top of page

ಶ್ರೀರಾಮನನ್ನು ಕಂಡ ಭರತ (ರಾಮಾಯಣ‌ ಕಥಾಮಾಲೆ 49)

ಭರತನು ಯುದ್ಧ ಮಾಡುವುದಕ್ಕಾಗಿಯೇ ಬಂದಿರುವನೆಂಬ ನಿಶ್ಚಯದಿಂದ ಬಹಳವಾಗಿ ಚಡಪಡಿಸುತ್ತಿದ್ದ ಅತಿಕ್ರುದ್ಧನಾಗಿದ್ದ ಲಕ್ಷ್ಮಣನನ್ನು ಶ್ರೀರಾಮನು ಸಂತೈಸುತ್ತ, "ಲಕ್ಷ್ಮಣ! ಯೋಗ್ಯ ಸಮಯದಲ್ಲಿ ಮಾತ್ರವೇ ಧನಸ್ಸನ್ನು ಹಿಡಿಯುವ ಮಹಾಪ್ರಾಜ್ಞನಾದ ಭರತನು ತಾನಾಗಿಯೇ ಇಲ್ಲಿಗೆ ಬಂದಿರುವಾಗ ಧನುಸ್ಸಿಗಾಗಲೀ - ಗುರಾಣಿಯಿಂದ ಕೂಡಿದ ಕತ್ತಿಗಾಗಲೀ ಇಲ್ಲಿ ಯಾವ ಕಾರ್ಯವಿದೆ? ನಮ್ಮ ತಂದೆಯು ಕೈಕೇಯಿಗಿತ್ತಿದ್ದ ಮಾತನ್ನು ಸತ್ಯವಚನವನ್ನಾಗಿ ಮಾಡುವೆನೆಂದು ಪ್ರತಿಜ್ಞೆ ಮಾಡಿ ಅರಣ್ಯಕ್ಕೆ ಬಂದಿರುವ ನಾನು ಭರತನನ್ನು ಕೊಂದು ರಾಜ್ಯವನ್ನು ಪಡೆಯಲೇ? ರಾಜ್ಯ ಲೋಭದಿಂದ ರಾಮನು ಭರತನನ್ನು ಕೊಂದನು- ಎಂಬ ಅಪವಾದದೊಡನೆ ಬರುವ ಈ ರಾಜ್ಯವನ್ನು ಕಟ್ಟಿಕೊಂಡು ನಾನೇನು ಮಾಡಲಿ? ಬಂಧು ಜನರ ಅಥವಾ ಮಿತ್ರರ ವಿನಾಶದಿಂದ ದೊರೆಯುವ ಐಶ್ವರ್ಯವು ವಿಷದಿಂದ ಕೂಡಿದ ಭಕ್ಷ್ಯದಂತೆ. ಅದನ್ನು ನಾನು ಪ್ರತಿಗ್ರಹಿಸುವುದಿಲ್ಲ. ನಾನು ಈ ಭೂಮಿಯ ಅಧೀಶನಾಗಬೇಕೆಂದು ಬಯಸಿದರೆ ಕ್ಷಣಮಾತ್ರದಲ್ಲಿ ಸಾಧಿಸುವೆನು. ಆದರೆ ಅಧರ್ಮದಿಂದ ಲಭಿಸಬಹುದಾದ ಇಂದ್ರ ಪದವಿಯೂ ನನಗೆ ಬೇಕಾಗಿಲ್ಲ " ಎಂದನು.

ಮುಂದುವರಿದು "ಲಕ್ಷ್ಮಣ! ಭರತನು ಬಂದಿರುವುದಕ್ಕೆ ಕಾರಣವನ್ನು ನಾನು ಹೀಗೆ ಊಹಿಸುತ್ತೇನೆ. ಬ್ರಾತೃವತ್ಸಲನಾದ ಮತ್ತು ನನಗೆ ಪ್ರಾಣಪ್ರಿಯನಾದ ಭರತನು, ಸಹೋದರ ಮಾವನ ಮನೆಯಿಂದ ಅಯೋಧ್ಯೆಗೆ ಬಂದಿದ್ದಾನೆ. ಅಯೋಧ್ಯೆಗೆ ಬರುತ್ತಲೇ ನಾನು ಜಟಾವಲ್ಕಲಧಾರಿಯಾಗಿ ನಿನ್ನೊಡನೆಯೂ ಮತ್ತು ಸೀತೆಯೊಡನೆಯೂ ಅರಣ್ಯಕ್ಕೆ ಕಳುಹಿಸಲ್ಪಟ್ಟನೆಂಬ ವಾರ್ತೆಯನ್ನೂ ಕೇಳಿದ್ದಾನೆ. ಧರ್ಮಾತ್ಮನಾದ ಭರತನು ಜೇಷ್ಠ ಪುತ್ರನೇ ಸಿಂಹಾಸನಕ್ಕೆ ಯೋಗ್ಯನೆಂಬ ಕುಲ ಧರ್ಮವನ್ನು ಸ್ಮರಿಸಿ, ಸ್ನೇಹ ಪರವಶವಾದ ಹೃದಯದಿಂದಲೂ ಶೋಕದಿಂದ ವ್ಯಾ ಕುಲಿತವಾದ ಮನಸ್ಸಿನಿಂದಲೂ ನನ್ನನ್ನು ನೋಡುವ ಸಲುವಾಗಿಯೇ ಇಲ್ಲಿಗೆ ಬಂದಿದ್ದಾನೆ. ಇಷ್ಟಕ್ಕೆಲ್ಲ ಕಾರಣಳಾದ ತಾಯಿಯಾದ ಕೈಕೆಯ ಮೇಲು ಕೋಪಿಸಿಕೊಂಡು, ಅವಳನ್ನು ಅಪ್ರಿಯವಾದ ಮತ್ತು ನಿಷ್ಠರವಾದ ಮಾತುಗಳಿಂದ ಮೂದಲಿಸಿ, ನಮ್ಮ ತಂದೆಯನ್ನು ಪ್ರಸನ್ನಗೊಳಿಸಿ, ರಾಜ್ಯವನ್ನು ನನಗೇ ವಹಿಸಿಕೊಡಲು ಇಲ್ಲಿಗೆ ಬಂದಿದ್ದಾನೆ. ಭರತನು ನಮ್ಮನ್ನು ನೋಡಲು ಬಂದಿರುವುದು ಸರ್ವಥಾ ಸಮಯೋಚಿತವಾಗಿದೆ. ನಮ್ಮ ವಿಷಯದಲ್ಲವನು ಮನಸ್ಸಿನಿಂದಲೂ ಕೂಡ ಅಪ್ರಿಯವಾಗುವಂತಹ ಕಾರ್ಯವನ್ನು ಮಾಡತಕ್ಕವನಲ್ಲ. ಆದುದರಿಂದ, ಲಕ್ಷ್ಮಣ! ನೀನು ಭರತನ ವಿಷಯದಲ್ಲಿ ಅಪ್ರಿಯವಾದ ಮತ್ತು ನಿಷ್ಠರವಾದ ಮಾತುಗಳನ್ನ ಆಡಬಾರದು. ನೀನು ಅವನ ವಿಷಯದಲ್ಲೇನಾದರೂ ಅಪ್ರಿಯವಾದ ಮಾತುಗಳನ್ನಾಡಿದರೆ - ನನ್ನನ್ನೇ ನೀನು ಅಪ್ರಿಯವಾದ ಮಾತುಗಳಿಂದ ಹಳಿದಂತಾಗುತ್ತದೆ. ಒಂದು ವೇಳೆ ನೀನೇ ರಾಜ್ಯವನ್ನು ಪಡೆದುಕೊಳ್ಳಬೇಕೆನ್ನುವ ಕಾರಣದಿಂದ ಇಂತಹ ನಿಷ್ಟುರವಾದ ಮಾತುಗಳನ್ನು ಭರತನ ವಿಷಯದಲ್ಲಿ ಆಡುತ್ತಿರುವೆಯಾದರೆ ಭರತನನ್ನು ಕಂಡು ಲಕ್ಷ್ಮಣನಿಗೆ ರಾಜ್ಯವನ್ನು ಬಿಟ್ಟುಕೊಡುವಂತೆ ಹೇಳುತ್ತೇನೆ. ರಾಜ್ಯವನ್ನು ಇವನಿಗೆ ಕೊಟ್ಟುಬಿಡು ಎಂದು ಭರತನಿಗೆ ಹೇಳಿದ ಮರುಕ್ಷಣದಲ್ಲಿಯೇ ಅವನು 'ಆಗಲಿ' ಎಂದೇ ಉತ್ತರಿಸುವನು. ಆದುದರಿಂದ ಭರತನ ವಿಷಯದಲ್ಲಿ ನೀನು ಲೇಶಮಾತ್ರವೂ ಸಂದೇಹಗೊಳ್ಳಬೇಡ" ಎಂದನು. ಧರ್ಮಶೀಲನಾದ, ಅಣ್ಣನಾದ ಶ್ರೀರಾಮನು ಹೀಗೆ ಹೇಳಲು ಅಣ್ಣನ ಹಿತದಲ್ಲಿಯೇ ಸರ್ವದಾ ನಿರತನಾಗಿರುವ ಲಕ್ಷ್ಮಣನು ನಾಚಿಕೆಯಿಂದ ಕುಸಿದು ಹೋದನು.


ಅತ್ತಲಾಗಿ ಸೇನೆಯ ಆರ್ಭಟವನ್ನು ಕೇಳಿದ ಭರತನು ಶ್ರೀರಾಮನ ಪರ್ಣಶಾಲೆಯು ಹತ್ತಿರದಲ್ಲಿಯೇ ಇದ್ದುದರಿಂದ ಯಾವ ವಿಧವಾದ ಪೀಡೆಯೂ ಉಂಟಾಗಬಾರದೆಂದು ಸೇನಾಪತಿಗೆ ಆಜ್ಞಾಪಿಸಿದನು. ಸೈನ್ಯಕ್ಕೆ ಸ್ವಸ್ಥಾನದಲ್ಲಿರಲು ಆಜ್ಞೆ ಮಾಡಿದ ನಂತರ ಶ್ರೀರಾಮ ದರ್ಶನದಲ್ಲಿಯೇ ಉತ್ಸುಕನಾಗಿದ್ದ ಭರತನು, ಶತ್ರುಘನನ್ನು ಜೊತೆಯಲ್ಲಿ ಕರೆದುಕೊಂಡು ಶ್ರೀರಾಮನು ಅಲ್ಲಿಯೇ ಇರುವನೆಂಬುದಕ್ಕೆ ಗುರುತುಗಳನ್ನು ತೋರಿಸುತ್ತಾ ಅಣ್ಣನನ್ನು ಕಾಣುವ ಸಲುವಾಗಿ ಹೊರಟನು. ಅನಂತನ ಭರತನು ಮಹೂರ್ತಕಾಲ ನಡೆದು ಮಂದಾಕಿನಿ ನದಿಯ ತೀರದಲ್ಲಿ ವಿರಾಜಮಾನವಾಗಿದ್ದ ಚಿತ್ರಕೂಟ ಪರ್ವತದ ಬಳಿಗೆ ಹೋಗಿ ಅಲ್ಲಿಯೇ ಸನಿಹದಲ್ಲಿದ್ದ ಸುವರ್ಣಮಯವಾದ ಪರ್ಣಶಾಲೆಯನ್ನು ಕಂಡನು.


ಭರತನು ಮುಹೂರ್ತಕಾಲ ಎವೆಯಿಕ್ಕದೇ ಸುತ್ತಲೂ ನೋಡುತ್ತಾ, ತನ್ನ ಗುರುವಾದ ಶ್ರೀರಾಮನು ಜಟಾಮಂಡಲಧಾರಿಯಾಗಿ ಪರ್ಣಶಾಲೆಯಲ್ಲಿ ಕುಳಿತಿರುವುದನ್ನು ಕಂಡನು. ಕೃಷ್ಣಾಜಿನವನ್ನು ಉತ್ತರೀಯವನ್ನಾಗಿ ಹೊದೆದುಕೊಂಡು, ನಾರುಮಡಿಯನ್ನು ಧೋತ್ರವನ್ನಾಗಿ ಉಟ್ಟುಕೊಂಡು, ಯಜ್ಞೇಶ್ವರ ನಂತೆ ಉಜ್ಜ್ವಲವಾದ ತೇಜಸ್ಸನ್ನು ಹೊರಚೆಲ್ಲುತ್ತಿದ್ದ, ವೀರಾಸನದಲ್ಲಿ ಕುಳಿತಿರುವ ಶ್ರೀರಾಮನನ್ನು ಭರತನು ನೋಡಿದನು. ಸಿಂಹದಂತೆ ಹೆಗಲುಳ್ಳ, ಮಹಾಬಾಹುವಾದ, ಕಮಲಸದೃಶವಾದ ಕಣ್ಣುಗಳುಳ್ಳ, ಸಾಗರಾಂತವಾದ ಭೂಮಿಗೆ ಒಡೆಯನಾದ, ಧರ್ಮಚಾರಿಯಾದ, ಜರಾ-ಮೃತ್ಯುರಹಿತನಾದ ಬ್ರಹ್ಮನೋಪಾದಿಯಲ್ಲಿರುವ, ನೆಲದಲ್ಲಿ ಹರಡಿರುವ ದರ್ಭೆಯಮೇಲೆ ಸೀತಾ-ಲಕ್ಷ್ಮಣರೊಡನೆ ಕುಳಿತಿರುವ, ಆನಂದದಾಯಕನಾದ ಶ್ರೀರಾಮನನ್ನು ಭರತನು ನೋಡಿದನು. ಜಟಾಮಂಡಲಧಾರಿಯಾದ, ಚೀರವಲ್ಕ ಧರನಾದ, ಅಣ್ಣನನ್ನು ನೋಡಿದೊಡನೆಯೇ ದುಃಖಶೋಕಗಳಲ್ಲಿ ಮುಳುಗಿಹೋಗಿದ್ದ, ಶ್ರೀಮಂತನಾದ, ಧರ್ಮಾತ್ಮನಾದ ಕೈಕೇಯೀಪುತ್ರನು ರಾಮನ ಬಳಿಗೆ ಧಾವಿಸಿದನು. ಶ್ರೀರಾಮನನ್ನು ನೋಡಿದೊಡನೆಯೇ ದುಃಖಶೋಕಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಗದ್ಗದಧ್ವನಿಯೊಡನೆ ಕ್ಷಣಕಾಲ

ವಿಲಪಿಸಿದನು.



ಬಳಿಕ ಧೈರ್ಯಹೊಂದಿ ಬಿಕ್ಕಿ-ಬಿಕ್ಕಿ ಅಳುತ್ತಲೇ ಹೇಳಿದನು: “ಯಾವಾತನು ರಾಜಸಭೆಯಲ್ಲಿ ಕುಳಿತು ಪ್ರಜೆಗಳಿಂದ ಸೇವಿಸಲ್ಪಡಲು ಯೋಗ್ಯನೋ-ಆ ನನ್ನಣ್ಣನು ಇಂದು ಕಾಡಿನಲ್ಲಿರುವ ಮೃಗ-ಪಕ್ಷಿಗಳಿಂದ ಸೇವಿಸಲ್ಪಡುತ್ತ ಈ ಪರ್ಣಕುಟೀರದಲ್ಲಿದ್ದಾನೆ. ಸಾವಿರಾರು ವರಹಗಳ ಬೆಲೆಬಾಳುವ, ರಾಜೋಚಿತವಾದ ದಿವ್ಯಾಂಬರಗಳಿಂದ ಯಾವನು ಅಲಂಕರಿಸಲ್ಪಡುತ್ತಿದ್ದನೋ-ಅವನಿಂದು ಚೀರ-ಕೃಷ್ಣಾಜಿನಗಳನ್ನು ಧರಿಸಿ ಪಿತೃವಾಕ್ಯಪರಿಪಾಲನಾರೂಪವಾದ ಧರ್ಮವನ್ನು ಆಚರಿಸುತ್ತ ಕುಳಿತಿದ್ದಾನೆ. ಯಾವ ನಮ್ಮಣ್ಣನು ಹಿಂದೆ ಸರ್ವಕಾಲದಲ್ಲಿಯೂ ಚಿತ್ರ-ವಿಚಿತ್ರವಾದ, ಸುಗಂಧಯುಕ್ತವಾದ ಪುಷ್ಪಗಳನ್ನು ಮುಡಿಯಲ್ಲಿ ಧರಿಸುತ್ತಿದ್ದನೋ-ಅವನಿಂದು ಜಟಾಮಂಡಲದ ಭಾರವನ್ನು ಹೇಗೆ ಹೊರುತ್ತಿದ್ದಾನೆ? ಯಾವ ರಾಮನಿಗೆ ಶಾಸ್ತ್ರೋಕ್ತವಾದ ಬಹುದಕ್ಷಿಣಾರೂಪವಾದ ಯಜ್ಞಕರ್ಮಗಳಿಂದ ಧರ್ಮಸಂಗ್ರಹವು ಯೋಗ್ಯವಾಗಿದ್ದಿತೋ - ಅವನಿಂದು ಶರೀರಕ್ಲೇಶದಿಂದ ಧರ್ಮವನ್ನು ಸಂಗ್ರಹಿಸುವ ಮಾರ್ಗವನ್ನು ಅವಲಂಬಿಸಿದ್ದಾನೆ.


ಯಾವ ನಮ್ಮಣ್ಣನ ಶರೀರವು ಅತಿಪ್ರಶಂಸನೀಯವಾದ ಚಂದನದಿಂದ ಸೇವಿಸಲ್ಪಡುತ್ತಿದ್ದಿತೋ-ಆ ಶರೀರವಿಂದು ಅರಣ್ಯದ ಧೂಳಿನಿಂದ ಹೇಗೆ ತಾನೇ ಸೇವಿಸಲ್ಪಡುತ್ತಿದೆ? ನಿಶ್ಚಯವಾಗಿಯೂ ಸುಖೋಚಿತನಾದ ಶ್ರೀರಾಮನು ನನ್ನ ಸಲುವಾಗಿ ಈ ವಿಧವಾದ ವನವಾಸ ದುಃಖವನ್ನು ಅನುಭವಿಸಬೇಕಾಯಿತು. ಲೋಕನಿಂದೆಗೆ ಗುರಿಯಾಗಿರುವ, ನಿರ್ದಯನಾದ ನನ್ನ ಜೀವಿತಕ್ಕೆ ಧಿಕ್ಕಾರವಿರಲಿ” ಇವೇ ಮುಂತಾಗಿ ಹೇಳಿಕೊಂಡು ರೋಧನಮಾಡುತ್ತಿದ್ದ, ಬಹುದೀನ ನಾಗಿದ್ದ, ಬೆವರಿನಿಂದ ತೋಯ್ದುಹೋದ ಮುಖಕಮಲವುಳ್ಳವನಾಗಿದ್ದ ಭರತನು ಶ್ರೀರಾಮಚಂದ್ರನ ಚರಣಕಮಲಗಳನ್ನು ಹೊಂದದೆಯೇ ರೋಧನ ಮಾಡುತ್ತಾ ಕೆಳಕ್ಕೆ ಬಿದ್ದನು. ದುಃಖದಿಂದ ಪರಿತಪಿಸುತ್ತಿದ್ದ, ರಾಜಪುತ್ರ ನಾದ, ಮಹಾಬಲನಾದ ಭರತನು - ‘ಆರ್ಯ!’ - ಎಂದೊಮ್ಮೆ ದೀನಸ್ವರದಲ್ಲಿ ಹೇಳಿದನೇ ಹೊರತು ಮುಂದೆ ಯಾವ ಮಾತನ್ನು ಆಡಲೂ ಅವನಿಗೆ ಸಾಧ್ಯವಾಗಲಿಲ್ಲ. ಧಾರಾಕಾರವಾದ ಕಣ್ಣೀರಿನಿಂದ ಕುತ್ತಿಗೆಯು ಮುಚ್ಚಿಹೋಗಿದ್ದಿತು. ಯಶೋವಂತನಾದ ಶ್ರೀರಾಮನನ್ನು ನೋಡಿ-‘ಆರ್ಯ!’-ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಮಾತನಾಡಲು ಭರತನಿಗೆ ಸಾಧ್ಯವಾಗಲಿಲ್ಲ. ಭರತನ ಹಿಂದೆ ನಿಂತಿದ್ದ ಶತ್ರುಘ್ನನೂ ಅಳುತ್ತಳುತ್ತಲೇ ಶ್ರೀರಾಮನ ಚರಣಗಳಿಗೆ ನಮಿಸಿದನು. ಭ್ರಾತೃವತ್ಸಲನಾದ ಶ್ರೀರಾಮನು ಆ ಇಬ್ಬರು ತಮ್ಮಂದಿರನ್ನೂ ಆಲಿಂಗಿಸಿಕೊಂಡು ಕಣ್ಣೀರುಸುರಿಸಿದನು.

Comments


bottom of page