top of page

ತಾರ್ಕ್ಷೀಯ ಮರಣ - ವಪುವಿನ ಶಾಪ ವಿಮೋಚನೆ

ಶಾಪಗ್ರಸ್ತ ವಪುವು ತಾರ್ಕ್ಷೀ ಎಂಬ ನಾಮಧೇಯದ ಪಕ್ಷಿಣಿಯಾಗಿ ಜನಿಸಿದಳು ಎಂಬಲ್ಲಿಯವರೆಗಿನ ಕಥೆಯನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ! ತಾರ್ಕ್ಷೀಯ ಮುಂದಿನ ಜೀವನದ ಕಥೆಯನ್ನು ಈ ಸಂಚಿಕೆಯಲ್ಲಿ ನೋಡೋಣ.


ಮಂದಪಾಲ‌ ಎಂಬ ಬ್ರಾಹ್ಮಣನಿಗೆ ನಾಲ್ವರು ಪುತ್ರರಿದ್ದರು. ಅವರಲ್ಲಿ ಜರಿತಾರಿ ಎಂಬವನು ಹಿರಿಯವನು ಹಾಗೂ ದ್ರೋಣ ಎಂಬವನು ಕಿರಿಯವನು. ಅವರೆಲ್ಲರೂ ಅತ್ಯಂತ ಮೇಧಾವಿಗಳಾಗಿದ್ದರು. ವೇದ ವೇದಾಂಗ ಧರ್ಮಗಳನ್ನು ತಿಳಿದಿದ್ದ ದ್ರೋಣನು ಕಂಧರನ ಅನುಮತಿಯನ್ನು ಪಡೆದು ಪರಮಸುಂದರಿಯಾದ ತಾರ್ಕ್ಷೀಯನ್ನು ಮದುವೆಯಾದನು. ಕೆಲವು ದಿವಸಗಳ ನಂತರ ತಾರ್ಕ್ಷೀಯು ಗರ್ಭವನ್ನು ಧರಿಸಿದಳು. ಗರ್ಭ ಧರಿಸಿ ಏಳು ಮಾಸಗಳು ಕಳೆದ ಸಮಯದಲ್ಲಿ ಅವಳು ಒಂದು ದಿನ ಕುರುಕ್ಷೇತ್ರಕ್ಕೆ ಹೋದಳು. ಆ ಸಮಯದಲ್ಲಿ ಕೌರವರು ಪಾಂಡವರ ನಡುವೆ ಮಹಾಭಾರತ ಸಂಗ್ರಾಮ ನಡೆಯುತ್ತಿತ್ತು. (ಯಾವುದು ನಡೆಯಬೇಕೋ ಅದು ಅವಶ್ಯವಾಗಿ ನಡೆದೇ ತೀರುತ್ತದೆ! ಶಾಪ ಪಡೆದ ವಪುವು ತಾರ್ಕ್ಷೀಯಾಗಿ ಜನಿಸಿದವಳು ಗರ್ಭವತಿಯಾಗಿ ಕುರುಕ್ಷೇತ್ರಕ್ಕೆ ಯುದ್ಧದ ಸಮಯದಲ್ಲಿ ಬಂದಳು) ಇದು ವಿಧಿಪ್ರೇರಿತವಲ್ಲದೇ ಮತ್ತೇನು?!


ಹೀಗೆ ಯುದ್ಧಭೂಮಿಗೆ ತೆರಳಿದ ತಾರ್ಕ್ಷೀಯು ಒಂದು ರಥದ ಮಧ್ಯಭಾಗವನ್ನು ಹೊಕ್ಕು ಕುಳಿತಳು. ದೇವ ದಾನವ ಯುದ್ಧದಂತೆ ಭಯಂಕರವಾಗಿ ನಡೆಯುತ್ತಿದ್ದ ಆ ಯುದ್ಧವನ್ನು, ಭೂಮಿಯ ರಾಜರು ಪ್ರಯೋಗಿಸುತ್ತಿದ್ದ ಅನೇಕ ರೀತಿಯ ಅಸ್ತ್ರವನ್ನು ನೋಡಿದಳು. ಭಗದತ್ತ ಹಾಗೂ ಅರ್ಜುನನ ನಡುವೆ ನಡೆಯುತ್ತಿದ್ದ ಯುದ್ಧವನ್ನು ನೋಡಿದಳು.


ಆ ಸಮಯಕ್ಕೆ ಪಾರ್ಥನ ಗಾಂಢೀವದಿಂದ ಬಿಡಲ್ಪಟ್ಟ, ಕೃಷ್ಣ ಸರ್ಪದಂತೆ ಕಪ್ಪಗಿದ್ದ ಭಲ್ಲಾಯುಧವು ತಾರ್ಕ್ಷಿಯ ಹೊಟ್ಟೆಯನ್ನು ಸೀಳಿತು. ಅಲ್ಲಿಗೆ ತಾರ್ಕ್ಷಿಯಾಗಿದ್ದ ವಪುವಿನ ಶಾಪ ವಿಮೋಚನೆಯಾದಂತಾಯಿತು. ಪಕ್ಷಿಣಿಯ ಹೊಟ್ಟೆಯನ್ನು ಸೀಳಲು ಅವಳ‌ ಹೊಟ್ಟೆಯೊಳಗಿದ್ದ, ಆಯಸ್ಸು ಇನ್ನೂ ಉಳಿದಿದ್ದ 4‌ ಮೊಟ್ಟೆಗಳು, ಹತ್ತಿಯ ಮೇಲೆ ಬಿದ್ದಂತೆ ಏನೂ ಅಪಾಯವಿಲ್ಲದೇ... ರಕ್ತ, ಮಾಂಸ, ಮಜ್ಜೆಗಳಿಂದ ಮೆತ್ತಗಾಗಿದ್ದ ನೆಲದ ಮೇಲೆ ಬಿದ್ದವು. ಅದೇ ಸಮಯಕ್ಕೆ ಸರಿಯಾಗಿ, ಭಗದತ್ತನ ಸುಪ್ರತೀಕವೆಂಬ ಆನೆಯ ಕೊರಳಿನ ಘಂಟೆಯೂ ಬಾಣದಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದು, ಮೊಟ್ಟೆಗಳನ್ನು ಸುತ್ತುವರೆದು ಮುಚ್ಚಿತು. ಇದು ವಿಧಿಪ್ರೇರಿತವಲ್ಲದೇ ಮತ್ತೇನು?!


ಭಗದತ್ತನು ಅಳಿದ ನಂತರವೂ ಅನೇಕ ಸಮಯ ಯುದ್ಧ ಮುಂದುವರೆಯಿತು. ಘಂಟೆಯಿಂದ ಸುರಕ್ಷಿತವಾಗಿದ್ದ ಆಮೇಲೆ ಯುದ್ಧ ಮುಗಿದ ನಂತರ ಧರ್ಮರಾಯನು ಧರ್ಮಸೂಕ್ಷ್ಮಗಳ ಕುರಿತು ಶರಶಯ್ಯೆಯಲ್ಲಿದ್ದ ಭೀಷ್ಮರ ಬಳಿ ಹೋದನು. ಅದೇ ಸಮಯಕ್ಕೆ ಸರಿಯಾಗಿ ಯಾವ ಸ್ಥಳದಲ್ಲಿ ಪಕ್ಷಿಯ‌ ಮೊಟ್ಟೆಗಳು ಇದ್ದವೋ ಅದೇ ಸ್ಥಳಕ್ಕೆ ಬ್ರಾಹ್ಮಣಶ್ರೇಷ್ಠರಾದ ಶಮೀಕವರ್ಯರು ಬಂದರು. ಬಾಲ್ಯಾವಸ್ಥೆಯ ನಿಮಿತ್ತವಾಗಿ ಸ್ಫುಟವಾಗಿ ಮಾತಾಡುವ ಶಕ್ತಿಯಿಲ್ಲದೇ ಚೀಚೀಕೂ ಎಂದು ಕೂಗುತ್ತಿದ್ದ ಶಬ್ದವನ್ನು ಆಲಿಸಿದರು. ಅದರಿಂದ ಅಚ್ಚರಿಗೊಂಡು, ತಮ್ಮನ್ನು‌ ಅನುಸರಿಸಿ ಬರುತ್ತಿದ್ದ ತಮ್ಮ ಶಿಷ್ಯರೊಂದಿಗೆ ಆ ಘಂಟೆಯನ್ನು ಎಳೆದು ತೆಗೆದು ಅದರೊಳಗಿರುವ, ಇನ್ನೂ ರೆಕ್ಕೆ ಬಲಿಯದೇ ಇರುವ, ತಂದೆತಾಯಿಗಳಿಂದ ವಿಯೋಗ ಹೊಂದಿದ ಶಿಶುಪಕ್ಷಿಗಳನ್ನು ಕಂಡರು.


ಅದನ್ನು ಕಂಡು ಅಚ್ಚರಿಗೊಂಡು ತಮ್ಮ‌ನ್ನು ಅನುಸರಿಸಿ ಬರುತ್ತಿದ್ದ ಬ್ರಾಹ್ಮಣರನ್ನು ಕುರಿತು ಹೇಳಿದರು, "ದ್ವಿಜೋತ್ತಮರೇ! ನೋಡಿ!! ಈ ಹಿಂದೆ ದೇವ ದಾನವ ಯುದ್ಧದಲ್ಲಿ ದಾನವರು ಓಡಿ ಹೋಗುವಾಗ, ದೈತ್ಯಗುರು‌ ಶುಕ್ರಾಚಾರ್ಯರು ದಾನವರ ಕುರಿತು ಹೇಳಿದ ಮಾತುಗಳು ಸತ್ಯವಾಗಿ ಗೋಚರಿಸುತ್ತದೆ. ' ದಾನವ ವೀರರೇ! ಹೇಡಿಗಳ ಹಾಗೆ ಓಡಬೇಡಿ!! ಯಾವ ಜೀವಿಯ ಆಯಸ್ಸು ಮುಗಿದಿಲ್ಲವೋ ಅವರು ಹೇಗೂ ಸಾಯಲಾರರು. ಆಯಸ್ಸು ಮುಗಿದ ಮೇಲೆ ಪ್ರತಿಯೊಂದು ಜೀವಿಯೂ ಮರಣವನ್ನು ಎದುರಿಸಲೇಬೇಕು. ಯುದ್ಧದಲ್ಲಿ ಶತ್ರುವನ್ನು ಎದುರಿಸಿ ಸಾಯದಿದ್ದರೂ, ವಯೋಸಹಜವಾಗಿ ಸಾಯಬಹುದು, ಅಲ್ಲವೋ ಅನೇಕರು ಮನೆಯಲ್ಲಿಯೇ ಸಾಯುತ್ತಾರೆ, ಕೆಲವರು ಅನ್ನ ಪಾನಗಳನ್ನು ಸೇವಿಸುವಾಗ ಸಾಯುತ್ತಾರೆ. ಹಾಗಾಗಿ ಸಾವು ಎಂಬುದು ವಿಧಿಲಿಖಿತ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅದೇ ಆಯಸ್ಸು ಮುಗಿಯದಿದ್ದರೇ ಏನೇ ಆದರೂ ಸಾವು ಹತ್ತಿರ ಬರಲಾರದು. ಒಮ್ಮೆ ಇಂದ್ರನು ಶಂಬರಾಸುರನನ್ನು ವಜ್ರಾಯುಧದಿಂದ ಕೊಲ್ಲಲು ಮುಂದಾದಾಗ, ಅವನ ಆಯಸ್ಸು ಇನ್ನೂ ಇದ್ದದ್ದರಿಂದ, ಕೇವಲ ಅವನ ಎದೆಯನ್ನು ಮಾತ್ರ ಘಾಸಿಗೊಳಿಸಿತು. ಅದೇ ಕಾಲ ಬಂದಾಗ ಅದೇ ಇಂದ್ರನು ಅದೇ ವಜ್ರಾಯುಧದಿಂದ ಇತರ ದೈತ್ಯರನ್ನು ಪ್ರಹರಿಸಿದಾಗ ಅವರು ಸತ್ತರು. ಹಾಗಾಗಿ ಇದೆಲ್ಲ ಯೋಚಿಸಿ, ಯುದ್ಧದೆಡೆಗೆ ಮುಖಮಾಡಿ' ಎಂದ ಶುಕ್ರಾಚಾರ್ಯರ ಈ ಮಾತುಗಳು ಸ್ಪಷ್ಟವಾಗಿ ಇಲ್ಲಿ ಗೋಚರಿಸುತ್ತಿದೆ. ಅಲ್ಲದೇ ಇದ್ದರೆ ಪಕ್ಷಿಯ ಮೊಟ್ಟೆಗಳು ನೆಲಕ್ಕೆ ಬೀಳುವುದೆಂದರೇನು? ಅದಕ್ಕೆ ಮೊದಲೇ ಅದೇ ಸ್ಥಳ ರಕ್ತ, ಮಾಂಸ, ಮಜ್ಜೆಗಳಿಂದ ಮೆತ್ತಗಾಗುವುದೆಂದರೇನು? ಅದೇ ಸಮಯಕ್ಕೆ ಘಂಟೆಯು ಮೊಟ್ಟೆಗಳಿಗೆ ರಕ್ಷಣೆ ನೀಡುವುದೆಂದರೇನು? ಈ ಎಲ್ಲ ಸನ್ನಿವೇಶಗಳು ಕ್ರಮವಾಗಿ ನಡೆಯುವುದೆಂದರೆ ಅಧ್ಬುತವೇ ಸರಿ.... ಹಾಗಿದ್ದರೆ ಈ ಪಕ್ಷಿಗಳ್ಯಾರು? ಖಂಡಿತವಾಗಿ ಸಾಮಾನ್ಯ ಪಕ್ಷಿಗಳಂತೂ ಅಲ್ಲ... ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುವುಗಳೇ ಆಗಿವೆ." ಎಂದರು.


ಅನಂತರ ತಮ್ಮ ಶಿಷ್ಯರನ್ನು ಕುರಿತು, "ಬ್ರಾಹ್ಮಣರೇ! ಕೂಡಲೇ ಈ ಶಿಶುಪಕ್ಷಿಗಳನ್ನು ತೆಗೆದುಕೊಂಡು ಹೋಗಿ!! ಯಾವ ಸ್ಥಳದಲ್ಲಿ ಇವುಗಳಿಗೆ ಯಾವ ಹಾನಿಯೂ ಆಗುವುದಿಲ್ಲವೋ ಅಂತಹ ಸ್ಥಳದಲ್ಲಿರಿಸಬೇಕು. ಪ್ರತೀ ಜೀವಿಯೂ ಕರ್ಮಾನುಸಾರವಾಗಿ ಬದುಕುತ್ತವೆ, ಮರಣ ಹೊಂದುತ್ತದೆ. ಆದರೂ ಮನುಷ್ಯ ಪ್ರಯತ್ನ ಮಾಡಲೇಬೇಕು, ಪ್ರಯತ್ನ ಮಾಡುವುದರಿಂದ ಯಾವ ಅಪಕೀರ್ತಿಯೂ ಬಾಧಿಸಲಾರದು" ಎಂದರು.


ತಕ್ಷಣವೇ ಮುನಿಬಾಲಕರು ಆ ಶಿಶುಪಕ್ಷಿಗಳನ್ನು ತೆಗೆದುಕೊಂಡು ಬಂದು ಅಶ್ರಮದಲ್ಲಿರಿಸಿದರು.


  1. ಹಾಗಾದರೆ ಭಗವಂತನ ಕೃಪೆಗೆ ಪಾತ್ರರಾದ ಆ ನಾಲ್ಕು ಪಕ್ಷಿಗಳು ಯಾರು?

  2. ಅವುಗಳ ಹಿನ್ನೆಲೆ ಏನು?

  3. ಹೀಗೆ ಆ ಪಕ್ಷಿಗಳು ರಕ್ಷಿಸಲ್ಪಟ್ಟಿದೆ ಅಂದಮೇಲೆ ಅವುಗಳಿಂದ ಮುಂದೆ ಆಗಲಿಕ್ಕಿರುವ ಕಾರ್ಯವೇನು?


ಈ ಎಲ್ಲ ವಿಷಯಗಳನ್ನು ಮುಂದಿನ‌ ಸಂಚಿಕೆಯಲ್ಲಿ ನೋಡೋಣ!!!

Comments


bottom of page