ್ತಿನಾವತಿಯ ಕಡೆಗೆ ಹೊರಟ. ಅರಮನೆಯ ಸಮೀಪದ ಉದ್ಯಾವನಕ್ಕೆ ಬಂದವ ಮಾರ್ಗದ ಆಯಾಸ ಕಳೆಯಲು ವಿಶ್ರಮಿಸುತ್ತ ಕುಳಿತಿದ್ದ. ಹತ್ತಿರದಲ್ಲೆ ಮಕ್ಕಳ ಗದ್ದಲ ಕೇಳಿಸಿತು. ಏನೋ ಅವಘಡ ನಡೆದಂತೆ ಕೂಗುತ್ತಿದ್ದರು. ಐವರು ಪಾಂಡವರೂ, ನೂರು ಕೌರವರೂ ಚೆಂಡಾಟ ಆಡುತ್ತಿದ್ದಾಗ ಆಯ ತಪ್ಪಿ ಅದು ಬಾವಿಯಲ್ಲಿ ಬಿದ್ದು ಹೋಗಿತ್ತು. ತೆಗೆಯುವುದು ಹೇಗೆಂದು ಮಕ್ಕಳು ಪ್ರಲಾಪಿಸುತ್ತಿದ್ದರು. ಸಣಕಲು ಮೈಯ, ಎತ್ತರ ಕಾಯದ, ಕಪ್ಪು ಬಣ್ಣದ ದ್ರೋಣ ಅವರ ಮುಂದೆ ಹೋಗಿ ನಿಂತ. "ನೀವು ಕ್ಷತ್ರಿಯ ಮಕ್ಕಳಲ್ಲವೇ? ಬಾವಿಯಲ್ಲಿ ಬಿದ್ದ ಚೆಂಡನ್ನು ಎತ್ತುವ ವಿದ್ಯೆಯ ಅರಿವು ನಿಮಗಿಲ್ಲವೆ?" ಎಂದು ವಿನೋದ ಮಾಡುತ್ತಾ ಹತ್ತಿರ ಸಿಕ್ಕಿದ ಒಂದು ಮುಷ್ಠಿ ಹುಲ್ಲನ್ನು ಹರಿದ. ಅದಕ್ಕೆ ಅಕ್ಷಯಾಸ್ತ್ರವನ್ನು ಅಭಿಮಂತ್ರಿಸಿ ಬಾವಿಗೆ ಬಿಟ್ಟ. ಆ ಹುಲ್ಲು ಒಂದಕ್ಕೊಂದು ಅಂಟಿಕೊಂಡು ಹಗ್ಗವಾಯಿತು. ಕೆಳಗಡೆ ಚೆಂಡಿಗೆ ತಾಗುತ್ತಲೇ ಹುಲ್ಲಿನ ಮಾಲೆಯನ್ನು ಮೇಲೆಳೆದ. ಚೆಂಡನ್ನು ತೆಗೆದು ಮಕ್ಕಳ ಕೈ ಮೇಲಿಟ್ಟ. ಇದನ್ನೆಲ್ಲ ನೋಡಿ ಹುಡುಗರು ಬೆರಗಾದರು. ಓಡುತ್ತ ಹೋಗಿ ಅಜ್ಜ ಭೀಷ್ಮನಿಗೆ ವರದಿ ಒಪ್ಪಿಸಿದರು.ತಡ ಮಾಡದೇ ಭೀಷ್ಮನೇ ಓಡೋಡಿ ಬಂದ. ಯಾರೋ ಮಹಾ ತಪಸ್ವಿಗಳು ಬಂದಿದ್ದಾರೆಂದು ಊಹಿಸಿದ. ಬಂದು ನೋಡಿದರೆ ದ್ರೋಣಾಚಾರ್ಯ ನಿಂತಿದ್ದ. ನಮಸ್ಕರಿಸಿ ಕುಶಲೋಪರಿ ವಿಚಾರಿಸಿದ. ಆಗಲೇ ದ್ರೋಣನ ಕೀರ್ತಿ ಎಲ್ಲೆಡೆ ಹರಡಿತ್ತು. ಭೀಷ್ಮ ತನ್ನೋಳಗೇ ಒಂದು ಆಲೋಚನೆಗೆ ಬಂದು ಸಂತೋಷಪಟ್ಟ. 'ಕುಲವೇ ಕ್ಷಯವಾಗುವ ಕಾಲ ಬಂತೇ' ಎಂದು ಚಿಂತಿಸುವ ಸಮಯಕ್ಕೆ ನೂರೈವರು ಮೊಮ್ಮಕ್ಕಳು ಮನೆ ತುಂಬಿದ್ದರು. ಕೃಪಾಚಾರ್ಯರಿಂದ ಮೂಲ ಪಾಠ ಮಕ್ಕಳಿಗೆ ಲಭಿಸಿದ್ದರೂ, ಇನ್ನೂ ಹೆಚ್ಚಿನ ವಿದ್ಯೆಯ ಅಗತ್ಯ ಅವರಿಗಿತ್ತು. ಕುಲದ ಕುಡಿಗಳನ್ನು ಗುರುಕುಲಕ್ಕೆ ಕಳುಹಿಸಿ ಕಲಿಸಲಾಗದ ಮೋಹ ಭೀಷ್ಮನನ್ನೂ ಆವರಿಸಿತ್ತು. ಅಯಾಚಿತವಾಗಿ ದೊರೆತ ದ್ರೋಣ~ತನ್ನ ಪಾಲಿನ ದೇವರೆಂದೆ ತಿಳಿದ ಭೀಷ್ಮ.. ಅರಮನೆಯಲ್ಲೇ ಉಳಿದು ಕುಮಾರರಿಗೆ ವಿದ್ಯಾದಾನ ಮಾಡಬೇಕೆಂದು ಪ್ರಾರ್ಥಿಸಿದ. ದ್ರೋಣನಿಗೆ ಬೇಕಾದ್ದು ಇದೇ ಆಗಿತ್ತು. ಕೃಪಾಚಾರ್ಯನಲ್ಲಿ ವಿನಂತಿಸಲು ಹೊರಟವನಿಗೆ ರಾಜಪೀಠವೇ ಭಿನ್ನವಿಸಿ ಆಮಂತ್ರಿಸಿತ್ತು. ಅರಮನೆಯಲ್ಲಿ ಬಿಡಾರ ಹೂಡಿದ ಇವನಿಗೆ ಭೋಗದ ಜೀವನ ತೆರೆದುಕೊಂಡಿತು. ಕ್ಷತ್ರಿಯರ ಸಹವಾಸ, ಅರಸರ ಅನ್ನ, ಕ್ಷಾತ್ರ ಬುಧ್ಧಿಯ ದ್ರೋಣನನ್ನು ರಾಜಸವಾಗಿಯೇ ಉಳಿಸಿತು. ರಾಜಕುಮಾರರಿಗೆ ವಿದ್ಯಾಭ್ಯಾಸ ಪ್ರಾರಂಭವಾಯಿತು. ಎಲ್ಲ ಮಕ್ಕಳ ಪೈಕಿ ಅರ್ಜುನ, ಬಿಲ್ಪಿದ್ಯೆಯಲ್ಲಿ ಅಪಾರ ಆಸಕ್ತ. ಒಮ್ಮೆ ಹೇಳಿದರೆ ಸಾಕು, ಸಾಧಿಸಿ ಒಪ್ಪಿಸುವ ಏಕಪಾಠಿ. ಸಹಜವಾಗಿಯೇ ದ್ರೋಣ ಅವನಲ್ಲಿ ಆಸಕ್ತನಾದ ಬಿಲ್ಗಾರಿಕೆಯ ಸಂಪೂರ್ಣ ರಹಸ್ಯವನ್ನೂ ಕಲಿಸಿದ. ಎಲ್ಲ ಮಂತ್ರಾಸ್ತ್ರಗಳನ್ನೂ ಉಪದೇಶಿಸಿದ. ಗುರುವನ್ನೇ ಮೀರಿಸಬಲ್ಲ ಶಿಷ್ಯನಾದ.
ಗುರುದಕ್ಷಿಣೆ - ದ್ರೋಣನ ಪ್ರತೀಕಾರ
ವಿದ್ಯಾಭ್ಯಾಸದ ಅವಧಿ ಮುಗಿಯಿತು. ಇನ್ನು ನನ್ನಿಂದ ಕಲಿಯುವುದೆಲ್ಲ ಮುಗಿಯಿತು ಮಕ್ಕಳೆ ಎಂದ. ಹಿರಿಯವ ಧರ್ಮರಾಯ ನಮಸ್ಕಾರ ಮಾಡಿ, "ಗುರುಗಳೇ ವಿದ್ಯಾಗುರುಗಳಾದ ನಿಮಗೆ ಯಥಾಸಾಧ್ಯ ದಕ್ಷಿಣೆ ಕೊಡಬೇಕೆಂದು ನಮ್ಮ ಆಸೆ. ತಮ್ಮಿಂದ ಅಪ್ಪಣೆಯಾಗಬೇಕು" ಎಂದು ವಿನಂತಿಸಿದ. ಆಗ ದ್ರೋಣನ ವೈರಬುದ್ಧಿ ಜಾಗ್ರತವಾಯಿತು. "ನೀವು ನಿಜವಾಗಿಯೂ ಗುರುದಕ್ಷಿಣೆ ಸಲ್ಲಿಸುವುದಾದರೆ ಕಾಂಪಿಲ್ಯ ದೇಶದ ದ್ರುಪದನನ್ನು ಸೆರೆ ಹಿಡಿದು ತನ್ನಿ. ಅಗತ್ಯ ಮಾರ್ಗದರ್ಶನಕ್ಕೆ ತಾನಿದ್ದೇನೆ. ಇದು ನಿಮ್ಮ ಸಾಮರ್ಥ್ಯ ಪರೀಕ್ಷೆಗೂ ಆಗುತ್ತದೆ."

ಈತನ ನಿರ್ದೇಶನದಲ್ಲಿ ಹೋದ ರಾಜಕುಮಾರರು ದ್ರುಪದನನ್ನು ಗೆದ್ದೇ ಬಿಟ್ಟರು. ಅರ್ಜುನನೇ ಬಿಲ್ಗಾರಿಕಾ ಚತುರನಾಗಿ ವೈರಿಗಳನ್ನು ಬಡಿದು ದ್ರುಪದನ ಸೆರೆ ಹಿಡಿದು ಎಳೆತಂದ. ಕಾಲ ಬುಡದಲ್ಲಿ ಬಿದ್ದ ಶತ್ರುವನ್ನು ಕಂಡು ದ್ರೋಣನಿಗೆ ಅರ್ಜುನನ ಕುರಿತು ಹೆಮ್ಮೆ, ಶಪಥ ಪೂರೈಸಿಕೊಂಡ ಸಂತೋಷ, ವೈರಿಯನ್ನು ಕಂಡ ಅಣಕ ಒಮ್ಮೆಲೇ ಆವಿರ್ಭವಿಸಿದವು. ಎಡಗಾಲಿನಿಂದ ದ್ರುಪದನನ್ನು ಝಾಡಿಸಿ ತುಳಿದ. "ಆ ದಿನ ನನ್ನನ್ನು ಭಿಕ್ಷುಕನೆಂದೆ ಅಲ್ಲವೇ? ಈ ದಿನ ನೀನೇ ನಿರ್ಗತಿಕ. ನಿನ್ನ ರಾಜ್ಯವೇ ನನ್ನ ಕೈಲಿದೆ. ನಿನ್ನನ್ನು ಕೊಂದು ಕಳೆದರೂ ಕೇಳುವರಿಲ್ಲ. ಸಂಪತ್ತಿನ ಅಹಂಕಾರ ಯಾರಿಗೂ ಒಳ್ಳೆಯದಲ್ಲ. ಆದರೆ ನಿನ್ನ ರಾಜ್ಯ, ಸಂಪತ್ತು ಯಾವುದೂ ನನಗೆ ಬೇಡ. ನನ್ನದಾದ ನಿನ್ನ ರಾಜ್ಯವನ್ನು ನಿನಗೇ ಭಿಕ್ಷೆಯಾಗಿ ಕೊಡುತ್ತಿದ್ದೇನೆ. ಹೋಗಿ ಬದುಕಿಕೋ" ಎಂದು ಅವಮಾನದ ಉದಾರತೆ ತೋರಿ ಬಿಟ್ಟು ಕಳುಹಿಬಿಟ್ಟ.
ದ್ರುಪದನ ದ್ವೇಷ
ಪ್ರತಿಜ್ಞೆಯನ್ನು ತೀರಿಸಿಕೊಂಡ ಸಮಾಧಾನ ದ್ರೋಣನಿಗೆನೊ ಆಯಿತು.ಆದರೆ ದ್ರುಪದ ದ್ವೇಷವನ್ನೇ ಉಸಿರಾಡಲು ತೊಡಗಿದ. ಮಹಾಪರಾಕ್ರಮಿ ಅರ್ಜುನನ ಮೇಲೂ ದ್ರುಪದನ ಕಣ್ಣು ಬಿತ್ತು. ರಾಜ್ಯಕ್ಕೆ ಮರಳಿದವನೇ ಆಡಳಿತವನ್ನು ಮಂತ್ರಿಮಂಡಲೊಪ್ಪಿಸಿ ಕಾಡು ಸೇರಿ ತಪಸ್ಸಿಗೆ ತೊಡಗಿದ. ದ್ರೋಣನನ್ನು ಕೊಲ್ಲಬಲ್ಲ ಒಬ್ಬ ಮಗ, ಅರ್ಜುನನನ್ನು ವರಿಸುವ ಒಬ್ಬಳು ಮಗಳು ಆತನ ಅಪೇಕ್ಷೆಯಾಗಿತ್ತು. ಹಾಗೇ ದೈವಾನುಗ್ರಹವೂ ಆಯಿತು. ದ್ರೃಷ್ಟದ್ಯುಮ್ನ, ದ್ರೌಪದಿ ಮಕ್ಕಳಾಗಿ ಜನಿಸಿದರು. ವಿನೋದವೆಂದರೆ ಇದೇ ದ್ರೃಷ್ಟದ್ಯುಮ್ನ ವಿದ್ಯಾರ್ಜನೆಗೆ ದ್ರೋಣನಲ್ಲಿಗೇ ಬಂದ. ವೈರಭಾವ ತೋರದೇ ಆತನಿಗೆ ವಿದ್ಯೆ ಕಲಿಸಿದ ಆತನ ಗುಣ ಮೆಚ್ಚಬೇಕು. ಕಾಲಾಂತರದಲ್ಲಿ ದ್ರೌಪದಿ ಅರ್ಜುನನ ಮಡದಿಯಾದಳು.
ದ್ವೇಷದಿಂದ ದುರಂತ ಅಂತ್ಯ
ಪಾಂಡವರು ಕೌರವರ ಸಂಬಂಧ ಕೆಟ್ಟು ವೈರಿಗಳಾಗಿ ಕಾದಾಡುವ ಸಮಯ ಬಂತು. ಕುರುಕ್ಷೇತ್ರ ಯುಧ್ಧ ನಿಶ್ಚಯವಾಯಿತು. ದ್ರುಪದ ಪಾಂಡವರ ಮಾವನಾಗಿ ಆ ಕಡೆ ನಿಂತ. ದ್ರೋಣ ಕೌರವನ ಅನ್ನದ ಋಣಕ್ಕೆ ಈ ಕಡೆ ನಿಂತ. ಯುಧ್ಧದ ಹನ್ನೊಂದನೇ ದಿನ ದ್ರೋಣ ಸೇನಾಪತಿ. ಮತ್ತೆ ಪಾಂಚಾಲ ದ್ರುಪದನ ಮೇಲೆ ವೈರ ಮರುಕಳಿಸಿತು. ರಾತ್ರಿ ಕಾಲದಲ್ಲಿ ಅಧರ್ಮ ಯುಧ್ಧವನ್ನೂ ಮಾಡಿ ಸಿಗಲಾರದ ಜಯಕ್ಕೆ ಸಿಟ್ಟಿನಿಂದ ಪಾಂಚಾಲರನ್ನು ಕೊಂದೇ ಕವಚ ಕಳಚುತ್ತೇನೆಂದು ಪ್ರತಿಜ್ಞೆ ಮಾಡುವ ದ್ರೋಣ ಎಂತಹ ಹಠವಾದಿಯಾಗಿರಬೇಡ. ಮರುದಿನ ದ್ರುಪದನ ಸಹಿತಾಗಿ ಆತನ ಸಮಸ್ತ ಸೇನೆಯನ್ನೂ ಕೊಂದು ಕಳೆದ. ಒಂದು ಕಾಲದ ಆತ್ಮೀಯ ಸ್ನೇಹಿತ ದ್ರುಪದ ದ್ರೋಣನ ವೈರಕ್ಕೆ ಮ್ರೃತನಾಗಿ ಹೋದ. ಹದಿನೈದನೇಯ ದಿನ ತನ್ನ ಮಗ ಅಶ್ವತ್ಥಾಮ ಸತ್ತನೆಂಬ ಅಪ್ರೀಯ ವಾರ್ತೆ ಕೇಳಿ ತನ್ನ ರಥದಲ್ಲೇ ಪದ್ಮಾಸನ ಹಾಕಿ ಪ್ರಾಯೋಪವೇಶಕ್ಕೆ (ಮರಣವನ್ನು ಆಮಂತ್ರಿಸಿ ಧ್ಯಾನಮಗ್ನನಾಗುವುದು) ಕುಳಿತ. ತಂದೆ ದ್ರುಪದನನ್ನು ಕೊಂದುದಕ್ಕೆ ಸೇಡನ್ನು ಕಾಯುತ್ತಿದ್ದ ದ್ರೃಷ್ಟದ್ಯುಮ್ನ ಗುರುಗಳು ಎಂಬುದನ್ನೂ ನೋಡದೇ ದ್ರೋಣನ ರಥಕ್ಕೆ ಜಿಗಿದು ಆತನ ತಲೆ ಕಡಿದ. ಮಿತ್ರರಿಬ್ಬರ ಅಂತ್ಯವಾಯಿತು.ದ್ರೋಣ ಪುತ್ರ ಅಶ್ವತ್ಥಾಮ ದ್ರೃಷ್ಟದ್ಯುಮ್ನನ ಮೇಲೆ ಹಗೆ ಸಾಧಿಸುವ ಸಮಯ ಕಾಯುತ್ತಿದ್ದ.
ಹದಿನೆಂಟು ದಿನಗಳ ಯುಧ್ಧ ಮುಗಿದು ಸುಯೋಧನ ತೊಡೆ ಮುರಿದು ಬಿದ್ದು ಸಾಯುವ ಸ್ಥಿತಿಯಲ್ಲಿದ್ದ. ಆತನ ಬಳಿ ಹೋಗಿ ಪಾಂಡವರನ್ನು ತಾನು ಕೊಲ್ಲುವುದಾಗಿ ಭರವಸೆ ಕೊಟ್ಟು ಒಪ್ಪಿಗೆ ಪಡೆದು ಬಂದ ಅಶ್ವತ್ಥಾಮ. ಯುಧ್ಧ ಮುಗಿಸಿ ಬಿಡದಿಯಲ್ಲಿ ಮಲಗಿದ ಪಾಂಡವರನ್ನು ಕೊಲ್ಲುವುದು ಹೇಗೆಂದು ಚಿಂತಿಸುತ್ತ ಕುಳಿತ. ಅದೇ ಸಮಯಕ್ಕೆ ಅಲ್ಲಿರುವ ದೊಡ್ಡ ಮರದ ಮೇಲೆ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಕಾಗೆಗಳ ಮೇಲೆ ಗೂಬೆಯೊಂದು ಎರಗಿ ತನಗೆ ಬೇಕಸ್ಟನ್ನು ಹೊತ್ತುಕೊಂಡು ಹೋಯಿತು. ರಾತ್ರಿ ಕಣ್ಣು ಕಾಣದ ಅಸಹಾಯಕ ಕಾಗೆಗಳು ಅರಚಾಡಿದವು. ಇದೇ ಪ್ರೇರಣೆಯಾಗಿ ಆ ರಾತ್ರಿಯನ್ನೇ ತನ್ನ ಕಾರ್ಯಸಾಧನೆಗೆ ಬಳಸುವ ತೀರ್ಮಾನ ಮಾಡಿದ. ಜಯವನ್ನು ದಕ್ಕಿಸಿಕೊಂಡು ನೆಮ್ಮದಿಯಿಂದ ನಿದ್ರಿಸುತ್ತಿದ್ದ ಪಾಂಡವ ಸೇನಾಪತಿ ದ್ರೃಷ್ಟದ್ಯುಮ್ನನೇ ಮೊದಲು ಅಶ್ವತ್ಥಾಮನೇ ದೊಂದಿಯ ಬೆಳಕಲ್ಲಿ ಕಂಡ. ನನ್ನ ತಂದೆಯನ್ನು ಅಸಹಾಯಕ ಸ್ಥಿತಿಯಲ್ಲಿ ಕೊಂದೆಯಾ? ನೋವಿನ ಅರಿವಾಗದೇ ಸತ್ತ ತಂದೆಗೆ ಪ್ರತಿಯಾಗಿ ನೀನು ನರಳಿ ನರಳಿ ಸಾಯುವಂತೆ ಮಾಡುತ್ತೇನೆಂದು ತೀರ್ಮಾನಿಸಿದ. ಬಿಲ್ಲಿಗೆ ಬಿಗಿದ ಹಗ್ಗವನ್ನು ಬಿಚ್ಚಿ ಉರುಳು ಮಾಡಿ ದ್ರೃಷ್ಟದ್ಯುಮ್ನನ ಕುತ್ತಿಗೆಗೆ ಬಿಗಿದ, ದ್ರೃಷ್ಟದ್ಯುಮ್ನನಿಗೆ ಎಚ್ಚರಾಯಿತು. ನಿದ್ರೆಯಲ್ಲಿದ್ದಾಗಲೇ ಮೃತ್ಯು ಬಂದು ಕೊರಳೇರಿತ್ತು. ನಿಧಾನವಾಗಿ ಉರುಳನ್ನು ಬಿಗಿದು ಬಿಗಿದು ಅವನನ್ನು ಕೊಂದು ಮುಗಿಸಿದ.
ಹೊಟ್ಟೆಗೆ ಹಾಲಿಲ್ಲದ ಕಾರಣಕ್ಕೆ ಶುರುವಾದ ಘಟನೆ ಎರಡು ಕುಟುಂಬಗಳ ಮಧ್ಯೆ ಎಂತಹಾ ಕೊಲೆಗಳನ್ನು ಮಾಡಿಸಿತು. ದ್ರೋಣ ಬ್ರಾಹ್ಮಣ್ಯವನ್ನೇ ನೆಚ್ಚಿದ್ದರೂ , ದ್ರುಪದ ವೈರವನ್ನೇ ಮರೆತಿದ್ದರೂ ಇಂತಹ ವಿಪರ್ಯಾಸಗಳು ನಡೆಯುತ್ತಿರಲಿಲ್ಲ ಅಲ್ಲವೇ?....








Comments