ಜನಕ
- Ravishankara Hegde Dodnalli

- Jul 19
- 2 min read
ಜನಕನೆಂಬುದು ವ್ಯಕ್ತಿಯ ಹೆಸರಲ್ಲ.. ಇದು ಕುಲಗೌರವವನ್ನು ಸೂಚಿಸುವ ನಾಮ ವಿಶೇಷಣ.

ವಿದೇಹ - ಜನಕ
ವಿದೇಹ ಎಂಬ ರಾಜ್ಯವನ್ನು ಆಳುತ್ತಿದ್ದವನು. ಈ ದೇಶಕ್ಕೆ ವಿದೇಹ ಎಂಬ ಹೆಸರು ಬರುವುದಕ್ಕೂ ಕಾರಣವಿದೆ. ಈ ದೇಶವನ್ನು ವೈವಸ್ವತ ಮನುವಿನ ಮಗನಾದ ನಿಮಿ ಆಳುತ್ತಿದ್ದನು. ಅವನು ಒಂದು ಮಹಾ ಯಜ್ಞವನ್ನು ಸಂಕಲ್ಪಿಸಿ ಆರಂಭಿಸಿದನು. ಆ ಯಜ್ಞಕ್ಕೆ ಕುಲ ಪುರೋಹಿತರಾದ ವಸಿಷ್ಠರನ್ನು ಆಹ್ವಾನಿಸಲಿಲ್ಲ. ಇದನ್ನು ಅರಿತ ವಸಿಷ್ಠರು ಸ್ವತಃ ಯಜ್ಞ ನಡೆಯುತ್ತಿದ್ದ ಪ್ರದೇಶಕ್ಕೆ ಬಂದು ನಿಮಿಯನ್ನು ಜೋರಾಗಿ ಕರೆದರು. ಆದರೆ ಗಾಢವಾದ ನಿದ್ರೆಯಲ್ಲಿದ್ದ ರಾಜನು ಅವರ ಕರೆಗೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ಕೋಪಗೊಂಡ ವಸಿಷ್ಠರು ನಿನ್ನ "ದೇಹ ನಾಶವಾಗಲೀ… ವಿದೇಹೋ ಭವ” ಎಂದು ಶಪಿಸಿದರು. ಆಗ ಆ ದೇಶ ಅರಾಜಕವಾಯಿತು. ಹೀಗೆ ರಾಜನ ಶರೀರ ನಾಶವಾದ ವಿಷಯವನ್ನು ತಿಳಿದ, ಯಜ್ಞಕ್ಕಾಗಿ ಆಗಮಿಸಿದ ಮುನಿಗಳು ಅವನ ಕೈಯಿಯ ಮೂಳೆಯನ್ನು ಅರಣಿಯಾಗಿ ಮಾಡಿ ಅದನ್ನು ಕಡೆದರು. ಅದರಿಂದ ಒಬ್ಬ ವ್ಯಕ್ತಿ ಜನಿಸಿದನು. ಅವನನ್ನು ಯಜ್ಞದ ಯಜಮಾನನನ್ನಾಗಿ ಹಾಗೂ ಆ ರಾಜ್ಯದ ರಾಜನನ್ನಾಗಿ ಮಾಡಿದರು. ಅವನು ವಿದೇಹನಾದ ನಿಮಿಯಿಂದ ಜನಿಸಿದವನಾದುದರಿಂದ, ಅವನನ್ನು ವಿದೇಹನೆಂದು ಹೆಸರಿಸಿದರು. ಮಥನದಿಂದ ಜನಿಸಿದ ಅವನನ್ನು ಮಿಥಿ, ಜನಕ ಮುಂತಾದ ಹೆಸರುಗಳು ಅನ್ವರ್ಥವಾದವು. ಮುಂದೆ ಈ ಕುಲದಲ್ಲಿ ಜನಿಸಿದ ಎಲ್ಲ ರಾಜರೂ ಜನಕರಾಗಿಯೇ ಪ್ರಸಿದ್ಧರಾದರು.
ಸೀರಧ್ವಜ
ಕೆಲ ಕಾಲದ ಅನಂತರ ಸೀರಧ್ವಜ ಎಂಬ ಹೆಸರಿನ ರಾಜನು ಅಧಿಕಾರಕ್ಕೆ ಬಂದನು. ಅವನನ್ನು ಲೋಕವು ಜನಕನೆಂದೇ ಗುರುತಿಸಿತು. ಅವನಿಗೆ ಮಕ್ಕಳಿಲ್ಲದ ಕಾರಣ ಪುತ್ರಕಾಮೇಷ್ಠಿಯನ್ನು ಮಾಡಲು ಸಂಕಲ್ಪಿಸಿ, ಯಜ್ಞಶಾಲೆಯನ್ನು ನಿರ್ಮಾಣ ಮಾಡಲು ನೆಲವನ್ನು ಊಳುತ್ತಿದ್ದನು. ಅಲ್ಲಿ ನೇಗಿಲಿನಿಂದ ಉಂಟಾದ ಗೆರೆ(ಸೀತಾ)ಯ ನಡುವೆ, ಒಂದು ಬಂಗಾರದ ಪೆಟ್ಟಿಗೆ ದೊರೆಯಿತು. ಅದನ್ನು ತೆರೆದು ನೋಡಲಾಗಿ, ಅದರಲ್ಲಿ ಸುಂದರಳಾದ ಹೆಣ್ಣು ಮಗು ಕಾಣಿಸಿತು. ನೇಗಿಲಿನ ಗೆರೆಯ ಬಳಿ ಸಿಕ್ಕ ಕಾರಣ, ಆ ಮಗುವಿಗೆ ಸೀತಾ ಎಂಬ ಹೆಸರನ್ನೇ ಇಟ್ಟನು. ಅನಂತರ ಅವನಿಗೆ ಇನ್ನೊಬ್ಬಳು ಹೆಣ್ಣು ಮಗು ಜನಿಸಿದಳು. ಅವಳಿಗೆ ಊರ್ಮಿಳೆ ಎಂದು ಹೆಸರಿಟ್ಟು ಅತ್ಯಂತ ಆನಂದದಿಂದ ಬೆಳೆಸಿದನು.
ಆಧ್ಯಾತ್ಮ ಹಾಗೂ ಜನಕ
ಈ ವಂಶದಲ್ಲಿ ಜನಿಸಿದ ಅನೇಕ ರಾಜರುಗಳು ಆಧ್ಯಾತ್ಮದ ಮತ್ತು ಆತ್ಮಜ್ಞಾನದ ವಿಷಯದಲ್ಲಿ ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯುಳ್ಳವರಾಗಿದ್ದರು ಎಂಬುದಕ್ಕೆ ಹಲವಾರು ಉದಾಹರಣೆಗಳು ದೊರೆಯುತ್ತದೆ. ಜನಕನ ಆಧ್ಯಾತ್ಮ ಚಿಂತನೆಯ ಮತ್ತು ಜ್ಞಾನದ ವಿಷಯಕವಾದ ಘಟನೆಗಳು ಮಹಾಭಾರತದ ಶಾಂತಿಪರ್ವದಲ್ಲಿ ಬರುತ್ತವೆ. “ಪ್ರಜಾ ಪರಿಪಾಲನೆಯೇ ಕ್ಷತ್ರಿಯ ಧರ್ಮ” ಎಂಬ ವಿಷಯದಲ್ಲಿ ಸಹ, ತನ್ನ ಹೆಂಡತಿಯಾದ ಸುಮೇಧಾದೇವಿಯ ಜೊತೆಗೆ ನಡೆಸಿದ ಸಂವಾದ ಬಹಳ ಪ್ರಸಿದ್ಧವಾಗಿದೆ. "ಆಧ್ಯಾತ್ಮ ಸಾಧನೆಯನ್ನು ಮಾಡುವ ಕಾರಣಕ್ಕಾಗಿ ರಾಜ್ಯವನ್ನು ತ್ಯಾಗಮಾಡಬೇಕಾಗಿಲ್ಲ" ಎಂಬ ವಿಷಯವನ್ನು ಅತ್ಯಂತ ವಿಸ್ತಾರವಾಗಿ ಪತ್ನಿಗೆ ಜನಕನು ವಿವರಿಸುತ್ತಾನೆ. ಅಶ್ಮ ಎಂಬ ಬ್ರಾಹ್ಮಣನ ಜೊತೆ ಧರ್ಮಾಧರ್ಮದ ವಿಷಯದ ಸಂವಾದವೂ ಮಹಾಭಾರತದಲ್ಲಿ ಪ್ರಸಿದ್ಧವಾಗಿದೆ. ಈ ಅಶ್ಮ ವೃತ್ತಾಂತವನ್ನು, 'ಕರ್ಣನನ್ನು ಕೊಂದೆವು, ಇದರಿಂದ ಜ್ಞಾತಿವಧಾ ದೋಷ ಬಂದಿದೆ' ಎಂಬ ದುಃಖದಲ್ಲಿದ್ದ ಧರ್ಮರಾಯನಿಗೆ ವ್ಯಾಸರು ಹೇಳುತ್ತಾರೆ. ಕಹೋಳ, ಪರಾಶರ, ಶುಕ, ಅಣಿಮಾಂಢವ್ಯ ಮುಂತಾದ ಋಷಿಗಳ ಜೊತೆ ನಡೆಸಿದ ಜ್ಞಾನ ವಿಷಯಕವಾದ ಚರ್ಚೆಗಳು ಅತ್ಯಂತ ಪ್ರಸಿದ್ಧವಾಗಿವೆ. ಅಷ್ಟಾವಕ್ರ ಮುನಿಯ ಜೊತೆಗಿನ ಸಂವಾದವೂ ಪ್ರಸಿದ್ಧವಾಗಿದೆ.
ಈ ಮೇಲಿನ ಎಲ್ಲ ವೃತ್ತಾಂತಗಳಲ್ಲಿ ಜನಕನೆಂಬ ಹೆಸರು ಉಲ್ಲೇಖವಾದುದರಿಂದ ಸೀರಧ್ವಜನೇ ಈ ಎಲ್ಲ ಸಂವಾದ ನಡೆಸಿದನು ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಯಾ ಕಾಲದಲ್ಲಿ ಮಿಥಿಲೆಯನ್ನು ಆಳುತ್ತಿದ್ದ ಜನಕರು ಬೇರೆ ಬೇರೆ ಇರಬಹುದು ಎಂಬ ಅಭಿಪ್ರಾಯ ವಿದ್ವಾಂಸರಲ್ಲಿದೆ.
ಆದರೆ ಇಲ್ಲಿ ಒಂದು ವಿಶೇಷವೇನೆಂದರೆ ಈ ಕುಲದಲ್ಲಿ ಬಂದ ಎಲ್ಲ ಅರಸರೂ ಸಹ ಐಹಿಕ ಮತ್ತು ಆಮುಷ್ಮಿಕ, ಎಂದರೆ ಲೌಕಿಕ ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ಪಡೆದವರಾಗಿದ್ದರು ಎಂಬುದು ದೃಢವಾಗುತ್ತದೆ.
ಜನಕ ಮತ್ತು ಶಿವಧನಸ್ಸು.
ರಾಮಾಯಣದ ಅತ್ಯಂತ ವಿಶಿಷ್ಟವಾದ ಘಟನೆಗಳಲ್ಲಿ ಸೀತಾ ಸ್ವಯಂವರವೂ ಒಂದು. ಈ ಸೀತಾಸ್ವಯಂವರದಲ್ಲಿ ಆಕರ್ಷಕ ವಿಷಯವಾಗಿದ್ದ ವಸ್ತು ಶಿವಧನಸ್ಸು. ಹೌದು! ಈ ಧನಸ್ಸಿನ ಹೆಸರು ‘ಪಿನಾಕ’. ತ್ರಿಪುರೆಂಬ ರಕ್ಕಸರನ್ನು ನಾಶಮಾಡಲು ಶಿವ ಈ ಧನಸ್ಸನ್ನು ಉಪಯೋಗಿಸಿದನು. ತ್ರಿಪುರ ಮಥನದ ಅನಂತರ ಈ ಧನಸ್ಸನ್ನು ದೇವತೆಗಳಿಗೆ ನೀಡಿದನು. ಅನಂತರ ದೇವತೆಗಳು ಈ ಧನಸ್ಸನ್ನು ಮಹಾ ಧರ್ಮಿಷ್ಠನಾಗಿದ್ದ ಮಿಥಿಲಾನಗರ ರಾಜನಾಗಿದ್ದ ‘ದೇವರಥ ಜನಕ’ ನಿಗೆ ನೀಡಿದನು. ಅದು ಸೀರಧ್ವಜ ಜನಕನ ವರೆಗೆ ರಕ್ಷಿತವಾಗಿ ಬಂದಿತು. ಅದನ್ನೇ ಸೀತೆಯ ಸ್ವಯಂವರಕ್ಕೆ ಪಣವಾಗಿ ಇಡಲಾಯಿತು.
ಜನಕನ ಸ್ವಭಾವ
ಜನಕನು ಸ್ವಭಾವತಃ ಧರ್ಮ ಪರಿಪಾಲಕನೂ ಮತ್ತು ಆಧ್ಯಾತ್ಮ ಸಾಧಕನೂ ಆಗಿದ್ದನು. ವಾಲ್ಮೀಕಿಗಳು ರಾಮಾಯಣದಲ್ಲಿ ಒಬ್ಬ ಶ್ರೇಷ್ಠ ಜ್ಞಾನಿಯಾಗಿ, ಅನುಪಮ ಆಡಳಿತಗಾರನಾಗಿ, ಸುಸಂಸ್ಕೃತನಾಗಿ ಜನಕನನ್ನು ಚಿತ್ರಿಸಿದ್ದಾರೆ. ಈ ಸ್ವಭಾವವೇ ಜನಕ ವಂಶದ ಎಲ್ಲರೂ ಇತ್ತೆಂದರೆ ಅದು ಅತಿಶಯೋಕ್ತಿಯಲ್ಲ.








Comments