ಹಿರಣ್ಯಾಕ್ಷ ವಧೆ
- Asha Satish

- Jan 26
- 2 min read
ಒಮ್ಮೆ ಬ್ರಹ್ಮನು ಸೃಷ್ಟಿ ಕಾರ್ಯದಲ್ಲಿ ತೊಡಗಿದ್ದಾಗ ಭೂಮಿಯು ನೀರಿನಲ್ಲಿ ಮುಳುಗಿ ರಸಾತಳಕ್ಕೆ ಹೋಗುತ್ತದೆ. ಇದರಿಂದ ಚಿಂತೆಗೀಡಾದ ಬ್ರಹ್ಮ ದೇವರು, 'ಸರ್ವಶಕ್ತನಾದ ಶ್ರೀಹರಿಯಿಂದ ಮಾತ್ರ ಭೂದೇವಿಯ ರಕ್ಷಣೆ ಸಾಧ್ಯ... ಇದಕ್ಕೆ ಶ್ರೀಹರಿಯೇ ಪರಿಹಾರ ಸೂಚಿಸಬೇಕು' ಎಂದು ಯೋಚಿಸುತ್ತಾರೆ. ಹೀಗೆ ಯೋಚಿಸುತ್ತಿರುವಂತೆಯೇ ಬ್ರಹ್ಮದೇವರ ಮೂಗಿನ ಹೊಳ್ಳೆಯಿಂದ ಹೆಬ್ಬೆರಳಿನ ಗಾತ್ರದ ಒಂದು ಹಂದಿಯ ಮರಿಯು ಹೊರಬರುತ್ತದೆ. ನೋಡ ನೋಡುತ್ತಿರುವಂತೆಯೇ ಕ್ಷಣಾರ್ಧದಲ್ಲಿ ಚಿಕ್ಕದಾದ ಹಂದಿಮರಿಯು ದೊಡ್ಡ ಆನೆಯ ಗಾತ್ರಕ್ಕೆ ಸಮವಾಗಿ ಬೆಳೆದುಬಿಡುತ್ತದೆ. ಅದನ್ನು ನೋಡಿದ ದೇವತೆಗಳು ಹಾಗೂ ಮರೀಚಿ ಸನಕಾದಿ ಮುನಿಗಳು, ತರ್ಕಿಸಿ, ಇದು ಭಗವಂತನ ಲೀಲೆ ಎಂಬುದನ್ನು ಗ್ರಹಿಸುತ್ತಾರೆ.
ಭೂಮಿಯ ರಕ್ಷಣೆಗಾಗಿ ದೊಡ್ಡದಾಗಿ ಘರ್ಜಿಸುತ್ತ ಆ ವರಾಹರೂಪಿ ಶ್ರೀಹರಿಯು ಸಮುದ್ರಕ್ಕೆ ಜಿಗಿಯುತ್ತಾನೆ. ಆ ರಭಸಕ್ಕೆ ಸಮುದ್ರವು ಭೋರ್ಗರೆದು ಗುಡುಗು ಸಿಡಿಲುಗಳಂತಹ ದೊಡ್ಡದಾದ ಶಬ್ದ ಉಂಟಾಗುತ್ತದೆ. ತನ್ನ ಚೂಪಾದ ಗೊರಸುಗಳಿಂದ ನೀರನ್ನು ಸೀಳುತ್ತಾ ರಸಾತಳವನ್ನು ತಲುಪಿ, ನೀರಿನಲ್ಲಿ ಮುಳುಗಿದ್ದ ಭೂಮಿಯನ್ನು ತನ್ನ ಕೋರೆ ದಾಡೆಗಳಿಂದ ಎತ್ತಿಕೊಂಡು ನೀರಿನಿಂದ ಮೇಲಕ್ಕೆ ಬರುತ್ತಾನೆ.
ಇತ್ತ ಸನಕಾದಿಗಳು ಜಯ ವಿಜಯರಿಗಿತ್ತ ಶಾಪದ ಪರಿಣಾಮದಿಂದ ದಿತಿದೇವಿಯ ಗರ್ಭದಿಂದ ಹುಟ್ಟಿದ ಘೋರರೂಪಿ ಶಿಶುಗಳಿಗೆ ಹಿರಣ್ಯ ಕಶಿಪು ಹಾಗೂ ಹಿರಣ್ಯಾಕ್ಷ ಎಂಬುದಾಗಿ ನಾಮಕರಣ ಮಾಡುತ್ತಾರೆ. ಹುಟ್ಟುವಾಗಲೇ ಕ್ರೂರವಾದ ದೇಹವನ್ನು ಹೊಂದಿದ್ದ ಇವರು ಬಹಳ ಬೇಗನೆ ಪರ್ವತದಂತೆ ದೊಡ್ಡ ಶರೀರಿಗಳಾಗಿ ಬೆಳೆದು ನಿಂತುಬಿಟ್ಟಿದ್ದರು. ಅವರ ದುಷ್ಟ ಪ್ರವೃತ್ತಿಯಿಂದ ಲೋಕವನ್ನು ಭಯಭೀತಗೊಳಿಸಿದ್ದರು. ನೆಲದ ಮೇಲೆ ಒಂದೊಂದು ಹೆಜ್ಜೆಯನ್ನು ಇಟ್ಟರೆ ಭೂಮಿಯು ನಡುಗುತ್ತಿತ್ತು. ತಮಗೆ ಯಾರಿಂದಲೂ ಮರಣ ಬಾರದಿರಲೆಂದು ಬ್ರಹ್ಮ ದೇವರನ್ನು ಕುರಿತು ತಪಸ್ಸನ್ನು ಆಚರಿಸಿ, ವರ ಪಡೆದಿದ್ದರು. ಆ ವರದ ಬಲದಿಂದ ಮೂರು ಲೋಕಗಳನ್ನು ವಶಪಡಿಸಿಕೊಂಡು ಅಹಂಕಾರದಿಂದ ಮೆರೆಯುತ್ತಿದ್ದರು.
ಒಂದು ದಿನ ಹಿರಣ್ಯಾಕ್ಷನು ಗದೆಯನ್ನು ಎತ್ತಿಕೊಂಡು ಯುದ್ಧಕ್ಕಾಗಿ ಹಂಬಲಿಸುತ್ತಾ ಸ್ವರ್ಗ ಲೋಕಕ್ಕೆ ಹೋಗುತ್ತಾನೆ. ಅಪಾರವಾದ ಮನೋಬಲ, ದೇಹಬಲ ಮತ್ತು ಬ್ರಹ್ಮದೇವರ ವರಬಲಗಳಿಂದ ಉನ್ಮತ್ತನಾಗಿದ್ದ ಅವನನ್ನು ಕುರಿತು ಭಯಗೊಂಡ ದೇವತೆಗಳು, ಭಯಗ್ರಸ್ತರಾಗಿ ಅವಿತುಕೊಳ್ಳುತ್ತಾರೆ. ತನಗೆ ಅಂಜಿ ಅವಿತುಕೊಂಡಿರುವ ದೇವತೆಗಳ ಕುರಿತು ಹೀಯಾಳಿಸುತ್ತಾ ಹಿರಣ್ಯಾಕ್ಷನು ಭಯಂಕರವಾಗಿ ಘರ್ಜಿಸತೊಡಗುತ್ತಾನೆ. ಅಲ್ಲಿಂದ ಹಿಂದಿರುಗಿ ಜಲ ಕ್ರೀಡೆಯನ್ನು ಆಡುವ ಹಂಬಲದಿಂದ ಸಮುದ್ರದೊಳಗೆ ನುಗ್ಗುತ್ತಾನೆ. ಅವನು ಸಮುದ್ರದೊಳಗೆ ಹೆಜ್ಜೆ ಇಟ್ಟ ಅಬ್ಬರಕ್ಕೆ ಜಲಚರ ಜೀವಿಗಳೆಲ್ಲ ತಬ್ಬಿಬ್ಬಾಗಿ ಹೆದರಿ ದೂರಕ್ಕೆ ಓಡಿ ಹೋಗುತ್ತವೆ. ಹಿರಣ್ಯಾಕ್ಷನು ಅನೇಕ ವರ್ಷಗಳ ಕಾಲ ಆ ಸಮುದ್ರದಲ್ಲೇ ವಿಹರಿಸುತ್ತಾ ಇರುತ್ತಾನೆ. ಅಲ್ಲಿ ಯಾರೂ ತನ್ನನ್ನು ಎದುರಿಸದೆ ಇದ್ದಾಗ ವಾಯು ವೇಗದಿಂದ ಮೇಲಕ್ಕೆ ಏಳುತ್ತಿದ್ದ ಪ್ರಚಂಡ ಅಲೆಗಳನ್ನೇ ತನ್ನ ಉಕ್ಕಿನ ಗದೆಯಿಂದ ಅಪ್ಪಳಿಸುತ್ತಾ, ಸಮುದ್ರದಾಳದಲ್ಲಿ ಸಂಚರಿಸುತ್ತ ವರುಣದೇವರ ರಾಜಧಾನಿಯಾದ ವಿಭಾವರಿಪುರಿಯನ್ನು ತಲುಪುತ್ತಾನೆ. ಅಲ್ಲಿ ಪಾತಾಳಲೋಕದ ಅಧಿಪತಿಯು ಜಲಚರಗಳ ಒಡೆಯನು ಆದ ವರುಣದೇವರನ್ನು ನೋಡಿ ಅವರನ್ನು ಗೇಲಿ ಮಾಡುತ್ತಾ ಹೀಯಾಳಿಸುತ್ತಾನೆ. ಇದರಿಂದ ನೊಂದ ವರುಣ ದೇವರು ತಮ್ಮ ಕೋಪವನ್ನು ನುಂಗಿ "ಎಲೈ ದೈತ್ಯನೇ! ನಿನ್ನಲ್ಲಿ ಯುದ್ಧ ಮಾಡುವ ಅಭಿಲಾಷೆ ನನಗಿಲ್ಲ. ನಿನ್ನಂತವನನ್ನು ನಿಗ್ರಹಿಸಲು ಪರಮಪುರುಷ ಶ್ರೀಮನ್ನಾರಾಯಣನೇ ಸಮರ್ಥನು. ಅವನಿಂದಲೇ ನಿನ್ನ ಗರ್ವವೂ ಇಳಿಯುತ್ತದೆ." ಎಂದು ಹೇಳುತ್ತಾನೆ.
ವರುಣ ದೇವರ ಈ ಮಾತುಗಳನ್ನು ಕೇಳಿದ ಹಿರಣ್ಯಾಕ್ಷನು, 'ನನ್ನನ್ನು ಸೋಲಿಸುವ ಅಥವಾ ನನಗೆ ಸರಿಸಮನಾಗಿ ನಿಲ್ಲುವ ಆ ಮಹಾವೀರ ಹರಿಯು ಎಲ್ಲಿದ್ದಾನೆ, ಅಲ್ಲಿಗೇ ಹೋಗಿ ಅವನನ್ನು ಮಣಿಸುತ್ತೇನೆ' ಎಂದು ಭಾವಿಸುತ್ತಾ ರಭಸದಿಂದ ರಸಾತಳವನ್ನು ಪ್ರವೇಶಿಸುತ್ತಾನೆ. ಅಲ್ಲಿ ಭಗವಂತನು ವರಾಹ ರೂಪದಿಂದ ಭೂಮಿಯನ್ನು ತನ್ನ ಕೋರೆ ದಾಡೆಗಳ ಮೇಲೆ ಇರಿಸಿಕೊಂಡು ಮೇಲಕ್ಕೆ ಬರುತ್ತಿರುವುದನ್ನು ನೋಡುತ್ತಾನೆ ಅದನ್ನು ನೋಡಿ ಗಹಗಹಿಸಿ ನಗುತ್ತಾ, 'ಈ ಕಾಡಿನ ಪಶು ನನಗೆ ಇದಿರೇ?' ಎಂಬ ಭ್ರಮೆಯಿಂದ, 'ಎಲವೋ ಮೂಢ! ಇತ್ತ ಬಾ, ಈ ಭೂಮಿಯನ್ನು ಬಿಟ್ಟುಬಿಡು ಇದನ್ನು ವಿಶ್ವಕರ್ತನಾದ ಬ್ರಹ್ಮನು ರಸಾತಳದಲ್ಲಿ ವಾಸಿಸುವ ನಮ್ಮ ವಶಕ್ಕೆ ಒಪ್ಪಿಸಿದ್ದಾನೆ. ನನ್ನ ಕಣ್ಣೆದುರು ನೀನು ಭೂಮಿಯನ್ನು ಎತ್ತಿಕೊಂಡು ಹೋಗಲಾಗದು. ಮಾಯೆಯಿಂದ ಮೋಸದಿಂದ ದೈತ್ಯರನ್ನು ಜಯಿಸುವುದಷ್ಟೇ ನಿಮಗೆ ಸಾಧ್ಯ. ಅದನ್ನು ಬಿಟ್ಟ ಯಾವ ಸಾಮರ್ಥ್ಯವು ದೇವತೆಗಳಾದ ನಿಮಗಿಲ್ಲ. ಇಂದು ನಿನ್ನನ್ನು ಮುಗಿಸಿ, ದೈತ್ಯರ ದುಃಖವನ್ನು ದೂರ ಮಾಡುತ್ತೇನೆ. ನಿನ್ನನ್ನೇ ಮುಗಿಸಿದರೆ ನಿನ್ನನ್ನು ಆರಾಧಿಸುವ ದೇವತೆಗಳಿಗೂ, ಋಷಿಗಳಿಗೂ ಯಾವ ಬೆಂಬಲವಿಲ್ಲದೆ ತಾವಾಗಿಯೇ ನಾಶವಾಗಿ ಹೋಗುತ್ತಾರೆ" ಎಂದು ಭಗವಂತನನ್ನು ಹೀಯಾಳಿಸುತ್ತಾ ಆಕ್ರಮಣಕ್ಕೆ ಮುಂದಾಗುತ್ತಾನೆ.

ಇದನ್ನು ನೋಡಿದ, ಶ್ರೀಹರಿಯ ಕೋರೆದಾಡೆಯನ್ನು ಆಶ್ರಯಿಸಿ ನಿಂತ ಭೂದೇವಿಯು, ಭಯದಿಂದ ನಡುಗಲಾರಂಭಿಸುತ್ತಾಳೆ. ಅದನ್ನು ಅರಿತ ಶ್ರೀಹರಿಯು ಭೂದೇವಿಯನ್ನು ನೀರಿನಿಂದ ಮೇಲಕ್ಕೆತ್ತಿ ಯೋಗ್ಯವಾದ ಸ್ಥಾನದಲ್ಲಿ ಇರಿಸಿ ಅದರಲ್ಲಿ ತನ್ನ ಆಧಾರ ಶಕ್ತಿಯನ್ನು ತುಂಬಿ ಸ್ಥಿರವಾಗಿರಿಸುತ್ತಾನೆ. ಭೂದೇವಿಯು ಶ್ರೀಹರಿಯ ವಶವಾಗುತ್ತಿರುವುದನ್ನು ನೋಡಿ ಸಹಿಸಲಾಗದ ಹಿರಣ್ಯಾಕ್ಷನು ಕ್ರೋಧದಿಂದ ಶ್ರೀಹರಿಯ ಮೇಲೆ ತನ್ನ ಗದೆಯಿಂದ ಪ್ರಹಾರ ಮಾಡಲು ತೊಡಗುತ್ತಾನೆ. ಶ್ರೀಹರಿಯು ಕೂಡ ಹಿರಣ್ಯಾಕ್ಷನ ಮೇಲೆ ಅಷ್ಟೇ ಪ್ರಬಲವಾದ ಹೊಡೆತವನ್ನು ನೀಡುತ್ತಾ ಪರಸ್ಪರ ಭಯಂಕರವಾದ ಕದನ ಏರ್ಪಡುತ್ತದೆ. ಈ ಸಮಯದಲ್ಲಿ ಬ್ರಹ್ಮಾದಿ ದೇವತೆಗಳು ಶ್ರೀಹರಿಯನ್ನು ಕುರಿತು, "ಸ್ವಾಮಿ ಈ ದುಷ್ಟ ದೈತ್ಯನು ನನ್ನಿಂದ ಪಡೆದ ವರಬಲದಿಂದ ಅತ್ಯಂತ ಪ್ರಬಲನಾಗಿಬಿಟ್ಟಿದ್ದಾನೆ. ಲೋಕದ ಸಾಧು ಸಜ್ಜನರಿಗೂ ಗೋ ಬ್ರಾಹ್ಮಣರಿಗೂ ದೇವತೆಗಳಿಗೂ ನಿರಪರಾಧಿಗಳಿಗೂ ತೊಂದರೆಯನ್ನುಂಟು ಮಾಡುತ್ತಿದ್ದಾನೆ ಈ ಲೋಕಕಂಟಕನನ್ನು ನೀನಲ್ಲದೆ ಮತ್ಯಾರೂ ಸಂಹರಿಸಲು ಸಾಧ್ಯವಿಲ್ಲ. ಸಂಧ್ಯಾ ಸಮಯ ಬಂದರೆ ಈತನ ಶಕ್ತಿಯು ಇಮ್ಮಡಿಯಾಗುವುದು, ಆದ ಕಾರಣ ಇವನನ್ನು ಸಂಹರಿಸಲು ಇದೇ ಯೋಗ್ಯವಾದ ಸಮಯ ಇನ್ನು ತಡಮಾಡಬೇಡ" ಎಂದು ಪ್ರಾರ್ಥಿಸುತ್ತಾರೆ.
ಈ ಮಾತುಗಳನ್ನು ಕೇಳಿದ ಕೂಡಲೇ ಶ್ರೀಹರಿಯು ತನ್ನ ಸುದರ್ಶನದಿಂದ ಅಸುರಿ ಮಾಯೆಯನ್ನು ನಾಶಗೊಳಿಸಿ ಹಿರಣ್ಯಾಕ್ಷನನ್ನು ಬಲವಾಗಿ ಹೊಡೆಯುತ್ತಾನೆ. ಆ ಏಟಿಗೆ ದುಷ್ಟ ಹಿರಣ್ಯಾಕ್ಷ ರಕ್ತವನ್ನು ಕಾರಿ ತನ್ನ ಪ್ರಾಣವನ್ನು ಬಿಡುತ್ತಾನೆ. ಬ್ರಹ್ಮಾದಿ ದೇವತೆಗಳು ಆ ದುಷ್ಟ ದೈತ್ಯನ ಮರಣದಿಂದ ನಿರಾತಂಕಗೊಂಡು ಶ್ರೀಹರಿಯನ್ನು ಸ್ತುತಿಸುತ್ತಾರೆ.








Comments